ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ನಮ್ಮಲ್ಲೇ ಮೊದಲು!

ಚುರುಮುರಿ
Published 27 ಜೂನ್ 2024, 19:04 IST
Last Updated 27 ಜೂನ್ 2024, 19:04 IST
ಅಕ್ಷರ ಗಾತ್ರ

‘ರೀ... ನಾಳೆ ನಿಮ್ ಪ್ರೋಗ್ರಾಂ ಏನು? ಯಾರ ಬೆಡ್‌ರೂಂಗೆ ಕ್ಯಾಮೆರಾ ತಗಂಡ್ ಹೋಗ್ಬೇಕು? ಯಾರನ್ನ ಪರಪ್ಪನ ಅಗ್ರಹಾರಕ್ಕೆ ಬಿಟ್ ಬರ್ಬೇಕು?’ ಟಿ.ವಿ. ಪತ್ರಕರ್ತ ತೆಪರೇಸಿಯನ್ನ ಅವನ ಹೆಂಡತಿ ಪಮ್ಮಿ ಕೇಳಿದಳು.

‘ಏನೋಪ್ಪ, ನಾಳೆ ಯಾವ ಹೊಸ ಕೇಸ್ ತಗಲಾಕ್ಕಂತತೋ ಗೊತ್ತಿಲ್ಲ. ನಂಗಂತೂ ಸಾಕ್ ಸಾಕಾಗೇತಿ’ ತಲೆ ಕೊಡವಿದ ತೆಪರೇಸಿ.

‘ಅಲ್ಲರೀ... ನೀವು ದಿನಾ ಒಬ್ಬೊಬ್ರ ಖಾಸಗಿ ಬದುಕನ್ನು ಇಣುಕಿ ಬರ್ತೀರಲ್ಲ, ಒಂದಿನಾದ್ರು ನಮ್ ಬದುಕಿನ ಬಗ್ಗೆ ಯೋಚನೆ ಮಾಡಿದ್ದೀರಾ?

‘ಲೇಯ್, ದಿನ ಬೆಳಗಾದ್ರೆ ಯಾರಿಗೂ ಸಿಗದಂಥ ನ್ಯೂಸ್ ಹುಡುಕಿ ‘ನಮ್ಮಲ್ಲೇ ಮೊದಲು’ ಅಂತ ಕೊಡದಿದ್ರೆ ನನ್ ಕೆಲ್ಸ ಹೋಕ್ಕತಿ. ರೇಪ್ ಮಾಡಿದೋನ ಚೆಡ್ಡಿ ಸಿಕ್ರೆ, ಅದು ಯಾವ ಬ್ರ್ಯಾಂಡು, ಎಲ್ಲಿ ತಗಂಡಿದ್ದ ಎಲ್ಲ ತೋರುಸ್ಬೇಕು ಗೊತ್ತಾ?’

‘ಅಲ್ಲ, ಮಾತಿಗೆ ಕೇಳ್ತೀನಿ, ಪೊಲೀಸ್ ವಿಚಾರಣೆ ಟೈಮಲ್ಲಿ ಅಲ್ಲಿ ನೀವಿರ್ತೀರಾ? ಅಥ್ವ ಜೈಲೊಳಕ್ಕೆ ನಿಮ್ಮನ್ನ ಬಿಡ್ತಾರಾ?’

‘ಇಲ್ಲ, ಯಾಕೆ?’

‘ಮತ್ತೆ ಪೊಲೀಸ್ರು ಇಂತಿಂಥದೇ ಪ್ರಶ್ನೆ ಕೇಳಿದ್ರು ಅಂತ ಹೆಂಗ್ ಹೇಳ್ತೀರಿ? ಜೈಲಲ್ಲಿ ಆರೋಪಿ ಇಂಥದೇ ಊಟ ತಿಂದ, ನಿದ್ದೆ ಬರದೆ ಒದ್ದಾಡಿದ, ಗೊಳೋ ಅಂತ ಅತ್ತ, ಗುರ್ ಅಂದ, ಕಿರ್ ಅಂದ ಅಂತ ಹೆಂಗ್ ತೋರಿಸ್ತೀರಿ?’

‘ಅದೂ... ಅಲ್ಲೆಲ್ಲ ಜನ ಇಟ್ಟಿರ್ತೀವಿ ಕಣೆ, ನಿಂಗ್ ಗೊತ್ತಾಗಲ್ಲ...’

‘ಆಮೇಲೆ ಇಂತಿಂಥ ಕೇಸ್‌ಗೆ ಇಂಥದೇ ಸೆಕ್ಷನ್ನು ಅಂತ ಪಟಪಟ ಹೇಳ್ತೀರಲ್ಲ, ಸ್ಕೂಲಲ್ಲಿ ನಿಮ್ ಮಗ ಯಾವ ಸೆಕ್ಷನ್‌ನಲ್ಲಿ ಓದ್ತಾ ಇದಾನೆ ಗೊತ್ತಾ? ಹೋಗ್ಲಿ, ಅವಳು ಇವನನ್ನ ಎರಡನೇ ಮದ್ವೆ ಆದ್ಲು, ಇವನು ಇನ್ಯಾವಳನ್ನೋ ಮೂರನೇ ಮದ್ವೆ ಆದ ಅಂತ ಎಷ್ಟು ಕರೆಕ್ಟಾಗಿ ಹೇಳ್ತೀರಲ್ಲ, ನಾವು ಮದುವೆ ಆಗಿದ್ದು ಯಾವಾಗ ಗೊತ್ತಾ? ನಿನ್ನೆ ನಮ್ ಆ್ಯನಿವರ್ಸರಿ ಇತ್ತು, ನೆನಪಿತ್ತಾ?’

ತೆಪರೇಸಿ ಪಿಟಿಕ್ಕನ್ನದೆ ಯಾವುದೋ ಫೋನ್ ಬಂದಂತೆ ನಟಿಸಿ ‘ಹಲೋ ಹಲೋ’ ಎನ್ನುತ್ತ ಹೊರಗೆ ಹೋದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT