ನೂರಾಇಪ್ಪತ್ತೈದು ವರ್ಷ ಹಳೆಯ ಮಾತಿದು. ದೂರದ ಚಿಕಾಗೋ ನಗರದಲ್ಲಿ ಒಂದು ವಿಶ್ವಧರ್ಮ ಸಮ್ಮೇಳನ ನಡೆದಿತ್ತು. ಎಲ್ಲ ಧರ್ಮಸಮ್ಮೇಳನಗಳಂತೆ ಇದೂ ಕೂಡ ಬೋರು ಹಿಡಿಸುವುದರಲ್ಲಿತ್ತು. ಆಗ, ಒಬ್ಬ ಅನಾಮಧೇಯ ಯುವಸನ್ಯಾಸಿ ಸಮ್ಮೇಳನದ ವೇದಿಕೆಗೆ ಬಂದ. ಧರ್ಮಾಂಧತೆಯನ್ನುಖಂಡಿಸಿದ. ‘ತನ್ನ ಮತದ ಬಗೆಗಿನ ದುರಭಿಮಾನ ಹಾಗೂ ಇತರ ಮತಗಳ ಬಗೆಗಿನ ದ್ವೇಷವು ಈ ಸುಂದರ ಜಗತ್ತನ್ನು ರಾಹುವಿನಂತೆ ಮುಸುಕಿದೆ. ಮನುಕುಲವನ್ನು ಹಿಂಸೆಯಿಂದ ತುಂಬಿದೆ, ನರರಕ್ತದಿಂದ ತೋಯಿಸಿದೆ, ಸಂಸ್ಕೃತಿ ನಾಶಮಾಡುತ್ತಿದೆ.

ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ ಮನುಕುಲವು ಇಂದಿಗಿಂತಲೂ ಮಿಗಿಲಾಗಿ ಮುಂದುವರೆದಿರುತ್ತಿತ್ತು’ ಎಂದ. ಅಲ್ಲಿ ನೆರೆದಿದ್ದ ವಿವಿಧ ಧರ್ಮಗಳ ಪ್ರತಿನಿಧಿಗಳತ್ತ ಪ್ರೀತಿಯಿಂದ ನೋಡಿ ‘ಸಹೋದರ ಸಹೋದರಿಯರೇ...’ ಎಂದು ಧೈರ್ಯದಿಂದ ಸಂಬೋಧಿಸಿದ. ಆತನ ಯೌವನ, ಆತ್ಮವಿಶ್ವಾಸ ಹಾಗೂ ಆತನ ಮಾತಿನಲ್ಲಡಗಿದ್ದ ಸರಳಸತ್ಯವನ್ನು ಗ್ರಹಿಸಿದ- ಆತನಿಗಿಂತ ಹಿರಿಯರಾದ ಇತರರು, ಒಮ್ಮೆಗೇ ನಿದ್ರೆತಿಳಿದೆದ್ದವರಂತೆ ಚಪ್ಪಾಳೆಯಿಕ್ಕಿ ಯುವಕನ ಮಾತುಗಳನ್ನು ಸ್ವಾಗತಿಸಿದ್ದರು. ಆತನ ಹೆಸರು ಸ್ವಾಮಿ ವಿವೇಕಾನಂದ.

ಇಂದು, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ಓದದೆ ಇರುವ ವಿದ್ಯಾವಂತ ಭಾರತೀಯನೇ ಇರಲಿಕ್ಕಿಲ್ಲ. ಓದುತ್ತೇವೆ. ಓದಿ ಆಕಳಿಸುತ್ತೇವೆ. ಆ ಮಾತುಗಳನ್ನು ಅದರ ಭೂಮಿಕೆಯಿಂದ ಬೇರ್ಪಡಿಸಿ ಧಾರ್ಮಿಕ ಬಡಬಡಿಕೆಯಾಗಿ ಓದಿ ನಿದ್ರೆಗೆ ಜಾರುತ್ತೇವೆ. ವಿವೇಕಾನಂದರು ತಮ್ಮ ಮಾತನ್ನು ಅಂದು ಆಡಿದ್ದು, ವಿಶ್ವದ ಅತಿದೊಡ್ಡ ಹಾಗೂ ಅತಿವ್ಯವಸ್ಥಿತ ಯಂತ್ರನಾಗರೀಕತೆಯನ್ನುದ್ದೇಶಿಸಿ. ಮತ್ತೊಂದು ಕೆಲಸವನ್ನು ಮಾಡಿದ್ದರು ಅಂದು ಅವರು. ಹಿಂದು ಸಂನ್ಯಾಸವನ್ನು ಏಳು ಸಮುದ್ರಗಳಾಚೆಗೆ ದರದರನೆ ಎಳೆದು ತಂದು ಆಧುನಿಕತೆಗೆ ಎದುರಾಗಿ ನಿಲ್ಲಿಸಿ ಜಾತಿಭ್ರಷ್ಟವಾಗಿಸಿದ್ದರು. ಹೀಗೆ ಮಾಡಿ, ಧರ್ಮಾಂಧತೆಗೆ, ಇತ್ತ ಯಂತ್ರನಾಗರೀಕತೆ ಅತ್ತ ಪುರೋಹಿತಶಾಹಿ ಕಂದಾಚಾರ ಎರಡನ್ನೂ ಜವಾಬ್ದಾರರನ್ನಾಗಿ ಮಾಡಿದ್ದರು ವಿವೇಕಾನಂದರು. ಈ ಭೂಮಿಕೆಯನ್ನು ಮರೆತು ವಿವೇಕಾನಂದರನ್ನು ಓದಿದರೆ ಅವು ಬರಡು ಮಾತುಗಳಾಗದೆ ಇನ್ನೇನಾದೀತು ಹೇಳಿ.

ಗಾಂಧೀಜಿಯವರ ಮಾತುಗಳನ್ನೂ ಸಹ ಹೀಗೆಯೇ ಓದಿದ್ದೇವೆ ನಾವು. ವಿಕೇಂದ್ರೀಕೃತ ಗ್ರಾಮಸ್ವರಾಜ್ಯವನ್ನು, ಅವರು, ಕೇಂದ್ರೀಕೃತ ಯಂತ್ರನಾಗರೀಕತೆಗೆ ವಿರುದ್ಧವಾಗಿ ನಿಲ್ಲಿಸಿದ್ದರು. ವೈರುಧ್ಯದ ಈ ಭೂಮಿಕೆಯನ್ನು ಬೇಕೆಂದೇ ಕಡೆಗಣಿಸುತ್ತೇವೆ ನಾವು.

ಈ ಹಿಂದೆ ನೆಹರೂ ಮಾಡಿದಂತೆ, ಈಗ ನರೇಂದ್ರ ಮೋದಿಯವರು ಉಗ್ರವಾಗಿ ಮಾಡುತ್ತಿರುವಂತೆ, ಯಂತ್ರನಾಗರೀಕತೆಯೆಂಬ ತೋಳಕ್ಕೆ ಒಂದು ಬೃಹತ್ ಮಂತ್ರಾಲಯ ಕಟ್ಟುತ್ತೇವೆ, ಪಕ್ಕದಲ್ಲಿ ಪಂಚಾಯಿತಿ ರಾಜ್ಯವೆಂಬ ಕುರಿಮರಿಗೆ ಚಿಕ್ಕದೊಂದು ಕೊಟ್ಟಿಗೆ ಕಟ್ಟುತ್ತೇವೆ. ಕುರಿಮರಿಗಳನ್ನು ಮೇಯ್ದು ಮೇಯ್ದು ಕೊಬ್ಬಿ ಬೆಳೆಯುತ್ತದೆ ತೋಳ. ಹೀಗೆ ಮಾಡಿ, ಗಾಂಧೀಜಿ ಒಬ್ಬ ಅಯಶಸ್ವಿ ಹಳ್ಳಿವಾದಿ ಎಂದು ಅನುಕಂಪ ತೋರಿಸುತ್ತೇವೆ.

ಗಾಂಧೀಜಿ ಕೇವಲ ಹಳ್ಳಿವಾದಿಯಾಗಿರಲಿಲ್ಲ, ಆಧುನಿಕ ಹಳ್ಳಿವಾದಿಯಾಗಿದ್ದರು. ಆಧುನಿಕ ವಿಚಾರಗಳನ್ನು ಕಳಚಿರಿ ಎನ್ನಲಿಲ್ಲ ಅವರು, ನಗರಗಳನ್ನು ಕಳಚಿರಿ ಎಂದರು ಅಷ್ಟೆ. ಇಂತಹದ್ದೇ ತಪ್ಪನ್ನು ನಾವು ಅಂಬೇಡ್ಕರ್ ಬಗ್ಗೆ ಮಾಡುತ್ತೇವೆ. ಮೀಸಲಾತಿ ಎಂಬ ಬಂಗಾರದ ತತ್ತಿ ಇಡುವ ಕೋಳಿ ಅಂಬೇಡ್ಕರ್ ಎಂದು ಸೀಮಿತವಾಗಿ ಗ್ರಹಿಸಿ ನಮ್ಮ ಹಿತ್ತಲಿನ ಕೋಳಿಗೂಡುಗಳಲ್ಲಿ ಅವರನ್ನು ಬಂಧಿಸಿ ಇಡುತ್ತೇವೆ. ಅವರು ಜಾತಿವಿನಾಶದ ಹರಿಕಾರರಾಗಿದ್ದರು, ವಿಚಾರವಾದಿಯಾಗಿದ್ದರು.

ಕಾರ್ಲ್ಮಾರ್ಕ್ಸ್ನ ಬಗ್ಗೆಯೂ ಇಂತಹದ್ದೇ ತಪ್ಪನ್ನು ಮಾಡುತ್ತೇವೆ. ಆತ ಧರ್ಮವನ್ನು ಅಫೀಮು ಎಂದು ಕರೆದ ಎಂದು ಅರ್ಧಸತ್ಯ ನುಡಿಯುತ್ತೇವೆ. ಧರ್ಮವೆಂಬುದು ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ ಎಂಬ
ಆತನ ಇನ್ನರ್ಧ ಮಾತನ್ನು ಬೇಕೆಂದೇ ನುಂಗಿಹಾಕಿಬಿಡುತ್ತೇವೆ.

ಭಾರತವು ಈಗ ಧರ್ಮಾಂಧತೆಯ ಬೆಂಕಿಯಲ್ಲಿ ಉರಿಯುತ್ತಿದೆ. ಚಿಕಾಗೋ ಪಟ್ಟಣವನ್ನು ನಾಚಿಸುವಷ್ಟು ಬಡತನ ಭಾರತದ ಮಹಾನಗರಗಳಲ್ಲಿ ಶೇಖರಣೆಯಾಗಿದೆ. ಗಾಂಧೀಜಿಯವರನ್ನು ನಾಚಿಸುವಷ್ಟು ಯಂತ್ರನಾಗರೀಕವಾಗಿದೆ ಭಾರತ. ಅಂಬೇಡ್ಕರ್ ಅವರಿಗೆ ಅಪಥ್ಯವಾಗಿದ್ದ, ಹಾಗೂ ಚಿಕಾಗೋ ನಗರದ ಕೂ-ಕ್ಲುಕ್ಸ್- ಕ್ಲ್ಯಾನ್ ಮಾದರಿಯ, ಪುರೋಹಿತಶಾಹಿ ರಾಜಕಾರಣವು ಭಾರತದ ರಾಜಗದ್ದುಗೆ ಏರಿ ಕುಳಿತಿದೆ. ಕಾರ್ಲ್ಮಾರ್ಕ್ಸ್ನನ್ನು ನಾಚಿಸಬಲ್ಲಷ್ಟು ಅಸಮಾನತೆ ಇಲ್ಲಿ ರಾರಾಜಿ
ಸುತ್ತಿದೆ. ಎಲ್ಲ ರೀತಿಯಿಂದಲೂ ಭಾರತ ಚಿಕಾಗೋ ನಗರವಾಗಿದೆ.

ಪುರೋಹಿತಶಾಹಿ ರಾಜಕಾರಣ! ಇದು ಮೇಲುನೋಟಕ್ಕೆ ಮಾತ್ರ ಪುರೋಹಿತ. ಒಳಗೆ ಅಪ್ಪಟ ಬಂಡವಾಳಶಾಹಿ. ಗ್ರಾಮಗಳನ್ನು ಬರಡಾಗಿಸುವುದು ಹಾಗೂ ಬೆರಳೆಣಿಕೆಯ ವಾಣಿಜ್ಯೋದ್ಯಮಿಗಳನ್ನು ವಿಶ್ವದ
ಅತಿದೊಡ್ಡ ಶ್ರೀಮಂತರನ್ನಾಗಿಸುವುದು ಇದರ ಮೂಲ ಉದ್ದೇಶ. ಜನರನ್ನು ಯಾಮಾರಿಸಲೆಂದೇ ಒಂದಿಷ್ಟು ಪಟಾಕಿ ಹಾರಿಸುತ್ತದೆ ಇದು. ಒಂದಿಷ್ಟು ಮುಸ್ಲಿಮರು ಹಾಗೂ ಒಂದಿಷ್ಟು ಕ್ರೈಸ್ತರನ್ನು ಬಲಿಪಶುವನ್ನಾಗಿ ಮಾಡುತ್ತದೆ. ಹಿಂದೂ ಪಟಾಕಿಯ ಸದ್ದು ಹಿಂದೂಬಂಡವಾಳವನ್ನು ಬಚ್ಚಿಡುತ್ತದೆ.

ನೀವು ಗಮನಿಸಿದ್ದೀರೋ ಇಲ್ಲವೋ ಕಾಣೆ. ಈಚಿನ ದಿನಗಳಲ್ಲಿ ಇದು ಒಬ್ಬ ಹಿಂದೂಸನ್ಯಾಸಿಯನ್ನು ಭಾರತದ ಬೀದಿಬೀದಿಗಳಲ್ಲಿ ಥಳಿಸುತ್ತಿದೆ. ಮತ್ತೆ ಮತ್ತೆ ಥಳಿಸುತ್ತಿದೆ. ಥಳಿಸಿಕೊಳ್ಳುತ್ತಿರುವ ಸ್ವಾಮಿಅಗ್ನಿವೇಶ್
ಒಬ್ಬ ಹೆಸರಾಂತ ಸಾಮಾಜಿಕ ಕಾರ್ಯಕರ್ತ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಈತ, ಅಡ್ವಾನಿ ಹಾಗೂ ವಾಜಪೇಯಿಯವರ ಜೊತೆಜೊತೆ ಕೆಲಸ ಮಾಡಿದ್ದ. ಈಗ ಸ್ವಾಮಿಅಗ್ನಿವೇಶರಿಗೆ ಎಂಬತ್ತು ವರ್ಷ. ಈ ಮುದುಕನನ್ನು ಏಕೆ ಥಳಿಸಲಾಗುತ್ತಿದೆ ಗೊತ್ತೆ? ಅತಿರೇಕ ಮಾಡುತ್ತಿದ್ದಾನಂತೆ ಮುದುಕ.

ವಿವೇಕಾನಂದರು ಅತಿರೇಕ ಮಾಡಲಿಲ್ಲವೇ? ಅಥವಾ, ಮಾತುಕೊಟ್ಟಂತೆ ಪಾಕಿಸ್ತಾನಕ್ಕೆ ನಲವತ್ತೆಂಟು ಕೋಟಿ ರೂಪಾಯಿ ಕೊಡಲೇಬೇಕು ಎಂದು ಹಟಹಿಡಿದ ಗಾಂಧೀಜಿ ಅತಿರೇಕ ಮಾಡಲಿಲ್ಲವೇ? ಅಥವಾ ಅಕ್ಕಮಹಾದೇವಿ, ಬತ್ತಲೆ ನಿಂತು ಅತಿರೇಕ ಮಾಡಲಿಲ್ಲವೇ? ಜೆರೂಸಲೇಮಿನ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಎದುರಿಗಿದ್ದ ಗಿರವಿಅಂಗಡಿಗಳನ್ನೆಲ್ಲ ಬುಡಮೇಲು ಮಾಡಿದ ಏಸುಕ್ರಿಸ್ತ ಅತಿರೇಕ ಮಾಡಲಿಲ್ಲವೇ? ತಾನೇ ವ್ಯಾಪಾರಸ್ಥನಾಗಿದ್ದುಕೊಂಡು, ಬಡ್ಡಿ ವ್ಯವಹಾರ ಮಾಡಬೇಡಿ ಎಂದು ಹಟಮಾಡಿದ ಪ್ರವಾದಿಗಳು ಅತಿರೇಕ ಮಾಡಲಿಲ್ಲವೇ? ಅಗ್ನಿವೇಶರು ಈಗ ಮಾಡುತ್ತಿರುವುದು ಹಾಗೂ ಇವರೆಲ್ಲ ಹಿಂದೆಮಾಡಿದ್ದು ಸಭ್ಯ ಅತಿರೇಕ. ಅದನ್ನು ಸತ್ಯಾಗ್ರಹ ಎಂದು ಕೂಡಾ ಕರೆಯಲಾಗುತ್ತದೆ.

ಒಬ್ಬ ಹಿಂದೂ ಸನ್ಯಾಸಿಯನ್ನು ಕೊಲ್ಲಲಿಕ್ಕೆ ನೀವು ಸಿದ್ಧರಿದ್ದರೆ ಕೊಲ್ಲಿಸಿಕೊಳ್ಳಲಿಕ್ಕೆ ನಾನು ಸಿದ್ಧ ಎನ್ನುತ್ತಿದ್ದಾರೆ.ಅಗ್ನಿವೇಶರು. ಅಗ್ನಿವೇಶರನ್ನು ಥಳಿಸುವುದು ಹಾಗೂ ಥಳಿಸುತ್ತಿರುವಾಗ ಮೂಕಪ್ರೇಕ್ಷಕರಂತೆ ನೋಡುತ್ತ ನಿಲ್ಲುವುದು ಅಸಭ್ಯ ಅತಿರೇಕ. ಹಿಂಸಾಚಾರ ಎಂದು ಕರೆಯಲಾಗುತ್ತದೆ ಅದನ್ನು. ದೇಶದ ಪ್ರಧಾನಿ, ಪೊಲೀಸರು, ಮಂತ್ರಿಮಹೋದಯರು, ಹಾಗೂ ನಾವು, ಎಲ್ಲರೂ ಹಿಂಸಾಚಾರಿಗಳಾಗಿದ್ದೇವೆ. ಗೌರಿಯನ್ನು ಕೊಂದವರು, ದಾಭೋಲ್ಕರ್ ಅವರನ್ನು ಕೊಂದವರು, ಪನ್ಸಾರೆಯವರನ್ನು ಕೊಂದವರು, ಕಲ್ಬುರ್ಗಿಯವರನ್ನು ಕೊಂದವರು... ಎಲ್ಲರೂ ಹಿಂಸಾಚಾರಿಗಳೇ.

ಉಗ್ರವಾದಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ, ಸತ್ಯವೂ ತಿಳಿಯುವುದಿಲ್ಲ. ಶಂಖದಿಂದ ಬಂದರೆ ಮಾತ್ರ, ನೀರು ತೀರ್ಥ ಎಂದು ತಿಳಿಯುತ್ತದೆ. ಪ್ರಧಾನಿಯವರ ಬಾಯಿಂದ ಬಂದರೆ ಮಾತ್ರ, ಮಾತು ಸತ್ಯ ಎಂದು ತಿಳಿಯುತ್ತದೆ ಉಗ್ರವಾದ. ಋಷಿಮೂಲ ಹುಡುಕುತ್ತದೆ. ಅಗ್ನಿವೇಶರ ಮೂಲ ಹುಡುಕಿ ಅಲ್ಲಿರಬಹುದಾದ ಕೆಸರನ್ನೆಲ್ಲ ಹೊರಹಾಕುತ್ತಿದೆ. ಋಷಿಮೂಲ ಹಾಗೂ ನದಿಮೂಲ ಹುಡುಕಬಾರದು. ಗಂಗೆ ಯಮುನೆ ಕಾವೇರಿಯರನ್ನೆಲ್ಲ ಕೆಸರಗುಂಡಿಗಳನ್ನಾಗಿ ನೋಡುವುದು ಸತ್ಯವನ್ನು ಮರೆಮಾಚುವ ಒಂದು ನೀಚ ವಿಧಾನ ಅಷ್ಟೆ.

ಮರೆಮಾಚಲಾಗುತ್ತಿರುವ ಧಾರ್ಮಿಕ ಸತ್ಯದ ಬಗ್ಗೆ ಲೇಖಕ ಕಲಾವಿದರು ಚಿಂತಿತರಾಗಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ, ಸೆಪ್ಟೆಂಬರ್ 2 ರಂದು, ಭಾನುವಾರ, ಅವರು ಸೇರಲಿದ್ದಾರೆ. ಧಾರ್ಮಿಕ ಉಗ್ರವಾದಕ್ಕೂ ಯಂತ್ರನಾಗರೀಕತೆಗೂ ಇರುವ ಸಂಬಂಧವನ್ನು ಹರಿಯಬಹುದೇ, ಸೌಮ್ಯವಾದಿಧರ್ಮ ಹಾಗೂ ಗ್ರಾಮಸ್ವರಾಜ್ಯಗಳನ್ನು ಬೆಸೆಯಬಹುದೇ ಎಂದು ವಿಚಾರಮಾಡಲಿದ್ದಾರೆ.

ನಲವತ್ತು ವರ್ಷಗಳ ಹಿಂದೊಮ್ಮೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಲೇಖಕ ಕಲಾವಿದರು ಹೀಗೆಯೇ ನೆರೆದಿದ್ದರು. ಆ ನೆರವಿಯನ್ನು ಬಂಡಾಯ ಸಾಹಿತ್ಯ ಸಮ್ಮೇಳನ ಎಂದು ಕರೆಯಲಾಗಿತ್ತು. ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆಯನ್ನು ಅಂದು ಘಂಟಾಘೋಷವಾಗಿ ಸಾರಲಾಗಿತ್ತು. ಈ ಬಾರಿಯ ಸಮ್ಮೇಳನವು ಅದಕ್ಕಿಂತ ಹಿರಿದಾದ ಜವಾಬ್ದಾರಿ ಹೊತ್ತಿದೆ. ಮೂರು ಪ್ರಮುಖ ಸಂಗತಿಗಳನ್ನು ಸಮ್ಮೇಳನವು ಚರ್ಚಿಸಲಿದೆ.

ಸೆಕ್ಯುಲರ್ವಾದ ಎಂದರೇನು ಎಂಬ ಮಹತ್ವದ ಸಂಗತಿ ಅಲ್ಲಿ ಚರ್ಚಿತವಾಗಲಿದೆ. ಸದ್ಯಕ್ಕೆ ಸೆಕ್ಯುಲರ್ವಾದದ ಎರಡು ವಿಕಾರಮಾದರಿಗಳು ನಮ್ಮ ಮುಂದಿವೆ. ಎರಡೂ ಸಹ ಯೂರೋಪಿನಲ್ಲಿ ಜನಿಸಿದ ಮಾದರಿಗಳು. ಒಂದು, ಸೆಕ್ಯುಲರಿಸಂ ಎಂಬ ಹೆಸರಿನಲ್ಲಿ ಧರ್ಮ ಹಾಗೂ ರಾಜಕಾರಣಗಳನ್ನು ಹರಿದು ಎರಡು ಮಾಡುತ್ತದೆ. ಇನ್ನೊಂದು ಪುರೋಹಿತಶಾಹಿ ರಾಜಕಾರಣ. ಜರ್ಮನಿಯಲ್ಲಿ ಹಿಟ್ಲರ್, ಇಟಲಿಯಲ್ಲಿ ಮುಸಲೋನಿ ಸಿದ್ಧಪಡಿಸಿದ ಮಾದರಿ. ಮೊದಲನೆಯ ಮಾದರಿ ಅಲ್ಪಸಂಖ್ಯಾತರನ್ನು ಓಲೈಸಿದರೆ, ಎರಡನೆಯ ಮಾದರಿ ಬಹುಸಂಖ್ಯಾತರನ್ನು ಓಲೈಸುತ್ತದೆ. ಹಾಗೂ ಅಲ್ಪಸಂಖ್ಯಾತರನ್ನು ಹಿಂಸಿಸುತ್ತದೆ. ಒಂದು ಸ್ಯೂಡೋಸೆಕ್ಯುಲರ್ ಆದರೆ ಇನ್ನೊಂದು ಸ್ಯೂಡೋರಿಲಿಜಿಯಸ್ ಆಗಿದೆ.

ಲೇಖಕ ಕಲಾವಿದರು ಸೂಚಿಸಲಿರುವ ಮೂರನೆಯ ಮಾದರಿ ಭಾರತೀಯವಾದದ್ದೂ ಹೌದು ವಿಶ್ವಾತ್ಮಕವಾದದ್ದೂ ಹೌದು. ಸಂತರ ಮಾದರಿ ಅದು. ಈ ಮಾದರಿಯಲ್ಲಿ ದೇವರೇ ಸಮಾಜವಾದಿ, ಸಂತನೇ ಸಾಮಾಜಿಕ ಕಾರ್ಯಕರ್ತ. ಗ್ರಾಮಸ್ವರಾಜ್ಯ ಎನ್ನುತ್ತಾರೆ ಈ ಮಾದರಿಯನ್ನು.

ಎರಡನೆಯದಾಗಿ ಲೇಖಕ ಕಲಾವಿದರ ಸಾಂಸ್ಕೃತಿಕ ಜವಾಬ್ದಾರಿಯನ್ನು ಕುರಿತು ಚರ್ಚಿಸಲಿದೆ ಸಮ್ಮೇಳನ. ಲೇಖಕ ಕಲಾವಿದರಿಗೂ ಅವರವರ ಸಮುದಾಯಗಳ ಹಿತ್ತಲಿಗೂ ಇರುವ ಕರುಳುಬಳ್ಳಿಯ ಸಂಬಂಧವನ್ನು ಕುರಿತು ಚರ್ಚಿಸಲಿದೆ. ಈ ಸಂಬಂಧವೇ ದೇಸೀಯತೆ ಮಾತೃಭಾಷೆ ಅಥವಾ ಜಾನಪದ. ಪಕ್ಕದ ಮನೆಯವನು ಮುಸಲ್ಮಾನನಾದರೇನಂತೆ ಪಕ್ಕದಮನೆಯವನೇ ತಾನೆ ಎನ್ನುತ್ತದೆ ಈ ಸಂಬಂಧ. ಪಕ್ಕದಮನೆಯವನ ಮಾತೋಶ್ರೀ ಪಕ್ಕದ ದೇಶದವಳಾದರೇನಂತೆ ತಾಯಿಯೇ ತಾನೆ ಎನ್ನುತ್ತದೆ ಈ ಸಂಬಂಧ.

ಮೂರನೆಯದಾಗಿ ರಾಷ್ಟ್ರೀಯತೆ ಎಂದರೇನು ಎಂದು ಚರ್ಚಿಸಲಿದೆ ಸಮ್ಮೇಳನ. ಭಗತ್ಸಿಂಗನಂತೆ ನಾವೂ ಸಹ ಏಕಕಾಲಕ್ಕೆ ದೇಶಭಕ್ತರೂ ಹೌದು ವಿಶ್ವಾತ್ಮಕ ಪ್ರಜೆಗಳೂ ಹೌದು ಎಂದು ಸಾರಲಿದೆ ಸಮ್ಮೇಳನ. ಸಮ್ಮೇಳನವು ಧಾರ್ಮಿಕ ರಾಷ್ಟ್ರೀಯತೆಯನ್ನು ತಿರಸ್ಕರಿಸಲಿದೆ. ನಾಲ್ಕನೆಯದಾಗಿ, ವಸುಧ ಏವ ಕುಟುಂಬಕಂ ಎಂಬ ತಿಳಿವಳಿಕೆಯನ್ನು ಚರ್ಚಿಸಲಿದೆ ಸಮ್ಮೇಳನ. ಭಾರತದ ಸಂವಿಧಾನದಲ್ಲಿ ವಸುಧೆಯನ್ನು ಸಲಹುವ ಆಶಯ, ಅರ್ಥಾತ್ ಭೂಮಿಯನ್ನು ಸಲಹುವ ಆಶಯ ಮಿಳಿತವಾಗಲಿ ಎಂಬ ನೈತಿಕ ಒತ್ತಾಯ ಹೇರಲಿದೆ ಸಮ್ಮೇಳನ.

ಕೊನೆಯ ಮಾತು: ಉಗ್ರವಾದಿಗಳು ಕೇವಲ ಹಿಂದುತ್ವದಲ್ಲಿ ಅಥವಾ ಜಮಾಯತ್ತಿನಲ್ಲಿ ಅಥವಾ ಕ್ರೈಸ್ತರಲ್ಲಿ ಮಾತ್ರವೇ ಇಲ್ಲ. ಮಾರ್ಕ್ಸ್ವಾದಿಗಳಲ್ಲಿ ಲೋಹಿಯಾವಾದಿಗಳಲ್ಲಿ, ಗಾಂಧಿ ಅಂಬೇಡ್ಕರ್ ಹಿತ್ತಲಿನಲ್ಲಿ, ಕೂಡ ಇದ್ದೇವೆ. ಅಷ್ಟೇ ಏಕೆ ನನ್ನಲ್ಲೂ ಕೂಡ ಒಬ್ಬ ಉಗ್ರವಾದಿ, ಹೊರಬರಲೆಂದು ಹೊಂಚುತ್ತ, ಕುಳಿತಿದ್ದಾನೆ. ಈ ತಿಳಿವಳಿಕೆ ಪ್ರತಿಯೊಬ್ಬ ಲೇಖಕ ಕಲಾವಿದನಿಗೂ ಇರಬೇಕು ಎಂದು ನಂಬುತ್ತೇನೆ ನಾನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.