ಈಚೆಗೆ ಅಪರೂಪದ ಸಂದರ್ಭವೊಂದರಲ್ಲಿ ಕರ್ನಾಟಕ ವಿಧಾನಸಭೆಯ ಸದಸ್ಯರು ಉನ್ನತ ನ್ಯಾಯಾಂಗದ ಕೆಲವರ ವಿರುದ್ಧ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿದರು. ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಚರ್ಚೆ, ಸಂವಾದ ಮಾತ್ರದಿಂದ ಸಾರ್ವಜನಿಕರಿಗೆ ಯಾವ ಲಾಭವೂ ಇಲ್ಲ. ನ್ಯಾಯಾಂಗದಲ್ಲಿ ಸುಧಾರಣೆ ತರಲು, ಭ್ರಷ್ಟಾಚಾರ ಹತ್ತಿಕ್ಕಲು ಇನ್ನೂ ಹೆಚ್ಚಿನ ಕ್ರಮಗಳು ಬೇಕು. ಸಂಸತ್ತು, ಕರ್ನಾಟಕದ ವಿಧಾನಸಭೆ ಅಂತಹ ಕಾನೂನು ರೂಪಿಸಬೇಕು.

‘ಭ್ರಷ್ಟಾಚಾರ ತಡೆ ಕಾಯ್ದೆ– 1988’ರ ವ್ಯಾಖ್ಯಾನದ ಪ್ರಕಾರ, ನ್ಯಾಯಾಧೀಶರು ‘ಸಾರ್ವಜನಿಕ ಸೇವಕರು’. ಇನ್ನಿತರ ಸಾರ್ವಜನಿಕ ಸೇವಕರಂತೆ ನ್ಯಾಯಾಧೀಶರು ಅಧಿಕಾರಾವಧಿಯಲ್ಲಿ ತೃಪ್ತಿಕರವಾಗಿ ಲೆಕ್ಕ ನೀಡಲಾಗದಷ್ಟು ಆಸ್ತಿ ಸಂಪಾದಿಸಿದಾಗ, ಅದು ‘ಭ್ರಷ್ಟಾಚಾರ’ ಎಂದು ಪರಿಗಣಿತವಾಗುತ್ತದೆ. ಅವರಿಗೆ ಗರಿಷ್ಠ ಏಳು ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದು. ಉನ್ನತ ನ್ಯಾಯಾಂಗದ ನ್ಯಾಯಮೂರ್ತಿಯೊಬ್ಬರು ಈ ದೇಶದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದು, ತನಿಖೆ ಎದುರಿಸಿದ್ದು ಯಾವಾಗ ನಡೆದಿದೆ?! ಅಂತಹ ಪ್ರಕರಣಗಳು ನಮ್ಮ ದೇಶದಲ್ಲಿ ಆಗುವುದು ತೀರಾ ಅಪರೂಪ.

ಸಾರ್ವಜನಿಕ ಸೇವಕನನ್ನು ಲಂಚ ತೆಗೆದುಕೊಳ್ಳುವ ಹೊತ್ತಿನಲ್ಲಿಯೇ ಹಿಡಿಯುವುದು ಬಹಳ ಕಷ್ಟವೆಂದು ಜಗತ್ತಿನ ಹಲವು ದೇಶಗಳ ಕಾನೂನುಗಳು ಗುರುತಿಸಿವೆ. ಅದೇ ಮಾತನ್ನು, ಭಾರತದ ಭ್ರಷ್ಟಾಚಾರ ವಿರೋಧಿ ಕಾನೂನು ಕೂಡ ಗುರುತಿಸಿದೆ. ಹಾಗಾಗಿಯೇ, ವ್ಯಕ್ತಿಯೊಬ್ಬ ಭ್ರಷ್ಟನೆಂದು ಆತನ ಅಥವಾ ಆತನ ಕುಟುಂಬದ ಸದಸ್ಯರ ಸಂಪತ್ತಿನಲ್ಲಿ ವಿವರಣೆಗೆ ಸಿಲುಕದಷ್ಟು ಹೆಚ್ಚಳವಾಗಿದ್ದನ್ನು ಗುರುತಿಸುವ ಮೂಲಕ ಹೇಳಬಹುದು ಎಂದು ಕಾನೂನು ಭಾವಿಸುತ್ತದೆ. ಆದರೆ, ನ್ಯಾಯಾಧೀಶರು ಸೇರಿದಂತೆ ಸಾರ್ವಜನಿಕ ಸೇವಕರು ತಮ್ಮ ಆಸ್ತಿಯನ್ನು ಕಾಲಕಾಲಕ್ಕೆ ಘೋಷಣೆ ಮಾಡಿಕೊಳ್ಳದೆ ಇದ್ದರೆ ಈ ಕಾನೂನು ಕೆಲಸಕ್ಕೆ ಬರುವುದಿಲ್ಲ.

ಕೆಲವು ವರ್ಷಗಳ ಹಿಂದೆ ಸಾರ್ವಜನಿಕರ ಒತ್ತಡದ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳ ಹಲವು ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಿದರು. ಆದರೆ, ಇಂದಿಗೂ ಕೆಲವು ನ್ಯಾಯಮೂರ್ತಿಗಳು ಆಸ್ತಿ ವಿವರ ಘೋಷಿಸುತ್ತಿಲ್ಲ. ನ್ಯಾಯಮೂರ್ತಿಗಳು ಹಾಗೂ ಅವರ ಕುಟುಂಬದ ಸದಸ್ಯರು ತಮ್ಮ ಆಸ್ತಿ ವಿವರವನ್ನು ಕಾಲಕಾಲಕ್ಕೆ ಘೋಷಿಸಬೇಕು ಎಂದು ಹೇಳುವ ಕಾನೂನೊಂದು ಬೇಕು.

ಸಾರ್ವಜನಿಕರ ಗಮನವನ್ನು ಹೆಚ್ಚಾಗಿ ಸೆಳೆಯದ ಇನ್ನೊಂದು ಅಂಶ ಇಲ್ಲಿದೆ. ಅದು, ನ್ಯಾಯಾಧೀಶರಿಗೆ ನೀಡುತ್ತಿರುವ ಕಡಿಮೆ ವೇತನ. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಕಟ್ಟಿದ್ದು ಬ್ರಿಟಿಷರು. ಉನ್ನತ ನ್ಯಾಯಾಂಗದಲ್ಲಿನ ವೇತನ ಶ್ರೇಣಿಯು ಅತ್ಯಂತ ಪ್ರತಿಭಾನ್ವಿತರನ್ನು ಸೆಳೆಯುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ. 1950ರ ಜನವರಿ 26ರಂದು ದೇಶದ ಸಂವಿಧಾನ ಜಾರಿಗೆ ಬಂದಾಗ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಮಾಸಿಕ ವೇತನ ₹ 4,000 ಎಂದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ (ಸಿಜೆಐ) ವೇತನ ₹ 5,000 ಎಂದು ನಿಗದಿಯಾಯಿತು. ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ₹ 3,500 (ಮುಖ್ಯ ನ್ಯಾಯಮೂರ್ತಿಗಳದ್ದು ₹ 4,000) ಎಂದೂ ನಿಗದಿಯಾಯಿತು. 2015ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ₹ 90 ಸಾವಿರ (ಸಿಜೆಐಗೆ ₹ 1 ಲಕ್ಷ), ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ₹ 80 ಸಾವಿರ (ಸಿಜೆಗೆ ₹ 90 ಸಾವಿರ) ವೇತನ ಇತ್ತು. 2016ರ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ 2.5 ಲಕ್ಷ (ಸಿಜೆಐಗೆ ₹ 2.8 ಲಕ್ಷ), ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ₹ 2.25 ಲಕ್ಷ (ಸಿಜೆಗೆ ₹ 2.5 ಲಕ್ಷ) ವೇತನ ಇದೆ.

ನಾವು ನಮ್ಮ ನ್ಯಾಯಾಂಗ ಅಧಿಕಾರಿಗಳ ವೇತನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಮಾಸಿಕ ₹ 15 ಲಕ್ಷ, ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ₹ 10 ಲಕ್ಷ, ಇತರ ಎಲ್ಲ ನ್ಯಾಯಾಧೀಶರಿಗೆ, ನ್ಯಾಯಮಂಡಳಿಗಳ ಸದಸ್ಯರಿಗೆ ₹ 5 ಲಕ್ಷ ವೇತನ ನಿಗದಿ ಮಾಡಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಜಿಲ್ಲಾ ನ್ಯಾಯಾಲಯಗಳು ಹಾಗೂ ರಾಜ್ಯ ಮಟ್ಟದ ನ್ಯಾಯಮಂಡಳಿಗಳ ನ್ಯಾಯಾಧೀಶರಿಗೆ ರಾಜ್ಯಗಳ ಶಾಸನಸಭೆಗಳು ವೇತನ ನಿಗದಿ ಮಾಡಬಹುದು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಿಗೆ, ಕೇಂದ್ರ ನ್ಯಾಯಮಂಡಳಿಗಳ ಸದಸ್ಯರಿಗೆ ಸಂಸತ್ತು ವೇತನ ನಿಗದಿ ಮಾಡಬಹುದು. ಕರ್ನಾಟಕ ಸರ್ಕಾರವು ಜಾತಿ ಮಠಗಳಿಗೆ ಪ್ರತೀ ವರ್ಷವೂ ಕೋಟ್ಯಂತರ ರೂಪಾಯಿ ನೀಡುತ್ತಿದೆ. ನ್ಯಾಯಾಂಗ ಅಧಿಕಾರಿಗಳ ವೇತನವನ್ನು ಹಲವು ಪಟ್ಟು ಹೆಚ್ಚಿಸುವುದರಿಂದ ರಾಜ್ಯ ಅಥವಾ ಕೇಂದ್ರದ ಹಣಕಾಸಿನ ಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಯಾರೂ ಹೇಳಲಿಕ್ಕಿಲ್ಲ.

ನ್ಯಾಯಾಲಯ ನೀಡುವ ಆದೇಶವು ಸರಿ ಆಗಬಹುದು, ಸರಿ ಆಗದೆಯೂ ಇರಬಹುದು. ಆದರೆ ಆ ಆದೇಶವನ್ನು ಪಾಲಿಸಬೇಕಾಗುತ್ತದೆ. ನಮ್ಮ ಉನ್ನತ ನ್ಯಾಯಾಲಯಗಳು ನೀಡುವ ಆದೇಶಗಳನ್ನು ಕಾಲಕಾಲಕ್ಕೆ ಮೌಲ್ಯಮಾಪನಕ್ಕೆ ಒಳಪಡಿಸುವ ಬಲಿಷ್ಠ ಸಾರ್ವಜನಿಕ ವ್ಯವಸ್ಥೆಯೊಂದರ ಅಗತ್ಯ ನಮಗೆ ಇದೆ. ಅಕಾಡೆಮಿಕ್ ಪತ್ರಿಕೆಗಳು ಈ ಕೆಲಸವನ್ನು ಮಾಡಬಹುದು ಎಂಬ ನಿರೀಕ್ಷೆ ಹೊಂದಲು ಅಡ್ಡಿಯಿಲ್ಲ. ಆದರೆ, ಆ ಪತ್ರಿಕೆಗಳು ನ್ಯಾಯಶಾಸ್ತ್ರ ಪರಿಣತರಿಗೆ, ನಿವೃತ್ತನ್ಯಾಯಮೂರ್ತಿಗಳಿಗೆ ಗೌರವ ಸಂಭಾವನೆ ನೀಡಬೇಕು ಎಂದಾದರೆ ಸರ್ಕಾರದಿಂದ ಗಣನೀಯ ಪ್ರಮಾಣದ ನೆರವು ಬೇಕಾಗುತ್ತದೆ. ಆಗ ಈ ಹಿರಿಯರು ತಮ್ಮ ಸಮಯವನ್ನು ವ್ಯಯಿಸಿ, ಉನ್ನತ ನ್ಯಾಯಾಲಯಗಳು ನೀಡುವ ಆದೇಶಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎಂಬುದನ್ನು ಪರಿಶೀಲಿಸಬಹುದು.

ಹೈಕೋರ್ಟ್ಗಳ ಮೇಲ್ಮನವಿ ವಿಭಾಗಗಳು ಹಾಗೂ ಸುಪ್ರೀಂ ಕೋರ್ಟ್ ತಮ್ಮ ಆದೇಶ ನೀಡುವ ಮೊದಲು, ಆದೇಶ ಬರೆಯುವ ನ್ಯಾಯಮೂರ್ತಿಯು ಆದೇಶದ ಕರಡು ಪ್ರತಿಯನ್ನು ಇತರ ಎಲ್ಲ ನ್ಯಾಯಮೂರ್ತಿಗಳ ಪರಿಶೀಲನೆಗೆ ನೀಡಿ, ಅವರ ಅನಿಸಿಕೆಗಳನ್ನು ಪಡೆದುಕೊಳ್ಳಬೇಕು ಎಂಬ ಕಾನೂನು ನಮ್ಮಲ್ಲಿ ರೂಪುಗೊಳ್ಳಬೇಕು. ಕೆಲವು ದೇಶಗಳಲ್ಲಿ ಇಂತಹ ಆಚರಣೆ ಇದೆ. ನ್ಯಾಯಮೂರ್ತಿಗಳು ತಮ್ಮ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಳ್ಳಲು ಇದು ನೆರವಾಗುತ್ತದೆ. ಬೇರೆ ಬೇರೆ ಆದೇಶಗಳ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಕಡಿಮೆ ಆಗುತ್ತದೆ. ಸುಪ್ರೀಂ ಕೋರ್ಟ್ ಈ ದಿಸೆಯಲ್ಲಿ ಕ್ರಮ ಜರುಗಿಸಿದರೆ, ಸಾರ್ವಜನಿಕ ಮಹತ್ವದ ಕಾನೂನುಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ನ ಬೇರೆ ಬೇರೆ ಪೀಠಗಳು ಮತ್ತೆ ಮತ್ತೆ ಭಿನ್ನ ಅಭಿಪ್ರಾಯ ನೀಡುವುದು ಬಹಳ ಕಡಿಮೆ ಆಗುತ್ತದೆ.

ನ್ಯಾಯಾಲಯದ ಕಲಾಪಗಳ ವಿಡಿಯೊ ಚಿತ್ರೀಕರಣ ಆಗಬೇಕು, ಅವುಗಳನ್ನು ಪ್ರಸಾರ ಮಾಡುವ ವ್ಯವಸ್ಥೆಯೂ ಇರಬೇಕು ಎಂದು ನಾನು ದಶಕದಿಂದ ಆಗ್ರಹಿಸುತ್ತ ಬಂದಿದ್ದೇನೆ. ಆದರೆ ಅನುಭವಕ್ಕೆ ದಕ್ಕುವ ಯಾವ ಪ್ರತಿಫಲವೂ ದೊರೆತಿಲ್ಲ. ಈ ರೀತಿಯ ವ್ಯವಸ್ಥೆ ಜಾರಿಗೆ ಬಂದರೆ ಹೆಚ್ಚಿನ ಪಾರದರ್ಶಕತೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವ ಇರುತ್ತದೆ. ನಮ್ಮ ಉನ್ನತ ನ್ಯಾಯಾಲಯಗಳು ತಮ್ಮ ಕಲಾಪಗಳನ್ನು ಏಕೆ ಸಾರ್ವಜನಿಕವಾಗಿ ಪ್ರಸಾರ ಮಾಡುತ್ತಿಲ್ಲ? ಈ ಪ್ರಶ್ನೆಗೆ ಅರ್ಥಪೂರ್ಣ ಉತ್ತರ ಯಾರಲ್ಲಿಯೂ ಇರುವಂತೆ ಕಾಣುತ್ತಿಲ್ಲ.

ಮುಂಬರುವ ಇಪ್ಪತ್ತರಿಂದ ಮೂವತ್ತು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯು ನ್ಯಾಯಾಂಗ ಸೇವೆಗಳಲ್ಲಿ ಪರಿವರ್ತನೆ ತರಲಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಓದಲು, ಸಂಬಂಧಿಸಿದ ಕಾನೂನುಗಳ ಅಧ್ಯಯನಕ್ಕೆ, ನ್ಯಾಯಾಲಯದಲ್ಲಿ ನಡೆದ ವಾದ–ಪ್ರತಿವಾದಗಳನ್ನು ದಾಖಲಿಸಿಕೊಳ್ಳಲು, ಕರಡು ಆದೇಶ ಸಿದ್ಧಪಡಿಸಲು ಕಂಪ್ಯೂಟರ್ಗಳು ನ್ಯಾಯಮೂರ್ತಿಗಳಿಗೆ ನೆರವಾಗಲಿವೆ. ಈಗಾಗಲೇ ಇರುವ ತಂತ್ರಜ್ಞಾನ ಕೂಡ ಆಶ್ಚರ್ಯ ಮೂಡಿಸುವಂತೆ ಇದೆ.

ಈಗ ವೃತ್ತಿಯಲ್ಲಿರುವ ಬಹುತೇಕ ವಕೀಲರಿಗೆ, ಇಪ್ಪತ್ತು ಅಥವಾ ಮೂವತ್ತು ವರ್ಷಗಳ ನಂತರವೂ ವೃತ್ತಿಯಲ್ಲಿ ಇರುತ್ತೇನೆ ಎನ್ನುವವರಿಗೆ, ಕಾನೂನಿಗೆ ಸಂಬಂಧಿಸಿದಂತೆ ಮಾಡಬೇಕಾದ ಯಾವ ಕೆಲಸವೂ ಇರುವುದಿಲ್ಲ. ಅಂಥದ್ದೊಂದು ಅನಿವಾರ್ಯ ಭವಿಷ್ಯಕ್ಕೂ ನಾವು ಸಿದ್ಧರಾಗಬೇಕಿದೆ.

ಲೇಖಕ: ಸುಪ್ರೀಂ ಕೋರ್ಟ್ನಲ್ಲಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.