ಸಿನಿಮಾ ನಟನಾಗಬೇಕು ಎಂಬ ಭಾರಿ ಕನಸು ಹೊತ್ತು ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಶಂಕರೇಗೌಡ ಗಂಗನಗೌಡ ಒಂದು ಕಾಲದಲ್ಲಿ ಗಾಂಧಿನಗರದಲ್ಲಿ ಸುತ್ತು ಹಾಕಿದ್ದರು. ದಾವಣಗೆರೆಯಲ್ಲಿ ಕಾಲೇಜು ವ್ಯಾಸಂಗ ಮಾಡುವಾಗ ದಿನವೂ ಎನ್ಫೀಲ್ಡ್ ಮೋಟರ್ ಬೈಕ್‌ನಲ್ಲಿ ಹೋಗುತ್ತಿದ್ದರು. ಆ ಕಾಲದಲ್ಲಿಯೇ ಅವರ ಬಳಿ ದೇಶದ ಐಷಾರಾಮಿ ಕಾರು ಎನಿಸಿಕೊಂಡಿದ್ದ ಕಾಂಟೆಸ್ಸಾ ಇತ್ತು. ಐಷಾರಾಮಿ ಬದುಕಿಗೆ ಒಗ್ಗಿಕೊಂಡಿದ್ದ ಶಂಕರೇಗೌಡರು ತಮ್ಮ ಈ ಎಲ್ಲ ವೈಭೋಗಗಳನ್ನು ಮನೆಯ ಹಿಂಭಾಗದಲ್ಲಿಯೇ ಹರಿಯುವ ತುಂಗಭದ್ರಾ ಹೊಳೆಯಲ್ಲಿ ತೇಲಿಬಿಟ್ಟು ಈಗ ಸಹಜ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅತ್ಯಂತ ಸರಳ ಜೀವನ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಯಾವ ಚಿಂತೆಯೂ ಇಲ್ಲದ ಅವರಿಗೆ ಕನಿಷ್ಠ ತಮ್ಮ ಭೂಮಿಯನ್ನು ಭ್ರಷ್ಟಮುಕ್ತಗೊಳಿಸಿದ ಹೆಮ್ಮೆ ಇದೆ.

ಶಂಕರೇಗೌಡರ ಸಹಜ, ಸಮೃದ್ಧ ಕೃಷಿ ಜೀವನದ ಕುರಿತು ಗೊತ್ತಾಗಿದ್ದು ನನ್ನ ಗೆಳೆಯನಿಂದ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನನ್ನೊಂದಿಗೆ ಪದವಿ ತರಗತಿಯಲ್ಲಿ ಓದುತ್ತಿದ್ದ ದಾವಣಗರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಎರೆಹಳ್ಳಿಯ ಎಂ.ಬಿ.ಹನುಮಂತಪ್ಪ ಸಹ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೃಷಿಯಲ್ಲಿ ತೊಡಗಿಕೊಂಡಿದ್ದಾನೆ. ಅವನ ಕುರಿತು ಪತ್ರಿಕೆಯಲ್ಲಿ ಬಂದಿದ್ದ ಲೇಖನ ಓದಿ, ಅವನೊಂದಿಗೆ ಮಾತನಾಡುವಾಗ, ‘ನನಗಿಂತಲೂ ಉತ್ತಮ ಕೃಷಿಕರೊಬ್ಬರು ಮುದೇನೂರಿನಲ್ಲಿದ್ದಾರೆ’ ಎಂದಿದ್ದ. ಅವನೊಂದಿಗೆ ಮುದೇನೂರಿಗೆ ಹೋದಾಗ, ಶಂಕರೇಗೌಡರು, ಅವರ ಪತ್ನಿ ಸುನೀತಾ, ಮಗ ಸಚ್ಚಿದಾನಂದ ಮೂವರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲೆಡೆ ಕೃಷಿಗೆ ಕಾರ್ಮಿಕರೇ ಸಿಗುವುದಿಲ್ಲ ಎಂಬ ಗೊಣಗಾಟ ಕೇಳಿದರೆ ಹೊಲದ ಎಲ್ಲ ಕೆಲಸಗಳನ್ನೂ ತಾವೇ ಮಾಡಿಕೊಳ್ಳುತ್ತಾರೆ ಈ ಕುಟುಂಬದ ಸದಸ್ಯರು. ಕೃಷಿ ಕಾರ್ಮಿಕರನ್ನು ಅವರು ನೆಚ್ಚಿಕೊಂಡಿಲ್ಲ.

ಮುದೇನೂರಿನಲ್ಲಿರುವ ತಮ್ಮ ಅಡಿಕೆ–ತೆಂಗಿನ ತೋಟದಲ್ಲಿ ಧಾನ್ಯಗಳನ್ನು ಬೆಳೆಯಲು ಅವಕಾಶವಿಲ್ಲದ ಕಾರಣ ಶಂಕರೇಗೌಡರು ಪಕ್ಕದ ಹನುಮನಹಳ್ಳಿಯಲ್ಲಿ ಐದು ಎಕರೆ ಹೊಲವನ್ನು ಗುತ್ತಿಗೆಗೆ ಪಡೆದು ನಾನಾ ಬೆಳೆಗಳನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆಯುತ್ತಿದ್ದಾರೆ. ಮಿಶ್ರ ಬೆಳೆಗೆ ಒತ್ತು ನೀಡಿದ್ದಾರೆ. ಈ ಹೊಲದಲ್ಲಿ ಸುಮಾರು 25 ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಟೊಮೆಟೊ ಕೊಯ್ಲು ಮುಗಿದಿದೆ. ಅದರ ಬೆನ್ನಲ್ಲೇ ಶೇಂಗಾ ಕೊಯ್ಲು ಆರಂಭವಾಗಿದೆ. ಇದು ಮುಗಿಯುತ್ತಿದ್ದಂತೆಯೇ ಸಜ್ಜೆ ಅಥವಾ ನವಣೆ ಕಟಾವಿಗೆ ಸಿದ್ಧವಾಗುತ್ತದೆ. ಅದೇ ರೀತಿ ಯೋಜಿಸಿಯೇ ಶಂಕರೇಗೌಡರು ಬಿತ್ತನೆ ಮಾಡಿದ್ದಾರೆ. ಇವರು ನಾಟಿ ವಿಧಾನವನ್ನು ಅನುಸರಿಸುವುದಿಲ್ಲ. ಭತ್ತ, ರಾಗಿಯನ್ನೂ ಬಿತ್ತುತ್ತಾರೆ.

ಈ ಹೊಲದಲ್ಲಿ ಕೊರಲೆ, ಊದಲು, ಹಾರಕ, ಎಳ್ಳು, ಮೆಕ್ಕೆಜೋಳ, ಕೆಂಪುಜೋಳ, ಹೆಸರು, ಬಳ್ಳಿಹೆಸರು, ಅಲಸಂದೆ, ಗುರೆಳ್ಳು (ಹುಚ್ಚೆಳ್ಳು), ಔಡಲ (ಹರಳು), ತೊಗರಿ, ಹುರುಳಿ, ಬೆಂಡೆ, ಸೌತೆ, ಸಾವೆ, ಉದ್ದು, ಬಾಳೆ ಬೆಳೆ ಮಾಡಿದ್ದಾರೆ. ಇಷ್ಟಗಲ ಹೊಲದಲ್ಲಿ ಇಷ್ಟೆಲ್ಲಾ ಬೆಳೆಗಳನ್ನು ಮಾಡಲು ಸಾಧ್ಯವೇ ಎಂದು ನೋಡಿದವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಕೃಷಿ ವಿಧಾನ ಅವರದ್ದಾಗಿದೆ. ಊರಿನ ಸಮೀಪ ಅಡಿಕೆ ತೋಟವೂ ಇದೆ. ಅಲ್ಲೂ ಮಿಶ್ರ ಬೆಳೆ ಮಾಡಿದ್ದಾರೆ. ಅರಿಸಿನ, ಏಲಕ್ಕಿ, ನಾನಾ ಬಗೆಯ ಹಣ್ಣುಗಳು, ತರಕಾರಿ ಗಿಡಗಳು, ತೆಂಗು ಕೂಡ ಅಲ್ಲಿ ನಳನಳಿಸುತ್ತಿವೆ. ಇಲ್ಲೂ ಉಳುಮೆ ಮಾಡದೇ ಸಹಜ ಕೃಷಿ ಪದ್ಧತಿಯನ್ನೇ ಅನುಸರಿಸಲಾಗಿದೆ.

ಶಂಕರೇಗೌಡರು ತಂದೆ ಕಾಲದಿಂದಲೂ ಕೃಷಿಕರೇ. ಅವರ ಕುಟುಂಬದಲ್ಲಿ 35 ಎಕರೆ ಜಮೀನು ಇತ್ತು. ಹಿಂದೆ ಯಂತ್ರಗಳು, ಎತ್ತುಗಳ ಬಳಕೆಯಾಗುತ್ತಿತ್ತು. ಕೃಷಿ ಕಾರ್ಮಿಕರೂ ದುಡಿಯುತ್ತಿದ್ದರು. ಮಾಮೂಲಿನಂತೆ ರಾಸಾಯನಿಕ ಗೊಬ್ಬರ, ಕೀಟನಾಶಕ ಎಲ್ಲವೂ ಬಳಕೆಯಾಗುತ್ತಿತ್ತು. ದಂಡಿಯಾಗಿ ಬೆಳೆದರೂ ಸಾಲ ಮಾತ್ರ ತೀರುತ್ತಿರಲಿಲ್ಲ. ಕಿರಾಣಿ ಅಂಗಡಿ, ದಲ್ಲಾಳಿಗಳ ಅಂಗಡಿ ಸೇರಿದಂತೆ ಎಲ್ಲೆಡೆ ಉದ್ರಿ ಪಟ್ಟಿ ಇರುತ್ತಿತ್ತು. ಇಷ್ಟು ಬೆಳೆದರೂ ತೀರದ ಸಾಲದಿಂದ ಬೇಸರಗೊಂಡ ಅವರು ಉಳುಮೆಯನ್ನು ತೊರೆದರು. ಆಳುಗಳಿಗೂ ವಿದಾಯ ಹೇಳಿದರು. ಟ್ರ್ಯಾಕ್ಟರ್ ಸೇರಿದಂತೆ ಎಲ್ಲ ಯಂತ್ರೋಪಕರಣಗಳನ್ನು ತಿರಸ್ಕರಿಸಿದರು. ಬದುಕಿನಲ್ಲಿ ಸರಳತೆ ರೂಢಿಸಿಕೊಂಡರು. ವಾಹನಗಳು ಜಾಗ ಖಾಲಿ ಮಾಡಿದವು. ಆ ಜಾಗದಲ್ಲಿ ಸೈಕಲ್‌ಗಳು ಬಂದವು. ಅವರ ಅಭಿಲಾಷೆಯನ್ನೇ ಬದುಕಿನಲ್ಲಿ ರೂಢಿಸಿಕೊಂಡ ಮಡದಿ, ಮಕ್ಕಳೂ ಅವರೊಂದಿಗೆ ಕೈ ಜೋಡಿಸಿದ್ದರಿಂದ ಕುಟುಂಬದಲ್ಲಿ ಸಂತೃಪ್ತಿ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಆರೋಗ್ಯ ಇದೆ. ಹೊಲದಲ್ಲಿ ಬೆಳೆದ ಪದಾರ್ಥಗಳನ್ನೇ ಅಡುಗೆಗೆ ಬಳಸುವುದರಿಂದ ಆ ಊಟದ ರುಚಿಯನ್ನುವರ್ಣಿಸಲಾಗದು.

ಬೆಳೆದ ಆಹಾರ ಧಾನ್ಯಗಳು ಮನೆ ಬಳಕೆಗೆ ಮಾತ್ರ. ಉತ್ಪನ್ನ ತೀರಾ ಹೆಚ್ಚಾದಾಗ ಮಾರಾಟ. ಅವನ್ನು ಸುನೀತಾ ಅವರೇ ರಾಣೆಬೆನ್ನೂರಿಗೆ ಕೊಂಡೊಯ್ದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ. ಬೆಳೆದ ಪದಾರ್ಥಗಳನ್ನು ಉಂಡು ಸುಖವಾಗಿದ್ದಾರೆ. ಬೆಳಿಗ್ಗಿನಿಂದ ಸಂಜೆಯವರೆಗೂ ಮನೆಯ ಮೂವರೂ ದುಡಿಯುತ್ತಾರೆ. ಮೂವರ ಮಾತು ಮೃದು. ನಡತೆ ಸರಳ. ಇಡೀ ಊರಿಗೆ ಆದರ್ಶವಾಗಿದೆ ಈ ಕುಟುಂಬ. ಈ ಕುಟುಂಬದ ಕೃಷಿ ಖರ್ಚು ಸಂಪೂರ್ಣ ಶೂನ್ಯ. ಬಿತ್ತನೆ ಬೀಜ ಕೂಡ ಅವರ ಹೊಲದಲ್ಲೇ ಸಿಗುತ್ತದೆ. ಗೊಬ್ಬರ ಹಾಕುವುದಿಲ್ಲ. ಕಳೆ ಕೀಳುವುದಿಲ್ಲ. ಉಳುಮೆ ಮಾಡುವುದಿಲ್ಲ ಎಂದ ಮೇಲೆ ಇನ್ನು ಖರ್ಚುಬಾರದು. ಅವರಿಗೆ ಬಂದದ್ದೆಲ್ಲಾ ಲಾಭವೇ. ‘ರೈತರು ಮುಖ್ಯವಾಗಿ ಸರಳ ಜೀವನ ಮೈಗೂಡಿಸಿಕೊಳ್ಳಬೇಕು. ಆಗ ಹಣಕ್ಕಾಗಿ ತುಡಿತ, ಬಡಿದಾಟ ಎಲ್ಲವೂ ತಪ್ಪುತ್ತದೆ. ಜೀವನ ಸುಂದರವಾಗುತ್ತದೆ’ ಎಂಬ ಶಂಕರೇಗೌಡರ ಮಾತು ಅರ್ಥಪೂರ್ಣ.

ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯದಲ್ಲೂ ಶಂಕರೇಗೌಡರು ತೊಡಗಿದ್ದಾರೆ. ಹಾಸನ ಆಕಾಶವಾಣಿ ಕೂಡ ಇವರ ಕಾರ್ಯಕ್ರಮ ಪ್ರಸಾರ ಮಾಡಿದೆ. ಧಾರವಾಡದಲ್ಲೂ ನಾನಾ ಕಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೃಷಿ ಇಲಾಖೆ ಕರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನೀಡುವ ಗೌರವ ಧನ, ಖರ್ಚು–ವೆಚ್ಚ ಪಡೆಯಲೂ ಅವರಿಗೆ ಸಂಕೋಚ. ಪತ್ರಿಕೆಗಳಲ್ಲಿ ಬರುವ ಕೃಷಿ ಮಾಹಿತಿ ಆಧರಿಸಿ, ತಮ್ಮಲ್ಲಿ ಇಲ್ಲದ ಬೆಳೆಗಳ ಬಿತ್ತನೆ ಬೀಜ ತರಲು ಎಷ್ಟು ದೂರದ ಊರಿಗಾದರೂ ಹೋಗುತ್ತಾರೆ. ಅದೇ ರೀತಿ ತಮ್ಮಿಂದ ಯಾರಾದರೂ ಬಿತ್ತನೆ ಬೀಜ ಕೇಳಲು ಬಂದರೆ ಧಾರಾಳವಾಗಿ ಕೊಡುತ್ತಾರೆ. ಒಟ್ಟಿನಲ್ಲಿ ಸತ್ವಯುತವಾದ, ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯ ಉಳಿಯಬೇಕು ಎಂಬುದು ಅವರ ಇಚ್ಛೆ.

ನಾಲ್ಕೈದು ಎಕರೆ ಜಮೀನು ಇದ್ದರೂ ಇದರಲ್ಲಿನ ದುಡಿಮೆ ಜೀವನಕ್ಕೆ ಸಾಲದು ಎಂದು ಪಟ್ಟಣಗಳಿಗೆ ಕೂಲಿ ಅರಸಿ ಹೋಗುವವರ ಸಂಖ್ಯೆ ವಿಪರೀತವಾಗಿದೆ. ಪಟ್ಟಣಗಳಲ್ಲಿ ದುಡಿಯಲು ಹೋಗುವುದನ್ನು ಬಿಟ್ಟು ಸಣ್ಣ–ಪುಟ್ಟ ರೈತರು ತಮ್ಮ ಜಮೀನಿನಲ್ಲಿ ಇತ್ತೀಚೆಗೆ ‘ಶ್ರೀಮಂತರ ಧಾನ್ಯ’ ಎಂದು ಕರೆಸಿಕೊಳ್ಳುತ್ತಿರುವ ಸಿರಿ ಧಾನ್ಯಗಳನ್ನು ಬೆಳೆದು ಅವುಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ನೆಮ್ಮದಿಯ ಜೀವನ ಸಾಗಿಸಬಹುದು. ಈ ಬೆಳೆಗಳು ಹೆಚ್ಚು ನೀರನ್ನು ಬೇಡುವುದಿಲ್ಲ. ಬರಗಾಲದಲ್ಲಿ ಬೆಳೆಯುವುದಕ್ಕೆಂದೇ ಭತ್ತದ ತಳಿ ಇದೆ. ಈ ಧಾನ್ಯಗಳಿಗೆ ಹುಳು ಹತ್ತುವುದಿಲ್ಲ. ವರ್ಷಗಟ್ಟಲೆ ಇಟ್ಟುಕೊಳ್ಳಬಹುದು. ಮಾರಾಟ ಮಾಡದಿದ್ದರೂ ಮನೆಯವರೇ ಊಟಕ್ಕೆ ಬಳಸಿ, ಆರೋಗ್ಯವಂತರಾಗಿರಬಹುದು. ಆದರೆ ಜಮೀನಿನಲ್ಲಿ ಮೈಬಗ್ಗಿಸಿ ದುಡಿಯುವುದಕ್ಕಿಂತ ಪಟ್ಟಣಗಳಲ್ಲಿ ಸಿಗುವ ಬಿಡಿಗಾಸೇ ನಾನಾ ಕಾರಣಗಳಿಗೆ ಅವರಿಗೆ ಹೆಚ್ಚು ಆಕರ್ಷಣೀಯವಾಗಿದೆ! ಹಾಗಾಗಿ ಜಮೀನು ಇದ್ದರೂ ಕೂಲಿಗೆ ಪಟ್ಟಣಕ್ಕೆ ಹೋಗುವ ಚಾಳಿ ಹೆಚ್ಚಾಗುತ್ತಿದೆ. ಇದನ್ನು ತೊರೆದು ಬೆಂಗಾಡಿನಲ್ಲೂ ಬೆಳೆಯುವ ಸಿರಿಧಾನ್ಯ ಬೆಳೆದು ಸುಖ ಜೀವನ ಸಾಗಿಸುವತ್ತ ರೈತರು ಯೋಚಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.