1967, ಅಕ್ಟೋಬರ್ 12. ರಾಮಮನೋಹರ ಲೋಹಿಯಾ ಅವರ ನಿಧನದ ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಕಣ್ಣೀರಿಡುತ್ತಾ ಹೇಳಿದರು: ‘ವಯಸ್ಸಿನಲ್ಲಿ ಲೋಹಿಯಾಗಿಂತ ನಾನು ದೊಡ್ಡವನು, ಮೊದಲು ನಾನು ಹೋಗಬೇಕಾಗಿತ್ತು’.

ಲೋಹಿಯಾ ಅವರ ನಿಸ್ವಾರ್ಥ ರಾಜಕಾರಣದ ಪರಿಚಯ ಅಲ್ಲಿ ಸೇರಿದ್ದ ಎಲ್ಲರಿಗೂ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅನೇಕ ನಾಯಕರು ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳಲು ದೆಹಲಿಯಲ್ಲಿ ಜಮಾಯಿಸುತ್ತಿದ್ದಾಗ, ಲೋಹಿಯಾ ಅವರು ಕೋಲ್ಕತ್ತದ ನೌಖಾಲಿಯ ಕೋಮುದಳ್ಳುರಿಯನ್ನು ನಿಲ್ಲಿಸಲು ಗಾಂಧೀಜಿಯ ಒಡನಾಡಿಯಾಗಿ, ಹಿಂದೂ-ಮುಸ್ಲಿಂ ಏಕತೆಗಾಗಿ ಕೆಲಸ ಮಾಡುತ್ತಿದ್ದರು.

1937ರ ಚುನಾವಣೆಯಲ್ಲಿ ಸಂಯುಕ್ತ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಪ್ರಲೋಭನೆ ಲೋಹಿಯಾ ಅವರಿಗೆ ಎದುರಾಗಿದ್ದರೂ ಬ್ರಿಟಿಷ್ ಅರಸೊತ್ತಿಗೆಗೆ ವಿಧೇಯತೆಯನ್ನು ಪ್ರದರ್ಶಿಸಲು ಮನಸ್ಸು ಒಪ್ಪದೆ ಚುನಾವಣೆಯನ್ನು ಬಹಿಷ್ಕರಿಸಿದರು. ವಯಸ್ಕ ಮತದಾನವನ್ನು ತಿರಸ್ಕರಿಸಿದ್ದ ಸಂವಿಧಾನ ಸಭೆಗೆ ನಡೆದ ಚುನಾವಣೆಯನ್ನೂ ಬಹಿಷ್ಕರಿಸಿದರು. ಅಂದು ಸಂವಿಧಾನ ಸಭೆಗೆ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರು ಪ್ರವೇಶಿಸದೇ ಇದ್ದದ್ದು ಭಾರತದ ಜನರಿಗೆ ಆದ ದೊಡ್ಡ ನಷ್ಟ ಎಂದು ಇಂದಿಗೂ ಅನ್ನಿಸುತ್ತದೆ.

ಈ ದೇಶದ ಯಾವುದೇ ರಾಜಕಾರಣಿ ಜಾತಿಯನ್ನು ಬಳಸದೇ ಚುನಾವಣೆ ಗೆದ್ದ ಉದಾಹರಣೆ ಇಲ್ಲ. ಅಂತಹ ಸನ್ನಿವೇಶದಲ್ಲಿ ಜಾತಿವಿನಾಶ ಸಮ್ಮೇಳನ ನಡೆಸಿದ ಲೋಹಿಯಾ, ಭಾರತದಲ್ಲಿ ಜಾತಿಪದ್ಧತಿಯೇ ಸಮಾನತೆಗೆ ಕಂಟಕ ಎಂದು ಯುವಸಮೂಹಕ್ಕೆ ಸಾರಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಎರಡು ಸಲ ಸೋಲನ್ನು ಕಂಡು, ಕೊನೆಗೆ ಎರಡು ಸಲ ಗೆದ್ದರು.

ಗ್ರಾಮ ಸ್ವರಾಜ್ಯವೇ ಭಾರತದ ಅಭಿವೃದ್ಧಿಯ ಏಕೈಕ ಮಾರ್ಗ ಎಂದು ಗಾಂಧೀಜಿ ನಂಬಿದ್ದರು. ಲೋಹಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದಲ್ಲಿ ಬಂಡವಾಳದ ಕೊರತೆ ಇರುವುದರಿಂದ, ಇಲ್ಲಿನ ಅಗಾಧ ಬಂಡವಾಳವಾಗಿರುವ ಮಾನವ ಸಂಪನ್ಮೂಲದಿಂದಲೇ ದೇಶದ ಅಭ್ಯುದಯವನ್ನು ಸಾಧಿಸಬೇಕು ಎಂಬುದನ್ನು ಮನಗಂಡರು. ಜ್ವಲಂತ ಸಮಸ್ಯೆಗಳಿಗೆ ದಾರಿ ಹುಡುಕಿ, ನಿರುದ್ಯೋಗ ನಿವಾರಣೆಯ ನೀಲಿನಕ್ಷೆ ಹಾಕಿಕೊಟ್ಟರು. ಆದರೆ ರಾಷ್ಟ್ರದ ಎಲ್ಲ ಜನರಿಗೆ ಉದ್ಯೋಗ ಕೊಡುವ ‘ಲ್ಯಾಂಡ್ ಆರ್ಮಿ’ ಯೋಜನೆಯ ಲೋಹಿಯಾ ಚಿಂತನೆಯನ್ನು ಸಮಾಜವಾದಿ ನಾಯಕರು ಕೂಡ ಜಾರಿ ಗೊಳಿಸಲಿಲ್ಲ. ಲೋಹಿಯಾ ಪ್ರತಿಪಾದಿಸಿದ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆ ಇಂದು ಅತ್ಯಂತ ಪ್ರಸ್ತುತವಾಗಿದೆ. ದೇಶದ ಸಂವಿಧಾನದ ಮೂಲ ಲಕ್ಷಣವಾದ ಒಕ್ಕೂಟ ವ್ಯವಸ್ಥೆಗೆ (ಫೆಡರಲಿಸಂ) ಬರೀ ಎರಡು ಕಂಬಗಳು ಆಧಾರ
ವಾಗಿದ್ದರೆ ಸಾಕಾಗುವುದಿಲ್ಲ. ‘ಭಾರತದ ಜನಸಂಖ್ಯೆಯ ಆಧಾರದಲ್ಲಿ ಶ್ರೀಸಾಮಾನ್ಯನಿಗೂ ಆಡಳಿತದಲ್ಲಿ ಪಾಲು ಕೊಡಬೇಕಾದರೆ ನಾಲ್ಕು ಕಂಬಗಳ ಅಗತ್ಯವಿದೆ’ ಎಂದರು ಲೋಹಿಯಾ. ಕೇಂದ್ರ, ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ಅಧಿಕಾರ ವಿಕೇಂದ್ರೀಕರಣವಾಗುವ ‘ಚತುಸ್ತಂಭ ರಾಷ್ಟ್ರ’ದ ಯೋಜನೆಯನ್ನು ರೂಪಿಸಿದರು.

ಒಕ್ಕೂಟ ವ್ಯವಸ್ಥೆ ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿದೆ ಎಂದು ಸಮರ್ಥಿಸುವವರಿದ್ದಾರೆ.
ಆದರೆ ಭಾರತದ ಅಗಾಧತೆಗೆ ಹೋಲಿಸಿದರೆ, ಆ ರಾಷ್ಟ್ರಗಳು ಸಣ್ಣವು. ಭಾರತದಲ್ಲಿ ಈಗಿರುವಂತೆಯೇ ಕ್ಷೇತ್ರಗಳನ್ನು ಉಳಿಸಿಕೊಂಡರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಬ್ಬೊಬ್ಬ ಸಂಸದ 25 ಲಕ್ಷ ಜನರನ್ನು ಪ್ರತಿನಿಧಿಸಬೇಕಾಗಬಹುದು! ಇಷ್ಟೊಂದು ಸಂಖ್ಯೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಸದರಿಗೆ ಸಾಧ್ಯವೆ? ಭಾರತವು ಒಂದೇ ಭಾಷೆ, ಜಾತಿ, ಧರ್ಮದ ಸಮಾಜವಲ್ಲ. ಆದ್ದರಿಂದಲೇ ‘ಚತುಸ್ತಂಭ ಆಡಳಿತವು ಜನರಿಗೆ ಹತ್ತಿರವಾಗುತ್ತದೆ, ದೇಶದ ಪ್ರಜಾಪ್ರಭುತ್ವವನ್ನು ವಿಸ್ತರಿಸುತ್ತದೆ’ ಎಂದು ಲೋಹಿಯಾ ಒತ್ತಿ ಹೇಳಿದರು. ಶ್ರೀಸಾಮಾನ್ಯನಿಗೂ ರಾಷ್ಟ್ರದ ಆಗುಹೋಗುಗಳಲ್ಲಿ ಪರಿಣಾಮಕಾರಿ ಪಾತ್ರವನ್ನು ನೀಡಲು ಒತ್ತು ಕೊಟ್ಟರು.

ಅಧಿಕಾರವು ಕೇಂದ್ರ ಮತ್ತು ರಾಜ್ಯಗಳಿಗೆ ಸೀಮಿತವಾಗದೆ ಜಿಲ್ಲೆ, ಗ್ರಾಮಗಳಿಗೆ ತಲುಪಬೇಕು, ಆಗ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ತಲುಪುತ್ತದೆ. ಚತುಸ್ತಂಭ ವ್ಯವಸ್ಥೆಯಲ್ಲಿ ಕೇಂದ್ರವು ರಕ್ಷಣೆ, ವಿದೇಶ ವ್ಯವಹಾರ, ರೈಲು ವ್ಯವಸ್ಥೆ, ಸಂಪರ್ಕ ಕ್ಷೇತ್ರ ಹಾಗೂ ಕರೆನ್ಸಿಯ ನಿರ್ವಹಣೆ ಮಾಡಬೇಕಾಗುತ್ತದೆ. ರಾಜ್ಯವು ಜಿಲ್ಲೆ, ಗ್ರಾಮಗಳ ಮಟ್ಟದಲ್ಲಿ ಆಡಳಿತ ವಿಕೇಂದ್ರೀಕರಿಸಿ, ನೀತಿ ನಿಯಮ, ಕಾನೂನು ರಚಿಸುವ ಘಟಕವಾಗುತ್ತದೆ.

ಸುಂಕ ವಿಧಿಸುವ ಅಧಿಕಾರವನ್ನು ಸಂವಿಧಾನವು ನೇರವಾಗಿ ಜಿಲ್ಲೆಗಳಿಗೆ ಹಾಗೂ ಗ್ರಾಮಗಳಿಗೆ ಕೊಡಬೇಕು. ಕೇಂದ್ರದ ಆಯವ್ಯಯದ ಅನುದಾನದಲ್ಲಿ ಶೇ 25ರಷ್ಟು ಮೊತ್ತದ ಬಳಕೆಯ ಅಧಿಕಾರವು ಜಿಲ್ಲೆ, ಗ್ರಾಮಗಳ ಕೈಯಲ್ಲಿರಬೇಕು. ಆದರೆ ಇಂದಿನ ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ, ಜಿಲ್ಲೆಗಳಿಗೆ ಇಂಥ ವಿಶೇಷವಾದ ಅಧಿಕಾರ ಇಲ್ಲ. ಒಕ್ಕೂಟ ವ್ಯವಸ್ಥೆಗೆ ಇರುವ ಕಂಟಕಗಳು ಇಂದು ಬೇರೆ ರೂಪ ಪಡೆದುಕೊಂಡಿವೆ. ಸುಂಕಗಳನ್ನು ಕೇಂದ್ರೀಕೃತಗೊಳಿಸಲಾಗಿದೆ. ‘ಒನ್ ನೇಷನ್, ಒನ್ ಟ್ಯಾಕ್ಸ್’ ಹೆಸರಿನಲ್ಲಿ ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆ ರಾಜ್ಯಗಳ ಸ್ವಾಯತ್ತತೆಗೆ ಸವಾಲಾಗಿದೆ. ಹಿಂದೆಲ್ಲ ರಾಜ್ಯಗಳು ತಮ್ಮ ವರಮಾನವನ್ನು ತಾವೇ ಕ್ರೋಡೀಕರಿಸಿಕೊಳ್ಳಲು ಅವಕಾಶವಿತ್ತು. ಆದರೆ ಇಂದು ರಾಜ್ಯ ಸರ್ಕಾರಗಳು ಭಿಕ್ಷಾಪಾತ್ರೆ ಹಿಡಿದು, ‘ನಮ್ಮ ಪಾಲು ನಮಗೆ ಕೊಡಿ’ ಎಂದು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿಗೆ ಬಂದಿವೆ. ದಿಲ್ಲಿಯಲ್ಲಿ ರಾಜ್ಯ ಸರ್ಕಾರಗಳು ನಡೆಸಿದ ಧರಣಿಗಳು, ಕೇಂದ್ರಕ್ಕೆ ಮಾಡಿದ ಮನವಿಗಳು, ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಪ್ರಕರಣಗಳು ಇವೆಲ್ಲವೂ ಒಕ್ಕೂಟ ವ್ಯವಸ್ಥೆಗೆ ಜಿಎಸ್ಟಿ ಇಂದು ಕಂಟಕಪ್ರಾಯ
ವಾಗಿರುವುದನ್ನು ಸೂಚಿಸುತ್ತವೆ.

ಭಾರತದ ಒಕ್ಕೂಟ ವ್ಯವಸ್ಥೆಗೆ ಎರಗಿರುವ ದೊಡ್ಡ ಗಂಡಾಂತರವೆಂದರೆ, ಹಿಂದಿಯೇತರ ರಾಜ್ಯಗಳ ಮೇಲೆ, ವಿಶೇಷವಾಗಿ ದಕ್ಷಿಣ ಭಾರತದ ಮೇಲೆ ಹಿಂದಿಯನ್ನು ಹೇರುತ್ತಿರುವ ಕೇಂದ್ರದ ಸಾಮ್ರಾಜ್ಯಶಾಹಿ ಮನಃಸ್ಥಿತಿ. ಇದು ಒಕ್ಕೂಟ ವ್ಯವಸ್ಥೆಗೆ ಸವಾಲಾಗಿದೆ.

ಲೋಹಿಯಾ ಹೇಳಿದ ವಿಕೇಂದ್ರೀಕರಣದ ಚಿಂತನೆಯ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದಲ್ಲಿ ವಿಶಿಷ್ಟ ರಕ್ಷಣೆ ಪಡೆದ ರಾಜ್ಯಪಾಲರ ಹುದ್ದೆ, ಅದರ ಅಧಿಕಾರ ವ್ಯಾಪ್ತಿ, ಹುದ್ದೆಯ ಘನತೆ, ಗಾಂಭೀರ್ಯ, ಉಪಯುಕ್ತತೆಗಳನ್ನು ಕೂಡ ಚರ್ಚಿಸಬೇಕು. ಸಂವಿಧಾನದ 163ನೇ ವಿಧಿಯ ಪ್ರಕಾರ, ರಾಜ್ಯಪಾಲರು ಸಚಿವ ಸಂಪುಟದ ಸಲಹೆಯ ಮೇರೆಗೆ ಮಾತ್ರ ಕೆಲಸ ಮಾಡಬೇಕು. 1955ರಲ್ಲಿ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ ಘೋಷಿಸಿದಂತೆ, ರಾಜ್ಯಪಾಲರು ಒಬ್ಬ ಸಾಂವಿಧಾನಿಕ ಮುಖ್ಯಸ್ಥ. ಅಧಿಕಾರವನ್ನು ನಡೆಸುವುದು ಸಚಿವ ಸಂಪುಟವೇ.

ಸರ್ಕಾರಿಯಾ ಆಯೋಗದ ವರದಿಯಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಪಾಲರ ನೇಮಕವಾಗಬೇಕು: 1. ರಾಜ್ಯಪಾಲರಾಗಿ ನೇಮಕಗೊಳ್ಳುವವರು ರಾಜಕೀಯದಲ್ಲಿ ಇರಬಾರದು. ಅದರಲ್ಲೂ ರಾಜ್ಯಪಾಲರಾಗಿ ನೇಮಕ ಗೊಳ್ಳುವ ಹೊತ್ತಿನಲ್ಲಿ ನೇರ ರಾಜಕೀಯದಲ್ಲಿ ತೊಡಗಿರಬಾರದು. 2. ಸ್ಥಳೀಯ ರಾಜಕೀಯಕ್ಕೆ ಸಂಬಂಧಪಟ್ಟಿರದ ಸ್ವತಂತ್ರ ವ್ಯಕ್ತಿಯಾಗಿರಬೇಕು 3. ಹೊರಗಿನ ರಾಜ್ಯದವರಾಗಿರಬೇಕು. 4. ಯಾವುದಾದರೂ ಕ್ಷೇತ್ರದಲ್ಲಿ ಸಾಧಕರಾಗಿರಬೇಕು.

ಈಗ ಈ ವರದಿಯ ಹಿನ್ನೆಲೆಯಲ್ಲಿ ನೋಡಿದರೆ, ಇಂದು ಎಲ್ಲ ರಾಜ್ಯಪಾಲರೂ ಆ ಹುದ್ದೆಗೆ ಅನರ್ಹರಾಗು ತ್ತಾರೆ. ರಾಜ್ಯಪಾಲರು ನೇರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರಿಯಾ ಆಯೋಗದ ವರದಿ, ಎಂ.ಎನ್. ವೆಂಕಟಾಚಲಯ್ಯ ಆಯೋಗದ ವರದಿಯ ಶಿಫಾರಸಿನಂತೆ, ಈ ಸ್ಥಾನಕ್ಕೆ ಅರ್ಹತೆ ಹೊಂದಿರುವ ವ್ಯಕ್ತಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸದೆ, ರಾಷ್ಟ್ರಪತಿಯವರು ರಾಜ್ಯಪಾಲರನ್ನು ಆಯ್ಕೆ ಮಾಡುತ್ತಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕದ ಥಾವರ್ಚಂದ್ ಗೆಹಲೋತ್, ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ... ಹೀಗೆ ಪಟ್ಟಿ ಬೆಳೆಯುತ್ತದೆ.

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ. ಆದರೆ ಪ್ರಚಂಡ ಜನಾದೇಶ ಪಡೆದ ಜನಪ್ರಿಯ ಚುನಾಯಿತ ಪ್ರಜಾಸತ್ತಾತ್ಮಕ ಸರ್ಕಾರಗಳಿಗೆ ಕಿರುಕುಳ ಮತ್ತು ಈ ಸರ್ಕಾರಗಳ ವಿರುದ್ಧ ಬೇರೆ ಬೇರೆ ಬಗೆಯ ಭೇದಗಳನ್ನು ಇಂದು ಸೃಷ್ಟಿ ಮಾಡಿರುವವರು ಪ್ರಜಾ ತಂತ್ರಕ್ಕೆ, ಒಕ್ಕೂಟ ವ್ಯವಸ್ಥೆಗೆ ಕಂಟಕವಾಗಿದ್ದಾರೆ. ನಮ್ಮ ಒಕ್ಕೂಟ ವ್ಯವಸ್ಥೆಯ ಎಲ್ಲ ಅಂಗಗಳಿಗೂ ಸವಾಲುಗಳು ಎದುರಾಗಿರುವ ಈ ಕಾಲದಲ್ಲಿ ಲೋಹಿಯಾ ಅವರ ವಿಕೇಂದ್ರೀಕರಣದ ಚಿಂತನೆಗಳ ಮರುಮನನ ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.