ಹೆಣ್ಣಿನ ಕಾಮಪ್ರಜ್ಞೆಯ ಬಗೆಗಿನ ನನ್ನ ಅಧ್ಯಯನದ ಬಗೆಗೆ ಹಂಚಿಕೊಳ್ಳುತ್ತಿದ್ದೆ. ಹೆಂಗಸರು ನನ್ನನ್ನು ನೇರವಾಗಿ ಸಂಪರ್ಕಿಸುವ ತನಕ ಎಲೆಮರೆಯ ಕಾಯಿಯಂತೆ ಇದ್ದರು ಎಂದು ಹೇಳುತ್ತಿದ್ದೆ. ಈ ಸಲ ಇವರ ವೈಯಕ್ತಿಕ ಕಾಮುಕತೆಯ (libido) ಬಗೆಗೆ ಸ್ವಲ್ಪ ತಿಳಿಯೋಣ. (ಇಲ್ಲಿ ‘ಕಾಮುಕತೆ’ ಎಂಬ ಪದವನ್ನು ಪೂರ್ವಗ್ರಹ ಇಲ್ಲದೆ ಉತ್ಸುಕತೆ ಎಂಬ ಪದದಷ್ಟೇ ಆರೋಗ್ಯಕರ ಅರ್ಥದಲ್ಲಿ ಬಳಸಿದ್ದೇನೆ.) ಅದಕ್ಕಾಗಿ ಒಂದು ದೃಷ್ಟಾಂತ:

ಮಧ್ಯವಯಸ್ಸಿನ ಇವಳು ಗಂಡನೊಡನೆ ನನ್ನಲ್ಲಿ ಧಾವಿಸಿದ್ದಾಳೆ. ಅವನಿಲ್ಲದೆ ತನ್ನ ಪ್ರಪಂಚವಿಲ್ಲ ಎನ್ನುತ್ತಿದ್ದವಳಿಗೆ, ಅವನೊಡನೆ ಕಾಮಸುಖದಲ್ಲಿ ಸಂತೃಪ್ತಳಾಗಿ ಇದ್ದವಳಿಗೆ ಆಘಾತವಾಗಿದೆ. ಯಾಕೆ? ಚಿಕ್ಕ ದೇಶವೊಂದರಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವನು ಕಳೆದ ಮೂರು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚುಸಲ ಬಾಡಿಗೆ ಹೆಣ್ಣುಗಳನ್ನು ಭೋಗಿಸಿದ್ದಾನೆ ಎಂದು ತಿಳಿದುಬಂದಿದೆ– ಅಲ್ಲೆಲ್ಲ ಒಂದು ಹೊತ್ತಿನ ಊಟಕ್ಕೂ ಮಲಗಲು ಬರುತ್ತಾರಂತೆ. ಮೊದಮೊದಲು ಅಲ್ಲಗಳೆದವನು ಆಧಾರ ತೋರಿಸಿದಾಗ ಸಿಕ್ಕಿಹಾಕಿಕೊಂಡು ಒಪ್ಪಿಕೊಂಡಿದ್ದಾನೆ. ತಾನು ಪತಿವ್ರತೆಯೆಂದು ಅಭಿಮಾನದಿಂದ ಬೀಗುತ್ತಿರುವವಳು ಕಂಗಾಲಾಗಿದ್ದಾಳೆ. ‘ಪತಿವ್ರತೆ’ ಎಂದು ಆಕೆ ಎರಡನೆಯ ಸಲ ಅಂದಾಗ ಆ ಪದದ ಆರ್ಥವನ್ನು ವಿವರಿಸಲು ಕೇಳಿದೆ. ಆಗ ವಿಶೇಷವೊಂದು ಹೊರಕಂಡಿತು.

ಸುಂದರಿಯಾದ ಆಕೆಯನ್ನು ಮದುವೆಗಿಂತ ಮುಂಚೆ ಹಲವು ತರುಣರು ಇಷ್ಟಪಟ್ಟಿದ್ದರಂತೆ. ಅವರನ್ನು ತನ್ನ ಕಲ್ಪನೆಯಲ್ಲೂ ಬರಗೊಟ್ಟಿರಲಿಲ್ಲವಂತೆ, ಮದುವೆಯಾದ ದಿನದಿಂದ ಪತಿಗೆ ಕಾಯಾ ವಾಚಾ ಮನಸಾ ನಿಷ್ಠಳಾಗಿದ್ದು, ಅವನು ಕೇಳಿದಾಗಲೆಲ್ಲ ತನ್ನನ್ನು ಸಮರ್ಪಿಸುತ್ತ, ಅವನು ಕೊಟ್ಟಾಗ ಕೊಟ್ಟಷ್ಟನ್ನು ಸ್ವೀಕರಿಸುತ್ತ ತೃಪ್ತಿಯಿಂದ ಇರುವವಳೆಂದು ವಿವರಿಸಿದಳು. ನನಗೆ ಕುತೂಹಲವಾಯಿತು. ಕಾಮುಕ ಯೋಚನೆಗಳಿಂದ ದೂರವಿದ್ದವಳಿಗೆ ಕೊರಳಿಗೆ ಮಾಂಗಲ್ಯ ಬಿದ್ದ ಕೂಡಲೇ ಅದೇ ಕಾಮುಕತೆಯು – ಅದೂ ಪೂರ್ಣಪ್ರಮಾಣದಲ್ಲಿ- ಜಾಗೃತಗೊಳ್ಳಲು ಹೇಗೆ ಸಾಧ್ಯವಾಯಿತು? ಈ ರೂಪಾಂತರ ಅರ್ಥವಾಗದೆ ಗೊಂದಲವಾಗಿ ಕೇಳಿದೆ: ಮದುವೆಗೆ ಮುಂಚೆ ಆಕೆಗೆ ವೈಯಕ್ತಿಕ ಕಾಮಸುಖ ಎನ್ನುವುದರ ಕಲ್ಪನೆಯಿತ್ತೆ? ಆಕೆಗೆ ಗೊತ್ತಾಗಲಿಲ್ಲ. ಅದನ್ನು ಬಿಡಿಸಿ ಹೇಳುತ್ತ, ತನ್ನ ಜನನಾಂಗವನ್ನು ಸುಖದ ಅನ್ವೇಷಣೆಯ ಉದ್ದೇಶದಿಂದ ಸ್ಪರ್ಶಿಸಿಕೊಂಡಿದ್ದು ಇದೆಯೇ ಎಂದಾಗ ದೃಢವಾಗಿ ನಿರಾಕರಿಸಿದಳು. ‘ಹೋಗಲಿ, ಮದುವೆಗೆ ಮುಂಚೆ ಯಾವೊತ್ತಾದರೂ ಗಂಡಿನ ಕಲ್ಪನೆ ಅಕಸ್ಮಾತ್ತಾಗಿ ಬಂದಿತ್ತೆ? ಆ ಕಲ್ಪನೆಯು ಮೈಮನಗಳಿಗೆ ಹಿತವಾಗಿತ್ತೆ?’ ಎಂದಾಗ, ನನ್ನ ಪ್ರಶ್ನೆಯನ್ನೇ ಪ್ರಶ್ನಿಸುತ್ತ ಸಿಡಿದೆದ್ದಳು. ಆಕೆಯ ಪ್ರತಿಕ್ರಿಯೆಯನ್ನು ಬದಿಗಿಟ್ಟು ಆಕೆಯ ‘ಮದುವೆಗೆ ಮುಂಚೆ ಎಲ್ಲ ಕಾಮವೂ ನಿಷೇಧ; ನಂತರ ಪ್ರತಿಯೊಂದೂ ಮುಕ್ತ’ ಎನ್ನುವ ನೀತಿ- ನಿಲುವಿನ ಕುರಿತು ಯೋಚಿಸಿದರೆ ಇದು ಹಲವು ಸಂದೇಹಗಳನ್ನು ಹುಟ್ಟುಹಾಕುತ್ತದೆ.

ಉದಾಹರಣೆಗೆ, ಮದುವೆಗೆ ಮುಂಚೆ ಕಾಮಸುಖ ಎಂದರೆ ಏನೆಂದು ಕಲ್ಪನೆಗೂ ಎಟುಕದೆ ಇರುವವಳಿಗೆ ಗಂಡ ಕೊಟ್ಟದ್ದೇ ಪ(ಚ)ರಮಸುಖ, ಅದರಾಚೆಗೆ ಏನೂ ಇಲ್ಲ ಎಂದು ಭಾವಿಸಿರಲಿಕ್ಕೆ ಸಾಧ್ಯವಿದೆ. ಗಂಡನೇನೋ ದಿನಾಲೂ ಇವಳೊಡನೆ ಒಂದು ಗಂಟೆ ಹೊತ್ತು ಸುಖಪಡುತ್ತಾನೆ; ಬದಲಾಗಿ ಎರಡು ತಿಂಗಳಿಗೊಮ್ಮೆ ಎರಡು ನಿಮಿಷಗಳ ಕಾಲ ಇವಳನ್ನು ಬಳಸಿಕೊಂಡಿದ್ದರೆ ಅದೇ ಸುಖ ಎಂದೇ ತೃಪ್ತಿ ಹೊಂದಿರುತ್ತಿದ್ದಳು – ಇಂಥದ್ದನ್ನೇ ಸರ್ವಸ್ವವೆಂದು ನಂಬಿ ಬದುಕುತ್ತಿರುವ ಹೆಂಗಸರು ನಮ್ಮಲ್ಲಿದ್ದಾರೆ. ಇವರಿಗೆ ಸಾಧ್ವಿಯ ಪಟ್ಟಕಟ್ಟಿ ಕಿರೀಟವಿಟ್ಟಿದ್ದೇವೆ ಕೂಡ. ಪ್ರಶ್ನೆ ಏನೆಂದರೆ, ಈ ಹೆಂಗಸರಿಗೆ ತಮ್ಮದೇ ಎನ್ನುವ, ಸ್ವಂತವಾದ, ಸಂಗಾತಿಗಿಂತ ಪ್ರತ್ಯೇಕವಾದ ಕಾಮುಕತೆ ಎನ್ನುವುದು ಇದೆಯೆ ಎಂದು ಯೋಚಿಸಿದ್ದಾರೆಯೆ? ಈ ಪ್ರಶ್ನೆ ಯಾಕೆಂದರೆ, ಹೆಂಡತಿಯು ಗಂಡನೊಂದಿಗೆ ಪಡುವ ಸುಖವು ಅವನ ಸುಖಕ್ಕೆ ಆಕೆ ಸಹಕರಿಸುವುದು, ಪ್ರತಿಕ್ರಿಯಿಸುವುದು- ಹೆಚ್ಚೆಂದರೆ ಸ್ಪಂದಿಸುವುದು- ಆಗುತ್ತದೆಯೇ ಹೊರತು ಆಕೆಯ ಸ್ವಂತ ಅಭಿವ್ಯಕ್ತಿ ಆಗಲಾರದು. ಸಹಕರಿಸುವುದರಲ್ಲಿ ಸುಖವಿದೆ; ಆದರೆ ಈ ಸುಖವು ತನಗೇ ಬೇಕೆಂದು ಮುಗಿಬಿದ್ದು ಪಡೆಯುವ ಸುಖಕ್ಕಿಂತ ಪೂರ್ತಿ ಭಿನ್ನವಾಗಿದೆ. ಒಪ್ಪಿಸಿಕೊಳ್ಳುವುದರಲ್ಲಿ ಕಾಮುಕತೆಯಿಲ್ಲ, ಬದ್ಧತೆಯಿದೆ ಅಷ್ಟೆ. ಬದ್ಧತೆಯಲ್ಲಿ ಆಸಕ್ತಿ, ಮನಸ್ಸು ಇಷ್ಟ, ಪ್ರೇರಣೆ, ಸ್ಫೂರ್ತಿ, ತವಕ, ತಯಾರಿ, ಕಾತುರತೆ, ಉದ್ವೇಗ ಇತ್ಯಾದಿ ಇರಬೇಕೆಂದಿಲ್ಲ!

ಹೆಣ್ಣಿಗೂ ಪ್ರತ್ಯೇಕವಾದ, ಖಾಸಗಿಯಾದ ಕಾಮದ ಬಯಕೆಗಳು ಇರುತ್ತವೆ ಹಾಗೂ ಅವು ವಿವಾಹ, ಗಂಡ, ಬದ್ಧತೆ ಮುಂತಾದ ಪರಿಕಲ್ಪನೆಗಳನ್ನು ಮೀರಿ ಇರುತ್ತವೆ ಎಂದು ಈ ಹೆಂಗಸಿಗೆ ಹೇಗೆ ತಿಳಿಸಿಕೊಡುವುದು ಎಂದು ಯೋಚಿಸುತ್ತಿರುವಾಗಲೇ ಆಕೆ ಗಂಡನ ಸ್ವೈರ ವರ್ತನೆಯ ಬಗೆಗೆ ಇನ್ನೊಂದು ಘಟನೆಯನ್ನು ಸಂಕಟಪಡುತ್ತ ವಿವರಿಸಿದಳು: ನಿನ್ನೆಯಷ್ಟೇ ಅವನಿಗೆ ತನ್ನ ಗೆಳತಿಯ ಪರಿಚಯ ಮಾಡಿಕೊಟ್ಟಳಂತೆ. ಆಗವನು ಕುಲುಕಲು ಆಕೆಯ ಕೈ ಹಿಡಿದವನು ಸುಮಾರು ಹೊತ್ತು ಬಿಡಲಿಲ್ಲವಂತೆ. ನಡುನಡುವೆ ಆಕೆಯ ಎದೆಯ ಮೇಲೆ ಕಣ್ಣು ಹಾಯಿಸಿದ್ದನ್ನು ಇವಳು ಗಮನಿಸದೆ ಇರಲಿಲ್ಲ. ನಂತರ ಎದುರಿಸಿ ಪ್ರಶ್ನಿಸಿದಾಗ ಅವನು, ‘ಆಕೆಯ ಕೈಯನ್ನು ಮಾತ್ರ ಹಿಡಿದುಕೊಂಡಿದ್ದೆ. ‘ಮತ್ತೇನನ್ನೂ’ ಹಿಡಿದಿರಲಿಲ್ಲವಲ್ಲ?’ ಎಂದು ವ್ಯಂಗ್ಯದಿಂದ ಆಡಿದ ಎಂದು ಹೇಳಿಕೊಂಡು ಅತ್ತಳು. ಪರಸಂಬಂಧದಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಹೆಂಡತಿಯ ಸಮಕ್ಷಮದಲ್ಲಿ ಇನ್ನೊಂದು ಹೆಣ್ಣಿನ ಮೇಲೆ ಕಣ್ಣು ಹಾಯಿಸಿದ್ದಲ್ಲದೆ ಅದನ್ನು ಸಮರ್ಥಿಸಿಕೊಳ್ಳುವ ಗಂಡನ ನಡತೆಯು ಧಿಕ್ಕರಿಸಬೇಕಾದದ್ದೇ. ಆದರೆ ಅವನ ಈ ವರ್ತನೆಯು ಇನ್ನೊಂದು ವಿಷಯವನ್ನೂ ಹೊರಗೆಡಹುತ್ತದೆ: ಅವನ ಕಾಮುಕತೆಯು ಹೆಂಡತಿಯ ಜೊತೆಗೂಡಿ ಅನುಭವಿಸುವ ಕಾಮಾಪೇಕ್ಷೆಗಿಂತ ಪ್ರತ್ಯೇಕವಾಗಿದೆ, ಹಾಗೂ ಅದಕ್ಕೂ ಹೆಂಡತಿಯೊಡನೆಯ ಬದ್ಧತೆಗೂ ಸಂಬಂಧವಿಲ್ಲ! ದಾಂಪತ್ಯದ ಬುಡವನ್ನೇ ಅಲ್ಲಾಡಿಸುವ ಈ ವಿಷಯವು ಆಘಾತಕರ ಎನ್ನಿಸಿದರೂ ಸತ್ಯವಾಗಿದೆ.

ಕಾಮುಕತೆ ಎನ್ನುವ ಭಾವವು ಆಂತರಂಗಿಕವಾಗಿದ್ದು ವೈಯಕ್ತಿಕವಾಗಿದೆ. ಇದು ಹುಟ್ಟು ಪ್ರವೃತ್ತಿಯಾಗಿದ್ದು ಲಿಂಗ ವಯಸ್ಸುಗಳನ್ನು ಮೀರಿ ನಿರಂತರವಾಗಿದೆ. ಇದೊಂದು ಶಕ್ತಿಯ ರೂಪದಲ್ಲಿ ನಮ್ಮೊಳಗೆ ಸದಾ ಪ್ರವಹಿಸುತ್ತಿದ್ದು, ಆಗಾಗ ಖಾಸಗಿಯಾದ ಅನುಭೂತಿಯಾಗಿ ಆವರಿಸುತ್ತ ಇರುತ್ತದೆ. (ಉದಾ. ಹಿರಿಯರೊಡನೆ ಟೀವಿ ನೋಡುತ್ತಿರುವಾಗ ಕಾಮದ ದೃಶ್ಯ ಬಂದಾಗ ಏನು ಅರಿವಿಗೆ ಬರುತ್ತದೆ?) ಕಾಮಕೂಟದಲ್ಲಿ ವೈಯಕ್ತಿಕ ಕಾಮುಕತೆಯು ಸಂಗಾತಿಯ ಕಡೆಗೆ ಕೇಂದ್ರೀಕೃತವಾಗುತ್ತ ಸಂಗಾತಿಯ ಬಗೆಗಿನ ಕಾಮಾಪೇಕ್ಷೆಯಾಗಿ ಅಭಿವ್ಯಕ್ತಿಗೊಳ್ಳುತ್ತದೆ. ಹಾಗೆಯೇ ಅದು ಸಂಗಾತಿಯನ್ನು ಬಿಟ್ಟು ಇತರೆಡೆಯೂ ಹರಿಯಬಹುದು. ಅದಕ್ಕೂ ದಾಂಪತ್ಯದ ಬದ್ಧತೆಗೂ ಸಂಬಂಧವಿಲ್ಲ. ಬದ್ಧತೆಯಿದ್ದೂ ಕಾಮುಕತೆಯು ಕಲ್ಪನೆಯಲ್ಲಿ ಕ್ರಿಯಾಶೀಲವಾಗಿರುತ್ತದೆ. ಅದನ್ನು ನಮ್ಮ ಜಾಗೃತ ಮನಸ್ಸು ಅದುಮಿಡುತ್ತದೆ.

ಮೇಲಿನ ದೃಷ್ಟಾಂತದಲ್ಲಿ ಗಂಡಿನಂತೆ ಹೆಣ್ಣಿಗೂ ತನ್ನದೇ ಕಾಮುಕತೆಯ ಬಗೆಗೆ ಯೋಚಿಸಲು ಆಹ್ವಾನಿಸಿದಾಗ ತನ್ನ ಸಾಧ್ವೀತನಕ್ಕೆ ಒಪ್ಪುವುದಿಲ್ಲ ಎಂದಳು. ಇದರರ್ಥ ಏನು? ಹೆಣ್ಣಿನ ಕಾಮುಕತೆಯು ಗಂಡಿನ ಕಾಮುಕತೆಗೆ ಬೆಸುಗೆಗೊಂಡು ಪ್ರತ್ಯೇಕ ಅಸ್ತಿತ್ವ ಕಳೆದುಕೊಂಡಿದೆ. ಹಾಗಾಗಿ ಗಂಡನೊಡನೆ ಪ್ರತಿಫಲಿಸಿ ಕಾಣುತ್ತದಷ್ಟೆ. ಅಸ್ತಿತ್ವ ಹೇಗೆ ಕಳೆದುಹೋಯಿತು ಎಂದು ಸ್ವಲ್ಪ ಯೋಚಿಸಿದರೆ ಗೊತ್ತಾಗುತ್ತದೆ. ನಮ್ಮ ಪರಂಪರೆಯಲ್ಲಿ ಹರಿದುಬಂದು ಸಂಸ್ಕಾರದ ರೂಪದಲ್ಲಿ ಎಲ್ಲ ಹೆಂಗಸರಿಗೂ ಹೇಳಿಕೊಡಲಾಗಿದೆ. ಹೆಂಗಸರಾಗಿ ತಮ್ಮ ಕಾಮುಕತೆಯನ್ನು ಅಂತರಂಗದಲ್ಲೇ ಅದುಮಿಟ್ಟು ಗಂಡನೊಡನೆ ಮಾತ್ರ ತೋರ್ಪಡಿಸಬೇಕು. ಹೀಗಿರುವಾಗ ಹೆಣ್ಣಿನಲ್ಲಿ ಸ್ವತಂತ್ರ ಕಾಮಪ್ರಜ್ಞೆ ಅರಳಲು ಹೇಗೆ ಸಾಧ್ಯ?

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.