ಜಗತ್ತಿನ ಹಾಗೂ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟದ ಕುರಿತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಚೆಗೆ ಪ್ರಕಟಿಸಿರುವ ವರದಿಯು ಈ ಹಿಂದಿನ ಕೆಲವು ವರದಿಗಳಿಗೆ ಹೋಲಿಸಿದರೆ ಅಷ್ಟೇನೂ ಆಶಾದಾಯಕವಲ್ಲದ ಚಿತ್ರಣವೊಂದನ್ನು ನೀಡಿದೆ. ಐಎಂಎಫ್ ಅಂದಾಜಿನ ಪ್ರಕಾರ, ವಿಶ್ವದ ಆರ್ಥಿಕ ಬೆಳವಣಿಗೆ ದರ 2023ರಲ್ಲಿ ಶೇಕಡ 2.8ಕ್ಕೆ ಕುಸಿಯುವ ಸಾಧ್ಯತೆ ಇದೆ. 2022ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ದರ ಶೇ 3.4ರಷ್ಟು ಇತ್ತು. ಅರ್ಥ ವ್ಯವಸ್ಥೆಯಲ್ಲಿನ ಮಂದಗತಿಯು ಮುಂದುವರಿದ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ. ಈ ದೇಶಗಳ ಅರ್ಥ ವ್ಯವಸ್ಥೆಯ ಬೆಳವಣಿಗೆಯು ಈ ವರ್ಷದಲ್ಲಿ ಶೇ 1.3ಕ್ಕೆ ಇಳಿಕೆ ಕಾಣಬಹುದು. ಇದು 2022ರಲ್ಲಿ ಶೇ 2.7ರಷ್ಟು ಇತ್ತು.

ಬ್ರಿಟನ್ ಮತ್ತು ಐರೋಪ್ಯ ವಲಯದ ಅರ್ಥ ವ್ಯವಸ್ಥೆಗಳು ಹೆಚ್ಚಿನ ಪರಿಣಾಮ ಎದುರಿಸಲಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅರ್ಥ ವ್ಯವಸ್ಥೆಗಳು ತುಸು ಉತ್ತಮ ಸ್ಥಿತಿಯಲ್ಲಿ ಇರಲಿವೆ. ಇಲ್ಲಿ ಶೇ 3.9ರಷ್ಟು ಆರ್ಥಿಕ ಬೆಳವಣಿಗೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಪ್ರಮಾಣವು ಕಳೆದ ವರ್ಷದಲ್ಲಿ ಆಗಿದ್ದ ಬೆಳವಣಿಗೆಗೆ ಹೋಲಿಸಿದರೆ ಅಲ್ಪಮಟ್ಟಿಗೆ ಕಡಿಮೆ. ಅಭಿವೃದ್ಧಿ ಹೊಂದಿರುವ ದೇಶಗಳ ಆರ್ಥಿಕ ಬೆಳವಣಿಗೆ ದರ, ಅಂದಾಜು ಮಾಡಿರುವುದಕ್ಕಿಂತ ಕೆಟ್ಟದಾಗಿಯೂ ಇರುವ ಸಾಧ್ಯತೆ ಇದೆ ಎಂದು ಐಎಂಎಫ್ ವರದಿ ಹೇಳಿದೆ. ಅಂದರೆ, ವರದಿಯಲ್ಲಿನ ಕೆಲವು ಅಂದಾಜುಗಳು ತಪ್ಪಾಗುವ ಸಾಧ್ಯತೆ ಇರುತ್ತದೆ.

ಉದಾಹರಣೆಗೆ, ಕೆಲವು ಪ್ರಮುಖ ಬ್ಯಾಂಕ್ಗಳು ದಿವಾಳಿ ಎದ್ದ ನಂತರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ಉಂಟಾಗಿದ್ದ ಸಮಸ್ಯೆಗಳು ಒಂದಿಷ್ಟು ಬಗೆಹರಿದಿವೆ ಎಂದು ಭಾವಿಸಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಇನ್ನಷ್ಟು ಬಿಕ್ಕಟ್ಟುಗಳು ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಜಗತ್ತಿನ ವಿವಿಧ ಕೇಂದ್ರೀಯ ಬ್ಯಾಂಕ್ಗಳು ಕೈಗೊಂಡ ಕ್ರಮದ ಪರಿಣಾಮವಾಗಿ ಹಣದುಬ್ಬರ ದರವು ಮುಂದಿನ ದಿನಗಳಲ್ಲಿ ಕಡಿಮೆ ಆಗುವ ನಿರೀಕ್ಷೆ ಇದೆಯಾದರೂ, ಹಣದುಬ್ಬರದ ಕುರಿತು ಒಂದಿಷ್ಟು ಕಳವಳ ಇದ್ದೇ ಇದೆ.

ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಹಾಗೂ ಅಮೆರಿಕ–ಚೀನಾ ನಡುವಿನ ವಾಣಿಜ್ಯ ಸಮರದ ಪರಿಣಾಮಗಳು ಇನ್ನೂ ಕೆಲ ಕಾಲದವರೆಗೆ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತ ಇರಲಿವೆ. 2023–24ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಎಂದು ಈ ಮೊದಲು ಅಂದಾಜು ಮಾಡಿದ್ದ ಐಎಂಎಫ್ ಈಗ ಅದನ್ನು ತಗ್ಗಿಸಿದೆ. ದೇಶದ ಅರ್ಥ ವ್ಯವಸ್ಥೆಯು ಶೇ 5.9ರಷ್ಟು ಮಾತ್ರ ಬೆಳೆಯಲಿದೆ ಎಂದು ಅದು ಹೇಳಿದೆ. ಬೇಡಿಕೆ ಕಡಿಮೆ ಆಗಿರುವುದು ಹಾಗೂ ಇತರ ಕೆಲವು ನಕಾರಾತ್ಮಕ ದತ್ತಾಂಶಗಳನ್ನು ಆಧರಿಸಿ, ಬೆಳವಣಿಗೆಯ ಅಂದಾಜನ್ನು ತಗ್ಗಿಸಲಾಗಿದೆ.

ಐಎಂಎಫ್ ಪ್ರಕಾರ, ಈಗ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖ ಚಾಲಕ ಶಕ್ತಿಗಳು ಎಂದರೆ ಹೂಡಿಕೆ ಮತ್ತು ವ್ಯಾಪಾರ. ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆಯು ಸರ್ಕಾರಗಳ ಕಡೆಯಿಂದ ಬರಬೇಕಿದೆ. ಸರ್ಕಾರಗಳು ಬಂಡವಾಳ ಹೂಡಿಕೆ ವಿಚಾರವಾಗಿ ಕೆಲವು ಪ್ರಮುಖ ಯೋಜನೆಗಳನ್ನು ಸಿದ್ಧಪಡಿಸಿವೆಯಾದರೂ, ಅವು ಅನುಷ್ಠಾನಕ್ಕೆ ಬರುತ್ತವೆಯೇ ಎಂಬುದರಲ್ಲಿ ಅನುಮಾನ ಇದೆ. ವ್ಯಾಪಾರ ವಹಿವಾಟಿನ ವಿಚಾರಕ್ಕೆ ಬರುವುದಾದರೆ, ಸೇವಾ ವಲಯದಲ್ಲಿನ ರಫ್ತು ಪ್ರಮಾಣ ಚೆನ್ನಾಗಿ ಇದೆ. ಆದರೆ ಸರಕುಗಳ ರಫ್ತು ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ.

ಪ್ರಸಕ್ತ ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ ಕಡಿಮೆ ಇರುವ ಕಾಲಘಟ್ಟದಲ್ಲಿ ಭಾರತವು ತಾನು ಮಾತ್ರ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ನಿರೀಕ್ಷಿಸಲಾಗದು. ಐಎಂಎಫ್, ಭಾರತದ ಆರ್ಥಿಕ ಬೆಳವಣಿಗೆ ವಿಚಾರವಾಗಿ ಮಾಡಿರುವ ಅಂದಾಜು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಡಿರುವ ಶೇ 6.5ರ ಅಂದಾಜಿಗಿಂತ ಬಹಳ ಕಡಿಮೆ ಇದೆ ಎಂಬುದು ಗಮನಾರ್ಹ.

ಆರ್ಬಿಐ ಮತ್ತು ಐಎಂಎಫ್ ಮಾತ್ರವೇ ಅಲ್ಲದೆ, ಇತರ ಕೆಲವು ಸಂಸ್ಥೆಗಳು ಕೂಡ ತಮ್ಮದೇ ಆದ ಮುನ್ನೋಟವನ್ನು ನೀಡಿವೆ. ಕೆಲವು ಅಂದಾಜುಗಳು ಹೆಚ್ಚು ಬೆಳವಣಿಗೆಯನ್ನು, ಇನ್ನು ಕೆಲವು ಅಂದಾಜುಗಳು ಕಡಿಮೆ ಬೆಳವಣಿಗೆಯನ್ನು ಹೇಳುತ್ತಿವೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪ್ರಕಾರ, ಬೆಳವಣಿಗೆ ದರ ಶೇ 6.4ರಷ್ಟು ಇರಲಿದೆ. ಕ್ರಿಸಿಲ್ ಸಂಸ್ಥೆಯು ಶೇ 6ರ ಬೆಳವಣಿಗೆ ದರದ ನಿರೀಕ್ಷೆ ಹೊಂದಿದೆ. ಅವೇನೇ ಇದ್ದರೂ, ಈಗಿನ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದರೆ, ಆರ್ಥಿಕ ಬೆಳವಣಿಗೆ ದರ ದೊಡ್ಡ ಮಟ್ಟದಲ್ಲಿ ಇರಲಿದೆ ಎಂದು ನಿರೀಕ್ಷೆ ಮಾಡುವುದು ಅವಾಸ್ತವಿಕ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.