ಕಳೆದ ಎರಡು ದಶಕಗಳಲ್ಲಿ ವೃತ್ತಿಪರ ಟೆನಿಸ್ ಭೂಪಟದಲ್ಲಿ ಭಾರತದ ಸ್ತ್ರೀಶಕ್ತಿಗೆ ಸ್ಥಾನ ಗಳಿಸಿಕೊಟ್ಟವರು ಸಾನಿಯಾ ಮಿರ್ಜಾ. ಸದಾ ಪ್ರವಾಹದ ವಿರುದ್ಧ ಈಜುತ್ತಲೇ ಸಾಧನೆಯ ಮುಗುಳ್ನಗೆ ಸೂಸುವ ಛಲಗಾತಿ ಈ ಆಟಗಾರ್ತಿ.

ಆರು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳು, ಸುಮಾರು ಐವತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು, ಮೂರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಹಾಗೂ ಹತ್ತಾರು ಪ್ರತಿಷ್ಠಿತ ಪುರಸ್ಕಾರಗಳು ಹೈದರಾಬಾದಿನ ಅವರ ಮನೆಯ ಗೋಡೆಗಳನ್ನು ಅಲಂಕರಿಸಿವೆ. ಅವೆಲ್ಲವೂ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆಗಳೂ ಹೌದು.

ಇದೀಗ ಈ ಟೆನಿಸ್ ಋತುವಿನ ನಂತರ ನಿವೃತ್ತಿ ಯಾಗುವುದಾಗಿ ಹೈದರಾಬಾದ್‌ನ ಆಟಗಾರ್ತಿ ಘೋಷಿಸಿ ದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಓಪನ್ ಟೂರ್ನಿ ಅವರಿಗೆ ಕೊನೆಯ ಗ್ರ್ಯಾನ್‌ಸ್ಲಾಂ ಟೂರ್ನಿಯಾಗಬಹುದು. ಆದರೆ 35 ವರ್ಷದ ಸಾನಿಯಾ ವಿದಾಯದಿಂದ ತೆರವಾಗುವ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗೆ ಮಾತ್ರ ಬೇಗನೆ ಉತ್ತರಸಿಗುವುದು ಕಷ್ಟ. ಅದಕ್ಕಾಗಿ ಇನ್ನಷ್ಟು ಕಾಲ ಕಾಯಬೇಕಾಗ ಬಹುದು.

ಏಕೆಂದರೆ ಟೆನಿಸ್ ಕ್ರೀಡೆ ಇವತ್ತಿಗೂ ಭಾರತದಲ್ಲಿ ದೊಡ್ಡ ನಗರಪ್ರದೇಶಗಳ ಎಲೀಟ್ ವರ್ಗದವರಿಗಷ್ಟೇ ಸೀಮಿತ ಎಂಬ ಮಾತು ಇದೆ. ಅಲ್ಲದೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಸವಾಲುಗಳು ಬಾಲಕಿಯರಿಗೆ ಇನ್ನೂ ತಪ್ಪಿಲ್ಲ. ದಶಕಗಳ ಹಿಂದೆ ಸಾನಿಯಾ ಟೆನಿಸ್ ಆಯ್ಕೆ ಮಾಡಿ ಕೊಳ್ಳುವ ಮುನ್ನ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ ನಿರುಪಮಾ ಮಂಕಡ್ ಮತ್ತು ನಿರುಪಮಾ ಸಂಜೀವ್ ಕೂಡ ತಮ್ಮ ಕಾಲಘಟ್ಟದ ಸವಾಲುಗಳನ್ನು ಎದುರಿಸಿ ನಿಂತವರು.

ಆದರೆ, ಸಾನಿಯಾ ಅವರದ್ದು ತುಸು ಭಿನ್ನವಾದ ಕಥೆ. ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳು ಒಂದು ಬಗೆಯಾದರೆ, ಹತ್ತಾರು ಮಹತ್ವದ ಸಾಧನೆಗಳನ್ನು ಮಾಡಿದ ನಂತರವೂ ಎದುರಿಸಿದ ಕಹಿಗಳು ಹಲವು. ಆದರೂ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಮಹಿಳೆಯೊಬ್ಬಳು ಮೈಲುಗಲ್ಲಾಗಿ ಬೆಳೆದು ನಿಲ್ಲುವ ಬಗೆಯನ್ನು ತೋರಿಸಿಕೊಟ್ಟರು.

‘ಸಾನಿಯಾ ಯಾವಾಗಲೂ ವೈರುಧ್ಯಗಳನ್ನು ಎದುರಿಸುತ್ತಲೇ ಬೆಳೆದವರು. ತಮ್ಮ ಏಕಾಗ್ರತೆ, ಆತ್ಮ ವಿಶ್ವಾಸ ಮತ್ತು ಆತ್ಮಗೌರವವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಭಾರತದ ಕ್ರೀಡೆಗೆ ಹೊಸದಿಕ್ಕು ತೋರಿಸುವಲ್ಲಿ ಆಕೆಯದ್ದು ಪ್ರಮುಖ ಪಾತ್ರ’ ಎಂದು ಸಾನಿಯಾ ಆತ್ಮಚರಿತ್ರೆ ‘ಏಸ್ ಅಗೇನ್‌ಸ್ಟ್ ಆಡ್ಸ್’ ಕೃತಿಯ ಬೆನ್ನುಡಿಯಲ್ಲಿ ದಿಗ್ಗಜ ಮಹೇಶ್ ಭೂಪತಿ ಬರೆದಿರುವುದು ಅಕ್ಷರಶಃ ದಿಟವಾದದ್ದು.

ಆರನೇ ವಯಸ್ಸಿನಲ್ಲಿ ಟೆನಿಸ್‌ನತ್ತ ಆಕರ್ಷಿತರಾದ ಸಾನಿಯಾಗೆ ಮೊದಲ ಕೋಚ್ ಮತ್ತು ಬೆಂಬಲವಾಗಿ ನಿಂತವರು ತಂದೆ ಇಮ್ರಾನ್ ಮಿರ್ಜಾ ಮತ್ತು ತಾಯಿ ನಸೀಮಾ. ಸಾನಿಯಾ ಪುಟ್ಟ ತೋಳುಗಳಲ್ಲಿದ್ದ ಅದಮ್ಯ ಚೈತನ್ಯವನ್ನು ಇಮ್ರಾನ್ ಅಂದು ಗುರುತಿಸದೇ ಹೋಗಿದ್ದರೆ, ಭಾರತದ ಕ್ರೀಡೆಗೆ ಬಹಳ ದೊಡ್ಡ ನಷ್ಟವಾಗುತ್ತಿತ್ತು. 2002ರಿಂದಲೇ ವೃತ್ತಿಪರ ಟೆನಿಸ್‌ನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಆರಂಭಿಸಿದ್ದರು. ಆಫ್ರೋ ಏಷ್ಯನ್ ಗೇಮ್ಸ್, ಏಷ್ಯನ್ ಗೇಮ್ಸ್, ಸ್ಯಾಫ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದರು. 2005ರಲ್ಲಿ ಗ್ರ್ಯಾನ್‌ಸ್ಲಾಂ ಅಂಗಳಕ್ಕೂ ಕಾಲಿಟ್ಟರು. ಸಿಂಗಲ್ಸ್‌ನಲ್ಲಿತಮ್ಮ ಛಾಪು ಮೂಡಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಅವರೊಂದಿಗೆ ಆಡಿದ್ದು ಅವರ ವೃತ್ತಿಕೌಶಲ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ರುಷ್ಮಿ ಚಕ್ರವರ್ತಿಯ ನಂತರ ಅವರು ಮಹಿಳಾ ಡಬಲ್ಸ್‌ನಲ್ಲಿ ವಿದೇಶಿ ಆಟಗಾರ್ತಿಯೊಂದಿಗೇ ಪಾಲುದಾರಿಕೆ ಮಾಡಬೇಕಾಯಿತು. ಇದೂ ಒಂದು ರೀತಿಯಲ್ಲಿ ಅವರ ಕೌಶಲಕ್ಕೆ ಸಾಣೆ ಹಿಡಿಯಲು ಕಾರಣವಾಯಿತು.

ಟಾಪ್ 100 ಆಟಗಾರ್ತಿಯರೊಳಗೆ ಸ್ಥಾನ ಪಡೆಯುವ ಸಾಧನೆ ಕಿರಿದೇನಲ್ಲ. ಆದರೂ ಅವರ ಮೇಲೆ ಸ್ವಧರ್ಮದ ಸಂಪ್ರದಾಯವಾದಿಗಳ ಕೆಂಗಣ್ಣು ಮಾತ್ರ ತಪ್ಪಲಿಲ್ಲ. ಅವರು ಆಡುವಾಗ ಧರಿಸುತ್ತಿದ್ದ ಪೋಷಾಕು ಧರ್ಮಕ್ಕೆ ವಿರುದ್ಧವಾದದ್ದು ಎಂಬ ಫತ್ವಾ ಜಾರಿಯಾಯಿತು. ಆದರೆ ಸಾನಿಯಾ ಅವತ್ತು ಅದನ್ನು ಮೀರಿ ನಿಂತರು. 2006ರಲ್ಲಿ ಅವರು ಇಸ್ರೇಲ್‌ನ ಆಟಗಾರ್ತಿ ಶಹರ್ ಪಿಯರ್ ಜೊತೆ ಆಡುವುದನ್ನು ಇಸ್ಲಾಮಿಕ್ ಸಂಘಟನೆಗಳು ವಿರೋಧಿಸಿದ್ದವು.

ಆದರೆ ಇವರಿಬ್ಬರ ಜೋಡಿಯು 2007ರಲ್ಲಿಕ್ಯಾಲಿಫೋರ್ನಿಯಾದಲ್ಲಿ ನಡೆದ ಡಬ್ಲ್ಯುಟಿಎ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಯಿತು. ಬೀಜಿಂಗ್ ಒಲಿಂಪಿಕ್ಸ್‌ಗೆ ಕೆಲವು ತಿಂಗಳು ಬಾಕಿಯಿದ್ದಾಗ ಮಣಿಕಟ್ಟಿನ ನೋವು ಕಾಡಿತು.

‘ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಬಹಳ ದೊಡ್ಡದು. ಇಂತಹ ಅವಕಾಶವನ್ನು ಯಾವ ಕಾರಣಕ್ಕೂ ಬಿಡಬಾರದು’ ಎಂದು ತಂದೆ ಹೇಳಿದ ಮಾತುಗಳು ಸಂಜೀವಿನಿಯಾದವು. ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತದ ಮೊದಲ ಮಹಿಳಾ ಟೆನಿಸ್‌ಪಟುವೆಂಬ ಹೆಗ್ಗಳಿಕೆ ಅವರದ್ದಾಯಿತು. ಬೀಜಿಂಗ್‌ನಲ್ಲಿ ಸಿಂಗಲ್ಸ್ ಮತ್ತು ಸುನಿತಾ ರಾವ್ ಅವರೊಂದಿಗೆ ಡಬಲ್ಸ್‌ನಲ್ಲಿ ಆಡಿದರು. ನಂತರದ ದಿನಗಳಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆಯೂ ಆಯಿತು. ಇದು ಅವರಿಂದ ಸಿಂಗಲ್ಸ್‌ನಲ್ಲಿ ಆಡುವ ಅವಕಾಶವನ್ನು ಕಿತ್ತುಕೊಂಡಿತು. 2010ರಲ್ಲಿ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರನ್ನು ವಿವಾಹವಾದಾಗ ಮತ್ತೊಂದು ವಿವಾದ ಎದುರಾಯಿತು. ‘ದೇಶ ವಿರೋಧಿ’ ಎಂಬ ಟೀಕೆಯನ್ನೂ ಕೇಳಬೇಕಾಯಿತು. ಲಂಡನ್ ಒಲಿಂಪಿಕ್ಸ್‌ನ ವನಿತೆಯರ ಡಬಲ್ಸ್‌ನಲ್ಲಿ ರುಷ್ಮಿ ಚಕ್ರವರ್ತಿ ಜೊತೆಗೂಡಿ 32ರ
ಘಟ್ಟ ತಲುಪಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಕ್ವಾರ್ಟರ್ ಫೈನಲ್ ತಲುಪಿ ದಾಖಲೆ ಬರೆದರು. ಇದಕ್ಕೂ ಮುನ್ನ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಆರೋಪಕ್ಕೂ ತುತ್ತಾಗಿದ್ದರು.

2015ರಲ್ಲಿ ಸ್ವಿಟ್ಜರ್ಲೆಂಡ್‌ನ ದಿಗ್ಗಜ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ವಿಂಬಲ್ಡನ್ ಡಬಲ್ಸ್ ಕಿರೀಟ ಗೆದ್ದಿದ್ದು ಅವರ ಮಹತ್ಸಾಧನೆ. ಆ ಸಂದರ್ಭದಲ್ಲಿ ಅವರು ವಿಶ್ವದ ಅಗ್ರಶ್ರೇಯಾಂಕದ ಡಬಲ್ಸ್ ಆಟಗಾರ್ತಿಯಾಗಿದ್ದರು. ಇದೇ ಜೋಡಿ ಅಮೆರಿಕ ಓಪನ್‌ನಲ್ಲಿಯೂ ಮಿಂಚಿತು. 2016ರಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಇವಾನ್ ದೊಡಿಗ್ ಜೊತೆಗೆ ರನ್ನರ್ಸ್ ಅಪ್ ಕೂಡ ಆದರು. ರಿಯೊ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಅವರನ್ನು ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಯಿತು. ಆ ಸಂದರ್ಭದಲ್ಲಿ ಕೆಲವರು ‘ಆಕೆ ಪಾಕಿಸ್ತಾನದ ಸೊಸೆ’ ಎಂದು ವ್ಯಂಗ್ಯವಾಡಿದರು. ಅದಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ‘ಸಾನಿಯಾ ಹೈದರಾಬಾದಿನ ಮಗಳು’ ಎಂದು ತಿರುಗೇಟು ಕೊಟ್ಟಿದ್ದರು.

ಹೀಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಟೀಕೆಗಳನ್ನು ಹಿಂದಿಕ್ಕುತ್ತ ಮುಗುಳ್ನಗುತ್ತ ಮುಂದೆ ಸಾಗಿದ ಸಾನಿಯಾ 2018ರಲ್ಲಿ ಗಂಡು ಮಗುವಿನ ತಾಯಿಯಾದರು. ಆದರೆ, ‘ತಾಯ್ತನ ಎಂಬುದು ಹೆಣ್ಣಿನ ಜೀವನದ ಅಂತ್ಯವಲ್ಲ. ಹೊಸ ಆರಂಭ’ ಎಂದು ಹೇಳಿದರು. 26 ಕೆ.ಜಿ. ತೂಕವನ್ನು ಇಳಿಸಿಕೊಂಡು 2020ರಲ್ಲಿ ಹೋಬರ್ಟ್ ಟೆನಿಸ್ ಅಂಗಣಕ್ಕೆ ಧುಮುಕಿದರು. ನಾದಿಯಾ ಕಿಚೆನೊಕ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಗೆದ್ದರು. ಅಪಹಾಸ್ಯ ಮಾಡಿದವರಿಗೆ ಪ್ರತಿಬಾರಿ ಸಾಧನೆಯ ಮೂಲಕ ಎದುರುತ್ತರ ಕೊಡುವ ಛಲಗಾತಿ ಈಗ ಅಂಕಣದಿಂದ ಹಿಂದೆ ಸರಿಯುತ್ತಿದ್ದಾರೆ. ಒಂದು ಯುಗಾಂತ್ಯವಾಗುತ್ತಿದೆ. ಆದರೆ ಇದು ಹೊಸ ಯುಗದ ಆರಂಭಕ್ಕೆ ನಾಂದಿ ಯಾಗಬೇಕು. ಅವರ ಛಲಭರಿತ ಜೀವನ ಪ್ರೇರಣೆಯಾಗಬೇಕು. ಸಾನಿಯಾ ಅವರಂತೆ ಸಾಧನೆ ಮಾಡಿದ ಬಹಳಷ್ಟು ಹೆಣ್ಣು ಮಕ್ಕಳಿಗೆ ಸಾಧನೆ ಮಾಡುವ ದಾರಿ ಶುರುವಾಗುವುದೇ ಅವರ ಮನೆಯಂಗಳದಿಂದ ಎಂಬುದನ್ನು ಸಾನಿಯಾ, ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಗೀತಾ ಪೋಗಟ್ ಮತ್ತಿತರರ ಜೀವನ ತೋರಿಸಿಕೊಡುತ್ತದೆ. ಅದರೊಂದಿಗೆ ಸಮಾಜ, ಕ್ರೀಡಾ ಆಡಳಿತ ಗಳು ಕೈಜೋಡಿಸಿದರೆ ಸಾನಿಯಾ ಹಚ್ಚಿದ ದೀಪದಿಂದ ಮತ್ತಷ್ಟು ದೀಪಗಳನ್ನು ಬೆಳಗಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.