‘ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂದು ಯುರೋಪಿಯನ್ರ ಕ್ಲಬ್‌ನ ಬಾಗಿಲುಗಳ ಮೇಲೆ ಬರೆದಿರುವ ಆ ಸಾಲುಗಳಾದರೂ ಪರವಾಗಿಲ್ಲ. ನಮ್ಮ ದೇಗುಲಗಳ ಬಾಗಿಲಲ್ಲಿ ದೇವರು, ಪ್ರಾಣಿಗಳು ಮತ್ತು ಹಿಂದೂಗಳು ಎಲ್ಲರಿಗೂ ಪ್ರವೇಶವಿದೆ. ಆದರೆ ಅಸ್ಪೃಶ್ಯರಿಗೆ ಮಾತ್ರ ಪ್ರವೇಶವಿಲ್ಲ ಎಂದಿರುತ್ತದೆ. ಹೀಗೆಂದು ದೇವಾಲಯ ಪ್ರವೇಶವನ್ನು ಕುರಿತು ಬರೆದ ಗಾಂಧೀಜಿಯವರಿಗೆ ಉತ್ತರ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಅಸಮಾನತೆಯ ನೆಲಗಟ್ಟಿನ ಮೇಲೆ ನಿಂತ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ವನ್ನು ಸ್ವೀಕರಿಸಿದಾಗ ಅದು ಅಂಬೇಡ್ಕರ್ ಒಬ್ಬರ ಬದುಕಿಗೆ ತಿರುವಾಗಿರಲಿಲ್ಲ. ಭಾರತದ ಭವಿಷ್ಯಕ್ಕೆ ಬರೆದ ತಿರುವಾಗಿತ್ತು.
ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಬುದ್ಧ ಮತ್ತು ಬೌದ್ಧ ಧರ್ಮದ ಜಾಡನ್ನು ಹಿಡಿದು ಚಿಂತಿಸುವಂತೆ ಮಾಡಿದೆ. ಬುದ್ಧ ಹಾಗೂ ಬೌದ್ಧ ಧರ್ಮವನ್ನು ವಿವರಿಸುವ ಶಾಲಾ ಪಠ್ಯಗಳು ಬುದ್ಧನ ಬದುಕಿನ ಬಗೆಗೆ ಬಂದಿರುವ ಸರಳವಾದ ಕಥೆಯನ್ನು ಹೇಳುತ್ತಾ ಬಂದಿವೆ. ಒಬ್ಬ ರೋಗಿ, ಮುದುಕ ಮತ್ತು ಭಿಕ್ಷುಕನನ್ನು ನೋಡಿ ಸಂಸಾರವನ್ನು ತೊರೆಯುವ ಈ ಪುರಾಣೀಕರಿಸಿದ ಕಥೆ ರೂಪಕ ಭಾಷೆಯದ್ದಾಗಿರಬೇಕು. ಚರಿತ್ರೆಯ ಆಳಕ್ಕಿಳಿದು ನೋಡುವ ಅಂಬೇಡ್ಕರ್ ನದಿ ವ್ಯಾಜ್ಯದಂತಹ ಎರಡು ರಾಜ್ಯಗಳ ನಡುವಿನ ಹೋರಾಟವನ್ನು ತಪ್ಪಿಸಲು ಸಿದ್ಧಾರ್ಥ ರಾಜ್ಯವನ್ನು ತೊರೆಯಬೇಕಾಯಿತೆಂದು ವಿವರಿಸುತ್ತಾರೆ.

ಕ್ರಿ.ಪೂ. ಆರನೆಯ ಶತಮಾನ ಹಲವು ವೈಚಾರಿಕ ವಾದಗಳ ಹುಟ್ಟಿಗೆ ಕಾರಣವಾಗಿದೆ. ಈ ಎಲ್ಲಾ ಸಿದ್ಧಾಂತಗಳಲ್ಲಿ ಕಾಣುವ ಸಾಮಾನ್ಯವಾದ ವಿಚಾರವೆಂದರೆ ವೈದಿಕ ಪಾರಮ್ಯದ ವಿರೋಧ. ಈ ವಿರೋಧವನ್ನು ಕಂಡುಕೊಂಡ ಮಾರ್ಗ ಮಾತ್ರ ದೊಡ್ಡ ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು. ಸಮಾಜದ ಅಸಮಾನತೆಯನ್ನು ಒಪ್ಪುವ ಮತ್ತು ಅಮೂರ್ತದಲ್ಲಿ ತನ್ನ ವಿಚಾರವನ್ನು ಮಂಡಿಸುವ, ವಿಚಾರವನ್ನು ಪ್ರತಿಭಟಿಸದೆ ವೇದ ಸಮಾಜದ ಹೊರಗುಳಿದ ಜನರಿಗೆ ಬೇರೆ ಮಾರ್ಗವೇ ಇರಲಿಲ್ಲ. ಬುದ್ಧನ ವಿಚಾರಗಳು ಹೇಗೆ ಹರಿದು ಬಂದಿವೆ ಎಂಬ ಚಾರಿತ್ರಿಕ ಬೆಳವಣಿಗೆಯನ್ನು ಅಂಬೇಡ್ಕರ್ ‘ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿಯಲ್ಲಿ ಸ್ಪಷ್ಟವಾದ ವಿವರಣೆಯನ್ನು ನೀಡುತ್ತಾರೆ. ಬುದ್ಧ ಕೊಟ್ಟ ವಿಚಾರ ವಾಸ್ತವದ ಬದುಕಿಗೆ ನೀಡಿದ ಮಾರ್ಗವಾಗಿತ್ತೇ ಹೊರತು ಕಣ್ಣಿಗೆ ಕಾಣದ, ಕೈಗೆಟುಕದ ಆತ್ಮ, ಪರಮಾತ್ಮನ ಚಿಂತೆ ಅದಾಗಿರಲಿಲ್ಲ.

ಬುದ್ಧ ಎಲ್ಲೂ ತನ್ನನ್ನು ದೇವರೆಂದು ಹೇಳಿಕೊಳ್ಳಲಿಲ್ಲವೆಂದು ನಾಗಾರ್ಜುನ ತನ್ನ ‘ಮಧ್ಯಮಕ ಕಾರಿಕಾ’ದಲ್ಲಿ ಮತ್ತೆಮತ್ತೆ ಹೇಳುತ್ತಾನೆ.
ಬೌದ್ಧ ಧರ್ಮವಾಗಲಿ ಅಥವಾ ಬೇರೆ ಯಾವುದೇ ಧರ್ಮವಾಗಲೀ ನಾವಿಂದು ಕೇಳಿಕೊಳ್ಳಬೇಕಾಗಿರುವುದು ಇವತ್ತಿನ ಬದುಕಿಗೆ ಎಷ್ಟು ಸಮಂಜಸ ಮತ್ತು ಎಷ್ಟರಮಟ್ಟಿಗೆ ಅದು ನಮ್ಮ ಬದುಕನ್ನು ನಿರ್ದೇಶಿಸುತ್ತದೆ.

ಬುದ್ಧನ ತತ್ವ ಜನರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಹಲವು ರೀತಿಯಲ್ಲಿ ಕಾರಣವಾಗಿದ್ದು, ಗೊತ್ತಿದ್ದೋ ಗೊತ್ತಿಲ್ಲದೆಯೇ ಅದು ಭಾರತೀಯನ ಬದುಕಿನ ಭಾಗವಾಗಿದೆ. ಬೌದ್ಧ ಧರ್ಮದ ಅಧ್ಯಯನ ಮಾಡುವ ವಿದ್ವಾಂಸರು ಬೌದ್ಧ ಧರ್ಮದ ಬೆಳವಣಿಗೆಯನ್ನು ಗುರುತಿಸಿ ಅನಂತರದಲ್ಲಿ ಅದರ ಪತನವನ್ನು ಗುರುತಿಸುತ್ತಾ ಬಂದಿದ್ದಾರೆ. ಆದರೆ ಬೌದ್ಧ ಧರ್ಮ ಧಾರ್ಮಿಕ ಆಚರಣೆಯಾಗಿ ನಶಿಸಿಹೋಗಿದ್ದರೂ ಜನರ ಬದುಕಿನ ಭಾಗವಾಗಿ ಹರಿದುಬಂದಿದೆ ಎಂದು ಹೇಳಲು ಹಲವು ನಿದರ್ಶನಗಳು ದೊರೆಯುತ್ತವೆ. ಬೌದ್ಧರ ಹತ್ಯೆ ಬೌದ್ಧ ಧರ್ಮವನ್ನು ಮರೆಮಾಡಲು ಸಾಧ್ಯವಾಗಿದೆಯೇ ಹೊರತು ಜನಪದರ ಬದುಕಿನ ಭಾಗವೇ ಆಗಿಹೋದ ಬೌದ್ಧ ತತ್ವಗಳನ್ನು ಅಳಿಸಿ ಹಾಕಲು ಸಾಧ್ಯವಾಗಿಲ್ಲ. ಬೌದ್ಧ ಚಿಂತನೆ ಕಾಲದೇಶಗಳನ್ನು ಮೀರಿ ಹರಡುತ್ತಾ ಬಂದಿದೆ. ವೈಚಾರಿಕತೆ, ತರ್ಕ, ಅನುಭವ ವೇದ್ಯವಾದ ಸತ್ಯ, ಸಮಾನತೆ, ವ್ಯಕ್ತಿಯ ವಿಮೋಚನೆ ಇಂತಹ ಆಲೋಚನೆಯ ಮೇಲೆ ಚಿಂತನೆಯನ್ನು ಮಾಡಬಲ್ಲ ಯಾವುದೇ ತತ್ವಜ್ಞಾನಿ ಮರಳಿ ಬೌದ್ಧ ತತ್ವದ ಒಳಹೊಕ್ಕು ನೋಡಬೇಕಾಗುತ್ತದೆ.

ಭಾರತದ ಮಟ್ಟಿಗಂತೂ ವೈದಿಕ ನಂಬಿಕೆಗಳನ್ನು ಕುರಿತಾದ ಪ್ರಶ್ನೆ ಮತ್ತು ಪ್ರತಿಭಟನೆ ನಿರಂತರವಾಗಿ ಈ ನಾಡಿನಲ್ಲಿ ನಡೆಯುತ್ತಾ ಬಂದಿದೆ. ವಿರೋಧವೇ ಒಂದು ಧಾರೆಯಾಗಿ ಹರಿದು ಬರದಿದ್ದರೂ, ಮತ್ತೆ ಮತ್ತೆ ವೈಚಾರಿಕತೆ ತಲೆ ಎತ್ತಿ ಬ್ರಾಹ್ಮಣ್ಯವನ್ನು ಪ್ರಶ್ನಿಸಿದೆ.
ಬುದ್ಧನ ನಂತರ ಬಂದ ಪುರಾಣಗಳಲ್ಲಿ - ‘ವಾಯುಪುರಾಣ’, ‘ಮತ್ಸ್ಯ ಪುರಾಣ’, ‘ಅಗ್ನಿಪುರಾಣ’-ಗಳು ಬುದ್ಧನನ್ನು ಕಠಿಣವಾಗಿ ಟೀಕೆ ಮಾಡಿವೆ. ಕೆಲವು ನೇರವಾಗಿಯೇ ಖಂಡಿಸಿವೆ. ವೈದಿಕ ಯಜ್ಞ ಯಾಗಗಳನ್ನು ನಾಶ ಮಾಡಿದವನೆಂದೂ ಹೇಳುತ್ತವೆ. ಆದರೆ ‘ವಿಷ್ಣುಪುರಾಣ’ ರಚನೆಯಾಗುವ ಹೊತ್ತಿಗೆ ಬುದ್ಧನನ್ನು ದಶಾವತಾರಗಳಲ್ಲಿ ಕಡೆಯವನೆಂದು ಹೇಳಲಾಗುತ್ತದೆ. ಆ ಹೊತ್ತಿಗೆ ಬೌದ್ಧರು ಪ್ರಬಲ ಶತ್ರುಗಳಾಗಿರಲಿಲ್ಲವೆನಿಸುತ್ತದೆ. ಜಗತ್ತಿಗೆ ವಿಶಿಷ್ಟವಾದ ರಾಜಕೀಯ ಚಿಂತನೆಯನ್ನು ನೀಡಿದ ಅಶೋಕನ ಒಟ್ಟಾರೆ ಆಲೋಚನೆಯ ನೆಲೆಗಟ್ಟು ಬುದ್ಧನ ವಿಚಾರವೇ ಆಗಿದೆ. ಕಾಲಕಾಲಕ್ಕೆ ಪರಿಷ್ಕೃತಗೊಂಡು ಹರಿದುಬಂದ ಚಿಂತನೆಯನ್ನು ಲಿಖಿತರೂಪಕ್ಕೆ ತಂದ ಹೆಗ್ಗಳಿಕೆ ಅಶೋಕನಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ನಾಡಿನಾದ್ಯಂತ ಶಿಲಾಶಾಸನಗಳ ಮೇಲೆ ನಶಿಸಿಹೋಗದಂತೆ ಕೆತ್ತಿಸುವ ಬಹುದೊಡ್ಡ ಯೋಜನೆಯನ್ನೇ ರೂಪಿಸುತ್ತಾನೆ. ಅಕ್ಷರ ಎಂದರೆ ನಶಿಸಿಹೋಗದೆ ಇರುವುದು. ವೇದ ಸಾಹಿತ್ಯ ಮೌಖಿಕವಾಗಿ ಮಾತ್ರವೇ ಉಳಿಯುವಂತೆ ಯೋಜಿಸಿಕೊಂಡ ಬ್ರಾಹ್ಮಣರ ಶೈಲಿಗೆ ವಿರುದ್ಧವಾಗಿ ಅಶೋಕ ನಡೆದುಕೊಳ್ಳುತ್ತಾನೆ. ವಿಸ್ತಾರವಾದ ಜನಸ್ತೋಮವನ್ನು ತಲುಪುವುದು ಅವನ ಉದ್ದೇಶವಾಗಿರುತ್ತದೆ. ಆ ಬರವಣಿಗೆ ಈ ನಾಡಿನ ಎಲ್ಲಾ ಲಿಪಿಗೂ ಮೂಲವಾಗುತ್ತದೆ. ಈ ನಾಡನ್ನು ಅಕ್ಷರಸ್ಥಗೊಳಿಸಲು ಬೌದ್ಧ ಧರ್ಮಕ್ಕೆ ಸಾಧ್ಯ ವಾಗುತ್ತದೆ. ಕಂಠಸ್ಥವಾದ, ಸಂಸ್ಕೃತ ಭಾಷೆಯೂ ಲಿಪಿಯನ್ನು ಅಳವಡಿಸಿಕೊಂಡಾಗ ಬರಹ ರೂಪ ದಲ್ಲಿ ಬಂದ ಕೃತಿ ಅಶ್ವಘೋಷನ ‘ಬುದ್ಧ ಚರಿತೆ’. ಈ ಕೃತಿ ಬರುವ ಹೊತ್ತಿಗೆ ಬುದ್ಧನ ಬದುಕು ಸಾಕಷ್ಟು ಪುರಾಣದ ಸ್ವರೂಪವನ್ನು ಪಡೆದು ಕೊಂಡಿರುವುದು ಸ್ಪಷ್ಟವಾಗುತ್ತದೆ. ಬುದ್ಧನ ವಿಚಾರ, ಆರುನೂರು ವರ್ಷಗಳು ಕಳೆಯುವ ಹೊತ್ತಿಗೆ ಬುದ್ಧನ ಸುಂದರವಾದ ಶಿಲ್ಪಗಳು ಮೂಡಿಬಂದಿದ್ದವು. ಗ್ರೀಕ್ ಹಾಗೂ ಭಾರತೀಯ ಅಂಶಗಳು ಮೇಳೈಸಿ ಒಡಮೂಡಿದ ಬುದ್ಧನ ಶಿಲ್ಪ ಭಾರತೀಯ ಶಿಲ್ಪಕಲೆಗೆ ಭದ್ರವಾದ ಬುನಾದಿಯನ್ನು ಹಾಕಿತು. ಅಲ್ಲಿಂದ ಮುಂದೆ ಬೆಳೆದ ಶಿಲ್ಪಗಳು ಶಿವನದ್ದಾಗಲೀ, ವಿಷ್ಣುವಿನ-ದ್ದಾಗಲೀ, ಜಿನಬಿಂಬವಾಗಲೀ ಬುದ್ಧ ಶಿಲ್ಪದ ಅನುಕರಣೆಯೇ ಆಗಿತ್ತು. ದೂರದೃಷ್ಟಿಯುಳ್ಳವನು, ಜ್ಞಾನಿ ಎಂದು ಸಾಂಕೇತಿಕವಾಗಿ ಹೇಳಲು ಹೊರಟ ಶಿಲ್ಪಿ ಬುದ್ಧನ ಹಣೆಯಲ್ಲಿ ಊರ್ಣವನ್ನು ಸಂಕೇತವಾಗಿ ಬಳಸಿದ ಅದರ ಮುಂದುವರಿದ ರೂಪವೋ ಎನ್ನುವಂತೆ ಶಿವನ ಶಿಲ್ಪವನ್ನು ಕೆತ್ತುವಾಗ ಹಣೆಗೆ ಮತ್ತೊಂದು ಕಣ್ಣನ್ನೋ ಚಿತ್ರಿ ಸಿದ. ಹೀನಯಾನ ಬೌದ್ಧಧರ್ಮ ಬುದ್ಧನನ್ನು ಹಲವು ಸಂಕೇತಗಳಲ್ಲಿ ಸೂಚಿಸಿತ್ತು. ಬೋಧಿ ವೃಕ್ಷ, ಪಾದದ ಚಿತ್ರ, ತೆರೆದ ಸಿಂಹಾಸನ ಇತ್ಯಾದಿ. ಆನಂತರದ ಎಲ್ಲಾ ದೇವಾಲಯಗಳಲ್ಲೂ ಪಾದದ ಶಿಲ್ಪವನ್ನು ಸಂಪ್ರದಾಯಗೊಳಿಸಿಕೊಳ್ಳ ಲಾಯಿತು. ಅಶೋಕ ಸ್ತಂಭವೇ ಸಂಕೇತವಾಗಿ ಕಾಣಿಸಿಕೊಂಡದ್ದು ಅಷ್ಟೇ ಕುತೂಹಲಕರವಾಗಿದೆ. ಬೌದ್ಧ ಸ್ತೂಪಗಳ ಮುಂದೆ ಅಶೋಕ ಸ್ತಂಭವನ್ನು ನಿಲ್ಲಿಸಿದ್ದು ಅದನ್ನೇ ಅನುಸರಿಸಿ ಬಸದಿಗಳ ಮುಂದೆ ಬ್ರಹ್ಮ ಸ್ತಂಭ, ಶಿವಾಲಯಗಳ ಮುಂದೆ ನಂದಿಧ್ವಜ ಸ್ಥಾಪಿತವಾದವು. ಮೂಲ ಉದ್ದೇಶ ಮರೆತು ಕಂಬಗಳು ಒಂದು ರೀತಿಯಲ್ಲಿ ಆಯಾ ಮತದ ಧ್ವಜಸ್ತಂಭಗಳಾದವು. ಇಂತಹ ನೂರಾರು ರೂಪಾಂತರಗೊಂಡ ಸಾಂಸ್ಕೃತಿಕ ತುಣುಕುಗಳನ್ನು ಕಲೆಹಾಕಬಹುದು.

ಇದೆಲ್ಲಕ್ಕೂ ಮುಖ್ಯವಾಗಿ ಎರಡು ಪ್ರಧಾನವಾದ ಕುರುಹುಗಳೆಂದರೆ ಜನಪದರ ಬದುಕಿನಲ್ಲಿ ಸೇರಿದ ವೈಚಾರಿಕತೆ ಮತ್ತು ಜ್ಞಾನಧಾರೆಯಾಗಿ ಹರಿದು ಬಂದ ಕ್ರಮ. ದುಡಿಮೆಯನ್ನೇ ನಂಬಿ ಬದುಕುವ ವರ್ಗ ಯಾವುದೇ ವಿವರಣೆಯಿಲ್ಲದೆ ಕರ್ಮ ಸಿದ್ಧಾಂತಿಗಳೇ ಆಗಿದ್ದಾರೆ. ಹುಟ್ಟು ಸಾವುಗಳಲ್ಲಿ ಸರಳವಾದ ಆಚರಣೆಗಳಲ್ಲಿ ಬದುಕನ್ನು ನಿಭಾಯಿಸುತ್ತಾರೆ. ಆತ್ಮ ಪರಮಾತ್ಮನ ಕಲ್ಪನೆ ಅವರನ್ನು ಭೀಕರವಾಗಿ ಕಾಡಿಸದೆ ಇರುವುದರಿಂದ ಬದುಕು ಸರಾಗವಾಗಿ ಸಾಗುತ್ತದೆ. ಇತ್ತೀಚೆಗೆ ಬೌದ್ಧರಾದ ಕೆಲವರು ತಮ್ಮ ದಿನನಿತ್ಯದ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಗೊಂದಲಕ್ಕೆ ಬಿದ್ದದ್ದನ್ನು ಕಂಡಿದ್ದೇನೆ. ವ್ಯಕ್ತಿ ಸತ್ತಾಗ ಅವನ ದೇಹವನ್ನು ತೊಳೆದು ಮಣ್ಣು ಮಾಡುವ ಇಲ್ಲವೆ ಚಿತೆಯಾಗಿಸುವ ಜನಪದರ ಬದುಕು ಸಹಜವಾಗಿಯೇ ವೈಚಾರಿಕವಾಗಿ ಚರಿತ್ರೆಯುದ್ದಕ್ಕೂ ಟೀಕೆಗೊಳಗಾದ ವೈದಿಕರ ಸಂಕೀರ್ಣವಾದ ಮತ್ತು ಅವರಿಗೇ ರೇಜಿಗೆ ಹುಟ್ಟಿಸುವಂತಹ ಆಚರಣೆಗಳಿಗಿಂತ ಜನಸಾಮಾನ್ಯರ ಆಚರಣೆಗಳು ಹೆಚ್ಚು ಬದುಕಿಗೆ ಪೂರಕವಾಗಿ ಕಾಣುತ್ತವೆ. ಆದ್ದರಿಂದ ಯಾವ ವಿಶೇಷ ಆಚರಣೆಯನ್ನು ಮಾಡದೆ ಅವನು ಬೌದ್ಧನಾಗುತ್ತಾನೆ. ಹೀಗೆ ಭಾರತದ ಜೀವನ ಕ್ರಮದಲ್ಲಿ ಹೆಚ್ಚು ವಾದಕ್ಕೆ ಒಳಗಾದ ನಡೆಗಳೆಂದರೆ ಮಾಂಸಾಹಾರ ಮತ್ತು ಸನ್ಯಾಸ.

ಬುದ್ಧ ಹಾಗೂ ಮಹಾವೀರ ಬೋಧಿಸಿದ ಅಹಿಂಸೆಯ ತತ್ವಗಳು ಸರಳೀಕೃತಗೊಂಡು ಸಸ್ಯಾಹಾರದ ಆಚರಣೆಯಲ್ಲಿ ಕೊನೆಗೊಂಡಿವೆ. ಅವರು ಬೋಧಿಸಿದ ಪ್ರಾಣಿದಯೆ ಸಸ್ಯಾಹಾರದ ಶ್ರೇಷ್ಠತೆಯಲ್ಲಿ ಕೊನೆಗೊಂಡಿದೆ. ಅದು ಜನರ ಆಹಾರ ಕ್ರಮದ ನಿಂದನೆಯಾಗಿರದೆ ಮೂಢನಂಬಿಕೆಯ ಪ್ರಾಣಿ ಬಲಿಯ ಖಂಡನೆಯಾಗಿತ್ತು. ವೈದಿಕ ಆಚರಣೆಗಳಲ್ಲಿ ಉತ್ಕರ್ಷವೇ ಯಜ್ಞವಾಗಿದ್ದು ಅದಕ್ಕೆ ಅರ್ಪಿಸುತ್ತಿದ್ದ ಪ್ರಾಣಿಗಳ ಹವಿಸ್ಸು ಅದರ ನಿಂದನೆಗೆ ಕಾರಣವಾಗಿತ್ತು. ಕೃಷಿಗೆ ಅಗತ್ಯವಾದ ದನಗಳ ರಕ್ಷಣೆ ಮತ್ತು ಕಾಡುಪ್ರಾಣಿಗಳ ರಕ್ಷಣೆಯ ಆಲೋಚನೆ ಮತ್ತು ಜೀವಗಳೆಲ್ಲದರ ಸಮಾನ ಗೌರವ, ಪ್ರಾಣಿದಯೆ, ಹಾಗೂ ಅಹಿಂಸೆಯ ಪರಿಕಲ್ಪನೆಯನ್ನು ಹುಟ್ಟುಹಾಕಿತ್ತು. ಅದು ವ್ಯಕ್ತಿಯೊಬ್ಬನ ಆಹಾರದ ನಿಂದನೆಯಾಗಿರಲಿಲ್ಲ. ಪ್ರಾಣಿದಯೆಯ ಅರ್ಥ ಸಂಕುಚಿತಗೊಂಡು ಸಮಾಜದಲ್ಲಿ ಈಗಾಗಲೇ ಇದ್ದ ಮೇಲು ಕೀಳಿನ ಭಾವನೆಗೆ ಮತ್ತಷ್ಟು ಒತ್ತಾಸೆ ನೀಡಿದ್ದು ದುರಂತವೇ ಆಗಿದೆ.

ಬೌದ್ಧಧರ್ಮದ ಟೀಕಾಕಾರರು ಸನ್ಯಾಸವನ್ನು ಜೀವ ವಿರೋಧವಾಗಿ ಖಂಡಿಸುತ್ತಾರೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಇನ್ನೂ ವಿಕಾಸವಾಗುತ್ತಿದ್ದ ಸಮಾಜದಲ್ಲಿ ಗಂಡು ಹೆಣ್ಣಿನ ಸಂಬಂಧಗಳ ನಡುವೆ ಇದ್ದ ಸಂಕೀರ್ಣತೆ ಇಂತಹ ಪರ್ಯಾಯದ ಸೂಚನೆಗೆ ಕಾರಣವಾಗಿರಲೂಬಹುದು. ವಿವಾಹ ಒಂದು ಸಾಂಸ್ಥಿಕ ರೂಪವನ್ನು ಪಡೆದು ಅದರ ಮೇಲೆ ನಿರ್ಬಂಧವನ್ನು ಹೇರುವುದು ಅನಿವಾರ್ಯವಾಗಿರಬೇಕು. ಪುರುಷ ಪ್ರಧಾನ ಮೌಲ್ಯಗಳು ಆರ್ಭಟಿಸಿ ಹೆಣ್ಣಿನ ಸ್ಥಾನ ಸಂಕುಚಿತಗೊಂಡ ಸಂದರ್ಭದ ಹಿನ್ನೆಲೆಯಲ್ಲಿ ಸನ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕಲುಷಿತಗೊಂಡು ಸಂಸಾರವೇ ಅದರ ತಿರಸ್ಕಾರಕ್ಕೆ ಕಾರಣವಾಗಿದೆ. ಕಡೆಯದಾಗಿ ಆದರೆ ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಭಾರತದ ಜ್ಞಾನಮಾರ್ಗದಲ್ಲಿ ಬೌದ್ಧ ಚಿಂತನೆ ನಿರಂತರತೆಯನ್ನು ಕಾಯ್ದುಕೊಂಡಿದೆ. ಆಧುನಿಕ ಕಾಲದ ಜಗತ್ತಿನ ಪ್ರಮುಖ ಚಿಂತನೆಗಳಿಗೆ ಬೌದ್ಧ ಚಿಂತನೆ ಅಡಿಪಾಯವನ್ನು ಹಾಕಿದೆ. ಅದು ಬೆಳೆದು ಬಂದ ಕ್ರಮವನ್ನು ಕೇವಲ ಭಾರತದ ಚಿಂತನೆಗಳಲ್ಲಿ ಮಾತ್ರವೇ ಹುಡುಕುವುದು ಸಾಧುವಲ್ಲ. ತರ್ಕ, ಅಸ್ತಿತ್ವವಾದವನ್ನು ಪ್ರತಿಪಾದಿಸುವ ಆಧುನಿಕ ಯುರೋಪಿನ ಚಿಂತನೆಗಳಲ್ಲೂ ನಾವು ಬೌದ್ಧ ಚಿಂತನೆಯ ಮುಂದುವರಿಕೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಭಾರತದಲ್ಲಿ ಬಂದ ನಾಗಾರ್ಜುನ ತರ್ಕದ ಧಾಟಿಯನ್ನು ಅಲ್ಲಮನಲ್ಲಿ ಕಾಣುವುದು ಹಾಗೂ ಜನಪದರ ಮನಸೂರೆಗೊಂಡ ಮಂಟೇಸ್ವಾಮಿಯಲ್ಲಿ ನೋಡುವುದು ಅಥವಾ ಇದೆಲ್ಲವನ್ನೂ ಶ್ರಮಣ ಪರಂಪರೆಯೆಂದು ಗುರುತಿಸುವುದು ಒಂದು ಕ್ರಮವಾಗುತ್ತದೆ. ಶ್ರಮಣ ಪರಂಪರೆ ವೈದಿಕ ಚಿಂತನೆಗೆ ಮುಖಾಮುಖಿಯಾಗಿ ಹರಿದುಬಂದಿದೆ. ಅದರ ಅಸ್ತಿತ್ವವೇ ಇಲ್ಲವೇನೋ ಎನ್ನುವಂತೆ ಇಂದು ನಮ್ಮ ಪಠ್ಯಕ್ರಮವನ್ನೇ ರೂಪಿಸಿ ಕೊಂಡಿರುವುದು ಒಂದು ಜ್ಞಾನಧಾರೆಯನ್ನೇ ಮರೆಮಾಚಿದ ಕ್ರೌರ್ಯವಾಗಿದೆ. ಬೌದ್ಧರ ಹತ್ಯೆಗಿಂತಲೂ ಚಿಂತನೆಯ ಕಗ್ಗೊಲೆ ಸಮಾಜವನ್ನು ಕಗ್ಗತ್ತಲೆಗೆ ತಳ್ಳಿದೆ.

ಆಧುನಿಕ ಸಂದರ್ಭದಲ್ಲಿ ಪಾಶ್ಚಿಮಾತ್ಯ ವಿಚಾರಧಾರೆಯೆಂದು ಮೆಟೀರಿಯಲಿಸಂನ ಹೆಸರಿನಲ್ಲಿ ಮಾರ್ಕ್ಸ್‌ನ ಚಿಂತನೆಯ ಹೆಸರಿನಲ್ಲಿ ಸ್ವೀಕರಿಸುತ್ತಿದ್ದೇವೆ. ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಲು ಬೇಕಾದ ಹರಿತವಾದ ಖಡ್ಗವಾಗಿ ಕಾಣಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಅತ್ಯಾಧುನಿಕ ಮನುಷ್ಯನಿಗೆ ಬೇಕಾದ ಶೋಷಣೆಯ ವಿರುದ್ಧದ ಸಮಾನತೆಯನ್ನು ಪ್ರತಿಪಾದಿಸುವ ಮೇಲು ಕೀಳಿನ ಭೇದವನ್ನು ತಿರಸ್ಕರಿಸುವ ಬುದ್ಧನ ವಿಚಾರವನ್ನು ಅಂಬೇಡ್ಕರ್ ಒಪ್ಪಿ ಅಪ್ಪಿಕೊಳ್ಳುತ್ತಾರೆ. ದುಡಿಮೆಯನ್ನೇ ನಂಬಿ, ಸಹಜವಾಗಿಯೇ ಸರಳವಾಗಿ ಬದುಕುವ ಮೌನದಲ್ಲಿ ಬೌದ್ಧರೇ ಆಗಿದ್ದಾರೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.