ಪರಿಶಿಷ್ಟ ಜಾತಿಗಳೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನೀಡಲಾಗಿತ್ತು. ಈಗ, ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿ ಇದ್ದ ಗೊಂದಲವನ್ನು ಪರಿಹರಿಸಿದೆ. ಒಳಮೀಸಲಾತಿ ನೀಡಿಕೆಯು ಸಂವಿಧಾನ ಕಲ್ಪಿಸಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ; ಬದಲಿಗೆ, ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪರಿಶಿಷ್ಟ ಜಾತಿಯ ಸಮುದಾಯಗಳು ಸಮರೂಪದಲ್ಲಿಲ್ಲ ಮತ್ತು ಅವುಗಳಿಗೆ ‘ಅಗೋಚರ’ವಾದ ಏಕರೂಪವೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಜಾತಿಗಳ ಒಳಗೆ ಇರುವ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಇಂತಹ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಒಳಮೀಸಲಾತಿ ನೀಡಿದರೆ ಈತನಕ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಕೂಡ ಪ್ರಯೋಜನ ದೊರೆಯಬಹುದು.

ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳು ಒಳಮೀಸಲಾತಿ ನೀಡಲು ಈ ಹಿಂದೆ ಪ್ರಯತ್ನಿಸಿದ್ದವು. ಆದರೆ, ಈ ಪ್ರಯತ್ನಗಳಿಗೆ ನ್ಯಾಯಾಂಗವೇ ತಡೆ ಒಡ್ಡಿತ್ತು. ಒಳಮೀಸಲಾತಿ ಕಲ್ಪಿಸುವುದು ಬಹಳ ಸಂಕೀರ್ಣವಾದ ಕೆಲಸ. ಹಾಗಾಗಿ ಈ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕು. ಒಳಮೀಸಲಾತಿ ನೀಡಿಕೆಯು ಯಾರದೋ ಇಷ್ಟಾನಿಷ್ಟಗಳನ್ನು ಅವಲಂಬಿಸದೆ, ‘ಗಣನೀಯವಾದ ಮತ್ತು ಪ್ರಮಾಣೀಕರಿಸಬಹುದಾದ ದತ್ತಾಂಶ’ಗಳ ಆಧಾರದಲ್ಲಿ ನಿರ್ಧಾರವಾಗಬೇಕು. ಇದು ಬಹುದೊಡ್ಡ ಸವಾಲಿನ ಕೆಲಸ. ಪರಿಶಿಷ್ಟ ಜಾತಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಪಜಾತಿಗಳಿವೆ. ಒಪ್ಪಿತವಾದ ಮಾನದಂಡಗಳು ಮತ್ತು ವಿಧಾನಗಳ ಮೂಲಕ ತುಲನಾತ್ಮಕವಾಗಿ ಈ ಜಾತಿಗಳ ಹಿಂದುಳಿದಿರುವಿಕೆಯನ್ನು ನಿರ್ಣಯಿಸಬೇಕು. ಈ ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಶಿಕ್ಷಣಕ್ಕೆ ಸೀಮಿತವಾಗಿರಬಾರದು; ಸಾಮಾಜಿಕ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ. ರಾಜ್ಯಗಳಲ್ಲಿ ನೀಡಲಾಗುವ ಒಳಮೀಸಲಾತಿಯನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಬೇಕು ಎಂದಾದಾಗಲೂ ಬೇರೆ ಬೇರೆ ರಾಜ್ಯಗಳಲ್ಲಿ ಆ ಉಪಜಾತಿಗಳ ಹಿಂದುಳಿದಿರುವಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಏಕೆಂದರೆ, ಒಂದು ಗುಂಪಿನ ಸ್ಥಾನಮಾನವು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನವಾಗಿ ಇರಬಹುದು.

ಒಳಮೀಸಲಾತಿ ನೀಡುವುದಕ್ಕಾಗಿ ಸಮಗ್ರವಾದ ಗಣತಿಗಳನ್ನು ಮಾಡಬೇಕಾಗಬಹುದು. ಈ ಸನ್ನಿವೇಶದಲ್ಲಿ ಜಾತಿ ಜನಗಣತಿಯ ಬೇಡಿಕೆಯು ಮುನ್ನೆಲೆಗೆ ಬರುತ್ತದೆ. ರಾಜಕೀಯ ಮತ್ತು ಚುನಾವಣಾ ಲೆಕ್ಕಾಚಾರಗಳು ಇಲ್ಲಿ ತೊಡಕಾಗುವ ಅಪಾಯ ಇದ್ದೇ ಇದೆ. ಆದರೆ, ಅದು ಸಮರ್ಪಕವಾಗಿ ಒಳಮೀಸಲು ಹಂಚಿಕೆಗೆ ಅಡ್ಡ ಬಾರದಂತೆ ಎಚ್ಚರ ವಹಿಸಬೇಕು. ಕರ್ನಾಟಕದಲ್ಲಿ ಒಳಮೀಸಲಾತಿ ಕುರಿತಂತೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದರು. ಒಳಮೀಸಲು ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ಈಗ ತೆರೆ ಎಳೆದಿದೆ. ಈಗ ಇದನ್ನು ಜಾರಿಗೊಳಿಸುವುದಕ್ಕಾಗಿ ನೀತಿ ರೂಪಿಸಲು, ಯೋಜನೆ ತಯಾರಿಸಲು ರಾಜ್ಯಗಳಿಗೆ ಸಮಯಾವಕಾಶ ಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಗೆ ಕೆನೆಪದರ ನೀತಿ ಅನ್ವಯಿಸಬೇಕು. ಮೀಸಲಾತಿ ಪಡೆದು ಮುಂದಕ್ಕೆ ಬಂದವರನ್ನು ಮೀಸಲಾತಿಯಿಂದ ಹೊರಗೆ ಇರಿಸಬೇಕು ಎಂದೂ ಏಳು ನ್ಯಾಯಮೂರ್ತಿಗಳ ಪೈಕಿ ನಾಲ್ವರು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವೂ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.