ಕಳೆದ ಎರಡು ಮೂರು ದಶಕಗಳಿಂದ ಬೆಂಗಳೂರಿನ ಸಂಗೀತ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳ ಬಗೆಗಿನ ಪುಟ್ಟ ಟಿಪ್ಪಣಿ ಇದು. ಈ ಬಹುರೂಪಿ ನಗರದಲ್ಲಿ ವಿವಿಧ ಬಗೆಯ ಸಂಗೀತ ಕಿವಿಗೆ ಬೀಳುತ್ತದೆ. ಹೀಗೆ ಸಿಗುವ ಸ್ವದೇಶಿ ಮತ್ತು ವಿದೇಶಿ ಪ್ರಕಾರಗಳ ಬಗ್ಗೆ ಕುತೂಹಲ ಇರುವ ಸಂಗೀತ ಪ್ರೇಮಿಗಳ ಬದಲಾಗುತ್ತಿರುವ ಸಂಗೀತದ ಅಭಿರುಚಿಯನ್ನು ನೀವು ಗಮನಿಸಿರಬಹುದು.

ಸುಮಾರು ಮೂವತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಅಂದ ಕೂಡಲೇ ಅದು ಕರ್ನಾಟಕ ಸಂಗೀತವಾಗಿರುತ್ತಿತ್ತು. ಇಲ್ಲಿ ಕನ್ನಡಿಗರು ಮತ್ತು ದಕ್ಷಿಣ ಭಾರತೀಯರು ಬಹುಸಂಖ್ಯೆಯಲ್ಲಿದ್ದ ಕಾರಣ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುವ ಅಭಿರುಚಿ ಇತ್ತು. ರಾಮನವಮಿ, ಅಂದರೆ ಎಪ್ರಿಲ್ ಮೇ ತಿಂಗಳ ಬೇಸಿಗೆಯಲ್ಲಿ, ಇಲ್ಲಿ ಸಂಗೀತ ಕಛೇರಿಗಳು ಹೆಚ್ಚಾಗಿ ನಡೆಯುತ್ತಿದ್ದವು. ಹೊಸ ಬೆಂಗಳೂರಿಗರಿಗೆ ಈ ಸಂಪ್ರದಾಯದ ಬಗ್ಗೆ ಪರಿಚಯವಿಲ್ಲ.

ಈ ಮೂವತ್ತು ವರ್ಷಗಳಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಹಿಂದುಸ್ತಾನಿ ಸಂಗೀತದ ಅಭಿರುಚಿ ಇಲ್ಲಿ ದಟ್ಟವಾಗಿ ಹರಡಿದೆ. ಈ ಊರಿನ ದಕ್ಷಿಣ ಭಾರತೀಯರು ಕೆಲವರು ಈಗ ಕರ್ನಾಟಕ ಸಂಗೀತಕ್ಕಿಂತ ಹಿಂದುಸ್ತಾನಿ ಸಂಗೀತ ಹೆಚ್ಚಾಗಿ ಕೇಳುತ್ತಾರೆ. ಹಿಂದಿ ಸಿನಿಮಾ ಹಾಡುಗಳು ಹಿಂದುಸ್ತಾನಿ ಶೈಲಿಗೆ ಹತ್ತಿರವಾಗಿರುವ ಕಾರಣವೋ ಏನೋ ಉತ್ತರ ಭಾರತೀಯ ಶಾಸ್ತ್ರೀಯ ಪರಂಪರೆ ಕರ್ನಾಟಕ ಶಾಸ್ತ್ರೀಯ ಪರಂಪರೆಗಿಂತ ಗ್ಲಾಮರಸ್ ಆಗಿ ಕಾಣುತ್ತದೆ. ಹಿಂದುಸ್ತಾನಿ ಸಂಗೀತದ ರೊಮ್ಯಾನ್ಸ್ ಬೆಂಗಳೂರಿಗರನ್ನು ಗಟ್ಟಿಯಾಗಿ ಆವರಿಸಿದೆ. ಸುಮಾರು ಎಂಬತ್ತರ ದಶಕದಲ್ಲಿ ಹಿಂದೂಸ್ತಾನಿ ಸಂಗೀತಗಾರರು ಧಾರವಾಡದಿಂದ ಬೆಂಗಳೂರಿಗೆ ವಲಸೆ ಬರುವುದು ಪ್ರಾರಂಭವಾಯಿತು. ಇಲ್ಲಿ ಹಿಂದುಸ್ತಾನಿ ಸಂಗೀತ ಕಲಿಸುವವರ ಸಂಖ್ಯೆ ಹಾಗಾಗಿ ಹೆಚ್ಚಾಯಿತು. ಇಂದು ಬೆಂಗಳೂರಿನ ಬಡಾವಣೆಗಳಲ್ಲಿ ಕರ್ನಾಟಕ ಸಂಗೀತದಷ್ಟೇ ಹಿಂದುಸ್ತಾನಿ ಸಂಗೀತ ಕಲಿಸುವವರು ಸಿಗುವ ಸಂಭವವಿದೆ. ಕೆಲವು ಬಡಾವಣೆಗಳಲ್ಲಿ ಕರ್ನಾಟಕ, ಹಿಂದುಸ್ತಾನಿ ಎರಡು ಪ್ರಕಾರವೂ ಇಲ್ಲದೆ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಮೇಲುಗೈ ಇದೆ. ಕರ್ನಾಟಕ ಸಂಗೀತ ಪ್ರೇಮಿಗಳು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಹಚ್ಚಿಕೊಂಡಂತೆ ಹಿಂದುಸ್ತಾನಿ ಸಂಗೀತ ಪ್ರೇಮಿಗಳು ಕರ್ನಾಟಕ ಸಂಗೀತವನ್ನು ಹಚ್ಚಿಕೊಂಡಂತೆ ಕಾಣುವುದಿಲ್ಲ.

ಬ್ರಿಟಿಷರು ಇಲ್ಲಿದ್ದ ಕಾರಣ ಬೆಂಗಳೂರಿಗೆ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಪರಂಪರೆ ಇದೆ. ಆದರೂ ಇಲ್ಲಿ ದೊಡ್ಡದೆನಿಸುವ ಪಿಯಾನೋ ಅಂಗಡಿಯಿರಲಿಲ್ಲ. ಈಗ ಕೋರಮಂಗಲದಲ್ಲಿ ಎರಡು ದೊಡ್ಡ ಪಿಯಾನೋ ಮಾರುವ ಅಂಗಡಿಗಳು ನಡೆಯುತ್ತಿವೆ. ಹಾಗೆಯೇ ಪಿಯಾನೋ ಕಲಿಸುವ ಕೇಂದ್ರಗಳೂ ಹೆಚ್ಚಿವೆ.

ಕರ್ನಾಟಕ ಸಂಗೀತ ಈ ಎಲ್ಲ ಸವಾಲುಗಳನ್ನು ಎದುರಿಸುತ್ತಿದೆ. ಅದರ ಹಿರಿಮೆಯ ಬಗ್ಗೆ ತಿಳಿಹೇಳುವ ಜನರ ಅಗತ್ಯ ಹಿಂದೆಂದಿಗಿಂತಲೂ ಈಗ ಇದ್ದಂತಿದೆ. ಕೆಲವು ದಶಕಗಳ ಹಿಂದೆ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕರ್ನಾಟಕ ಸಂಗೀತವನ್ನೇ ಆಧರಿಸಿ ಹಾಡುಗಳನ್ನು ಮಾಡುತ್ತಿದ್ದರು. ಇಂದು ನಮ್ಮ ಚಿತ್ರಗಳೇ ಕಾಮಿಡಿ ಸನ್ನಿವೇಶಗಳಿಗೆ ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಬಳಸುತ್ತಿವೆ! ಉತ್ಕೃಷ್ಟವಾದ ‘ಕ್ಲಾಸ್ಸಿಸಂ’ ಇಂಥ ತಮಾಷೆ, ಗೇಲಿಯನ್ನು ಎದುರಿಸಿಯೇ ಗೆಲ್ಲಬೇಕು.

ಇನ್ನು ಸಿನಿಮಾ ಸಂಗೀತದಲ್ಲಿ ಕೂಡ ಮಾರ್ಪಾಡುಗಳು ಆಗಿವೆ. ದಕ್ಷಿಣ ಭಾರತದ ಸಿನಿಮಾ ಸಂಗೀತದ ತವರೂರು ಚೆನ್ನೈ. ಆದರೆ ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಸ್ಥಾಪನೆಯಾಗಿ ಕನ್ನಡ ಚಿತ್ರಗಳ ಹಾಡು ಮತ್ತು ಹಿನ್ನೆಲೆ ಸಂಗೀತ ಇಲ್ಲಿಯೇ ರೆಕಾರ್ಡ್ ಆಗುತ್ತಿದ್ದ ಸ್ವಾಭಿಮಾನಿ ಕಾಲವಿತ್ತು. ರೆಕಾರ್ಡಿಂಗ್ ಸೆಷನ್ಸ್‌ಗೆ ಬೇಕಾದ ಕೌಶಲ್ಯವನ್ನು ಬೆಳೆಸಿಕೊಂಡ ಸಂಗೀತಗಾರರ ತಂಡ ಇಲ್ಲಿ ತಯಾರಾಗಿತ್ತು. ಈಚಿನ ವರ್ಷಗಳಲ್ಲಿ ಈ ತಂಡ ಚಿಕ್ಕದಾಗಿಹೋಗಿದೆ. ಕೀಬೋರ್ಡ್ ಮತ್ತು ಮ್ಯೂಸಿಕ್ ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಬಳಕೆ ಹೆಚ್ಚಾದಂತೆ ವಯಲಿನ್ ನುಡಿಸುವವರ ಸಂಖ್ಯೆ ಕ್ಷೀಣಿಸಿದೆ. ಪ್ರತಿಭಾವಂತ ವಯಲಿನ್ ವಾದಕರು ಸ್ಟುಡಿಯೋ ವೃತ್ತಿ ಬಿಟ್ಟು ಬೇರೆ ನೌಕರಿಯಲ್ಲಿ ತೊಡಗಿದ್ದಾರೆ. ಕನ್ನಡ ಸಿನಿಮಾ ಸಂಗೀತ ಸಂಯೋಜಕರು ಮದರಾಸಿಗೆ ಹೋಗಿ ಅಲ್ಲಿ ರೆಕಾರ್ಡ್ ಮಾಡುವ ಪದ್ಧತಿ ಮರುಕಳಿಸಿದೆ.

ಇಲ್ಲಿನ ಕೆಲವು ಸೋಲೋ ವಾದಕರು (ಫ್ಲೂಟ್ ನುಡಿಸುವ ಭುಟ್ಟೋ, ಗಿಟಾರ್ ನುಡಿಸುವ ಆಲ್ವಿನ್ ಫೆರ್ನಾನ್ಡಿಸ್) ಇಂದಿಗೂ ಬೇಡಿಕೆಯಲ್ಲಿದ್ದಾರೆ. ಹಾಡುಗಾರರ ಪೈಕಿ ಬೆಂಗಳೂರಿನವರಿಗಿಂತ ಹೊರಗಿನವರೇ ಹೆಚ್ಚು ಅವಕಾಶಗಳನ್ನು ಪಡೆದು ಮಿಂಚುತ್ತಿದ್ದಾರೆ.
ಆರ್ಕೆಸ್ಟ್ರಾ ಸಂಗೀತವೂ ಮೊದಲಿನಂತಿಲ್ಲ. ಲೈವ್ ನುಡಿಸುವ ಸಂಗೀತಗಾರರು ವಿರಳವಾಗಿಬಿಟ್ಟಿದ್ದಾರೆ. ರೆಕಾರ್ಡೆಡ್ ಮ್ಯೂಸಿಕ್ ಹಾಕಿ ಧ್ವನಿ ಮಾತ್ರ ಸೇರಿಸುವ ಅಭ್ಯಾಸ ಹೆಚ್ಚಾಗಿದೆ. (ವಿಪರ್ಯಾಸವೆಂದರೆ, ಎ.ಆರ್. ರೆಹಮಾನ್ ಅವರಂಥ ದೊಡ್ಡ ಕಲಾವಿದರೂ ಹೀಗೆ ಮಾಡುತಿದ್ದಾರೆ). ನುಡಿಸುವಂತೆ ನಟಿಸುವ ಕಲಾವಿದರು ಹೆಚ್ಚಾಗಿದ್ದಾರೆ.

ಸುಗಮ ಸಂಗೀತ ಒಂದು ಮಧ್ಯಮ ಮಾರ್ಗ. ಶಾಸ್ತ್ರೀಯ ಸಂಗೀತದಷ್ಟು ಕಠಿಣವೂ ಅಲ್ಲದ, ಸಿನಿಮಾ ಸಂಗೀತದಷ್ಟು ಸಡಿಲವೂ ಅಲ್ಲದ ಪ್ರಕಾರ ಅದು. ಎಂಬತ್ತರ ದಶಕದಲ್ಲಿ ಅರಳಿದ ಅದರ ಆಲ್ಬಮ್ ಮಾಡುವ ಉತ್ಸಾಹ ಈಗ ಕುಂದಿಹೋಗಿದೆ. ಎಷ್ಟೋ ಧ್ವನಿ ಮುದ್ರಿಕೆಗಳು ಆ ಪ್ರಕಾರದ ಮುಕ್ತತೆಯನ್ನು ಬಳಸಿಕೊಳ್ಳದೆ ಸೊರಗಿದ ಉದಾಹರಣೆಗಳು ಕಾಣಬಹುದು. ಆದರೆ ಸುಗಮ ಸಂಗೀತಗಾರರು ಲೈವ್ ಆಗಿ ಎಲ್ಲೆಡೆ ಹಾಡುತ್ತಿದ್ದಾರೆ. ಅವರಿಗೆ ದೊರಕುತ್ತಿದ್ದ ರೇಡಿಯೊ ಬೆಂಬಲ ಈಗ ಇಲ್ಲ. ಖಾಸಗಿ ರೇಡಿಯೊ ಚಾನೆಲ್‌ಗಳು ಭಾವಗೀತೆಗಳನ್ನು ಭಿತ್ತರ ಮಾಡುತ್ತಿಲ್ಲ. ಸಿನಿಮಾ ಸಂಗೀತ ಬಿಟ್ಟು ಬೇರೆ ಸಂಗೀತದಲ್ಲಿ ಪ್ರೈವೇಟ್ ಎಫ್ ಎಂ ಚಾನೆಲ್‌ಗಳಿಗೆ ಅಸಕ್ತಿಯಿಲ್ಲ.

ಆಕಾಶವಾಣಿಯ ನಿಯಮಗಳು ಹೊಸ ಯುಗದ ವಾಸ್ತವದಿಂದ ದೂರವಾಗಿಯೇ ಉಳಿದಿವೆ. ಒಂದು ಧ್ವನಿಮುದ್ರಿಕೆಯಲ್ಲಿನ ಕಲಾವಿದರೆಲ್ಲ ಆಲ್ ಇಂಡಿಯಾ ರೇಡಿಯೊ ಧ್ವನಿ ಪರೀಕ್ಷೆ ಪಾಸ್ ಮಾಡಿರಬೇಕು ಎಂದು ನಿಯಮ ಇರುವುದರಿಂದ, ಹೊಸ ಆಲ್ಬಂಗಳು ಯಾವುವೂ ಅಲ್ಲಿ ಬರದಂತೆ ಆಗಿಹೋಗಿದೆ. ಪ್ರತಿಭಾನ್ವಿತ ಕಲಾವಿದರ ಪೈಕಿ ಎಷ್ಟೋ ಜನ ಅಲ್ಲಿ ಆಡಿಶನ್ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಅವರು ಹೊರತರುವ ಹಾಡುಗಳನ್ನು ರೇಡಿಯೊ ಪ್ರಸಾರ ಮಾಡುವುದೇ ಇಲ್ಲ. ಇಂದು ಕನ್ನಡ ರೇಡಿಯೊ ಮತ್ತು ಟೆಲಿವಿಷನ್ ಚಾನೆಲ್‌ಗಳ ಸಂಖ್ಯೆಯಲ್ಲಿ ದೊಡ್ಡದಾಗಿದೆ. ಕೆಲವು ಸಂಗೀತದ ರಿಯಾಲಿಟಿ ಶೋಗಳನ್ನು ಬಿಟ್ಟರೆ, ಸಂಗೀತಗಾರರ ಮಟ್ಟಿಗೆ ಎಲ್ಲ ಇದ್ದೂ ಏನೂ ಇಲ್ಲದ ಪರಿಸ್ಥಿತಿ ಬಂದು ಒದಗಿದೆ. ಹೊಸ ಭಾವಗೀತೆಗಳನ್ನು ಕೇಳುವ ಅವಕಾಶ ಶ್ರೋತೃಗಳಿಗೆ ಇಲ್ಲದಂತೆ ಆಗಿದೆ. ಸ್ವತಂತ್ರ ಸಂಗೀತಗಾರರೆಲ್ಲ ಸೇರಿ ತಮ್ಮ ಮತ್ತು ಶ್ರೋತೃಗಳ ಅಗತ್ಯಗಳಿಗೆ ರೇಡಿಯೊ ವಾಹಿನಿಗಳು ಸ್ಪಂದಿಸುವಂತೆ ಒತ್ತಾಯಿಸುವ ಸಂದರ್ಭ ಇದೆ.

ಸುಗಮ ಸಂಗೀತದಂತೆಯೇ ಮುಕ್ತವಾದ ಸಂಗೀತ ಪ್ರಕಾರಗಳನ್ನು ಬೆಂಗಳೂರಿನ ಬ್ಯಾಂಡ್‌ಗಳು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿವೆ. ಇಂಥ ತಂಡಗಳಿಗೆ ಒಂದಷ್ಟು ಯಶಸ್ಸು ದೊರಕಿದೆ. ಆದರೆ ಇಂಥ ಬ್ಯಾಂಡ್ಗಳು ಬರೆಯುವ, ಸಂಯೋಜಿಸುವ ಹಾಡುಗಳನ್ನು ರೇಡಿಯೊ ವಾಹಿನಿಗಳು ಪ್ರಸಾರ ಮಾಡುತ್ತಿಲ್ಲ. ಹೊಸ ಶಾಸ್ತ್ರೀಯ ಸಂಗೀತಗಾರರನ್ನು, ಪ್ರಯೋಗಾತ್ಮಕ ಸಂಗೀತಗಾರರನ್ನು ಹುರಿದುಂಬಿಸುವ ವಾತಾವರಣ ಬೆಂಗಳೂರಿಗೆ ಅಗತ್ಯವಾಗಿದೆ.

ಸಭಾಂಗಣ ಹುಡುಕುವ ಕಷ್ಟ
ಬೆಂಗಳೂರಿನ ಹೆಸರಾಂತ ಸಂಗೀತಗಾರರೊಬ್ಬರು ದೊಡ್ಡ ಉತ್ಸವವನ್ನು ಹಮ್ಮಿಕೊಂಡು ರವೀಂದ್ರ ಕಲಾಕ್ಷೇತ್ರ ಬುಕ್ ಮಾಡಲು ಓಡಾಡುತ್ತಿದ್ದರು. ಅವರು ಕೊಟ್ಟ ದಿನಾಂಕ ಸಭಾಂಗಣ ಬಿಡುವಾಗಿದೆ ಎಂದು ತಿಳಿದುಬಂದು ಉತ್ಸುಕರಾಗಿದ್ದರು. ಆದರೆ ಅದೇ ದಿನಾಂಕ ಯಾವುದೋ ಸರ್ಕಾರಿ ಕಾರ್ಯಕ್ರಮ ನಿಗದಿಯಾಗಿ ಬುಕಿಂಗ್ ಕೈ ತಪ್ಪಿ ಹೋಯಿತು. ಅದಾದ ನಂತರ ಹಲವು ಸಭಾಂಗಣಗಳನ್ನು ಸಂಪರ್ಕಿಸಿದರು. ಒಂದೊಂದು ಕಡೆ ಒಂದೊಂದು ನೆಪ ಹೇಳಿ ಅವರ ರಿಕ್ವೆಸ್ಟ್ ನಿರಾಕರಿಸಿದರು.

ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳಿಗೆ ಸಭಾಂಗಣ ಬಾಡಿಗೆ ಪಡೆಯುವುದು ಇಂದು ಕಷ್ಟದ, ಪ್ರಯಾಸದ ಕೆಲಸವಾಗಿಬಿಟ್ಟಿದೆ. ಶಾಲಾ ಕಾಲೇಜುಗಳು ಹಿಂದಿನಂತೆ ತಮ್ಮ ಸಭಾಂಗಣಗಳನ್ನು ಬಾಡಿಗೆಗೆ ಕೊಡುತ್ತಿಲ್ಲ. ಇದಕ್ಕೆ ಕಾರಣ ಅವರಿಗೂ ನಗರ ಪಾಲಿಕೆಗೂ ಎದ್ದಿರುವ ಒಂದು ವ್ಯಾಜ್ಯ. ಕೆಲವು ವಿದ್ಯಾ ಸಂಸ್ಥೆಗಳು ತಮ್ಮ ಸಭಾಂಗಣಗಳನ್ನು ಖಾಸಗಿ, ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಕೊಟ್ಟು ದೊಡ್ಡ ಮೊತ್ತದ ಬಾಡಿಗೆ ಪಡೆಯುತ್ತಿದ್ದರು. ಇದು ವಾಣಿಜ್ಯ ಎಂದು ಪರಿಗಣಿಸಿ ಪಾಲಿಕೆ ದೊಡ್ಡ ಮೊತ್ತದ ಟ್ಯಾಕ್ಸ್ ಹಾಕಿತು. ಇವರಿಬ್ಬರ ಜಗಳದಲ್ಲಿ ಬಡವಾದ ಕೂಸೆಂದರೆ ಸಂಸ್ಕೃತಿ. ವಿದ್ಯಾ ಸಂಸ್ಥೆಗಳು ತಮ್ಮ ಪ್ರದೇಶದ ಕಲೆ, ಸಾಹಿತ್ಯಕ್ಕೆ ಕೊಡುತ್ತಿದ್ದ ಸ್ಥಳಾವಕಾಶ ಈಗ ಇಲ್ಲವಾಗಿಹೋಗಿದೆ.

ವಿದ್ಯಾ ಸಂಸ್ಥೆಗಳು ಸಾರ್ವಜನಿಕ ಜಾಗದಲ್ಲಿಇರುತ್ತವೆ. ಪಬ್ಲಿಕ್ ಸ್ಪೇಸ್ ಆದ್ದರಿಂದ ಅವುಗಳಿಗೆ ಟ್ಯಾಕ್ಸ್ ವಿನಾಯಿತಿ ಇರುತ್ತದೆ. ಎಲೆಕ್ಷನ್ ಬಂದಾಗ ಸ್ಥಳ ತೆರವು ಮಾಡಿಕೊಡುವುದು ಹೇಗೆ ಅಗತ್ಯವೋ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೂಡ ಅವು ಅವಕಾಶ ಮಾಡಿಕೊಡಬೇಕು. ಶಾಲಾ ಕಾಲೇಜುಗಳು ದುರಾಸೆಯಿಂದ ಬಾಡಿಗೆ ವಸೂಲಿ ಮಾಡಿದರೆ ಹಾಗೆ ಮಾಡದಂತೆ ನೋಡಿಕೊಳ್ಳುವುದು ಪಾಲಿಕೆಯ ಹೊಣೆ. ಅದು ಬಿಟ್ಟು, ‘ಹೆಚ್ಚು ಕಂದಾಯ ಕಟ್ಟಿ ಏನು ಬೇಕಾದರೂ ಮಾಡ್ಕೊಳ್ಳಿ’ ಎಂಬ ಧೋರಣೆ ಇರಬಾರದು. ದುಡ್ಡಿನಲ್ಲೇ ಎಲ್ಲವನ್ನೂ ಇತ್ಯರ್ಥ ಮಾಡಲು ಮುಂದಾಗುವ ನಗರದ ಆತ್ಮ ಕೊಳಕಾಗಿಹೋಗುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.