ಜಾತಿಯ ಕಠೋರ ಅವಮಾನಕ್ಕೆ ತಳ ಸಮುದಾಯಗಳನ್ನು ದೂಡುವುದು ಅಮಾನವೀಯ, ಶಿಕ್ಷಾರ್ಹ ಅಪರಾಧ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಅವರು ಇಂತಹ ಶೋಷಣೆಯಿಂದ ಮುಕ್ತವಾಗದೇ ಇರುವುದಕ್ಕೆ, ಜಾತಿ ಎಂಬ ರೋಗವೇ ಕಾರಣ. ಜನರ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುವುದಾಗಿ ಪ್ರಮಾಣ ಮಾಡಿ ಸಚಿವರಾದವರೂ ಇದೇ ಮಾದರಿಯಲ್ಲಿ ವರ್ತಿಸತೊಡಗಿದರೆ ಅದು ಪ್ರಜಾತಂತ್ರದ ಅಪಹಾಸ್ಯ. ಪ್ರಬಲ ಜಾತಿಗಳಿಗೆ ಸೇರಿದವರೇ ಆಯಕಟ್ಟಿನ ಜಾಗಗಳಲ್ಲಿ ಇರಬೇಕು ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಂಜಿನಿಯರ್‌ಗಳನ್ನು ಯಾರಿಗೂ ಬೇಡವಾದ ಹುದ್ದೆಗಳಿಗೆ ವರ್ಗಾಯಿಸುವುದು; ತಳ ಸಮುದಾಯದ ಅಧಿಕಾರಿ, ನೌಕರರನ್ನು ಕೆಲವು ಇಲಾಖೆಗಳು ‘ಒಳಗೆ’ ಬಿಟ್ಟುಕೊಳ್ಳದಿರುವಂತಹ ವಿದ್ಯಮಾನವೊಂದು ರಾಜ್ಯದಲ್ಲಿ ನಡೆದಿರುವುದು ಅತ್ಯಂತ ದುರದೃಷ್ಟಕರ. ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟ ಸರ್ಕಾರಕ್ಕೆ ಇದು ಶೋಭೆಯಲ್ಲ.ಈ ಧೋರಣೆಯು ಸಾಮಾಜಿಕ ನ್ಯಾಯವನ್ನು ಬಾಯಿಮಾತಿಗಾದರೂ ಪ್ರತಿಪಾದಿಸುತ್ತಿರುವ ಕಾಂಗ್ರೆಸ್‌ನ ನೈತಿಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಲೋಕೋಪಯೋಗಿ ಇಲಾಖೆಯು ಎಂಜಿನಿಯರ್‌ಗಳ ಮಾತೃ ಇಲಾಖೆ. ಮೈತ್ರಿ ಸರ್ಕಾರದಲ್ಲಿ ಈ ಮಹತ್ವದ ಖಾತೆಯು ಜೆಡಿಎಸ್ ತೆಕ್ಕೆಯಲ್ಲಿದೆ. ಈ ಖಾತೆಯ ಸಚಿವರು ‘ದಲಿತ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ, ಅರ್ಹತೆ ಇದ್ದರೂ ಹುದ್ದೆಗಳನ್ನು ಆ ಸಮುದಾಯದವರಿಗೆ ನೀಡುತ್ತಿಲ್ಲ’ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ದಶಕದ ಹಿಂದೆ ಸಚಿವರಾಗಿದ್ದಾಗಲೂ ಇದೇ ಖಾತೆಯನ್ನು ಹೊಂದಿದ್ದ ಅವರು ಆಗಲೂ ಹೀಗೆಯೇ ವರ್ತಿಸಿದ್ದರು. ಒಂದು ನಿರ್ದಿಷ್ಟ ಸಮುದಾಯದ ಹಿತ ಕಾಪಾಡುವುದರ ಬಗ್ಗೆಯೇ ಹೆಚ್ಚು ಮುತುವರ್ಜಿ ತೋರಿದ್ದರು ಎಂಬ ಟೀಕೆಗೆ ಗುರಿಯಾಗಿದ್ದರು.ಬಡ್ತಿ ಮೀಸಲಾತಿ ಕಾಯ್ದೆ ರದ್ದಾದ ಕಾರಣಕ್ಕೆ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹಿಂಬಡ್ತಿಗೆ ಒಳಗಾದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಹಿಂಬಡ್ತಿ ಪೂರ್ವದ ಹುದ್ದೆಗಳಿಗೆ ಅವರನ್ನು ನಿಯೋಜಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರೇ ಸೂಚಿಸಿದ್ದರು. ಇದಕ್ಕೆ, ಒಂದು ತಿಂಗಳ ಗಡುವನ್ನೂ ನೀಡಿದ್ದರು. ಈಗಾಗಲೇ ಅಂತಹ ಹುದ್ದೆಗಳಲ್ಲಿ ತಳವೂರಿರುವ ಅಧಿಕಾರಿಗಳನ್ನು ಇಳಿಸಿ, ಪರಿಶಿಷ್ಟರಿಗೆ ನ್ಯಾಯ ಕೊಡಿಸಲು ಸಿದ್ಧರಿಲ್ಲದ ಲೋಕೋಪಯೋಗಿ ಸಚಿವರು, ಮನಬಂದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಆರೋಪವು ಅಧಿಕಾರಿಗಳ ವೃಂದದಿಂದಲೇ ಕೇಳಿಬಂದಿದೆ. ಹಿಂಬಡ್ತಿಗೆ ಒಳಗಾಗಿದ್ದ 22 ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳು, 25 ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ 178 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಮರು ಮುಂಬಡ್ತಿಗೆ ಕಾಯುತ್ತಲೇ ಇದ್ದಾರೆ ಎನ್ನಲಾಗಿದೆ. ತಮ್ಮ ಇಲಾಖೆಯ ಅಭಿಪ್ರಾಯ ಪಡೆಯದೇ ಎಂಜಿನಿಯರ್‌ಗಳನ್ನು ನಿಯೋಜಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಇಲಾಖೆ, ಕೆಲವರನ್ನು ವಾಪಸು ಕೂಡ ಕಳಿಸಿದೆ. ಈ ಎಂಜಿನಿಯರ್‌ಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

ಎಂಜಿನಿಯರ್‌ಗಳನ್ನು ಮಾತೃ ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಅಥವಾ ನಿಯೋಜನೆ ಮಾಡುವಾಗ ಆ ಇಲಾಖೆಯ ಸಮ್ಮತಿಯನ್ನು ಲಿಖಿತ ರೂಪದಲ್ಲಿ ಪಡೆಯಬೇಕು ಎಂಬುದು ನಿಯಮ. ಎಂಜಿನಿಯರ್‌ಗಳನ್ನು ಹಂಚಿಕೆ ಮಾಡುವ ಮುನ್ನ ಕಡತ ಸಿದ್ಧವಾಗಿ ಪ್ರಸ್ತಾವವು ಸಂಬಂಧಿಸಿದ ಇಲಾಖೆಗೆ ಹೋಗಬೇಕು. ಅಲ್ಲಿಂದ ಪ್ರತಿಕ್ರಿಯೆ ಬಂದ ಮೇಲೆ ನಿಯೋಜನೆ ಪ್ರಕ್ರಿಯೆ ಆರಂಭವಾಗಬೇಕು. ಜಲಸಂಪನ್ಮೂಲ ಇಲಾಖೆಗೆ ಅಧಿಕಾರಿಗಳನ್ನು ಬೇಕಾಬಿಟ್ಟಿ ನಿಯೋಜನೆ ಮಾಡಿದಾಗ ಸಂಬಂಧಿಸಿದ ಸಚಿವರು ಖಾರವಾಗಿ ಪತ್ರ ಬರೆದು ಎಚ್ಚರಿಸಿದ್ದರು. ಅದಾದ ಬಳಿಕ ಲೋಕೋಪಯೋಗಿ ಸಚಿವರು ಈ ಇಲಾಖೆಗೆ ಸಂಬಂಧಿಸಿದ ವರ್ಗಾವಣೆಗೆ ಕಡತದ ಮೂಲಕವೇ ವ್ಯವಹರಿಸುತ್ತಿದ್ದಾರೆ ಎಂಬ ಮಾತು ಇದೆ. ಆದರೆ, ಜೆಡಿಎಸ್‌ಗೆ ಹಂಚಿಕೆಯಾಗಿರುವ ಖಾತೆಗಳಾದ ಉನ್ನತ ಶಿಕ್ಷಣ, ಸಣ್ಣ ಕೈಗಾರಿಕೆ, ಸಣ್ಣ ನೀರಾವರಿ ಇಲಾಖೆಗಳಲ್ಲೂ ಲೋಕೋಪಯೋಗಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆಪಾದನೆ ಇದೆ. ಕಾಂಗ್ರೆಸ್‌ಗೆ ಹಂಚಿಕೆಯಾಗಿರುವ ಆರೋಗ್ಯ, ಪಂಚಾಯತ್‌ರಾಜ್, ಸಮಾಜ ಕಲ್ಯಾಣ, ವಸತಿ ಖಾತೆಗಳಲ್ಲಿ ಹಸ್ತಕ್ಷೇಪ ವಿಪರೀತ ಎಂಬ ಆರೋಪಗಳೂ ಇವೆ. ಕಾಮಗಾರಿಗಳು ಎಲ್ಲೆಲ್ಲಿ ಇರುತ್ತವೋ ಅಲ್ಲೆಲ್ಲ ಲೋಕೋಪಯೋಗಿ ಇಲಾಖೆಯ ‘ಉಸ್ತುವಾರಿ’ ಇರಲೇಬೇಕು ಎಂದು ಈ ಸಚಿವರು ಭಾವಿಸಿದಂತಿದೆ. ಇದಕ್ಕೆ ಮುಖ್ಯಮಂತ್ರಿ ಇನ್ನಾದರೂ ಕಡಿವಾಣ ಹಾಕುವರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.