ಸುಮ್ಮನೆ ಹೀಗೊಂದು ವಿಚಾರವನ್ನು ಮುಂದಿಟ್ಟುಕೊಳ್ಳೋಣ. ಕಾವ್ಯ ಎನ್ನುವುದು ಹೆಣ್ಣು ತನ್ನ ಭಾಷೆಯೊಂದನ್ನು ರಚಿಸಿಕೊಳ್ಳುವ ಪ್ರಯತ್ನವೆ?

ಕಾವ್ಯವೆನ್ನುವುದು ಅಂತಿಮವಾಗಿ ಮತ್ತು ಮೂಲಭೂತವಾಗಿ ರೂಪಕಗಳ ಭಾಷೆ ತಾನೆ. ರೂಪಕವೆನ್ನುವುದು ಭಾಷೆಯ ಮರುಸೃಷ್ಟಿಯೂ ಹೌದು, ಅದರ ಕಾಲಾತೀತ ಸೃಷ್ಟಿಯೂ ಹೌದು. ಆದರೆ ಈ ಎರಡು ಅಂಶಗಳ ಜೊತೆಗೇ ರೂಪಕಗಳು ಮತ್ತು ಕಾವ್ಯ ‘ಹೊಸ ಭಾಷೆ’ಯ ರಚನೆಯೂ ಆಗಿರುತ್ತದೆ.

ರೂಪಕಗಳನ್ನು ಉಸಿರ್ದಾಣಗಳೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಹೆಣ್ಣಿನ ಮಟ್ಟಿಗೆ ಈ ರೂಪಕಗಳು ಅಡಗುತಾಣಗಳೂ ಆಗಿಬಿಡುತ್ತವೆ. ಅವಳ ಮಾತು–ಕತೆ, ಭಾಷೆ, ಆಚಾರ ವಿಚಾರ ಎಲ್ಲದಕ್ಕೂ ಮೌಲ್ಯವ್ಯವಸ್ಥೆಯ ಬೇಲಿಯನ್ನೂ ಭೂತ ಕನ್ನಡಿಯನ್ನೂ ಸದಾ ಜಾರಿಯಲ್ಲಿಟ್ಟಿರುವ ಸಮುದಾಯದಲ್ಲಿ ಹೆಣ್ಣಿಗೆ ಅವಳದೇ ಆದ ಅಭಿವ್ಯಕ್ತಿಯೇ ಸವಾಲು.

ಅವಳು ಬಳಸುವ ಭಾಷೆಯಾದರೂ ಅವಳು ಮಾತನಾಡಲು ಸೃಷ್ಟಿಯಾಗಿರುವ, ಅವಳದೆಲ್ಲವನ್ನೂ ಸಂವಹಿಸಬಲ್ಲ ಭಾಷೆ ಎನ್ನುವುದಕ್ಕಿಂತ ಹೆಣ್ಣಿಗೆ ಗಂಡು ಹೇಳಬೇಕಾದ್ದನ್ನು ಹೇಳಲು ಶಕ್ತವಾದ ಭಾಷೆ ಎನ್ನಬಹುದು. ಹೀಗಾಗಿ ಹೆಣ್ಣು ಸಾಮಾನ್ಯವಾಗಿ ಮಾತನಾಡುವುದು ತನಗೆ ಕೊಡಮಾಡಲಾಗಿರುವ ಭಾಷೆಯಲ್ಲಿ.

ಈ ಅಂಶವನ್ನು ಎರಡು ಕವಿತೆಗಳ ಸಾಲುಗಳು ಇನ್ನೂ ಚಂದವಾಗಿ ಹೇಳುತ್ತವೆ.

ನಿನಗೆ ಕಿವಿಯಿಲ್ಲ
ನನಗೆ ಭಾಷೆಯಿಲ್ಲ
ನಾವು ಮಾತನಾಡುವುದು ಹೇಗೆ?
–ಪ್ರತಿಭಾ ನಂದಕುಮಾರ್

ಆತ ಆಕೆ ಭಾಷೆ
ಅವಳೆಂದದ್ದು– ಹಸಿವೆ ಮತ್ತು ಬಾಯಾರಿಕೆ
ಆತನೆಂದ– ಚೆನ್ನಾಗಿ ಉಣ್ಣು, ಕುಡಿ
ಆಕೆ ಅತ್ತಳು ಆಗ
ಆತ ನಕ್ಕ

ಮೊನ್ನೆ ಅವನೆಂದದ್ದು ಕಿಟಕಿ ಎಂದು
ಅವಳು ತಿಳಿದುಕೊಂಡಂತೆ ಬಾಗಿಲು ಅಲ್ಲ
ಗೋಡೆ ಎಂದರೆ ಆತ
ಬಯಲೆಂದುಕೊಂಡಳು
ಗೋಡೆ ಒಡೆದರೆ ಎಲ್ಲ ಬಯಲು ಎಂದೆ?
–ವೈದೇಹಿ

ಗಂಡು ಮತ್ತು ಹೆಣ್ಣಿನ ನಡುವಿನ ಸಂವಹನದ ಕೊರತೆಯನ್ನು ಮುಖ್ಯವಾಗಿ ಹೇಳಲು ಹೊರಟಿರುವಂತೆ ಕಾಣಿಸುತ್ತಿರುವ ಈ ಕವಿತೆಗಳು ನಿಜದಲ್ಲಿ ಗಂಡು ಹೆಣ್ಣಿನ ಭಾಷೆಯ ನಡುವಿರುವ ಭಿನ್ನತೆಯನ್ನೂ ಅವೆರಡೂ ಬೇರೆ ಬೇರೆ ಎನ್ನುವುದನ್ನೂ ಹೇಳಲು ತವಕಿಸುತ್ತಿರುವಂತಿವೆ. ಹೆಣ್ಣಿನ ಭಾಷೆಯ ಬಗ್ಗೆ ಗಂಡಿನ ಅಸಡ್ಡೆಯನ್ನು ಹೇಳುತ್ತಲೇ ಇನ್ನೊಂದು ಬಹುಮುಖ್ಯವಾದ ಸಂಗತಿಯನ್ನೂ ಇಲ್ಲಿ ನಾವು ಗಮನಿಸಬೇಕು.

ಅದೆಂದರೆ ಗಂಡಿನ ಭಾಷೆಯನ್ನು ಇವಳು ತನಗೆ ಬೇಕಾದ ಅರ್ಥಗಳಲ್ಲಿ ಪುನರ್ ಸೃಷ್ಟಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ. ‘ಒಂದೆಂದರೆ ಇನ್ನೊಂದೇ’ ಅರ್ಥವನ್ನು ಗ್ರಹಿಸುವ ಗಂಡಿನ ಭಾಷೆಯಲ್ಲಿ, ತನ್ನದೇ ಆದ ಅರ್ಥವನ್ನು ಕಟ್ಟಿಕೊಳ್ಳುವ ಹೆಣ್ಣಿನ ಪ್ರಯತ್ನ ಎಂದಿನಿಂದಲೂ ನಡೆದೇ ಇದೆ ಎನ್ನುವ ಸಾಧಾರಣೀಕರಣವೂ ಸಾಧ್ಯ ಎನ್ನುವಷ್ಟು ಈ ಮಾತುಗಳು ಪರಿಣಾಮಕಾರಿಯಾಗಿವೆ. ‘ವಾಗರ್ಥ’ದ ಮೋಜಿನ ಮೂಲ ಯಾವುದೆಂದರೆ, ಒಂದೇ ವಾಕ್ ಗಂಡು ಹೆಣ್ಣುಗಳಲ್ಲಿ ಸೃಜಿಸಬಲ್ಲ ಭಿನ್ನ, ಕೆಲವೊಮ್ಮೆ ವಿರುದ್ಧಾರ್ಥಕ ಅರ್ಥಗಳು. ಇದು ಸಹಜ ಎನ್ನುವುದನ್ನು ಯಾರೂ ಒಪ್ಪುತ್ತಾರೆ. ಆದರೆ, ಗಂಡಿನ ಅರ್ಥಕ್ಕಿರುವ ಅಧಿಕೃತತೆ ಹೆಣ್ಣಿನ ಅರ್ಥಕ್ಕಿಲ್ಲ ಎನ್ನುವುದು.

ಜೊತೆಗೇ ಹೆಣ್ಣಿನ ಭಾಷೆಯನ್ನು ಅರ್ಥೈಸಿಕೊಳ್ಳಲು ಬೇಕಾದ ಸಂವೇದನೆ ಮತ್ತು ಮನೋವಿನ್ಯಾಸದ ಕೊರತೆಯನ್ನೂ ಈ ಕವಿತೆಗಳು ಹೇಳುತ್ತಿವೆ. ವೈದೇಹಿಯವರ ಕವಿತೆಯಲ್ಲಿ ಹೆಣ್ಣು ಪುನರಪಿ ಎನ್ನುವಂತೆ ತಾನು ಹೇಳಬೇಕಾಗಿರುವುದನ್ನು ಅವನಿಗೆ ತಿಳಿಸಲು ಪ್ರಯತ್ನಿಸುತ್ತಲೇ ಇದ್ದಾಳೆ. ಅವನಿಗೆ ತಿಳಿಯುವುದಿರಲಿ, ತನಗೆ ತಿಳಿಯದೇ ಇರಬಹುದು ಎನ್ನುವ ಸಣ್ಣ ಅನುಮಾನವೂ ಇಲ್ಲ. ಏನನ್ನೋ ಹೇಳಲು ಅವಳಿಗಿರುವ ಉತ್ಕಟತೆ, ದ್ವಂದ್ವ ಯಾವುದನ್ನೂ ಅವನು ಪರಿಭಾವಿಸುವುದಿಲ್ಲ. ಅದರ ಅಗತ್ಯವೂ ಇಲ್ಲ, ಅದವನ ಆದ್ಯತೆಯೂ ಅಲ್ಲ. ಆಳುವವರಿಗೆ ಇರುವ ಕಿವುಡು, ಧಿಮಾಕು, ನಿರ್ಲಕ್ಷ್ಯ ಇದು. ಈ ಎಲ್ಲದಕ್ಕಿತ ಹೆಚ್ಚಾಗಿ ಇದು ‘ಅವನ’ ಭಾಷೆ. ಅದನ್ನು ಅವನು ತಾನು ಸ್ಥಾಪಿಸಿರುವ, ಕೊಟ್ಟಿರುವ ಅರ್ಥಗಳಲ್ಲಿಯೇ ಗ್ರಹಿಸುತ್ತಾನೆಯೇ ಹೊರತು ಅವಳದೂ ಆಗಬಹುದಾದ ಆಗುತ್ತಿರುವ ಅರ್ಥಾಂತರದ ನೆಲೆಯಲ್ಲಿ ಅಲ್ಲ.

ಕಾವ್ಯವನ್ನು ಹೆಣ್ಣಿನ ಭಾಷೆಯ ರಚನೆಯ ಪ್ರಯತ್ನಗಳು ಎನ್ನುವ ಸಂಗತಿಯನ್ನು ಕಲೆ ಮತ್ತು ವ್ಯಕ್ತಿಯ ಸಂಬಂಧದ ಎರಡು ನೆಲೆಗಳಿಂದ ಚರ್ಚಿಸಬಹುದು. ಕಲೆಯ ಹುಟ್ಟೇ ದುರ್ದಮ್ಯವಾದ ಅಂತರಂಗದ ಒತ್ತಡದ್ದು ಎನ್ನುವುದಾದರೆ ಹೆಣ್ಣಿನ ಅಂತರಂಗದ ಒತ್ತಡ ಮತ್ತು ತುರ್ತು ಭಾಷೆಯದ್ದೆಷ್ಟೋ ಅಷ್ಟೇ ಅವಳ ಅಸ್ಮಿತೆಯ ಹುಡುಕಾಟ ಮತ್ತು ರಚನೆಯದ್ದೂ ಹೌದು. ಆದ್ದರಿಂದಲೇ ಹೆಣ್ಣಿನ ಕಾವ್ಯ–ಭಾಷೆ ಮತ್ತು ಅಸ್ಮಿತೆಗಳ ನಡುವಿನದ್ದು ಬಿಡಿಸಲಾಗದ ಅಖಂಡ ಸಂಬಂಧ. ಬೇಕಾದರೆ ಇದನ್ನ‘ತ್ರಿವೇಣಿ ಸಂಗಮ’ ಎಂದು ಕರೆಯೋಣ. ಇವು ಒಂದಕ್ಕೊಂದು ಎಷ್ಟು ಪೂರಕವೆಂದರೆ, ಒಂದು ಇನ್ನೊಂದನ್ನು ಬಲಪಡಿಸುತ್ತಾ, ಒಂದು ಇನ್ನೊಂದನ್ನು ಸ್ಪಷ್ಟಪಡಿಸುತ್ತಾ ಸಂಘಟಿತವಾಗುತ್ತಾ ಹೋಗುತ್ತವೆ.

ಈ ದಾರಿಯಲ್ಲಿ ಹೆಣ್ಣು ಎದುರಿಸಬೇಕಾದ ಬಹಳ ದೊಡ್ಡ ಪರೀಕ್ಷೆಯೊಂದಿದೆ. ರೂಪಾಂತರವಿಲ್ಲದೆಯೇ ಅವಳು ಅರ್ಥಾಂತರವನ್ನು ಸಾಧಿಸಬೇಕು. ಭಾಷಾಶಾಸ್ತ್ರಜ್ಞರು ಈ ರೂಪಾಂತರದ ಬಗ್ಗೆ ಕುತೂಹಲಕರವಾದ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಉದಾಹರಣೆಗೆ, ಹೆಣ್ಣು ಬಹುತೇಕ ಸಂದರ್ಭಗಳಲ್ಲಿ ಪ್ರಶ್ನೆ, ವಿನಯ ಮತ್ತು ತೆರೆದ ಅಂಚಿನಲ್ಲಿ ಭಾಷೆಯನ್ನು ಬಳಸಿದರೆ, ಗಂಡು ಬಳಸುವುದು ವಿದ್ಯರ್ಥಕವಾದ ಅಥವಾ ಆಳುವ ಭಾಷೆಯನ್ನು.

ಈ ಎಲ್ಲ ಅಂಶಗಳನ್ನೂ ಬಳಸಿಕೊಂಡು ಒಂದು ಸೂತ್ರವನ್ನು ರೂಪಿಸಿಕೊಳ್ಳಬಹುದಾದರೆ, ಕಾವ್ಯದಲ್ಲಿ ಹೆಣ್ಣು ನಡೆಸುವ ಮಹಾಪ್ರಯತ್ನವು ‘ಪರಕೀಯ’ವಾದ ಭಾಷೆಯನ್ನು ‘ಸ್ವಂತ’ಭಾಷೆಯಾಗಿಸಿಕೊಳ್ಳುವ, ಅಥವಾ ಕೊಟ್ಟ ಭಾಷೆಯನ್ನು ತನ್ನ ಭಾಷೆಯಾಗಿಸಿಕೊಳ್ಳುವ ಪ್ರಯತ್ನ.

ಹೆಣ್ಣು ಮತ್ತು ಕಾವ್ಯದ ಸಂಬಂಧವನ್ನು ‘ಜೀವ ಕೊರಳ ಸಖ್ಯ’ ಎಂದು ವ್ಯಾಖ್ಯಾನಿಸುತ್ತಿರುವಾಗ ಇದಕ್ಕಿರುವ ಅನೇಕ ಪದರುಗಳನ್ನು ಅರ್ಥ ಮಾಡಿಕೊಳ್ಳುವುದೂ ಅಗತ್ಯ. ಹಾಗೆ ನೋಡಿದರೆ ಈ ಚರ್ಚೆ ಶುರುವಾಗಬೇಕಾದ್ದು, ಕಾವ್ಯದಲ್ಲಿ ಕೆಟ್ಟ ಮತ್ತು ಒಳ್ಳೆಯ ಕಾವ್ಯ ಎನ್ನುವ ವಿಭಜನೆಯಿದೆಯೇ ಹೊರತು ಮಹಿಳಾ ಕಾವ್ಯ, ಪುರುಷ ಕಾವ್ಯ ಎನ್ನುವ ವರ್ಗೀಕರಣವೇ ಅನಗತ್ಯ ಮತ್ತು ಕೃತಕ ಎನ್ನುವ ಸಾಂಪ್ರದಾಯಿಕ ಕಾವ್ಯಮೀಮಾಂಸೆಯೊಂದಿಗೆ. ಇಂತಹ ವಾದಗಳ ಮಹತ್ವವಿರುವುದು ಅವುಗಳ ಬೌದ್ಧಿಕ ನೆಲೆಯಲ್ಲಲ್ಲ, ಅವು ರೂಪಿಸಿಕೊಂಡಿರುವ ತಾತ್ವಿಕ ಸಮರ್ಥನೆಯಲ್ಲಿ.

ಈ ನಿಲುವು ಉದ್ದೇಶಪೂರ್ವಕವಾಗಿ ಮರೆಯುವ ಸಂಗತಿ, ಅಂದರೆ, ಸ್ವತಃ ಕಾವ್ಯ ಪರಂಪರೆಯೇ, ತನ್ನಷ್ಟಕ್ಕೆ ತಾನೇ ಒಂದು ರಾಜಕೀಯ ಮತ್ತು ಬೌದ್ಧಿಕ ಹೋರಾಟವೂ ಆಗಿರುತ್ತದೆ ಎನ್ನುವುದು. ಇದರ ಜೊತೆಗೆ ಹೆಣ್ಣಿನ ಕಾವ್ಯವನ್ನು ತಾನು ಕೊಟ್ಟಿರುವ ಅರ್ಥದಲ್ಲಿಯೇ ಪಿತೃಸಂಸ್ಕೃತಿ ವ್ಯಾಖ್ಯಾನಿಸಿ ಬೆಲೆ ಕಟ್ಟುತ್ತದೆಯೇ ಹೊರತು ಹೆಣ್ಣಿನ ಅರ್ಥ–ಅರ್ಥಾಂತರದ ನೆಲೆಯಲ್ಲಲ್ಲ. ಹೆಣ್ಣಿನ ಕಾವ್ಯವನ್ನು ಅಸ್ಮಿತೆಯ ರಚನೆಯ ನೆಲೆಯಲ್ಲಿ ನೋಡುವ ಪ್ರಯತ್ನಗಳಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದ್ದರಿಂದಲೇ ಸ್ತ್ರೀವಾದಿಗಳು, ಬಹುತೇಕ ಸಂದರ್ಭಗಳಲ್ಲಿ ಮಹಿಳಾ ಕಾವ್ಯದ ‘ತಪ್ಪು ಓದು’ ಘಟಿಸಿದೆ ಎಂದು ವಾದಿಸುವುದು.

And the Tradition originated and dominated by men, with which women's poetry engages, is it self the sight of intence and intellectual and political struggle. To ignore this tradition means also ignoring women's struggle to transform its values
–Jan Montejiore

ಟೆರ್ರಿ ಈಗಲ್ಟನ್, ‘ಇಂಗ್ಲಿಷ್ ಕಾವ್ಯ ಪರಂಪರೆಯ ನಕಾಶೆಯನ್ನು ರಚಿಸಿರುವವರು ಗಮನಿಸಿರುವುದು ಎರಡೂವರೆ ಲೇಖಕಿಯರನ್ನು ಮಾತ್ರ’ ಎಂದು ಹೇಳುತ್ತಾ ಈ ಬಗೆಯ ಅಪೂರ್ಣ ನಕಾಶೆಗಳ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು ಸೃಷ್ಟಿಸಿರುವ ಸಮಸ್ಯೆಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಎಂದರೆ, ಹೆಣ್ಣು ಮತ್ತು ಕಾವ್ಯದ ನಡುವೆ ಇರುವ ಸಂಬಂಧ ವ್ಯಕ್ತಿ ಮತ್ತು ಸಮುದಾಯಗಳು ಏರ್ಪಡಿಸಿಕೊಳ್ಳಬಹುದಾದ ಎಲ್ಲ ಮೂರ್ತ ಮತ್ತು ಅಮೂರ್ತ ಸಂಬಂಧಗಳೂ ಇವೆ. ಮಹಿಳಾ ಕಾವ್ಯ ಮೀಮಾಂಸೆ ಎಂದರೆ, ಹೆಣ್ಣು ತನ್ನನ್ನು ತಾನು ರಚಿಸಿಕೊಳ್ಳಲು, ನಿರೂಪಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ಎಂದೂ ಅರ್ಥ.

ರೂಪಕಗಳ ರಚನೆಯು ಅನೇಕ ಸಂದರ್ಭಗಳಲ್ಲಿ ಪುರುಷ ಕವಿಗಳಿಗೆ ಅವರ ಪ್ರತಿಭೆಯ ದ್ಯೋತಕವಾದರೆ, (wisdom speaks through metaphors) ಹೆಣ್ಣಿಗೆ ಅವಳನ್ನು ಅವಳೇ ‘ಕಾಣುವ’ ಸಂದರ್ಭವಾಗಿರುತ್ತದೆ. ಆದ್ದರಿಂದಲೇ ಕಾವ್ಯ ಮತ್ತು ಹೆಣ್ಣಿನ ಸಂಬಂಧ ಪುರುಷ ಮತ್ತು ಕಾವ್ಯದ ನಡುವಿನ ಸಂಬಂಧಕ್ಕಿಂತ ಹೆಚ್ಚು ಆಳವಾದದ್ದು ಮತ್ತು ಮೂಲಭೂತವಾದದ್ದು. ಅಲ್ಲಿ ಅವಳ ಅಸ್ಮಿತೆಯ, ಅವಳ ಭಾಷೆಯ, ಅವಳ ಅನುಭವದ ಎಲ್ಲವೂ ಸೇರಿದ ಭಿತ್ತಿಯೊಂದಿರುತ್ತದೆ. ವರ್ಡ್ಸ್‌ವರ್ತ್‌ನ ಮಾತಿನಲ್ಲೆ ‘ಕಾವ್ಯವೇ ಎಲ್ಲ ಜ್ಞಾನದ ಮೂಲ’ ಎಂದಾದರೆ, ಹೆಣ್ಣಿನ ಮಟ್ಟಿಗೆ ಅದು ಲೋಕಜ್ಞಾನವೂ ಸ್ವಜ್ಞಾನವೂ ಸೇರಿದ ಎನ್ನುವ ಅರ್ಥದಲ್ಲಿ ನಿಜ.

ಸ್ವಲ್ಪ ಅಕಾಡೆಮಿಕ್ ಭಾಷೆಯಲ್ಲಿ ಇದನ್ನು ನೋಡುವುದಾದರೆ, ಕಾವ್ಯದಲ್ಲಿ ಹೆಣ್ಣು ‘ರಚನೆ’ಯ, ‘ನಿರಚನೆ’ಯ ಮತ್ತು ‘ಪುನರ್ರಚನೆ’ಯ ಎಲ್ಲ ಹಾದಿಗಳನ್ನೂ ಏಕಕಾಲಕ್ಕೆ ಬಳಸುತ್ತಿರುತ್ತಾಳೆ. ಈಗಾಗಲೇ ಸ್ಥಾಪಿತವಾಗಿರುವ ಹೆಣ್ಣಿನ ಚಹರೆಯನ್ನು ನಿರಚನಗೊಳಿಸುತ್ತಾ, ತನ್ನನ್ನು ತನ್ನ ನಿಜದಲ್ಲಿ ದೇಹಾತ್ಮಗಳಲ್ಲಿ ರಚಿಸಿಕೊಳ್ಳುತ್ತಾ, ಮೌಲ್ಯವ್ಯವಸ್ಥೆಯನ್ನು ಪುನರ್ರಚಿಸುತ್ತಾ ಇರುತ್ತಾಳೆ. ಇದು ಎಷ್ಟು ದೊಡ್ಡ ಸಂಗತಿಯೆನ್ನುವುದರ ಅರಿವು ಲೇಖಕಿಯರಿಗಿದೆ ಎನ್ನುವುದೇ ಕಾವ್ಯವನ್ನು ಹೆಣ್ಣು ಕೇವಲ ‘ಕಾವ್ಯಮಾನಂದಾಯ’, ‘ಸ್ವಾಂತ ಸುಖಾಯ’ ಎನ್ನುವ ಅಥವಾ ಸೌಂದರ್ಯ ಮೀಮಾಂಸೆಯ ನೆಲೆಯಲ್ಲಿ ಮಾತ್ರ ನೋಡಲಾಗುವುದಿಲ್ಲ ಎನ್ನುವ ಸತ್ಯದ ಕಡೆಗೆ ನಮ್ಮ ಗಮನ ಸೆಳೆಯುತ್ತದೆ.

ಆಡ್ರಿನ್ ರಿಚ್ ಎನ್ನುವ ಲೇಖಕಿ ‘‘ಹೆಣ್ಣಾಗಿ ನನ್ನ ಅನುಭವಗಳನ್ನು ಅವುಗಳ ಸಂಪೂರ್ಣತೆಯಲ್ಲಿ, ಅವುಗಳ ಸಮಸ್ತ ವಿವರಗಳಲ್ಲಿ, ನನಗೆ ನಾನೇ ಯಾವುದೇ ನಿರ್ಬಂಧಗಳನ್ನು ಹೇರಿಕೊಳ್ಳದೇ ಅಭಿವ್ಯಕ್ತಿಸಲು ಕಲಿತರೆ, ನನ್ನ ಮೇಲೆ ಹೇರಲಾದ ವರ್ಗೀಕರಣಗಳು ಮತ್ತು ಮಾನದಂಡಗಳನ್ನು ಲೆಕ್ಕಿಸದೆ, ನನ್ನ ಅನುಭವದ ಘನತೆಯಲ್ಲಿ, ಅದರ ಸಾಂದ್ರತೆ ಮತ್ತು ಅಧಿಕೃತತೆಯಲ್ಲಿ ನಂಬಿಕೆಯಿಟ್ಟು ಬರೆಯುವುದನ್ನು ಕಲಿತೆನಾದರೆ, ಆ ಗಳಿಗೆಯಲ್ಲಿ ನಾನು ಹೊಸ ಭಾಷೆಯನ್ನು ಮಾತನಾಡುತ್ತಿದ್ದೇನೆ ಎಂದೇ ಅರ್ಥ’’ ಎಂದು ಹೇಳುವ ಮಾತುಗಳು ತುಂಬಾ ಮುಖ್ಯ.

ಹೆಣ್ಣಿನ ಕಾವ್ಯವು ಏಕಕಾಲಕ್ಕೆ ಅಂತರಂಗದ್ದೂ ಹೌದು, ಬಹಿರಂಗದ್ದೂ ಹೌದು. ತಾನು ಯಾರು, ಏನು, ಎನ್ನುವುದನ್ನು ತಾನೇ ನೋಡಿಕೊಳ್ಳುತ್ತಲೇ ಲೋಕಕ್ಕೂ ತಿಳಿಸುವ ಈ ಕಾವ್ಯವು ಕಲೆಯೆಷ್ಟೋ ಅಷ್ಟೇ ರಾಜಕೀಯ ಹೋರಾಟವೂ ಹೌದು.

The question of Female poetic language and the relation between women's poetry and female identity: meanwhile, this intutive understanding of the language of poetry as emotionally and politically important.
–Homen Margarate

ಆದ್ದರಿಂದಲೇ ಕಾವ್ಯ ಎನ್ನುವುದು, ಹೆಣ್ಣಿನ ಮಟ್ಟಿಗೆ ‘ಸಂಘಟಿತ ಪ್ರಜ್ಞೆಯ ಉದಯ’ ಎನಿಸುತ್ತದೆ. ಭಾಷೆಯನ್ನು ಮುರಿದು ಕಟ್ಟುವ ಪ್ರಕ್ರಿಯೆಯು ಭಾಷೆಯೊಂದರ ಉಗಮ ಮಾತ್ರವಲ್ಲ, ಮೌಲ್ಯವ್ಯವಸ್ಥೆಯೊಂದಿಗೆ ನಡೆಸುವ ಸಂಘರ್ಷ, ಅನುಸಂಧಾನ, ಸಖ್ಯ ಎಲ್ಲವೂ ಆಗಿರುತ್ತವೆ.

‘ಕಾವ್ಯವೆನ್ನುವುದು ಎಲ್ಲಕ್ಕಿಂತ ಹೆಚ್ಚಾಗಿ, ಭಾಷೆಯ ಅಧಿಕಾರ ಕೇಂದ್ರದ ಕ್ರೋಡೀಕೃತ ನೆಲೆ. ಜಗತ್ತಿನ ಎಲ್ಲದರೊಂದಿಗೂ ನಾವು ಹೊಂದಬಹುದಾದ ಅಂತಿಮ ಸಂಬಂಧ ಸಿದ್ಧಿಸುವುದೇ ಭಾಷೆಯ ಮೂಲಕ. ಕಾವ್ಯದ ಸ್ಪರ್ಶವಿಲ್ಲದೆ, ಹೆಣ್ಣಿನ ಸಂಘಟಿತ ಧ್ವನಿಯಿಲ್ಲದೆ, ಹೆಣ್ಣಿನ ಬಗೆಗೆ ಅವಳ ನಿಜದಲ್ಲಿ ಏನನ್ನೂ ಬರೆಯದ, ಶತಮಾನಗಳ ತನಕ ಕೇವಲ ಗಂಡಿನ ರೋಚಕ ಅನುಭವವಾಗಿ ಮಾತ್ರ ಉಳಿದ ಹೆಣ್ಣಿನ ಅವಸ್ಥೆಯ ಬಗ್ಗೆ ಒಮ್ಮೆ ಯೋಚಿಸಿ’ ಎನ್ನುತ್ತಾಳೆ ಸ್ತ್ರೀವಾದಿ ಚಿಂತಕಿಯೊಬ್ಬಳು.

ಕಾವ್ಯವೆನ್ನುವುದು ಭಾಷೆಯೆನ್ನುವ ಅಧಿಕಾರದ ಜೊತೆ ಏರ್ಪಡಿಸಿಕೊಳ್ಳುವ ಸಂಬಂಧ ಎನ್ನುವುದು ಹೆಣ್ಣಿನ ಕಾವ್ಯದ ಹೋರಾಟದ ಆಯಾಮವನ್ನು ಖಚಿತಪಡಿಸುತ್ತದೆ.

ಮಾತನಾಡಿಸಬೇಕು
ಹೊರಳುತ್ತಿರುವ ಭೂಮಿಯನ್ನು
ಉರುಳುತ್ತಿರುವ ಸಾಗರವನ್ನು
ಮಾತನಾಡಿಸಬೇಕು
ದೇವರೇ... ಇವರದ್ದು ಯಾವ ಭಾಷೆ
–ಸವಿತಾ ನಾಗಭೂಷಣ

ಸವಿತಾ ಅವರ ಈ ಕವಿತೆ, ಭಾಷೆಯ ವಿಶ್ವಾತ್ಮಕ ಭಿತ್ತಿಯನ್ನು ಹೇಳುತ್ತಿರುವಂತೆ ಕಾಣಿಸುತ್ತಿದೆ. ಆದರೆ, ಈ ಕವಿತೆಯ ನಾಯಕಿಯ ಆತ್ಮವಿಶ್ವಾಸ ಮತ್ತು ಲೋಕಪ್ರೀತಿ ಇನ್ನಿತರ ಅಂಶಗಳ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಹೆಣ್ಣಿನ ವಿಶ್ವಾತ್ಮಕ ಭಾಷೆಯೆನ್ನುವ ಅತ್ಯಂತ ಮಹತ್ವದ ಸಂಗತಿಯ ಪ್ರಸ್ತಾಪ ಇಲ್ಲಿದೆ.

ಕುಟುಂಬ ವಿಶ್ವ ಎನ್ನುವ ಪರಿಧಿಯಲ್ಲಿಯೇ ಹೆಣ್ಣನ್ನು ಭದ್ರಗೊಳಿಸುವ ಆದಿಮ ಎನ್ನಬಹುದಾದ ದೄಷ್ಟಿಕೋನವನ್ನೇ ಈ ಕವಿತೆ ಪ್ರಶ್ನಿಸುತ್ತಿದೆ. ಅದಕ್ಕೆ ಎದುರಾಗಿ ಇಡೀ ವಿಶ್ವವನ್ನೇ ಕುಟುಂಬವಾಗಿ ಗ್ರಹಿಸಬಹುದಾದ ಹೆಣ್ಣಿನ ಧಾರಣಶಕ್ತಿಯನ್ನು ತನ್ನ ಅರಿವಿಗೆ ತಂದು ಕೊಳ್ಳುವ ಸನ್ನಾಹದಲ್ಲಿ ಈ ಕವಿತೆ ಇದೆ. ಇವರದ್ದು ಯಾವ ಭಾಷೆ ಎನ್ನುವ ಉದ್ಗಾರದಲ್ಲಿ, ಅಸಹಾಯಕತೆಯಲ್ಲ, ಯಾವ ಭಾಷೆಯಾದರೂ ಸಂವಾದ ಸಾಧ್ಯ ಎನ್ನುವ ಭರವಸೆಯ ದೃಢತೆ ಇಲ್ಲಿದೆ. ಜಗತ್ತಿನ ವಿಸ್ತಾರಕ್ಕೆ, ಅನಂತತೆಗೆ, ಪ್ರಾಕೃತಿಕ ನ್ಯಾಯಕ್ಕೆ ತನ್ನನ್ನು ಹೊಂದಿಸಿಕೊಳ್ಳುವ ಮಹತ್ವಾಕಾಂಕ್ಷೆಯೂ ಇಲ್ಲಿದೆ.

ವೈದೇಹಿಯವರ ಕವಿತೆಗೆ ಮತ್ತೆ ಮರಳುವುದಾದರೆ, ಅವನು ಗೋಡೆ ಎಂದರೆ, ಇವಳು ಬಯಲು ಎಂದು ಗ್ರಹಿಸುವುದಂತೂ ಅದ್ಭುತವಾಗಿದೆ. ‘ಗೋಡೆ ಒಡೆದರೆ ಎಲ್ಲ ಬಯಲು ಎಂದೆ’ ಎಂದು ತಿಳಿಯಲು ಯತ್ನಿಸುವುದು ಹೆಣ್ಣಿನ ಎದುರಿಗಿರುವ ಎಲ್ಲ ಗೋಡೆಗಳನ್ನು ಒಡೆಯುವ ಅಗತ್ಯ ಮತ್ತು ಬಯಕೆಯ ಪ್ರತಿಮೆಯಂತೆ ಕಾಣಿಸುತ್ತದೆ.

ಜನಪದ ಕಾವ್ಯದ ಅನಾಮಿಕ ಕವಯತ್ರಿಯರನ್ನು, ಮೌಖಿಕ ಪರಂಪರೆಯ ನೂರಾರು ಕವಯತ್ರಿಯರನ್ನು ಕಂಡಾಗ, ಕಾವ್ಯವು ಹೆಣ್ಣಿನ ನಿಡುಗಾಲದ, ಅಂತರಂಗದ ಗೆಳತಿ ಎನ್ನುವ ಸಂಗತಿ ತಾನೇ ತಾನಾಗಿ ತಿಳಿಯುತ್ತದೆ. ಬದುಕಿನ ಸಹಜ ಹಕ್ಕುಗಳಿಂದಲೂ ವಂಚಿತರಾದಂತೆ ಕಾಣಿಸುವ ಈ ಮಹಿಳೆಯರು ಕಾವ್ಯದ ಅನಂತ ವಿಸ್ತಾರದಲ್ಲಿ ಕೊರಳೆತ್ತಿ, ಸ್ವಚ್ಚಂದವಾಗಿ, ನಿರುಮ್ಮಳವಾಗಿ ನಿರಂತರವಾಗಿ ಹಾಡಿರುವುದೇ ಇವತ್ತಿನ ನಮ್ಮ ಪ್ರಮೇಯವನ್ನು ಸಂದೇಹಾತೀತವಾಗಿ ಪ್ರಸ್ತುತಪಡಿಸುತ್ತದೆ. ಹೆಣ್ಣು ಕಾವ್ಯವನ್ನು ಸದಾ ಆತುಕೊಂಡಿದ್ದಾಳೆ, ಹೊರಗೂ ಒಳಗೂ. ಕಾವ್ಯ ಗಂಡಿನ ವ್ಯಕ್ತಿತ್ವಕ್ಕೊಂದು ಅಲಂಕಾರ, ಕಿರೀಟ, ಪತಾಕೆ... ಹೀಗೆ ಕಾವ್ಯ ಅವನಿಗೊಂದು ಏಣಿ. ಹೆಣ್ಣಿಗಾದರೋ ಕಾವ್ಯ ಅವಳ ಬದುಕು, ವ್ಯಕ್ತಿತ್ವದ ದೋಣಿಯ ಹುಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.