ಈಗ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಿ ಕೇವಲ ಪಿಯುಸಿ ಅಂಕಗಳ ಆಧಾರದಲ್ಲಿ ಸೀಟು ಕೊಡಹೊರಟರೆ ಮತ್ತೆ ಎಂಬತ್ತರ ದಶಕದ ಮೋಸಗಳತ್ತ ಹೋದಂತಾಗುತ್ತದೆ. ನಮಗೆ ಒಳ್ಳೆಯ ವೈದ್ಯರು ಬೇಕು ಎಂದಾದರೆ ವೈದ್ಯಕೀಯ ಶಿಕ್ಷಣವು ಪ್ರತಿಭಾವಂತರಿಗಷ್ಟೇ ದಕ್ಕಬೇಕು, ಅದಕ್ಕೆ ಅತ್ಯಂತ ಕಠಿಣವಾದ, ಪಾರದರ್ಶಕವಾದ ಪರೀಕ್ಷೆಗಳ ವ್ಯವಸ್ಥೆಯಿರಬೇಕು, ಖಾಸಗಿ ಸಂಸ್ಥೆಗಳು ಮತ್ತು ಹಣದ ಪಾರಮ್ಯ ಕೊನೆಯಾಗಬೇಕು
.ಚರ್ಚೆ | ನೀಟ್ ಪರೀಕ್ಷೆ ರದ್ದತಿ ಸಮಸ್ಯೆಗೆ ಪರಿಹಾರವಲ್ಲ .
ಐವತ್ತರ ದಶಕದ ಮೊದಲಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಆರಂಭಗೊಂಡು, ಹಣಕ್ಕೆ ಸೀಟು ಕೊಡುವ ವ್ಯವಸ್ಥೆ ಬಂದಲ್ಲಿಂದ ತೊಡಗಿ ಇಂದಿನವರೆಗೂ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯು ಮೋಸ ಹಾಗೂ ಭ್ರಷ್ಟಾಚಾರಗಳ ಕೂಪವಾಗಿಯೇ ಇದೆ. ಈ ವರ್ಷ ‘ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ’ಯ (ನೀಟ್) ಪಾವಿತ್ರ್ಯ ನಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಈ ಮೋಸದ ಕೂಪವು ಇನ್ನಷ್ಟು ಆಳ-ಅಗಲವಾಗುತ್ತಿರುವುದನ್ನು ತೋರಿಸುತ್ತದೆ. ನೀಟ್ ಬೇಕೇ ಬೇಡವೇ ಎಂಬುದೊಂದರಲ್ಲೇ ಈ ಮಹಾಕೂಪವನ್ನು ಮುಚ್ಚಲಾಗದು.

ಸ್ವಾತಂತ್ರ್ಯಾ ನಂತರದ 77 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ದುಡ್ಡಿನಾಟಕ್ಕೆ 70 ವರ್ಷಗಳಾಗಿವೆ. ವೈದ್ಯಕೀಯ ಶಿಕ್ಷಣವು ಪ್ರತಿಭಾವಂತರಿಗಷ್ಟೇ ದಕ್ಕಬೇಕು ಎಂದು ಹೋರಾಟಗಳನ್ನು ನಡೆಸುತ್ತಿರುವುದಕ್ಕೆ 40 ವರ್ಷಗಳಾಗಿವೆ. ಎಂಬತ್ತನೇ ದಶಕದವರೆಗೆ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿಪೂರ್ವ ಪರೀಕ್ಷೆಗಳ ಅಂಕಗಳ ಆಧಾರದಲ್ಲೇ ಪ್ರವೇಶ ನೀಡಲಾಗುತ್ತಿತ್ತು. ಬರುಬರುತ್ತಾ ಈ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯಲು ನಕಲು, ಮೌಲ್ಯಮಾಪನದಲ್ಲಿ ವಶೀಲಿ, ಅಂಕಪಟ್ಟಿಯಲ್ಲಿ ತಿದ್ದುಪಡಿ ಎಲ್ಲವೂ ನಡೆಯತೊಡಗಿ, ಕೊನೆಗೆ ಸೀಟು ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆಯೊಳಗೂ ಪಿತೂರಿಗಳು ನಡೆಯತೊಡಗಿದ್ದವು. ಇದರೆದುರು ವಿದ್ಯಾರ್ಥಿಗಳು ರಾಜ್ಯದಾದ್ಯಂತ ಬೀದಿಗಿಳಿದು ಹೋರಾಡಿದ ಫಲವಾಗಿ 1984ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಆರಂಭವಾಯಿತು. ಒಂದೆರಡು ವರ್ಷಗಳಲ್ಲೇ ಅದರಲ್ಲೂ ಮೋಸವಾಗಲು ಆರಂಭಗೊಂಡಾಗ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದು ಒಎಂಆರ್ ಉತ್ತರ ಪತ್ರಿಕೆಗಳು, ಸರಿ ಉತ್ತರಗಳ ಪ್ರಕಟಣೆ, ಶ್ರೇಣಿವಾರು ಅಂಕಗಳ ಪ್ರಕಟಣೆ ಜಾರಿಗೆ ಬರುವಂತಾಯಿತು.

ಖಾಸಗಿ ಕಾಲೇಜುಗಳಲ್ಲಿ ದುಡ್ಡಿನ ಸೀಟುಗಳನ್ನಷ್ಟೇ ನೆಚ್ಚಿಕೊಂಡಿದ್ದವರಿಗೆ ಇಂಥ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಕನಿಷ್ಠ ಅರ್ಹತೆಯನ್ನು ಪಡೆಯುವುದು ಕೂಡ ಕಷ್ಟವಾದಾಗ ಖಾಸಗಿ ಕಾಲೇಜುಗಳವರು ಪದೇ ಪದೇ ನ್ಯಾಯಾಲಯದ ಮೊರೆ ಹೋಗಿ ತಮ್ಮದೇ ಪ್ರವೇಶ ಪರೀಕ್ಷೆಗಳನ್ನು ಆರಂಭಿಸಿದರು. ಒಂದು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಸಾಮಾನ್ಯ ಪರೀಕ್ಷೆ ಇದ್ದುದು ಒಂದೊಂದು ಕಾಲೇಜಿಗೆ ಒಂದೊಂದು ಪ್ರವೇಶ ಪರೀಕ್ಷೆ ಎಂಬಂತಾಯಿತು.

ಇದು ವಿಪರೀತವಾದಾಗ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಇಡೀ ದೇಶಕ್ಕೆ ಒಂದೇ ನೀಟ್ ಪ್ರವೇಶ ಪರೀಕ್ಷೆಯಿರಬೇಕು, ಅರ್ಹತೆಗಾಗಿ ಶೇ 50 ಅಂಕಗಳನ್ನು ಪಡೆಯಬೇಕು ಎಂಬ ನಿಯಮವನ್ನು ಮಾಡಿತು. ಒಂದೇ ವರ್ಷದಲ್ಲಿ, 2013ರ ಜುಲೈನಲ್ಲಿ ಖಾಸಗಿ ಕಾಲೇಜುಗಳ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಈ ನೀಟ್ ಅನ್ನು ರದ್ದುಗೊಳಿಸಿತು. ಈ ಆದೇಶದ ಬಗ್ಗೆ ತಕರಾರುಗಳೆದ್ದವು; ಅದೇ ಪೀಠದಲ್ಲಿದ್ದ ನ್ಯಾಯಮೂರ್ತಿ ಎ.ಆರ್.ದವೆಯವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 2016ರ ಎಪ್ರಿಲ್ನಲ್ಲಿ ‘ನೀಟ್’ ಅನ್ನು ಮತ್ತೆ ಊರ್ಜಿತಗೊಳಿಸಿತು.

ನೀಟ್ ತಡೆಯಲಾಗದ ಖಾಸಗಿ ಕಾಲೇಜುಗಳು ಶುಲ್ಕವನ್ನು 6ರಿಂದ 20 ಪಟ್ಟು ಹೆಚ್ಚಿಸಿಬಿಟ್ಟವು. ಅದರೊಂದಿಗೆ ನೀಟ್ ಅಂಕಗಳಷ್ಟೇ ಅರ್ಹತೆ ಎಂಬ ಆಶಯವೂ ಮಣ್ಣುಪಾಲಾಯಿತು. ಮರು ವರ್ಷವೇ 2017ರಲ್ಲಿ, ಅಷ್ಟೊಂದು ಹಣಕ್ಕೆ ವಿದ್ಯಾರ್ಥಿಗಳು ದೊರೆಯದಾಗ ಶುಲ್ಕವನ್ನು ಇಳಿಸುವ ಬದಲು ಅರ್ಹತಾ ಮಾನದಂಡವನ್ನೇ ಇಳಿಸಲಾಯಿತು. 50 ಪರ್ಸೆಂಟ್ ಅಂಕದ ಬದಲಿಗೆ 50ನೇ ಪರ್ಸೆಂಟೈಲ್ ಎಂದು ಬದಲಿಸಲಾಯಿತು, ಬಳಿಕ 45ಕ್ಕೂ ಇಳಿಸಲಾಯಿತು; ಮೂರರಲ್ಲಿ ಎರಡು ವಿಷಯಗಳಲ್ಲಿ ಸೊನ್ನೆ ಪಡೆದವರಿಗೂ ಸೀಟು ಸಿಕ್ಕಿತು (ಕಳೆದ ವರ್ಷ ಸ್ನಾತಕೋತ್ತರ ಪ್ರವೇಶಕ್ಕೆ ಅರ್ಹತೆಯನ್ನು ಸೊನ್ನೆಗೆ ಇಳಿಸಲಾಯಿತು).

ಇವೆಲ್ಲವನ್ನೂ ಸುಲಭಗೊಳಿಸಲು ಸ್ವಾಯತ್ತ ಎಂಸಿಐಯನ್ನೇ ಬರ್ಖಾಸ್ತು ಮಾಡಿ, ಕೇಂದ್ರ ಸರ್ಕಾರದ ಅಧೀನದಲ್ಲೇ ಇರುವ ಎನ್ಎಂಸಿಯನ್ನು (ರಾಷ್ಟ್ರೀಯ ವೈದ್ಯಕೀಯ ಆಯೋಗ) 2019ರಲ್ಲಿ ತರಲಾಯಿತು. 80ರ ದಶಕದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುತ್ತಿದ್ದ ಸಿಬಿಎಸ್ಇ ಬದಲಿಗೆ ನೀಟ್ ಅನ್ನು 2019ರಲ್ಲಿ ಕೇಂದ್ರ ಸರ್ಕಾರ ರಚಿಸಿದ ಹೊಸ ಎನ್ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಕೈಗೆ ಕೊಡಲಾಯಿತು (ಇವೆಲ್ಲವೂ ಕೇಂದ್ರ ಸರ್ಕಾರದ ಮುಷ್ಟಿಯಲ್ಲಿರುವುದರಿಂದ ಅಪಾಯದ ಬಗ್ಗೆ ನಾವು ಕೆಲವರು 2016-17ರಲ್ಲೇ ಎಚ್ಚರಿಸಿದ್ದೆವು).

ಈ ವರ್ಷ ನೀಟ್ ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿ ₹20 ಲಕ್ಷ–₹30 ಲಕ್ಷ ಕೊಟ್ಟು 720ಕ್ಕೆ 720 ಅಂಕ, ಅಥವಾ ಅತ್ಯುತ್ತಮ ಅಂಕಗಳನ್ನು ಸಾವಿರಾರು ಅಭ್ಯರ್ಥಿಗಳು ಪಡೆದಿರುವ ಹಗರಣವು ಈಗ ಸುಪ್ರೀಂ ಕೋರ್ಟ್ನ ಮುಂದಿದೆ. ನೀಟ್ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ನ್ಯಾಯಾಲಯವೇ ಹೇಳಿದರೆ, ಅಂಥದ್ದೇನೂ ಆಗಿಲ್ಲ ಎಂದು ಕೇಂದ್ರ ಸರ್ಕಾರ, ಎನ್ಎಂಸಿ ಹಾಗೂ ಎನ್ಟಿಎ ಹೇಳಿವೆ.

ಹೀಗೆ ವೈದ್ಯಕೀಯ ಪ್ರವೇಶಾತಿಗೆ ಪಾರದರ್ಶಕ ಪರೀಕ್ಷೆಗಳಿರಬೇಕೆಂದು ಎಂಬತ್ತರ ದಶಕದಿಂದ ನಡೆಸಿದ್ದ ಹೋರಾಟಗಳ ಆಶಯಗಳೆಲ್ಲವೂ ವ್ಯವಸ್ಥಿತವಾಗಿ ಮಣ್ಣುಪಾಲಾಗಿ ವೈದ್ಯಕೀಯ ಶಿಕ್ಷಣವೂ, ಪ್ರವೇಶ ಪರೀಕ್ಷೆಗಳೂ ವರ್ಷದಿಂದ ವರ್ಷಕ್ಕೆ ದುಡ್ಡಿನ ದಂಧೆಯಾಗಿ ಕೆಡುತ್ತಲೇ ಸಾಗಿವೆ. ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಗಳು ಕೇಂದ್ರ ಸರ್ಕಾರದ ಮುಷ್ಟಿಯೊಳಗೆ ಇರುವುದು ಮತ್ತು ವೈದ್ಯಕೀಯ ಸಂಘಟನೆಗಳು ಅದಕ್ಕೆ ಚಪ್ಪಾಳೆ ತಟ್ಟುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ.

ಈಗ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಿ ಕೇವಲ ಪಿಯುಸಿ ಅಂಕಗಳ ಆಧಾರದಲ್ಲಿ ಸೀಟು ಕೊಡಲು ಹೊರಟರೆ ಮತ್ತೆ ಎಂಬತ್ತರ ದಶಕದ ಮೋಸಗಳತ್ತ ಹೋದಂತಾಗುತ್ತದೆ. ನಮಗೆ ಒಳ್ಳೆಯ ವೈದ್ಯರು ಬೇಕು ಎಂದಾದರೆ ವೈದ್ಯಕೀಯ ಶಿಕ್ಷಣವು ಪ್ರತಿಭಾವಂತರಿಗಷ್ಟೇ ದಕ್ಕಬೇಕು, ಅದಕ್ಕೆ ಅತ್ಯಂತ ಕಠಿಣವಾದ, ಪಾರದರ್ಶಕವಾದ ಪರೀಕ್ಷೆಗಳ ವ್ಯವಸ್ಥೆಯಿರಬೇಕು, ಖಾಸಗಿ ಸಂಸ್ಥೆಗಳು ಮತ್ತು ಹಣದ ಪಾರಮ್ಯ ಕೊನೆಯಾಗಬೇಕು.

ಮೊತ್ತ ಮೊದಲಾಗಿ, 2019ರಿಂದೀಚೆಗೆ ವೈದ್ಯಕೀಯ ಶಿಕ್ಷಣದ ಎಲ್ಲ ಸ್ತರಗಳ ಪ್ರವೇಶ ಪರೀಕ್ಷೆಗಳ ಮೇಲೆ ಕೇಂದ್ರ ಸರ್ಕಾರ ಸ್ಥಾಪಿಸಿರುವ ಏಕಾಧಿಪತ್ಯವನ್ನು ಕೂಡಲೇ ಕೊನೆಗೊಳಿಸಲೇ ಬೇಕು. ವೈದ್ಯಕೀಯ ಸೀಟುಗಳ ರಾಜ್ಯ ಹಾಗೂ ಕೇಂದ್ರಗಳ ಹಂಚಿಕೆಯ ಅನುಪಾತವೂ ಬದಲಾಗಬೇಕು, ಸ್ನಾತಕೋತ್ತರ ಹಾಗೂ ಸೂಪರ್ ಸ್ಪೆಷಾಲಿಟಿ ಸೀಟುಗಳಲ್ಲಿ ರಾಜ್ಯದ ಪ್ರಮಾಣವು ಈಗಿನ ಶೇ 50 ಹಾಗೂ ಸೊನ್ನೆಯ ಬದಲಿಗೆ ಕ್ರಮವಾಗಿ ಶೇ 70 ಹಾಗೂ ಕನಿಷ್ಠ ಶೇ 30ಕ್ಕೆ ಏರಬೇಕು. ಈ ಎಲ್ಲ ಸ್ತರಗಳಲ್ಲೂ ರಾಜ್ಯದ ಪಾಲಿನ ಸೀಟುಗಳಿಗೆ 2012ರ ಮೊದಲಿದ್ದಂತೆ ಆಯಾ ರಾಜ್ಯಗಳ ಮಟ್ಟದಲ್ಲಿ, ರಾಜ್ಯ ಸರ್ಕಾರದ ಸಂಸ್ಥೆಗಳ ಮೂಲಕವೇ ಪ್ರವೇಶ ಪರೀಕ್ಷೆಗಳು ಹಾಗೂ ಸೀಟು ಹಂಚಿಕೆಯಾಗಬೇಕು. ಕೇಂದ್ರದ ಪಾಲಿನ ಸೀಟುಗಳಿಗಷ್ಟೇ ಕೇಂದ್ರೀಯ ಪರೀಕ್ಷೆಗಳು ಇರಬೇಕು. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳೆಲ್ಲಕ್ಕೂ ಈ ಪರೀಕ್ಷೆಗಳಷ್ಟೇ ಇರಬೇಕು, ಸರ್ಕಾರಿ ಪ್ರಾಧಿಕಾರಗಳ ಮೂಲಕವೇ ಎಲ್ಲ ಸೀಟುಗಳೂ ಹಂಚಿಕೆಯಾಗಬೇಕು.

ಈಗ ಐಐಟಿಗಳಲ್ಲಿ ಎಂಜಿನಿಯರಿಂಗ್ ಸೀಟುಗಳಿಗೆ ಎರಡು ಹಂತಗಳ ಪರೀಕ್ಷೆಯಿದ್ದು, ಮೊದಲ ಹಂತದಲ್ಲಿ ಉತ್ತಮ ಅಂಕ ಗಳಿಸಿದವರಷ್ಟೇ ಅಂತಿಮ ಪ್ರವೇಶಕ್ಕೆ ಅರ್ಹತೆಯನ್ನು ಪಡೆಯುತ್ತಾರೆ. ಕೇಂದ್ರ ಮಟ್ಟದ ವೈದ್ಯಕೀಯ ಸೀಟುಗಳ ಪರೀಕ್ಷೆಗೂ ಇದೇ ಮಾದರಿಯನ್ನು ಬಳಸಿಕೊಳ್ಳಬಹುದು, ರಾಜ್ಯ ಮಟ್ಟದಲ್ಲಿ ಆಯಾ ವರ್ಗಗಳಲ್ಲಿ ಉತ್ತಮ ಅಂಕಗಳನ್ನು ಪಡೆದವರಷ್ಟೇ ಕೇಂದ್ರ ಮಟ್ಟದ ಪರೀಕ್ಷೆಗಳಿಗೆ ಅರ್ಹರಾಗುವಂತೆ ಮಾಡಬಹುದು. ಆಗ ಒಂದು ಲಕ್ಷದಷ್ಟಿರುವ ಎಂಬಿಬಿಎಸ್ ಸೀಟುಗಳಿಗೆ 24 ಲಕ್ಷ ವಿದ್ಯಾರ್ಥಿಗಳು ಒಂದೇ ಒಂದು ಪರೀಕ್ಷೆ ಬರೆಯುವ ಅಗತ್ಯವುಂಟಾಗದು.

ಈ ಪರೀಕ್ಷೆಗಳಲ್ಲಿ ಈ ಮೊದಲು ಇದ್ದಂತಹ ಕನಿಷ್ಠ ಶೇ 50 ಅಂಕಗಳ ಮಾನದಂಡವನ್ನೇ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದನ್ನು ಕೆಳಗಿಳಿಸಿ ಕೇವಲ ಹಣಕ್ಕಾಗಿ ಸೊನ್ನೆಗೂ ತಂದಿಡುವುದಕ್ಕೆ ಅವಕಾಶವೇ ಇರಕೂಡದು. ಖಾಸಗಿ ಕಾಲೇಜುಗಳಲ್ಲಿ ಈ ಮಾನದಂಡಗಳನ್ನು ಗೆಲ್ಲಬಲ್ಲ ವಿದ್ಯಾರ್ಥಿಗಳು ದೊರೆಯದಿದ್ದಲ್ಲಿ ಬಾಕಿ ಉಳಿಯುವ ಎಲ್ಲ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಮರಳಿಸಿ, ಎಲ್ಲ ಸಾಂವಿಧಾನಿಕ ಮೀಸಲಾತಿಗೆ ಅನುಸಾರ ಆ ಸೀಟುಗಳನ್ನು ಹಂಚಿಕೆ ಮಾಡುವಂತಾಗಬೇಕು.

ಲೇಖಕ: ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.