ಉಪಗ್ರಹ ಟಿ.ವಿ. ವಾಹಿನಿಗಳ ಅಪ್ಲಿಂಕಿಂಗ್ ಮತ್ತು ಡೌನ್ಲಿಂಕಿಂಗ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ಪರಿಷ್ಕೃತ ಮಾರ್ಗಸೂಚಿಗಳು ಭಾರತವನ್ನು ಟೆಲಿಪೋರ್ಟ್ ಕೇಂದ್ರವನ್ನಾಗಿ ಬೆಳೆಸುವ ಗುರಿಯನ್ನು ಇಟ್ಟುಕೊಂಡು ಕೆಲವು ಸಲಹೆಗಳನ್ನು ನೀಡಿವೆ. ಆದರೆ, ವಿವಾದಕ್ಕೆ ಕಾರಣವಾಗುವ ಹಾಗೂ ಪ್ರಶ್ನಾರ್ಹವಾಗುವ ಒಂದಿಷ್ಟು ಅಂಶಗಳು ಕೂಡ ಈ ಮಾರ್ಗಸೂಚಿಗಳಲ್ಲಿ ಇವೆ. ಇವುಗಳಲ್ಲಿ ಇರುವ ಸೂಚನೆಗಳು ಅಸ್ಪಷ್ಟವಾಗಿರುವ ಕಾರಣ ಅವು ದೇಶದ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಾಧ್ಯತೆಯೂ ಇದೆ. ಮಾರ್ಗಸೂಚಿಗಳಲ್ಲಿ ಹೇಳಿರುವ ಕೆಲವು ಅಂಶಗಳ ಪ್ರಕಾರ, ದೇಶದಲ್ಲಿ ಟಿ.ವಿ. ವಾಹಿನಿಗಳು ‘ಸಾರ್ವಜನಿಕ ಒಳಿತು ಹಾಗೂ ರಾಷ್ಟ್ರದ ಹಿತಾಸಕ್ತಿ’ಗೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರತಿದಿನ ಕನಿಷ್ಠ 30 ನಿಮಿಷಗಳ ಅವಧಿಗೆ ಪ್ರಸಾರ ಮಾಡಬೇಕಾಗುತ್ತದೆ. ಈ ಕಾರ್ಯಕ್ರಮಗಳು ಎಂಟು ವಿಷಯಗಳಿಗೆ ಸಂಬಂಧಿಸಿರಬೇಕು. ಇವುಗಳನ್ನು ಪ್ರಸಾರ ಮಾಡಬೇಕಿರುವುದು ಕಡ್ಡಾಯ. ಶಿಕ್ಷಣ ಮತ್ತು ಸಾಕ್ಷರತೆಯ ಪ್ರಸಾರ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರ ಅಭಿವೃದ್ಧಿ, ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿ, ಪರಿಸರ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ರಾಷ್ಟ್ರೀಯ ಭಾವೈಕ್ಯ ಆ ಎಂಟು ವಿಷಯಗಳು. ‘ತರಂಗಾಂತರಗಳು ಸಾರ್ವಜನಿಕ ಆಸ್ತಿಯಾಗಿರುವ ಕಾರಣ ಅವುಗಳನ್ನು ಸಮಾಜದ ಹಿತಾಸಕ್ತಿಗೆ ಹೆಚ್ಚು ಪೂರಕವಾಗುವ ರೀತಿಯಲ್ಲಿ ಬಳಸಬೇಕು’ ಎಂಬುದು ಮಾರ್ಗಸೂಚಿಯಲ್ಲಿನ ಈ ಬಗೆಯ ನಿರ್ದೇಶನಕ್ಕೆ ನೀಡಿರುವ ಸಮರ್ಥನೆ.

ಸರ್ಕಾರ ಆಯ್ಕೆ ಮಾಡಿರುವ ಎಂಟು ವಿಷಯಗಳಲ್ಲಿ ಆಕ್ಷೇಪಿಸುವಂಥದ್ದು ಮೇಲ್ನೋಟಕ್ಕೆ ಏನೂ ಇಲ್ಲ. ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಪ್ರಚುರಪಡಿಸುವ ಆಲೋಚನೆ ಉತ್ತಮವೇ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ರಾಷ್ಟ್ರೀಯ ಹಿತಾಸಕ್ತಿ’ ಅಂದರೆ ಏನು ಎಂಬುದಕ್ಕೆ ಬೇರೆ ಬೇರೆ ಸಂಸ್ಥೆಗಳು ಹಾಗೂ ವ್ಯಕ್ತಿಗಳು ವಿಭಿನ್ನ ವ್ಯಾಖ್ಯಾನ ನೀಡಬಹುದು. ಸರ್ಕಾರದ ಭಾಗವಾಗಿರುವವರಿಗೆ ರಾಷ್ಟ್ರೀಯ ಹಿತಾಸಕ್ತಿ ಅಂದರೆ ಸರ್ಕಾರದ ಕಾರ್ಯಕ್ರಮಗಳಿಗೆ, ನಿರ್ದಿಷ್ಟ ಸಿದ್ಧಾಂತಗಳಿಗೆ ಪ್ರಚಾರ ನೀಡುವುದಾಗಿರ ಬಹುದು. ಆಡಳಿತ ಪಕ್ಷದವರಿಗೆ ತನ್ನ ದೃಷ್ಟಿಕೋನ ಗಳನ್ನು ಪ್ರಚಾರ ಮಾಡುವುದೇ ರಾಷ್ಟ್ರೀಯ ಹಿತಾಸಕ್ತಿ ಅನ್ನಿಸಬಹುದು. ‘ರಾಷ್ಟ್ರೀಯ ಹಿತಾಸಕ್ತಿ’ಯ ಸ್ವರೂಪ, ಸರ್ಕಾರ ಅದರ ಬಗ್ಗೆ ಹೊಂದಿರುವ ಅಭಿಪ್ರಾಯ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ವಿಮರ್ಶಿಸುವುದು ಮಾಧ್ಯಮಗಳ ಕರ್ತವ್ಯದ ಭಾಗ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಸೋತಿದ್ದರೆ, ಅದನ್ನು ಹೇಳುವುದು ಕೂಡ ಮಾಧ್ಯಮಗಳ ಹೊಣೆಯಾಗುತ್ತದೆ. ಆದರೆ, ಮಾರ್ಗಸೂಚಿಗಳಲ್ಲಿ ಹೇಳಿರುವ ಪ್ರಕಾರ ಇಲ್ಲಿ ಸರ್ಕಾರವೇ ಎಲ್ಲವನ್ನೂ ತೀರ್ಮಾನಿಸಲಿದೆ. ‘ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮಗಳ ಪ್ರಸಾರಕ್ಕೆ ಕಾಲಕಾಲಕ್ಕೆ ಸಾಮಾನ್ಯ ನಿರ್ದೇಶನಗಳನ್ನು ಟಿ.ವಿ. ವಾಹಿನಿಗಳಿಗೆ ನೀಡಲಿದೆ. ಅವುಗಳನ್ನು ವಾಹಿನಿಗಳು ಪಾಲಿಸಬೇಕು’ ಎಂದು ಅದು ಹೇಳುತ್ತದೆ. ಪಾಲಿಸದೇ ಇದ್ದರೆ ಅಂತಹ ವಾಹಿನಿಗಳಿಂದ ವಿವರಣೆ ಕೇಳಲಾಗುತ್ತದೆ. ಅದಾದ ನಂತರದಲ್ಲಿ ಕ್ರಮ ಜರುಗಿಸುವ ಸಾಧ್ಯತೆಯೂ ಇರುತ್ತದೆ.

ಮಾರ್ಗಸೂಚಿಗಳನ್ನು ಪಾಲಿಸುವಾಗ ಟಿ.ವಿ. ವಾಹಿನಿಗಳು ತಮ್ಮ ವಸ್ತು–ವಿಷಯದಲ್ಲಿ ಸೂಕ್ತ ಬದಲಾವಣೆ ತಂದುಕೊಳ್ಳಲು ಅವಕಾಶ ಇದೆ ಎಂದು ಸರ್ಕಾರ ಹೇಳಿದೆ. ಆದರೆ, ಅವು ಹೇಗೆ ಬದಲಾವಣೆ ತರುತ್ತವೆ ಎಂಬ ಬಗ್ಗೆ ಸರ್ಕಾರವು ನಿಗಾ ಇರಿಸಲಿದೆ ಎನ್ನುವುದು ಸ್ಪಷ್ಟ. ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಟಿ.ವಿ. ವಾಹಿನಿಗಳು ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ಬಗ್ಗೆ ‘ಸಕಾರಾತ್ಮಕ’ ಚಿತ್ರಣ ನೀಡುವ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡಬೇಕಾದ ಸಂದರ್ಭವನ್ನು ಇದು ಸೃಷ್ಟಿಸಬಹುದು. ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಅವು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಪರಿಸ್ಥಿತಿ ಎದುರಾಗಬಹುದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಅಭಿವೃದ್ಧಿ ಮತ್ತು ಶಿಸ್ತಿನ’ ನೆಪದಲ್ಲಿ ಸರ್ಕಾರಿ ಟಿ.ವಿ. ವಾಹಿನಿಗಳು ಮಾಡಿದ್ದನ್ನು, ಇಂಥದ್ದನ್ನೇ ಮಾಡಿ ಎಂದು ಪತ್ರಿಕೆಗಳ ಮೇಲೆ ಒತ್ತಡ ತಂದಿದ್ದನ್ನು ಇವೆಲ್ಲ ನೆನಪಿಸುವಂತಿವೆ. ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಹೇರುವ ಯಾವುದೇ ಬಗೆಯ ಆಲೋಚನೆ ಸರಿಯಲ್ಲ. ಅಂತಹ ಆಲೋಚನೆಗಿಂತ ಮಾಧ್ಯಮಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಡುವುದು ಒಳ್ಳೆಯ ಕೆಲಸವಾಗುತ್ತದೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸರ್ಕಾರಕ್ಕೆ ಹೇಗಿದ್ದರೂ ತನ್ನದೇ ಆದ ವ್ಯಾಪಕವಾದ ಟಿ.ವಿ. ಮತ್ತು ರೇಡಿಯೊ ಜಾಲ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.