ಕೋವಿಡ್ ಪಿಡುಗು ದೇಶವನ್ನು ಆವರಿಸುವ ಮುನ್ನವೇ ಇದ್ದ ಆರ್ಥಿಕ ಹಿನ್ನಡೆ, ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಘೋಷಿಸಿದ ಲಾಕ್‌ಡೌನ್ ಮತ್ತು ಅದರಿಂದಾದ ಜೀವನೋಪಾಯ ನಷ್ಟದಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಈ ಸಂಕಷ್ಟದ ಸ್ಥಿತಿಯಿಂದ ಬದುಕನ್ನು ಮತ್ತೆ ಹಳಿಗೆ ತರಬೇಕು ಎನ್ನುವಷ್ಟರಲ್ಲಿ ಬೆಲೆ ಏರಿಕೆಯ ಹೊಡೆತಕ್ಕೆ ಜನರು ತತ್ತರಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ನಿತ್ಯದ ರೂಢಿ ಎಂಬಂತಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಮುಂದುವರಿಯುತ್ತಿದೆ. ಇದು, ಇತರ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿದೆ. ಅಡುಗೆ ಅನಿಲದ ದರವು ನಿರಂತರವಾಗಿ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗೃಹ ಬಳಕೆಯ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ದರವು ಫೆಬ್ರುವರಿ ಆರಂಭದಿಂದ ಈವರೆಗೆ ₹125 ಏರಿಕೆಯಾದುದರ ಹಿಂದಿನ ಕಾರಣವೇನು ಎಂಬುದೇ ಜನರಿಗೆ ಅರ್ಥವಾಗದ ಸ್ಥಿತಿ ಇದೆ. ಮಾಲಿನ್ಯವನ್ನು ತಗ್ಗಿಸಲು ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಯ ಉದ್ದೇಶದಿಂದಲೇ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶದ ಬಡಜನರಿಗೆ ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡುವ ಮೂಲಕ ಉರುವಲು ಬಳಕೆಯನ್ನು ತಗ್ಗಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಈಗ ಉಜ್ವಲಾ ಯೋಜನೆಯ ಅನಿಲ ಸಿಲಿಂಡರ್ ಬೆಲೆಯನ್ನೂ ಏರಿಸಲಾಗಿದೆ. ಉಜ್ವಲಾ ಯೋಜನೆಯಡಿಯಲ್ಲಿ ಸಿಕ್ಕ ಮೊದಲ ಸಿಲಿಂಡರ್‌ನ ಅನಿಲ ಮುಗಿದ ಬಳಿಕ ಹಲವು ಕುಟುಂಬಗಳು ಹೊಸ ಸಿಲಿಂಡರ್ ಪಡೆದುಕೊಳ್ಳುತ್ತಿಲ್ಲ ಎಂದು ಹಲವು ವರದಿಗಳು ಹೇಳಿವೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲದ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಿರಂತರ ದರ ಏರಿಕೆ ಮೂಲಕ ಜನರು ಎಲ್‌ಪಿಜಿ ಬಳಕೆಯಿಂದ ದೂರ ಸರಿಯುವಂತೆ ಸರ್ಕಾರವೇ ಮಾಡುತ್ತಿದೆ.

ಪೆಟ್ರೋಲಿಯಂ ಉತ್ಪನ್ನಗಳಿಗೆ (ಎಲ್‌ಪಿಜಿ ಮತ್ತು ಸೀಮೆ ಎಣ್ಣೆ) ಕೇಂದ್ರ ಸರ್ಕಾರವು ನೀಡುತ್ತಿದ್ದ ಸಹಾಯಧನವನ್ನು ಬಹುತೇಕ ನಿಲ್ಲಿಸಲಾಗಿದೆ. ಕೋವಿಡ್ ತಡೆ ಲಾಕ್‌ಡೌನ್ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದ ಜನರಿಗೆ ಎಲ್‌ಪಿಜಿ ಪೂರೈಸಲು ಹೆಚ್ಚು ಹಣ ಬೇಕು ಎಂಬ ಕಾರಣಕ್ಕೆ ನಗರ ಪ್ರದೇಶದ ಜನರಿಗೆ ಎಲ್‌ಪಿಜಿ ಸಬ್ಸಿಡಿಯನ್ನು ತಡೆಹಿಡಿಯಲಾಗಿತ್ತು. ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತ ಬರುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಸಬ್ಸಿಡಿ ವಿಚಾರದಲ್ಲಿ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಒದಗಿಸುವುದು ಸರ್ಕಾರದ ಕೆಲಸ.ಒಂದೆರಡು ವರ್ಷಗಳಿಂದ ಪ್ರತೀ ತಿಂಗಳು ಎಲ್‌ಪಿಜಿ ದರವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಲಾಗಿದೆ. ಇದು, ಸಬ್ಸಿಡಿ ಹೊರೆ ಇಳಿಸಿಕೊಳ್ಳುವ ಜಾಣ್ಮೆಯ ನಡೆಯಾದರೂ, ಜನಪರವಾದ ಕ್ರಮ ಅಲ್ಲ ಎಂಬ ವಿಶ್ಲೇಷಣೆ ಇದೆ. ಜನರ ಸಂಕಷ್ಟದ ಸಮಯದಲ್ಲಿ ಆರ್ಥಿಕ ಲೆಕ್ಕಾಚಾರದ ಬದಲು ಮಾನವೀಯ ಅಂತಃಕರಣವನ್ನು ಸರ್ಕಾರ ತೋರಿಸಬೇಕು. ಆದರೆ, ಆ ಮನಃಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂಬುದನ್ನು ಈ ಬಾರಿಯ ಬಜೆಟ್ ಕೂಡ ತೋರಿಸುತ್ತದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಸಹಾಯಧನ ನೀಡಲು ಬಜೆಟ್‌ನಲ್ಲಿ ₹14,073 ಕೋಟಿ ತೆಗೆದಿರಿಸಲಾಗಿದೆ. ಕಳೆದ ಬಾರಿ ಈ ಬಾಬ್ತಿನಲ್ಲಿ ವೆಚ್ಚವಾದ ಮೊತ್ತವು ₹39,054 ಕೋಟಿ. ಈ ಎರಡು ಅಂಕಿಗಳನ್ನು ಹೋಲಿಸಿ ನೋಡಿದರೆ ಸರ್ಕಾರದ ಧೋರಣೆಯ ಅರಿವಾಗುತ್ತದೆ. ತೈಲ ಉತ್ಪಾದಕ ರಾಷ್ಟ್ರಗಳು ಪೂರೈಕೆಗೆ ಮಿತಿ ಹೇರಿಕೊಂಡಿರುವುದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಲು ಒಂದು ಕಾರಣ. ಡೀಸೆಲ್ ದರ ಏರಿಕೆಯು ಸಾಗಾಟ ವೆಚ್ಚವನ್ನು ಏರಿಸಿ, ಸಿಲಿಂಡರ್ ಬೆಲೆ ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ. ಆದರೆ, ಎಲ್‌ಪಿಜಿ ಸೇರಿದಂತೆ ಅತ್ಯಂತ ಅಗತ್ಯವಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಂತಹ ಅಸಾಮಾನ್ಯ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿ ಇರಿಸುವುದು ಸರ್ಕಾರಕ್ಕೆ ಅಸಾಧ್ಯವೇನೂ ಅಲ್ಲ. ಈಗಿನ ಸಂಕಷ್ಟದ ಸನ್ನಿವೇಶದಲ್ಲಿ, ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಹೈರಾಣಾಗುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯಿಂದ ಸರ್ಕಾರ ಜಾರಿಕೊಳ್ಳಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.