ಮಾರ್ಚ್ 8, ವಿಶ್ವ ಮಹಿಳಾ ದಿನ. ಮಹಿಳೆ ಸ್ವಅರಿವು ಕಂಡುಕೊಳ್ಳುವ ಹಾದಿಯಲ್ಲಿ ಇನ್ನಷ್ಟು ಆತ್ಮವಿಶ್ವಾಸದಿಂದ ಕ್ರಮಿಸಬೇಕಿದೆ ಎನ್ನುವ ವಾಸ್ತವದ ನಡುವೆ, ಅವಳ ಪಯಣದಲ್ಲಿ ಎದುರಾಗುವ ಅಡೆತಡೆಗಳು, ಭ್ರಮೆಗಳು ಮತ್ತು ಹುಸಿ ಭರವಸೆಗಳನ್ನು ವಿಮರ್ಶೆಗೆ ಹಚ್ಚಿ ಅವುಗಳನ್ನು ಅರ್ಥಮಾಡಿಕೊಳ್ಳಬೇಕಾದ ಸುಸಂದರ್ಭವಿದು. ಈ ದಿಸೆಯಲ್ಲಿ, ಸಮಾಜದಲ್ಲಿ ತನ್ನದೇ ಛಾಪು ಮೂಡಿಸಬೇಕೆಂಬ ಹೆಬ್ಬಯಕೆ ಹೊತ್ತ ಮಹಿಳೆಗೆ ಇರುವ ಬಹುಮುಖ್ಯ ಸವಾಲೆಂದರೆ, ‘ಚಂದಮಾಮ’ ತೋರಿಸುವ ಪುರುಷರ ಖೆಡ್ಡಾಕ್ಕೆ ಬೀಳದೆ ತನ್ನ ಬದುಕನ್ನು ಆತ್ಮವಿಶ್ವಾಸದಿಂದ ಮತ್ತು ಪ್ರಾಪಂಚಿಕ ಕಟ್ಟುಪಾಡುಗಳ ಹಂಗಿಲ್ಲದಂತೆ ರೂಪಿಸಿಕೊಳ್ಳುವುದು.

‘ಕಾಂತಾರ’ ಸಿನಿಮಾ ನೋಡಿದವರಿಗೆ, ಹೆಣ್ಣು ಮಕ್ಕಳಿಗೆ ‘ಚಂದಮಾಮ’ ತೋರಿಸುವ ರಾಂಪನ ಪಾತ್ರ ನೆನಪಾಗಬಹುದು. ಈ ಚಂದಮಾಮನ ಉಪಮೆ ಗಂಡು- ಹೆಣ್ಣಿನ ಸಂಬಂಧದಲ್ಲಿ ಬಹಳ ವಿಶಿಷ್ಟವಾದುದು. ಸಾವಿರಾರು ವರ್ಷಗಳಿಂದ ಬಾಹ್ಯ ಪ್ರಪಂಚದ ವ್ಯವಹಾರದಲ್ಲಿ ಪಳಗಿ ಅಧಿಕಾರ ಸ್ಥಾಪಿಸಿರುವ ಗಂಡು, ಹೊರಪ್ರಪಂಚಕ್ಕೆ ಹೊಸಬಳಾಗಿರುವ ಹೆಣ್ಣನ್ನು ‘ಕೈಹಿಡಿದು’ ಚಂದಮಾಮ ತೋರಿಸುವ ಮುತುವರ್ಜಿ ವಹಿಸುವುದು ಒಂದು ಸಾಮಾನ್ಯ ಸಂಗತಿ. ಈ ಚಂದಮಾಮ, ಹಲವಾರು ಮೂರ್ತ ಸ್ವರೂಪ ಪಡೆಯುತ್ತದೆ- ಜ್ಞಾನ, ವಿದ್ವತ್, ಮಾಹಿತಿ, ಕೌಶಲ, ಸಾಮಾನ್ಯ ತಿಳಿವಳಿಕೆ, ವ್ಯವಹಾರ ನೈಪುಣ್ಯ, ಪ್ರಾಪಂಚಿಕ ಅರಿವು, ಪ್ರಭಾವಿಗಳ ಪರಿಚಯ, ಉದ್ಯೋಗ, ಬಡ್ತಿ, ಫಾಸ್ಟ್ಟ್ರ್ಯಾಕ್ ಅವಕಾಶಗಳು, ಪ್ರೀತಿ, ಮದುವೆ, ಹಣಕಾಸು, ಭದ್ರತೆ, ಅಧ್ಯಾತ್ಮ...

ಈ ದೂರದ ಚಂದಮಾಮನನ್ನು ತೋರಿಸಲು ಕೈಹಿಡಿಯುವ ಪ್ರಕ್ರಿಯೆಯಲ್ಲಿ, ಹೆಣ್ಣು ಬಹಳಷ್ಟು ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ದೌರ್ಜನ್ಯಕ್ಕೆ ಒಳಗಾಗಿ, ಮೌನಕ್ಕೆ ಶರಣಾಗಿ, ಹುಸಿನಗೆಯಲ್ಲಿ ಬದುಕುತ್ತಾಳೆ. ಎಷ್ಟೋ ಪುರುಷರು ಹೆಣ್ಣುಮಕ್ಕಳಿಗೆ ಚಂದಮಾಮ ತೋರಿಸುವುದನ್ನೇ ಪಾರ್ಟ್ಟೈಮ್ ಕೆಲಸ ಮಾಡಿಕೊಂಡಿರುತ್ತಾರೆ. ಇದು ಅವರ ನೀರಸ ವಿವಾಹ ಸಂಬಂಧಕ್ಕೆ ಒಂದು ಮಸಾಲೆಯಂತೆ ಕೆಲಸ ಮಾಡಿ, ಬದುಕನ್ನು ರಸಭರಿತ ಮಾಡುತ್ತದೆ. ಆದರೆ, ಇಲ್ಲಿ ಉಪಯೋಗಿಸಲ್ಪಟ್ಟ ಹೆಣ್ಣಿನ ಗತಿ? ಗಂಡನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತನ್ನದೇ ಅಸ್ತಿತ್ವವನ್ನು ಕಟ್ಟಿಕೊಳ್ಳುವುದು ಹೆಣ್ಣಿಗೆ ಸ್ವಲ್ಪ ಕಷ್ಟಸಾಧ್ಯವೇ ಸರಿ. ಗಂಡಿನಿಂದ ಪಡೆಯುವ ಈ ಅಲ್ಪಸ್ವಲ್ಪ ಸಹಾಯಕ್ಕೆ ಹೆಣ್ಣು, ಹೆಚ್ಚಿನ ಸಂದರ್ಭದಲ್ಲಿ ಬಹಳಷ್ಟು ‘ರಾಜಿ’ ಮಾಡಿಕೊಳ್ಳಬೇಕಾಗುತ್ತದೆ. ಈ ರಾಜಿಗೆ ಒಳಪಡಲು ಇಷ್ಟಪಡದ ಹೆಣ್ಣು, ಯಶಸ್ಸು ಪಡೆಯಲು ಇನ್ನಷ್ಟು ಹೆಚ್ಚಿನ ಸ್ವಪ್ರಯತ್ನ ಮತ್ತು ಶ್ರಮ ವಹಿಸಬೇಕಾಗುತ್ತದೆ. ಆದರೆ ಇದು ಅಸಾಧ್ಯವೇನಲ್ಲ. ಸ್ವಅರಿವನ್ನು ಜಾಗೃತಗೊಳಿಸಿಕೊಂಡ ಹೆಣ್ಣು ಆಂತರಿಕವಾಗಿ ಗಟ್ಟಿಯಾಗುತ್ತಾಳೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತಾಳೆ. ಇಂತಹ ಗಟ್ಟಿಗಿತ್ತಿ ಹೆಣ್ಣುಮಕ್ಕಳನ್ನು ಮಣಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ನಮ್ಮ ಇತಿಹಾಸ ಮತ್ತು ವರ್ತಮಾನದಲ್ಲಿ ಸಿಗುವ ಹಲವಾರು ಸ್ಫೂರ್ತಿದಾಯಕ ಉದಾಹರಣೆಗಳ ನಡುವೆ ಸಿಗುವ ಮೂರು ಪ್ರತಿಮೆಗಳೆಂದರೆ- ಅಕ್ಕಮಹಾದೇವಿ, ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಮಮತಾ ಬ್ಯಾನರ್ಜಿ.

ಅಕ್ಕಮಹಾದೇವಿ, ಹೆಣ್ಣಿನ ದೇಹವನ್ನು ಹಸಿದ ಕಂಗಳಿಂದ ನೋಡುವ ಪುರುಷ ಸಮಾಜವನ್ನು ದಿಟ್ಟತನದಿಂದ ಎದುರಿಸಿದ ಬಂಡಾಯಗಾರ್ತಿಯಾಗಿ ಕಾಣಿಸುತ್ತಾಳೆ. ಅವಳು ತನ್ನ ಕೂದಲಿಂದ ದೇಹವನ್ನು ಮುಚ್ಚಿಕೊಂಡಿದ್ದಳೋ ಇಲ್ಲವೋ ಎನ್ನುವುದು ಇಲ್ಲಿ ಅಪ್ರಸ್ತುತ. ಆದರೆ, ಅವಳ ನಡೆ ಪುರುಷ ಮನಃಸ್ಥಿತಿಗೆ ಕೊಟ್ಟ ಚಾಟಿಯೇಟಿನಂತಿತ್ತು. ಹಾಗೆಯೇ, ಅವಳ ಬದುಕಿನ ಮಾರ್ಗವನ್ನು ಗೌರವಿಸಿ ಸಮಾನವಾಗಿ ಕಂಡ ಅಲ್ಲಮಪ್ರಭು, ಬಸವಣ್ಣನವರಂತಹ ಶರಣರು ಅಷ್ಟೇ ಗೌರವಾರ್ಹರು. ಇನ್ನು, ಮಂಗಳೂರಿನವರಾದ ಕಮಲಾದೇವಿ ಚಟ್ಟೋಪಾಧ್ಯಾಯರ ಸಾಧನೆ ಬೆರಗು ಹುಟ್ಟಿಸುವಂತಹದ್ದು. ಬಾಲವಿಧವೆಯಾದರೂ ಧೃತಿಗೆಡದೆ ಮಂಗಳೂರಿನಿಂದ ಮದ್ರಾಸಿಗೆ ಹೋಗಿ ಕಾಲೇಜು ವಿದ್ಯಾಭಾಸ ಮುಗಿಸಿ, ಅಲ್ಲಿ ಪರಿಚಯವಾದ ಹರೀಂದ್ರನಾಥ್ ಚಟ್ಟೋಪಾಧ್ಯಾಯ ಅವರನ್ನು ಮದುವೆಯಾದರು. ಆ ಕಾಲದಲ್ಲಿ ವಿಧವಾ ಮರುವಿವಾಹ ಸುಲಭವಾಗಿರಲಿಲ್ಲ. ಮುಂದೆ, ತನ್ನ ಸ್ತ್ರೀಲೋಲ ಗಂಡನಿಗೆ ಅವರು ಕೊಟ್ಟ ವಿಚ್ಛೇದನ, ದೇಶದಲ್ಲಿ ಕಾನೂನಿನ ಮೂಲಕ ಪಡೆದ ಮೊದಲ ವಿಚ್ಛೇದನವೆನಿಸಿತು. ಆನಂತರ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕಮಲಾದೇವಿ, ದೇಶದ ಸ್ವಾತಂತ್ರ್ಯದ ನಂತರ ಸಮಾಜಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಆ ಕಾಲದಲ್ಲಿ ಕಮಲಾದೇವಿಯವರಷ್ಟು ದೇಶಗಳನ್ನು ಸುತ್ತಿದ ಇನ್ನೊಬ್ಬ ಮಹಿಳೆ ಸಿಗಲಾರಳು. ತಾವು ಭೇಟಿ ನೀಡಿದ ಪ್ರತೀ ದೇಶದ ಪ್ರವಾಸಾನುಭವವನ್ನು ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ಸಿನಿಮಾದಲ್ಲಿಯೂ ಆಸಕ್ತಿ ಹೊಂದಿದ್ದ ಕಮಲಾದೇವಿ ಕನ್ನಡವೂ ಸೇರಿದಂತೆ (ಮೃಚ್ಛಕಟಿಕ) ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ, ಯಾವುದೇ ಕೌಟುಂಬಿಕ ಹಿನ್ನೆಲೆಯಿರದ, ಗಾಡ್ಫಾದರ್ಗಳ ಸಹಾಯ ಪಡೆಯದ ಕಮಲಾದೇವಿ, ತಮ್ಮ ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯಿಂದ ತಮಗನಿಸಿದ್ದನ್ನೆಲ್ಲಾ ಸಾಧಿಸಿ, ಒಂದು ಪರಿಪೂರ್ಣ ಬದುಕು ರೂಪಿಸಿಕೊಂಡ ಅಪ್ರತಿಮ ಮಹಿಳಾ ಚೈತನ್ಯ.

ವರ್ತಮಾನದಲ್ಲಿ ಹೆಸರು ಮಾಡಿರುವ ಹಲವಾರು ಮಹಿಳಾ ರಾಜಕಾರಣಿಗಳಿದ್ದರೂ ಮಮತಾ ಬ್ಯಾನರ್ಜಿ ವಿಶಿಷ್ಟವಾಗಿ ಗೋಚರಿಸುತ್ತಾರೆ. ನಿಷ್ಕರುಣೆಯ ಕಿತ್ತಾಟ, ಸ್ಪರ್ಧೆ, ಕೆಸರೆರಚಾಟ, ಹಣದ ಪ್ರಭಾವ ಮತ್ತು ತೋಳ್ಬಲ ಪ್ರದರ್ಶನವಿರುವ ರಾಜಕೀಯ ಕ್ಷೇತ್ರದಲ್ಲಿ, ಹೆಣ್ಣುಮಕ್ಕಳು ಅಸ್ತಿತ್ವ ಸ್ಥಾಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಅಧಿಕಾರ ಪಡೆದರೂ ಅಪ್ಪ, ಗಂಡ, ಗಾಡ್ಫಾದರ್ನಂತಹ ಪುರುಷರ ನಾಮಬಲ, ಶ್ರೀರಕ್ಷೆ ಮತ್ತು ಪ್ರಭಾವಗಳ ಆಧಾರದಿಂದಲೇ ಎನ್ನುವುದು ಸಾರ್ವಜನಿಕ ಸತ್ಯ. ಆದರೆ, ಇದಕ್ಕೊಂದು ಅಪವಾದವೆಂಬಂತೆ, ತಳಮಟ್ಟದ ಬೀದಿ ಹೋರಾಟದಿಂದ ರಾಜಕೀಯ ವೃತ್ತಿಬದುಕು ಆರಂಭಿಸಿ, ವೈಯಕ್ತಿಕ ವರ್ಚಸ್ಸಿನಿಂದ ಮುಖ್ಯಮಂತ್ರಿ ಕುರ್ಚಿ ಏರಿ, ಈಗ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕಿಯಾಗಿರುವ ಮಮತಾ, ಪಕ್ಷಾತೀತವಾಗಿ ಹೆಮ್ಮೆಪಡಬೇಕಾದ ಮಹಿಳೆ. ಅವರು ಸ್ವಶ್ರಮದಿಂದ ಹೆಸರು ಗಳಿಸಿ ತಮ್ಮ ಸ್ಥಾನ ಪಡೆದಿರುವುದರಿಂದಲೇ, ವರ್ತಮಾನ ಭಾರತದ ಅತ್ಯಂತ ಪ್ರಬಲ ಪುರುಷ ಶಕ್ತಿಕೇಂದ್ರಕ್ಕೂ ಅವರನ್ನು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮಣಿಸಲಾಗಲಿಲ್ಲ. ಅವರ ಕೆಲವು ಆಪ್ತರಿಗೆ ಅಂಟಿಕೊಂಡಿರುವ ಭ್ರಷ್ಟಾಚಾರದ ಮಾಲಿನ್ಯ ತೊಳೆದುಕೊಂಡಲ್ಲಿ, ಅವರೊಬ್ಬ ವರ್ತಮಾನಕಾಲದ ಶ್ರೇಷ್ಠ ರಾಜಕಾರಣಿ (ಮಹಿಳಾ ರಾಜಕಾರಣಿ ಮಾತ್ರವಲ್ಲ) ಅನ್ನಿಸಿಕೊಳ್ಳಲಿದ್ದಾರೆ.

ಸಾಂದರ್ಭಿಕವಾಗಿ, ಚಂದಮಾಮ ತೋರಿಸುವ ನೆಪದಲ್ಲಿ ‘ಕೈಹಿಡಿದು’ ನಡೆಸುವ ಪುರುಷರ ಕುರಿತು ಮಹಿಳೆ ಇಲ್ಲಿ ಅರ್ಥಮಾಡಿಕೊಳ್ಳಬೇಕಾದುದು, ಈ ಚಂದಮಾಮ ಮುಟ್ಟಲು ಪುರುಷನ ಅಗತ್ಯವೇನಿಲ್ಲ, ನಿಮ್ಮ ಚಂದಮಾಮನನ್ನು ನೀವೇ ಕಂಡುಕೊಳ್ಳಬಹುದು, ಯಶಸ್ಸಿಗೆ ಸ್ವಲ್ಪ ಹೆಚ್ಚು ಕಷ್ಟಪಡಬೇಕಾಗಬಹುದು ಅಷ್ಟೆ. ಪುರುಷನ ಸಹಾಯ ಪಡೆಯುವುದು ಒಂದು ಸುಲಭಮಾರ್ಗ. ಆದರೆ, ಈ ಮಾರ್ಗದಲ್ಲಿ ಬಹಳಷ್ಟು ರಾಜಿ ಮಾಡಿಕೊಳ್ಳಬೇಕಾಗಬಹುದು. ಇದಕ್ಕೆ ಕೆಲವು ಉದಾಹರಣೆ ಕೊಡುವುದಾದರೆ- ಅಧ್ಯಾಪಕ, ಯಾವುದೇ ಶ್ರಮಪಡದ ತನ್ನ ವಿದ್ಯಾರ್ಥಿನಿಗೆ ಅಂಕ ದಕ್ಕಿಸಿಕೊಡಬಹುದು ಅಥವಾ ಸಂಶೋಧನಾ ಪದವಿ ಕೊಡಿಸಬಹುದು, ಮೇಲಧಿಕಾರಿ ತನ್ನ ಕೆಳಸ್ತರದ ಮಹಿಳಾ ಉದ್ಯೋಗಿಯ ಅರ್ಹತೆಗೆ ಮೀರಿ ಬಡ್ತಿ ಅಥವಾ ಸೌಲಭ್ಯ ಕೊಡಿಸಬಹುದು, ರಾಜಕಾರಣಿ, ಮಹಿಳಾ ಕಾರ್ಯಕರ್ತೆಗೆ ಸುಲಭವಾಗಿ ಟಿಕೆಟ್ ಕೊಡಿಸಬಹುದು, ಪ್ರತಿಭೆ ಇಲ್ಲದೆ ಸಿನಿಮಾ, ಧಾರಾವಾಹಿಗಳಲ್ಲಿ ಪಾತ್ರ ಸಿಗಬಹುದು... ಆದರೆ ಇದಕ್ಕೆಲ್ಲಾ ಹೆಣ್ಣು ತೆರಬೇಕಾದ ಬೆಲೆ ಏನು?

ಇಂದಿನ ಹೆಣ್ಣುಮಕ್ಕಳಿಗೆ ಸ್ವಂತಿಕೆ ಬೆಳೆಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶವಿದೆ. ಹಾಗಾಗಿ, ಪುರುಷರ ಕೃಪಾಕಟಾಕ್ಷವೆಂಬ ‘ಶಾರ್ಟ್ ಕಟ್’ಗೆ ಜೋತುಬೀಳದೆ ಸ್ವಶಕ್ತಿಯಿಂದ ಬದುಕು ಕಟ್ಟಿಕೊಳ್ಳಬಹುದು. ಅದನ್ನು ಗೌರವಿಸುವ ಗಂಡನ್ನೇ ಬಾಳಸಂಗಾತಿಯನ್ನಾಗಿ ಆರಿಸಿಕೊಳ್ಳಬಹುದು. ಆತ್ಮಗೌರವಕ್ಕೆ ಚ್ಯುತಿ ಬರುವ ಸಂಬಂಧಗಳಿಂದ ನಂಟು ಕಳೆದುಕೊಳ್ಳಬಹುದು.

ಹೀಗೆಂದ ಮಾತ್ರಕ್ಕೆ ಪುರುಷರೆಲ್ಲಾ ವಿಶ್ವಾಸಾರ್ಹರಲ್ಲ ಎಂದರ್ಥವಲ್ಲ. ಮನುಷ್ಯನ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಂಡ ಗಂಡೆಂದೂ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯಾಗಿ, ಗುಲಾಮಳಾಗಿ ಅಥವಾ ಸರಕಾಗಿ ಕಾಣುವುದಿಲ್ಲ, ಬದಲಾಗಿ ಗೌರವದಿಂದ, ಸಮಾನವಾಗಿ ಕಾಣುತ್ತಾನೆ. ಹಾಗಾಗಿ, ಹೆಣ್ಣುಮಕ್ಕಳು ಯಾರದೇ ಹುನ್ನಾರಗಳಿಗೆ ಸಿಕ್ಕಿಕೊಳ್ಳದೆ, ತಮ್ಮಿಷ್ಟದಂತೆ ಬದುಕು ರೂಪಿಸಿಕೊಳ್ಳುತ್ತಾ, ಹೆಣ್ಣಿನ ಕುರಿತಾಗಿರುವ ಎಲ್ಲಾ ಮಿಥ್ಯೆಗಳನ್ನು ಒಡೆದುಹಾಕುವತ್ತ ಹೆಜ್ಜೆ ಇಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.