ಕರ್ನಾಟಕ ರಾಜ್ಯೋತ್ಸವ ಸಮಾರಂಭಗಳು ಇನ್ನೇನು ಬಹಳ ಸಂಭ್ರಮದಿಂದ ನಡೆಯಲಿವೆ. ಈ ಸಂದರ್ಭದಲ್ಲಿ, ಕನ್ನಡ ಭಾಷೆಯ ಉಳಿವಿನ ಕುರಿತಂತೆ ನಾವು ವಿಶ್ಲೇಷಿಸಬೇಕಾದ ಹಲವಾರು ಆಯಾಮಗಳಾದ ಕಲಿಕಾ ಮಾಧ್ಯಮ, ಆಡಳಿತದಲ್ಲಿ ಬಳಕೆ, ಅಂತರ್ಜಾಲದಲ್ಲಿ ಲಭ್ಯತೆಯಂತಹ ಸಂಗತಿಗಳ ನಡುವೆ ಬಹಳ ಮುಖ್ಯವೆನಿಸುವುದು ಸಾಹಿತ್ಯ ಕೃಷಿ. ಯಾಕೆಂದರೆ, ಕನ್ನಡವೂ ಸೇರಿದಂತೆ ಯಾವುದೇ ಭಾಷೆಯನ್ನು ಜೀವಂತವಾಗಿ ಇಡುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಅದರಲ್ಲಿರುವ ಸತ್ವಭರಿತ ಸಾಹಿತ್ಯ.

ಆಯಾ ಕಾಲದ ಸಾಹಿತಿಗಳು ತಮ್ಮ ವಿಶಿಷ್ಟ ಸಾಹಿತ್ಯ ಕೃತಿಗಳ ಮೂಲಕ ಭಾಷಾ ಬಳಕೆಯ ಸೌಂದರ್ಯ ಹೆಚ್ಚಿಸುತ್ತಾರೆ ಮತ್ತು ಪ್ರಸ್ತುತವಾಗಿಸುತ್ತಾರೆ. ಹಾಗೆಯೇ, ಒಂದು ಭಾಷೆಯ ಸಾಹಿತ್ಯಕ್ಕೆ ಜೀವ ತುಂಬುವಲ್ಲಿ, ಬೇರೆ ಭಾಷೆಗಳ ಸಾಹಿತ್ಯದ ಭಾಷಾಂತರ ಕೃತಿಗಳು ಮಹತ್ತರ ಪಾತ್ರ ವಹಿಸುತ್ತವೆ. ಉದಾಹರಣೆಗೆ, ಬಿ.ಎಂ.ಶ್ರೀಕಂಠಯ್ಯ ಅವರ ‘ಇಂಗ್ಲಿಷ್ ಗೀತೆಗಳು’ ಕನ್ನಡ ಸಾಹಿತ್ಯಕ್ಕೆ ಹೊಸ ಜೀವ ತುಂಬಿದ ಹಾಗೆ, ಬೇರೆ ಭಾಷೆಗಳ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳನ್ನು ಅರಿತುಕೊಂಡು, ವಿಭಿನ್ನವಾಗಿ ಚಿಂತಿಸುವುದನ್ನು ಮತ್ತು ಬರೆಯುವುದನ್ನು ಅಭ್ಯಸಿಸುವುದು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ, ಆಯಾ ಭಾಷೆಯ ಇತಿಹಾಸದಲ್ಲಿ ಲಭ್ಯವಿರುವ, ಸಾರ್ವಕಾಲಿಕವಾಗಿ ಪ್ರಸ್ತುತವೆನಿಸುವ ವಿಶಿಷ್ಟ ಸಾಹಿತ್ಯ ಕೃತಿಗಳು ಮತ್ತು ಚಿಂತನೆಗಳ ಮರುಓದು ಕೂಡ ಅಷ್ಟೇ ಮುಖ್ಯ.

ಇವುಗಳ ನಡುವೆ ವರ್ತಮಾನ ಕಾಲದಲ್ಲಿ ಸಾಹಿತಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗೆ ಬಹಳ ಮುಖ್ಯವೆನಿಸುವ ಪ್ರಶ್ನೆಗಳೆಂದರೆ, ಪ್ರಸಕ್ತ ಚಾಲನೆಯಲ್ಲಿರುವ ಸಿದ್ಧಾಂತಗಳಿಗೆ ಹೇಗೆ ಸ್ಪಂದಿಸಬೇಕು? ಇವು ಸಾಹಿತ್ಯವನ್ನು ಮುನ್ನಡೆಸಲು ಪೂರಕವೇ ಅಥವಾ ಮಾರಕವೇ? ಒಂದು ಸಿದ್ಧಾಂತದಲ್ಲಿ ಗುರುತಿಸಿಕೊಂಡವರಿಗೆ, ಅನ್ಯ ಸಿದ್ಧಾಂತದವರು ಅಸ್ಪೃಶ್ಯರಾಗಬೇಕಾದ ಅಗತ್ಯವಿದೆಯೇ? ಓದುಗರು, ತಾವು ನೆಚ್ಚಿಕೊಂಡ ಸಿದ್ಧಾಂತಗಳ ಕನ್ನಡಕ ಹಾಕದೆ, ಅಭಿರುಚಿಗಾಗಿ ಮಾತ್ರ ಸಾಹಿತ್ಯ ಕೃತಿಗಳನ್ನು ಓದಲು ಅಥವಾ ಮೆಚ್ಚಲು ಸಾಧ್ಯವಿದೆಯೇ? ಈ ಪ್ರಶ್ನೆಗಳಿಗೆ ನಮ್ಮಲ್ಲಿ ಸಿದ್ಧ ಉತ್ತರವಿರಬಹುದು. ಆದರೂ, ಈ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೈಗೆತ್ತಿಕೊಳ್ಳುವುದು ಮತ್ತು ಚರ್ಚಿಸುವುದು, ಸಾಹಿತ್ಯದ ಭವಿಷ್ಯದ ದೃಷ್ಟಿಯಿಂದ ಒಂದು ಆರೋಗ್ಯಕರ ಬೆಳವಣಿಗೆಯಾಗಬಹುದು.

ಇತಿಹಾಸದ ಕಾಲಚಕ್ರದಲ್ಲಿ ವಿವಿಧ ಸಿದ್ಧಾಂತಗಳು ತಮ್ಮ ಪ್ರಾಬಲ್ಯ ಮತ್ತು ಹಿನ್ನಡೆ ಅನುಭವಿಸಿವೆ. ತಮ್ಮ ಸಿದ್ಧಾಂತದಲ್ಲಿ ಅಚಲ ವಿಶ್ವಾಸವಿಟ್ಟ ತತ್ವ ಶಾಸ್ತ್ರಜ್ಞರು, ಆವಿಷ್ಕಾರಿಗಳು ಮತ್ತು ಸಾಹಿತಿಗಳು ವಿರೋಧಿಗಳ ಆಕ್ರೋಶಗಳಿಗೆ ಬಲಿಯಾಗಿರುವುದು ಕೂಡ ನಡೆಯುತ್ತಾ ಬಂದಿದೆ. ಗ್ರೀಕ್ ತತ್ವಶಾಸ್ತ್ರಜ್ಞ ಸಾಕ್ರಟೀಸ್ ತಾನು ಕಂಡುಕೊಂಡ ಜೀವನತತ್ವಗಳನ್ನು ಯುವಜನತೆಗೆ ಮುಟ್ಟಿಸುವ ಪ್ರಯತ್ನಗಳನ್ನು ವಿರೋಧಿಸಿದ ಅಲ್ಲಿನ ರಾಜಕೀಯ ವ್ಯವಸ್ಥೆಯು ವಿಷ ಸೇವನೆಯ ಶಿಕ್ಷೆ ನೀಡಿದರೂ, ಅವನು ಧೈರ್ಯವಾಗಿ ಸ್ವೀಕರಿಸಿ ಪ್ರಾಣತ್ಯಾಗ ಮಾಡಿರುವುದು ಒಂದು ಧೀಮಂತ ಉದಾಹರಣೆ. ಇದರಿಂದ ಜಾಗೃತಗೊಂಡ ಅವನ ಮುಂದಿನ ಪೀಳಿಗೆಯ ಶಿಷ್ಯಂದಿರಾದ ಪ್ಲೇಟೊ ಮತ್ತು ಅರಿಸ್ಟಾಟಲ್ ಈ ಬಿಕ್ಕಟ್ಟನ್ನು ಬಹಳ ಎಚ್ಚರದಿಂದ ನಿಭಾಯಿಸಿದ್ದನ್ನು ಕಾಣುತ್ತೇವೆ.

ಜಗತ್ತಿನ ಶ್ರೇಷ್ಠ ನಾಟಕಕಾರನೆಂದು ಗುರುತಿಸಿಕೊಂಡ ಷೇಕ್ಸ್ಪಿಯರ್ ಕೂಡ ಧಾರ್ಮಿಕ ಸಂಘರ್ಷದ ಬಿಗಿ ವಾತಾವರಣದಲ್ಲೇ ಶ್ರೇಷ್ಠ ಸಾಹಿತ್ಯ ರಚಿಸಿದ ಎನ್ನುವುದು ಕೂಡ ವಿಸ್ಮಯ. ವ್ಯವಸ್ಥೆಯ ಪಾಲಕರು ಹಸ್ತಪ್ರತಿಯ ಮೇಲೆ ಕಣ್ಣಾಡಿಸಿ, ಅದರಲ್ಲಿ ವ್ಯವಸ್ಥೆಗೆ ಪ್ರತಿಕೂಲ ಹೇಳಿಕೆಗಳೇನಾದರೂ ಇವೆಯೇ ಎನ್ನುವುದನ್ನು ಕೂಲಂಕಷವಾಗಿ ಪರಿಶೀಲಿಸಿ ಒಪ್ಪಿಗೆ ಕೊಟ್ಟ ನಂತರವೇ ನಾಟಕಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗುತ್ತಿತ್ತು. ಕೊನೆಯ ನಾಟಕ ‘ದಿ ಟೆಂಪೆಸ್ಟ್’ನಲ್ಲಿ ಮಾತ್ರ ರಾಜ ಜೇಮ್ಸ್ಗೆ ಸಹಿಷ್ಣುತೆಯ ರಾಜಧರ್ಮವನ್ನು
ಬೋಧಿಸುತ್ತಾನೆ. ಉಳಿದೆಲ್ಲಾ ಕೃತಿಗಳಲ್ಲಿ, ಅವನು ಹೇಳಬೇಕಾದುದನ್ನು ಬಹಳ ಸೂಚ್ಯವಾಗಿ ಹೇಳಿದ್ದ. ಹೀಗಾಗಿ, 15-16ನೇ ಶತಮಾನದಲ್ಲಿ ಬದುಕಿದ ಷೇಕ್ಸ್ಪಿಯರ್ನ ಶ್ರೇಷ್ಠ ಸಾಹಿತ್ಯವನ್ನು ಬದಿಗಿರಿಸಿ, ಅವನು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿದ್ದ ಎಂದು ದೂಷಿಸಬಹುದೇ?

ವರ್ತಮಾನ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆನಿಸಿದರೂ ಹೆಚ್ಚಿನ ಸಂದರ್ಭಗಳಲ್ಲಿ ಅಧಿಕಾರಸ್ಥರ ಸಿದ್ಧಾಂತಕ್ಕೆ ಅನುಗುಣವಾಗಿ ಸಹಿಷ್ಣುತೆ ಅಥವಾ ಅಸಹಿಷ್ಣುತೆಯ ವಾತಾವರಣ ಇರುವುದನ್ನು ಸಾಹಿತಿಗಳು ಕಂಡುಕೊಳ್ಳುತ್ತಾರೆ.

ಮೂಲತಃ, ಯಾವುದೇ ಶ್ರೇಷ್ಠ ಸಾಹಿತ್ಯವು ಆಯಾ ಕಾಲದ ಪ್ರಜ್ಞೆ ಮತ್ತು ಆತ್ಮಸಾಕ್ಷಿಯನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಮನುಷ್ಯನಿಗೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಾಹಿತ್ಯವು ಬಹುತ್ವಕ್ಕೆ ಸ್ಥಾನ ಕಲ್ಪಿಸಿಕೊಡಬೇಕೆ ವಿನಾ ಏಕಮುಖ ಅಭಿಪ್ರಾಯಗಳನ್ನಷ್ಟೇ ಪೋಷಿಸಬಾರದು. ವಿಭಿನ್ನ ಚಿಂತನೆಗಳ ಸಂಯಮದ ಮುಖಾಮುಖಿ ಮತ್ತು ಚರ್ಚೆಯಿಂದ ಸಾಹಿತ್ಯ ಹರಿಯುವ ನದಿಯಾಗುತ್ತದೆ. ಅಣೆಕಟ್ಟುಗಳನ್ನು ಕಟ್ಟಿ, ಪರಸ್ಪರ ನಿಷೇಧ ಹೇರಿದರೆ, ನಿಂತ ನೀರಂತೆ ಸೊರಗುತ್ತದೆ. ಅಂತಿಮವಾಗಿ, ಇದು ನಾವೆಲ್ಲಾ ಪ್ರೀತಿಸುವ ಕನ್ನಡ ಭಾಷೆಗಾಗುವ ನಷ್ಟ.

ಕನ್ನಡ ಬೆಳೆಸುವ ಕಾಯಕಕ್ಕೆ ಎಡ ಮತ್ತು ಬಲ ಎರಡೂ ಕೈಗಳು ಬೇಕು. ಫ್ರೆಂಚ್ ತತ್ವಜ್ಞಾನಿ ವೋಲ್ಟೇರ್ ಹೇಳಿದಂತೆ, ‘ನಿನ್ನ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ, ಆದರೆ ಅದನ್ನು ಹೇಳುವ ನಿನ್ನ ಹಕ್ಕನ್ನು ನಾನು ಪ್ರಬಲವಾಗಿ ಸಮರ್ಥಿಸುತ್ತೇನೆ’ ಎನ್ನುವ ಮಾತು ಈಗ ಅತ್ಯಂತ ಪ್ರಸಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.