2005ರ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವ ವಿಚಾರದ ಬಗ್ಗೆ ಪ್ರತಿಪಕ್ಷಗಳು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿರುವುದು ಸಹಜ ಬೆಳವಣಿಗೆ. ಈ ಮಸೂದೆ, ಗುರುವಾರ (ಜುಲೈ19) ರಾಜ್ಯಸಭೆಯಲ್ಲಿಮಂಡನೆಯಾಗಬೇಕಿದ್ದುದನ್ನು ಮುಂದೂಡಲಾಗಿದೆ. ಕೇವಲ ₹10 ನೀಡಿ ರಾಷ್ಟ್ರದ ಯಾವುದೇ ಅಧಿಕಾರ ಕೇಂದ್ರದಿಂದ ಮಾಹಿತಿ ಪಡೆದುಕೊಳ್ಳುವುದನ್ನು ಭಾರತೀಯ ನಾಗರಿಕರಿಗೆ ಈ ಕಾಯ್ದೆ ಸಾಧ್ಯವಾಗಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಆರ್‌ಟಿಐ ಕಾಯ್ದೆ ಮಹತ್ವದ ಮೈಲುಗಲ್ಲು. ಆದರೆ, ರಾಜ್ಯ ಹಾಗೂ ಕೇಂದ್ರ ಮಾಹಿತಿ ಕಮಿಷನರ್‌ಗಳ ಅಧಿಕಾರ ಅವಧಿ ಹಾಗೂ ಅವರ ವೇತನಗಳನ್ನು ನಿಗದಿಪಡಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವ ಪ್ರಸ್ತಾವವನ್ನು ತಿದ್ದುಪಡಿ ಮಸೂದೆಯಲ್ಲಿ ಮಂಡಿಸಲಾಗಿರುವುದು ಈಗ ಕಳವಳಕ್ಕೆ ಕಾರಣವಾಗಿದೆ.

ಈಗ ಮಾಹಿತಿ ಕಮಿಷನರ್‌ಗಳು ಐದು ವರ್ಷಗಳ ಅಧಿಕಾರ ಅವಧಿ ಹೊಂದಿದ್ದಾರೆ. ಅಲ್ಲದೆ ಚುನಾವಣಾ ಕಮಿಷನರ್‌ಗಳಿಗೆ ಸಮಾನವಾಗಿ ವೇತನ ಪಡೆಯುತ್ತಿದ್ದಾರೆ. ನಿಗದಿತ ಅಧಿಕಾರ ಅವಧಿ ಹಾಗೂ ಇಂತಹ ಉನ್ನತ ಸ್ಥಾನಮಾನ ನೀಡಿಕೆಯ ಉದ್ದೇಶ, ಈ ಸಾಂಸ್ಥಿಕ ವ್ಯವಸ್ಥೆಯ ಸ್ವಾಯತ್ತೆ ಉಳಿಸುವುದಾಗಿದೆ. ‘ಚುನಾವಣಾ ಕಮಿಷನರ್‌ಗಳ ಸ್ಥಾನಕ್ಕೆ ಎತ್ತರಿಸುವುದು ಅಗತ್ಯ’ ಎಂದು ಆರ್‌ಟಿಐ ಮೂಲ ಮಸೂದೆಯನ್ನು 2004ರಲ್ಲಿ ವಿಶ್ಲೇಷಿಸಿದ್ದ ಸಂಸದೀಯ ಸ್ಥಾಯಿ ಸಮಿತಿಯೇ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳುವುದು ಅಗತ್ಯ. ಆಯೋಗ ಹಾಗೂ ಅದರ ಸಿಬ್ಬಂದಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇದು ಬೇಕೇಬೇಕು ಎಂದು ಸಮಿತಿ ಪ್ರತಿಪಾದಿಸಿತ್ತು. ಆದರೆ ಈಗಿನ ಹೊಸ ಪ್ರಸ್ತಾವ, ಈ ವ್ಯವಸ್ಥೆಗೆ ಕುಂದು ತರಲಿದೆ ಎಂಬಂತಹ ಕಳವಳ ಸಹಜವಾದುದು. ತಿದ್ದುಪಡಿ ಮಸೂದೆ ಜಾರಿಯಾದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ದಾರಿಯಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಲಾಗದು.

ಈ ಐತಿಹಾಸಿಕ ಕಾನೂನು, ಯುಪಿಎ ಆಡಳಿತ ಅವಧಿಯಲ್ಲಿ ಜಾರಿಯಾಗಿತ್ತು. ಆದರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಕಾನೂನು ರಚನೆಯ ಪ್ರಯತ್ನಗಳು ಅದಕ್ಕೂ ಹಿಂದಿನಿಂದಲೇ ಆರಂಭವಾಗಿದ್ದವು ಎಂಬುದನ್ನೂ ನೆನಪಿಸಿಕೊಳ್ಳಬೇಕು. ಈ ಪ್ರಯತ್ನಗಳು ಸಫಲವಾಗಿದ್ದೇ ದೊಡ್ಡ ಸಾಧನೆ. ಆದರೆ ಈಗ ಈ ಕಾನೂನು ದುರ್ಬಲಗೊಳಿಸುವ ಪ್ರಯತ್ನ ವಿಷಾದನೀಯ. ತಿದ್ದುಪಡಿ ಮಸೂದೆ ಮಂಡನೆಯ ನಂತರ ಅದನ್ನು ಸಂಸತ್‌ನ ಪರಿಶೀಲನಾ ಸಮಿತಿಗೆ ಹೆಚ್ಚಿನ ಪರಿಶೀಲನೆಗೆ ಕಳಿಸಬೇಕು ಎಂಬಂತಹ ಪ್ರತಿಪಕ್ಷಗಳ ಸಲಹೆಗೆ ಸರ್ಕಾರ ಬೆಲೆ ಕೊಡಬೇಕು. 2014ರಲ್ಲಿ ಅಳವಡಿಸಿಕೊಳ್ಳಲಾದ ಸರ್ಕಾರದ ಶಾಸನಪೂರ್ವ ಸಮಾಲೋಚನಾ ನೀತಿಯ ಪ್ರಕಾರ, ಎಲ್ಲಾ ಕರಡು ಮಸೂದೆಗಳನ್ನು ಅವುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು 30 ದಿನಗಳ ಕಾಲ ಸಾರ್ವಜನಿಕ ಅವಗಾಹನೆಗೆ ಬಿಡಬೇಕು. ಆದರೆ ಈ ತಿದ್ದುಪಡಿ ಮಸೂದೆ ವಿಚಾರದಲ್ಲಿ ಈ ನೀತಿ ಪಾಲನೆಯಾಗಿಲ್ಲ ಎಂಬ ಟೀಕೆಗಳಿವೆ.

ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಷ್ಟೇ ನಿರ್ದೇಶನ ನೀಡಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಾಗೂ ಕೇಂದ್ರ ಮಾಹಿತಿ ಆಯೋಗಗಳಲ್ಲಿ ಹುದ್ದೆಗಳು ಖಾಲಿ ಇವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿವರಿಸಲಾಗಿತ್ತು. ರಾಜ್ಯದ ಮಾಹಿತಿ ಆಯೋಗದಲ್ಲೂ 6 ಹುದ್ದೆಗಳು ಖಾಲಿ ಇವೆ. ಜೊತೆಗೆ ಸುಮಾರು 33,000 ಅರ್ಜಿಗಳು ನಿರ್ವಹಣೆಗೆ ಕಾದಿವೆ ಎಂಬುದನ್ನೂ ಈ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಈಗ ಕಾಯ್ದೆಯನ್ನೇ ದುರ್ಬಲಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರವನ್ನು ಅವಲಂಬಿಸುವಂತಹ ಸ್ಥಿತಿ ಸೃಷ್ಟಿಸುವುದು ರಾಜಕೀಯ ಪ್ರಭಾವಗಳಿಗೆ ಗುರಿಯಾಗುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆರ್‌ಟಿಐ ಕಾಯ್ದೆಯ ಉದ್ದೇಶವೇ ಇದರಿಂದ ಸೋಲುತ್ತದೆ. ಇದು ತಪ್ಪಬೇಕು. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ನೀಡುವುದು ಅಗತ್ಯ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮಾಹಿತಿ ಪ್ರಸರಣವೂ ಉತ್ತಮಗೊಳ್ಳಬೇಕು ಎಂಬುದನ್ನು ಅರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.