ವ್ಯಕ್ತಿಗಳ ಜೀವನದಲ್ಲಿ, ಸಂಸ್ಥೆಗಳ ಇತಿಹಾಸದಲ್ಲಿ ರಜತ ಮಹೋತ್ಸವ, ಸುವರ್ಣ ಮಹೋತ್ಸವದಂಥ ಆಚರಣೆ ಸಾಮಾನ್ಯ. ಈ ವರ್ಷ ಇಡೀ ದೇಶವೇ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದೇ ಏಪ್ರಿಲ್ 24ರಂದು ದೇಶ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಯಿತು. ಅದು, ಸುವರ್ಣ ಮಹೋತ್ಸವದ ಸಂಭ್ರಮ. ಆದರೆ ಇದು ಸದ್ದು ಮಾಡಬೇಕಾದ ವಲಯದಲ್ಲಿ ಸದ್ದು ಮಾಡದೆ ತನ್ನಂಗಳದಲ್ಲಷ್ಟೇ ಆಚರಿಸಿಕೊಂಡು ಅದರ ಮಹತ್ವವನ್ನು ಸಾರಿತು.

ಈ ಸಂಭ್ರಮ, ಈ ಆಚರಣೆಯು ಸುಪ್ರೀಂ ಕೋರ್ಟ್ನ ಒಂದು ಮಹತ್ವದ ತೀರ್ಪು ಹೊರಬಿದ್ದು ಐವತ್ತು ವರ್ಷಗಳು ಸಂದಿವೆ ಎಂಬ ಕಾರಣಕ್ಕೆ. ಇದು ಅಪರೂಪವಷ್ಟೇ ಅಲ್ಲ, ಅತಿ ಮಹತ್ವದ್ದು. ಏಕೆಂದರೆ ಇದು ಸಂವಿಧಾನದ ಪಾರಮ್ಯವನ್ನು ಎತ್ತಿ ಹಿಡಿದು, ಶಾಸಕಾಂಗಕ್ಕೆ ಲಕ್ಷ್ಮಣ ರೇಖೆ ಎಳೆದು, ಅದರ ಮಿತಿಯನ್ನು ನಿಗದಿಪಡಿಸಿದ ತೀರ್ಪು. ಇಂದಿಗೂ ಸಂವಿಧಾನದ ಮೂಲ ಸ್ವರೂಪವನ್ನು ಬದಲಾವಣೆ ಮಾಡಲು ಆಸ್ಪದ ಕೊಡದೆ, ಸಂವಿಧಾನದ ನಿರ್ವಚನಕಾರರಿಗೆ ದಾರಿದೀಪವಾಗಿ ಮಾರ್ಗದರ್ಶನ ನೀಡುತ್ತಾ, ಸಂವಿಧಾನದ ಪಾರಮ್ಯವನ್ನು ಎತ್ತಿ ಹಿಡಿದಿರುವ ತೀರ್ಪು.

ಸುಪ್ರೀಂ ಕೋರ್ಟ್ ತನ್ನ ವೆಬ್ಸೈಟ್ನಲ್ಲಿ ಇದಕ್ಕಾಗಿ ಒಂದು ಜಾಲಪುಟವನ್ನು ಮೀಸಲಿಡುವ ಮೂಲಕ, ಮಹತ್ವದ ಈ ತೀರ್ಪನ್ನು ಜನರ ಬಳಿಗೆ ತರುವ ಪ್ರಯತ್ನ ಮಾಡಿದೆ. ಈ ತೀರ್ಪಿಗೆ ಕಾರಣವಾದ ವ್ಯಾಜ್ಯ, ಅದರ ವಿವರಗಳು, ಸಂಬಂಧಪಟ್ಟ ದಾಖಲೆಗಳು ಮತ್ತು ಇತರ ಎಲ್ಲ ವಿವರಗಳನ್ನು ಇದು ಒಳಗೊಂಡಿದೆ. ಈ ಸಂಬಂಧ ಒಂದು ಸಾಕ್ಷ್ಯಚಿತ್ರವನ್ನೂ ಬಿಡುಗಡೆ ಮಾಡಿದೆ. ಇಂಥ ಮಹತ್ವದ ಐತಿಹಾಸಿಕ ತೀರ್ಪಿಗೆ ಮೂಲವಾದದ್ದು, ಕೇರಳದ ಎಡನೀರು ಮಠದ ಸ್ವಾಮೀಜಿ ಕೇಶವಾನಂದ ಭಾರತಿ ಅವರು, ಕೇರಳ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿ.

ಏಕಿದಕ್ಕೆ ಇಷ್ಟೊಂದು ಮಹತ್ವ ಎಂದು ತಿಳಿಯಬೇಕಾದರೆ, ಈ ವ್ಯಾಜ್ಯಕ್ಕೆ ಕಾರಣವಾದ ಸರ್ಕಾರದ ಕ್ರಮದ ವಿವರವನ್ನು ತಿಳಿಯಬೇಕು. ಕೇರಳ ಸರ್ಕಾರವು 1969ರಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿತು. 1970ರಲ್ಲಿ ಅದು ಧಾರ್ಮಿಕ ಸಂಸ್ಥೆಗಳು ಸ್ವಾಮ್ಯ ಹೊಂದಬಹುದಾದ ಭೂಮಿಯ ಮಿತಿಯನ್ನು ನಿಗದಿಪಡಿಸಿತು. ಸರ್ಕಾರದ ಈ ಕ್ರಮ ದೊಡ್ಡ ಭೂ ಹಿಡುವಳಿದಾರರಿಂದ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತ ಬಡವರಿಗೆ ಹಂಚಿಕೆ ಮಾಡುವ ಯೋಜನೆಯ ಒಂದು ಭಾಗವಾಗಿತ್ತು. ಆಗ ಎಡನೀರು ಮಠದ ಮಠಾಧೀಶರಾಗಿದ್ದ ಕೇಶವಾನಂದ ಭಾರತಿ ಶ್ರೀಪಾದಂಗಳವರು ಸರ್ಕಾರದ ಈ ಕ್ರಮದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ನಲ್ಲಿ ವ್ಯಾಜ್ಯ ಹೂಡಿದರು. ಆ ಅವಧಿಯಲ್ಲಿ ಸಂವಿಧಾನಕ್ಕೆ 24, 25 ಮತ್ತು 29ನೇ ತಿದ್ದುಪಡಿಗಳನ್ನು ಮಾಡಲಾಗಿತ್ತು. 24ನೆಯ ತಿದ್ದುಪಡಿಯು ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ನ್ಯಾಯಾಂಗದ ನ್ಯಾಯಿಕ ಪುನರವಲೋಕನದ ವ್ಯಾಪ್ತಿಯನ್ನು ಸೀಮಿತಗೊಳಿಸುವ ಉದ್ದೇಶವನ್ನು ಹೊಂದಿತ್ತು. 25 ಮತ್ತು 29ನೇ ತಿದ್ದುಪಡಿಗಳು, ತನ್ನಿಚ್ಛೆಯ ಧರ್ಮವನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ, ಧಾರ್ಮಿಕ ವ್ಯವಹಾರಗಳನ್ನು ನಡೆಸುವ ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲು ಮಾಡಿದ ತಿದ್ದುಪಡಿಗಳಾಗಿದ್ದವು.

ಕೇಶವಾನಂದ ಭಾರತಿ ಅವರು, ಈ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಯನ್ನು ಉಲ್ಲಂಘಿಸುತ್ತವೆ ಎಂಬ ಕಾರಣದಿಂದ ಅವುಗಳ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಅವರ ವಾದವೆಂದರೆ, ಸರ್ಕಾರದ ಈ ಕ್ರಮ, ಸಂವಿಧಾನ ತನಗೆ ನೀಡಿರುವ ಕೆಲವೊಂದು ಹಕ್ಕುಗಳನ್ನು ಕಸಿದುಕೊಳ್ಳುತ್ತದೆ, ಸಂವಿಧಾನ ಪ್ರತಿಯೊಬ್ಬರಿಗೂ ತನ್ನಿಚ್ಛೆಯ ಧರ್ಮವನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ, ಧಾರ್ಮಿಕ ವ್ಯವಹಾರಗಳನ್ನು ನಡೆಸುವ ಹಕ್ಕನ್ನು, ಸಮಾನತೆಯ ಹಕ್ಕನ್ನು, ಆಸ್ತಿಯನ್ನು ಗಳಿಸುವ ಹಕ್ಕನ್ನು ನೀಡುತ್ತದೆ. ಆದರೆ ಸರ್ಕಾರದ ಈ ಕ್ರಮ ತನ್ನ ಈ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂಬುದಾಗಿತ್ತು.

ಒಂದು ವೇಳೆ ಸಂಸತ್ತಿನ ಈ ಅಧಿಕಾರಗಳನ್ನು ಪ್ರಶ್ನಿಸದೇ ಇದ್ದಿದ್ದರೆ ಮತ್ತು ಈ ತಿದ್ದುಪಡಿಗಳಿಂದ ಸಂಸತ್ತಿಗೆ ದೊರೆತ ಅಧಿಕಾರಗಳನ್ನು ಪ್ರಶ್ನಾತೀತವಾಗಿ ಚಲಾಯಿಸಲು ಅವಕಾಶ ಇದ್ದದ್ದೇ ಆಗಿದ್ದರೆ, ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿರುತ್ತದೆ ಎಂದೇ ಆಗಿದ್ದಿದ್ದರೆ, ಈಗಿನ ರಾಜಕೀಯ ಸಂದರ್ಭದಲ್ಲಿ ಆಗಬಹುದಾಗಿದ್ದ ಪಲ್ಲಟವು ಯಾರೂ ಊಹಿಸಬಹುದಾಗಿರುವಂಥದ್ದು. ಈ ಹಿನ್ನೆಲೆಯಲ್ಲಿ ಕೇಶವಾನಂದ ಭಾರತಿ ಅವರ ಈ ಪ್ರಕರಣ ಮತ್ತಷ್ಟು ಮಗದಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ.

ಕೇಶವಾನಂದ ಭಾರತಿ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ಮೂರು ಮುಖ್ಯ ಸಾಂವಿಧಾನಿಕ ಹಾಗೂ ಕಾನೂನು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಬಗೆಹರಿಸಬೇಕಿತ್ತು. ಮೊದಲನೆಯದಾಗಿ, ಕೇರಳ ಭೂ ಸುಧಾರಣಾ ಕಾಯ್ದೆಯ ಸಿಂಧುತ್ವ; ಎರಡನೆಯದಾಗಿ, ಸಂಸತ್ತು ಎಷ್ಟರಮಟ್ಟಿಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದು; ಮೂರನೆಯದಾಗಿ, ಸಂವಿಧಾನದ ಮೂಲ ಸಂರಚನೆಯ ಪರಿಭಾಷೆ ಏನು ಎಂಬುದು. ಈ ಪ್ರಶ್ನೆಗಳು, ರಾಜ್ಯ ಹಾಗೂ ರಾಷ್ಟ್ರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳಾದ್ದರಿಂದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ 68 ದಿನಗಳಷ್ಟು ದೀರ್ಘಕಾಲ ನಡೆಯಿತು. ಇದಕ್ಕಾಗಿ ಹದಿಮೂರು ನ್ಯಾಯಮೂರ್ತಿಗಳನ್ನು ಒಳಗೊಂಡ ಅತಿ ದೊಡ್ಡ ನ್ಯಾಯಪೀಠ ರಚನೆಯಾಗಿತ್ತು. ಇವೆರಡೂ ಸುಪ್ರೀಂ ಕೋರ್ಟ್ನ ಇತಿಹಾಸದಲ್ಲೇ ಇತಿಹಾಸವನ್ನು ಸೃಷ್ಟಿಸಿದ ಅಂಶಗಳು.

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ತನ್ನ ಪ್ರಜೆಗಳಿಗೆ ನೀಡಿರುವ ಸಾಮಾಜಿಕ, ಆರ್ಥಿಕ ಭದ್ರತೆಯ ಭರವಸೆಯನ್ನು ಈಡೇರಿಸುವುದಕ್ಕಾಗಿ, ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ ಹಕ್ಕು ಸಂಸತ್ತಿಗೆ ಇರುತ್ತದೆ. ಆದರೆ, ಆ ತಿದ್ದುಪಡಿಯು ಸಂವಿಧಾನದ ಮೂಲ ಸಂರಚನೆಯನ್ನು (ಬೇಸಿಕ್ ಸ್ಟ್ರಕ್ಚರ್) ಬದಲಾವಣೆ ಮಾಡುವಂತೆ ಇರಬಾರದು. ಸಂವಿಧಾನದ ಮೂಲ ಸಂರಚನೆ ಎಂಬುದರಲ್ಲಿ ಯಾವೆಲ್ಲ ಅಂಶಗಳು ಸೇರುತ್ತವೆ ಎಂಬುದನ್ನು ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿವರಿಸಿಲ್ಲ. ಆದರೆ, ನ್ಯಾಯಾಂಗದ ಶ್ರೇಷ್ಠತೆ, ಕಾನೂನು ಪಾಲನೆ, ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರಗಳ ಪ್ರತ್ಯೇಕತೆ, ಪ್ರಜಾಸತ್ತಾತ್ಮಕ ಆಳ್ವಿಕೆ, ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆ, ಕಲ್ಯಾಣ ರಾಷ್ಟ್ರ ಸ್ಥಾಪನೆಯಂತಹ ಸಂವಿಧಾನದ ಮೂಲಭೂತ ಆಶಯಗಳು ಸಂವಿಧಾನದ ಮೂಲ ಸಂರಚನೆಯ ಭಾಗವಾಗಿವೆ ಎಂದು ಸುಪ್ರೀಂ ಕೋರ್ಟ್ ಮುಂದೆ ಅನೇಕ ಪ್ರಕರಣಗಳಲ್ಲಿ ಸ್ಪಷ್ಟವಾಗಿ ನಿರೂಪಿಸಿದೆ.

ಈ ತೀರ್ಪು ಹೊರಬಿದ್ದ ಈ ಐವತ್ತು ವರ್ಷಗಳಲ್ಲಿ, ಭಾರತದ ಸಂವಿಧಾನವನ್ನು 60ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಗಳಿಂದಾಗಿ ಸಂವಿಧಾನದ ಮೂಲ ಸಂರಚನೆಗೆ ಧಕ್ಕೆಯಾಗಿದೆಯೇ ಎಂಬುದನ್ನು ಕಡೆಯ ಪಕ್ಷ 16 ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪರೀಕ್ಷಿಸಿದೆ.

ಇತರ ಹಿಂದುಳಿದ ವರ್ಗಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಾಗೂ ಪದೋನ್ನತಿಗಳಲ್ಲಿ ಮೀಸಲಾತಿ ಕಲ್ಪಿಸಿ ತಿದ್ದುಪಡಿ ಮಾಡಿದಾಗ, ಆ ತಿದ್ದುಪಡಿಯು ಸಂವಿಧಾನದ ಮೂಲ ಸಂರಚನೆಯನ್ನು ಬದಲಾಯಿಸುತ್ತದೆ ಎಂಬ ಕಾರಣದ ಮೇಲೆ ಅದನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ತಿದ್ದುಪಡಿ, ಕಲ್ಯಾಣ ರಾಷ್ಟ್ರ ನಿರ್ಮಾಣದ ಸಂವಿಧಾನದ ಆಶಯಕ್ಕೆ ಪೂರಕವಾಗಿ ಇದೆಯಾದ್ದರಿಂದ ಇದು ಸಂವಿಧಾನದ ಮೂಲ ಸಂರಚನೆಯನ್ನು ಬದಲಾಯಿಸಿದಂತೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಆ ತಿದ್ದುಪಡಿಯನ್ನು ಎತ್ತಿ ಹಿಡಿದಿತ್ತು. ಆದರೆ, ನ್ಯಾಯಾಂಗದ ಪಾರಮ್ಯ ಮತ್ತು ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಕಾನೂನನ್ನು ನ್ಯಾಯಾಂಗದ ಪುನರವಲೋಕನಕ್ಕೆ ಒಳಪಡಿಸುವ ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಗಳನ್ನೂ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಕೇಶವಾನಂದ ಭಾರತಿಯವರಿಗೆ ಸಂಬಂಧಿಸಿದ ತೀರ್ಪು ಬಂದ ನಂತರದ ಐವತ್ತು ವರ್ಷಗಳಲ್ಲಿ, ಸುಪ್ರೀಂ ಕೋರ್ಟ್ ಅನೇಕ ತೀರ್ಪುಗಳಲ್ಲಿ ತಳೆದ ನಿಲುವು, ಸಂವಿಧಾನದ ಪರಮಾಧಿಕಾರವನ್ನು, ಭಾರತದ ಧರ್ಮನಿರಪೇಕ್ಷ ಸ್ವರೂಪವನ್ನು ಮತ್ತು ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಾಪಾಡಿಕೊಂಡು ಬರಲು ಮತ್ತು ಸಂವಿಧಾನದ ಮೂಲ ಸಂರಚನೆಯ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ನೆರವಾಗಿದೆ.

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಚುಕ್ಕಾಣಿ ಹಿಡಿಯುವ ಎಲ್ಲ ನೇತಾರರೂ ಕೇಶವಾನಂದ ಭಾರತಿ ತೀರ್ಪಿನ ಆಂತರ್ಯವನ್ನು ಮತ್ತು ಸಂವಿಧಾನದ ತಿದ್ದುಪಡಿಗಿರುವ ಮಿತಿಗಳನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.