ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಅವರ ರಿಪಬ್ಲಿಕನ್ ಪಕ್ಷವು ಸೆನೆಟ್ ಮತ್ತು ಜನಪ್ರತಿನಿಧಿ ಸಭೆ ಎರಡರಲ್ಲೂ ಪ್ರಾಬಲ್ಯ ಸಾಧಿಸುವುದು ಕೂಡ ನಿಚ್ಚಳವಾಗಿದೆ. ಆದರೆ, ಫಲಿತಾಂಶವನ್ನು ಅಧಿಕೃತವಾಗಿ ಇನ್ನಷ್ಟೇ ಘೋಷಿಸಬೇಕಿದೆ. ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯು ಅತ್ಯಂತ ನಿಕಟವಾಗಿರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಸಮೀಕ್ಷೆಗಳ ಅಂದಾಜನ್ನು ಸಮರ್ಥಿಸುವಂತಹ ಫಲಿತಾಂಶ ಬಂದಿಲ್ಲ. ಅಮೆರಿಕವು ರಾಜಕೀಯವಾಗಿ, ಸೇನಾ ಬಲದಲ್ಲಿ ಮತ್ತು ಆರ್ಥಿಕವಾಗಿ ಬಹುದೊಡ್ಡ ಶಕ್ತಿ. ಟ್ರಂಪ್ ಗೆಲುವು ಜಗತ್ತಿನಲ್ಲಿ ಇನ್ನಷ್ಟು ಒಡಕಿಗೆ ಕಾರಣವಾಗಬಹುದು
ಎಂಬ ಆತಂಕ ಕೆಲವು ದೇಶಗಳಿಗೆ ಇದೆ; ಜೊತೆಗೆ ಮಹತ್ವದ ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಸಂಬಂಧಗಳು ಬದಲಾಗಬಹುದು ಎಂಬ ಕಳವಳವೂ ಇದೆ. ಹೀಗಾಗಿ, ಇಡೀ ಜಗತ್ತು ಚುನಾವಣೆಯನ್ನು ಕೌತುಕದಿಂದ ನೋಡಿತ್ತು. ಅಮೆರಿಕ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಮರಳಿ ಕಟ್ಟುವುದಾಗಿ ಟ್ರಂಪ್ ಭರವಸೆ ಕೊಟ್ಟಿದ್ದರು. ಅಮೆರಿಕದ ಬಗೆಗಿನ ಅವರ ಯೋಚನೆ ಅಲ್ಲಿನ ಮತದಾರರಿಗೆ ಹಿಡಿಸಿದೆ ಎಂಬುದನ್ನು ಫಲಿತಾಂಶವು ಸಾರಿ ಹೇಳಿದೆ.

ಅತಿರೇಕದ ಆಲೋಚನಾ ಕ್ರಮ ಮತ್ತು ವಾಚಾಳಿತನಕ್ಕೆ ಹೆಸರಾದ ಟ್ರಂಪ್ ಅವರು, ಹೆಚ್ಚು ಸಂಘಟನಾತ್ಮಕ ವ್ಯವಸ್ಥೆಯನ್ನು ಹೊಂದಿದ್ದರು. 2017ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೇ ತಮ್ಮ ಅತಿರೇಕದ ವಾದವನ್ನು ಜನರ ಮುಂದಿಟ್ಟು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಟ್ರಂಪ್ ಗೆಲುವು ಅಮೆರಿಕವು ಬಲಪಂಥೀಯ ಸಿದ್ಧಾಂತದೆಡೆಗೆ ಇನ್ನಷ್ಟು ವಾಲಿರುವುದನ್ನು ತೋರಿಸಿದೆ. ಈ ಸಿದ್ಧಾಂತವನ್ನು ಇನ್ನೂ ಹೆಚ್ಚು ಜನರ ಹತ್ತಿರ ಒಯ್ಯುವುದಕ್ಕೆ ಟ್ರಂಪ್ ಅವರ ಆಕ್ರಮಣಕಾರಿ ವ್ಯಕ್ತಿತ್ವವು ಪೂರಕವಾಗಿದೆ. ಕ್ರೈಸ್ತ ಧರ್ಮದ ಬಲಪಂಥೀಯವಾದಿಗಳು, ದೊಡ್ಡ ಉದ್ಯಮ ಸಂಸ್ಥೆಗಳು, ಆರ್ಥಿಕ ವಿಚಾರಗಳಲ್ಲಿ ರಕ್ಷಣಾತ್ಮಕ ನಿಲುವು ಹೊಂದಿರುವವರು, ಬಿಳಿಯರೇ ಶ್ರೇಷ್ಠ ಎಂದು ವಾದಿಸುವವರು, ಅಮೆರಿಕದಲ್ಲಿ ತಯಾರಿಕೆ ಕುಸಿತದಿಂದಾಗಿ ಹಿನ್ನಡೆಗೊಳಗಾದ ನೌಕರ ವರ್ಗದ ಬೆಂಬಲ ಅವರಿಗೆ ಇದೆ. ಚೀನಾ ವಿರೋಧ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು ಎಂಬ ವಾತಾವರಣವೂ ಅವರಿಗೆ ಪೂರಕವಾಗಿ ಒದಗಿಬಂದಿದೆ. ವಿಭಜನಕಾರಿ, ಸಹಮತವನ್ನು ತಿರಸ್ಕರಿಸುವ ಹಾಗೂ ಕಾನೂನುಪಾಲನೆ ಕುರಿತು ಅಸಡ್ಡೆ ಇರುವ ಟ್ರಂಪ್ ಅವರ ವ್ಯಕ್ತಿತ್ವವು ಅಮೆರಿಕನ್ನರಿಗೆ ಒಪ್ಪಿತವಾಗಿದೆ. ಅವರ ನಡವಳಿಕೆಯಲ್ಲಿ
ಇರುವ ಸಮಸ್ಯೆಗಳು ಹಾಗೂ ಇತರ ನಕಾರಾತ್ಮಕ ಅಂಶಗಳೂ ಅವರ ವಿರುದ್ಧ ಕೆಲಸ ಮಾಡಲಿಲ್ಲ.

ಡೆಮಾಕ್ರಟಿಕ್ ಪಕ್ಷಕ್ಕೆ ಅನನುಕೂಲಕರ ಪರಿಸ್ಥಿತಿ ಆರಂಭದಿಂದಲೇ ಇತ್ತು; ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಪರ್ಧೆಗೆ ವಿಳಂಬವಾಗಿ ಪ್ರವೇಶಿಸಿದರು. ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನು ಮತ್ತು ಬಂದೂಕು ನಿಯಂತ್ರಣದ ಭರವಸೆ, ಜನರಲ್ಲಿ ಇದ್ದ ನಿರಂಕುಶಾಧಿಪತ್ಯದ ಭೀತಿಯಂತಹ ವಿಚಾರಗಳು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ನೆರವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಈ ಯಾವ ವಿಚಾರವೂ ಮತದಾರನ ಮೇಲೆ ಪ್ರಭಾವ ಬೀರಿಲ್ಲ. ಉದಾರವಾದಿ ಪ್ರಜಾಪ್ರಭುತ್ವ ಎಂದು ಅಮೆರಿಕ ಎಷ್ಟೇ ಹೇಳಿಕೊಂಡರೂ ದೇಶವು ಮಹಿಳೆಯೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸುವ ಮನಃಸ್ಥಿತಿಗೆ ಇನ್ನೂ ತಲುಪಿಲ್ಲ ಎಂಬಂತೆ ಕಾಣಿಸುತ್ತಿದೆ. ವಲಸಿಗರ ಎರಡನೇ ತಲೆಮಾರಿನವರಾದ, ಬಿಳಿಯರಲ್ಲದ ಮಹಿಳೆಯು ಅಧ್ಯಕ್ಷೆಯಾಗಿ ಆಯ್ಕೆಯಾಗುವುದು ಇನ್ನೂ ಕ್ಲಿಷ್ಟಕರ. ಟ್ರಂಪ್ ಅವರ ಗೆಲುವು ಅಮೆರಿಕದ ಆಂತರಿಕ ರಾಜಕಾರಣದಲ್ಲಿ ಪಲ್ಲಟ ಉಂಟುಮಾಡಲಿದೆ. ಜೊತೆಗೆ, ಜಗತ್ತನ್ನು ಈಗ ಕಾಡುತ್ತಿರುವ ಮೂರು ಪ್ರಮುಖ ವಿಷಯಗಳಾದ ಉಕ್ರೇನ್ ಯುದ್ಧ, ಇಸ್ರೇಲ್–ಹಮಾಸ್ ಸಂಘರ್ಷ ಮತ್ತು ಜಾಗತಿಕ ತಾಪಮಾನ ಏರಿಕೆ ವಿರುದ್ಧದ ಹೋರಾಟದ ಮೇಲೆಯೂ ಪರಿಣಾಮ ಉಂಟು ಮಾಡಬಹುದು. ಕಮಲಾ ಹ್ಯಾರಿಸ್ ಗೆಲ್ಲುವುದಕ್ಕಿಂತ ಟ್ರಂಪ್ ಗೆಲ್ಲುವುದೇ ಭಾರತಕ್ಕೆ ಒಳಿತು ಎಂಬ ಭಾವನೆ ಕೆಲವರಲ್ಲಿತ್ತು. ಆದರೆ, ಇದಕ್ಕೆ ಯಾವ ಖಚಿತತೆಯೂ ಇಲ್ಲ. ಭಾರತಕ್ಕೆ ಒಳಿತಾಗಲಿದೆ ಎಂದು ಹೇಳಲು ಪೂರಕವಾದ ನಿದರ್ಶನಗಳು ಟ್ರಂಪ್ ಅವರ ಈ ಹಿಂದಿನ ಅಧ್ಯಕ್ಷ ಅವಧಿಯಲ್ಲಿ ಕಾಣಸಿಗುವುದಿಲ್ಲ. ದೇಶಗಳ ನಡುವಣ ಸಂಬಂಧವು ಅವುಗಳ ಹಿತಾಸಕ್ತಿಗಳು ಮತ್ತು ನೀತಿಯ ಒತ್ತಡಗಳ ಮೇಲೆ ಅವಲಂಬಿತವೇ ವಿನಾ ನಾಯಕರ ನಡುವಣ ವೈಯಕ್ತಿಕ ಸಂಬಂಧದ ಮೇಲೆ ಅಲ್ಲ. ಟ್ರಂಪ್ ಅವರ ವ್ಯಕ್ತಿತ್ವ ಮತ್ತು ನಡವಳಿಕೆಯಲ್ಲಿನ ಅಸ್ಥಿರತೆಯನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.