ರಾಜಕೀಯ ಪಕ್ಷಗಳ ಕಣ್ಣಿಗಾಗಲಿ ಅಥವಾ ಚುನಾವಣಾ ತಜ್ಞರ ರಾವುಗನ್ನಡಿಗಾಗಲಿ ಕಾಣದಂತಹ ಒಂದು ಮತದಾರ ವರ್ಗ ಚುನಾವಣೆಗಳಲ್ಲಿ ಒಂದು ತರಹದ ಮೌನ ಕ್ರಾಂತಿಯ ಮೂಲಕ ಜಾತಿ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡುವಲ್ಲಿ ಉದ್ಯುಕ್ತವಾಗಿದೆ.

ಇವರೆಲ್ಲ ಪ್ರತೀ ಚುನಾವಣೆಯಲ್ಲಿ ಮೊದಲ ಬಾರಿ ಮತದ ಹಕ್ಕನ್ನು ಚಲಾಯಿಸುವ ಯುವ ಮತದಾರರು. ಇವರನ್ನು ಚುನಾವಣೆಯಲ್ಲಿ ‘ಗೇಮ್ ಚೇಂಜರ್ಸ್’ ಅಂದರೆ ಆಟದ ಗತಿ ಬದಲಾಯಿಸುವವರೆಂದು ಹೇಳಬಹುದು. ಇವರಿಗೆ ರಾಜಕೀಯ ಸೋಂಕು ಇಲ್ಲ. ಜಾತಿ ಮತಗಳ ಗೋಜಲಿನಲ್ಲಿ ಬೀಳದೆ ಮತದಾನ ಮಾಡುತ್ತಾರೆ. ಯಾವಾಗಲೂ ತಮಗೆ ಕಣ್ಮಣಿ ಎಂದೆನಿಸಿದವರಿಗೆ ತಮ್ಮ ಬೆಂಬಲ ನೀಡುತ್ತಾರೆ.

ಇತ್ತೀಚೆಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆದದ್ದು ಹೀಗೆಯೇ. ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ 8.55 ಲಕ್ಷ ಹೆಚ್ಚುವರಿ ಮತದಾನವಾಗಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಕಳೆದ ಸಲಕ್ಕಿಂತ ಒಟ್ಟಾರೆಯಾಗಿ 7.54 ಲಕ್ಷ ಹೆಚ್ಚು ಮತ ಸಿಕ್ಕಿವೆ. ಜೆಡಿಯು ಬಿಟ್ಟರೆ ಉಳಿದ ಯಾವ ಪಕ್ಷಕ್ಕೂ ಹೆಚ್ಚಿನ ಮತ ಸಿಕ್ಕಿಲ್ಲ. ಬಿಜೆಪಿ ಮತಪ್ರಮಾಣ 12.35 ಲಕ್ಷದಷ್ಟು ಕಡಿಮೆಯಾಗಿದೆ.

ಜೆಡಿಯು ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಗಳಿಸಿದ ಮತಪ್ರಮಾಣ ಕೂಡ ಕಡಿಮೆಯಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅದರ ಹಿಂದಿನ ಚುನಾವಣೆಗೆ ಹೋಲಿಸಿದರೆ 62 ಲಕ್ಷದಷ್ಟು ಹೆಚ್ಚುವರಿ ಮತದಾನ ಆಗಿತ್ತು. ಗಮನಾರ್ಹ ಸಂಗತಿಯೆಂದರೆ ಬಿಜೆಪಿ ಬುಟ್ಟಿಗೆ 57 ಲಕ್ಷ ಹೆಚ್ಚುವರಿ ಮತಗಳು ಬಂದಿದ್ದವು. ಜೆಡಿಯು ಖೋತಾ ಅನುಭವಿಸಿತ್ತು. ಮತದಾನದ ಹಕ್ಕನ್ನು ಮೊದಲ ಬಾರಿ ಚಲಾಯಿಸಿದ ಯುವ ಮತದಾರರ ಮನಸ್ಸನ್ನು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಸೆಳೆದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ನಿತೀಶರು ಅವರ ಒಲವು ಗಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಆಗಿತ್ತು. ಹೊಸ ಮತದಾರರ ಒಲವನ್ನು ತೃಣ ಮೂಲ ಕಾಂಗ್ರೆಸ್ ಪಡೆದುಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಕರ್ನಾಟಕದಲ್ಲಿ ಈ ವರ್ಗದ ಒಲವು ಗಳಿಸಿ ರಾಜಕೀಯವಾಗಿ ಪ್ರತೀ ಚುನಾವಣೆಯಲ್ಲಿ ಬೆಳೆದದ್ದು ಬಿಜೆಪಿಯೇ. ಹೊಸ ಮತದಾರರ ಹೆಚ್ಚಿನ ಬೆಂಬಲದಿಂದಲೇ ಬಿಜೆಪಿಯು 1994, 1999, 2004ರ ಚುನಾವಣೆಗಳಲ್ಲಿ ತನ್ನ ಬುಡವನ್ನು ಭದ್ರಪಡಿಸಿಕೊಂಡು 2008ರಲ್ಲಿ ಕಾಂಗ್ರೆಸ್ಸಿಗೆ ಸರಿಸಮಾನವಾಗಿ ಬೆಳೆಯಿತು. 2013ರಲ್ಲಿ ಇದು ಮರುಕಳಿಸಲಿಲ್ಲ. ಹೊಸ ಮತದಾರರು ಕಾಂಗ್ರೆಸ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಲಿದ್ದರಿಂದ ಸ್ಥಾನಗಳನ್ನು ಗಳಿಸುವಲ್ಲಿ ಮತ್ತು ಹೆಚ್ಚಿನ ಮತದಾರರ ಬೆಂಬಲ ಪಡೆಯುವಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತು. ಕಾಂಗ್ರೆಸ್ ಮೊದಲ ಸ್ಥಾನಕ್ಕೆ ಏರಿತು. ತಮ್ಮ ಒಳಜಗಳದಿಂದ ಈ ವರ್ಗದ ಪೂರ್ಣ ಬೆಂಬಲ ಪಡೆಯುವಲ್ಲಿ ಬಿಜೆಪಿ ವಿಫಲವಾಯಿತು.

ಈ ವರ್ಗವು ನದಿ ತೀರದಲ್ಲಿನ ಒರತೆ ಇದ್ದಹಾಗೆ. ಪ್ರತೀ ಸಲ ಮರಳು ಬಗೆದಷ್ಟೂ ಹೊಸ ನೀರು ಬರುತ್ತಲೇ ಇರುತ್ತದೆ. ಇದಕ್ಕೆ ಕೊರತೆಯೇ ಇಲ್ಲ. ಕಳೆದ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೆಂಬಲ ನೀಡಿದ ಹೊಸ ಮತದಾರರು ಈಗ ಹಳಬರು. ಹೊಸ ಚುನಾವಣೆಗೆ ಹೊಸ ನೀರು. ಯಾರು ಯುವ ಮತದಾರರ ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾರೋ ಅವರಿಗೇ ಅವರ ಬೆಂಬಲ.

ಕರ್ನಾಟಕದಲ್ಲಿ ಪ್ರತೀ ಚುನಾವಣೆ ವೇಳೆ 35ರಿಂದ 40 ಲಕ್ಷ ಮಂದಿ ಮತದಾರರ ಪಟ್ಟಿಗೆ ಹೊಸದಾಗಿ ಸೇರುತ್ತಲೇ ಇರುತ್ತಾರೆ. ಆ ತಲೆಮಾರಿಗೆ ಒಪ್ಪುವ ಮಾತನ್ನು ಯಾರು ಆಡುತ್ತಾರೋ, ಅವರ ಮೇಲೆ ಯಾರು ಪ್ರಭಾವ ಬೀರುತ್ತಾರೋ ಅವರಿಗೆ ಯುವ ಮತದಾರರ ಬೆಂಬಲ ನಿಶ್ಚಿತ. ಇಷ್ಟುವರ್ಷ ರಾಜಕಾರಣ ಮಾಡಿದರೂ ಕಾಂಗ್ರೆಸ್‌ನ ಚುನಾವಣಾ ತಜ್ಞರು ಈ ವರ್ಗದ ಅಸ್ತಿತ್ವವನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದ ಆ ಪಕ್ಷ ಹಿಂದೆ ಬೀಳುತ್ತಿದೆ.

ರಾಹುಲ್ ಗಾಂಧಿಯವರು ಈ ವರ್ಗದ ಕಣ್ಮಣಿ ಸ್ಥಾನಕ್ಕೆ ಏರಲಾಗಿಲ್ಲ. ಆದರೆ ಮೋದಿಯವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆ ಸ್ಥಾನಕ್ಕೆ ಏರಿದ್ದಾರೆ. ಬಿಹಾರದಲ್ಲಿ ಮೋದಿಯವರನ್ನು ಯುವ ಮತದಾರರು ಹಿಂದೆ ಸರಿಸಿದಂತೆ ಕರ್ನಾಟಕದ ಯುವ ಮತದಾರರೂ ಮುಂದಿನ ಚುನಾವಣೆಯಲ್ಲಿ ಮಾಡಿಯಾರೇ ಎನ್ನುವುದು ಸಿದ್ದರಾಮಯ್ಯನವರ ಕಾರ್ಯಶೈಲಿಯನ್ನು ಅವಲಂಬಿಸಿದೆ. ಅವರು ನಿತೀಶ್‌ರಂತೆ ಯುವ ಮತದಾರರ ಕಣ್ಮಣಿಯಾದರೆ ಮಾತ್ರ ಅದು ಸಾಧ್ಯ.

ಬಿಹಾರ ಚುನಾವಣೆ ಫಲಿತಾಂಶ ಕರ್ನಾಟಕದ ರಾಜಕಾರಣಕ್ಕೆ ಪ್ರಸ್ತುತವಾಗಿದೆ. ಆಡಳಿತಾರೂಢ ಕಾಂಗ್ರೆಸ್ ತನ್ನ ಐದು ವರ್ಷದ ಅವಧಿಯಲ್ಲಿ ಅರ್ಧ ಅವಧಿಯನ್ನು ಪೂರೈಸಿದೆ. ಮೊದಲರ್ಧ ಅವಧಿಯಲ್ಲಿ ಕಾಂಗ್ರೆಸ್ ಆಗಲಿ ಆಥವಾ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಆಗಲಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎಂಬುದು ಸರ್ವವೇದ್ಯ. ಇನ್ನು ಜೆಡಿಎಸ್ ಸ್ಥಿತಿ ಕರ್ನಾಟಕ ರಾಜಕಾರಣದಲ್ಲಿ ಅಡುಗೆ ಸಮಯದಲ್ಲಿ ಹಾಕಿ ಊಟದ ಸಮಯದಲ್ಲಿ ತೆಗೆದು ಎಸೆಯುವ ಕರಿಬೇವಿನಂತೆ. ಚುನಾವಣೆಗಳು ಬರಲಿ, ಬಂದಾಗ ನೋಡಿದರಾಯಿತು ಎಂದು ತಾತ್ಸಾರ ಮಾಡುವ ಹಾಗಿಲ್ಲ. ‘ನಮ್ಮ ಪಕ್ಷದ ಹೆಸರಿನಲ್ಲಿ ಒಂದು ಕತ್ತೆಯನ್ನು ನಿಲ್ಲಿಸಿದರೂ, ಅದು ಆರಿಸಿ ಬರುತ್ತದೆ’ ಎನ್ನುವುದು ಹಳೆಯ ಕಾಲದ ಮಾತು.

ಬಿಹಾರದಿಂದ ಕಲಿಯುವುದು ಬಹಳ ಇದೆ. ಈ ರಾಜ್ಯದಲ್ಲಿ ಬಡತನ ಕಿತ್ತು ತಿನ್ನುತ್ತಿದೆ. ಒಂದು ಕಾಲದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಇತ್ತು. ಅನಕ್ಷರಸ್ಥರೇ ಬಹಳ. ಅಂತಹ ಜನರು, ದೇಶ ಆಳಲು ಯಾರು ಸೂಕ್ತ ಮತ್ತು ರಾಜ್ಯದ ಚುಕ್ಕಾಣಿ ಯಾರ ಕೈಗಿರಬೇಕು ಎಂದು ನಿರ್ಧರಿಸುವ ಪರ್ವಕಾಲದಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಪ್ರಧಾನಿಯಾಗಲು ಮೋದಿಯವರೇ ಯೋಗ್ಯರೆಂದು ಹೇಳಿದ ಮತದಾರರು ಈಗ ಬಿಹಾರದ ಕರ್ಣಧಾರತ್ವಕ್ಕೆ ಮೋದಿಯವರ ಮಾತುಗಳಿಗೆ ಮರುಳಾಗದೇ ನಿತೀಶ್ ಕುಮಾರ್ ಅವರಿಗೆ ಮಾಲೆ ಹಾಕಿದುದು, ಪ್ರಜಾಪ್ರಭುತ್ವದ ಬೇರುಗಳು ದೇಶದಲ್ಲಿ ಎಷ್ಟು ಆಳ ಇಳಿದಿವೆ ಎನ್ನುವುದರ ದ್ಯೋತಕ.

ನಿತೀಶ್ ಕುಮಾರ್ ಅವರನ್ನೇ ಬಿಹಾರದ ಮುಖ್ಯಮಂತ್ರಿಯಾಗಿ ಬಯಸಿದುದು ಅವರು ತಮ್ಮವರು. ಮೋದಿ ಹೊರಗಿನವರು ಎಂಬ ಕಾರಣಕ್ಕಲ್ಲ. ಅವರು ಒಬ್ಬ ಸಮರ್ಥರು, ವಿಶ್ವಾಸಾರ್ಹ ಧುರೀಣರು ಎಂದು ತಮ್ಮ ಒಂಬತ್ತು ವರ್ಷದ ಆಡಳಿತಾವಧಿಯಲ್ಲಿ ತೋರಿಸಿದ್ದಾರೆ. ಕರ್ನಾಟಕದ ದೇವರಾಜ ಅರಸರ ಪುಚ್ಚಕ್ಕೂ ಇಂತಹದೇ ಗರಿಯಿತ್ತು. ಲೋಕಸಭೆ ಚುನಾವಣೆ ಬಳಿಕ ನಿತೀಶ್ ಪದತ್ಯಾಗ ಮಾಡಿದ್ದರು. ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕಷ್ಟದ ಸಮಯದಲ್ಲಿ ಪುನಃ ಚುಕ್ಕಾಣಿ ಹಿಡಿದು ಪಕ್ಷವನ್ನು ಮುನ್ನಡೆಸಿದರು. ಮತ್ತೊಂದು ಅವಧಿಗೆ ಜನ ಬೆಂಬಲ ಸಿಕ್ಕಿದೆ. ನಿತೀಶರು ಗ್ರಾಮೀಣ ಬಿಹಾರದ ಚಿತ್ರವನ್ನೇ ಬದಲು ಮಾಡಿದ್ದಾರೆ. ಅವರ ಸಾಧನೆಗಳು ಬರೀ ಸರ್ಕಾರಿ ಜಾಹೀರಾತುಗಳಲ್ಲಿ ಇರದೆ, ಜನರನ್ನು ತಲುಪಿವೆ. ಅವರು ಅದನ್ನು ಅನುಭವಿಸಿದ್ದಾರೆ.

ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 1980ರಿಂದ ವೈಫಲ್ಯವನ್ನು ಅನುಭವಿಸುತ್ತಲೇ ಬಂದಿದೆ. 2013ರಲ್ಲಿ ಕಾಂಗ್ರೆಸ್ ಗದ್ದುಗೆ ಏರಿದ್ದು ಏಳು ವರ್ಷಗಳ ವನವಾಸದ ನಂತರ. ಈಗಿನ ಅವಧಿಯಲ್ಲಿ ಅರ್ಧದಷ್ಟು ಕಳೆದಿದೆ. ತನ್ನ ವೈಫಲ್ಯದ ದಾಖಲೆಯನ್ನು ಬರುವ ಚುನಾವಣೆಯಲ್ಲಿಯಾದರೂ ತೊಡೆದು ಹಾಕಬೇಕು ಎನ್ನುವ ಭಾವನೆ ಕಾಂಗ್ರೆಸ್ಸಿಗರಲ್ಲಿ, ಪಕ್ಷದ ಧುರೀಣರಲ್ಲಿ ಇನ್ನೂ ಮೂಡಿದಂತಿಲ್ಲ.

ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ, ವಲಸೆ ಬಂದಿರುವ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ವರಿಷ್ಠ ಮಂಡಳಿಯು ಬಹಳ ಆಕಾಂಕ್ಷೆಗಳ ನಡುವೆ ಮುಖ್ಯಮಂತ್ರಿ ಕಿರೀಟವನ್ನು ಸೋಂಪಿಸಿತ್ತು. ಬಿಜೆಪಿಯ ಭ್ರಷ್ಟ ಆಡಳಿತದಿಂದ ಬೇಸತ್ತ ಕರ್ನಾಟಕದ ಜನರಿಗೆ ಭ್ರಷ್ಟಾಚಾರ ಮುಕ್ತ ವಾತಾವರಣ ಮೂಡಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸುವ ಸರ್ಕಾರವನ್ನು ಸಿದ್ದರಾಮಯ್ಯನವರಿಂದ ಆಪೇಕ್ಷಿಸಿದ್ದರು.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಅರ್ಧ ಅವಧಿಯನ್ನು ಕಳೆದರೂ, ಜನರಿಗೆ ಹಿಂದಿನ ಸರ್ಕಾರ ಮತ್ತು ಇಂದಿನ ಸರ್ಕಾರದ ಕಾರ್ಯವೈಖರಿಯಲ್ಲಿ ಯಾವ ಗುಣಾತ್ಮಕ ಬದಲಾವಣೆಯೂ ಕಂಡು ಬಂದಿಲ್ಲ. ಹೊಸ ಬಾಟಲಿಯಲ್ಲಿ ಹಳೆ ಹೆಂಡ ಹಾಕಿದಂತಿದೆ ಅಷ್ಟೆ. ದಿನೇ ದಿನೇ ಸರ್ಕಾರ ಮತ್ತು ಜನರ ಮಧ್ಯೆ ಕಂದಕ ಹೆಚ್ಚುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ರಾಜಕಾರಣದ ಮೇಲಾಗಲಿ, ಆಡಳಿತದ ಮೇಲಾಗಲಿ ಯಾವ ವಿಶೇಷ ಛಾಪನ್ನೂ ಮೂಡಿಸಿಲ್ಲ. ಅವರ ಸಚಿವ ಸಂಪುಟವೊಂದು ಅಸಮರ್ಥರ ಸಂತೆ. ಅಸಮರ್ಥರನ್ನು ತೆಗೆದುಹಾಕಲಿಕ್ಕೆ ಆಗದೆ, ಅಂತಹ ಇನ್ನಷ್ಟು ಶಾಸಕರನ್ನು ತೆಗೆದುಕೊಂಡು ಸಚಿವ ಸಂಪುಟ ವಿಸ್ತಾರ ಮಾಡಿದ್ದಾರೆ.

ಅವರಿನ್ನೂ ಒಂದು ಪಂಗಡ, ವರ್ಗದ ಜೊತೆಗೆ ಗುರುತಿಸಿಕೊಂಡಿದ್ದಾರೆಯೇ ಹೊರತು ದಿವಂಗತ ದೇವರಾಜ ಅರಸು ಹಾಗೂ ದಿವಂಗತ ಗುಂಡೂರಾಯರಂತೆ ಜನರ ಮುಖ್ಯಮಂತ್ರಿಯಾಗಿ ಹೊರಹೊಮ್ಮಿಲ್ಲ. ಜನಮಾನಸದಲ್ಲಿ ಸ್ಥಾನ ಗಿಟ್ಟಿಸಿಲ್ಲ. ಸರ್ಕಾರದ ಸಾಧನೆಗಳು ಬರೀ ಘೋಷಣೆಗಳಲ್ಲಿ, ಸರ್ಕಾರಿ ಜಾಹೀರಾತುಗಳಲ್ಲಿ ಹುದುಗಿ ಹೋಗಿವೆಯೇ ಹೊರತು ಜನರ ಅನುಭವಕ್ಕೆ ಬಂದಿಲ್ಲ. ಅವರ ಮನಸ್ಸಿಗೆ ತಾಟುತ್ತಿಲ್ಲ.

ಪ್ರಮುಖ ವಿರೋಧ ಪಕ್ಷದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ತಮ್ಮ ಒಳಜಗಳಗಳಿಂದ, ಭ್ರಷ್ಟ ಆಡಳಿತದಿಂದ ಜನರ ವಿಶ್ವಾಸಕ್ಕೆ ಎರವಾಗಿ ಆಧಿಕಾರ ಕಳೆದುಕೊಂಡದ್ದಕ್ಕೆ ಪಶ್ಚಾತ್ತಾಪಪಟ್ಟಿಲ್ಲ. ಅದಕ್ಕಾಗಿ ಜನರ ಕ್ಷಮೆ ಯಾಚಿಸಿ, ತಮ್ಮ ತಪ್ಪಿನ ಪರಿಮಾರ್ಜನೆ ಮಾಡಿಕೊಳ್ಳಲು ಜನರ ಹತ್ತಿರ ಹೋಗಿ ಅವರ ವಿಶ್ವಾಸವನ್ನು ಪುನರ್‌ಗಳಿಸುವ ಕಾರ್ಯಕ್ರಮವೂ ಬಿಜೆಪಿಯಿಂದ ಆಗಿಲ್ಲ. ವಿರೋಧ ಪಕ್ಷವಾಗಿ ವಿಧಾನ ಮಂಡಲದಲ್ಲಿ ಸರ್ಕಾರದ ಒಪ್ಪುತಪ್ಪಿನ ಮೇಲೆ ಹದ್ದಿನ ಕಣ್ಣು ಇಡುವ ಕಾರ್ಯ ಪೇಲವವಾಗಿದೆ.

ವಿಧಾನ ಮಂಡಲದ ಹೊರಗೆ ಬಿಜೆಪಿ ಧುರೀಣರಿಗೆ ಹೇಳಿಕೆಗಳ ಮೂಲಕವೇ ರಾಜಕೀಯ ಮಾಡುವುದು ಕಾಯಕವಾಗಿದೆ. ಪಕ್ಷವು ಒಂದು ಜನಾಂದೋಲನವನ್ನು ಸಂಘಟಿಸಿದ ನಿದರ್ಶನ ಈ ಎರಡೂವರೆ ವರ್ಷದಲ್ಲಿ ಕಂಡಿಲ್ಲ. ಜನರ ಪರವಾಗಿ ಜನರಿಂದ ಶುರುವಾದ ಆಂದೋಲನಗಳನ್ನು(ಉದಾಹರಣೆಗೆ ಕಳಸಾ ಬಂಡೂರಿ ನೀರಿನ ವಿವಾದ) ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದರ ಬದಲು, ರಾಜಕೀಯ ಮಾಡಿ ಕೈತೊಳೆದುಕೊಂಡಿದೆ. ರೈತರ ಸರಣಿ ಆತ್ಮಹತ್ಯೆ ವಿಚಾರದಲ್ಲಿಯೂ ಜನರ ಭಾವನೆಗಳಿಗೆ ಸ್ಪಂದಿಸಲಾಗಿಲ್ಲ.

ಕರ್ನಾಟಕದ ಬಿಜೆಪಿ ಮುಂದಿರುವ ಮುಖ್ಯ ಸಮಸ್ಯೆ ಎಂದರೆ ಧುರೀಣತ್ವದ್ದು. ಇರುವವರು ನಾಲ್ಕು ಮಂದಿ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಮಂತ್ರಿಗಳಾದ ಸದಾನಂದಗೌಡ, ಅನಂತಕುಮಾರ್. ಶೆಟ್ಟರ್ ಮತ್ತು ಸದಾನಂದಗೌಡರು ಪದನಿಮಿತ್ತ ಧುರೀಣರು ಮಾತ್ರ. ಅನಂತಕುಮಾರ್ ಅವರನ್ನು ಜನ ಒಪ್ಪುವುದು ಕಷ್ಟ. ಅವರು ತೆರೆಮರೆಯ ರಾಜಕಾರಣಕ್ಕೆ ಮಾತ್ರ ಪ್ರಸಿದ್ಧರು. ಸಾಮಾನ್ಯ ಜನರಿಗೆ ಗೊತ್ತಿರುವ ಒಂದೇ ಮುಖ ಯಡಿಯೂರಪ್ಪನವರದು.

ಆದರೆ ಅವರು ಕಳಂಕ ಹೊತ್ತಿರುವವರು. ಭ್ರಷ್ಟಾಚಾರ ಪ್ರಕರಣಗಳ ಸುಳಿಯಲ್ಲಿ ಸಿಕ್ಕು ಹೊರಬರಲಾರದೆ ತೊಳಲಾಡುತ್ತಿದ್ದಾರೆ. ಕರ್ನಾಟಕದ ಬಿಜೆಪಿ ವಿದ್ಯಮಾನಗಳಲ್ಲಿಯೂ ಅವರು ಮೂಲೆಗುಂಪಾಗಿದ್ದಾರೆ. ಇಂತಹವರನ್ನು ಭಾವಿ ಮುಖ್ಯಮಂತ್ರಿ ಎಂದು ಮುಂದಿನ ಚುನಾವಣೆಯಲ್ಲಿ ಬಿಂಬಿಸಲು ಸಾಧ್ಯವೇ? ಅಥವಾ ಮೋದಿಯವರ ಹೆಸರಿನಲ್ಲಿ ಮತ ಯಾಚಿಸುವುದು ಬಿಜೆಪಿಗೆ ಅನಿವಾರ್ಯವೇ?

ಬಿಹಾರ ಚುನಾವಣೆಯ ಇನ್ನೊಂದು ವಿಶೇಷವೆಂದರೆ, ರಾಜಕೀಯ ವನವಾಸದಿಂದ ಲಾಲು ಪ್ರಸಾದ್ ಹೊರಬಂದುದು. ‘ನಾನು ಫೀನಿಕ್ಸ್ ಪಕ್ಷಿಯಂತೆ ಬೂದಿಯಿಂದ ಮೇಲೆದ್ದು ಬರುತ್ತೇನೆ’ ಎಂದು ಎಚ್.ಡಿ. ದೇವೇಗೌಡರು ತೊಂಬತ್ತರ ದಶಕಾಂತ್ಯದಲ್ಲಿ ಗುಡುಗಿದ್ದು ಹಳತಾಗಿದೆ. ಎಷ್ಟು ಪರಿಶ್ರಮ ಪಟ್ಟರೂ ಅದನ್ನು ಅವರು ಸಾಧಿಸಲಾಗಿಲ್ಲ. ಅದಕ್ಕೆ ಕಾರಣವೆಂದರೆ ಅವರಿಗಿರುವ ಸೀಮಿತ ರಾಜಕೀಯ ಕ್ಷೇತ್ರ. ಉತ್ತರ ಕರ್ನಾಟಕದಲ್ಲಿ ಅವರಿಗೆ ಪ್ರವೇಶವೇ ಇಲ್ಲ. ಲಾಲು ಪ್ರಸಾದರಂತೆ ಅವರು ಕರ್ನಾಟಕದ ರಾಜಕಾರಣದಲ್ಲಿ ತಿರುಗಿ ಬರಲು ಸಾಧ್ಯವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.