1973ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ರೋ ಮತ್ತು ವೇಡ್ ನಡುವಣ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಈಗ ಅಸಿಂಧುಗೊಳಿಸಲಾಗಿದೆ. ಇದು, ಅಮೆರಿಕದಲ್ಲಿ ಮಹಿಳೆಯರ ಹಕ್ಕುಗಳಿಗೆ ಆದ ಹಿನ್ನಡೆ. ಅಷ್ಟೇ ಅಲ್ಲ, ಪ್ರಜಾತಂತ್ರ ವ್ಯವಸ್ಥೆ ಇರುವ ಎಲ್ಲ ದೇಶಗಳ ಮಹಿಳೆಯರ ಹಕ್ಕುಗಳಿಗೆ ಮತ್ತು ಸ್ವಾತಂತ್ರ್ಯಕ್ಕೆ ಆದ ಹಿನ್ನಡೆಯೂ ಹೌದು. 1973ರ ತೀರ್ಪು ಅಮೆರಿಕದ ಮಹಿಳೆಯರಿಗೆ, ನಿರ್ದಿಷ್ಟ ಅವಧಿಯೊಳಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಕಲ್ಪಿಸಿತ್ತು. ಆದರೆ ಈಗ ಸುಪ್ರೀಂ ಕೋರ್ಟ್, ಹೊಸ ತೀರ್ಪಿನ ಮೂಲಕ 1973ರ ತೀರ್ಪಿನ ಸಿಂಧುತ್ವಕ್ಕೆ ಅಂತ್ಯ ಹೇಳಿದೆ. ಅಮೆರಿಕದ ರಾಜ್ಯಗಳು ಪ್ರತ್ಯೇಕ ಕಾನೂನು ಜಾರಿ ಮಾಡುವ ಮೂಲಕ, ನಿರ್ದಿಷ್ಟ ಅವಧಿಯವರೆಗಿನ ಗರ್ಭಪಾತವನ್ನು ನಿಷೇಧಿಸಬಹುದು ಎಂದು ಹೇಳಿದೆ. 1973ನೇ ಇಸವಿಯ ತೀರ್ಪನ್ನು ಎತ್ತಿಹಿಡಿದಿದ್ದ, 1992ರ ಪ್ಲಾನ್ಡ್ ಪೇರೆಂಟ್ಹುಡ್ ಮತ್ತು ಕೇಸಿ ನಡುವಿನ ಪ್ರಕರಣದ ತೀರ್ಪನ್ನು ಕೂಡ ಈಗಿನ ತೀರ್ಪು ಅಸಿಂಧುಗೊಳಿಸಿದೆ. ಒಂಬತ್ತು ಮಂದಿ ನ್ಯಾಯಮೂರ್ತಿಗಳು ಇದ್ದ ನ್ಯಾಯಪೀಠವು 6–3ರ ಬಹುಮತದ ಆಧಾರದಲ್ಲಿ ಈ ತೀರ್ಪು ನೀಡಿದೆ. ಇದರ ಪರಿಣಾಮವಾಗಿ ಅಮೆರಿಕದ ಶೇಕಡ 50ರಷ್ಟು ರಾಜ್ಯಗಳಲ್ಲಿ ಗರ್ಭಪಾತದ ಹಕ್ಕು ಮಹಿಳೆಯರಿಗೆ ಇರುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರದಲ್ಲಿ, ಗರ್ಭಪಾತವನ್ನು ಕಾನೂನುಬಾಹಿರ ಮಾಡುವ ಕಾನೂನನ್ನು ಹಲವು ರಾಜ್ಯಗಳು ಈಗಾಗಲೇ ಸಿದ್ಧಪಡಿಸಿ ಆಗಿದೆ. ಹಲವು ರಾಜ್ಯಗಳು ಹೊಸದಾಗಿ ನಿರ್ಬಂಧಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಅಮೆರಿಕದ ಮಹಿಳೆಯರು ಗರ್ಭಧಾರಣೆಗೆ ಸಂಬಂಧಿಸಿದಂತೆ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಬಹುದೀರ್ಘ ಅವಧಿಗೆ ಕಾನೂನು ಹಾಗೂ ಇತರ ಬಗೆಯ ಹೋರಾಟಗಳನ್ನು ನಡೆಸಿದ ಪರಿಣಾಮವಾಗಿ ರೋ ಮತ್ತು ವೇಡ್ ನಡುವಿನ ಪ್ರಕರಣದ ತೀರ್ಪು ಬಂದಿತ್ತು. ಇದರ ನಂತರ ಅಮೆರಿಕದ ಮಹಿಳೆಯರಿಗೆ ತಮ್ಮ ದೇಹದ ಮೇಲೆ ಹೆಚ್ಚಿನ ಅಧಿಕಾರ ಬಂದಂತೆ ಆಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಇತರ ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಇದು ಮಹಿಳೆಯರ ಪಾಲಿಗೆ ಬಹಳ ದೊಡ್ಡ ಜಯವಾಗಿತ್ತು. ವ್ಯಕ್ತಿಗತ ನೆಲೆಯಲ್ಲಿನ ಸ್ವಾಯತ್ತೆಯ ಪರಿಕಲ್ಪನೆಗೆ ನ್ಯಾಯಾಲಯ ನೀಡಿದ ಮೊಹರು ಎಂಬಂತೆಯೂ ಈ ತೀರ್ಪನ್ನು ಗ್ರಹಿಸಲಾಗಿತ್ತು. ಅಂದರೆ, ಪ್ರಭುತ್ವದ ಮಧ್ಯಪ್ರವೇಶ ಇಲ್ಲದೆ ವ್ಯಕ್ತಿಗೆ ತನ್ನ ದೇಹದ ಮೇಲೆ ಹೆಚ್ಚಿನ ಅಧಿಕಾರ ಇರುತ್ತದೆ ಎಂಬುದಾಗಿ ಇದನ್ನು ವ್ಯಾಖ್ಯಾನಿಸಲಾಗಿತ್ತು. ಈಗ ಈ ವಾದಕ್ಕೆ ಪೆಟ್ಟು ಬಿದ್ದಿದೆ. ಹಲವು ಬಗೆಯ ಸ್ವಾತಂತ್ರ್ಯಗಳ ಪೈಕಿ ಅತ್ಯಂತ ವೈಯಕ್ತಿಕವಾದ, ಅತ್ಯಂತ ಮೂಲಭೂತವಾದ ಸ್ವಾತಂತ್ರ್ಯವೊಂದನ್ನು ಪ್ರಭುತ್ವವು ಮೊಟಕುಗೊಳಿಸುವುದನ್ನು ಸರಿ ಎಂಬಂತೆ ಈಗಿನ ತೀರ್ಪು ಅರ್ಥೈಸಿದೆ. ಅಮೆರಿಕದಲ್ಲಿ ಈ ತೀರ್ಪಿನ ಕಾರಣದಿಂದಾಗಿ ಹಲವು ಬಗೆಯ ಸಾಮಾಜಿಕ, ರಾಜಕೀಯ ಪರಿಣಾಮಗಳು ಎದುರಾಗಬಹುದು. ಅಮೆರಿಕದ ಒಕ್ಕೂಟ ವ್ಯವಸ್ಥೆಯ ಮೇಲೆ ಕೂಡ ಇದು ಕೆಟ್ಟ ಪರಿಣಾಮ ಬೀರಬಹುದು ಎಂಬ ಮಾತು ಇದೆ. ಅಲ್ಲಿ ರಾಜ್ಯಗಳ ನಡುವೆ ಹೆಚ್ಚು ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆಗಳು ಇವೆ. ಮಹಿಳೆಯರ ಆರೋಗ್ಯದ ಮೇಲೆ, ಅತ್ಯಾಚಾರಕ್ಕೆ ತುತ್ತಾದವರ ಮೇಲೆ ಹಾಗೂ ಕೌಟುಂಬಿಕ ದೌರ್ಜನ್ಯಗಳಿಗೆ ಗುರಿಯಾದವರ ಮೇಲೆ ಇದರಿಂದಾಗಿ ಆಗುವ ಪರಿಣಾಮಗಳು ಗಣನೀಯವಾಗಿ ಇರಲಿವೆ. ಲಿವ್-ಇನ್ ಸಂಬಂಧದಲ್ಲಿ ಇರುವವರು ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಹೊಂದಿರುವ ಸ್ವಾತಂತ್ರ್ಯದ ಮೇಲೆಯೂ ಈ ತೀರ್ಪು ಗಂಭೀರ ಪರಿಣಾಮಗಳನ್ನು ಉಂಟುಮಾಡಲಿದೆ ಎಂಬ ಭೀತಿಯೂ ಇದೆ.

ಗರ್ಭಪಾತದ ಹಕ್ಕುಗಳ ವಿಚಾರವಾಗಿ ಸಂಪ್ರದಾಯವಾದಿಗಳ ಪ್ರತಿರೋಧ ಮತ್ತು ಇತರ ಹಕ್ಕುಗಳ ವಿಚಾರದಲ್ಲಿಯೂ ವ್ಯಕ್ತವಾಗುತ್ತಿರುವ ಪ್ರತಿರೋಧವು ಈಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಹೆಚ್ಚೆಚ್ಚು ಅನುಭವಕ್ಕೆ ಬರುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯು ಇಂಥದ್ದಕ್ಕೆಲ್ಲ ಇಂಬು ನೀಡಿತ್ತು. ಸಂಪ್ರದಾಯವಾದಿ ದೇಶಗಳಲ್ಲಿ ಒಂದಾಗಿರುವ ಐರ್ಲೆಂಡ್ ಕೂಡ ಜನಾಗ್ರಹಕ್ಕೆ ಮಣಿದು ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನುಗಳನ್ನು ಒಂದಿಷ್ಟು ಸಡಿಲಗೊಳಿಸುವ ಕೆಲಸವನ್ನು ಕೆಲವು ವರ್ಷಗಳ ಹಿಂದೆ ಮಾಡಿದೆ. ಆದರೆ, ಈಗ ಹಲವು ದೇಶಗಳಲ್ಲಿ ಸಂಪ್ರದಾಯವಾದಿ ಅಲೆಯ ಕಾರಣದಿಂದಾಗಿ ಸ್ವಾತಂತ್ರ್ಯದ ವಾತಾವರಣದ ಮೇಲೆ ಕರಿಮೋಡಗಳು ಆವರಿಸುತ್ತಿವೆ. ಸಾಂವಿಧಾನಿಕ ಹಕ್ಕುಗಳನ್ನು ಕಾಯುವ ವಿಚಾರದಲ್ಲಿ ಅಮೆರಿಕವು ಯಾವಾಗಲೂ ಮುಂಚೂಣಿಯಲ್ಲಿ ಇರುವ ದೇಶ. ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಮೇಲಿನ ಆಕ್ರಮಣವನ್ನು ತಡೆಯುವ ಅತ್ಯುತ್ತಮ ವ್ಯವಸ್ಥೆ ಅಲ್ಲಿದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಅಲ್ಲಿ ಪ್ರತಿಗಾಮಿ ವಿದ್ಯಮಾನಗಳು ನಡೆದಾಗ ಇತರ ದೇಶಗಳಲ್ಲಿಯೂ ಕಳವಳ ಮೂಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.