ಹೈದರಾಬಾದ್: ‘ನಮಗೆ ಬಂಡಿ ಸಂಜಯ್ ದೊಡ್ಡ ನಾಯಕರು. ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಹೈಕಮಾಂಡ್ ತಪ್ಪು ಮಾಡಿತು’–ಶಾದ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಕೃಷ್ಣಂರಾಜು ಅವರ ಬೇಸರದ ಮಾತಿದು.

ಇದೇ ರೀತಿಯ ಅಭಿಪ್ರಾಯವನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತ ಹರೀಶ್‌ಕುಮಾರ್ ಯಾದವ್ ಕೂಡ ವ್ಯಕ್ತಪಡಿಸಿದರು. ಇದು ಟಿಡಿಪಿ–ಬಿಜೆಪಿ ಜೊತೆಯಾಗುವುದರ ಸೂಚನೆ ಇರಬಹುದೇ ಎನ್ನುವ ಅನುಮಾನ ಮೂಡಿತು. ಸಂಗಾರೆಡ್ಡಿ ನಗರದಲ್ಲಿ ಸಿಕ್ಕ ಬಿಜೆಪಿ ಅಭಿಮಾನಿ ಶ್ರೀನಿವಾಸ ಕೋಟ ‘ಬಂಡಿ ಸಂಜಯ್ ಬದಲಾವಣೆ ಉತ್ಸಾಹವನ್ನೇ ಕಸಿದುಕೊಂಡುಬಿಟ್ಟಿದೆ’ ಎಂದು ನೊಂದುಕೊಂಡರು.

‘ಬಂಡಿ ಸಂಜಯ್’ ತೆಲಂಗಾಣದ ಕರೀಂನಗರ ಕ್ಷೇತ್ರದ ಸಂಸದ. ಆರ್‌ಎಸ್‌ಎಸ್ ಸಹವಾಸದಲ್ಲಿ ಇದ್ದು, ಎಬಿವಿಪಿಯಲ್ಲಿ ಬೆಳೆದವರು. ನಂತರ ಕಾರ್ಪೋರೇಟರ್ ಆಗಿದ್ದರು. ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ತೆಲಂಗಾಣದಲ್ಲಿರುವ ಪ್ರಮುಖ ಹಿಂದುಳಿದ ಜಾತಿಗಳಲ್ಲಿ ‘ಮುನ್ನೂರುಕಾಪು’ ಕೂಡ ಒಂದು. ‘ಬಂಡಿ’ ಈ ಜಾತಿಗೆ ಸೇರಿದ ನಾಯಕ.

ಕ್ರಿಯಾಶೀಲ ‘ಬಂಡಿ’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ‘ಪ್ರಜಾಸಂಗ್ರಾಮ ಪಾದಯಾತ್ರೆ’ ನಡೆಸಿದ್ದರು. ಆಗ ರಾಜ್ಯದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಎಸ್‌ಆರ್) ಪಕ್ಷವನ್ನು ಕಿತ್ತೊಗೆಯಬೇಕು, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎನ್ನುವ ಸಂಕಲ್ಪ ಅವರದಾಗಿತ್ತು. ಆ ವೇಳೆಗೆ ಕಾರ್ಯಕರ್ತರು, ಜನರೊಂದಿಗೆ ಒಡನಾಟ ಆಪ್ತವಾಗಿತ್ತು. ಪಕ್ಷದಲ್ಲಿ ‘ಬಂಡಿ’ ಮಾತಿಗೆ ತುಂಬಾ ಬೆಲೆ ಇತ್ತು. ಆದರೆ, ಅದೇ ಸಮಯದಲ್ಲಿ ಮತ್ತೊಂದು ಹಿಂದುಳಿದ ಜಾತಿಯ (ಮುದಿರಾಜ) ನಾಯಕ ಈಟೆಲ ರಾಜೇಂದರ್ ಹಾಗೂ ‘ಬಂಡಿ’ ನಡುವೆ ತಿಕ್ಕಾಟ ಕೂಡ ತೀವ್ರವಾಗುತ್ತಾ ಬಂತು. ಇಬ್ಬರನ್ನೂ ಸಮಾಧಾನಪಡಿಸಲು ಹೈಕಮಾಂಡ್ ‘ಬಂಡಿ’ಯನ್ನು ಬದಲಿಸಿ, ಕೇಂದ್ರ ಸಚಿವ ಕಿಶನ್ ರೆಡ್ಡಿಯನ್ನು ಆ ಜಾಗದಲ್ಲಿ ಪ್ರತಿಷ್ಠಾಪಿಸಿತು.

‘ಬಂಡಿ’ ಬದಲಾವಣೆಗೆ ಆಂತರಿಕ ಕಚ್ಚಾಟ ಕಾರಣ ಎನ್ನುವುದು ಪಕ್ಷದ ಮಾತು. ಆದರೆ, ಜನರ ನಡುವೆ ಹರಿದಾಡುತ್ತಿರುವ ಊಹಾಪೋಹಗಳು ಬೇರೆಯದೇ ಕತೆಗಳನ್ನು ಹೇಳುತ್ತಿವೆ. ಒಂದು, ದೆಹಲಿ ಅಬಕಾರಿ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ, ವಿಧಾನಪರಿಷತ್ ಸದಸ್ಯೆ ಕೆ.ಕವಿತಾ ಹೆಸರಿದ್ದು, ಅವರ ಬಂಧನವಾಗುವುದು ಹೆಚ್ಚು ಕಡಿಮೆ ನಿಶ್ಚಿತವಾಗಿತ್ತು. ಆದರೆ, ಕವಿತಾ ಅವರು ಇ.ಡಿ ಬಂಧನದಿಂದ ಬಚಾವ್ ಆದರು. ಇದು ಕೆಸಿಆರ್ ಮತ್ತು ಬಿಜೆಪಿ ನಡುವಿನ ಒಳಒಪ್ಪಂದದ ಫಲಿತಾಂಶ. ಎರಡನೆಯದು, ‘ಬಂಡಿ’ಯಂತಹ ಆಕ್ರಮಣಕಾರಿ ನಾಯಕನಿಂದ ಬಿಆರ್‌ಎಸ್‌ಗೆ ಆಗುವ ಹಾನಿಯನ್ನು ತಪ್ಪಿಸಲು ಅವರನ್ನು ಕಿತ್ತು ಹಾಕಲಾಯಿತು.

ಈ ಕತೆಗಳು ಏನೇ ಇರಲಿ, ಅಧ್ಯಕ್ಷ ಸ್ಥಾನದಿಂದ ‘ಬಂಡಿ’ಯನ್ನು ಕಳಚಿದ ಮೇಲೆ ಸಾಮಾನ್ಯ ಕಾರ್ಯಕರ್ತರ ಉತ್ಸಾಹ ಕಡಿಮೆ ಆಗಿದ್ದಂತೂ ನಿಜ. ಹಿಂದುತ್ವವಾದಿ, ನಿಷ್ಠಾವಂತ ಕಾರ್ಯಕರ್ತರು ಮಾತ್ರ ಇಂದಿಗೂ ಸಕ್ರಿಯರಾಗಿದ್ದಾರೆ.

ಮತ್ತೊಂದು ಮಾತು ಚಾಲ್ತಿಯಲ್ಲಿದೆ. ಬಿಜೆಪಿಗೆ ಬಿಆರ್‌ಎಸ್ ಅನ್ನು ಸೋಲಿಸುವುದು ಈಗಿನ ತುರ್ತು ಅಲ್ಲ. ಅವರ ಗುರಿ ಕಾಂಗ್ರೆಸ್. ಆದ್ದರಿಂದಲೇ ಕೆಸಿಆರ್ ಹೆಗಲ ಮೇಲೆ ಬಂದೂಕು ಇಟ್ಟಿದ್ದಾರೆ. ಇದಕ್ಕೂ ಕಾರಣವಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ, 2024 ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಕಠಿಣವಾಗುತ್ತದೆ. ಒಂದು ವೇಳೆ ಬಿಆರ್‌ಎಸ್ ಗದ್ದುಗೆಗೆ ಏರಿದರೆ, ಅವರು ಎನ್‌ಡಿಎ ಭಾಗವಾಗುವ ಸಾಧ್ಯತೆಗಳಿವೆ. ಆ ಮೂಲಕವಾದರೂ ಲಾಭ ಆಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

2014 ರ ವಿಧಾನಸಭೆ ಚುನಾವಣೆಯಲ್ಲಿ ಐದು ಸ್ಥಾನ ಗೆದ್ದಿದ್ದ ಬಿಜೆಪಿ, 2018 ರಲ್ಲಿ ಒಂದು ಸ್ಥಾನ ಜಯಿಸಿತು. ಬಿಜೆಪಿಗೆ ರಾಜ್ಯದಲ್ಲಿ ಮಹತ್ವವನ್ನು ತಂದುಕೊಟ್ಟಿದ್ದು ದುಬ್ಬಾಕ್ ಮತ್ತು ಹುಜುರಾಬಾದ್ ಉಪ ಚುನಾವಣೆಗಳು. ಆಡಳಿತಾರೂಢ ಬಿಆರ್‌ಎಸ್ ಪಕ್ಷವನ್ನು ಹಿಮ್ಮೆಟ್ಟಿಸಿ ಕಮಲ ಅರಳಿತು. ಇದು ರಾಷ್ಟ್ರ ನಾಯಕರ ಗಮನ ತೆಲಂಗಾಣದ ಕಡೆಗೂ ಹರಿಯುವಂತೆಯೂ, ಕಾರ್ಯಕರ್ತರಲ್ಲಿ ನವ ಉತ್ಸಾಹ ಮೂಡುವಂತೆಯೂ ಮಾಡಿತು.

ಹೈದರಾಬಾದ್ ಹೊರತುಪಡಿಸಿದರೆ ರಾಜ್ಯದಲ್ಲಿ ಬಿಜೆಪಿಗೆ ಗಟ್ಟಿನೆಲೆ ಇರುವುದು ಉತ್ತರ ತೆಲಂಗಾಣದ ಅವಿಭಜಿತ ನಿಜಾಮಾಬಾದ್, ಕರೀಂನಗರ ಮತ್ತು ಆದಿಲಾಬಾದ್ ಜಿಲ್ಲೆಗಳಲ್ಲಿ ಮಾತ್ರ. ಹಳೆಯ ನಿಜಾಮಾಬಾದ್ ಜಿಲ್ಲೆ ಬಿಜೆಪಿಯ ಶಕ್ತಿಕೇಂದ್ರ. ಅಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಕೊಡುವಷ್ಟರ ಮಟ್ಟಿಗೆ ಅದರ ಬಲವಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರು ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದರು. ಅವರನ್ನು 2019 ರ ಚುನಾವಣೆಯಲ್ಲಿ ಬಿಜೆಪಿಯ ಡಿ.ಅರವಿಂದ ಸೋಲಿಸಿದರು.

ನೆರೆಯ ಕರೀಂನಗರ ಜಿಲ್ಲೆಯಲ್ಲೂ ಬಿಜೆಪಿಗೆ ನೆಲೆಯಿದೆ. ‘ಬಂಡಿ ಸಂಜಯ್’ ಅಲ್ಲಿಯ ಸಂಸದರು. ಉತ್ತರದ ತುದಿಯಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಾಗಿರುವ ಆದಿಲಾಬಾದ್ ಜಿಲ್ಲೆಯಲ್ಲೂ ಬಿಜೆಪಿ ಕೆಲ ವರ್ಷಗಳಿಂದ ನೆಲೆ ಕಂಡುಕೊಂಡಿದೆ. ನೆರೆಯ ಮಹಾರಾಷ್ಟ್ರದ ಜತೆಗಿನ ಸಂಪರ್ಕದಿಂದಾಗಿ ಈ ಜಿಲ್ಲೆಯ ಪಶ್ಚಿಮ ಪ್ರದೇಶಗಳಲ್ಲಿ ತುಂಬಾ ಹಿಂದಿನಿಂದಲೂ ಕೋಮು ಸಂಘರ್ಷ ಬೇರೂರಿದೆ. ಅಲ್ಲದೆ ಬುಡಕಟ್ಟು ಪ್ರದೇಶಗಳಲ್ಲಿ ಆರ್‌ಎಸ್‌ಎಸ್ ಬಹಳ ವರ್ಷಗಳಿಂದ ಕೆಲಸ ಮಾಡುತ್ತಾ ಹಿಂದುತ್ವದ ಭಾವನೆಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಅಲ್ಲಿ 2019ರ ಲೋಕಸಭೆಯಲ್ಲಿ ಬುಡಕಟ್ಟು ಜನಾಂಗದ ಸೋಯಂ ಬಾಪುರಾವು ಆಯ್ಕೆಯಾಗಿದ್ದಾರೆ. ಬಿಜೆಪಿ ಈ ಮೂವರೂ ಸಂಸದರನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸಿದೆ. ಇವರ ಆಯ್ಕೆ ಬಗೆಗೆ ಆಶಾಭಾವನೆಯನ್ನೂ ಹೊಂದಿದೆ.

ಈ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರಮುಖವಾಗಿ ಮೂರು ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಮೊದಲನೆಯದು, ಹಿಂದುಳಿದ ವರ್ಗಗಳ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದು. ಎರಡನೆಯದು, ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವುದು. ಮೂರನೆಯದು, ಮುಸ್ಲಿಮರಿಗೆ ಕೊಟ್ಟಿರುವ ಶೇ 4 ರಷ್ಟು ಮೀಸಲಾತಿಯನ್ನು ಹಿಂದಕ್ಕೆ ಪಡೆದು, ಅದನ್ನು ಹಿಂದುಳಿದ ವರ್ಗಗಳಿಗೆ ನೀಡುವುದು.

ಬಿಜೆಪಿ ಕಾರ್ಯಕರ್ತ ಕೃಷ್ಣಂರಾಜು ನನ್ನೊಂದಿಗೆ ಮಾತನಾಡುತ್ತಾ ‘ನೀವು ರಾಜ್ಯ ಮೂಲೆಮೂಲೆ ಸುತ್ತಾಡಿ ಬಂದಿದ್ದೀರಿ. ನನ್ನೊಂದಿಗೆ ನಿಜ ಹೇಳಿ. ಬಂಡಿ ಸಂಜಯ್ ಬದಲಾವಣೆಯಿಂದ ನಾವೇ ನಮ್ಮ ಶಕ್ತಿಯನ್ನು ಕುಂದಿಸಿಕೊಂಡಿದ್ದೇವೆ ಅಲ್ಲವೇ’ ಎಂದು ಕೇಳಿದರು.

ಇದು ನಿಷ್ಠಾವಂತ ಕಾರ್ಯಕರ್ತನೊಬ್ಬನ ಸ್ವಯಂ ವಿಮರ್ಶೆಯಂತೆ ಕಂಡಿತು.

ಪಾಲಿಕೆ ಗೆಲುವು ಗತಕಾಲದ ಕತೆಯಂತೆ...
ಮೂರು ವರ್ಷಗಳ ಹಿಂದಿನ ಮಾತು. ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ (ಜಿಎಚ್‌ಎಂಸಿ)ಗೆ ಚುನಾವಣೆ ನಡೆದಿತ್ತು. 150 ಸ್ಥಾನಗಳಲ್ಲಿ ಆಡಳಿತಾರೂಢ ಬಿಆರ್‌ಎಸ್ 56, ಬಿಜೆಪಿ 48, ಎಐಎಂಐಎಂ 44, ಕಾಂಗ್ರೆಸ್ 2 ಸ್ಥಾನಗಳಿಸಿದ್ದವು. ಬಿಜೆಪಿಯ ಅಭೂತಪೂರ್ವ ಗೆಲುವು ಪಕ್ಷಕ್ಕೆ ಎಲ್ಲೆಡೆ ಹೊಸ ಹುಮ್ಮಸ್ಸು, ಭರವಸೆಯನ್ನು ಹುಟ್ಟಿಸಿತ್ತು.

ಮಹಾನಗರದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಬಿಜೆಪಿ ಪ್ರದರ್ಶನದ ಹಿಂದೆ ರಾಷ್ಟ್ರ ಮಟ್ಟದ ನಾಯಕರ ತಂತ್ರಗಾರಿಕೆ ಇತ್ತು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ದೊಡ್ಡ ದಂಡೇ ಪ್ರಚಾರದಲ್ಲಿ ತೊಡಗಿತ್ತು. ಸ್ಥಳೀಯ ಸಂಗತಿಗಳಿಗೇ ಮಹತ್ವ ನೀಡಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಹೈದರಾಬಾದ್‌ಗೆ ಮರುನಾಮಕರಣ ಮಾಡಿ ‘ಭಾಗ್ಯನಗರ’ ಮಾಡುವ ವಾಗ್ದಾನ ನೀಡಿದ್ದರು. ಹಿಂದುತ್ವದ ಭಾವನೆಗಳನ್ನು ಕೆರಳಿಸಿದ್ದರು. ಇದಕ್ಕೆ ಕಳಶವಿಟ್ಟಂತೆ ಕಾಂಗ್ರೆಸ್ ನೆಲಕಚ್ಚಿ ಮಲಗಿತ್ತು. ಮತದಾರರಿಗೆ ಬಿಜೆಪಿ ಪರ್ಯಾಯವಾಗಿ ಕಾಣಿಸತೊಡಗಿತ್ತು.

ಆದರೆ, ಈಗ ಕೇವಲ ಮೂರು ವರ್ಷಗಳ ಹಿಂದಿನ ಪರಿಸ್ಥಿತಿ ಗತಕಾಲದ ಕತೆಯಂತೆ ಭಾಸವಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.