ಭಕ್ತಿಗೂ ಹೆಣ್ಣಿಗೂ ಹತ್ತಿರದ ಸಂಬಂಧ. ಭಕ್ತಿ ಕಾವ್ಯವನ್ನು ಕುರಿತು ಚರ್ಚಿಸುವ ಸಂದರ್ಭದಲ್ಲಿ ಎ.ಕೆ. ರಾಮಾನುಜನ್ ಅವರ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ‘‘ಭಕ್ತಿಯೆನ್ನುವುದೇ ಮೂಲತಃ ಹೆಣ್ಣುತನದ ಗುಣ-ಸ್ವಭಾವಗಳನ್ನೆಲ್ಲ ಒಳಗೊಂಡಿದೆ ಎನ್ನುವುದನ್ನು ಮರೆಯಬಾರದು, ಆದ್ದರಿಂದ ಭಕ್ತಿಯು ಸ್ತ್ರೀಲಿಂಗಕ್ಕೆ ಸಮೀಪವಾದುದು’’ ಎಂದು ರಾಮಾನುಜನ್ ಹೇಳುತ್ತಾರೆ.

ಇದೊಂದು ಸಂಕೀರ್ಣವಾದ ಸಂಗತಿ. ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಹೆಣ್ಣು ಮತ್ತು ಭಕ್ತಿಯ ಆಯಾಮವನ್ನು ಮಾತ್ರವಲ್ಲ ಮಧ್ಯಯುಗೀನ ಮಹಿಳಾ ಭಕ್ತ ಕವಿಗಳ ಒಟ್ಟೂ ಪ್ರಯತ್ನಗಳನ್ನು ಚರ್ಚಿಸಬಹುದು.

ರಾಮಾನುಜನ್ ಹೇಳಿಕೆಗೆ, ಲಿಂಗಸಮಾನತೆಯು ಸಿದ್ಧಿಸಿರುವ ಸಮುದಾಯದಲ್ಲಿ ಬರಬಹುದಾದರೆ ಅದಕ್ಕೆ ಸಿಗಬಹುದಾದ ಸ್ಥಾನನಿರ್ದೇಶನ ಮತ್ತು ಅನನ್ಯತೆಯ ಸ್ಥಾನವು ಲಿಂಗ ಸಮಾನತೆಯ ವ್ಯವಸ್ಥೆಯಲ್ಲಿ ಸಿಕ್ಕಲಾರದು. ಇದೊಂದು ಲಿಂಗ ವಿಶೇಷ ಎಂದು ಒಪ್ಪಬಹುದಾದ, ಒಪ್ಪಬೇಕಾದ ಸಂಗತಿ ನಿಜ. ಆದರೆ ‘ಅಧೀನತೆ’ಯೇ ಸಾಮಾಜಿಕ ವಾಸ್ತವವಾಗಿರುವ ವ್ಯವಸ್ಥೆಯಲ್ಲಿ ‘ಭಕ್ತಿ’ ಎನ್ನುವ ಪಾರಮಾರ್ಥಿಕ ನೆಲೆಯು ಹೆಣ್ಣಿನ ಗುಣವಿಶೇಷಗಳನ್ನು ಹೊಂದಿದೆ ಎಂದು ಹೇಳುವುದರಿಂದ ಯಾವ ಅರ್ಥ ಹೊರಡುತ್ತದೆ?

ಭಕ್ತಿಯು ಶರಣಾಗತಿಯ, ‘ಕಳೆದುಕೊಂಡು’ ‘ಲಯ’ವಾಗುವ ವ್ಯಕ್ತಿತ್ವವನ್ನು ಗುರಿಯಾಗಿ ಹೊಂದಿದೆ ಎನ್ನುವುದಾದರೆ, ಹೆಣ್ಣಿನ ಸಾಮಾಜಿಕ ವಾಸ್ತವವನ್ನೇ ಪಾರಮಾರ್ಥಿಕ ವಾಸ್ತವವಾಗಿ, ಸಿದ್ಧಿಯಾಗಿ ತೋರಿಸುವುದು ಎಂದಾಗುವುದಿಲ್ಲವೆ? ಸಾಮಾಜಿಕವನ್ನೇ ಅಲೌಕಿಕವಾಗಿಸುವ, ಅಮೂರ್ತವಾಗಿಸುವ ಈ ದೃಷ್ಟಿಕೋನವು ಹೆಣ್ಣಿನ ಅಸ್ಮಿತೆಯ ರಾಜಕೀಯ ಪ್ರಶ್ನೆಯನ್ನಾಗಲೀ, ಅದರ ಅಧಿಕೃತತೆಯ ಪ್ರಶ್ನೆಯನ್ನಾಗಲೀ ಗಣನೆಗೇ ತೆಗೆದುಕೊಳ್ಳುವುದಿಲ್ಲವಾದ್ದರಿಂದ ಈ ಹೇಳಿಕೆಯನ್ನು ಹೆಣ್ಣಿನ ಅನನ್ಯತೆಯ, ಅಸ್ಮಿತೆಯ ಹೇಳಿಕೆಯೆಂದು ಪರಿಗಣಿಸುವುದೂ ಕಷ್ಟವಾಗುತ್ತದೆ.

ಈ ಅರಿವು ರಾಮಾನುಜನ್ ಅವರಿಗಿತ್ತು. ಅವರು ನಮ್ಮನ್ನು ಈ ಬಗ್ಗೆ ಎಚ್ಚರಿಸಿಯೂ ಎಚ್ಚರಿಸುತ್ತಾರೆ. ‘ಮರೆಯಬಾರದು’ ಎಂದು ಹೇಳುವ ಅವರ ಮಾತು ಈ ಹೇಳಿಕೆಯನ್ನು ಇದಮಿತ್ಥಂ ಎಂದು ಒಪ್ಪಲಾಗುವುದಿಲ್ಲ ಎನ್ನುವುದನ್ನು ಹೇಳುತ್ತದೆ. ನಿಜದಲ್ಲಿ ಈ ಮಹಿಳಾ ಅನುಭಾವಿಗಳ ವ್ಯಕ್ತಿತ್ವ, ಬರವಣಿಗೆ, ಇವುಗಳನ್ನು ಕುರಿತ ಈ ತನಕದ ಅಧ್ಯಯನಗಳು– ಈ ಎಲ್ಲವನ್ನೂ ಮರು ಓದಿಗೆ ಒಳಗು ಮಾಡಬೇಕಾದ ಅನಿವಾರ್ಯತೆ ಇದೆ. ಸರಳವಾಗಿ ಹೇಳುವುದಾದರೆ ಈ ಮಹಿಳೆಯರ ಘನವಾದ ಪ್ರಯತ್ನಗಳು, Making of the Women– ‘ಹೆಣ್ಣಿನ ರಚನೆ’ ಎಂದು ಕರೆಯಬಹುದಾದಷ್ಟು ಮಹತ್ವದವು. ಈ ಮಹಿಳಾ ಅನುಭಾವಿಗಳು ತಮ್ಮ ವ್ಯಕ್ತಿತ್ವದ ಚಹರೆಯನ್ನು ಸ್ಥಳೀಯವಾಗಿದ್ದೂ ವಿಶ್ವಾತ್ಮಕವಾದ, ವ್ಯಕ್ತಿಗತವಾಗಿದ್ದೂ ಸಾರ್ವತ್ರಿಕವಾಗಬಹುದಾದ ಧಾತುಗಳಿಂದ ಕಟ್ಟಲು ಪ್ರಯತ್ನಿಸಿದರು.

ಕುಂದಿಲ್ಲದ ಆತ್ಮ ಘನತೆಯ, ಸ್ವಪ್ರಜ್ಞೆಯ ಎಚ್ಚರ ಮತ್ತು ಜವಾಬ್ದಾರಿಯಲ್ಲಿ, ಬದುಕು ಮತ್ತು ಸಂಬಂಧಗಳನ್ನು ಕುರಿತ ಅದಮ್ಯ ಜೀವನ ಪ್ರೀತಿಯಲ್ಲಿ ಕಟ್ಟಿಕೊಂಡ ವ್ಯಕ್ತಿತ್ವವು ಹೆಣ್ಣಿನ ನಿಜದ ನೆಲೆಗಳನ್ನು, ಅವಳ ಶಕ್ತಿ–ಸಾಧ್ಯತೆಗಳನ್ನು ಸಂದೇಹಾತೀತವಾಗಿ ಪ್ರಸ್ತುತ ಪಡಿಸುತ್ತದೆ. ಅವರ ಈ ನಭೂತೋ ಎನ್ನುವಂತಹ ಸಾಧನೆಗೆ ಐತಿಹಾಸಿಕ ಮಹತ್ವವೂ ಇದೆ, ಸಮಕಾಲೀನ ಪ್ರಸ್ತುತತೆಯೂ ಇದೆ. ಈ ಕಾರಣಕ್ಕಾಗಿಯೇ ಅವರು ನಾವು ತಲೆಯೆತ್ತಿ ನೋಡಬೇಕಾದ ಮಾದರಿಯೂ ನಡೆಯಬಹುದಾದ ದಾರಿಯೂ ಆಗಿದ್ದಾರೆ.

ಹೆಣ್ಣಿನ ಮೋಕ್ಷವು ಪಾರಮಾರ್ಥಿಕತೆಯಲ್ಲಿ ಇದೆಯೋ ಇಲ್ಲವೋ ಆದರೆ ಈ ಭವದ ಬದುಕನ್ನು ಎಚ್ಚೆತ್ತ ಸಾಕ್ಷಿಪಜ್ಞೆ ಮತ್ತು ಆತ್ಮಪ್ರತ್ಯಯದಲ್ಲಿ, ಹೆಣ್ಣಿನ ಆಯ್ಕೆ ಮತ್ತು ಆದ್ಯತೆಯಲ್ಲಿ , ಬದುಕುವ ಸ್ವಾಯತ್ತತೆಯಲ್ಲಿ, ಹೆಣ್ಣಿನ ಬದುಕಿನ ಸ್ವಂತಿಕೆ ಮತ್ತು ಸಾರ್ಥಕತೆ ಇದೇ ಎನ್ನುವುದನ್ನು ಇವರಷ್ಟು ಮಾನವ ಘನತೆಯಲ್ಲಿ ಕಟ್ಟಿಕೊಟ್ಟವರು ಕಡಿಮೆ. ಹೆಣ್ಣಿನ ಹೋರಾಟದ ವ್ಯಕ್ತಿಗತ ಮತ್ತು ಸಾಮುದಾಯಿಕ ನೆಲೆಗಳೆರಡನ್ನೂ ಇವರು ಪ್ರತಿನಿಧಿಸುತ್ತಾರೆ ಎನ್ನುವುದು ಇವರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.

ಇವರ ಕಾವ್ಯದ ಮರು ಓದು ಎಂದರೆ, ಹೆಣ್ಣಿನ ಭಾಷೆ, ಅಭಿವ್ಯಕ್ತಿ, ಅಸ್ಮಿತೆ, ಪ್ರತಿರೋಧ ಇವೆಲ್ಲವೂ ಬೆರೆತ ‘ಲೋಕದೃಷ್ಟಿ’ಯೊಂದರ ಜೊತೆ ನಾವು ನಡೆಸುವ ಮಾತುಕತೆ. ಮೂರು ಪ್ರಧಾನ ಧಾತುಗಳಿಂದ ಈ ಅನುಭಾವಿಗಳು ತಮ್ಮ ವ್ಯಕ್ತಿತ್ವದ ರೂಪುರೇಷೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ದೇಹ, ಪ್ರಕೃತಿ ಮತ್ತು ಭಾಷೆ. ಇತರ ಹಲವು ಮುಖ್ಯ ಸಂಗತಿಗಳಿವೆಯಾದರೂ ನಿರ್ಣಾಯಕವಾದವು ಈ ಮೂರು.

ಮಹಿಳಾ ಅನುಭಾವಿಗಳ ದೇಹ ಮೀಮಾಂಸೆಯು ಕುತೂಹಲಕರವಾಗಿದೆ. ತಿರಸ್ಕರಿಸುವ, ಹಳಿಯುವ, ದೇಹ ಬಂಧನದಿಂದ ಬಿಡುಗಡೆ ಪಡೆಯಲು ಒದ್ದಾಡುವ ಚಿತ್ರಗಳು ಇವರಲ್ಲಿ ಕಡಿಮೆ. ದೇಹವನ್ನು ಪಳಗಿಸುವ ಧೀರೋದಾತ್ತವಾದ ದಾರಿಯನ್ನು ಇವರು ಹಿಡಿಯುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಅಪಾರ ದೇಹ ಸಂಭ್ರಮದ ವಿವರಗಳೂ ಇವರಲ್ಲಿ ಉಜ್ವಲವಾಗಿ ಬರುತ್ತವೆ.

ಈ ದೇಹಮೀಮಾಂಸೆಯನ್ನು ನಾವು ರಾಜಕೀಯ ನಿಲುವಾಗಿಯೂ ನೋಡಬೇಕು. ಹೆಣ್ಣು ತನ್ನ ದೇಹವನ್ನು ‘ಗ್ರಹಿಸುವ’, ಅದರ ಮೇಲಿನ ತನ್ನ ಒಡೆತನವನ್ನು ಖಚಿತ ಪಡಿಸಿಕೊಳ್ಳುವ ಪ್ರಕ್ರಿಯೆಯಾಗಿಯೂ ಇದನ್ನು ನೋಡಬೇಕು. ಈ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಹೆಣ್ಣಿನ ಸ್ವಪ್ರಜ್ಞೆಯ ಗಳಿಕೆ ಮತ್ತು ಅಭಿವ್ಯಕ್ತಿಯ ಒಂದು ಮುಖ್ಯವಾದ ಘಟ್ಟ.

ಪುರುಷ ಅನುಭಾವಿಗಳಲ್ಲಿ ಈ ಪ್ರಕ್ರಿಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ತಮ್ಮ ದೇಹ ಮತ್ತು ಲೈಂಗಿಕತೆಯನ್ನು ಹೊಸದಾಗಿ ಎನ್ನುವಂತೆ ಪರಿಭಾವಿಸಬೇಕಾದ ಅನಿವಾರ್ಯತೆ ಅವರಿಗಿಲ್ಲ. ಅವರದೇನಿದ್ದರೂ ಅದನ್ನು ಕಳೆದುಕೊಳ್ಳುವ ಕಡೆಗಿನ ಪ್ರಯಾಣ. ಈ ಪಡೆಯುವ, ಮತ್ತೆ ಕಳೆದುಕೊಳ್ಳುವ ದ್ವಿಮುಖ ಆಯಾಮವು ಮಹಿಳಾ ಅನುಭಾವಿಗಳನ್ನು ಸಂಪೂರ್ಣವಾಗಿ ವಿಶಿಷ್ಟವಾದ ಚೌಕಟ್ಟಿನಲ್ಲಿ ನಿಲ್ಲಿಸುತ್ತದೆ.

ಮಧ್ಯಯುಗೀನ ಮಹಿಳೆಯರು ನಡೆಸಿದ ದೇಹಾಧಾರಿತ ಹೋರಾಟದ ನಿರ್ಣಾಯಕ ಮಾದರಿಯನ್ನು ಅದರ ಸ್ವತಂತ್ರ ಎನ್ನಬಹುದಾದ ನೆಲೆಯಲ್ಲಿ ಚರ್ಚಿಸಲು ಬೇಕಾದ ಆವರಣವೇ ಸೃಷ್ಟಿಯಾಗದೇ ಹೋಯಿತು. ಇವರ ದೇಹಮೀಮಾಂಸೆಯ ಪ್ರಧಾನ ಅಂಶ ಲೈಂಗಿಕತೆ. ಅದರ ನಿಗೂಢ, ಮೋಹಕ ಆಯಾಮಗಳು ಇವರನ್ನು ಮತ್ತೆ ಮತ್ತೆ ಕಾಡಿವೆ. ದೇಹವನ್ನು ಮೀರಿಕೊಳ್ಳುವ ದಾರಿಯ ಪಥಿಕರಾದ ಇವರ ದೇಹಾರಾಧನೆ ಕುತೂಹಲಕರವಾಗಿದೆ. ಇವರ ಈ ಶೋಧ ಮತ್ತು ಸಂಭ್ರಮ ಹೆಣ್ಣು ತನಗೇ ಅಪರಿಚಿತವಾದ ದೇಹವನ್ನು ತನಗೆ ತಾನೇ ಪರಿಚಯಿಸಿಕೊಳ್ಳುವ, ಕಂಡುಕೊಳ್ಳುವ ದರ್ಶನವಾಗಿಯೂ ಇದು ಕಾಣಿಸುತ್ತದೆ.

‘ಭಕ್ತಿ’ ಎನ್ನುವ ಭಿತ್ತಿಯನ್ನು ಬಳಸಿಯೇ ಇವರೆಲ್ಲರೂ ತಮ್ಮ ಸಾಮಾಜಿಕ ಮತ್ತು ಲೌಕಿಕ ಹೋರಾಟದ ನೆಲೆಗಳನ್ನು ನಿರ್ಧರಿಸುವುದಂತೂ ಮಹಿಳೆಯರ ಹೋರಾಟದ ರೋಮಾಂಚಕಾರಿ ಘಟ್ಟವಾಗಿದೆ. ಇನ್ನೂ ರೋಚಕವಾಗಿ ಹೇಳಬೇಕೆಂದರೆ, ಪಿತೃಸಂಸ್ಕೃತಿ ನಿರಂತರವಾಗಿ ಒಂದಲ್ಲ ಒಂದು ಛದ್ಮವೇಷದಲ್ಲಿ ಹೆಣ್ಣನ್ನು ನಿಯಂತ್ರಿಸಲು ಪ್ರಯತ್ನಿಸುವುದಕ್ಕೆ ಪ್ರತಿಯಾಗಿ ಈ ಮಹಿಳೆಯರು ಭಕ್ತಿ ಎನ್ನುವುದನ್ನು ಛದ್ಮವೇಷವಾಗಿ ಬಳಸಿಕೊಂಡು ತಾವು ಬದುಕುತ್ತಿರುವ ಕಾಲಘಟ್ಟದ ಮೌಲ್ಯವ್ಯವಸ್ಥೆಯ ಜೊತೆ ಮುಖಾಮುಖಿಯನ್ನು ನಡೆಸುತ್ತಿದ್ದಾರೆ ಎಂದೂ ಅನಿಸುತ್ತದೆ.

ಗಂಡು, ಅವನ ದತ್ತ ಅಧಿಕಾರ, ಅದರ ಬಗ್ಗೆ ಅವರಿಗಿರುವ ನಿರ್ಲಜ್ಜತೆ ಮತ್ತು ಅಹಂಕಾರ ಈ ಎಲ್ಲವುಗಳನ್ನು ಭವಿಗಳ ಗುಣ ಲಕ್ಷಣವಾಗಿ ಇವರು ಖಂಡಿಸುತ್ತಾ ಹೋಗುತ್ತಾರೆ. ಪುರುಷರ ಭಾಷೆ, ಅವರ ಚೌಕಟ್ಟನ್ನು ಬಳಸಿಯೇ ಅವರನ್ನು ಪ್ರಶ್ನಿಸುವ, ಧಿಕ್ಕರಿಸುವ, ಮಾತ್ರವಲ್ಲ ತಮ್ಮದೇ ಆದ ತಾತ್ವಿಕತೆಯನ್ನು ಮಂಡಿಸಿದ ಈ ಅಪೂರ್ವ ಮಹಿಳೆಯರ ಬಗ್ಗೆ ಗೌರವ ಮಾತ್ರವಲ್ಲ ಆರಾಧನೆಯೇ ಹುಟ್ಟುತ್ತದೆ ನಮ್ಮಲ್ಲಿ. ತಮಿಳಿನ ಪ್ರಸಿದ್ಧ ಅನುಭಾವಿ ಆಂಡಾಳ್ ಕವಿತೆಗಳಲ್ಲಿ, ದೇಹ ಸಂಭ್ರಮದ ಕೆಲವು ಕವಿತೆಗಳನ್ನು ನೋಡಬಹುದು.

ಓ ಕಾಮ . ನೋಡಲ್ಲಿ, ಭಿತ್ತಿಯ ಮೇಲೆ ನಿನ್ನ ಎಲ್ಲ ಧ್ವಜಗಳನ್ನೂ ಚಿತ್ರಿಸಿದ್ದೇನೆ ಮೀನು, ಕುದುರೆ, ಹೆಣ್ಣನ್ನು ನಿನ್ನ ಕಬ್ಬಿನ ಬಿಲ್ಲನ್ನೂ ಅರಳುತ್ತಿರುವ ನನ್ನ ಸ್ತನಗಳು ಅವನಿಗಾಗಿ ಅವನಿಗಾಗಿ ಮಾತ್ರವೇ ಕಾತರಿಸುತ್ತಿವೆ ನನ್ನ ಭಾಗ್ಯವನ್ನು ಕೂಡಿಸುವನೊಂದಿಗೆ ಮನ್ಮಥನನ್ನೇ ನೇರವಾಗಿ ಸಂಬೋಧಿಸಿದ ಅನೇಕ ಕವಿತೆಗಳು ಆಂಡಾಳ್‌ರಲ್ಲಿ ಇವೆ. ಕೃಷ್ಣನನ್ನು ಮದುವೆಯಾಗಬೇಕು, ಅವನೇ ನನ್ನ ಸಖ, ದೈವ ಎನ್ನುವ ಅರ್ಥದ ಕವಿತೆಗಳಂತೂ ಹೇರಳವಾಗಿವೆ.

ಈ ದೃಷ್ಟಿಯಿಂದ ಮೀರಾ, ಅಕ್ಕ ಹಾಗೂ ಆಂಡಾಳ್ ಕವಿತೆಗಳ ನಡುವಿರುವ ಸಾದೃಶ್ಯ ನಮ್ಮನ್ನು ಬೆರಗುಗೊಳಿಸುತ್ತದೆ. ಇವುಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಒಬ್ಬರೇ ಬರೆದಿದ್ದಾರೋ ಅಥವಾ ಒಬ್ಬರ ಕವಿತೆಗಳನ್ನೇ ಇತರ ಭಾಷೆಗಳಿಗೆ ಅನುವಾದ ಮಾಡಲಾಗಿದೆಯೋ ಎಂದು ಕೂಡ ಕೆಲವೊಮ್ಮೆ ಅನಿಸುವಷ್ಟು ಇವರ ಕವಿತೆಗಳಲ್ಲಿ ಸಾಮ್ಯತೆಯಿದೆ. ಈ ಮೂವರೂ ನಿರಂತರವಾಗಿ ಪ್ರಯತ್ನಿಸುವುದು, ಮದುವೆ, ಗಂಡ ಹಾಗೂ ದಾಂಪತ್ಯದ ಪರಿಕಲ್ಪನೆಗಳನ್ನೇ ಮುರಿದು ಕಟ್ಟುವುದಕ್ಕೆ.

ಓ ಕಾಮ,
ಮುಂಜಾನೆಯಿಂದಲೇ
ಇಡೀ ಬೀದಿಯನ್ನು ರಂಗೋಲಿಯಿಂದ ಅಲಂಕರಿಸಿದ್ದೇನೆ ನಾನು
ಬೆಳಕು ಹರಿಯುವ ಮೊದಲೇ ಜಳಕ ಮಾಡಿ ಕಾದಿದ್ದೇನೆ ನಾನು
ಮಧು ತುಂಬಿರುವ ಹೂವುಗಳಿಂದ ಪೂಜಿಸುತ್ತಾ ಬೇಡುತ್ತಿದ್ದೇನೆ ನಾನು
ಆ ಗೋವರ್ಧನನನ್ನೂ ನನ್ನನ್ನೂ ಸೇರಿಸು
ನಿನ್ನ ಹೂವಿನ ಬಾಣದಿಂದ

ನಾನೋ ಕಾಯುತ್ತಲೇ ಇದ್ದೇನೆ ಗೋವರ್ಧನನಿಗಾಗಿ
ನಾನು ಬದುಕಿದ್ದೇನೋ ಸತ್ತಿದ್ದೇನೋ ಯಾರಿಗೆ ಬೇಕಾಗಿದೆ?
ಪ್ರಣಯೋನ್ಮಾದಿನಿಯಾಗಿ ನಾನು
ಪ್ರತಿಕ್ಷಣದ ವಿರಹದಲ್ಲಿ, ಉನ್ಮತ್ತ ನಿರೀಕ್ಷೆಯಲ್ಲಿ
ಕಾಯುತ್ತಲೇ ಇದ್ದೇನೆ ನಾನು.
ನನ್ನ ನಿರುಪಯುಕ್ತ ಸ್ತನಗಳನ್ನು ಬೇರು ಸಮೇತ ಕಿತ್ತು
ಅರ್ಪಿಸುತ್ತೇನೆ ಅವನ ಎದೆಯ ಮೇಲೆ.
ನನ್ನ ಉರಿಯುವ ಬೆಂಕಿಯಂತಹ ಪ್ರೀತಿ ಹೀಗಾದರೂ ಅವನನ್ನು ಸೇರಲಿ

ಈ ಕವಿತೆಗಳಲ್ಲಿ ಕಾಣಿಸುತ್ತಿರುವುದು ಕೇವಲ ಭಕ್ತಿಯಲ್ಲ, ದೈವ ಸಾಕ್ಷಾತ್ಕಾರದ ಹಂಬಲ ಮಾತ್ರವಲ್ಲ, ಆ ಗೋವರ್ಧನನನ್ನು ದೈಹಿಕವಾಗಿಯೂ ಕೂಡಬೇಕೆನ್ನುವ ಉತ್ಕಟ ಆಸೆಯೂ ಇಲ್ಲಿ ತಾನೇ ತಾನಾಗಿ ಅಭಿವ್ಯಕ್ತವಾಗಿದೆ. ಆಂಡಾಳ್ ಇನ್ನಿತರ ಕೆಲವು ಕವಿತೆಗಳಲ್ಲಿ ಬಳಸುವ ಲೈಂಗಿಕ ರೂಪಕಗಳೂ ಕೂಡ ಈ ಅಂಶವನ್ನೇ ಸಮರ್ಥಿಸುವಂತಿವೆ. ಕೃಷ್ಣನಿಗಾಗಿ ತಾನು ಹಂಬಲಿಸುವಷ್ಟೇ ಅವನೂ ತನಗಾಗಿ ಹೀಗೇ ಕಾತರಿಸಬೇಕು, ತಾನು ಅದನ್ನು ಕಾಣಬೇಕು ಎನ್ನುವ ಹಂಬಲದ ಅನೇಕ ಕವಿತೆಗಳು ಇವೆ. ಸಾಮಾನ್ಯವಾಗಿ ಪ್ರಣಯ, ಪ್ರೀತಿ ಇವುಗಳನ್ನು ಸಜ್ಜನ ಹೆಣ್ಣುಮಕ್ಕಳು ವ್ಯಕ್ತಪಡಿಸಬಾರದು, ಅದು ಅನುಕ್ತವೂ ಅವ್ಯಕ್ತವೂ ಆಗಿರಬೇಕು ಎನ್ನುವ ನಂಬಿಕೆಯನ್ನೇ ಆಂಡಾಳ್ ಬುಡಮೇಲು ಮಾಡುತ್ತಾಳೆ.

ಅತಿ ಎನಿಸುವ ಮಟ್ಟದಲ್ಲಿ ಅವಳು ಇದನ್ನು ಮಾಡುವ ಪರಿ ಎಷ್ಟೋ ಹೆಣ್ಣುಮಕ್ಕಳ ಪರವಾಗಿ, ಈ ತನಕ ಇಲ್ಲದೇ ಇದ್ದ ಅವಕಾಶವನ್ನೆಲ್ಲ ತಾನು ಒಬ್ಬಳೇ ಬಳಸಿಬಿಡಬೇಕು ಎನ್ನುವ ತೀವ್ರತೆಯಲ್ಲಿ ಆಂಡಾಳ್ ಮಾಡಿದ ಹಾಗೆ ಕಾಣಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಕಾಡುವ ಸಂಕೋಚವೂ ಇಲ್ಲಿ ಅವಳನ್ನು ಕಾಡುವ ಸಂದರ್ಭವಿಲ್ಲ. ಏಕೆಂದರೆ, ಎಲ್ಲವೂ ದೇವರ ಹೆಸರಿನಲ್ಲಿ ತಾನೆ! ಇದನ್ನೇ ನಾನು, ಪುರುಷ ಭಾಷೆ ಮತ್ತು ತಂತ್ರವನ್ನೇ ಬಳಸಿ ಅವರನ್ನು ವಿರೋಧಿಸುವ ಮಾದರಿ ಎನ್ನುತ್ತಿರುವುದು.

ಈ ಕವಿತೆಗಳ ಜೊತೆಯಲ್ಲಿ ಅಕ್ಕನ ವಚನಗಳನ್ನು ನೋಡಿ–

ಒಮ್ಮೆ ಕಾಮನ ಕಾಲ ಹಿಡಿವೆ
ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ, ನಾನಾರಿಗೆ ಧೃತಿಗೆಡುವೆ?
ಚೆನ್ನಮಲ್ಲಿಕಾರ್ಜುನನ ಕಾರಣ
ಎಲರಿಗೆ ಹಂಗುಗಿತ್ತಿಯಾದೆನವ್ವಾ

ಎನ್ನ ತುಂಬಿದ ಜವ್ವನ, ತುಳುಕುವ ಮೋಹವನು
ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ
ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ
ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ

ಜೊತೆಗೆ ಮೀರಾಳ ಕವಿತೆಯೊಂದನ್ನು ಗಮನಿಸೋಣ–

The dark form has enterd my heart
I meditate Giridhara night and day
and mohana surely abites my heart
I am bitten by the snake of love of shyam
And stand utterly bewildered
says Meera: O my Master when will you come
everyday finds me filled with love anew

ಇವರ ಇಂಥಹ ಕವಿತೆಗಳ ಜೊತೆಯಲ್ಲಿ ಇವರ ಮದುವೆ ಮತ್ತು ಗಂಡನ ಬದಲಾದ ಚಿತ್ರಗಳಿರುವ ಕವಿತೆಗಳನ್ನು ಇಟ್ಟರೆ ಚಿತ್ರ ಸಂಪೂರ್ಣವಾಗುತ್ತದೆ. ಮದುವೆಯನ್ನು ಕುರಿತಂತೆ ಅವಾಸ್ತವ, ಅದ್ಭುತ ಎನಿಸುವಂತಹ ಮದುವೆಯ ವಿವರಗಳು ಇವರು ಸಾಂಪ್ರದಾಯಿಕವಾದ ಮದುವೆ ಎನ್ನುವ ವ್ಯವಸ್ಥೆಯನ್ನು, ಅದರ ಜೊತೆಗೇ ಅದರ ಅಧಿಕಾರ ಕೇಂದ್ರದ ಸ್ವರೂಪವನ್ನೂ ಧಿಕ್ಕರಿಸುತ್ತಿರುವುದರ ಸೂಚನೆಯಾಗಿದೆ. ಹಾಗೆಯೇ ದೈವದ ಹೆಸರಿನಲ್ಲಿ, ರೂಪದಲ್ಲಿ ಇವರು ನಿರ್ಮಿಸಿಕೊಳ್ಳುವ ‘ಸಖ’ ಸಾಂಪ್ರದಾಯಿಕ ‘ಗಂಡನ’, ಆ ಹೆಸರಿನ ಜೊತೆಯಲ್ಲೇ ಬರುವ ಶ್ರೇಣೀಕರಣದ ನಿರಾಕರಣೆ.

ಎಂದರೆ ಈ ಮಹಿಳೆಯರು ಲೌಕಿಕವನ್ನು, ದಾಂಪತ್ಯವನ್ನು ನಿರಾಕರಿಸುತ್ತಿಲ್ಲ. ಹೆಣ್ಣಿನ ಆಯ್ಕೆಯಲ್ಲದ, ಸರಿಪಾಲಿಲ್ಲದ ವ್ಯವಸ್ಥೆಯನ್ನು ಮಾತ್ರ ನಿರಾಕರಿಸುತ್ತಿದ್ದಾರೆ. ಹೆಣ್ಣಿನ ದೇಹ, ಬುದ್ಧಿ, ಭಾವ , ಆತ್ಮ ಎಲ್ಲವನ್ನೂ ಒಪ್ಪಿ ಪರಿಗಣಿಸುವ ಹೊಸ ಮೌಲ್ಯ ವ್ಯವಸ್ಥೆಗಾಗಿ ಈ ಮಹಿಳೆಯರು ತುಡಿಯುತ್ತಿದ್ದಾರೆ. ದೇಹವನ್ನು ‘ಕಾಣುವ’, ’ಉಪಭೋಗಿಸುವ’ ಇವರ ಹಂಬಲವನ್ನು ಆವಾಹನೆ ಮತ್ತು ವಿಸರ್ಜನೆಗೆ ಹೋಲಿಸಬಹುದು. ಯಾವ ಹೆಣ್ಣಿನ ದೇಹವು ಕೊಡುವ ಅಂಗಳ ಮಾತ್ರವಾಗಿತ್ತೋ ಅದನ್ನು ಪಡೆಯುವ ಕ್ಷೇತ್ರವಾಗಿಯೂ ಒಪ್ಪಬೇಕಾದ್ದನ್ನು ಹಕ್ಕೊತ್ತಾಯವಾಗಿ ಈ ಮಹಿಳೆಯರು ಪ್ರತಿಪಾದಿಸುತ್ತಾರೆ. ಆದ್ದರಿಂದಲೇ ಇವರಿಗೆ ದೇಹವನ್ನು ಕುರಿತು ಇಂಥ ಅಸಾಧ್ಯ ಸಂಭ್ರಮ.

ಇವರನ್ನು ಅನುಭಾವಿಗಳು ಎಂದು ಕರೆಯುವ ಮೊದಲು, ಅಪ್ಪಟ ಹೋರಾಟಗಾರರೆಂದೇ, ಬಂಡಾಯಗಾರರೆಂದೇ ಗುರುತಿಸಬೇಕು. ಅನುಭವವನ್ನು ಮಿಕ್ಕು ಮೀರಿ ಹೋಗುವ ಅನುಭಾವದಷ್ಟೇ ಅನುಭವದ ತೆಕ್ಕೆಯೊಳಗೆ ಬರುವ ದೇಹಮೀಮಾಂಸೆಯನ್ನು ಬದುಕಿನ ಅಪೂರ್ವ, ಅದಮ್ಯ ಆಯಾಮವೆಂದು ಪರಿಭಾವಿಸಿದ ಈ ಮಹಿಳೆಯರು ಮಹಿಳಾ ಸಂಕಥನದ ನಿರೂಪಕರೆಂದೇ ಇವರು ಈ ನಮ್ಮ ಕಾಲದ ಮಹಿಳೆಯರೂ ಆಗುತ್ತಾರೆ. ಆಂಡಾಳ್ ಭಕ್ತಿಯ ಮಾರ್ಗದಲ್ಲೇ ಮಾಡಿದ ಬಂಡಾಯವನ್ನು ‘ಶುದ್ಧ ಭಕ್ತಿ ಮಾರ್ಗ’ವೆಂದು ಕರೆಯುವುದು ಅವಳ ಮತ್ತು ಹೆಣ್ಣಿನ ಹೋರಾಟದ ಧ್ವನಿಯನ್ನು ಅಡಗಿಸುವ ಪ್ರಯತ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.