ಒಂದು ನಾಡಿನ ವಯಸ್ಸು ಲೆಕ್ಕ ಹಾಕುವಾಗ ಮೂರ್‍ನಾಲ್ಕು ದಶಕಗಳು ಯಾವ ದೊಡ್ಡ ಸಂಖ್ಯೆಯೂ ಅಲ್ಲ. ಆದರೆ ಅದೇ ನಾಡಿನಲ್ಲಿ ಸೀಮಿತಾವಧಿಗೆ ಜೀವನ ಸಾಗಿಸುವ ಅದೆಷ್ಟೋ ಜನರ ಬದುಕುಗಳು ಕೂಡ ಆ ಕಾಲದೊಂದಿಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ಮರೆಯಲಾಗದು, ಮರೆಯಬಾರದು. ಇದು ಪ್ರತಿ ಕಾಲಘಟ್ಟಕ್ಕೂ ತನ್ನದೇ ಆದ ಮಹತ್ವ, ವೈಶಿಷ್ಟ್ಯ ಅಥವಾ ವೈರುಧ್ಯಗಳ ಇರುವಿಕೆಯನ್ನು ತೋರ್ಪಡಿಸುತ್ತದೆ. ಆ ದೃಷ್ಟಿಕೋನದಲ್ಲಿ ಯಾವ ಸಮಯವೂ ಯಾವ ಸಂದರ್ಭವೂ ಯಾವ ಬೆಳವಣಿಗೆಯೂ ಗೌಣ ಆಗಲಾರದು.

ಕನ್ನಡ ಭಾಷೆ, ಕನ್ನಡ ಜನ ಮತ್ತು ಕನ್ನಡ ನಾಡಿಗೆ ಸಂಬಂಧಿಸಿದಂತೆ ಹಿಂದಿನ ಮೂರು ದಶಕಗಳಿಂದ ಮೂರು ವರದಿಗಳು ಕಾಲಕಾಲಕ್ಕೆ ಸದ್ದು ಮಾಡುವುದು, ಮತ್ತೆ ನಿದ್ದೆಗೆ ಸರಿಯುವುದನ್ನು ನಾವೆಲ್ಲ ಗಮನಿಸುತ್ತಲೇ ಇದ್ದೇವೆ. ಒಂದು, ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಾತೃಭಾಷೆಯ ಮಹತ್ವ ಎತ್ತಿ ಹಿಡಿಯುವ ವಿ.ಕೃ.ಗೋಕಾಕ್ ವರದಿ. ಎರಡನೆಯದು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿ. ಮತ್ತೊಂದು, ಪ್ರಾದೇಶಿಕ ಅಸಮಾನತೆ ಕುರಿತು ಅಧ್ಯಯನಪೂರ್ಣವಾಗಿ ಮಾತನಾಡುವ ಡಿ.ಎಂ.ನಂಜುಂಡಪ್ಪ ವರದಿ. ಭಾಷಾ ಮಾಧ್ಯಮ, ಸ್ಥಳೀಯರಿಗೆ ಉದ್ಯೋಗ ಹಾಗೂ ಪ್ರಾದೇಶಿಕ ಸಮಾನತೆ ಪ್ರಶ್ನೆಗಳು ಚರ್ಚೆಯ ವೇದಿಕೆ ಏರಿದಾಗೆಲ್ಲಾ ಈ ಮೂರೂ ಜನಪ್ರಿಯ ವರದಿಗಳನ್ನು ಉಲ್ಲೇಖಿಸುವುದು ಸಾಂಪ್ರದಾಯಿಕ ಆಚರಣೆಯ ಭಾಗದಂತೆ ಜಾರಿಯಲ್ಲಿದೆ. ಈ ಮೂರು ವರದಿಗಳಲ್ಲಿ ಇದೀಗ ಗೋಕಾಕ್ ಮತ್ತು ಸರೋಜಿನಿ ಮಹಿಷಿ ವರದಿಗಳು ಹೆಚ್ಚು ಪ್ರಸ್ತಾಪವಾಗುವ ಸಂದರ್ಭ ಏರ್ಪಟ್ಟಿರುವುದನ್ನು ಗಮನಿಸಬಹುದು.

2024– 25ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಅನುಮತಿ ನೀಡಲಾಗಿತ್ತು. ಈಗ ಮತ್ತೆ ಹೆಚ್ಚುವರಿ ಬೇಡಿಕೆ ಪರಿಗಣಿಸಿ ಕನಿಷ್ಠ 100 ವಿದ್ಯಾರ್ಥಿಗಳಿರುವ 373 ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (ದ್ವಿಭಾಷಾ) ವಿಭಾಗಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಶಾಲೆಗಳು ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಶಿರಸಿ, ಮೈಸೂರು, ಹಾಸನ, ವಿಜಯಪುರ ಮತ್ತು ಚಿಕ್ಕಮಗಳೂರು ವ್ಯಾಪ್ತಿಗೆ ಸೇರಿವೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಬೋಧನೆಗೆ ಮುಂದಾಗಿರುವ ಸರ್ಕಾರದ ಈ ಕ್ರಮ ಕನ್ನಡ ಸಾಹಿತಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಹಾಗಾದರೆ ‘ಗೋಕಾಕ್ ಮಾದರಿ’ ಚಳವಳಿ ಆರಂಭಿಸಲು ಇದು ಸಕಾಲ ಆಗಿರಬಹುದೇ? ಸುಮಾರು ನಲವತ್ತು ವರ್ಷಗಳ ಹಿಂದಿನ ಆ ಚಳವಳಿ ಇಂದಿಗೂ ಮಾದರಿ ಆದೀತೇ? ಆಗಬೇಕೇ?

ಈ ಅವಧಿಯಲ್ಲಿ ಭಾಷಾ ಮಾಧ್ಯಮದ ಬಿಕ್ಕಟ್ಟು ಎಷ್ಟೊಂದು ದಿಕ್ಕುಗಳಲ್ಲಿ ಟಿಸಿಲೊಡೆದಿದೆ; ವಿದ್ಯಾರ್ಥಿಗಳು, ಪೋಷಕರು, ಸರ್ಕಾರದ ಮನೋಧರ್ಮ, ಅಗತ್ಯ ಮತ್ತು ಆದ್ಯತೆಗಳು ಎಷ್ಟೆಲ್ಲಾ ಏರುಪೇರು ಕಂಡಿವೆ. ಸಾಹಿತಿಗಳು, ಹೋರಾಟಗಾರರು, ಯುವಪೀಳಿಗೆಯ ಕೆಚ್ಚು, ಪ್ರಾಮಾಣಿಕತೆ ಮುಕ್ಕಾಗಿರುವ ಸತ್ಯವನ್ನೂ ಮರೆಮಾಚಲಾಗದು. ಹಾಗಾಗಿ, ಗೋಕಾಕ್ ವರದಿ ಅಥವಾ ಚಳವಳಿಯ ಮಾದರಿ ಪ್ರಸ್ತುತತೆ ಉಳಿಸಿಕೊಂಡಿದೆಯೇ ಎಂಬುದನ್ನು ಮತ್ತೊಮ್ಮೆ ಖಾತರಿಪಡಿಸಿಕೊಳ್ಳಬೇಕಿದೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ದೊರೆಯಬೇಕೆಂಬುದು ಜಾಗತಿಕವಾಗಿ, ವೈಜ್ಞಾನಿಕವಾಗಿ ಸ್ವೀಕೃತ ತತ್ವ. ಈಗ ನಮ್ಮ ಮುಂದಿರುವುದು ಅದನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಪ್ರಶ್ನೆ ಮಾತ್ರ. ಇದು ಬರೀ ಕನ್ನಡದ ಸಮಸ್ಯೆಯಲ್ಲ. ಭಾರತದಲ್ಲಿರುವ 19,545 ಮಾತೃಭಾಷೆಗಳ ಅಸ್ತಿತ್ವ, ಅಸ್ಮಿತೆ ಇದರಲ್ಲಿ ಅಡಗಿದೆ. ಇಂತಹ ವಿಶಾಲ ವ್ಯಾಪ್ತಿಯ, ರಾಷ್ಟ್ರ ಮಟ್ಟದ ‘ನೀತಿ’ ಬೇಡುವ ವಿಷಯದ ಬಗ್ಗೆ ಸಮಯಕ್ಕೆ ತಕ್ಕಂತೆ, ವೇದಿಕೆಗೆ ತಕ್ಕಷ್ಟು ಕೂಗು ಹಾಕುವುದರಿಂದ ಏನೂ ಪ್ರಯೋಜನವಾಗದು.

ಸರ್ಕಾರಿ ಶಾಲೆಗಳಲ್ಲಿ ಕಲಿಯುವವರು ಬಹುಪಾಲು ಹಳ್ಳಿಗಾಡಿನ ಬಡವರ, ಪರಿಶಿಷ್ಟರ, ಹಿಂದುಳಿದವರ ಮಕ್ಕಳು. ಈ ವಿದ್ಯಾರ್ಥಿಗಳಿಗೆ ಮಾತ್ರ ಮಾತೃಭಾಷಾ ಶಿಕ್ಷಣ ಪದ್ಧತಿ ಅನ್ವಯಿಸಲು ಹೋರಾಡುವುದು, ಇಂಗ್ಲಿಷ್ ಮಾಧ್ಯಮದ ಲಕ್ಷಾಂತರ ಖಾಸಗಿ ಶಾಲೆಗಳ ಕುರಿತು ಮೌನ ವಹಿಸುವುದು ಯಾವ ನ್ಯಾಯ? ಸಹಜವಾಗಿಯೇ ಉದ್ಭವಿಸುವ ಈ ಸರಳ ಸಂದೇಹಕ್ಕೆ ಸ್ಪಷ್ಟ ಉತ್ತರವಿನ್ನೂ ದೊರಕಿಲ್ಲ. ವಸ್ತುಸ್ಥಿತಿ ಹೀಗಿರುವಾಗ, ‘ಜಾತಿ, ವರ್ಗ, ಪ್ರದೇಶದ ನಡುವೆ ತಾರತಮ್ಯ ಸೃಷ್ಟಿಯಾಗದಂತೆ ಎಲ್ಲರಿಗೂ ಏಕರೀತಿಯಲ್ಲಿ ಶಿಕ್ಷಣ ಮಾಧ್ಯಮವನ್ನು ಜಾರಿ ಮಾಡಿ’ ಎಂಬ ನ್ಯಾಯಯುತ ಬೇಡಿಕೆಗೆ ಹೆಚ್ಚಿನ ಮಹತ್ವವಿದೆ. ಬದಲಾದ ಸನ್ನಿವೇಶದಲ್ಲಿ ಮುನ್ನೆಲೆಗೆ ಬರಬೇಕಿರುವುದು ‘ಸಮಾನ ಶಿಕ್ಷಣ ನೀತಿ’ ಎಂಬುದನ್ನು ನಿರಾಕರಿಸಲು ಬಹುಶಃ ಯಾವುದೇ ತರ್ಕ-ವಾದ-ಸಬೂಬು ದೊರೆಯಲಿಕ್ಕಿಲ್ಲ.

ಇತ್ತೀಚೆಗೆ ಸಾರ್ವಜನಿಕ ರಂಗದ ಮೇಲೆ ಪರದೆ ಸರಿಸಿ ಕಾಣಿಸಿಕೊಂಡಿರುವ ಮತ್ತೊಂದು ವಿಷಯ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದ್ದು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅದ್ಯಾವ ಲೆಕ್ಕಾಚಾರದಲ್ಲೋ ಇದ್ದಕ್ಕಿದ್ದಂತೆ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ರೂಪಿಸಿದ ಮಸೂದೆಯ ಕರಡುವಿಗೆ ಉದ್ಯಮಪತಿಗಳು ಬಹಿರಂಗವಾಗಿಯೇ ಪ್ರತಿರೋಧ ಒಡ್ಡಿದರು. ಹೂಡಿಕೆದಾರರ ವಲಸೆಯ ಬೆದರಿಕೆಗಳೂ ಕೇಳಿಬಂದವು. ಅಡಕತ್ತರಿಯಲ್ಲಿ ಸಿಲುಕಿದ ಸರ್ಕಾರ ನೆಪವೊಂದನ್ನು ನೀಡುವ ಮೂಲಕ ಕರಡು ಮಸೂದೆಗೆ ಅನುಮೋದನೆ ನೀಡುವ ವಿಚಾರವನ್ನು ಮುಂದಕ್ಕೆ ದೂಡಿ ‘ಬದುಕಿದೆಯಾ ಬಡಜೀವವೇ…’ ಎಂದು ಉಸಿರೆಳೆದುಕೊಂಡಿತು.

ಆದರೆ ಅಷ್ಟೊತ್ತಿಗಾಗಲೇ ಕನ್ನಡಿಗರ ಉದ್ಯೋಗಾಕಾಂಕ್ಷೆಯ ಸುಪ್ತ ಬಯಕೆ ಗರಿಬಿಚ್ಚಿ ನರ್ತಿಸತೊಡಗಿತ್ತು. ಹೋರಾಟಗಾರರ ಬಾವುಟಗಳು ಹೊರಬಂದವು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಅಂದಾಕ್ಷಣ ಸರೋಜಿನಿ ಮಹಿಷಿ ವರದಿ ಕೂಡ ಸಹಜವಾಗಿ ಘೋಷಣೆಗಳ ಭಾಗವಾಯಿತು. ಆದರೆ ಎಂಬತ್ತರ ದಶಕದ ಜಾಗತೀಕರಣಪೂರ್ವ ಸನ್ನಿವೇಶ, ಬೇಡಿಕೆ, ಅಗತ್ಯ, ಅಂಕಿಅಂಶಗಳನ್ನು ಆಧರಿಸಿ ಸಿದ್ಧಪಡಿಸಿದ ಈ ವರದಿಯ ಪ್ರಸ್ತುತತೆಯನ್ನು ಒರೆಗೆ ಹಚ್ಚುವ ವ್ಯವಧಾನ ಅಷ್ಟಾಗಿ ಕಾಣಿಸಲಿಲ್ಲ.

ಎಂದಿನಂತೆ ಇಂತಹ ವಿಷಯಗಳಲ್ಲಿ ಭಾವಾವೇಶದ್ದೇ ಮೇಲುಗೈ. ‘ಕನ್ನಡಾಭಿಮಾನ ಎಂಬುದು ಮತಾಂಧತೆ ಸ್ವರೂಪ ತಳೆಯಬಾರದು’ ಎಂಬ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ ಸಂಯಮದ ನುಡಿ ಉದ್ವೇಗವಶರಾದವರಿಗೆ ರುಚಿಸಲಾರದು. ಅದರಂತೆ ‘ವರ್ಗ ಮತ್ತು ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರೇ ಕನ್ನಡಿಗರ ಕೋಟಾದ ಫಲಾನುಭವಿಗಳಾಗಬಹುದು’ ಎಂಬ ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಅಂತಹವರ ಆತಂಕ ಎಷ್ಟು ಪ್ರಜ್ಞೆಗಳಿಗೆ ನಿಲುಕೀತು ಎಂದು ಹೇಳುವುದೂ ಕಷ್ಟ. ಹಾಗಾದರೆ ಪ್ರಚಲಿತ ಹೋರಾಟಗಳು ಔಟ್‌ಡೇಟೆಡ್ ಆಗಿವೆ ಎಂಬ ಆಕ್ಷೇಪದಲ್ಲಿ ತಥ್ಯ ಇದೆಯಲ್ಲವೇ? ಅವು ಆಧುನಿಕ ಸಂದರ್ಭ, ಅಗತ್ಯಗಳಿಗೆ ಸರಿಹೊಂದುವಂತೆ ಪರಿಷ್ಕರಣೆ ಆಗುವ ಅನಿವಾರ್ಯವನ್ನು ಒಪ್ಪಬೇಕಲ್ಲವೇ?

ಜಾಗತೀಕರಣದ ದೆಸೆಯಿಂದಾಗಿ ಒಲಿಂಪಿಕ್ ಓಟದ ವೇಗದಲ್ಲಿ ಬದಲಾಗುತ್ತಿರುವ ದೇಶದ ಮತ್ತು ದೇಶವಾಸಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಪಾರಿಸರಿಕ ಸನ್ನಿವೇಶಗಳು ಬೌದ್ಧಿಕ ವಲಯದಿಂದ ಹೊಚ್ಚಹೊಸ ಚಿಂತನೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಸಂಚಲನೆಯ ನಿರೀಕ್ಷೆಯಲ್ಲಿವೆ. ಆಧುನಿಕ ಅಗತ್ಯಗಳಿಗೆ ಅಷ್ಟೇ ವೇಗದಲ್ಲಿ ಸ್ಪಂದಿಸುವಂತೆ ನಾಡಿನ ಸ್ವಸ್ಥ ಮನಸ್ಸುಗಳು ಹುರಿಗೊಳ್ಳುವುದು ಅನಿವಾರ್ಯ. ಈ ದಿಸೆಯಲ್ಲಿ ವಿಶಾಲ ತಳಹದಿಯ ‘ಹೊಸ ಮಾದರಿ’ ಚಳವಳಿ ಹುಟ್ಟುಹಾಕುವ, ಹೋರಾಟ ಕಟ್ಟುವ ಹೊಣೆಯನ್ನು ಸಾಹಿತಿಗಳ ಸುಪರ್ದಿಗೆ ವಹಿಸಿ ಸುಮ್ಮನಾಗುವುದು ಕೂಡ ಪ್ರಯೋಜನ ತರಲಿಕ್ಕಿಲ್ಲ.

ಸಮಾಜದ ವಿವಿಧ ಸ್ತರಗಳ ವಿವೇಕಿಗಳೆಲ್ಲಾ ಈ ದಿಕ್ಕಿನಲ್ಲಿ ದನಿ ಎತ್ತಬೇಕಿದೆ. ಅದಕ್ಕೂ ಮೊದಲು ಪ್ರಾಥಮಿಕ ಶಿಕ್ಷಣ ಮಾಧ್ಯಮ ಹಾಗೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಜಾಗತೀಕರಣೋತ್ತರ ಸಂದರ್ಭದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಿನ್ನೆಲೆಯಲ್ಲಿ ‘ನವ ಮಹಿಷಿ’ ಮತ್ತು ‘ನವ ಗೋಕಾಕ್’ ವರದಿಗಳು ಸಿದ್ಧಗೊಳ್ಳಬೇಕಿವೆ. ಅವುಗಳನ್ನು ಹಿಂಬಾಲಿಸ ಬೇಕಿರುವುದು ಚಳವಳಿಯ ‘ಹೊಸ ಮಾದರಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.