ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
–ಬೇಂದ್ರೆ

ಕನ್ನಡದ ಕೆಲವು ಸ್ತ್ರೀಮಾದರಿಗಳ ಜೊತೆಗೆ ಕೆಲವು ಭಾರತೀಯ ಮಾದರಿಗಳನ್ನೂ ಕೆಲವು ಯುರೋಪಿಯನ್ ಮಾದರಿಗಳನ್ನೂ ಚರ್ಚಿಸುವ ನನ್ನ ಇರಾದೆಗೆ ಒಂದು ಸ್ಪಷ್ಟ ಉದ್ದೇಶವಿದೆ. ಹೆಣ್ಣಿನ ಜಾಗತಿಕವೆನ್ನಬಹುದಾದ ಚಹರೆಯನ್ನು ಗುರುತಿಸಬಹುದು ಎನ್ನುವುದು. ಏಳು ಸಮುದ್ರಗಳಾಚೆ, ಏಳು ಬೆಟ್ಟಗಳಾಚೆ ಈಚೆ ಇರುವ ಹೆಣ್ಣು ಒಂದೇ ಅಲ್ಲವೆ ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ಕಂಡುಕೊಳ್ಳುವ ಪ್ರಯತ್ನ ಇದು. ಬಿ.ಎಂ.ಶ್ರೀ ತಮ್ಮ ಇಂಗ್ಲಿಷ್ ಗೀತೆಗಳ ಪ್ರಯೋಗವನ್ನು ಸಮರ್ಥಿಸಿಕೊಳ್ಳುವ ಕವನ ‘ಕಾಣಿಕೆ’ಯಲ್ಲಿ–

ಇವಳ ಸೊಬಗನವಳು ತೊಟ್ಟು,
ನೋಡ ಬಯಸಿದೆ
ಅವಳ ತೊಡಿಗೆ ಇವಳಿಗಿಟ್ಟು
ಹಾಡ ಬಯಸಿದೆ

ಎನ್ನುತ್ತಾರೆ. ಆದರೆ ನಿಜದಲ್ಲಿ ಉಡುಗೆ ತೊಡುಗೆಗಳ ವ್ಯತ್ಯಾಸದ ಆಚೆಗೆ ಹೆಣ್ಣಿಗೆ ಇವುಗಳನ್ನು ಮೀರಿದ, ಈ ಎಲ್ಲರಲ್ಲೂ ಗುರುತಿಸಬಹುದಾದ ಕೆಲವು ಸಾಮಾನ್ಯ ಅಂಶಗಳಿವೆ. ಈ ಉಡುಗೆ ತೊಡುಗೆಗಳ ವ್ಯತ್ಯಾಸವನ್ನು ಗುರುತಿಸುವ ಅಗತ್ಯವೇ ಇಲ್ಲದ ಸಮಾನ ಮತ್ತು ಸಾಮಾನ್ಯ ಎನ್ನಬಹುದಾದ ಸ್ಥಿತಿಗತಿಗಳು ದೇಶಾತೀತವಾಗಿ ಹೆಣ್ಣಿನಲ್ಲಿವೆ. ಈ ಅಂಶವನ್ನು ಗ್ರಹಿಸುವುದು ಹೆಣ್ಣಿನ ಹೋರಾಟದ ಜಾಗತಿಕ ಭಿತ್ತಿಯನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದಲೂ ಅನಿವಾರ್ಯ ಮತ್ತು ಮುಖ್ಯ ಎನ್ನುವ ನಂಬಿಕೆಯಿಂದ ನಾನು ಕೆಲವು ಮಹತ್ವದ ಭಾರತೀಯ ಸ್ತ್ರೀರೂಪಕಗಳ ಕಡೆ ಕಣ್ಣು ಹೊರಳಿಸುವಂತೆ ಮಾಡಿತು. ಕೆಲವರು, ಕನ್ನಡದಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಪಾತ್ರಗಳಿವೆ ಎನ್ನುವ ಉದ್ಗಾರ ಎಳೆದರು. ಕೆಲವೇಕೆ, ಅನೇಕವಿವೆ. ಆ ಅನೇಕಗಳಲ್ಲಿ ಒಂದನ್ನು ಈ ಬಾರಿ ಚರ್ಚೆಗೆ ಎತ್ತಿಕೊಂಡಿದ್ದೇನೆ. ಕನ್ನಡದ ಇನ್ನೆಷ್ಟೋ ಗಮನಿಸಲೇಬೇಕಾದ ಪಠ್ಯಗಳಿವೆ ಎನ್ನುವುದಕ್ಕೆ ಉದಾಹರಣೆಯಾಗಿ ಇದನ್ನು ನೋಡಬಹುದು.

ಕನ್ನಡದ ಜನಮಾನಸದ ಕವಿ ಬೇಂದ್ರೆ– ‘ನಿನ್ನಾಂಗ ಆಡಾಕ ನಿನ್ನಾಂಗ ಹಾಡಾಕ / ಪಡೆದು ಬಂದವ ಬೇಕೋ ಗುರುದೇವ’ ಎಂದು ತನ್ನ ಪ್ರಿಯಕವಿ ಟ್ಯಾಗೋರರನ್ನು ಆರಾಧಿಸುತ್ತಾರೆ. ಅದು ಸ್ವತಃ ಬೇಂದ್ರೆಯವರ ಮಟ್ಟಿಗೂ ಅಷ್ಟೇ ನಿಜ. ಕನ್ನಡ ಎನ್ನುವುದು ಶಕ್ತಿ ಕಣಾ ಮಂತ್ರ ಕಣಾ ಎನ್ನುವ ಕುವೆಂಪು ಅವರ ನಂಬಿಕೆ ಬೇಂದ್ರೆಯವರಲ್ಲಿ ಸಾಕ್ಷಾತ್ಕಾರವೇ ಆಗಿಬಿಟ್ಟಿತು. ಸಾವಿರ ವರ್ಷದ ಕನ್ನಡ ಭಾಷೆಯನ್ನು ಅದರೆಲ್ಲ ಬಾಗು ಬಳುಕುಗಳಲ್ಲಿ, ಎತ್ತರ ಬಿತ್ತರಗಳಲ್ಲಿ ಲೀಲೆಯೋ ಎಂಬಂತೆ ಮುರಿದು ಕಟ್ಟಿದವರು ಬೇಂದ್ರೆ. ಭೃಂಗದ ಬೆನ್ನೇರಿ ಬರುವ ಕಲ್ಪನಾವಿಲಾಸವನ್ನು ಭೃಂಗದ ಚೆಲುವಿನಲ್ಲೂ, ಅದರ ಸ್ವಚ್ಛಂದ ಭ್ರಮರತೆಯಲ್ಲೂ, ಮುಕ್ತತೆಯಲ್ಲೂ ಹಿಡಿದು ಗೆದ್ದ ಕವಿ ಬೇಂದ್ರೆ. ಬೇಂದ್ರೆಯವರ ಕಾವ್ಯ ವಿಲಾಸಕ್ಕೆ ಸಿಕ್ಕ ಮನ್ನಣೆ ಅವರ ವಿಮರ್ಶೆಗೆ ಇನ್ನೂ ಸಿಕ್ಕಿಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರು ಬೇಂದ್ರೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಅದರ ಅನನ್ಯತೆಯಲ್ಲಿ ಪ್ರಸ್ತುತ ಪಡಿಸಲು ಬೇಂದ್ರೆ ನಡೆಸಿದ ಪ್ರಯತ್ನಗಳನ್ನು ನಾವಿನ್ನೂ ಗಂಭೀರವಾದ ಅಧ್ಯಯನಕ್ಕೆ ಒಳಗು ಮಾಡಬೇಕಾಗಿದೆ.

ಸ್ತ್ರೀವಾದವನ್ನು ತೆರೆದ ಬಾಗಿಲು ಎಂದು ಹೇಳಲು ಹಲವು ಕಾರಣಗಳಿವೆ. ಅದು, ಯಾರನ್ನೂ ಪ್ರತಿಸ್ಪರ್ಧಿ ಎಂದು ನೋಡುವುದಿಲ್ಲ. ವ್ಯಕ್ತಿಗಳ ವಿರುದ್ಧ ನಡೆಸುವ, ಅದರಲ್ಲೂ ಗಂಡಸರ ವಿರುದ್ಧವಂತೂ ಅಲ್ಲವೇ ಅಲ್ಲ. ಅದು, ಅಧಿಕಾರ ಮೂಲವಾದ, ಶ್ರೇಣೀಕರಣ ಮೂಲವಾದ, ಆಳುವ-ಆಳಿಸಿಕೊಳ್ಳುವ ಎನ್ನುವ ಅಮಾನವೀಯ ನಂಬಿಕೆಗಳ ವಿರುದ್ಧ ನಡೆಸುತ್ತಿರುವ ಒಂದು ಮಾನವೀಯ ಹೋರಾಟ. ನಾನು, ನೀನು, ಅವರು, ಇವರು ಎಲ್ಲರೂ ಸೇರಿ ಕಟ್ಟಬಹುದಾದ ಒಂದು ಸ್ವಸ್ಥ ಸಮಾಜದ ಕಡೆಗಿನ ಚಲನೆ. (ಸ್ವಲ್ಪ ರಮ್ಯವಾಗಿ ಇದನ್ನು ಹೇಳಬಹುದಾದರೆ, ಯಯಾತಿ ಕಾದಂಬರಿಯ ಕಚ ಕೇಳುವ ‘ಈಶ್ವರ ಸೃಷ್ಟಿಸಿದ ಈ ಚೆಲುವಾದ ಜಗತ್ತಿನಲ್ಲಿ ಎಲ್ಲರೂ ಯಾಕೆ ಸುಖವಾಗಿ ಇರಲಾಗುವುದಿಲ್ಲ?’ ಎನ್ನುವ ಪ್ರಶ್ನೆಯನ್ನು ತುಸು ಬದಲಿಸಿ, ಎಲ್ಲರೂ ಯಾಕೆ ಸಮಾನರಲ್ಲ ಎನ್ನುವ ಪ್ರಶ್ನೆಯನ್ನು ಬೆನ್ನು ಹತ್ತಿರುವುದೇ ಸ್ತ್ರೀವಾದ).

ಎಲ್ಲ ಮಹಾಪುರುಷರಲ್ಲೂ (ಮಹಾ ಸ್ತ್ರೀಯರು ಎನ್ನುವ ಪದ-ಕಲ್ಪನೆಯೇ ವಿಚಿತ್ರವಾಗಿ ಕೇಳಿಸುತ್ತದೆಯಲ್ಲವೆ? ಮಹಾ ಸತಿಯರನ್ನು ಕಟ್ಟಿ ಬೆಳೆಸುವುದರಲ್ಲಿ ಮಾತ್ರ ಆಸಕ್ತವಾದ ಸಮುದಾಯದಲ್ಲಿ ಇದು ಯಾಕೆ ಹೀಗೆ ಎಂದು ಪ್ರಶ್ನೆ ಮಾಡುವುದೇ ಮಹಾಪರಾಧವಾಗಿ ಕಾಣಿಸುವುದರಿಂದಲೇ ಸ್ತ್ರೀವಾದ ಕೊನೆಯೇ ಇಲ್ಲದ ವಿರೋಧವನ್ನು ಎದುರಿಸಬೇಕಾಗುತ್ತದೆ) ಹೆಣ್ಣಿನ ಗುಣಧಾತುಗಳಿರುತ್ತವೆ ಎನ್ನುವ ಅಧ್ಯಯನಗಳು ಕುತೂಹಲಕಾರಿಯಾಗಿವೆ. ಇದರ ಸಾಮಾಜಿಕ ಅನಿವಾರ್ಯತೆಯನ್ನೇ ಸ್ತ್ರೀವಾದವೂ ಎತ್ತಿ ಹಿಡಿಯುತ್ತಿರುವುದು. ಗಂಡು-ಹೆಣ್ಣು ಪರಸ್ಪರರನ್ನು ಒಳಗು ಮಾಡಿಕೊಳ್ಳುವ ಸಹಜ ಪ್ರಕ್ರಿಯೆಯ ಆವರಣವೊಂದು ರೂಪುಗೊಳ್ಳಬೇಕು.

ಅಪ್ಪಟ ಸಖ್ಯದಲ್ಲಿ ಇದು ಹೇಗೆ ಸಾಧ್ಯವಾಗುತ್ತದೆ, ಅದರ ನೋವು ನಲಿವುಗಳೇನು, ಏರಿಳಿತಗಳೇನು ಎನ್ನುವುದರ ಸಾಕಾರ ಪ್ರಸ್ತುತಿ ಬೇಂದ್ರೆಯವರ ‘ಸಖೀಗೀತ’. ಸಖ್ಯದ ಅಂಕು-ಡೊಂಕಿನ ದಾರಿಯೇ ಸಾಗುತ್ತ ಸಾಗುತ್ತ ಸಖ್ಯದ ‘ಸಸಿನ’ದ ದಾರಿಯಾಗುವುದನ್ನು, ಬೆಳೆದಂತೆ ಬಿಚ್ಚುತ್ತಾ ಹೋಗುವ ಕೊನೆಯಿಲ್ಲದ ದಾರಿಯಾಗುವುದನ್ನು ಈ ನೀಳ್ಗವಿತೆ ಚಿತ್ರಿಸುತ್ತದೆ. ಗಂಡು-ಹೆಣ್ಣು ದಾಂಪತ್ಯವೆನ್ನುವ ಸಂಸ್ಥೆಯ ಸದಸ್ಯರಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದವರು, ಮುಗಿಯುವ ಹೊತ್ತಿಗೆ ಆ ಸಂಸ್ಥೆಯ ಹಂಗನ್ನೇ ಕಳೆದುಕೊಂಡು ಸಖ ಸಖಿಯರಾಗುತ್ತಾರೆ. ಸಂಬಂಧವೊಂದು ಏರಬಹುದಾದ ಎತ್ತರವನ್ನು, ಪಡೆಯಬಹುದಾದ ದಿವ್ಯತೆಯನ್ನು ಪ್ರತಿನಿಧಿಸುತ್ತದೆ. ಸಖ್ಯದ ಅಂಟಿನ ನಂಟಿನ ಕೊನೆ ಬಲ್ಲವರಾರು ಎಂದು ಉದ್ಗರಿಸುತ್ತಲೇ ನಿಜ ಸಖ್ಯವೊಂದು ಆತ್ಮ ಸಖ್ಯವಾಗಿ ಕಾಲಾತೀತವಾಗುವ ಸತ್ಯದ ವಾಣಿಯಾಗಿಯೂ ಈ ಮಾತು ಕವಿತೆಯುದ್ದಕ್ಕೂ ತನ್ನ ಪುನರುಕ್ತಿಯಲ್ಲಿ ಅನುರಣನಗೊಳ್ಳುತ್ತಾ ಹೋಗುತ್ತದೆ.

ಸರಳವಾಗಿ ಹೇಳುವುದಾದರೆ, ‘ಸಖೀಗೀತ’ ಗಂಡು ತನ್ನ ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವುದನ್ನೂ ಹೆಣ್ಣು ತನ್ನ ಕೀಳರಿಮೆಯನ್ನು ಕಳೆದುಕೊಳ್ಳುತ್ತಾ ಹೋಗುವುದನ್ನೂ ಹೇಳುವ ಕವಿತೆ. ಇದರ ಮೂಲಕವೇ ಇವರಿಬ್ಬರೂ ಇನ್ನೇನಲ್ಲದಿದ್ದರೂ ಅಪ್ಪಟ ಮನುಷ್ಯರಾಗುವ, ಹಕ್ಕಿಯಂತೆ ಹಗುರಾಗುವ ಬಗೆಯನ್ನು ಧ್ವನಿಸುತ್ತದೆ.

ಈ ಕವಿತೆ ನಮಗೆ ಮುಖ್ಯವಾಗುವುದು ಇನ್ನೂ ಒಂದು ಕಾರಣಕ್ಕಾಗಿ. ಅಕಾರಣವಾದ ಅಹಂಕಾರ ಮತ್ತು ಅಧಿಕಾರ ಎರಡನ್ನೂ ಪಡೆದ ಗಂಡು ಇದು ಅಕಾರಣ ಮತ್ತು ಅನಗತ್ಯ ಎನ್ನುವ ಸತ್ಯವನ್ನು ಎದುರಾಗುವ ಭೂಮಿಕೆಯೂ ಈ ಕವಿತೆಯಲ್ಲಿ ಸ್ಪಷ್ಟವಾಗಿದೆ. ಯಾವ ಮನಸ್ಥಿತಿ ಗಂಡಸರಿಗೆ ಅಗತ್ಯವಾಗಿ ಬೇಕು, ಅಂಥ ಮನಸ್ಥಿತಿಯಿಂದ ಮಾತ್ರ ಗಂಡು ಹೆಣ್ಣಿನ ಸಂಬಂಧದ ಸ್ವರೂಪ, ಅದರ ನಡೆಗಳನ್ನು ಬದಲಿಸಲು ಸಾಧ್ಯ ಎಂದು ನಾವು ಒತ್ತಾಯಿಸುತ್ತಿದ್ದೇವೋ ಅಂಥ ಮನಸ್ಥಿತಿಯನ್ನು ‘ಸಖೀಗೀತ’ ಕವಿತೆಯ ನಾಯಕನಲ್ಲಿ ಗುರುತಿಸಬಹುದು.

ಈ ಮನಸ್ಥಿತಿ ರಾತ್ರೋರಾತ್ರಿ ಸಿದ್ಧವಾಗುವುದಿಲ್ಲ. ಇದೊಂದು ಕತ್ತಿಯಂಚಿನ ದಾರಿ. ಏರಿಗೆಳೆಯುವ ಮತ್ತು ನೀರಿಗೆಳೆಯುವ ವಿರುದ್ಧ ಧ್ರುವಗಳ ಸಂಘರ್ಷದಲ್ಲಿ ನಿಧಾನವಾಗಿ ಇದು ರೂಪುಗೊಳ್ಳುತ್ತಾ ಹೋಗುವಂಥದ್ದು. ಬೇಂದ್ರೆಯವರ ‘ಮನದನ್ನೆ’ ಕವಿತೆಯನ್ನೂ ‘ಸಖೀಗೀತ’ವನ್ನೂ ಒಟ್ಟಿಗೆ ಇಟ್ಟು ನೋಡಿದರೆ ಇದರ ಕಷ್ಟ ಏನು ಎನ್ನುವುದು ತಿಳಿಯುತ್ತದೆ. ‘ಮನದನ್ನೆ’ಯಲ್ಲಿ: ‘ಆಡದಿರು ಎನಗೆ ಇದಿರಾಡದಿರು’ ಎನ್ನುವುದನ್ನು ದತ್ತ ಅಧಿಕಾರ ಕೇಂದ್ರದ ಪ್ರತಿನಿಧಿಯಾಗಿ ಎಗ್ಗಿಲ್ಲದೆ ನಾಯಕ ಬಳಸಿ, ಹುಕುಂ ಹೊರಡಿಸುತ್ತಾನೆ. ದಾಂಪತ್ಯವನ್ನು ಉಳಿಸಿಕೊಳ್ಳಬೇಕಾದರೆ ಹೆಣ್ಣು ಬಾಯಿ ಮುಚ್ಚಿಕೊಂಡು ಇರಬೇಕಾದ್ದು ಅನಿವಾರ್ಯ ಎನ್ನುವುದಕ್ಕೆ ಕಾರಣಗಳನ್ನು ಈ ಕವಿತೆ ಉದ್ದಕ್ಕೂ ಕೊಡುತ್ತಾ ಹೋಗುತ್ತದೆ. ‘ಜೀವ ಸಂವಾದಕ್ಕೆ ಹಸಿದು ಬಂದ’ ನಾಯಕನನ್ನು, ಅವನ ತಪ್ಪುಗಳನ್ನು ಎಣಿಸದೆ, ಎತ್ತಿ ಆಡದೆ ಒಪ್ಪಿಕೊಂಡರೆ ಮಾತ್ರ ದಾಂಪತ್ಯ ಉಳಿಯುತ್ತದೆ.

ಮಲಗಿರುವ ಹಾವನ್ನು ಕೆಣಕಬೇಡ
ಕಚ್ಚಿ ವಿಷ ಕಾರಿದರೆ ತಿಣುಕಬೇಡ
ಎನ್ನುವ ಮಾತುಗಳಾಗಲೀ
ಮಾಡದಿರು ಬಾಳನ್ನು ಬೇಳೆಯಂತ
ಕೂಡಿರಲಿ ಬಾಳು ಇಡಿಗಾಳಿನಂತೆ

ಎನ್ನುವ ಮಾತುಗಳಾಗಲೀ ದಾಂಪತ್ಯವನ್ನು ಉಳಿಸಿಕೊಳ್ಳಲು ಹೆಣ್ಣು ಪಡಬೇಕಾದ ಪಾಡನ್ನು ನಿರ್ಲಜ್ಜೆಯಲ್ಲಿ ಒತ್ತಾಯಪೂರ್ವಕವಾಗಿ ಅವಳ ಮೇಲೆ ಹೇರುತ್ತವೆ. ಶರಣಾಗತಿಯಲ್ಲಿ, ಅಸಹಾಯಕತೆಯಲ್ಲಿ ನೋವು ನುಂಗುತ್ತಾ ಅವಳು: ‘ವಿಷಕಂಠೆ’ಯಾಗಬೇಕಾದ್ದರ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತದೆ. ಹೆಣ್ಣನ್ನು ‘ಜೀವಿ’ಯಂತೆ ನೋಡಲು ಸಾಧ್ಯವೇ ಆಗದ ನಾಯಕ: ‘ಜೀವ ಸಂವಾದ’ಕ್ಕೆ ಹಸಿದು ಬಂದೆ ಎಂದು ಹೇಳುವುದಂತೂ ವಿಕಟ ವಿನೋದದ ಹಾಗೆ ಕಾಣಿಸುತ್ತದೆ. ‘ಮನದನ್ನೆ’ ಎನ್ನುವ ಶೀರ್ಷಿಕೆಯಂತೂ ‘ತೊತ್ತಿರ ಕೆಲಸದಾಕೆ’ಗೆ ಸಮಾನಾರ್ಥಕ ಪದವಾಗಿ ಹೀನಾರ್ಥ ಪಡೆದಂತೆ ಭಾಸವಾಗುತ್ತದೆ.

ಇದೇ ನಾಯಕ ‘ಸಖೀಗೀತ’ಕ್ಕೆ ಬರುವ ಹೊತ್ತಿಗೆ ಏನಾಗಿ ಬಿಡುತ್ತದೆ? ‘ಕಲ್ಪದಾಚೆಯಲ್ಲೆ ನನ್ನ ನಿನ್ನ ಮಿಲನವಾಗಿ’ ಎನ್ನುವ ಲೋಕೋತ್ತರ ಸಖ್ಯದ ವ್ಯಾಖ್ಯಾನಕಾರನಾಗಿ ಬಿಡುತ್ತಾನೆ. ಕಟುವೂ ಆದ ಮಧುರವೂ ಆದ ‘ಸಖೀಗೀತ’ವನ್ನು ಹಾಡಲು ಸಿದ್ಧನಾಗುವ ಈ ನಾಯಕ ಈಗ ಅಧಿಕಾರ ದಂಡ ಹಿಡಿದ ಗಂಡನಲ್ಲ, ಅವನು ಹೆಣ್ಣು ಬಯಸುವ ‘ಸಖ’. ಅವಳನ್ನು ಆಳುವುದರಲ್ಲಿ ಈಗ ಈತನಿಗೆ ಯಾವ ನಂಬಿಕೆಯೂ ಇಲ್ಲ. ಈಗ ಅವನ ಗಮನ ನಡೆದು ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸುವುದರ ಕಡೆಗೆ, ಕರುಳಿನ ತೊಡಕನ್ನು ಕುಸುರಾಗಿ ಬಿಡಿಸಿಡುವುದರ ಕಡೆಗೆ. ಸುದೀರ್ಘವಾದ ಬದುಕನ್ನು ಹಿಂತಿರುಗಿ ನೋಡುವುದು, ತನ್ನ ತಪ್ಪು ಒಪ್ಪುಗಳನ್ನು ಸಖಿಯ ಜೊತೆ ನಿರ್ವಂಚನೆಯಿಂದ ಹಂಚಿಕೊಂಡು ಬಿಡುವ ಇರಾದೆಯಲ್ಲಿ ಈತನಿದ್ದಾನೆ. ‘ಒಂದಲ್ಲ ಎರಡಲ್ಲ ನಮ್ಮ ಪಾಲಿನ ಪುಣ್ಯ, ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು’ ಎನ್ನುವ ದೃಷ್ಟಿಕೋನದವನಲ್ಲ ಈತ, ‘ಸಪ್ಪೆ ಬಾಳುವೆಗಿಂತ ಉಪ್ಪು ನೀರೂ ಲೇಸು’ ಎನ್ನುವ ಜೀವವಾದಿ ಇವನು. ಮಾತ್ರವಲ್ಲ ಇವನು ಹುಟ್ಟು ಆಶಾವಾದಿಯೂ ಹೌದು. ಪಟ್ಟ ಪಾಡುಗಳೆಲ್ಲ ಹುಟ್ಟು ಹಾಡಾಗಬೇಕೆಂದರೆ ಅದಕ್ಕೆ ಬೇಕಾಗಿರುವುದು ಅನಂತ ಜೀವನ ಪ್ರೀತಿ ಎನ್ನುವುದರಲ್ಲಿ ಇವನಿಗೆ ಗಾಢವಾದ ನಂಬಿಕೆ. ನೆನಪುಗಳನ್ನೇ ಹಾಯಿಯಾಗಿ ಬೀಸುತ್ತಾ ತೆಪ್ಪವೋ ಹರಿಗೋಲೋ ತಾರಿಯೋ ಹಡಗೋ.... ಯಾವುದೋ ಒಂದರಲ್ಲಿ ಪ್ರಯಾಣ ಮುಂದುವರಿಸುವ ಹಂಬಲ ಈತನದು.

ಕವಿತೆಯ ಆರಂಭದಲ್ಲೇ ‘ಅಂತಃಪಟದಾಚೆ ವಿಧಿ ತಂದ ವಧು ನೀನು’ ಎನ್ನುವ ಮಾತು ಬರುತ್ತದೆ. ಆಯ್ಕೆಯ ಅವಕಾಶವಿಲ್ಲದ ಸಾಂಪ್ರದಾಯಿಕ ಮದುವೆಗಳಲ್ಲಿ ಅವರು ಗಂಡ ಹೆಂಡಿರಾಗುವುದು ಸುಲಭ. ಅವರು ಸಖ ಸಖಿಯರಾಗಿ ರೂಪಾಂತರ ಪಡೆಯುವುದು ಸುಲಭದ್ದಲ್ಲ. ಅದು ಎಷ್ಟು ಕಷ್ಟದ್ದು ಎನ್ನುವುದನ್ನು ಈ ಕವಿತೆ ಅಪೂರ್ವವಾಗಿ ಚಿತ್ರಿಸುತ್ತದೆ. ಆರಂಭದ ದೇಹ ಸಂಭ್ರಮದ ‘ನಿಂತ ನಿಲುವೆಲ್ಲವೂ ತ್ರಿಭಂಗಿ’ಯಾಗುವುದರ ಜೊತೆಜೊತೆಗೇ ಬದುಕಿನ ಒಲೆಯೊಳಗೆ ಸುಡುತ್ತಾ ಹೋಗುವ ಜೀವನ ಗತಿಯೂ ಶುರು. ಮೊದಲ ಮಗು ತೀರಿಕೊಂಡ ಗಳಿಗೆಯನ್ನು ಅದೆಷ್ಟು ಆರ್ದ್ರತೆಯಲ್ಲಿ ಹೇಳುವುದು ಬೇಂದ್ರೆಯವರಿಗೆ ಸಾಧ್ಯವಾಗುತ್ತದೆ!

ಮೊದಲಿನ ಫಲವೊಂದು ಮೀಸಲು ಮಣ್ಣಿಗೆ
ಎಂಜಲುಗೊಳುತಿತ್ತೊ ಮುದ್ದಿಸಿರೆ

ಅಸ್ಥಿರವಾದ ಬದುಕಿನಲ್ಲಿ ಸ್ಥಿರವಾದುದು ಯಾವುದು? ನೆಲೆಯೇ ಸಿಕ್ಕದಂತಾದ ಬದುಕಿನಲ್ಲಿ–
ಇದ್ದಷ್ಟು ದಿನವಾರೆ ಇರುವಷ್ಟು ಪ್ರೀತಿಯ
ಇನ್ನಷ್ಟು ರುಚಿ ನೋಡಿ ಹೋಗುವುದೇ

ಎನ್ನುವ ತೀರ್ಮಾನಕ್ಕೆ ಬರುವುದು ಸುಲಭವಲ್ಲ. ಸಿನಿಕರಾಗದೆ, ನಿರಾಶಾವಾದಿಗಳಾಗದೇ ಬದುಕಿನ ಬಗ್ಗೆ ಅನುರಕ್ತಿ ಮತ್ತು ಗೌರವವನ್ನು ಉಳಿಸಿಕೊಂಡು, ಕಡು ಕಷ್ಟದ ಹಾದಿಯಲ್ಲಿ ಗಂಡು ಹೆಣ್ಣು ಒಬ್ಬರಿಗೊಬ್ಬರು ಕೊಡುತ್ತಾ ಪಡೆಯುತ್ತಾ ಹೋಗುವ ದಾರಿಯನ್ನ ಹಿಂತಿರುಗಿ ನೋಡಿದಾಗಲೇ ಈ ಕವಿತೆಯ ನಾಯಕನಿಗೆ, ತಾವಿಬ್ಬರೂ ಪರಸ್ಪರರಿಗೆ ಎಷ್ಟು ಋಣಿಗಳು ಎನ್ನುವ ಸತ್ಯದ ನವದರ್ಶನವಾಗುತ್ತದೆ.

ನಾಯಕನ ಅಪಾರವಾದ ಹೊರಲೋಕ ನಾಯಕಿಯ ಒಳಲೋಕದ ನಡುವೆ ಸಂಘರ್ಷ ಬಂದುದು ಅದೆಷ್ಟು ಬಾರಿ? ಜೋಡಿಯಿಲ್ಲದ ಎತ್ತು ಎಳೆದಾಡುವ ಗಾಡಿಯಂತಾದುದು ಅದೆಷ್ಟು ಸಲ? ಆದರೂ ಒಗೆತನ ಹಗೆಯಾಗದಂತೆ ಇಬ್ಬರೂ ಒಬ್ಬರನೊಬ್ಬರು ತೂಗಿದ್ದುದನ್ನು ನೆನೆಯುತ್ತಾನೆ. ‘ಮನದನ್ನೆ’ಯ ನಾಯಕ ತನ್ನ ಮನೋವಿನ್ಯಾಸದಲ್ಲಿ ಪಡೆದಿರುವ ವಿಕಾಸ ಇಲ್ಲಿ ನಮ್ಮ ಅನುಭವಕ್ಕೆ ಬರುತ್ತದೆ. ಕೋಪ, ತಾಪ, ಪಾಪಗಳಿಗೆ ಹೊರತಾದ ಬದುಕು ಇವರದಲ್ಲ, ಯಾರದೂ ಅಲ್ಲ. ಇದರ ಜೊತೆಗೆ ಬದುಕಿನ ನೂರೆಂಟು ತಾಪತ್ರಯಗಳು, ಅಜ್ಞಾತವಾಸಗಳು, ವನವಾಸಗಳು ಇವೆಲ್ಲ ಸೇರಿ, ತಾಳ್ಮೆ ಕಳೆದು ಹೋದ ಗಳಿಗೆಯಲ್ಲಿ,

ಜೀವದ ಪಣ ಸೋತು, ಅಗ್ನಿದಿವ್ಯದ ಮಾತು
ನಾ ನೀ ಆಡಿದ್ದು ನೆನಪಿದೆಯೆ?
ನನಗೂ ನಿನಗು ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೆ?

ಇಲ್ಲಿ ಕವಿತೆ, ಸಖಿಯ ಮಾತಿಗೆ ಅವಕಾಶ ಮಾಡಿಕೊಡುತ್ತದೆ. ಇಂಥ ದಾಂಪತ್ಯದ ಬಗ್ಗೆ ಅವಳಿಗೆ ಏನನ್ನಿಸಿರಬೇಕು? ತಮ್ಮಿಬ್ಬರ ದಾರಿಗಳು ಸಮಾನಾಂತರ ರೇಖೆಗಳಂತೆ ಎಂದೂ ಕೂಡುವುದೇ ಇಲ್ಲವೇನೋ. ಅವನ ಗುರಿಯೋ ಗೌರಿಶಿಖರದಂತೆ ಮುಗಿಲಿನ ಕಡೆ ಮುಖ ಮಾಡಿದೆ. ನಾನೋ ಗಂಗೆಯಂತೆ, ನೆಲದ ಕಡೆ ಮುಖ ಮಾಡಿರುವವಳು. ಈ ರೂಪಕಗಳೇ ನಮ್ಮ ಮೌಲ್ಯವ್ಯವಸ್ಥೆ ರೂಪಿಸುವ ಮನೋವಿನ್ಯಾಸಗಳನ್ನು ಸೂಚಿಸುತ್ತವೆ. ಶಿಖರ ಮತ್ತು ಗಂಗೆಯಲ್ಲಿ, ರೂಪ-ಗುಣಗಳು ಬದಲಾದರೂ ತಮ್ಮಷ್ಟಕ್ಕೆ ಅವುಗಳಿಗೆ ತಮ್ಮದೇ ವ್ಯಕ್ತಿತ್ವ-ಅಸ್ತಿತ್ವ-ಅಸ್ಮಿತೆ ಎಲ್ಲವೂ ಇದೆ. ಈ ಎರಡರಲ್ಲಿ ಯಾವುದೂ ಹೆಚ್ಚಾಗಬೇಕಿಲ್ಲ, ಮತ್ತೊಂದು ಕಡಿಮೆಯಾಗಬೇಕಿಲ್ಲ. ಆದರೆ, ಅದು ಗಂಡಿನ ಆಯ್ಕೆಯಾದ ಕೂಡಲೇ ಅದಕ್ಕೆ ಇನ್ನಿಲ್ಲದ ಕಿಮ್ಮತ್ತು ಬಂದು ಬಿಡುತ್ತದೆ. ‘ಸಖೀಗೀತ’ದಲ್ಲಿ ಬೇಂದ್ರೆ ಈ ಕಂದರ ಮತ್ತು ತರತಮಗಳನ್ನು ಇಲ್ಲವಾಗಿಸಿ ಸಮಪಾತಳಿಗೆ ತರುತ್ತಾರೆ. ಅವಳಲ್ಲಿನ ಕೀಳರಿಮೆಯನ್ನು, ತಾನೊಂದು ಕೂಪ ಮಂಡೂಕವೋ ಎನ್ನುವ ಭಾವವನ್ನು ಅಳಿಸುತ್ತಾರೆ. ನಿನಗೆ ನಿನ್ನ ಗೆಳೆಯರು, ಹೊರಲೋಕವೇ ಮುಖ್ಯ ಎಂದಾಗ, ಆ ಲೋಕದೊಂದಿಗೆ ಇದ್ದಾಗ ನಿನ್ನ ಉಕ್ಕುವ ಗೆಲುವೇ ಬೇರೆ ಎಂದಾಗ, ಇದು ತನ್ನ ಆತ್ಮವಿಮರ್ಶೆಗೆ ಎದುರಾದ ಗಳಿಗೆ ಎಂದೇ ನಾಯಕ ಅದನ್ನು ಎದುರಿಸುತ್ತಾನೆ.

‘ಹೆಂಗಸಿನ ಕಷ್ಟವು ಗಂಡಸಿಗೆ ಎಂದೂ ತಿಳಿಯದು! ಏತಕೆ ತಿಳಿಯೋದು? ದುಃಖವು ನಮ್ಮದು ನಮಗೆ ಇದೆ’.

ಎನ್ನುವ ಮಾತನ್ನು ಸಖಿ ಆಡುತ್ತಾಳೆ. ಇದೊಂದು ನಿರ್ಣಾಯಕವಾದ ಗಳಿಗೆ ಸಖನ ಮಟ್ಟಿಗೆ. ಸಖಿ ಆರೋಪವನ್ನು ಹೊರಿಸುತ್ತಿದ್ದಾಳೆ ಎನ್ನುವುದು ನಿಜ. ಆದರೆ ಅದನ್ನೂ ಮೀರಿದ ಅಪೇಕ್ಷೆಯೂ ಅಲ್ಲಿದೆ. ಅದು, ಇಲ್ಲಿನ ಸಖನ ಅಪೇಕ್ಷೆಯೂ ಹೌದು. ಹೆಣ್ಣು, ಅವಳ ಬದುಕು, ಅವಳ ವ್ಯಕ್ತಿತ್ವ ಎಲ್ಲವನ್ನೂ taken for granted ಎನ್ನುವ ಹಾಗೆ ತನ್ನ ಪರಿಧಿಗೆ ತಂದುಕೊಂಡು ಬಿಟ್ಟಿರುವುದರ ಅಸಂಗತತೆ ಮತ್ತು ಕ್ರೌರ್ಯ ಸಖನಿಗೆ ಆಗುತ್ತಿದೆ. ಗಂಡ-ಹೆಂಡತಿ ಸಖ ಸಖಿಯರಾಗುವುದರಲ್ಲಿನ ತೊಡಕು ಇದೆನ್ನುವ ಅರಿವಿನಲ್ಲಿ ಅವನು ತಲ್ಲಣಿಸುತ್ತಾನೆ. ಆ ನಿಟ್ಟುಸಿರನಲ್ಲಿ ಸಿಡಿದ ಕಂಬನಿ ‘ಆ ಗಲ್ಲ ಸೋಕಲು ನಾ ನಡುಗಿದೆ’. ಈ ಅರಿವು ಗಂಡನಾದವನು ಸಖನಾಗಲು ಬೇಕಾದ ಜ್ಞಾನೋದಯ. ಅವಳನ್ನು ಅವಳಾಗಿ ನೋಡುವ, ಒಪ್ಪುವ, ಗೌರವಿಸುವ ಅಗತ್ಯದ ಅರಿವಾದದ್ದೇ ಆತ ಹೊಸ ಮನುಷ್ಯನಾಗುತ್ತಾನೆ.

ಅಲ್ಲಿಂದಾಚೆಗೆ ಅವರಿಬ್ಬರಲ್ಲಿ, ದಾಂಪತ್ಯದ ಆತ್ಯಂತಿಕ ಮಜಲು ಎನ್ನಬಹುದಾದ ಗೆಳೆತನ ಆರಂಭವಾಗುತ್ತದೆ. ಬೇಂದ್ರೆಯವರ ಬಲು ಪ್ರಸಿದ್ಧವಾದ ಸಾಲುಗಳು ಇರುವುದು ಈ ಭಾಗದಲ್ಲಿ.
ಅದು ಇದೆ ಎದೆಯಲ್ಲಿ, ಬೆಳಕಿನ ಬದಿಯಲ್ಲಿ
ರಸಗಂಗಾ ನದಿಯಲ್ಲಿ ಅದರುಗಮವು
ಹೆಸರದಕೆ ಪ್ರೀತಿಯು, ಹಿಗ್ಗಿನ ರೀತಿಯು
ಆತ್ಮದ ನೀತಿಯು ಮಧುಸಂಗಮ

ಇದನ್ನು ಬೇಂದ್ರೆ ಮುಂದೊಂದು ಪದ್ಯದಲ್ಲಿ ‘ಸಮತೆಯ ಗೆಳೆಸಂಚು’ ಎಂದು ಕರೆಯುತ್ತಾರೆ. ‘ಅಂಬಿಕಾತನಯದತ್ತನ ಜಂಭದ ಪಾಡಳಿದು’ ಹೋದ, ಅದಕ್ಕೆ ಕಾರಣೀಭೂತವಾದ ‘ಸಖೀಗೀತ’ದ ಬಗೆಗಿನ ಕೃತಜ್ಞತೆಯಲ್ಲಿ ಕವಿತೆ ಮುಕ್ತಾಯವಾಗುತ್ತದೆ. ಬೇಂದ್ರೆಯವರ ಮೂಲ ಕೇಂದ್ರಗಳಲ್ಲಿ ಹೆಣ್ಣು ಒಂದು ಎನ್ನುವುದು ಬೇರೆ, ಬೇಂದ್ರೆ ತನ್ನ ಸಂವೇದನೆಯಲ್ಲೇ ಹೆಣ್ಣನ್ನು ಒಳಗು ಮಾಡಿಕೊಳ್ಳಲು ಯತ್ನಿಸಿದರು ಎನ್ನುವುದು ಬೇರೆ. ಈ ಎರಡಕ್ಕೂ ಒಳ ಸಂಬಂಧವಿದ್ದರೂ ಎರಡನೆಯದು ನಿಸ್ಸಂದೇಹವಾಗಿ ದೊಡ್ಡದು ಮತ್ತು ಭಿನ್ನವಾದುದು. ಯಾವುದನ್ನು ರಾಜಕೀಯ ಪರಿಭಾಷೆಯಲ್ಲಿ ಹೇಳಲು ನಾವು ಪ್ರಯತ್ನಿಸುತ್ತಿದ್ದೇವೋ ಅದನ್ನೇ ಬೇಂದ್ರೆ, ಸಖ್ಯದ ಪರಿಭಾಷೆಯಲ್ಲಿ ಅದ್ಭುತವಾಗಿ ಅಭಿವ್ಯಕ್ತಿಸಿದ್ದಾರೆ. ಅದನ್ನು ಆದರ್ಶದ ರಮ್ಯ ಕಥನವಾಗಿಸದೇ, ತಮ್ಮನ್ನೇ ಆ ನಿಕಷಕ್ಕೆ ಒಡ್ಡಿಕೊಳ್ಳುವ ಮೂಲಕವೇ ತಾವೊಬ್ಬ ಸ್ತ್ರೀವಾದಿ ದಾರಿಯ ಪಯಣಿಗ ಎನ್ನುವುದನ್ನು ಸಂದೇಹಕ್ಕೆ ಎಡೆಯಿಲ್ಲದಂತೆ ಸಾಬೀತು ಪಡಿಸಿದರು.

ತಾಯೆ ಕನಿಮನೆಯೆ ನೀ, ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ, ಬಾ ಮುದ್ದು ಬಂಗಾರವೇ
ನೇಯೆನ್ನ ಹೆಂಡತಿಯೊ, ಮೈಗೊಂಡ ನನ್ನಿಯೋ
ಮಗಳೋ, ನನ್ನೆದೆಯ ಮುಗುಳೋ?
ಈಯೆನ್ನ ಇರವಿಂಗೆ ಬೇವಸದ ಬಾಳಿಕೆಗೆ
ಈಯುತ್ತ ಕೈಮೈಗಳಂ ಜೀವಭಾವದಿಂ
ಸ್ತ್ರೀಯೆ, ಕಾಪಾಡಿದೌ ಪಾಡಾಗಿ ಮೂಢನನು
ತಕ್ಕೈಸಿ ನೂರು ತೆರದಿ

ಈ ಕವಿತೆಯೂ ಬೇಂದ್ರೆಯವರ ಸ್ತ್ರೀವಾದಿ ನಿಲುವಿನ ಪುನರುಕ್ತಿಯೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.