1994ರಲ್ಲಿ ನಾನು ಚಿಕ್ಕಪೇಟೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದೆ. ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯ ಮುಂಭಾಗದಲ್ಲಿ ಯಾರೋ ನಕಲಿ ಗ್ಯಾಸ್ ರೆಗ್ಯುಲೇಟರ್ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿದಾರನೊಬ್ಬ ಬಂದು ಹೇಳಿದ. ಸಾಮಾನ್ಯವಾಗಿ ಗ್ಯಾಸ್ ರೆಗ್ಯುಲೇಟರ್ಗಳನ್ನು ಮಾರಲು ವಿಶೇಷ ಅನುಮತಿ, ಪರವಾನಗಿ ಇರಬೇಕಾದದ್ದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ‘ಅಗತ್ಯ ವಸ್ತುಗಳ ಕಾಯ್ದೆ’ಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ.

ಗ್ಯಾಸ್ ರೆಗ್ಯುಲೇಟರ್ಗಳನ್ನು ಮಾರುತ್ತಿದ್ದ ಜಾಗಕ್ಕೆ ಮಾಹಿತಿದಾರ ನಮ್ಮನ್ನು ಕರೆದುಕೊಂಡು ಹೋದ. ದೂರದಿಂದಲೇ ತೋರಿಸಿದ. ಆ ಜಾಗದಲ್ಲಿ ಠಾಕುಠೀಕಾಗಿ ನಿಂತಿದ್ದ ಒಬ್ಬನನ್ನು ರಕ್ಷಿಸಲು ಇಬ್ಬರು ಸ್ಟೆನ್ಗನ್ ಹಿಡಿದಿದ್ದರು. ನಾವು ಹತ್ತಿರಕ್ಕೆ ಹೋಗುತ್ತಿದ್ದಂತೆ ಅವರು ದಾಳಿ ಮಾಡುವ ಧೋರಣೆಯಿಂದ ಮುಂದೆ ಬಂದರು. ಬೇರೆ ಬಣ್ಣದ ವಸ್ತ್ರ ಧರಿಸಿದ್ದ ಪೊಲೀಸರಂತೆ ಅವರು ಕಾಣುತ್ತಿದ್ದರು. ನಾವು ವಿಚಾರಿಸಲು ಮುಂದಾದಾಗ, ಅವರು ತಳ್ಳುವಂತೆ ನುಗ್ಗಿಬಂದರು. ‘ಸಾಕು ಸುಮ್ಮನಿರಿ... ನಾವೂ ಪೊಲೀಸರೇ’ ಎಂದಮೇಲೆ ಸುಮ್ಮನಾದರು. ಅಲ್ಲಿ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಮೊದಲಾದ ಪ್ರಮುಖ ಇಂಧನ ಕಂಪೆನಿಗಳ ಮೊಹರಿರುವ ನಕಲಿ ಗ್ಯಾಸ್ ರೆಗ್ಯುಲೇಟರ್ಗಳಿದ್ದವು. ಅದು ಮಾರಕವಾದ ದಂಧೆ. ನಕಲಿ ರೆಗ್ಯುಲೇಟರ್ಗಳು ಸಿಡಿದು ದೊಡ್ಡ ಅನಾಹುತಗಳು ಸಂಭವಿಸಿದ ಉದಾಹರಣೆಗಳಿವೆ.

ಸ್ಟೆನ್ಗನ್ ಹಿಡಿದವರ ನಡುವೆ ಇದ್ದ ವ್ಯಕ್ತಿಯನ್ನು ನಾವು ದಸ್ತಗಿರಿ ಮಾಡಿದೆವು. ‘ನಾವು ಅವರ ಭದ್ರತೆಗಾಗಿ ಇಲ್ಲಿದ್ದೇವೆ’ ಎಂದು ಮತ್ತೆ ಆ ಇಬ್ಬರು ದಬಾಯಿಸಲು ಬಂದರು. ಅವರು ಉತ್ತರಪ್ರದೇಶದ ಪೊಲೀಸರೆಂಬುದು ಗೊತ್ತಾಯಿತು. ರಕ್ಷಣೆ ನೀಡಿದ್ದ ವ್ಯಕ್ತಿ ದಸ್ತಗಿರಿಯಾದರೆ, ಪೊಲೀಸರಿಂದ ತಮ್ಮ ಗುರುತುಪತ್ರದ ಮೇಲೆ ಬರೆಯಿಸಿಕೊಂಡು ಅವರು ಮೂಲ ಸೇವಾಸ್ಥಳಕ್ಕೆ ಹೋಗಬೇಕಾದದ್ದು ನಿಯಮ. ಅವರಿಗೆ ಆ ನಿಯಮದ ಅರಿವೇ ಇರಲಿಲ್ಲ. ನಾವು ತಿಳಿಸಿದ ಮೇಲೆ ಏನೊಂದೂ ಮಾತನಾಡದೆ ಸ್ಟೆನ್ಗನ್ ಹಿಡಿದವರು ಹೊರಟರು.

ನಾವು ದಸ್ತಗಿರಿ ಮಾಡಿದ್ದ ವ್ಯಕ್ತಿ ಉತ್ತರ ಪ್ರದೇಶದ ಹಸ್ತಿನಾಪುರದವರು. ಅಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಪರವಾಗಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯೊಬ್ಬರ ಕೊಲೆಯಾದ ಕಾರಣಕ್ಕೆ ಚುನಾವಣೆ ಮುಂದಕ್ಕೆ ಹೋಗಿತ್ತು. ಆ ಹಿನ್ನೆಲೆಯಲ್ಲಿ ವಿಶೇಷವಾಗಿ ಭದ್ರತೆ ಪಡೆದವರಲ್ಲಿ ಅವರೂ ಒಬ್ಬರು. ಆ ಭದ್ರತಾ ಸಿಬ್ಬಂದಿಯೇ ಬೆಂಗಳೂರಿನಲ್ಲೂ ಅವರ ಕಾವಲಿಗೆ ಇದ್ದದ್ದು. ಹಸ್ತಿನಾಪುರ, ಗಾಜಿಯಾಬಾದ್ನಲ್ಲಿ ಆ ನಕಲಿ ರೆಗ್ಯುಲೇಟರ್ಗಳನ್ನು ತಯಾರಿಸುತ್ತಿದ್ದರು. ಬೆಂಗಳೂರಿನಲ್ಲಿ ನಾವು ವಶಪಡಿಸಿಕೊಂಡ ಮಾಲಿನ ಬೆಲೆ ಏನಿಲ್ಲವೆಂದರೂ ಸುಮಾರು ಐದು ಲಕ್ಷ ರೂಪಾಯಿಯಷ್ಟಿತ್ತು. ತನಿಖೆಗೆ ನಾವು ಮುಂದಾದೆವು. ಪ್ರತಿಷ್ಠಿತ ಕಂಪೆನಿಗಳ ಮೊಹರನ್ನು ನಕಲಿ ರೆಗ್ಯುಲೇಟರ್ಗಳನ್ನು ಮಾರಲು ಬಳಸಿದ್ದರಿಂದ, ಆ ಕಂಪೆನಿಗಳ ಸಿಬ್ಬಂದಿ ಕೂಡ ನಮಗೆ ತನಿಖೆ ನಡೆಸಲು ಸಹಕಾರ ಕೊಟ್ಟರು.

ನಾವು ದೆಹಲಿ ಮೂಲಕ ಉತ್ತರ ಪ್ರದೇಶಕ್ಕೆ ಹೆಚ್ಚಿನ ತನಿಖೆ ನಡೆಸಲು ಹೋದೆವು. ಅಲ್ಲಿ ಅಡಿಗಡಿಗೂ ನಮಗೆ ಒತ್ತಡ ಬಂತು. ನಾವು ದಸ್ತಗಿರಿ ಮಾಡಿದ್ದ ವ್ಯಕ್ತಿ ರಾಜಕಾರಣಿಯಾಗಿದ್ದರಿಂದ ಸ್ಥಳೀಯ ಪೊಲೀಸರು ಸ್ವಲ್ಪವೂ ಸಹಕಾರ ಕೊಡಲಿಲ್ಲ. ಬದಲಿಗೆ ಅಲ್ಲಿಂದ ಜೀವಂತವಾಗಿ ನಾವು ಬೆಂಗಳೂರಿಗೆ ವಾಪಸಾಗುವುದೇ ಕಷ್ಟ ಎಂಬಂತೆ ಮಾತನಾಡತೊಡಗಿದರು. ನಾವು ಹೆದರದೆ ಗಾಜಿಯಾಬಾದ್ ಹಾಗೂ ಹಸ್ತಿನಾಪುರದಲ್ಲಿದ್ದ ನಕಲಿ ಬರ್ನರ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ, ಇನ್ನಷ್ಟು ಸರಕನ್ನು ವಶಪಡಿಸಿಕೊಂಡು, ಬೆಂಗಳೂರಿಗೆ ಮರಳಿಬಂದೆವು.

ಶ್ರೀನಿವಾಸುಲು ಕಮಿಷನರ್ ಆಗಿದ್ದಾಗ ಇಷ್ಟು ನಡೆದದ್ದು. ಅವರಿಗೂ ಪ್ರಕರಣದ ತೀವ್ರತೆಯ ಅರಿವಿತ್ತು. ಕೊನೆಗೆ ನನ್ನ ಸಹೋದರ ರಾಜಕಾರಣಿಯಾಗಿರುವ ಹಿನ್ನೆಲೆಯಿಂದಾಗಿ ಬೇಕೆಂದೇ ನಾನು ಆ ವ್ಯಕ್ತಿಯನ್ನು ದಸ್ತಗಿರಿ ಮಾಡಿದ್ದೇನೆ ಎಂದು ಉತ್ತರ ಪ್ರದೇಶದ ರಾಜಕಾರಣಿಗಳು ಹುಯಿಲೆಬ್ಬಿಸಿದರು.

ನನ್ನ ಮೇಲೆ ಈ ಆರೋಪ ಬರುವ ಹೊತ್ತಿಗೆ ಶ್ರೀನಿವಾಸುಲು ಅವರು ಡಿಜಿ ಆಗಿದ್ದರು. ಅವರು ನನಗೆ ಫೋನ್ ಮಾಡಿ, ‘ಅದೇನಪ್ಪಾ... ಏನೋ ರಾಜಕೀಯದ ಕಾರಣಕ್ಕೆ ಯಾರ ಮೇಲೋ ಸುಳ್ಳುಕೇಸು ಹಾಕಿಬಿಟ್ಟಿದ್ದೀರಂತೆ. ಯಾವುದು ಆ ಕೇಸು’ ಎಂದು ಕೇಳಿದರು. ರೆಗ್ಯುಲೇಟರ್ ಮಾರಾಟದ ದಂಧೆಯ ಅಷ್ಟೂ ವಿವರವನ್ನು ಅವರಿಗೆ ಕೊಟ್ಟೆ. ‘ಯಾವುದೇ ಕಾರಣಕ್ಕೂ ಅವರನ್ನು ಬಿಡಬೇಡಿ’ ಎಂದರು. ಎಂಥ ಅನರ್ಹ ವ್ಯಕ್ತಿಗೆ ಉತ್ತರಪ್ರದೇಶ ಪೊಲೀಸರು ಭದ್ರತೆ ನೀಡಿದ್ದರು, ನೋಡಿ.

ಜಯರಾಜ್ ಚುನಾವಣೆಗೆ ನಿಂತಾಗ ತನಗೆ ಪೊಲೀಸ್ ಭದ್ರತೆ ಬೇಕೆಂದು ಅರ್ಜಿ ಹಾಕಿದ. ಅದು ಸಲೀಸಾಗಿ ಸಿಗದೇ ಹೋದಾಗ ನ್ಯಾಯಾಲಯಕ್ಕೂ ಮೊರೆಹೋದ. ಅದರಿಂದಲೂ ಪ್ರಯೋಜನವಾಗಲಿಲ್ಲ. ಅವನು ಜೀವಂತ ಹುಲಿಯನ್ನೇ ತಂದು, ವಂದಿಮಾಗಧರ ಜೊತೆಯಲ್ಲಿ ಮೆರವಣಿಗೆ ಹೊರಟು ಚುನಾವಣಾ ಪ್ರಚಾರ ಮಾಡಿದ.

ಹಿಂದೆ ಮಂತ್ರಿಯೊಬ್ಬರು ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದರು. ಬಾಂಬೆಯಿಂದ ಅವರಿಗೆ ಬೆದರಿಕೆ ಕರೆಗಳು ಬರತೊಡಗಿದವು. ಹಾಗಾಗಿ ಅವರು ಪೊಲೀಸ್ ರಕ್ಷಣೆ ಪಡೆದುಕೊಂಡರು. ಆಗ ಕೆಲವು ವಿಧಾನಸಭಾ ಕ್ಷೇತ್ರಗಳ ಮರು ಚುನಾವಣೆ ನಡೆಯಿತು. ಮತಕ್ಷೇತ್ರದಲ್ಲಿ ನಾನೂ ಇದ್ದೆ. ಅಲ್ಲಿಗೆ ಇದ್ದಕ್ಕಿದ್ದಂತೆ ಆ ಮಂತ್ರಿ ಆಗಮಿಸಿದರು. ಬೆಂಗಾವಲಿನವರೂ ಇದ್ದರು. ಅವರು ನಡೆದುಬರುವಾಗ ಬೂಟಿನ ಲೇಸ್ ಬಿಚ್ಚಿಕೊಂಡಿತ್ತು. ಬೆಂಗಾವಲು ಪಡೆಯ ಸಿಬ್ಬಂದಿಯನ್ನು ಅವರು ಏಕವಚನದಲ್ಲಿ ಕರೆದರು. ಆತ ಹತ್ತಿರಕ್ಕೆ ಬಂದದ್ದೇ, ಕಣ್ಣಲ್ಲೇ ಬೂಟನ್ನು ತೋರಿಸಿದರು. ಆ ಪೊಲೀಸ್ ಕುಕ್ಕರಗಾಲಿನಲ್ಲಿ ಕೂತು ಅವರ ಬೂಟಿನ ಲೇಸ್ ಕಟ್ಟಿದಾಗ ನನಗೆ ತುಂಬಾ ಬೇಸರವಾಯಿತು. ನಾನು ಆ ಪೊಲೀಸರನ್ನು ಆಮೇಲೆ, ‘ಏನಪ್ಪಾ ಇದು... ಅವಸ್ಥೆ’ ಎಂದು ಕೇಳಿದೆ. ‘ಅವರಿಗೆ ಬಗ್ಗಲು ಆಗೋಲ್ಲ, ಸರ್. ಇದು ಮೊದಲು ಸಲವೇನಲ್ಲ. ಎಷ್ಟೋ ಸಲ ಹೀಗೆ ನಾವೇ ಲೇಸ್ ಕಟ್ಟಿದ್ದೇವೆ’ ಎಂದರು. ರಕ್ಷಣೆಗೆ ನಿಲ್ಲುವ ಪೊಲೀಸರನ್ನು ಎಷ್ಟು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಉದಾಹರಣೆ.

ಬೆಂಗಾವಲಿನಲ್ಲಿರುವ ಅನೇಕರಿಗೆ ರಾಜಕಾರಣಿಗಳ ಸಂಪರ್ಕದಲ್ಲಿದ್ದೇವೆ ಎಂಬ ಹೆಮ್ಮೆ ಇರುತ್ತದೆ. ಹಾಗಾಗಿ ಅವರು ಬೂಟಿನ ಲೇಸ್ ಕಟ್ಟುವಂಥ ಕೆಲಸ ಹೀನಾಯವಾದುದು ಎಂದುಕೊಳ್ಳುವುದೇ ಇಲ್ಲ. ಮಂತ್ರಿ ಜೊತೆಯಲ್ಲಿ ತಾವು ಸದಾ ಇರುತ್ತೇವೆ ಎಂಬುದನ್ನೇ ದೊಡ್ಡ ಗೌರವ ಎಂದು ಭಾವಿಸುತ್ತಾರೆ.

ಇತ್ತೀಚೆಗೆ ಮಲ್ಲೇಶ್ವರಂನ ಮಂತ್ರಿಮಾಲ್ಗೆ ಸಿನಿಮಾ ನೋಡಲು ಶಾಸಕರೊಬ್ಬರು ಹೋದರು. ಅವರ ಜೊತೆ ಗನ್ಮನ್ಗಳೂ ಇದ್ದರು. ವೆಪನ್ ಇರುವವರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಮಾಲ್ನವರು ಹೇಳಿದರು. ಆ ಶಾಸಕ ಗಲಾಟೆ ಮಾಡಿ ಗನ್ಮನ್ಗಳನ್ನು ಒಳಗೆ ಬಿಡುವಂತೆ ಶಿಫಾರಸು ಮಾಡಿದರು.

ಬಹುಶಃ 2005 ಇರಬೇಕು. ಐಎಎಸ್-ಐಪಿಎಸ್ ದಂಪತಿ ಬೆಂಗಳೂರಿನಲ್ಲಿದ್ದರು. ಪತ್ನಿ ಐಎಎಸ್ ಅಧಿಕಾರಿಯಾದ್ದರೆ, ಪತಿ ಐಪಿಎಸ್ ಅಧಿಕಾರಿ. ಯಲಹಂಕ ಸರಹದ್ದಿನಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರು. ಇಬ್ಬರೂ ತಮಗೆ ಅವಕಾಶವಿರುವಷ್ಟೂ ಆರ್ಡರ್ಲಿಗಳನ್ನು ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಇಬ್ಬರೂ ಬೆಂಗಾವಲು ಪಡೆದುಕೊಂಡಿದ್ದರು. ಮೇಲಾಗಿ ದೊಡ್ಡದೊಂದು ನಾಯಿಯೂ ಮನೆಯ ಕಾವಲಿಗೆ ಇತ್ತು. ಸಂಪೂರ್ಣ ಸುರಕ್ಷಿತವಾದ ಭದ್ರಕೋಟೆಯಂಥ ಮನೆ ಅದು. ಮನೆಯ ಹಿಂಭಾಗಕ್ಕೆ ಕೃಷಿ ಕಾಲೇಜಿನ ಕ್ಯಾಂಪಸ್ ಹೊಂದಿಕೊಂಡಂತೆ ಇತ್ತು. ಅಂಥ ಮನೆಗೆ ದರೋಡೆಕೋರರು ಬಂದು, ಬಾಗಿಲು ಮೀಟಿ ನುಗ್ಗಿದರು. ಐಎಎಸ್ ಅಧಿಕಾರಿ ತಮ್ಮ ತಂಗಿ ಜೊತೆಯಲ್ಲಿ ಕೋಣೆಯಲ್ಲಿ ಮಲಗಿದ್ದರು. ಐಪಿಎಸ್ ಅಧಿಕಾರಿ ಮಲಗಿದ್ದ ಕೋಣೆಯ ಬಾಗಿಲನ್ನು ಮುಚ್ಚಿ ದರೋಡೆಕೋರರು ದೋಚಿಕೊಂಡು ಹೋದರು. ಬೆಂಗಾವಲು ಪಡೆ, ನಾಯಿ ಕೂಡ ಅವರನ್ನು ಏನೂ ಮಾಡಲು ಸಾಧ್ಯವಾಗಿರಲಿಲ್ಲ!

ನನ್ನ ತಂಡ ಪಾತಕಿ ನಸ್ರುವನ್ನು ಹಿಡಿಯಲು ಹೋದಾಗ ಅವನು ನಮ್ಮಲ್ಲಿದ್ದ ಅನೇಕರ ಮೇಲೆ ಹಲ್ಲೆ ಮಾಡಿದ. ಕೆಲವರಿಗೆ ಮಾರಣಾಂತಿಕ ಗಾಯಗಳಾದವು. ಅನಿವಾರ್ಯವಾಗಿ ಅವನನ್ನು ಎನ್ಕೌಂಟರ್ ಮಾಡಬೇಕಾಯಿತು. ಅವನ ತಮ್ಮಂದಿರಾದ ವಾಸಿಂ ಹಾಗೂ ಜಫ್ರುವನ್ನು ದಸ್ತಗಿರಿ ಮಾಡಿದೆವು. ನನ್ನ ತಲೆ ತೆಗೆಯುವವರಿಗೆ ಕೂದಲು ಕತ್ತರಿಸುವುದಿಲ್ಲ ಎಂದು ವಾಸಿಂ ಜೈಲಿನಲ್ಲೇ ಸಂಕಲ್ಪ ಮಾಡಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು. ಅದನ್ನು ನೋಡಿ ನನ್ನ ಪೊಲೀಸ್ ಸ್ನೇಹಿತರು ರಕ್ಷಣೆ ಪಡೆಯುವಂತೆ ಸೂಚಿಸಿದರು. ನನ್ನ ಬಳಿ ಎರಡು ವೆಪನ್ಗಳಿವೆ. ನನ್ನನ್ನು ನಾನೇ ರಕ್ಷಿಸಿಕೊಳ್ಳಬಲ್ಲೆ ಎಂದು ಅವರಿಗೆಲ್ಲಾ ಹೇಳಿದೆ. ನನ್ನ ಬಳಿ ವೆಪನ್ ಇರುವ ವಿಷಯ ಕೂಡ ಮಾಧ್ಯಮಗಳಲ್ಲಿ ಬಂತು. ಕೆಲವು ದಿನಗಳ ನಂತರ ನಾನು ವಾಸ ಮಾಡುವ ಪ್ರದೇಶದ ಪೊಲೀಸ್ ಠಾಣೆಯಿಂದ ಒಂದು ಪತ್ರ ಬಂತು. ರಕ್ಷಣೆ ಬೇಕೆ ಎಂದು ಕೇಳಿರಬಹುದೇ ಎಂದುಕೊಂಡು ಆ ಪತ್ರವನ್ನು ಒಡೆದು ನೋಡಿದೆ. ಆದರೆ, ನನ್ನ ವೆಪನ್ಗಳ ಪರವಾನಗಿಯನ್ನು ನವೀಕರಿಸಿಲ್ಲ, ಅದಕ್ಕೆ ಕಾರಣ ಕೊಡಬೇಕು ಎಂಬ ಪತ್ರ ಅದಾಗಿತ್ತು. 2011ರ ಡಿಸೆಂಬರ್ವರೆಗೆ ಎರಡೂ ವೆಪನ್ಗಳ ಪರವಾನಗಿಯನ್ನು ನಾನು ನವೀಕರಿಸಿದ್ದೆ. ಆ ಮಾಹಿತಿ ಕೂಡ ಠಾಣೆಯವರ ಬಳಿ ಇರಲಿಲ್ಲ. ಇಂಥ ಠಾಣೆಗಳೇ ಅನರ್ಹರಿಗೆ ಭದ್ರತೆ ನಿಯೋಜಿಸುತ್ತವೆ. ನಾನೇನೋ ಪೊಲೀಸ್ ಇಲಾಖೆಯಲ್ಲಿ ಇದ್ದವನು. ಆದರೆ, ಆತ್ಮರಕ್ಷಣೆಗೆಂದು ವೆಪನ್ ಇಟ್ಟುಕೊಂಡಿರುವ ಬೇರೆಯವರಿಗೆ ಇಂಥ ಪತ್ರ ಕಳುಹಿಸಿದರೆ ಅವರಿಗೆ ಹೇಗಾಗಬೇಡ?

ಶಾಸಕರು, ರಿಯಲ್ ಎಸ್ಟೇಟ್ ದಂಧೆ- ಅಕ್ರಮ ಗಣಿಗಾರಿಕೆಯಲ್ಲಿರುವವರು, ರೌಡಿಗಳು ಮೊದಲಾದವರು ಒಂದು ಕಡೆ ಬೆಂಗಾವಲನ್ನು ಪಡೆಯುತ್ತಿದ್ದಾರೆ. ಇನ್ನೊಂದು ಕಡೆ ನಿಜಕ್ಕೂ ಬೆದರಿಕೆ ಇರುವ ಅನೇಕರು ಅದರ ಭಯದ ನೆರಳಿನಲ್ಲೇ ಬದುಕುವ ಅನಿವಾರ್ಯತೆ ಇದೆ. ಪೊಲೀಸ್ ಇಲಾಖೆ ನಿಜಕ್ಕೂ ಬೆಂಗಾವಲಾಗಬೇಕಾದದ್ದು ಯಾರಿಗೆ ಎಂಬ ಪ್ರಶ್ನೆಯನ್ನು ನಮ್ಮ ವ್ಯವಸ್ಥೆಯೇ ಎದುರಿಗಿಟ್ಟಿದೆ. ಭದ್ರತೆ ಎಂಬ ಶೋಕಿಯ ನಾಟಕ ಮಾತ್ರ ಅವ್ಯಾಹತವಾಗಿ ನಡೆದಿದೆ.

ಮುಂದಿನ ವಾರ: ಬೆಟ್ಟಿಂಗ್ ವಿಶ್ವರೂಪ

ಶಿವರಾಂ ಅವರ ಮೊಬೈಲ್ ನಂಬರ್ 94483-13066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.