ಗಣ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪದಕಗಳ ಪ್ರಕಟಣೆ ಆಗುತ್ತದೆ. ರಾಜ್ಯೋತ್ಸವದ ವೇಳೆ ‘ಪೊಲೀಸ್ ಧ್ವಜ ದಿನ’ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕಗಳು ಪ್ರಕಟವಾಗುತ್ತವೆ.ರಾಷ್ಟ್ರಪತಿಗಳ ಪದಕಗಳನ್ನು ‘ಶ್ಲಾಘನೀಯ ಸೇವೆ’ (ಮೆರಿಟೋರಿಯಸ್ ಸರ್ವಿಸ್) ಹಾಗೂ ‘ಅಸಾಧಾರಣ ಸೇವೆ’ (ಡಿಸ್ಟಿಂಗ್ವಿಷ್ಡ್ ಸರ್ವಿಸ್) ಎಂಬ ಎರಡು ಕಾರಣಕ್ಕೆ ನೀಡುತ್ತಾರೆ.

ಆಯಾ ವರ್ಷ ಯಾರು ಅತ್ಯುತ್ತಮ ಕೆಲಸ ಮಾಡುತ್ತಾರೋ ಅವರಿಗೆ ಮುಖ್ಯಮಂತ್ರಿ ಪದಕ ನೀಡುವುದು ವಾಡಿಕೆ. ದಕಗಳ ಗೌರವ ಪೊಲೀಸರಲ್ಲಿ ಕೆಲಸ ಮಾಡುವ ಉತ್ಸಾಹ ತುಂಬುತ್ತದೆ ಎಂಬುದು ಸತ್ಯ. ಆದರೆ, ಬರಬರುತ್ತಾ ಉನ್ನತ ಅಧಿಕಾರಿಗಳಿಗೆ ಒಳ್ಳೆಯವರಾಗಿದ್ದುಕೊಂಡು, ಅವರಿಗೆ ಸೇವೆ ಮಾಡುವವರಿಗೆ ಪದಕ ಸಲ್ಲುವುದು ಸಾಮಾನ್ಯವಾಗಿಬಿಟ್ಟಿದೆ.

ಪದಕಗಳನ್ನು ಯಾರಿಗೆ ಕೊಡಬೇಕು ಎಂದು ಸಕಾರಣವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಉನ್ನತ ಪೊಲೀಸ್ ಅಧಿಕಾರಿಗಳು. ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಈ ಕೆಲಸವನ್ನು ಮಾಡಿದರೆ, ಉಳಿದ ಜಿಲ್ಲೆಗಳಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮೇಲೆ ಈ ಜವಾಬ್ದಾರಿ ಇರುತ್ತದೆ. ಇಲಾಖೆಯಲ್ಲಿ ಕೆಲಸ ಮಾಡುವ ಯಾವುದೇ ಪೊಲೀಸರ ಕೆಲಸದ ‘ಟ್ರ್ಯಾಕ್ ರೆಕಾರ್ಡ್’ ನಿರ್ವಹಿಸುವ ಸುಸಜ್ಜಿತ ವ್ಯವಸ್ಥೆ ಈ ಕಂಪ್ಯೂಟರ್ ಯುಗದಲ್ಲೂ ಇಲ್ಲ.

ಯಾವ ಪೊಲೀಸರು ಯಾವ ತನಿಖೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು, ಜೀವ ಪಣಕ್ಕಿಟ್ಟು ಯಾರನ್ನು ದಸ್ತಗಿರಿ ಮಾಡಿದರು, ಯಾವ ಮಹತ್ವದ ಕೇಸನ್ನು ಪತ್ತೆಮಾಡಿದರು ಎಂಬಿತ್ಯಾದಿ ವಿವರಗಳು ಇದುವರೆಗೆ ಯಾರದ್ದೇ ‘ಸೇವಾ ದಾಖಲಾತಿ ಪುಸ್ತಕ’ದಲ್ಲೂ (ಸರ್ವಿಸ್ ರಿಜಿಸ್ಟರ್) ದಾಖಲಾಗಿಲ್ಲ. ಹಾಗಿದ್ದರೆ ಪದಕಕ್ಕೆ ಆಯ್ಕೆ ಮಾಡಲು ಅಧಿಕಾರಿಗಳು ಅನುಸರಿಸುವ ಮಾನದಂಡವಾದರೂ ಯಾವುದು ಎಂಬ ಮುಖ್ಯ ಪ್ರಶ್ನೆ ಹುಟ್ಟುತ್ತದೆ.

ನನ್ನ ಅನುಭವದ ಆಧಾರದ ಮೇಲೆಯೇ ಹೇಳುವುದಾದರೆ, ನಾನು ಯಾವ್ಯಾವ ಅಧಿಕಾರಿಗಳೊಟ್ಟಿಗೆ ಕೆಲಸ ಮಾಡಿದ್ದೇನೋ, ಅವರಿಗೆ ಮಾತ್ರ ನನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯದ ಪರಿಚಯವಿದೆ. ಉಳಿದ ಅಧಿಕಾರಿಗಳಿಗೆ ನಾನು ಪತ್ತೆಮಾಡಿರುವ ಕೇಸುಗಳ ಕುರಿತು ಯಾವುದೇ ಮಾಹಿತಿ ತಿಳಿಸುವ ‘ಟ್ರ್ಯಾಕ್ ರೆಕಾರ್ಡ್’ ಇಲ್ಲವೇ ಇಲ್ಲ. ಒಬ್ಬ ಪೊಲೀಸ್ ಒಂದು ಠಾಣೆಯಲ್ಲಿ ಉತ್ತಮ ಕೇಸುಗಳನ್ನು ಪತ್ತೆಮಾಡಿ, ಇನ್ನೊಂದು ಠಾಣೆಗೆ ವರ್ಗಾವಣೆಯಾಗುತ್ತಾರೆ ಎಂದಿಟ್ಟುಕೊಳ್ಳಿ. ಅವರು ಹಿಂದೆ ಕೆಲಸ ಮಾಡಿದ ರೀತಿ ಅಲ್ಲಿನ ಅಧಿಕಾರಿಗೆ ಗೊತ್ತಿರದೇ ಇರುವ ಸಾಧ್ಯತೆ ಇರುತ್ತದೆ. ಸಿಬ್ಬಂದಿಯ ಎಲ್ಲಾ ವ್ಯವಸ್ಥೆ ನೋಡಿಕೊಳ್ಳಲು ವಿವಿಧ ವಿಭಾಗಗಳಿವೆ. ಆದರೆ, ಪದಕದ ಅರ್ಹತೆ ನಿರ್ಧರಿಸಲು ಸುಸಜ್ಜಿತ ವ್ಯವಸ್ಥೆಯೇ ಇಲ್ಲ.

ಐಪಿಎಸ್ ಅಧಿಕಾರಿಗಳಿಗೆ ಅವರ ಸೇವಾವಧಿಯ ಆಧಾರದ ಮೇಲೆ ‘ಶ್ಲಾಘನೀಯ ಸೇವೆ’ಗಾಗಿ ಪದಕ ಸಿಗುವುದು ಖಾತರಿ. ಅವರು ಜನಮನ್ನಣೆ ಗಳಿಸಲಿ ಬಿಡಲಿ, ಜನೋಪಯೋಗಿ ಕೆಲಸಗಳನ್ನು ಮಾಡಿರಲಿ ಇಲ್ಲದೇ ಇರಲಿ ಕೆಲಸಕ್ಕೆ ಸೇರಿದ ಹದಿನೈದು ವರ್ಷದ ನಂತರ ‘ಅಸಾಧಾರಣ ಸೇವೆ’ಗಾಗಿ ಪದಕ ಸಿಗುವ ಗ್ಯಾರಂಟಿ ಇದೆ. ಆಮೇಲೆ ಸೇವಾ ಹಿರಿತನ ಆಧರಿಸಿ ‘ಶ್ಲಾಘನೀಯ ಸೇವೆ’ಗೆ ಪದಕವು ಒಲಿದುಬರುತ್ತದೆ. ‘ಅಸಾಧಾರಣ ಸೇವೆ’ಗಾಗಿ ಪದಕ ಪಡೆದರೆ ರೈಲು ಹಾಗೂ ವಿಮಾನದ ಟಿಕೆಟ್ ದರದಲ್ಲಿ ಜೀವಮಾನದುದ್ದಕ್ಕೂ ರಿಯಾಯಿತಿ (ಪದಕ ಪಡೆದವರ ಕುಟುಂಬಕ್ಕೆ) ಸಿಗುತ್ತದೆ. ಈ ಆಕರ್ಷಣೆಯ ಕಾರಣಕ್ಕೇ ಕೆಲವು ಅಧಿಕಾರಿಗಳು ಈ ಕೆಟಗರಿಯಲ್ಲೇ ಪದಕ ಪಡೆಯಲು ಲಾಬಿ ಮಾಡುವುದುಂಟು.

‘ಪದಕಕ್ಕೆ ಅಪೇಕ್ಷೆ ಪಡುವವರು ಖುದ್ದು ತಮ್ಮ ಬಗ್ಗೆ ತಾವೇ ಉನ್ನತ ಅಧಿಕಾರಿಗೆ ವರದಿ ಸಲ್ಲಿಸಬೇಕು. ಏನು ಸಾಧನೆ ಮಾಡಿದ್ದೀಯಾ ಎನ್ನುವುದು ಮುಖ್ಯವಲ್ಲ. ಸಣ್ಣ ಕೆಲಸ ಮಾಡಿದ್ದರೂ ಅದನ್ನು ದೊಡ್ಡದೆಂಬಂತೆ ಆಕರ್ಷಕ ಇಂಗ್ಲಿಷ್‌ನಲ್ಲಿ ರೋಚಕವಾಗಿ ಬರೆದುಕೊಡಬೇಕು. ಹಾಗೆ ಬರೆದುಕೊಡುವ ಕೈಗಳೂ ಇಲಾಖೆಯಲ್ಲಿ ಇವೆ.

ಅಂಥವರಿಂದ ಬರೆಸಿಕೊಂಡು, ಅಧಿಕಾರಿಗಳಿಗೆ ಕೊಟ್ಟು, ಅವರಿಂದ ಅದರ ಮೇಲೆ ಸಹಿ ಪಡೆದು ಸಾಲುಸಾಲು ಪದಕಗಳನ್ನು ಪಡೆದುಕೊಂಡವರೂ ಇದ್ದಾರೆ’ ಎಂದು ನನಗೆ ಒಬ್ಬ ಅಧಿಕಾರಿಯೇ ತಿಳಿಸಿದಾಗ ಅಚ್ಚರಿಯಾಗಿತ್ತು. ಪದಕಕ್ಕೆ ಆಯ್ಕೆಯಾಗುವವರಲ್ಲಿ ಅರ್ಧದಷ್ಟು ಜೊಳ್ಳೇ ಇರುತ್ತಾರೆ. ಯಾವ ಜಾತಿಯವನು, ಅಧಿಕಾರಿಗೆ ಎಷ್ಟು ನಿಷ್ಠ ಎಂಬುದೇ ಪದಕಕ್ಕೆ ಮುಖ್ಯ ಅರ್ಹತೆಯಾಗಿದೆ.

ಇಲಾಖೆಯಲ್ಲಿ ಜನವಿರೋಧಿ ಎನಿಸಿಕೊಂಡವರು ಅಧಿಕಾರಿಗಳ ವಿಷಯದಲ್ಲಿ ತೋರುವ ಗುಲಾಮಗಿರಿತನಕ್ಕೆ ಕೂಡ ಪದಕಗಳು ಸಂದಿರುವ ಉದಾಹರಣೆಗಳಿವೆ. ನಾವು ಯಾರನ್ನು ‘ಮಾದರಿ ಪೊಲೀಸ್’ ಎನ್ನುತ್ತೇವೋ, ಅವರಿಗೆ ಪದಕ ಸಿಗುವ ಸಂಭವನೀಯತೆ ಕ್ಷೀಣಿಸಿರುವ ಕಾಲಮಾನವಿದು. ಯಾಕೆಂದರೆ, ಮಾದರಿ ಪೊಲೀಸರು ಹಿರಿಯ ಅಧಿಕಾರಿಗಳು ಕೊಡುವ ಅನ್ಯಾಯದ ಆದೇಶವನ್ನು ಪ್ರತಿಭಟಿಸುತ್ತಾರೆ. ಯಾರ ಒತ್ತಡಕ್ಕೂ ಮಣಿಯದೆ ಆತ್ಮಗೌರವಕ್ಕಷ್ಟೇ ಬೆಲೆ ಕೊಟ್ಟು ಕೆಲಸ ಮಾಡುತ್ತಾರೆ. ಅಂಥವರನ್ನು ಮೆಚ್ಚಿಕೊಳ್ಳುವ ಉನ್ನತ ಅಧಿಕಾರಿಗಳ ಸಂಖ್ಯೆ ತುಂಬಾ ಕಡಿಮೆ.

ಜಾಣತನದಿಂದ ಪದಕ ಪಡೆಯುವ ದಾರಿಯಲ್ಲಿ ನಡೆಯುವವರನ್ನು ನಾನು ನೋಡಿದ್ದೇನೆ. ಇಲಾಖೆಯಲ್ಲಿ ರೈಟರ್‌ಗಳೇ ‘ರಿವಾರ್ಡ್’ ಪಡೆದವರ ಹೆಸರನ್ನು ದಾಖಲಿಸುವುದು. ಅತಿ ಹೆಚ್ಚು ‘ರಿವಾರ್ಡ್’ಗೆ ಭಾಜನರಾದಲ್ಲಿ ಸಹಜವಾಗಿಯೇ ಪದಕಕ್ಕೆ ಅರ್ಹತೆ ಪ್ರಾಪ್ತಿಯಾಗುತ್ತದೆ. ಇದನ್ನು ಬಲ್ಲ ರೈಟರ್‌ಗಳು ರಿವಾರ್ಡ್ ಪಡೆದವರ ಹೆಸರಿನೊಟ್ಟಿಗೆ ತಮ್ಮದೂ ಹೆಸರನ್ನು ಸೇರಿಸುತ್ತಾ ಹೋಗುತ್ತಾರೆ. ಸಾಕಷ್ಟು ರಿವಾರ್ಡ್‌ಗಳು ಬಂದವರ ಹೆಸರಿನಲ್ಲಿ ಅವರದ್ದೂ ಸೇರಿ ಹೋಗಿ, ಪದಕ ಸಿಗುತ್ತದೆ. ಫೀಲ್ಡ್‌ನಲ್ಲಿ ಕೆಲಸವನ್ನೇ ಮಾಡದೆ ಹೀಗೆ ಕಳ್ಳದಾರಿಯಲ್ಲಿ ಪದಕ ಪಡೆಯುವ ರೀತಿ ನಿಜಕ್ಕೂ ಹೇಯಕರವಾದದ್ದು.

ತಮ್ಮ ಮನೆಯನ್ನು ಪತ್ನಿಯ ಹೆಸರಿಗೆ ಬರೆದು, ಪದಕ ಪಡೆದ ನಂತರ ಬಿಡಿಎ ನಿವೇಶನಕ್ಕೆ ಅರ್ಜಿ ಹಾಕಿದ ಕೆಲವರೂ ನಮ್ಮ ನಡುವೆಯೇ ಇದ್ದಾರೆ. ನನ್ನ ಸೇವಾವಧಿಯಲ್ಲಿ ಶ್ರೀಗಂಧ ಕಳ್ಳ ರಘುವನ್ನು ಎನ್‌ಕೌಂಟರ್ ಮಾಡಿದ್ದು ತುಂಬಾ ಪ್ರಮುಖವಾದ ಕೆಲಸವಾಗಿತ್ತು. ಆ ಘಟನೆಯನ್ನು ಈ ಹಿಂದೆ ಇದೇ ಅಂಕಣದಲ್ಲಿ ನಾನು ವಿವರಿಸಿದ್ದೆ.

ನಾನು ಹಾಗೂ ಕಾನ್‌ಸ್ಟೇಬಲ್ ತಿಮ್ಮಯ್ಯ ಜೀವದ ಹಂಗು ತೊರೆದು ಶ್ರೀಗಂಧ ಕಳ್ಳರ ಜಾಲವನ್ನು ಬಯಲಿಗೆಳೆದಿದ್ದೆವು. ಆ ವರ್ಷ ನನಗೆ ಕನಿಷ್ಠ ಶೌರ್ಯ ಪ್ರಶಸ್ತಿಯಾದರೂ ಸಿಕ್ಕೀತು ಎಂದು ನಾನು ಭಾವಿಸಿದ್ದೆ. ಕೆಲವು ಉತ್ಸಾಹಿ ಸಹೋದ್ಯೋಗಿಗಳು ನನ್ನ ಕೆಲಸದ ಬಗ್ಗೆ ಆಡಿದ್ದ ಮಾತುಗಳಿಂದ ನನಗೂ ಪದಕದ ಬಯಕೆ ಹುಟ್ಟಿತ್ತು.

ಆದರೆ, ಆ ವರ್ಷ ನಮ್ಮ ಹೆಸರನ್ನೇ ಅಧಿಕಾರಿಗಳು ಪದಕಕ್ಕೆ ಶಿಫಾರಸು ಮಾಡಲಿಲ್ಲ. ಬದಲಿಗೆ ಅವರೇ ಶ್ರೀಗಂಧ ಕಳ್ಳರನ್ನು ಹಿಡಿದಿರುವಂತೆ ತಿರುಚಿ ಬರೆದುಕೊಂಡು ಪದಕ ಗಿಟ್ಟಿಸಿದರು. ಆಗ ತಿಮ್ಮಯ್ಯನವರಿಗೆ ನೂರು ರೂಪಾಯಿ ಹಾಗೂ ನನಗೆ ಇನ್ನೂರು ರೂಪಾಯಿ ರಿವಾರ್ಡ್ ಸಿಕ್ಕಿತಷ್ಟೆ. ಶಿವರಸನ್ ಪ್ರಕರಣದಲ್ಲಿ ಪದಕದ ನಾಟಕ ಹೇಗೆ ನಡೆಯಿತು ಎಂಬುದನ್ನು ಈಗಾಗಲೇ ನಾನು ಹೇಳಿದ್ದೇನೆ.

ಕೊತ್ವಾಲ್ ರಾಮಚಂದ್ರನ ಬೇರುಗಳನ್ನು ನಾವು ಅಲ್ಲಾಡಿಸಿದ್ದಾಗಲೂ ಹಿರಿಯ ಅಧಿಕಾರಿ ನಮ್ಮ ಪದಕದ ಸಾಧ್ಯತೆಗೆ ಸೊನ್ನೆ ಸುತ್ತಿದ್ದರು. ಆಗ ನಾವು ವಿಧಾನ ಪರಿಷತ್ ಸದಸ್ಯರೊಬ್ಬರ ಮಗನ ಮೇಲೆ ಒತ್ತಡ ಹಾಕಿದ್ದೆವು ಎಂಬುದೇ ಪದಕಕ್ಕೆ ನಮ್ಮನ್ನು ಪರಿಗಣಿಸದೇ ಇರಲು ಕಾರಣವಾಗಿತ್ತು. ಆದರೂ ಆಗಿನ ಕಮಿಷನರ್ ಹರ್ಲಂಕರ್ ಹಾಗೂ ಡಿಸಿಪಿ ಮರಿಸ್ವಾಮಿ ಕೆಲವು ಅಧಿಕಾರಿಗಳನ್ನು ಪ್ರತಿಭಟಿಸಿಯೇ ನಾನೂ ಸೇರಿದಂತೆ ಕೆಲವರಿಗೆ ಪದಕ ಸಿಗಲು ಕಾರಣರಾಗಿದ್ದರು.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಯುವಕರೊಬ್ಬರು ತಮ್ಮ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡುವಂತೆ ನನ್ನನ್ನು ಕೇಳಿಕೊಂಡರು. ಅವರು ಕೆಲಸಕ್ಕೆ ಸೇರಿ ಮೂರೂವರೆ ವರ್ಷವಷ್ಟೆ ಆಗಿತ್ತು. ಈ ಪದಕಕ್ಕೆ ಹೆಸರು ಶಿಫಾರಸು ಮಾಡಬೇಕಾದರೆ ಕನಿಷ್ಠ ಐದು ವರ್ಷ ಅನುಭವ ಇರಬೇಕು. ಪದಕ ಪಡೆಯುವ ಅರ್ಹತೆ ಇಲ್ಲವೆಂಬುದನ್ನು ನಾನು ಮನದಟ್ಟು ಮಾಡಿಸಿದೆ. ನನ್ನ ಮಾತನ್ನು ನಿರ್ಲಕ್ಷಿಸಿ, ನೇರವಾಗಿ ಕಮಿಷನರ್ ಬಳಿಗೇ ಹೋಗಿ ಅವರು ಪದಕಕ್ಕೆ ಶಿಫಾರಸು ಮಾಡಿರೆಂದು ಅಲವತ್ತುಕೊಂಡಿದ್ದರು. ನಿಯಮದ ಪ್ರಕಾರ ಕಮಿಷನರ್ ಕೂಡ ಆಗುವುದಿಲ್ಲವೆಂದು ಹೇಳಿದರು. ಆದರೆ, ಪದಕ ಪಟ್ಟಿ ಪ್ರಕಟವಾದಾಗ ಇಲಾಖೆಯ ಯಾರೂ ಶಿಫಾರಸು ಮಾಡದ ಆ ಸಬ್ ಇನ್ಸ್‌ಪೆಕ್ಟರ್ ಹೆಸರು ಇತ್ತು.

ಚೆನ್ನಾಗಿ ಕೆಲಸ ಮಾಡಿದ್ದ ಹೆಡ್ ಕಾನ್‌ಸ್ಟೇಬಲ್ ಒಬ್ಬರಿಗೆ ಬೆಳ್ಳಿಪದಕ ಬಂದಿತ್ತು. ಅವರು ಚಿನ್ನದ ಪದಕವೇ ಬೇಕು ಎಂದು ಪಟ್ಟುಹಿಡಿದರು. ಅವರ ಬೇಡಿಕೆಗೆ ಯಾರೂ ಕಿವಿಗೊಡಲಿಲ್ಲ. ಆದರೆ, ಪದಕ ಪ್ರದಾನವಾದಾಗ ಚಿನ್ನದ ಪದಕವೇ ಅವರಿಗೆ ಸಿಕ್ಕಿತು. ತಮ್ಮದೇ ಜಾತಿಯ ರಾಜಕಾರಣಿಯೊಬ್ಬರ ಕೃಪಾಕಟಾಕ್ಷ ಅವರ ಮೇಲಿತ್ತು.

ಬೆಂಗಳೂರಿನ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸಾಹಸ ಮಾಡಿ ಕೆಮ್ಮಣ್ಣುಗುಂಡಿಗೆ ಹೋಗಿ ರೌಡಿಯೊಬ್ಬನನ್ನು ದಸ್ತಗಿರಿ ಮಾಡಿದ್ದರು.ಆದರೆ, ಅವರಿಗೆ ಪದಕ ಸಿಗುವುದರ ಬದಲು ಅದೇ ಕೆಲಸಕ್ಕಾಗಿ ಇನ್ಸ್‌ಪೆಕ್ಟರ್‌ಗೆ ಪದಕ ಸಿಕ್ಕಿತು. ಡಿಸಿಪಿ ಆ ಇನ್ಸ್‌ಪೆಕ್ಟರ್ ಹೆಸರನ್ನು ಶಿಫಾರಸು ಮಾಡಿದ್ದರು. ಇದಕ್ಕೂ ಸ್ವಜಾತಿ ಪ್ರೀತಿಯೇ ಕಾರಣ. ಸಬ್ ಇನ್ಸ್‌ಪೆಕ್ಟರ್ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಆ ಇನ್ಸ್‌ಪೆಕ್ಟರ್ ಮನೆಯಲ್ಲಿ ಜಾರಿ ಬಿದ್ದು, ಕೈ ಮೂಳೆ ಮುರಿದಿತ್ತು. ಅದನ್ನೇ ತಿರುಚಿ ರೌಡಿಯನ್ನು ಹಿಡಿಯುವಾಗ ಮೂಳೆ ಮುರಿಯಿತು ಎಂದು ಅವರು ಸುಳ್ಳು ಹೇಳಿ ಪದಕ ಗಿಟ್ಟಿಸಿಕೊಂಡಿದ್ದರು.

ನಸ್ರು ಎಂಬ ಪಾತಕನನ್ನು ಹಿಡಿದಾಗ ಒಂದು ತಂಡವನ್ನು ನಾನು ಮುನ್ನಡೆಸಿದ್ದೆ. ನಮ್ಮ ತಂಡದ ಕೆಲವರಿಗೆ ಮಾರಣಾಂತಕ ಸ್ವರೂಪದ ಗಾಯಗಳಾಗಿದ್ದವು. ತಂಡದ ಅನೇಕರ ಹೆಸರನ್ನು ಪದಕಕ್ಕೆ ಶಿಫಾರಸು ಮಾಡಿದ್ದೆ. ಆದರೆ, ಅರ್ಹರಾಗಿದ್ದ ಕೆಲವರಿಗೆ ಸಿಗಲಿಲ್ಲ. ನಮ್ಮ ತಂಡದಲ್ಲೇ ಇದ್ದವರು ನನಗೆ ಪದಕ ಕೊಡಕೂಡದು ಎಂದು ರಾಷ್ಟ್ರಪತಿಯವರಿಗೆ ಇ-ಮೇಲ್ ಕಳುಹಿಸಿದ್ದರು. ಸಿಬಿಐ, ಐಬಿನವರು ಅದೇ ಕಾರಣಕ್ಕೆ ನನ್ನನ್ನು ವಿಚಾರಣೆ ಮಾಡಿದರು.

ಇಲಾಖೆಯ ಕೆಲವರಿಂದ ಕೇಳಿ, ನನ್ನ ಟ್ರ್ಯಾಕ್ ರೆಕಾರ್ಡನ್ನು ತಿಳಿದ ಸಿಬಿಐ ಅಧಿಕಾರಿಗಳು ನನ್ನ ಮೇಲೆ ಬಂದಿದ್ದ ಆರೋಪದ ಕುರಿತು ಬೇಸರಪಟ್ಟುಕೊಂಡರು. ನಾನು ನಿಜಕ್ಕೂ ಪ್ರಶಸ್ತಿಗೆ ಅರ್ಹ ಎಂದು ಅವರು ವರದಿ ಕೊಟ್ಟರು. ಕೊನೆಗೂ ಶೌರ್ಯ ಪ್ರಶಸ್ತಿ ಸಿಕ್ಕಿದಾಗ ನನಗೆ ಸಂತೋಷವಾಯಿತು. ಆದರೆ, ನನ್ನ ಜೊತೆಗೇ ಕೆಲಸ ಮಾಡಿದವರು ರಾಷ್ಟ್ರಪತಿಯವರಿಗೆ ಇ-ಮೇಲ್ ಕಳಿಸಿದ್ದಕ್ಕೆ ಬೇಸರವೂ ಆಯಿತು.

ಇಪ್ಪತ್ತನಾಲ್ಕು ವರ್ಷ ಕೆಲಸ ಮಾಡಿದ ನಂತರ ನನಗೆ ‘ಶ್ಲಾಘನೀಯ ಸೇವೆ’ಗಾಗಿ ಪದಕ ಸಂದದ್ದು. ಲವಕುಮಾರ್, ಅಶೋಕ್ ಕುಮಾರ್ ಮೊದಲಾದ ಅಧಿಕಾರಿಗಳಿಗೆ ಪ್ರಮುಖ ಪದಕಗಳೇ ಸಿಗಲಿಲ್ಲ. ಅವರಿಗೆ ಹೋಲಿಸಿಕೊಂಡಷ್ಟೇ ನನ್ನಂಥವರು ಸಮಾಧಾನ ಪಟ್ಟುಕೊಳ್ಳಬೇಕು. ಮತ್ತೊಂದು ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸಲ್ಯೂಟ್ ಹೊಡೆಯುವ ಸಾಹಸೀ ಪೊಲೀಸ್ ಎದೆಯನ್ನು ಯಾವ ಪದಕವೂ ಅಲಂಕರಿಸದೇ ಇರುವುದು ಈಗ ಅಚ್ಚರಿಯ ಸಂಗತಿಯೇನೂ ಆಗಿ ಉಳಿದಿಲ್ಲ.

ಮುಂದಿನ ವಾರ:ಶೌಕತ್ ಅಲಿಯೆಂಬ ಅಪರೂಪದ ವ್ಯಕ್ತಿ
ಶಿವರಾಂ ಅವರ ಮೊಬೈಲ್ ನಂ 94483 13066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.