ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

Published : 4 ಮೇ 2024, 23:30 IST
Last Updated : 4 ಮೇ 2024, 23:30 IST
ಫಾಲೋ ಮಾಡಿ
Comments
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು. ಅಮೆರಿಕದಲ್ಲಿ ಹುಟ್ಟಿ ಬೆಳೆದರೂ ಸಂಗೀತ ಸಾಧನೆಗಾಗಿ ಚೆನ್ನೈಗೆ ಬಂದು ನೆಲೆಸಿದ ಇವರು ನಾದದೊಂದಿಗೆ ತಮ್ಮ ಜೀವನ ರೂಪಿಸಿಕೊಂಡ ಪರಿ ಅನನ್ಯ. ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ರಾಮನವಮಿ ಉತ್ಸವದಲ್ಲಿ ಹಾಡಲು ಬಂದಿದ್ದ ಸಂದೀಪ್, ‘ಭಾನುವಾರದ ಪುರವಣಿ’ಯೊಂದಿಗೆ ತಮ್ಮ ಸಂಗೀತ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.
ಪ್ರ

ಅಮೆರಿಕದಲ್ಲಿ ಹುಟ್ಟಿ ಬೆಳೆದು ಕಾನೂನು ಪದವಿ ಪಡೆದ ನಿಮಗೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ನಂಟು ಬೆಳೆದದ್ದು ಹೇಗೆ?

ನಾನು ಹುಟ್ಟಿ ಬೆಳೆದದ್ದು ಕ್ಯಾಲಿಫೋರ್ನಿಯಾದಲ್ಲಿ ಆದರೂ ನನ್ನ ಕುಟುಂಬ ತಂಜಾವೂರು ಮತ್ತು ಕುಂಭಕೋಣಂ ಮೂಲದ್ದು. ಸಂಗೀತದ ಮೊದಲ ಗುರು ತಾಯಿ ವಿದುಷಿ ಶುಭಾ ನಾರಾಯಣ್. ಚಿಕ್ಕವನಿರುವಾಗಲೇ ಮನೆಯಲ್ಲಿ ಸಂಗೀತದ ಆಲಾಪವನ್ನು ಆಸ್ವಾದಿಸುತ್ತಲೇ ಬೆಳೆದೆ. ತಂದೆ ಕೆ.ಎಸ್‌. ನಾರಾಯಣ್‌, ಸಂಗೀತ ಕಛೇರಿ ಆಯೋಜಿಸುತ್ತಿದ್ದರು. ತಾಯಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸಹೋದರ ಮೃದಂಗ ಮತ್ತು ಕೊಳಲು ನುಡಿಸುತ್ತಿದ್ದ. ಹೀಗಾಗಿ ನಾನೂ ನಾಲ್ಕು ವರ್ಷ ಇರುವಾಗಲೇ ‘ಸರಿಗಮಪ’ದ ತಾಲೀಮು ಆರಂಭಿಸಿದೆ. ಸಂಗೀತದ ಮೇಲಿನ ನನ್ನ ಅತೀವ ಆಸಕ್ತಿಯನ್ನು ಗಮನಿಸಿದ ತಂದೆ ತಾಯಿ ನನ್ನನ್ನು ಹನ್ನೊಂದನೇ ವಯಸ್ಸಿಗೆ ಅಮೆರಿಕದಿಂದ ಚೆನ್ನೈಗೆ ಕರೆದು ತಂದರು. ಚೆನ್ನೈಯಲ್ಲಿ ವಿದ್ವಾನ್‌ ಕೆ.ಎಸ್‌. ಕೇಶವಮೂರ್ತಿ ಅವರ ಬಳಿ ಸುಮಾರು ಮೂರು ವರ್ಷ ಅಭ್ಯಾಸ ಮಾಡಿದೆ. ಅವರು ನಿಧನರಾದ ಬಳಿಕ ವಿದ್ವಾನ್ ಸಂಜಯ್ ಸುಬ್ರಹ್ಮಣ್ಯನ್ ಅವರ ಬಳಿ ಹದಿನೈದು ವರ್ಷಗಳ ಕಾಲ ಸಂಗೀತ ಕಲಿತೆ. ಚೆನ್ನೈಗೆ ಬಂದ ನಂತರ ಸುಮಾರು ಒಂದೂವರೆ ವರ್ಷ ಶಾಲೆಗೆ ಹೋಗಲೇ ಇಲ್ಲ. ಬರೀ ಸಂಗೀತ ಕಲಿಕೆಯಲ್ಲಿಯೇ ತೊಡಗಿಕೊಂಡಿದ್ದೆ. ಮುಂದೆ ಅಮೆರಿಕದಲ್ಲಿ ಕಾನೂನು ಪದವಿ ಪಡೆದೆ. ಕಾಲೇಜು ಬಳಿಕ ಮತ್ತೆ ಚೆನ್ನೈಗೆ ಮರಳಿ 2006ರಿಂದ ಸಂಗೀತವನ್ನೇ ವೃತ್ತಿಯನ್ನಾಗಿಸಿದೆ. ಏಳೆಂಟು ವರ್ಷಗಳಿಂದ ನನ್ನದೇ ಶೈಲಿಯನ್ನು ಗಾಯನದಲ್ಲಿ ರೂಢಿಸಿಕೊಂಡಿದ್ದೇನೆ.

ಪ್ರ

ಹಿಂದೂಸ್ತಾನಿ ಸಂಗೀತದ ‘ದುರ್ಗಾ’ ರಾಗ ನಿಮಗೆ ಅಚ್ಚುಮೆಚ್ಚು ಎಂದಿರಿ. ಈ ಭಕ್ತಿ ಪ್ರಧಾನ ರಾತ್ರಿ ರಾಗದ ಮೇಲೆ ಇಷ್ಟೊಂದು ಮೋಹ ಏಕೆ?

ಔಡವ–ಔಡವ ಸ್ವರೂಪಕ್ಕೆ ಸೇರಿದ ಕರ್ನಾಟಕ ಸಂಗೀತದ ಸುಪ್ರಸಿದ್ಧ ರಾಗ ‘ಶುದ್ಧ ಸಾವೇರಿ’ಗೆ ಸಮನಾದ ಹಿಂದೂಸ್ತಾನಿ ರಾಗ ದುರ್ಗಾ. ಈ ರಾಗವನ್ನು ಪಂಡಿತ ವೆಂಕಟೇಶ್ ಕುಮಾರ್‌ ಅವರು ಹಾಡಿದ್ದನ್ನು ಕೇಳಿದಾಗ ನಾನು ರೋಮಾಂಚನಗೊಂಡೆ, ಪ್ರಭಾವಿತನಾದೆ. ಅದಾಗಿ ರಾಗ ‘ದುರ್ಗಾ’ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಗಾಂಧಾರ ಮತ್ತು ನಿಷಾದ ಸ್ವರಗಳನ್ನು ಹೊರತುಪಡಿಸಿ ಇದರಲ್ಲಿ ಬರುವ ಎಲ್ಲ ಸ್ವರಗಳೂ ಶುದ್ಧ ಸ್ವರಗಳಾಗಿದ್ದು, ಇದೊಂದು ಪೂರ್ವಾಂಗ ಪ್ರಧಾನ ರಾಗ. ಇದೇ ರಾಗವನ್ನು ನಾನು ಬಹಳ ಸಲ ಕೇಳಿದ್ದೇನೆ. ಬೇರೆ ಬೇರೆ ಕಲಾವಿದರು ವಾದ್ಯಗಳಲ್ಲಿ ನುಡಿಸಿದ್ದನ್ನೂ ಆಲಿಸಿದ್ದೇನೆ. ದುರ್ಗಾ ರಾಗದಲ್ಲಿ ರಾಗ–ತಾನ–ಪಲ್ಲವಿ ಹಾಡಲು ಪ್ರಯತ್ನಿಸಿದ್ದೆ. ಈಗ ಹೆಚ್ಚಿನ ಕಡೆಗಳಿಂದ ಈ ರಾಗ ಹಾಡಲು ಬೇಡಿಕೆ ಬರುತ್ತಿದೆ. ಇದಲ್ಲದೆ ತೋಡಿ, ಭೈರವಿ, ಶಂಕರಾಭರಣ, ಕಾಂಬೋಧಿ, ಸಿಂಧು ಭೈರವಿ ಮುಂತಾದ ರಾಗಗಳನ್ನು ಸತತವಾಗಿ ಕೇಳುತ್ತೇನೆ. ಇವೇ ರಾಗಗಳಲ್ಲಿ ಸವಿಸ್ತಾರವಾದ ಆಲಾಪ ಮತ್ತು ಸ್ವರಪ್ರಸ್ತಾರ ಹಾಡಲು ನನಗಿಷ್ಟ. ಇಷ್ಟೇ ಅಲ್ಲದೆ, ಹಿಂದೂಸ್ತಾನಿ ಸಂಗೀತಗಾರರೊಂದಿಗೆ ಜುಗಲ್‌ಬಂದಿಯಲ್ಲೂ ಹಾಡಿದ್ದೇನೆ. ಮಹೇಶ್‌ ಕಾಳೆ, ಕೌಶಿಕಿ ಚಕ್ರವರ್ತಿ, ಜಯತೀರ್ಥ ಮೇವುಂಡಿ ಮುಂತಾದವರೊಂದಿಗೆ ನಾನು ಜುಗಲ್‌ಬಂದಿಯನ್ನೂ ನಡೆಸಿಕೊಟ್ಟಿದ್ದೇನೆ.

ಪ್ರ

‘ಮನೋಧರ್ಮ ಸಂಗೀತ’ ಕಲಾವಿದರಿಂದ ಕಲಾವಿದರಿಗೆ ವಿಭಿನ್ನವಾಗಿರುತ್ತದೆ. ಗಾಯಕನ ಸಾಮರ್ಥ್ಯ, ಚಾಕಚಕ್ಯತೆ ಅನಾವರಣಗೊಳ್ಳುವುದೇ ಅವರ ‘ಮನೋಧರ್ಮ’ದಿಂದ. ನಿಮ್ಮ ಗಾಯನ ಚತುರತೆ ಬಗ್ಗೆ ಹೇಳುವುದಾದರೆ...

ಶಾಸ್ತ್ರೀಯ ಸಂಗೀತದಲ್ಲಿ ‘ಮನೋಧರ್ಮ’ ಬಹಳ ಮುಖ್ಯ. ಲಯ ಜ್ಞಾನದೊಂದಿಗೆ ರಾಗ–ತಾಳ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಹಾಡಬೇಕು, ನೆರವಲ್, ಕಲ್ಪನಾಸ್ವರದಲ್ಲಿ ನಾವೀನ್ಯತೆ ಇರಬೇಕು. ಅದ್ಭುತ ಉಸಿರು ನಿಯಂತ್ರಣ ಸಾಮರ್ಥ್ಯಬೇಕು, ಕಛೇರಿಯಲ್ಲಿ ಕಳೆಕಟ್ಟುವ ಭಾಗವೇ ತನಿಯಾವರ್ತನ. ಇಲ್ಲಿ ಮುಖ್ಯ ಕಲಾವಿದನ ಜೊತೆಗೆ ಸಹಕಲಾವಿದರ ಸಾಮರ್ಥವನ್ನೂ ಒರೆಗೆ ಹಚ್ಚಲಾಗುತ್ತದೆ. ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಪಕ್ಕವಾದ್ಯಗಾರರೂ ನುಡಿಸಬೇಕಾಗುತ್ತದೆ. ಕೃತಿಗಳನ್ನು ಹಾಡುವಾಗ ಸಂಗೀತದ ಎಲ್ಲ ಆಯಾಮಗಳನ್ನು ಗಮನಿಸಿ ಹಾಡಬೇಕಾಗುತ್ತದೆ. ರಾಗಾಲಾಪದಿಂದ ಹಿಡಿದು ಕೃತಿಯ ಕೊನೆಯವರೆಗೂ ನಮ್ಮ ಸ್ವಂತಿಕೆಯನ್ನು ಕಾಪಾಡುತ್ತಾ ಹಾಡಿದರೆ ಕೇಳುಗರ ಹೃದಯ ಗೆದ್ದಂತೆ.

ಪ್ರ

ಸಂಗೀತದಲ್ಲಿ ಯಶ ಸಾಧಿಸಬೇಕಾದರೆ ರಿಯಾಜ್ ಬಹಳ ಮುಖ್ಯ. ನಿಮ್ಮ ಸಂಗೀತ ತಾಲೀಮು ಹೇಗಿರುತ್ತದೆ?

ಪರಿಶ್ರಮ ಇಲ್ಲದೆ ಯಾವುದೂ ಫಲ ಕೊಡದು. ಸಂಗೀತದ ವಿಷಯದಲ್ಲೂ ಅಷ್ಟೆ. ಸತತ ಪರಿಶ್ರಮ, ಶ್ರದ್ಧೆ, ಸಂಗೀತದ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವ ಹಸಿವು ಇದ್ದರೆ ಮಾತ್ರ ಈ ವಿದ್ಯೆ ಕೈಹಿಡಿಯುತ್ತದೆ. ಹೀಗಾಗಿ ನಾನು ದಿನದ ಯಾವ ಸಮಯದಲ್ಲಿಯಾದರೂ ರಿಯಾಜ್ ಮಾಡುತ್ತೇನೆ. ಚಿಕ್ಕವನಿರುವಾಗ ಐದಾರು ಗಂಟೆ ಅಭ್ಯಾಸ ಮಾಡ್ತಿದ್ದೆ. ಕೆಲವೊಮ್ಮೆ ಅರ್ಧ ಗಂಟೆ, ವಾರಾಂತ್ಯದಲ್ಲಿ ಎರಡು ಗಂಟೆ ಅಭ್ಯಾಸ ಮಾಡ್ತಿದ್ದೆ. 2006ರಲ್ಲಿ ಚೆನ್ನೈಗೆ ಬಂದ ಮೇಲೆ ನನ್ನ ಮನಸ್ಸು, ಗುರಿ ಎರಡೂ ಇದ್ದದ್ದು ಸಂಗೀತದ ಮೇಲೆ ಮಾತ್ರ. ಹೀಗಾಗಿ ನಾನು ದಿನಕ್ಕೆ ಐದಾರು ಗಂಟೆ ತಪ್ಪದೆ ಅಭ್ಯಾಸ ಮಾಡುತ್ತಿದ್ದೆ. ಕ್ಲಾಸ್‌ಗೆ ಹೋಗೋದು, ಅಭ್ಯಾಸ ಮಾಡೋದು, ಕಛೇರಿ ಕೇಳೋದು... ಒಟ್ಟಿನಲ್ಲಿ ಇಡೀ ದಿನ ಸಂಗೀತದಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದೆ. ಈಗ ದಿನಕ್ಕೆ ಒಂದು ಗಂಟೆ ಅಭ್ಯಾಸ ಮಾಡುತ್ತೇನೆ. ಕಛೇರಿ ಇರುವಾಗ ಪ್ರಯಾಣ ಮಾಡೋದೇ ಹೆಚ್ಚು ಇರುವುದರಿಂದ ಕಠಿಣ ರಿಯಾಜ್ ಸಾಧ್ಯವಾಗುತ್ತಿಲ್ಲ ಅಷ್ಟೆ.

ಪ್ರ

ಸಂಗೀತವು ಅಭ್ಯಾಸ, ಕಲಿಕೆಯಷ್ಟೇ ಅಲ್ಲದೆ ಕೇಳ್ಮೆಯಿಂದಲೂ ಆಳವಾದ ಸಂಗೀತ ಜ್ಞಾನ ಪಡೆಯಬಹುದು. ಇದು ನಿಮ್ಮ ಅನುಭವವೂ ಹೌದಾ?

ಖಂಡಿತಾ. ನಾನು ಚಿಕ್ಕಂದಿನಿಂದಲೇ ಸಂಗೀತ ಆಲಿಸುತ್ತಾ ಬೆಳೆದವನು. ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವಾಗಲೂ, ಎಲ್ಲಿಯೇ ಇರಲಿ ಹೆಡ್‌ಫೋನ್‌ ಹಾಕಿಕೊಂಡು ರಾಗಗಳನ್ನು ಕೇಳುತ್ತಿದ್ದೆ. ದಿಗ್ಗಜರ ಸಂಗೀತವನ್ನು ದಿನದ ಬಹುತೇಕ ಸಮಯ ಕೇಳುತ್ತಲೇ ರಾಗ, ತಾಳ, ಲಯದ ಬಗ್ಗೆ ತಿಳಿದುಕೊಂಡೆ. ಸ್ವರಾಲಾಪ, ಸಾಹಿತ್ಯ, ಚಿಟ್ಟೆಸ್ವರ ಸೇರಿದಂತೆ ಹಲವು ವಿಚಾರಗಳನ್ನು ಕಲಿತೆ. ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ಸಂಗೀತವನ್ನೂ ಕೇಳುತ್ತಿದ್ದೆ. ಪಂಡಿತ ಭೀಮಸೇನ ಜೋಶಿ, ರಶೀದ್‌ ಖಾನ್, ವೆಂಕಟೇಶ್ ಕುಮಾರ್‌ ಮುಂತಾದವರ ಗಾಯನವನ್ನು ಹೆಚ್ಚು ಇಷ್ಟಪಟ್ಟು ಕೇಳಿ ಆಸ್ವಾದಿಸಿದ್ದೇನೆ. ಇವೆಲ್ಲವೂ ನನಗೆ ಸಂಗೀತದಲ್ಲಿ ನನ್ನದೇ ಆದ ‘ಮನೋಧರ್ಮ’ವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT