ಯಾವುದೇ ಹೊಸ ಜ್ಞಾನಶಾಖೆಯಾಗಲಿ ಅದು ಹೊತ್ತು ತರುವ ಅನುಕೂಲಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಅದು ಸೃಷ್ಟಿಸಬಹುದಾದ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಾವು ಸಿದ್ಧರಾಗಬೇಕಿದೆ. ಐವತ್ತರ ದಶಕದಲ್ಲಿ ಸೈನ್ಸ್ ಫಿಕ್ಷನ್ ಎಂದು ಭಾವಿಸಿದ್ದ ಕೃತಕ ಬುದ್ಧಿಮತ್ತೆ (ಎ.ಐ) ಈಗ ಬದುಕಿನ ಎಲ್ಲ ಕ್ಷೇತ್ರಗಳನ್ನೂ ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದೆ. ಎ.ಐನಿಂದ ಈಗಾಗಲೇ ಹಲವು ಬಗೆಯ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಆದರೆ ಕೃತಿಸ್ವಾಮ್ಯದ (ಕಾಪಿರೈಟ್) ಮೇಲೆ ಇದೇ ಎ.ಐ ಯಾವ ಪರಿಣಾಮ ಉಂಟುಮಾಡಲಿದೆ ಮತ್ತು ಅದನ್ನು ಎದುರಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ವ್ಯಾಪಕ ಚರ್ಚೆಗೆ ಒಳಪಟ್ಟಿದೆ.

ಎ.ಐ ಮತ್ತು ಕಾಪಿರೈಟ್ ವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಹಿನ್ನೆಲೆ ಗಾಯಕ ದಿವಂಗತ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಎ.ಐ ತಂತ್ರಜ್ಞಾನ ಬಳಸಿ ಮತ್ತೊಂದು ಚಿತ್ರದಲ್ಲಿ ಬಳಸಿರುವುದು ಮತ್ತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಹಳೆ ಚಿತ್ರವೊಂದರ ಹಾಡನ್ನು ಹೊಸ ಚಿತ್ರವೊಂದರಲ್ಲಿ ಬಳಸಿಕೊಂಡಿರುವ ಬಗ್ಗೆ ವಿವಾದ ಸೃಷ್ಟಿಯಾಗಿದೆ. ವಿವಿಧ ಕಂಪನಿಗಳ ತಂತ್ರಾಂಶ ಬಳಸಿಕೊಂಡು ಎ.ಐ ಮೂಲಕ ಸೃಷ್ಟಿಸುತ್ತಿರುವ ಉತ್ಪನ್ನಗಳ ವಿರುದ್ಧ ಕೆಲವು ಮೂಲ ಕಂಪನಿಗಳು ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಮುಂದಾಗಿವೆ.

ಎ.ಐ ತಂತ್ರಜ್ಞಾನ ಬಳಸಿಕೊಂಡು ಸೃಷ್ಟಿ ಮಾಡುವ ಉತ್ಪನ್ನಗಳಿಗೆ ಕಾಪಿರೈಟ್ ಇರುತ್ತದೆಯೇ ಎಂಬುದು ಈಗಿರುವ ಪ್ರಶ್ನೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿರುವ ಕಾಪಿರೈಟ್ ಕಾಯ್ದೆಯು ಕೃತಿಯನ್ನು ಸೃಷ್ಟಿಸಿದ ವ್ಯಕ್ತಿಗೆ ಕಾಪಿರೈಟ್ ಹಕ್ಕನ್ನು ನೀಡುತ್ತದೆ. ರಕ್ತ, ಮಾಂಸ ಹೊತ್ತ ಮಾನವನಿಗೆ ಮಾತ್ರ ಕಾಪಿರೈಟ್ ನೀಡಲು ಸಾಧ್ಯ. ಒಂದು ವೇಳೆ ವ್ಯಕ್ತಿಯೊಬ್ಬ ತಂತ್ರಜ್ಞಾನ ಬಳಸಿಕೊಂಡು ಕ್ರಿಯಾಶೀಲ ಕೃತಿಗಳನ್ನು ರಚಿಸಿದರೂ ಆ ವ್ಯಕ್ತಿಗೆ ಕಾಪಿರೈಟ್ ಇರುತ್ತದೆಯೇ ವಿನಾ ತಂತ್ರಜ್ಞಾನಕ್ಕಲ್ಲ. ಉದಾಹರಣೆಗೆ, ಕ್ಯಾಮೆರಾ ಉಪಯೋಗಿಸಿಕೊಂಡು ಸೃಷ್ಟಿಯಾದ ಫೋಟೊವಿನ ಕಾಪಿರೈಟ್ ಫೋಟೊ ತೆಗೆದ ವ್ಯಕ್ತಿಗೆ ಇರುತ್ತದೆ, ಕ್ಯಾಮೆರಾಗಲ್ಲ. ಆದರೆ ಕಾಪಿರೈಟ್ ದೃಷ್ಟಿಯಿಂದ ನೋಡಿದಾಗ, ಎ.ಐ ಅನೇಕ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಕಾಪಿರೈಟ್ ಕಾಯ್ದೆ ಪ್ರಕಾರ, ಆತ ಅಥವಾ ಆಕೆಯನ್ನು ‘ಕೃತಿಕಾರ’ ಅಥವಾ ‘ಆಥರ್’ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯೊಬ್ಬ ಕಥೆ, ಕಾದಂಬರಿ, ಕವನ, ಲೇಖನದಂತಹವನ್ನು ರಚಿಸಿದರೆ ಅದರ ಕಾಪಿರೈಟ್ ಆ ಕೃತಿಕಾರನಿಗೆ ಇರುತ್ತದೆ. ಕಲಾವಿದನೊಬ್ಬನಿಗೆ ತನ್ನ ಕಲಾಕೃತಿಯ ಕಾಪಿರೈಟ್ ಇರುತ್ತದೆ. ಆದರೆ ಎ.ಐ ಸೃಷ್ಟಿಸುವ ಪುಸ್ತಕ, ಕಲಾಕೃತಿಯಂತಹ ಉತ್ಪನ್ನಗಳಿಗೆ ಯಾರನ್ನು ಕೃತಿಕಾರರು ಅಥವಾ ಆಥರ್ ಎಂದು ಗುರುತಿಸುವುದು? ಎ.ಐ ಸೃಷ್ಟಿಸಿದ ಕಲಾಕೃತಿಗಳ ಪ್ರದರ್ಶನವೊಂದು ದೆಹಲಿಯ ಕಲಾ ಗ್ಯಾಲರಿಯೊಂದರಲ್ಲಿ ಇತ್ತೀಚೆಗೆ ನಡೆಯಿತು. ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಎ.ಐ ಆಧಾರಿತ ಕಲಾಕೃತಿಯೊಂದು ಅಧಿಕ ಬೆಲೆಗೆ ಮಾರಾಟವಾಗಿದೆ. ಈ ಕೃತಿಗಳ ಕಾಪಿರೈಟ್ ಯಾರಲ್ಲಿದೆ?

ಕಾಪಿರೈಟ್ ಕಾಯ್ದೆಯ ಅನುಸಾರ, ಯಾವುದೇ ಕೃತಿಗೆ ಕಾಪಿರೈಟ್ ದೊರೆಯಬೇಕಾದರೆ ಅದು ಮೂಲ ಕೃತಿಯಾಗಿರಬೇಕು. ಕೃತಿಕಾರನ ಕಲ್ಪನೆ, ಕೌಶಲ ಮತ್ತು ಕ್ರಿಯಾಶೀಲತೆಯಿಂದ ಸೃಷ್ಟಿಯಾಗಿರಬೇಕು. ಒರಿಜಿನಲ್ ಯಾವುದು ಎಂಬುದನ್ನು ಕಾಪಿರೈಟ್ ಕಾಯ್ದೆ ವಿವರಿಸದಿದ್ದರೂ ವ್ಯಾಜ್ಯ ಉಂಟಾದಾಗ ನ್ಯಾಯಾಲಯಗಳು ಅದನ್ನು ನಿರ್ಧರಿಸುತ್ತವೆ. ಇತರರು ರಚಿಸಿದ್ದ ಕೃತಿಯನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಕೃತಿಚೌರ್ಯ ಮಾಡಿದ್ದಕ್ಕೆ ಕೆಲವರು ದಂಡವನ್ನೂ ತೆತ್ತಿದ್ದಾರೆ.

ಎ.ಐ ಸೃಷ್ಟಿಸುವ ಕೃತಿ ಒರಿಜಿನಲ್ ಎಂದು ಹೇಳಬಹುದೇ? ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ಎಂಬ ಅಲ್ಗಾರಿದಮ್ ಉಪಯೋಗಿಸಿಕೊಂಡು ಎ.ಐ ಹೊಸ ಕೃತಿಯನ್ನು ಸೃಷ್ಟಿಸುತ್ತದೆ. ಓಪನ್ ಎ.ಐನ ಜಿಪಿಟಿ-3, ಗೂಗಲ್ ಅವರ ಪಾಮ್-2 ಕೆಲವು ಮಾದರಿ ಎಲ್‌ಎಲ್ಎಂಗಳು. ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ, ದತ್ತಾಂಶದಂತಹವನ್ನು ಉಪಯೋಗಿಸಿಕೊಂಡು ಸೃಷ್ಟಿಯಾದ ಕೃತಿ ಅಥವಾ ಉತ್ಪನ್ನ ಒರಿಜಿನಲ್ ಆಗಿರಲು ಸಾಧ್ಯವೇ? ಈ ಪ್ರಕ್ರಿಯೆಯಲ್ಲಿ ಕಾಪಿರೈಟ್ ಕಾಯ್ದೆ ಉಲ್ಲಂಘನೆ ಆಗುವ ಸಾಧ್ಯತೆ ಇದೆ. ತಾನು ಬಳಸಿಕೊಳ್ಳುವ ಮಾಹಿತಿಯಂತಹವುಗಳಿಗೆ ಅದಾಗಲೇ ಕಾಪಿರೈಟ್ ಇದೆ ಎಂದು ಎ.ಐಗೆ ಹೇಗೆ ತಿಳಿಯುತ್ತದೆ? ಎ.ಐಗೆ ಕೋಟ್ಯಂತರ ದತ್ತಾಂಶ ಅಗತ್ಯವಿರುವುದರಿಂದ ಅದನ್ನು ಸರಬರಾಜು ಮಾಡುವ ಮಾನವರಿಗೆ ಸಹ ಅದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.

ಕಾಪಿರೈಟ್ ಹೊಂದಿರುವ ಮಾಹಿತಿಯನ್ನು ಇತರರು ಬಳಸಿಕೊಳ್ಳುವುದಕ್ಕೆ ಕಾಪಿರೈಟ್ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ ಇಡೀ ಕೃತಿಯನ್ನು ಬಳಸಿಕೊಳ್ಳುವಂತಿಲ್ಲ. ಉದಾಹರಣೆಗೆ, ಒಂದು ಕಾದಂಬರಿಯ ವಿಮರ್ಶೆಗೆ ಆ ಕೃತಿಯ ನಾಲ್ಕಾರು ಸಾಲುಗಳನ್ನು ಬಳಸಿಕೊಳ್ಳಬಹುದು. ಆಗ ಅದು ಕಾಪಿರೈಟ್ ಕಾಯ್ದೆಯ ಉಲ್ಲಂಘನೆ ಆಗುವುದಿಲ್ಲ. ಎ.ಐ ತಾನು ಬಳಸಿಕೊಂಡ ಮಾಹಿತಿಯ ಮೂಲ ಕೃತಿಕಾರರಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವೇ?

ಕೃತಿಚೌರ್ಯ ನಡೆದಿದೆ ಎಂದು ಖಾತರಿಯಾದಲ್ಲಿ, ಕೃತಿಕಾರರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ವಿವಿಧ ರೀತಿಯ ಪರಿಹಾರ ಪಡೆಯಬಹುದು. ಉದಾಹರಣೆಗೆ, ಹಣ ಕೇಳಬಹುದು, ಕೃತಿಚೌರ್ಯದ ಕೃತಿಯನ್ನು ಹಿಂದಕ್ಕೆ ಪಡೆಯಬಹುದು, ಅದನ್ನು ಮಾರಾಟ ಮಾಡದಂತೆ ಸೂಚಿಸಬಹುದು... ಆದರೆ ಎ.ಐ ಸೃಷ್ಟಿಸಿದ ಉತ್ಪನ್ನದ ಕೃತಿಚೌರ್ಯವಾದಲ್ಲಿ ಯಾರ ವಿರುದ್ಧ ಕ್ರಮ ಕೈಗೊಳ್ಳುವುದು, ಉಲ್ಲಂಘನೆಗೆ ಯಾರನ್ನು ಶಿಕ್ಷೆಗೆ ಗುರಿಪಡಿಸುವುದು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ.

ಕಾಪಿರೈಟ್ ಹೊಂದಿರುವವರು ತಮ್ಮ ಹಕ್ಕನ್ನು ಮತ್ತೊಬ್ಬರಿಗೆ ನೀಡಲು, ಮಾರಾಟ ಮಾಡಲು ಅಥವಾ ವರ್ಗಾಯಿಸಲು ಕಾಪಿರೈಟ್ ಕಾಯ್ದೆಯಲ್ಲಿ ಅವಕಾಶವಿದೆ. ಕಾಪಿರೈಟ್ ಹೊಂದಿರುವವರು ನಿಧನರಾದರೆ ಅವರ ವಾರಸುದಾರರಿಗೆ ಕಾಪಿರೈಟ್ ವರ್ಗಾಯಿಸಬಹುದು. ಮಾನವರಿಗೆ ಇರುವ ಆಯಸ್ಸಿನ ಮಿತಿ ಎ.ಐಗೆ ಇಲ್ಲದ ಕಾರಣ ಎ.ಐ ಸೃಷ್ಟಿಸುವ ಕೃತಿಗೆ ಅಥವಾ ಉತ್ಪನ್ನಕ್ಕೆ ಯಾರು ವಾರಸುದಾರರು?

ವ್ಯಕ್ತಿಯೊಬ್ಬರು ತಾವು ಸೃಷ್ಟಿಸಿದ ಕೃತಿಯನ್ನು ಮತ್ತೊಬ್ಬರು ಉಪಯೋಗಿಸಿಕೊಳ್ಳಲು ಅನುಮತಿ ನೀಡಬಹುದು. ಅಂತಹ ಸಂದರ್ಭದಲ್ಲಿ ಅವರು ಮೂಲ ಕೃತಿ ಸೃಷ್ಟಿಸಿದವರಿಗೆ ರಾಯಧನ (ರಾಯಲ್ಟಿ) ನೀಡ
ಬೇಕಾಗುತ್ತದೆ. ಆದರೆ ಎ.ಐ ಸೃಷ್ಟಿಸಿದ ಕೃತಿಗೆ ರಾಯಧನ ಇತ್ಯರ್ಥಪಡಿಸುವವರು ಯಾರು? ಕಾಪಿರೈಟ್ ಕಾಯ್ದೆಯ ಪ್ರಕಾರ, ಒಂದು ಕೃತಿ ಮೊದಲು ಪ್ರಕಟಗೊಂಡ 60 ವರ್ಷಗಳ ನಂತರ ಅದನ್ನು ಸೃಷ್ಟಿಸಿದವರು (ಕೆಲವು ನಿಯಮಗಳಿಗೆ ಒಳಪಟ್ಟು) ತಮ್ಮ ಕಾಪಿರೈಟ್ ಕಳೆದುಕೊಳ್ಳುತ್ತಾರೆ. ಇದೇ ನಿಯಮವನ್ನು ಎ.ಐ ಸೃಷ್ಟಿಸಿದ ಕೃತಿಗಳಿಗೆ ಅನ್ವಯಿಸುವುದು ಹೇಗೆ?

ಭಾರತೀಯ ಕಾಪಿರೈಟ್ ಕಾಯ್ದೆಯು ಮೂಲ ಕೃತಿಕಾರರಿಗೆ ಎರಡು ರೀತಿಯ ನೈತಿಕ ಹಕ್ಕುಗಳನ್ನು ನೀಡುತ್ತದೆ. ಮೊದಲನೆಯದಾಗಿ, ಕಾಪಿರೈಟ್ ಹೊಂದಿರುವವರೇ ಅದನ್ನು ಸೃಷ್ಟಿಸಿದವರು ಎಂದು ನಮೂದಿಸಬೇಕಾದ ಹಕ್ಕು. ಎರಡನೆಯದು, ಮೂಲ ಕೃತಿಯನ್ನು ಬದಲಿಸುವುದು, ಅದರ ಅರ್ಥ ಬದಲಾಯಿಸುವುದು ಅಥವಾ ತಿರುಚುವುದರ ಮೂಲಕ ಮೂಲ ಕೃತಿಕಾರರಿಗೆ ಅಪಚಾರ ಮಾಡಿದರೆ ಅದರ ವಿರುದ್ಧ ಪರಿಹಾರ ಪಡೆಯುವ ಹಕ್ಕು. ಈ ನೈತಿಕ ಹಕ್ಕನ್ನು ಒಬ್ಬ ವ್ಯಕ್ತಿಗೆ ನೀಡಲು ಸಾಧ್ಯವೇ ವಿನಾ ಎ.ಐಗೆ ನೀಡಲು ಸಾಧ್ಯವಿಲ್ಲ ಎಂದು ಪ್ರಕರಣವೊಂದರಲ್ಲಿ (ಅಮರ್‌ನಾಥ್ ಸೆಹಗಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ದೆಹಲಿ ಹೈಕೋರ್ಟ್ ಹೇಳಿದೆ.

ಕಾಪಿರೈಟ್‌ಗೆ ಸಂಬಂಧಿಸಿದಂತೆ ಎ.ಐನಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಕಾಪಿರೈಟ್ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಹಾಗೂ ಇತರ ನಿಯಮಗಳಿಗೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಕಾಣುತ್ತದೆ. ಬೌದ್ಧಿಕ ಆಸ್ತಿ ಹಕ್ಕನ್ನು ಪುನರವಲೋಕನ ಮಾಡಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ 161ನೇ ವರದಿಯಲ್ಲಿ, ಎ.ಐಗೆ ಸಂಬಂಧಿಸಿದಂತೆ ಪ್ರತ್ಯೇಕ ಹಕ್ಕುಗಳನ್ನು ರೂಪಿಸಬೇಕೆಂದು ಸಲಹೆ ಮಾಡಿದೆ.

ಎ.ಐ ಮತ್ತು ಮಾನವನ ಸಹಕಾರದೊಂದಿಗೆ ಸೃಷ್ಟಿಯಾದ ಕೃತಿಯಲ್ಲಿ ವ್ಯಕ್ತಿಯ ಪಾತ್ರ ಹೆಚ್ಚಾಗಿದ್ದರೆ ಅವರನ್ನು ಕೋ-ಆಥರ್ ಎಂದು ಪರಿಗಣಿಸಿ ಕಾಪಿರೈಟ್ ನೀಡಬಹುದು. ಆದರೆ ಇದು ಶಾಶ್ವತ ಪರಿಹಾರವಲ್ಲ. ಎ.ಐ ನಿಯಂತ್ರಣಕ್ಕೆ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರ ರಚಿಸಲು ಕೆಲವು ರಾಷ್ಟ್ರಗಳು ಮುಂದಾಗಿವೆ. ಈ ಪ್ರಾಧಿಕಾರಗಳು ಕಾಪಿರೈಟ್ ವಿಷಯವನ್ನು ಪರಿಗಣಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.