ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಕುರಿತು ಬಳ್ಳಾರಿಯಲ್ಲಿ ಇತ್ತೀಚೆಗೆ ಚರ್ಚೆಗಳು ಹೆಚ್ಚಾಗಿವೆ. ಅಂದರೆ ಜಿಲ್ಲೆಯ ಜನರಲ್ಲಿ ಅಷ್ಟರಮಟ್ಟಿಗೆ ಆತಂಕ ನಿರ್ಮಾಣವಾಗಿದೆ. ಈ ಜಲಾಶಯದಲ್ಲಿ 1953ರಲ್ಲಿ ನೀರು ಸಂಗ್ರಹಿಸಲು ಆರಂಭಿಸಿದಾಗಲೇ ಇಲ್ಲಿ ಹೆಚ್ಚು ಹೂಳು ಸಂಗ್ರಹವಾಗುತ್ತದೆ ಎಂಬುದನ್ನು ನಿರೀಕ್ಷಿಸಲಾಗಿತ್ತು. ಆದರೂ ಸೂಕ್ತ ಪರಿಹಾರ ಕ್ರಮ ಕಂಡುಕೊಳ್ಳದಿರುವುದು ಮಾತ್ರ ಬಹು ದೊಡ್ಡ ವೈಫಲ್ಯ.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂದಾಜು 12 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ 133 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ ಹೂಳು ತುಂಬಿಕೊಂಡಿದೆ. ಈ ಸಮಸ್ಯೆಯಿಂದಾಗಿ ಅಲ್ಲಿ 100 ಟಿಎಂಸಿ ಅಡಿ ನೀರು ನಿಲ್ಲಿಸುವುದೂ ಕಷ್ಟವಾಗಿದೆ. ನದಿ ಪಾತ್ರದಲ್ಲಿ ಎರೆಮಣ್ಣಿನ ಪ್ರದೇಶ ಹೆಚ್ಚು. ಆ ಮಣ್ಣು ನದಿಯಲ್ಲಿ ಕೊಚ್ಚಿಕೊಂಡು ಬರುವುದರಿಂದ ಹೂಳು ಸಂಗ್ರಹ ಪ್ರಮಾಣವೂ ಹೆಚ್ಚಾಗಿದೆ.

ಅಣೆಕಟ್ಟೆಯಲ್ಲಿ ಹೂಳು ಸಂಗ್ರಹವಾಗಿದೆ ಎಂದರೆ ಜಲಾಶಯಕ್ಕೆ ಹರಿದುಬರುವ ನೀರಿನೊಂದಿಗೆ ಮಣ್ಣು ಕ್ರೆಸ್ಟ್ಗೇಟ್ವರೆಗೆ ಬಂದು ಶೇಖರವಾಗುತ್ತದೆ ಎಂದೇನೂ ಅಲ್ಲ. ಜಲಾಶಯದ ಹಿನ್ನೀರು ಪ್ರದೇಶದಲ್ಲೆಲ್ಲಾ ಅದು ಆವರಿಸಿರುತ್ತದೆ. ಈ ಜಲಾಶಯದ ಹಿನ್ನೀರು 84 ಕಿ.ಮೀ.ವರೆಗೆ ಇದೆ. ಅಗಲವೂ ಸಾಕಷ್ಟು ವಿಸ್ತಾರವಾಗಿದೆ. ಅಷ್ಟೂ ಪ್ರದೇಶದಲ್ಲೂ ಹೂಳು ಹರಡಿಕೊಂಡಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಜಲಾಶಯದಲ್ಲಿನ ಹೂಳು ತೆಗೆಸುವುದಾಗಿ ಹೇಳಿದ್ದರು. ರಾಜ್ಯದಲ್ಲಿ ಸರ್ಕಾರದ ಬದಲಾವಣೆಯಾದ ಬಳಿಕ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಹೇಳಿಕೆ ನೀಡುವುದೂ ಬಂದ್ ಆಗಿದೆ. ಆದರೆ ಜನರಲ್ಲಿ ಈಗ ಅರಿವು ಮೂಡಿದೆ. ಹೇಗಾದರೂ ಮಾಡಿ ಹೂಳು ತೆಗೆಸಬೇಕು ಎಂಬ ನಿರ್ಧಾರಕ್ಕೆ ಬಂದಂತಿದ್ದಾರೆ.

ಹಾಗಾಗಿಯೇ ಇತ್ತೀಚೆಗೆ ಸಂಸದ ಬಿ.ಶ್ರೀರಾಮುಲು ಸಹ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆಯನ್ನು ನೀಡಿದ್ದಾರೆ. ಆದರೆ ಸಮಸ್ಯೆ ನಿವಾರಣೆ ಸಂಬಂಧ, ಇದುವರೆಗೂ ಬರೀ ಬಾಯಿಮಾತಿನ ಹೇಳಿಕೆಗಳು ಬಂದಿವೆಯೇ ವಿನಾ ನಿರ್ದಿಷ್ಟವಾದ ರೂಪವನ್ನು ತಳೆದಿಲ್ಲದಿರುವುದು ವಿಪಯಾರ್ಸವೇ ಸರಿ. ಏಕೆಂದರೆ 80ರ ದಶಕದಲ್ಲಿಯೇ ಈ ಕುರಿತು ತುಂಗಭದ್ರಾ ಮಂಡಳಿ ಕೂಡ ವಿಚಾರಸಂಕಿರಣವನ್ನು ಆಯೋಜಿಸಿತ್ತು. ಆದರೆ ಫಲ ಮಾತ್ರ ಇಲ್ಲ!

ದೇಶದ ಕೆಲವೇ ದೊಡ್ಡ ಜಲಾಶಯಗಳಲ್ಲಿ ತುಂಗಭದ್ರಾ ಕೂಡ ಒಂದು. ಇಂತಹ ದೊಡ್ಡ ಜಲಾಶಯಗಳಲ್ಲಿನ ಹೂಳು ತೆಗೆಯುವುದು ಅತ್ಯಂತ ಕಠಿಣ ಕೆಲಸ. ಆರ್ಥಿಕವಾಗಿಯೂ ಭಾರಿ ದುಬಾರಿ ಯೋಜನೆ. ಈ ವಿಚಾರ ಹಿಂದೆ ಪ್ರಸ್ತಾಪವಾದಾಗ ಒಂದು ಟಿ.ಎಂ.ಸಿ ಅಡಿ ಹೂಳು ತೆಗೆಯಲು ಸುಮಾರು ₨ 1,000 ಕೋಟಿ ಖರ್ಚು ಆಗುತ್ತದೆ ಎಂಬ ಲೆಕ್ಕಾಚಾರ ಇತ್ತು. ಒಂದು ಟಿಎಂಸಿ ಅಡಿ ಎಂದರೆ ಸುಮಾರು 50 ಲಕ್ಷ ಲಾರಿ ಲೋಡ್ ಮಣ್ಣನ್ನು ಸಾಗಿಸಬೇಕಾಗುತ್ತದೆ.

ಇಷ್ಟು ಮಣ್ಣನ್ನು ಒಂದೆಡೆ ಸುರಿದರೆ 100 ಎಕರೆ ಪ್ರದೇಶದಲ್ಲಿ 240 ಅಡಿ ಎತ್ತರದ ಗುಡ್ಡ ಸೃಷ್ಟಿಯಾಗುತ್ತದೆ. ಅಂದರೆ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಅಡಿಯಷ್ಟು ಮಣ್ಣನ್ನು ಹೊರ ತೆಗೆದರೆ ಅದನ್ನು ಹಾಕುವುದು ಎಲ್ಲಿ? ಈ ಕೆಲಸ ಮುಗಿಯುವುದಾದರೂ ಯಾವಾಗ? ಏಕೆಂದರೆ 50 ಲಕ್ಷ ಲಾರಿ ಲೋಡ್ ಮಣ್ಣು ಸಾಗಿಸಲು ಕನಿಷ್ಠ 1,000 ಲಾರಿಗಳು ಪ್ರತಿನಿತ್ಯ 20 ಟ್ರಿಪ್‌ನಂತೆ ವರ್ಷದ 300 ದಿನ ಸತತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅಂದಾಜು ಮಾಡುತ್ತಾರೆ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಗೋವಿಂದುಲು.

ಅಂದ ಮೇಲೆ ಈ ಕೆಲಸದ ಅಗಾಧತೆಯ ಅರಿವಾಗಬಹುದು. ಹಾಗೆಂದು ಕೈಚೆಲ್ಲುವಂತೆಯೂ ಇಲ್ಲ. ಏಕೆಂದರೆ ಪ್ರತಿ ವರ್ಷ ಅರ್ಧ ಟಿಎಂಸಿ ಅಡಿಯಷ್ಟು ಹೂಳು ಜಲಾಶಯದ ಮಡಿಲು ಸೇರುತ್ತಿದೆ. ಇದು ಹೀಗೆಯೇ ಮುಂದುವರಿದರೆ ಕ್ರಮೇಣ ಜಲಾಶಯ ನಿರ್ಮಾಣದ ಉದ್ದೇಶವೇ ಮಣ್ಣು ಪಾಲು ಆಗುತ್ತದೆ. ಆಗ್ನೇಯ ಮಾರುತಗಳಿಂದ ಮೂರು ತಿಂಗಳಷ್ಟೇ ದೊರೆಯುವ ಮಳೆಯ ನೀರನ್ನು ನಂತರದ ಒಂಬತ್ತು ತಿಂಗಳ ಅವಶ್ಯಕತೆಗಾಗಿ ಸಂಗ್ರಹಿಸಿ ಇಟ್ಟುಕೊಳ್ಳಲು ಜಲಾಶಯಗಳನ್ನು ನಿರ್ಮಿಸಲಾಗಿದೆ.

ಈ ನೀರನ್ನು ಕುಡಿಯಲು ಬಳಸುವುದರ ಜತೆಗೆ ಅದರಲ್ಲಿಯೇ ಬೆಳೆ ಬೆಳೆಯಬೇಕು, ವಿದ್ಯುತ್ ಉತ್ಪಾದನೆ ಮಾಡಬೇಕು. ಜಲಾಶಯ ನಿರ್ಮಿಸಿದಾಗ ಇರದಿದ್ದ ಉಕ್ಕಿನ ಕಾರ್ಖಾನೆಗಳು ಈಗ ಈ ಭಾಗದಲ್ಲಿ ತಲೆ ಎತ್ತಿದ್ದು, ಅವುಗಳಿಗೂ ಇಲ್ಲಿಂದಲೇ ನೀರು ಒದಗಿಸಲಾಗುತ್ತಿದೆ. ಜತೆಗೆ ನೀರಿನ ಸಂಗ್ರಹವೂ ಕಡಿಮೆಯಾಗಿದ್ದು, ಬೇಸಿಗೆ ಬೆಳೆಗೆ ನೀರು ದೊರೆಯದೆ ರೈತರು ಪರಿತಪಿಸುವಂತಾಗಿದೆ.

ಆಹಾರ ಧಾನ್ಯ ಉತ್ಪಾದನೆ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಅಂತಹದ್ದರಲ್ಲಿ ಹೂಳು ತುಂಬಿ, ಜಲ ಸಂಗ್ರಹ ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಏನು ಮಾಡುವುದು? ಇದು ಬರೀ ತುಂಗಭದ್ರಾ ಜಲಾಶಯದ ಸಮಸ್ಯೆಯಲ್ಲ. ಎಲ್ಲ ಜಲಾಶಯಗಳಲ್ಲೂ ಈ ಸಮಸ್ಯೆ ಇದೆ. ಆದರೆ ತೀವ್ರತೆ ಇಷ್ಟಿಲ್ಲದಿರಬಹುದು.

ಈ ಜಲಾಶಯದಲ್ಲಿ ಆಂಧ್ರಪ್ರದೇಶಕ್ಕೂ ಪಾಲು ಇರುವುದರಿಂದ 1980ರ ದಶಕದಲ್ಲಿಯೇ ಆಗಿನ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಪ್ರವಾಹದ ನೀರನ್ನು ಬಳಸಿಕೊಳ್ಳಲು ಪ್ರತ್ಯೇಕ ಕಾಲುವೆ ನಿರ್ಮಾಣದ ಪ್ರಸ್ತಾಪವನ್ನು ಕರ್ನಾಟಕದ ಮುಂದಿಟ್ಟಿದ್ದರು. ನಮ್ಮವರಿಗೆ ಆಗಲೂ ಆಸಕ್ತಿ ಇರಲಿಲ್ಲ. ಈಗಲೂ ಇಲ್ಲ. ಕನಿಷ್ಠ, ಆಂಧ್ರದ ಈ ಪ್ರಸ್ತಾವವನ್ನು ಒಪ್ಪಿಕೊಂಡು ಅಧಿಕ ನೀರು ಬಂದ ಸಂದರ್ಭದಲ್ಲಿ ಆಂಧ್ರಕ್ಕೆ ಹರಿಸಿ, ನಂತರ ಅದಕ್ಕೆ ಕೊಡಬೇಕಾದ ನೀರಿನಲ್ಲಿ ನಾವು ಪಾಲು ಕೇಳಬಹುದಿತ್ತು. ಈ ನಿರಾಸಕ್ತಿಯ ಧೋರಣೆಯಿಂದಾಗಿ, ಇದರ ಸಮೀಪದಲ್ಲೇ ಇನ್ನೊಂದು ಅಣೆಕಟ್ಟೆ ಕಟ್ಟುವ ರಾಜ್ಯದ ಪ್ರಸ್ತಾಪಕ್ಕೆ ಆಗ ಆಂಧ್ರವೂ ಒಪ್ಪಿಗೆ ನೀಡಲಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಸಮೀಪಿಸುತ್ತಿದೆ. ಜಲಾಶಯದಿಂದ ಒಂದು ಲಾರಿ ಮಣ್ಣನ್ನೂ ಹೊರ ತೆಗೆದಿಲ್ಲ. ಸರ್ಕಾರದ ಪ್ರತಿನಿಧಿಗಳು ಬರೀ ಹೇಳಿಕೆಗಳನ್ನು ನೀಡುತ್ತಾ ಸಾಗಿದರೆ ಕೆಲಸವಾಗುತ್ತದೆಯೇ? ಪರ್ಯಾಯ ಮಾರ್ಗಗಳನ್ನು ಅಧಿಕಾರಸ್ಥರು ಕಂಡುಕೊಳ್ಳಬೇಕು. ಅಣೆಕಟ್ಟೆಗೆ ಹರಿದುಬಂದ ಹೆಚ್ಚುವರಿ ನೀರು ಹೊರ ಹೋಗಿ ಆಯಿತು. ಮುಂದಾದರೂ ಅದನ್ನು ಹಿಡಿದು ಇಟ್ಟುಕೊಳ್ಳಲು ಸಣ್ಣ ಜಲಾಶಯ ನಿರ್ಮಿಸುವತ್ತ ಸರ್ಕಾರ ಗಮನಹರಿಸಬೇಕು.

ಇದೆಲ್ಲಕ್ಕಿಂತಲೂ ಅಣೆಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಬರದಂತೆ ತಡೆಯುವ ಕೆಲಸಕ್ಕೆ ಆದ್ಯತೆ ನೀಡಬೇಕು. ಅಲ್ಲಲ್ಲಿ ಚೆಕ್ ಡ್ಯಾಂ, ಬ್ಯಾರೇಜ್‌ಗಳನ್ನು ನಿರ್ಮಿಸಬೇಕು. ಸಾಲಮನ್ನಾ, ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಯಂತಹ ಅಗ್ಗದ ಜನಪ್ರಿಯ ಯೋಜನೆಗಳಿಗೆ ಹಣ ವಿನಿಯೋಗಿಸಿ ಮತಬ್ಯಾಂಕ್ ಸೃಷ್ಟಿಸಿಕೊಳ್ಳುವುದನ್ನು ಬಿಟ್ಟು ನಿಜ ದೃಷ್ಟಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಆ ಹಣವನ್ನು ಬಳಸಲು ಸರ್ಕಾರ ಮುಂದಾಗಬೇಕು. ನೀರಿನ ಬಳಕೆಯ ವಿಚಾರದಲ್ಲಿ ಇಸ್ರೇಲ್‌ನಿಂದ ಪಾಠ ಕಲಿಯಬೇಕು ನಾವು. ಅಲ್ಲಿ ಹನಿ ನೀರೂ ವ್ಯರ್ಥವಾಗುವುದಿಲ್ಲ. ಇಲ್ಲಿ ಪೋಲಾಗುವ ನೀರಿಗೆ ಲೆಕ್ಕವೇ ಇಲ್ಲ!

ಚೀನಾದಲ್ಲಿ ಜಲಾಶಯಗಳಿಂದ ಹೂಳು ಹೊರ ಹಾಕಲು ಮಳೆಗಾಲದಲ್ಲಿ ಕೆಳ ಮಟ್ಟದ ದ್ವಾರಗಳಿಂದ ಬೃಹತ್ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತದೆ. ಆಗ ಹೂಳು ಸಹ ಕೊಚ್ಚಿಕೊಂಡು ಹೋಗುತ್ತಿದೆ. ನಮ್ಮ ಜಲಾಶಯಗಳಲ್ಲೂ ನದಿಗೆ ಅಲ್ಪ ಪ್ರಮಾಣದಲ್ಲಿ ನೀರು ಬಿಡಲು ಸಣ್ಣ ಗೇಟುಗಳಿರುತ್ತವೆ. ಇವುಗಳಿಗೆ ಹೂಳು ಹೊರ ಹಾಕುವ ಸಾಮರ್ಥ್ಯವಿರುತ್ತದೆ ಎಂದು ಹೇಳಲಾಗದು. ಆದರೂ ಈ ಗೇಟು ಬಳಸಿಕೊಂಡೇ ಸ್ವಲ್ಪ ಮಟ್ಟಿಗಾದರೂ ಹೂಳನ್ನು ಹೊರ ಹಾಕಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು.

ನಮ್ಮ ಅಲಕ್ಷ್ಯತನಕ್ಕೆ ಇಂದು ನಾವು ಭಾರಿ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಸತ್ಯ. ಯೋಜನೆ ಅನುಷ್ಠಾನದ ಸಂದರ್ಭದಲ್ಲಿಯೇ ನದಿಗೆ ಮಣ್ಣು ಸೇರದಂತೆ ಅರಣ್ಯ ಬೆಳೆಸಬೇಕು ಎಂದು ತೀರ್ಮಾನವಾಗಿತ್ತು. ಇದಕ್ಕೆ ಪ್ರತ್ಯೇಕವಾಗಿ ತುಂಗಭದ್ರಾ ನದಿ ಕಣಿವೆ ಯೋಜನೆ (ಟಿಆರ್‌ವಿಪಿ) ಸಿದ್ಧಪಡಿಸಲಾಗಿತ್ತು. ಇದೂ ಇತರೆ ಯೋಜನೆಗಳಂತೆಯೇ ದಾಖಲೆಗಳಲ್ಲಿ ಲೆಕ್ಕ ತೋರಿಸಿ ಹಣ ನುಂಗುವ ಯೋಜನೆಯಾಯಿತು ಅಷ್ಟೆ.

ಸಮಸ್ಯೆಯನ್ನು ಗುರುತಿಸಿದ್ದರೂ ಅದರ ನಿವಾರಣೆಗೆ ಮುಂದಾಗದಿರುವುದಕ್ಕೆ ಏನು ಹೇಳುವುದು? ರಾಜಕೀಯ ನಾಯಕತ್ವದ ವೈಫಲ್ಯದಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ನೀರಾವರಿ ಬಗ್ಗೆ ಸಮರ್ಥವಾಗಿ ಮಾತನಾಡುವ ಧುರೀಣರೂ ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ. ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವೇ ನೀತಿಯನ್ನು ರೂಪಿಸಬೇಕು. ಜತೆಗೆ ರಾಜ್ಯ ಸರ್ಕಾರವೂ ಇತ್ತ ಗಂಭೀರವಾಗಿ ಆಲೋಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.