ಇತ್ತೀಚೆಗೆ ಬೆಂಗಳೂರಿನಲ್ಲಿ ದಿವಾನ್ ಅಲಿ ಎಂಬ ಕಾರ್ಪೊರೇಟರ್ ಕೊಲೆಯಾದಾಗ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದೆ. ನನಗೆ ಆಗ ಹಲವು ಘಟನೆಗಳು ನೆನಪಿಗೆ ಬಂದವು. ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಯಶವಂತ ಸೋನ್ವಾನೆ ಎಂಬುವರು ಆಯಿಲ್ ಮಾಫಿಯಾಗೆ ಬಲಿಯಾದದ್ದು, ಪ್ರಧಾನಮಂತ್ರಿಗಳ ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ದುಬೆ ಹತ್ಯೆ ನಡೆದದ್ದು,

ಇಂಡಿಯನ್ ಆಯಿಲ್ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಯುವಕ ಮಂಜುನಾಥ್ ಷಣ್ಮುಗಂ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೊಲೆಯಾದ ರೀತಿ- ಇವಕ್ಕೂ ದಿವಾನ್ ಅಲಿ ಕೊಲೆಗೂ ಇರುವ ವೈರುಧ್ಯ ನನ್ನನ್ನು ಕಾಡಿತು.

ರೌಡಿಯಾಗಿದ್ದುಕೊಂಡು ಅಧಿಕಾರದಾಹಕ್ಕಾಗಿ ಹಪಹಪಿಸಿದ ದಿವಾನ್ ಅಲಿ ಸತ್ತಾಗ ಅದೆಷ್ಟೋ ರಾಜಕಾರಣಿಗಳು ಸಾಂತ್ವನ ಹೇಳಿದರು. ಆ ಸಾವಿನ ಕಾರಣಕ್ಕೆ ಇಡೀ ಕಾರ್ಪೊರೇಷನ್ಗೇ ಭದ್ರತೆ ಬೇಕೆಂದು ಅನೇಕ ಕಾರ್ಪೊರೇಟರ್ಗಳು ಬೇಡಿಕೆ ಮುಂದಿಟ್ಟರು. ಅಂದರೆ, ಅಲ್ಲಿ ಅದೆಷ್ಟು ರೌಡಿ ಶೀಟರ್ಗಳು ಇರಬೇಕು! ಸೋನ್ವಾನೆ, ದುಬೆ, ಮಂಜುನಾಥ್ ಇವರೆಲ್ಲ ಅನ್ಯಾಯದ ವಿರುದ್ಧ ಸೊಲ್ಲೆತ್ತಿದ ಕಾರಣಕ್ಕೆ ಪ್ರಾಣ ಕಳೆದುಕೊಂಡವರು. ಇಂಥವರ ಭದ್ರತೆಯ ಬಗೆಗೆ ಮಾತ್ರ ನಮ್ಮ ರಾಜಕಾರಣಿಗಳು ಯೋಚಿಸುವುದೇ ಇಲ್ಲ.

ಸಮಾಜಸೇವೆಯ ಸೋಗಿನಲ್ಲಿರುವವರು, ರಾಜಕಾರಣಿಗಳು, ಕೆಲವು ಅಧಿಕಾರಿಗಳಿಗೆ ವೈಯಕ್ತಿಕ ಭದ್ರತೆ ಪಡೆದುಕೊಳ್ಳುವುದು ಈಗ ಶೋಕಿಯ ವಿಷಯವಾಗಿದೆ. ತಾವು ಮುಂದೆ ನಡೆದು ಬರುತ್ತಿದ್ದರೆ, ಹಿಂದೆ ಕಟ್ಟುಮಸ್ತಾದ ವ್ಯಕ್ತಿಗಳು ಹತಾರ ಹಿಡಿದು ಬರುವುದನ್ನು ತೋರಿಸಿಕೊಳ್ಳುವುದು ಅಂಥವರಿಗೆ ಪ್ರತಿಷ್ಠೆ.

ಎಂಬತ್ತರ ದಶಕ. ಕೊತ್ವಾಲ್ ರಾಮಚಂದ್ರ, ಜಯರಾಜ್ ಬೆಂಗಳೂರಿನಲ್ಲಿ ಉತ್ತುಂಗದಲ್ಲಿದ್ದ ಕಾಲ. ಆಗ ಮೊಬೈಲ್, ಪೇಜರ್ ಇರಲಿಲ್ಲ. ಅವರು ಎಲ್ಲಿಗಾದರೂ ಬರುತ್ತಾರೆಂದರೆ ಮೊದಲು ಅಲ್ಲಿಗೆ ಒಬ್ಬ ರೌಡಿ ಹೋಗುತ್ತಿದ್ದ. ಏನೂ ಅಪಾಯವಿಲ್ಲ ಎಂಬುದನ್ನು ಫೋನ್ ಮೂಲಕ ಅವನು ತಿಳಿಸುತ್ತಿದ್ದ. ಆನಂತರವೇ ಕೊತ್ವಾಲ ಅಥವಾ ಜಯರಾಜ್ ಆ ಜಾಗಕ್ಕೆ ಹೊರಡುತ್ತಿದ್ದುದು. ಕೊತ್ವಾಲನ ಬೈಕ್ ಹೊರಟಿತೆಂದರೆ ಹಿಂದೆ ಐದಾರು ಜನ ತಂತಮ್ಮ ಬೈಕ್ಗಳಲ್ಲಿ ಅವನನ್ನು ಹಿಂಬಾಲಿಸುತ್ತಿದ್ದರು. ಜೋರು ಸದ್ದು ಮಾಡುತ್ತಾ, ಹೊಗೆಯುಗುಳುತ್ತಾ, ದೂಳೆಬ್ಬಿಸುತ್ತಾ ಅವರ ಬೈಕುಗಳು ನುಗ್ಗುವುದನ್ನು ನೋಡಿಯೇ ಜನರು ಹೆದರುತ್ತಿದ್ದರು.

ಜಯರಾಜ, ಆಯಿಲ್ ಕುಮಾರ ‘ಶೋ’ ಕೊಡುತ್ತಿದ್ದ ರೀತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಅವರೆಲ್ಲರೂ ದೇಹಧಾರ್ಡ್ಯ ಪಟುಗಳನ್ನು ಸಾಕಿಕೊಂಡಿದ್ದರು. ಒಬ್ಬೊಬ್ಬರೇ ಸಂಚರಿಸಿದರೆ ಎದುರಾಳಿಗಳು ಮುಗಿಸಿಯಾರು ಎಂಬ ಭೀತಿಯಿತ್ತು. ಆ ಕಾರಣಕ್ಕೆ ಹಾಗೂ ಜನರಿಗೆ ತಮ್ಮ ಪಡೆ ಎಷ್ಟು ಸುಭದ್ರ ಎಂಬುದನ್ನು ಮನದಟ್ಟು ಮಾಡಿಸಲು ಹಾಗೆ ಓಡಾಡುತ್ತಿದ್ದರು.

ತಮ್ಮ ಸುತ್ತ ಕಾವಲುಪಡೆಯನ್ನು ನಿಯೋಜಿಸಿಕೊಳ್ಳುವುದು ಸಮಾಜಸೇವೆಯ ಸೋಗಿನಲ್ಲಿರುವವರಿಗೂ ಶೋಕಿಯಾಯಿತು. ಜೀವಕ್ಕೆ ಅಪಾಯವಿದೆ ಎನ್ನುತ್ತಾ ಅಂಥವರು ಪೊಲೀಸ್ ಇಲಾಖೆಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸತೊಡಗಿದರು. ಆಗಲೂ ರಕ್ಷಣೆ ಸಿಗದಿದ್ದರೆ ಜಾತಿ, ಧರ್ಮ ಅಥವಾ ವಿವಿಧ ಸಾಮಾಜಿಕ ಸಂಘಟನೆಗಳ ಮೂಲಕ ಪ್ರತಿಭಟನೆ ಮಾಡಿಸಿ ಒತ್ತಡ ತಂದು, ಬೆಂಗಾವಲು ಪಡೆದುಕೊಳ್ಳುತ್ತಿದ್ದರು. ‘ವೈ’, ‘ಜಡ್’, ‘ಜಡ್ ಪ್ಲಸ್’ ಮೊದಲಾದ ಕ್ಯಾಟಗರಿಗಳಲ್ಲಿ ಭದ್ರತೆ ಒದಗಿಸುವುದನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ‘ಜಡ್ ಪ್ಲಸ್’ ಕ್ಯಾಟಗರಿ ಭದ್ರತೆ ಪಡೆಯಲು ಕಾತರಿಸುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿದೆ. ನಿಜಕ್ಕೂ ಜೀವ ಬೆದರಿಕೆ ಇದ್ದವರು ಹೀಗೆ ಬೆಂಗಾವಲು ಪಡೆದರೆ ಅದು ಸಮಸ್ಯೆಯೇ ಅಲ್ಲ.

ಆದರೆ, ಪ್ರತಿಷ್ಠೆಗಾಗಿ ಬೆದರಿಕೆಯ ಸುಳ್ಳುನೆಪ ಹೇಳಿಕೊಳ್ಳುತ್ತಾರಲ್ಲ; ಸಮಸ್ಯೆ ಇರುವುದು ಅಂಥವರಿಂದ. ಇನ್ನು ಕೆಲವು ಉನ್ನತ ಅಧಿಕಾರಿಗಳು ತಮಗಷ್ಟೇ ಅಲ್ಲದೆ ತಮ್ಮ ಕುಟುಂಬದವರಿಗೂ ಬೆಂಗಾವಲು ಪಡೆಯುತ್ತಾರೆ. ಸುತ್ತಮುತ್ತ ಜನರಿಗೆ, ತಮ್ಮ ಬಂಧುಗಳಿಗೆ ತಾವೆಷ್ಟು ಪ್ರಭಾವಿ ಎಂಬುದನ್ನು ತೋರ್ಪಡಿಸಲು ಅಂಥವರು ಹೀಗೆ ಮಾಡುವುದನ್ನು ನಾನು ನೋಡಿದ್ದೇನೆ. ಈ ಶೋಕಿ ಸಂಘಟನೆಗಳಿಗೆ, ಭೂಗತಲೋಕಕ್ಕೆ ಕೂಡ ಹಬ್ಬಿತು. ಭೂಗತಲೋಕದವರು ಲಕ್ಷೋಪಲಕ್ಷ ಹಣ ಸುರಿದು ಖಾಸಗಿ ಬೆಂಗಾವಲು ಪಡೆ ನಿಯೋಜಿಸಿಕೊಳ್ಳುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಒಂದು ಕಾರಿನಲ್ಲಿ ತಾವು ಹೊರಟರೆ ಅದರ ಮುಂದೆ ಒಂದು, ಹಿಂದೆ ಇನ್ನೊಂದು ಕಾರು ಹೊರಡುತ್ತವೆ. ಅವುಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಇರುತ್ತಾರೆ. ಅವರ ಕೈಲಿ ಹತಾರಗಳು. ಕಾರಿನ ಗ್ಲಾಸ್ ಇಳಿಸಿ, ದೊಡ್ಡ ದೊಡ್ಡ ಹತಾರಗಳನ್ನು ಜನರಿಗೆ ಕಾಣುವಂತೆ ಪ್ರದರ್ಶಿಸುತ್ತಾ ಸಿನಿಮೀಯ ರೀತಿಯಲ್ಲಿ ಸಾಗುವ ಪಾತಕಿಗಳೂ ಇಲ್ಲದಿಲ್ಲ.

ಇತ್ತೀಚೆಗೆ ವಿದೇಶಿ ಪತ್ರಕರ್ತನೊಬ್ಬ ಬಂದಾಗ ಕೆಲವು ರೌಡಿಗಳು ತಮ್ಮಲ್ಲಿದ್ದ ಹತಾರಗಳನ್ನು ತೋರಿಸಿ ನಗೆಪಾಟಲಿಗೆ ಈಡಾದರು.

ರೌಡಿಶೀಟರ್ಗಳು ಚುನಾವಣೆಗೆ ಸ್ಪರ್ಧಿಸುವುದು ವ್ಯಾಪಕವಾದ ಮೇಲಂತೂ ಈ ಶೋಕಿ ಇನ್ನೊಂದು ಆಯಾಮ ಪಡೆದುಕೊಂಡಿತು. ಚುನಾವಣೆಗೆ ನಿಲ್ಲುವ ಅಭ್ಯರ್ಥಿಯ ಪರವಾಗಿ ಎಣಿಕೆ ನಡೆಯುವ ಸ್ಥಳಕ್ಕೆ ಹತ್ತು ಏಜೆಂಟ್ಗಳು ಹೋಗಬಹುದು. ಇದೊಂದೇ ಕಾರಣಕ್ಕೆ ಕೆಲವರು ಸುಮ್ಮನೆ ತಮ್ಮ ಬಂಟರನ್ನು ಚುನಾವಣೆಗೆ ನಿಲ್ಲಿಸುತ್ತಿದ್ದರು. ಎಣಿಕೆ ನಡೆಯುವ ದಿನ ಅಲ್ಲಿ ನೆರೆಯುವ ಜನರಿಗೆ ತಮ್ಮ ಜನಬೆಂಬಲವೇ ದೊಡ್ಡದು ಎಂಬುದನ್ನು ತೋರಿಸಿಕೊಳ್ಳಲು ಅವರು ಹುಡುಕಿಕೊಂಡಿದ್ದ ದಾರಿ ಇದು.

ಚಾಮರಾಜಪೇಟೆಯಲ್ಲಿ ಉಪಚುನಾವಣೆಯಾದಾಗ ವಿನಾಯಕ ಅಲಿಯಾಸ್ ಪುಣೆ ಎಂಬ ರೌಡಿ ಸ್ಪರ್ಧಿಸಿದ. ಅಲ್ಲಿ ಗಲಭೆಗಳಾಗುವ ಮಾಹಿತಿ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಕಮಿಷನರ್ ಮರಿಸ್ವಾಮಿಯವರು ನಮಗೆಲ್ಲಾ ಆದೇಶಿಸಿದ್ದರು. ಚಾಮರಾಜಪೇಟೆಯ ಒಂದು ಬೂತ್ ತುಂಬಾ ಸೂಕ್ಷ್ಮವಾದದ್ದು ಎಂಬ ಮಾಹಿತಿ ಇತ್ತು.

ಮರಿಸ್ವಾಮಿಯವರು ಕಾರಲ್ಲಿ ಆ ಸ್ಥಳಕ್ಕೆ ಧಾವಿಸಿಬಂದರು. ಅದೇ ವೇಳೆಗೆ ನಾನೂ ಅಲ್ಲಿಗೆ ಹೋದೆ. ನಾನಾಗ ಸಿಸಿಬಿಯಲ್ಲಿ ಇದ್ದೆ. ನಾವು ಕಟ್ಟಡವೊಂದರ ಮೆಟ್ಟಿಲು ಹತ್ತಲು ಮುಂದಾದಾಗ, ಸ್ಟೆನ್ಗನ್ ಹಿಡಿದ ಇಬ್ಬರ ಮಧ್ಯೆ ನಿಧನಿಧಾನವಾಗಿ ಒಬ್ಬ ವ್ಯಕ್ತಿ ಇಳಿದುಬಂದ. ಮರಿಸ್ವಾಮಿಯವರಿಗೆ ತಕ್ಷಣಕ್ಕೆ ಅವನ ಗುರುತು ಸಿಗಲಿಲ್ಲ. ‘ಯಾರದು...

ಯಾರಾದರೂ ಅಧಿಕಾರಿಯೇ?’ ಎಂದು ಪ್ರಶ್ನಿಸಿದರು. ‘ಇಲ್ಲಾ ಸರ್. ಅವನು ಪುಣೆ ಅಂತ...ರೌಡಿ. ಈ ಸಲ ಎಲೆಕ್ಷನ್ಗೆ ನಿಂತಿದಾನೆ. ರಕ್ಷಣೆ ಕೇಳಿದ್ದ. ನಮ್ಮ ಇಲಾಖೆಯವರೇ ಅದನ್ನು ಕೊಟ್ಟಿದ್ದಾರಷ್ಟೆ’ ಎಂದೆ. ‘ಇಂದೆಂಥ ದುರಂತ ನೋಡಿ, ಪೊಲೀಸರಿಗೆ ಬೇಕಾದ ರೌಡಿಗೆ ನಮ್ಮ ಇಲಾಖೆಯಿಂದಲೇ ಭದ್ರತೆ’ ಎಂದು ಮರಿಸ್ವಾಮಿಯವರು ಬೇಸರ ವ್ಯಕ್ತಪಡಿಸಿದರು. ನಮ್ಮ ವ್ಯವಸ್ಥೆಯ ವ್ಯಂಗ್ಯಕ್ಕೆ ಇದು ಸಾಕ್ಷಿಯಷ್ಟೆ.

ಪಾತಕಲೋಕದವರು, ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಖೊಟ್ಟಿ ನಾಯಕರು ಈಗ ದೊಡ್ಡ ಮೊತ್ತ ಸುರಿದು ಖಾಸಗಿ ಭದ್ರತಾ ಸಂಸ್ಥೆಗಳಿಂದ ಬೆಂಗಾವಲು ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ನಗರಸಭಾ ಸದಸ್ಯರೂ ಸೇರಿದ್ದಾರೆ. ಬಳ್ಳಾರಿಯ ಗಣಿ ಉದ್ಯಮಿಗಳಿಗಂತೂ ಅದು ದೊಡ್ಡ ಶೋಕಿ. ಅವರು ಸಾರ್ವಜನಿಕ ಸಮಾರಂಭಗಳಿಗಷ್ಟೇ ಬೆಂಗಾವಲು ಪಡೆಯ ನೆರವು ಪಡೆಯುವುದಿಲ್ಲ. ಮದುವೆ ಮೊದಲಾದ ಖಾಸಗಿ ಕಾರ್ಯಕ್ರಮಗಳಿಗೂ ಬೆಂಗಾವಲಿನವರ ನಡುವೆಯೇ ಹೋಗುತ್ತಾರೆ. ಅಲ್ಲಿ ಸಂಭ್ರಮದಲ್ಲಿ ನಿರತರಾದ ಜನರನ್ನು ಸೀಳಿಕೊಂಡು ಮುಂದೆ ಸಾಗುತ್ತಾರೆ. ಇದು ಅಮಾನವೀಯ. ದೇವಸ್ಥಾನದಲ್ಲಿ ನಿಂತ ಭಕ್ತರನ್ನು ಸೀಳಿಕೊಂಡು ಹೋಗುವವರಿಗಂತೂ ಅಲ್ಲಿ ನಿಂತ ಜನರೇ ಶಾಪ ಹಾಕುವುದನ್ನು ನಾವು ನೋಡಿದ್ದೇವೆ.

ಖಾಸಗಿ ಭದ್ರತಾ ಸಿಬ್ಬಂದಿಯ ನಿಷ್ಠೆ ಎಷ್ಟೆಂಬುದು ಇರುವ ಇನ್ನೊಂದು ಪ್ರಶ್ನೆ. ಕೆಲವು ಭದ್ರತಾ ಸಂಸ್ಥೆಗಳು ಪರಿಣತರಾದ, ಪಳಗಿದ ಸಿಬ್ಬಂದಿಯನ್ನು ಕಳುಹಿಸಿಕೊಡುತ್ತದೆಂಬುದೇನೋ ನಿಜ. ಆದರೆ, ಹಣದಾಸೆಗೆ ಮಾತ್ರ ಹುಟ್ಟಿಕೊಂಡ ಕೆಲವು ಭದ್ರತಾ ಸಂಸ್ಥೆಗಳಿವೆ. ಅವುಗಳ ಸಿಬ್ಬಂದಿ ತಾವು ಯಾರ ಬೆಂಗಾವಲಿಗೆ ನಿಂತಿರುತ್ತಾರೋ, ಅವರದ್ದೇ ಕೊಲೆಯ ಪಿತೂರಿಯಲ್ಲಿ ಭಾಗಿಯಾದ ಉದಾಹರಣೆಗಳಿವೆ. ಅಷ್ಟೇ ಅಲ್ಲ, ಒಂದು ಆನೆಪಟಾಕಿ ಸಿಡಿದರೆ, ಇಪ್ಪತ್ತರಲ್ಲಿ ಹನ್ನೊಂದು ಸಿಬ್ಬಂದಿ ಓಡಿಹೋದದ್ದನ್ನೂ ನೋಡಿದ್ದೇನೆ. ಉಳಿದ ಒಬ್ಬ ಎಡವಿಬಿದ್ದು, ಪ್ರಾಣಭಯದಲ್ಲಿ ವಿಲವಿಲನೆ ಒದ್ದಾಡಿ ಅವನ ಬಣ್ಣಬಯಲಾಗಿದ್ದನ್ನು ಕಂಡು ನಮ್ಮ ಇಲಾಖೆಯವರೇ ನಕ್ಕಿರುವ ಪ್ರಸಂಗವೂ ಇದೆ.

ವಿಜಯವಾಡದ ಸೀರೆ ಕಳ್ಳಿಯರ ಕುರಿತು ನಾನು ಈ ಹಿಂದೆ ಬರೆದಿದ್ದೆ. ಅಲ್ಲಿಗೆ ನಾವು ಹೋಗಿ, ಕಳ್ಳಿಯರನ್ನು ದಸ್ತಗಿರಿ ಮಾಡಿ ಕರೆತರುತ್ತಿದ್ದೆವು. ದಾರಿಯಲ್ಲಿ ಸ್ಟೆನ್ಗನ್ ಹಿಡಿದಿದ್ದ ಪೊಲೀಸ್ ಒಬ್ಬ ನಮ್ಮ ವಾಹನವನ್ನು ಅಡ್ಡಗಟ್ಟಿದ.

‘ಸಾಹೇಬರು ಕರೆಯುತ್ತಿದ್ದಾರೆ... ಬರಬೇಕಂತೆ’ ಎಂದು ತೆಲುಗಿನಲ್ಲೇ ನನ್ನನ್ನು ಕರೆದ. ನಾನು ‘ಯಾಕೆ?’ ಎಂದು ಕೇಳಿದಾಗ, ಆ ಸೀರೆ ಕಳ್ಳಿಯರ ವಿಚಾರ ಮಾತನಾಡಬೇಕಂತೆ ಎಂದೆ. ನಾನು ಇಳಿಯಲಿಲ್ಲ. ಅವರನ್ನೇ ಬರಹೇಳಿ ಎಂದೆ. ಸ್ಟೆನ್ಗನ್ ಹಿಡಿದ ಮತ್ತಿಬ್ಬರು ಪೊಲೀಸರ ನಡುವೆ ನಡೆಯುತ್ತಾ ಅವರು ಬಂದರು. ವಿಜಯವಾಡ ಭಾಗದ ಟಿಡಿಪಿಯ ಕಾರ್ಪೊರೇಟರ್ ಆಗಿದ್ದ ಆ ವ್ಯಕ್ತಿ ನನ್ನನ್ನು ಕೆಳಗಿಳಿಯುವಂತೆ ದಬಾಯಿಸಿದರು. ತಮ್ಮೂರಿನವರನ್ನು ಅದು ಹೇಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಬೆದರಿಕೆ ಹಾಕುವ ಧಾಟಿಯಲ್ಲಿ ಮಾತಾಡಿದರು.

‘ನಾನೊಬ್ಬ ಪೊಲೀಸ್ ಅಧಿಕಾರಿ. ಒಳಗೆ ಬಂದು ಮಾತಾಡಿ. ನೀವೊಬ್ಬರು ಮಾತ್ರ ಬರಬೇಕು. ನಿಮ್ಮ ರಕ್ಷಣಾಪಡೆಯವರು ಬರಕೂಡದು’ ಎಂದು ನಾನೂ ಜೋರಾಗಿಯೇ ಹೇಳಿದೆ. ಒಳಗೆ ಬಂದು ಕೂತರು. ಅವರ ಕಾವಲಿಗೆ ಇದ್ದ ಅಲ್ಲಿನ ಪೊಲೀಸರು ಕೂಡ ದಬಾಯಿಸಲು ಮುಂದಾದರು. ನನಗೆ ಗದರದೆ ವಿಧಿ ಇರಲಿಲ್ಲ. ‘ತನಿಖೆಗೆ ಅಡ್ಡಪಡಿಸುತ್ತಿದ್ದೀರಿ ಎಂಬ ಆರೋಪದ ಮೇಲೆ ನಿಮ್ಮನ್ನೂ ದಸ್ತಗಿರಿ ಮಾಡಬಹುದು’ ಎಂದು ಆ ಕಾರ್ಪೊರೇಟರ್ಗೆ ನಾನು ಎಚ್ಚರಿಕೆ ಕೊಟ್ಟೆ. ಅವರ ಮುಖದ ಬಣ್ಣವೇ ಬದಲಾಯಿತು. ಏನೊಂದೂ ಮಾತಾಡದೆ ಕೆಳಗಿಳಿದು ಬಿರಬಿರನೆ ಹೊರಟರು. ಅವರ ಬೆಂಗಾವಲು ಪಡೆ ಕೂಡ ಬಾಲಮುದುರಿಕೊಂಡಿತು. ಕಳ್ಳಿಯರನ್ನು ರಕ್ಷಿಸಲು ಬಂದವನಿಗೂ ಬೆಂಗಾವಲು ಇದ್ದುದನ್ನು ನೋಡಿ ನನಗೆ ಬೇಸರವಾಯಿತು.

ಮುಂದಿನ ವಾರ: ಇಂಥವೇ ಇನ್ನಷ್ಟು ಅನುಭವಗಳು
ಶಿವರಾಂ ಅವರ ಮೊಬೈಲ್ ನಂಬರ್ 94483 13066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.