ಎಚ್.ಕಾಂತರಾಜ ಆಯೋಗದ ವರದಿ ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿ ಬದಲು ಕೇವಲ ಜಾತಿವಾರು ಸಂಖ್ಯೆಯನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡಿ ಗೊಂದಲ ಮೂಡಿಸಲಾಗಿದೆ. ಈ ಸಮೀಕ್ಷೆಯ ಹಿಂದೆ ರಾಜಕೀಯ ದುರುದ್ದೇಶವಿದೆ. ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಹುನ್ನಾರವಿದೆ. ಎಂಬ ಆತಂಕ ಉಂಟಾಗಿದೆ

ಕಾಂತರಾಜ ನೇತೃತ್ವದ ಆಯೋಗವು ಸುಮಾರು ಒಂಬತ್ತು ವರ್ಷದ ಹಿಂದೆ ಸಿದ್ಧಪಡಿಸಿದ ಸಾಮಾಜಿಕ–ಆರ್ಥಿಕ–ಶೈಕ್ಷಣಿಕ ಸಮೀಕ್ಷೆಯ ವರದಿಯು ಈಗ ಚರ್ಚೆಯ ಮುನ್ನೆಲೆಯಲ್ಲಿದೆ. ವೀರಶೈವ–ಲಿಂಗಾಯತ ಧರ್ಮವು ಈ ವರದಿಯನ್ನು ವಿರೋಧಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ವರದಿಗೆ ನಮ್ಮ ವಿರೋಧದ ಹಿಂದೆ ಇರುವ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಇದೆ.

ವೀರಶೈವ-ಲಿಂಗಾಯತ ಧರ್ಮವು ವರ್ಗ, ವರ್ಣ, ವೃತ್ತಿ, ಲಿಂಗಭೇದಗಳನ್ನು ಪರಿಗಣಿಸದೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಉದಾತ್ತ ಆಶಯಗಳ ಮೇಲೆ ನಿಂತಿದೆ. ಬಸವಾದಿ ಶರಣರ ಆಶೋತ್ತರಗಳನ್ನು ಅನುಸರಿಸಿಕೊಂಡು ಬರುತ್ತಿರುವ ಮಹಾಸಭೆಯು ಎಂದಿಗೂ ಜಾತಿಗಣತಿ ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ. ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು ಎಂಬುದು ಮಹಾಸಭೆಯ ಆಶಯ. ಇಂತಹ ಗಣತಿಗಳಿಂದ ಸರ್ಕಾರದ ಸೌಲಭ್ಯಗಳು ನ್ಯಾಯಯುತವಾಗಿ ಎಲ್ಲ ಸಮಾಜದವರಿಗೂ ಅವರ ಸಂಖ್ಯೆಗೆ ಅನುಗುಣವಾಗಿ ದೊರೆಯುವಂತಾಗಬೇಕು ಎನ್ನುವುದು ಸಂವಿಧಾನದ ಆಶಯವೂ ಆಗಿದೆ.

1984ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಹಿಂದುಳಿದ ವರ್ಗದ ಆಯೋಗವು ನೀಡಿದ ವರದಿಯ ಪ್ರಕಾರ 43 ಉಪಜಾತಿಗಳನ್ನೊಳಗೊಂಡ ವೀರಶೈವ-ಲಿಂಗಾಯತರ ಜನಸಂಖ್ಯೆ 61.42 ಲಕ್ಷ. ಅವರು ಸೂಚಿಸಿದ ಪ್ರಕಾರವೇ ಲೆಕ್ಕ ಹಾಕಿದರೆ 2016ಕ್ಕೆ ವೀರಶೈವ-ಲಿಂಗಾಯತರ ಜನಸಂಖ್ಯೆ 1.13 ಕೋಟಿ ಇರಬೇಕು. ಈಗ ಕಾಂತರಾಜ ಆಯೋಗವು 107 ಉಪಜಾತಿಗಳನ್ನು ಗುರುತಿಸಿದ್ದು, ಚಿನ್ನಪ್ಪ ರೆಡ್ಡಿ ಆಯೋಗವು ಗುರುತಿಸಿದ್ದಕ್ಕಿಂತ 64 ಉಪಜಾತಿಗಳು ಜಾಸ್ತಿಯಾಗಿವೆ. ಆದರೂ ಕಾಂತರಾಜ ಅವರ ಆಯೋಗವು ನಡೆಸಿದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ರಾಜ್ಯದ ವೀರಶೈವ-ಲಿಂಗಾಯತ ಸಮಾಜದ ಜನಸಂಖ್ಯೆ 59 ಲಕ್ಷಕ್ಕೆ ಕುಸಿದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಮೀಕ್ಷೆಯು ಅವೈಜ್ಞಾನಿಕವಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಗಣತಿದಾರರು ವೀರಶೈವ-ಲಿಂಗಾಯತರ ಹಲವಾರು ಮನೆಗಳಿಗೆ ಭೇಟಿಯನ್ನೇ ನೀಡಿಲ್ಲ. ಹಳ್ಳಿಯಿಂದ ನಗರಗಳಿಗೆ ಬಂದು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಜನರ ಗಣತಿ ಎರಡೆರಡು ಸಲ ಆಗಿದೆ. ಈ ರೀತಿ ನಮೂದಾಗಿರುವುದನ್ನು ಪರಿಶೀಲನೆಗೊಳಪಡಿಸಿಲ್ಲ. ಆಧಾರ್ ಸಂಖ್ಯೆಯನ್ನೂ ಜೋಡಿಸಿಲ್ಲ.

ವೀರಶೈವ ಲಿಂಗಾಯತ ಧರ್ಮಕ್ಕೆ ಒಂದು ಕೋಡ್ ನೀಡುವುದು ಸಹಜ. ಆದರೆ, ಒಂದೊಂದು ಉಪಜಾತಿಗೆ 2-3 ಕೋಡ್ಗಳನ್ನು ಕೊಟ್ಟು ಗೊಂದಲ ಮೂಡಿಸಲಾಗಿದೆ. ಇದನ್ನು ಸರಿಪಡಿಸಲು ಆಯೋಗ ಕ್ರಮವಹಿಸಿಲ್ಲ. ಅಷ್ಟರಮಟ್ಟಿಗೆ ಆಯೋಗ ಅವೈಜ್ಞಾನಿಕವಾಗಿ ಗಣತಿ ನಡೆಸಿ ವರದಿ ಸಿದ್ಧಪಡಿಸಿದೆ.

ಕಾಂತರಾಜ ಆಯೋಗದ ವರದಿ ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂಬುದೇ ನಮ್ಮ ವಿರೋಧಕ್ಕೆ ಕಾರಣ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿ ಬದಲು ಕೇವಲ ಜಾತಿವಾರು ಸಂಖ್ಯೆಯನ್ನು ಸೋರಿಕೆ ಮಾಡಲಾಗಿದೆ. ಈ ಸಮೀಕ್ಷೆಯ ಹಿಂದೆ ರಾಜಕೀಯ ದುರುದ್ದೇಶವಿದೆ. ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಹುನ್ನಾರವಿದೆ.

ಹಿಂದುಳಿದ ಆಯೋಗವು ವೈಜ್ಞಾನಿಕವಾಗಿ, ಸಮಗ್ರವಾಗಿ ಆಧಾರ್ ಸಂಖ್ಯೆ ಜೋಡಣೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮತ್ತೊಮ್ಮೆ ಗಣತಿಯನ್ನು ಮಾಡುವುದು ಎಲ್ಲರ ದೃಷ್ಟಿಯಿಂದಲೂ ಒಳ್ಳೆಯದೆಂಬುದು ನಮ್ಮ ಭಾವನೆ. ಈ ವರದಿಯ ಕಾರಣದಿಂದ ಕಳೆದ ಒಂಬತ್ತು ವರ್ಷಗಳಿಂದ ಧರ್ಮ- ಧರ್ಮಗಳು ಹಾಗೂ ಜಾತಿ-ಜಾತಿಗಳ ಮಧ್ಯೆ ಸಾಮರಸ್ಯ ಕೆಡುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದಿತ್ತು. ಬಸವಾದಿ ಶರಣರ ಆಶಯದಂತೆ ಸಮಸಮಾಜ ನಿರ್ಮಾಣವಾಗಬೇಕೇ ಹೊರತು ಕಂದಕ ಏರ್ಪಡಬಾರದು ಎನ್ನುವುದನ್ನು ಅರಿತು ನಡೆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.

ಸುಮಾರು ಒಂಬತ್ತು ವರ್ಷಗಳಷ್ಟು ಹಳೆಯದಾದ ಮತ್ತು ಅನೇಕ ಲೋಪ-ದೋಷಗಳಿಂದ ಕೂಡಿರುವ ಕಾಂತರಾಜ ಆಯೋಗದ ವರದಿಯು ಈಗಿನ ಕಾಲಕ್ಕೆ ಅಪ್ರಸ್ತುತವಾಗಿದೆ. ಮೇಲ್ಕಂಡ ಎಲ್ಲ ತಂತ್ರಜ್ಞಾನ
ಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ, ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ. ಸರ್ಕಾರ ಯಾವುದೋ ಉದ್ದೇಶದಿಂದ ವರದಿಯನ್ನು ಅಂಗೀಕರಿಸುವ ಹಟಕ್ಕೆ ಬೀಳದೇ, ಎಲ್ಲರ
ಅಭಿಪ್ರಾಯಗಳನ್ನೂ ಗೌರವಿಸಬೇಕು; ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ರಾಜ್ಯದಲ್ಲಿ ಅಶಾಂತಿಯನ್ನು ಉಂಟುಮಾಡಬಾರದು ಎಂಬ ಕಳಕಳಿ ನಮ್ಮದು.

ಲೇಖಕ: ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.