ಅಕ್ಕಮಹಾದೇವಿ, ಸಂಸಾರದಲ್ಲಿ ಹೆಣ್ಣಿನ ಸ್ಥಿತಿಯನ್ನು ‘ಒಲೆಹೊಕ್ಕು ಉರಿ ಮರೆತಂತೆ’ ಎನ್ನುತ್ತಾಳೆ. ಅಬ್ಬಾ! ಅನುಭವವನ್ನು ಹೀಗೂ ದಾಟಿಸಬಹುದಲ್ಲವೇ? ನುಡಿಯ ಈ ಅಸೀಮ ಶಕ್ತಿಯ ಬಗೆಗೆ ಎರಡು ಮಾತಿಲ್ಲ. ಅಂತಹ ನುಡಿಗಳನ್ನೂ ಈ ವ್ಯವಸ್ಥೆಯು ಇನ್ನಿಚ್ಛೆಯಂತೆ ನುಡಿಸಲು ಸದಾ ಸನ್ನದ್ಧವಾಗಿರುತ್ತದೆ.

ನುಡಿ ಎಂದರೇನು? ಅದು ನಮ್ಮ ಸುತ್ತಲಿನ ಜಗತ್ತನ್ನು ನಾವು ವಿವರಿಸಿಕೊಳ್ಳಲು ನಮಗೆ ಮಾತ್ರ, ಅಂದರೆ ಮನುಷ್ಯರಿಗೆ ಮಾತ್ರ ಇರುವ ಒಂದು ಸವಲತ್ತು. ಬರೀ ವಿವರಿಸಿಕೊಳ್ಳುವುದಿಲ್ಲ, ಬೇರೆಯವರಿಗೂ ಅದನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ. ಆದರೆ ನುಡಿಯನ್ನು ಇಷ್ಟಕ್ಕೇ ಮಿತಗೊಳಿಸಿಕೊಳ್ಳುತ್ತೇವೆಯೇ? ಇದನ್ನು ಎಷ್ಟೋ ಸಲ ‘ನಮಗೆ ಬೇಕಾದಂತೆ ಜಗತ್ತನ್ನು ರೂಪಿಸಿಕೊಳ್ಳಲೂ’ ಬಳಸುತ್ತೇವಲ್ಲವೇ? ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದೇ ಎಂದು ಹೇಳುವ ನಾವು ಅದನ್ನು ಹಾಗೆಯೇ ಪ್ರಯೋಗಕ್ಕೆ ತರುತ್ತೇವೆಯೇ? ಕೊನೆಯಪಕ್ಷ ನಾವು ಬಳಸುವ ಭಾಷೆಯಲ್ಲಿ? ಕನ್ನಡ ನುಡಿಯೆಂದರೆ ಒಂದೇ ಎನ್ನುವ ನಾವು ಅದರಲ್ಲಿ ಪುರುಷನನ್ನೂ, ಮಹಿಳೆಯನ್ನೂ ಒಂದೇ ರೀತಿ ವಿವರಿಸಿ ದ್ದೇವೆಯೇ? ಸರಿಯಾಗಿ ಗಮನಿಸಿದರೆ ಹೆಣ್ಣಿನ ಅನುಭವ ಗಳನ್ನು ವಿವರಿಸಲು ತಕ್ಕ ಪದಗಳು ಸಿಗದೇ ಚಡಪಡಿಸು ವುದಕ್ಕೂ ಈಗಾಗಲೇ ಬಳಕೆಯಲ್ಲಿರುವ ಪದಗಳು ಗಂಡು ಅನುಭವಗಳನ್ನೇ ಆವಾಹಿಸಿಕೊಂಡಿರುವುದಕ್ಕೂ ಸಂಬಂಧ ಇಲ್ಲ ಎನ್ನಬಹುದೇ?

ವಕೀಲರಾದ ಗೆಳತಿ ಅಖಿಲಾ ವಿದ್ಯಾಸಂದ್ರ ಈಚೆಗೆ ಶಬ್ದಕೋಶದಲ್ಲಿ ಪತಿ ಮತ್ತು ಪತ್ನಿ ಎಂಬ ಪದಕ್ಕೆ ಏನೇನು ಅರ್ಥಗಳನ್ನು ಕೊಡಲಾಗಿದೆ ಎನ್ನುವುದನ್ನು ಹುಡುಕಿ ಎಂದು ವಿದ್ಯಾರ್ಥಿಗಳಿಗೆ ಹೇಳಿದಾಗ ಅವರು ಆಶ್ಚರ್ಯಕ್ಕೆ ಒಳಗಾದರು. ಪತಿ ಅಂದರೆ ಒಡೆಯ, ದೊರೆ, ಗಂಡ ಎಂಬ ಅರ್ಥ ಇದೆ. ಗಂಡ ಅಂದರೆ ಶೂರ ಎಂಬ ಅರ್ಥ ಇದೆ. ಪತ್ನಿ ಎಂಬ ಪದಕ್ಕೆ ಹೆಂಡತಿ ಎಂಬ ಅರ್ಥ ಇದೆ. ಹೆಂಡತಿ ಎಂಬ ಪದಕ್ಕೆ ಮದುವೆಯಲ್ಲಿ ಸ್ವೀಕರಿಸಿದ ಹೆಂಗಸು, ಮಡದಿ ಎಂಬ ಅರ್ಥ ಇದೆ! ಮಡದಿ ಎಂದರೆ ಹೆಂಗಸು ಎಂಬರ್ಥವಿದೆ. ಇಲ್ಲಿ ನೀಡಿದ ಅರ್ಥಗಳು ದಾಟಿಸುತ್ತಿರುವ ಸಂದೇಶಗಳೇನು? ಪತ್ನಿ ಸ್ವೀಕರಿಸಿದ ಹೆಂಗಸು ಎಂಬಲ್ಲಿನ ಕೇವಲತೆಯನ್ನೂ, ಗಂಡಸು ಶೂರನೂ ಒಡೆಯನೂ ಆಗುವ ದೊಡ್ಡಸ್ತಿಕೆ ಯನ್ನೂ ಗಮನಿಸಿದಾಗ ಪದವು ಹೊಂದಿದ ಅರ್ಥದಲ್ಲೇ ಅವಳನ್ನು ನಿಯಂತ್ರಿಸುವ, ಅವಳೊಬ್ಬಳು ಅವಲಂಬಿತಳು ಎಂದು ಬಿಂಬಿಸಿ ಅಸಹಾಯಕತೆ ಹುಟ್ಟಿಸುವ, ಅವಳಿಗೊಬ್ಬ ಒಡೆಯನು ದೊರಕಿ ಅವಳನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಲು ಅಧಿಕಾರವನ್ನು ನೀಡುವ, ಅವನು ಹೇಗಿದ್ದರೂ ಅವಳಿಗವನು ದೊರೆಯೇ ಆಗಿರುತ್ತಾನೆ ಎಂದು ಸೂಚಿಸುವ ಅಸಂಖ್ಯ ಸಂಕೇತಗಳು ಹೊಮ್ಮಿಬಿಡುತ್ತವೆ. ಇದಕ್ಕೂ ಕೌಟುಂಬಿಕ ದೌರ್ಜನ್ಯಕ್ಕೂ ನೇರ ನಂಟು ಕಾಣಿಸುತ್ತದೆ. ನುಡಿಯು ಕನ್ನಡಿಯಾಗಿ ಈ ಸಮಾಜದ ಮೌಲ್ಯವ್ಯವಸ್ಥೆಯನ್ನು ಹೇಗೆಲ್ಲಾ ದಾಟಿಸಬಲ್ಲದು ಮತ್ತು ಹೇಗೆಲ್ಲಾ ನಮಗೆ ಕಾಣಿಸಬಲ್ಲದು ಎನ್ನುವುದೂ ಇಲ್ಲಿ ಗೊತ್ತಾಗುತ್ತದೆ. ಕಾಣುವುದು, ಕಂಡು ಸರಿಪಡಿಸಿಕೊಳ್ಳುವುದು ಮಾತ್ರ ಇನ್ನೂ ಆಗುತ್ತಿಲ್ಲ.

‘ನಮ್ಮ ಮಿದುಳು ಸಂಕೇತಗಳಲ್ಲಿ ವ್ಯವಹರಿಸುತ್ತದೆಯೇ ಹೊರತು ಅದಕ್ಕೆ ಎಂದಿಗೂ ‘ವಾಸ್ತವ’ದ ಅರಿವಿರುವುದಿಲ್ಲ. ಈ ಸಂಕೇತಗಳನ್ನು ಎನ್ಕೋಡ್ (ಮಾಹಿತಿಯನ್ನು ಸೂಚನೆಯನ್ನಾಗಿಸುವುದು) ಮತ್ತು ಡಿಕೋಡ್ (ಸೂಚನೆಯನ್ನು ಮಾಹಿತಿಯನ್ನಾಗಿಸುವುದು) ಮಾಡುವ ವ್ಯವಸ್ಥೆಯನ್ನು ಭಾಷೆಗಳು ಹೊಂದಿರುತ್ತವೆ. ಹೀಗೆ ಎನ್ಕೋಡ್ ಮಾಡುವಾಗ ಹೆಚ್ಚಾಗಿ ನಾವು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಏನನ್ನು ‘ನೋಡಿರುತ್ತೇವೋ’ ಅದೇ ತತ್ವಗಳನ್ನು ನಮ್ಮ ಭಾಷೆಯು ಅವಲಂಬಿಸಿರುತ್ತದೆ’ ಎಂಬುದಾಗಿ ಡೇಲ್ ಸ್ಪೆಂಡರ್ ಹೇಳುತ್ತಾರೆ.

ಭಾಷೆಯಲ್ಲಿ ಹೇಗೆ ಎನ್ಕೋಡ್ ಮಾಡಲಾಗುತ್ತದೆ ಎಂಬುದನ್ನು ಗಮನಿಸೋಣ. ಹೆಣ್ಣು ಅಂದರೆ ಮೊಗ್ಗು, ಹೂವು, ಬಳ್ಳಿ ಅಂತೆಲ್ಲಾ ಹೋಲಿಸುತ್ತಾರೆ ಅಂದುಕೊಳ್ಳೋಣ. ಅದನ್ನು ಡಿಕೋಡ್ ಮಾಡಿದಾಗ ಅದು ಇನ್ನೊಬ್ಬರಿಗೆ ಒಪ್ಪಿಸುವುದಕ್ಕಿರುವ, ಉಪಭೋಗದ, ಅವಲಂಬನೆಯ, ಪಡೆದವರ ಸೌಂದರ್ಯ– ಸುಖ ಹೆಚ್ಚಿಸುವ, ಆಲಂಕಾರಿಕವಾದ, ದುರ್ಬಲವಾದ ‘ವಸ್ತು’ವಾಗಿ ಪರಿಗಣಿತವಾಗುತ್ತದೆ. ಅದೇ ಪುರುಷನನ್ನು ಮರ ಎಂದಾಗ ಅದು ಬೇರು ಬಿಟ್ಟಿರುವ ಸ್ವತಂತ್ರವೂ ಬಲಿಷ್ಠವೂ ಆದ, ನೆರಳು ನೀಡುವ ಆಶ್ರಯತಾಣವಾಗುವ, ಹೂ ಹಣ್ಣು ನೀಡಿ ಆಹಾರವೂ ಆಧಾರವೂ ಆಗುವ ಅರ್ಥಗಳು ಸ್ಫುರಿಸುತ್ತವೆ. ಹೀಗಾಗಿ ಹೆಣ್ಣನ್ನು ನಿರಂತರವಾಗಿ ಮರವನ್ನು ತಬ್ಬಿರುವ ಬಳ್ಳಿ ಎಂದೇ ವಿವರಿಸಿಕೊಳ್ಳಲಾಗಿದೆ.

ಸರಿ, ಬದಲಾದ ಕಾಲದಲ್ಲಿ ನಾವೀಗ ಬದಲಾದ ಹೋಲಿಕೆ ಮಾಡಿಕೊಳ್ಳೋಣ ಎಂದು ಹೊರಟಾಗಲೂ ಎದುರಾಗುವ ತೊಡಕು ನೋಡಿ. ನದಿ, ನೆಲ ಎಂದೆಲ್ಲಾ ಹೋಲಿಸಿಕೊಳ್ಳಹೊರಟರೆ ಇವುಗಳನ್ನೂ ಗಂಡುಭಾಷೆ ತನ್ನಂತೆ ವಿವರಿಸಿಕೊಂಡಾಗಿದೆ. ನೆಲವನ್ನು ಆಳುವವನು ರಾಜ, ನದಿಯ ದಡದಲ್ಲಿ ನಾಗರಿಕತೆ ಕಟ್ಟಿಕೊಂಡವನು ಗಂಡಸು, ಸಮುದ್ರ ಗಂಡಾಗಿರುವುದರಿಂದ ಎಲ್ಲ ನದಿ ಹೆಣ್ಣುಗಳೂ ಓಡೋಡಿ ಹೋಗಿ ಸೇರುವುದು ಅವನನ್ನೇ. ಆ ಮೂಲಕ ಹಲವು ಹೆಂಡಿರ ಗಂಡನೆನಿಸುವುದನ್ನೂ ಸಹಜೀಕರಿಸಬಹುದು... ಅಬ್ಬಬ್ಬಾ ಎಲ್ಲವೂ ಕಾಲಿಗೆ ತೊಡಕುವ ಮುಳ್ಳುಗಳೇ.

ಆದ್ದರಿಂದಲೇ ಡೇಲ್ ಸ್ಪೆಂಡರ್ ಭಾಷೆ ಎಂಬುದು ಪುರುಷನಿರ್ಮಿತ ಎನ್ನುತ್ತಾರೆ. ಆಕೆ ಬರೆದ ಪುಸ್ತಕದ ಹೆಸರು ‘ಮ್ಯಾನ್ ಮೇಡ್ ಲ್ಯಾಂಗ್ವೇಜ್’. ಇಂಗ್ಲಿಷ್ನಲ್ಲಿ ಇದರ ಆರಂಭವನ್ನು ಅವರು ತಾಮಸ್ ವಿಲ್ಸನ್ ಬರೆದ ‘ದ ಆರ್ಟ್ ಆಫ್ ರೆಟರಿಕ್’ನಲ್ಲಿ ಗುರುತಿಸುತ್ತಾರೆ. ಆತ ಗಂಡಸನ್ನು ಹೆಂಗಸಿಗಿಂತ ಮೊದಲು ಗುರುತಿಸಿ ಹೇಳುವುದು ಅತ್ಯಂತ ಸಹಜ ಮಾತ್ರವಲ್ಲ ಹೀಗೇ ಮಾಡಬೇಕು ಎಂದೂ ಒತ್ತಾಯಿಸುತ್ತಾನೆ. ಉದಾ: ಗಂಡ- ಹೆಂಡತಿ, ಸಹೋದರ- ಸಹೋದರಿ, ಮಗ– ಮಗಳು ಇತ್ಯಾದಿ. ನಾವೇನಾದರೂ ಹೆಂಡತಿ– ಗಂಡ ಎಂದು ಹೇಳಿದರೆ ನಕ್ಕುಬಿಡುತ್ತೇವಲ್ಲವೇ? ಹಾಗೆ ನಗುವುದಕ್ಕೂ ಗಂಡಸು ಎಂದೂ ಹೆಂಗಸಿಗೆ ಅಧೀನನಾಗಬಾರದು ಎಂದು ನಾವು ಮೌಲ್ಯ ವ್ಯವಸ್ಥೆ ಮಾಡಿಕೊಂಡಿರುವುದಕ್ಕೂ ಸಂಬಂಧ ಇದೆ. ಹೆಣ್ಣಾಗಲೀ ಗಂಡಾಗಲೀ ಯಾರು ಯಾರಿಗೆ ಯಾಕೆ ಅಧೀನರಾಗಬೇಕು? ಇಬ್ಬರೂ ಸಮಾನ ಮೌಲ್ಯವುಳ್ಳವರು ಎಂದು ನಾವು ಭಾವಿಸಿದ್ದಲ್ಲಿ, ನುಡಿಗಳಲ್ಲಿ ಅದನ್ನು ಸೂಚಿಸುವ ಪದಗಳೇ ಹುಟ್ಟುತ್ತಿದ್ದವು. ಅದು ನಮ್ಮ ಪ್ರಜ್ಞೆಯೊಳಗೇ ಇನ್ನೂ ಪ್ರವೇಶ ಪಡೆದಿಲ್ಲ ಎನಿಸುತ್ತದೆ.

ತೀರಾ ಈಚಿನ ಕೆಲವು ಪದಪ್ರಯೋಗಗಳನ್ನು ಗಮನಿಸಿದರೂ ಇದು ಅರಿವಿಗೆ ಬರುತ್ತದೆ. ಪ್ರಸಿದ್ಧರು ವಿಚ್ಛೇದನ ಪಡೆದರೆ ಅದು ಸುದ್ದಿಯಾಗುತ್ತದೆ. ಆ ಸುದ್ದಿಗಳ ತಲೆಬರಹ ಹೆಚ್ಚಾಗಿ, ‘ಪತ್ನಿಗೆ ವಿಚ್ಛೇದನ ನೀಡಿದ...’ ಎಂದೇ ಆರಂಭವಾಗುತ್ತದೆ. ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾದಾಗಲೂ ಹೀಗೇ ಶೀರ್ಷಿಕೆ ಇರುತ್ತದೆ. ಪ್ರಸಿದ್ಧ ಮಹಿಳೆ ವಿಚ್ಛೇದನ ಪಡೆದಾಗ ‘ಪತಿಗೆ ವಿಚ್ಛೇದನ ನೀಡಿದ...’ ಎಂದು ತಲೆಬರಹ ಆರಂಭವಾಗುವು ದಿಲ್ಲ. ಇದು ಸಣ್ಣ ಸಂಗತಿಯಂತೆ ಕಾಣಬಹುದಾದರೂ ಇದು ಕೂಡ ಹೆಣ್ಣಿನ ಬದುಕಿನ ಮೇಲೆ ಗಂಡಿಗೇ ನಿಯಂತ್ರಣ ಇರಬೇಕು ಎಂದು ಬಯಸುವ ಮನಃಸ್ಥಿತಿಯ ದ್ಯೋತಕವೇ ಆಗಿದೆ.

ಇದಲ್ಲದೆ, ಬಾಯಿ ಬಿಟ್ಟರೆ ಹುಟ್ಟುವ ಬೈಗುಳ ಪದಗಳೆಲ್ಲವೂ ಹೆಣ್ಣನ್ನು ತುಚ್ಛೀಕರಿಸುವಂತಹವೇ ಆಗಿರುವುದಕ್ಕೂ ನಮ್ಮ ಬದುಕಿನ ಕ್ರಮದಲ್ಲಿ ಹೆಣ್ಣನ್ನು ಹಾಗೆ ನಡೆಸಿಕೊಂಡಿರುವುದಕ್ಕೂ ಸಂಬಂಧ ಇರುತ್ತದ ಲ್ಲವೇ? ತಾವೇ ಹುಟ್ಟುಹಾಕಿದ ಅನೈತಿಕ ವ್ಯವಸ್ಥೆಯಲ್ಲಿ ಹೆಣ್ಣನ್ನು ಪಾತ್ರವಾಗಿಸಿ, ಆ ನಂತರದಲ್ಲಿ ‘ಅವಳಿಗೆ ಹುಟ್ಟಿದವರು’ ಎಂದು ನಿಂದಿಸುವುದು ಕೇವಲ ವೈರುಧ್ಯವಲ್ಲ. ಈ ವ್ಯವಸ್ಥೆಯಲ್ಲಿ ಹೆಣ್ಣಿನ ಲೈಂಗಿಕತೆಯನ್ನು ತಮಗೆ ಬೇಕಾದಂತೆ ನಿಯಂತ್ರಿಸಿದ, ಅದನ್ನು ಅವಳ ಮೇಲೆ ಹೇರಿದ ಚಿಂತನಾ ಕ್ರಮ ಮತ್ತು ಅದಕ್ಕಿರುವ ಸಮ್ಮತಿಯ ವ್ಯಕ್ತ ರೂಪವಿದು.

ಸ್ಥಾಪಿತ ಸಾಮಾಜಿಕ ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸಬಲ್ಲ ಅಕ್ಕಮಹಾದೇವಿ ಕೃತಕ ನಂಟುಗಳಿಗೆ ‘ಉರದಲ್ಲಿ ಮುಳ್ಳುಂಟೆಂದು ಅಪ್ಪಲಮ್ಮೆ’ ಎಂಬ ಹೆಣ್ಣುಭಾಷೆಯ ರೂಪಕ ಟಂಕಿಸಬಲ್ಲಳು. ಇರುವುದಕ್ಕೇ ತೇಪೆ ಹಚ್ಚಹೊರಡುವ ಆಧುನಿಕರಿಗೆ ಅದು ಸಿದ್ಧಿಸುವುದು ಕಠಿಣ. ಲಿಂಗ ತರತಮವನ್ನು ನುಡಿ ಕನ್ನಡಿಯು ಕಾಣಿಸುತ್ತಿದೆ. ನೀವು ಕಾಣಿರೇ? ನೀವು ಕಾಣಿರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.