ಯುನೆಸ್ಕೊ ಪ್ರತಿವರ್ಷ ನವೆಂಬರ್ ತಿಂಗಳ ಮೂರನೇ ಗುರುವಾರವನ್ನು (ಈ ವರ್ಷ ನ. 17) ‘ವಿಶ್ವ ತತ್ವಶಾಸ್ತ್ರ ದಿನ’ವೆಂದು ಆಚರಿಸುತ್ತಿದೆ. ಈ ದಿನಾಚರಣೆಯ ಉದ್ದೇಶ, ಜಗತ್ತಿನಲ್ಲಿ ಪ್ರತೀ ವ್ಯಕ್ತಿಯ ಸ್ವತಂತ್ರ ಚಿಂತನೆಯನ್ನು ಉದ್ದೀಪಿಸುವುದು, ಅಂತರ್ ಸಾಂಸ್ಕೃತಿಕ ಅಧ್ಯಯನಕ್ಕೆ ಉತ್ತೇಜನ ನೀಡುವುದು ಮತ್ತು ಮನಸ್ಸಿನಲ್ಲಿ ಮೂಡುವ ಆಲೋಚನೆಗಳಿಗೆ ತರ್ಕಬದ್ಧವಾಗಿ ಮುಖಾಮುಖಿಯಾಗಿ, ನಮ್ಮ ಮುಂದಿರುವ ನಾನಾ ಗೋಜಲುಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುವುದೇ ಆಗಿದೆ. ಈ ವರ್ಷದ ಧ್ಯೇಯ ವಾಕ್ಯ, ‘ದಿ ಹ್ಯೂಮನ್ ಆಫ್ ದಿ ಫ್ಯೂಚರ್’ (ಭವಿಷ್ಯದ ಮನುಷ್ಯ). ಅಂದರೆ, ಭವಿಷ್ಯದ ಜಗತ್ತಿಗೆ ಮನುಷ್ಯರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು. ಈ ಸಂದರ್ಭದಲ್ಲಿ, ತತ್ವಶಾಸ್ತ್ರದ ಅರಿವು ನಮಗೇಕೆ ಅಗತ್ಯಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ ಎನಿಸುತ್ತದೆ.

ಗ್ರೀಕ್ ಭಾಷೆಯಲ್ಲಿ ‘ತತ್ವಶಾಸ್ತ್ರ’ (ಫಿಲಾಸಫಿ) ಎಂದರೆ ‘ವಿದ್ವತ್ತಿನ ಮೇಲಿನ ಪ್ರೀತಿ’ ಎಂದರ್ಥ. ನಾವು ಪಡೆಯುವ ಅತ್ಯುನ್ನತ ಪದವಿ ಪಿಎಚ್.ಡಿ (ಡಾಕ್ಟರ್ ಆಫ್ ಫಿಲಾಸಫಿ) ಕೂಡ ವಿಷಯವಾರು ಪರಿಪೂರ್ಣ ವಿದ್ವತ್ತನ್ನು ಸೂಚಿಸುತ್ತದೆ. ಮೂಲತಃ, ತತ್ವಶಾಸ್ತ್ರವು ತರ್ಕದ ಮೂಲಕ ಜಗತ್ತಿನಲ್ಲಿ ಮನುಷ್ಯನ ಜೀವನಾನುಭವವನ್ನು ಪ್ರಶ್ನಿಸಿ, ವಿಶ್ಲೇಷಿಸಿ, ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತದೆ. ನಮ್ಮ ತರ್ಕಬದ್ಧ ಆಲೋಚನೆಗಳಿಗೆ ಒಂದು ಸ್ಪಷ್ಟ ರೂಪ ಸಿಕ್ಕಿದಂತೆ ನಮ್ಮ ಓದು, ವಿಮರ್ಶೆ, ವಿಶ್ಲೇಷಣೆ, ಬರವಣಿಗೆಯಂತಹ ಪೂರಕ ಚಟುವಟಿಕೆಗಳ ಗುಣಮಟ್ಟವು ಸುಧಾರಿಸುತ್ತದೆ. ಈ ಮಾದರಿಯಲ್ಲಿ, ತತ್ವಶಾಸ್ತ್ರದ ಮೂಲಕ ವಿಷಯವನ್ನು ಗ್ರಹಿಸಲು ಶಕ್ತನಾದ ವ್ಯಕ್ತಿ, ಸರಿಯಾದ ಪ್ರಶ್ನೆಗಳನ್ನು ಕೇಳಲು ಪರಿಣತಿ ಪಡೆಯುತ್ತಾನೆ. ಅಲ್ಲದೆ, ಉಳಿದವರ ಅಪಕ್ವ ಗ್ರಹಿಕೆಯನ್ನು ಕೂಡ ಸ್ಪಷ್ಟವಾಗಿ ಗುರುತಿಸಬಲ್ಲ. ಮಾತ್ರವಲ್ಲ, ಜಗತ್ತಿನಲ್ಲಿ ಪರಿಪೂರ್ಣ ಸತ್ಯ ಎಂಬುದಿಲ್ಲ, ಇರುವುದು ವಿಭಿನ್ನ ವ್ಯಾಖ್ಯಾನಗಳಷ್ಟೇ ಎನ್ನುವ ಅರಿವು ಅವನಲ್ಲಿ ಜಾಗೃತವಾಗಿ, ತಾನೊಂದು ‘ಕೇವಲ ಬಿಂದು’ ಎನ್ನುವ ಸಹಜ ವಿನಮ್ರತೆ ಒಡಮೂಡುತ್ತದೆ. ಈ ಪ್ರಜ್ಞೆ, ವ್ಯಕ್ತಿಯನ್ನು ಪ್ರಾಪಂಚಿಕ ಹೊಗಳಿಕೆಗೆ ಹಿಗ್ಗಿಸದೆ, ತೆಗಳಿಕೆಗೆ ಕುಗ್ಗಿಸದೆ ಸ್ಥಿತಪ್ರಜ್ಞ ಸ್ಥಿತಿ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ತತ್ವಜ್ಞಾನವನ್ನು ಅರಗಿಸಿಕೊಳ್ಳದವರು ತಮ್ಮ ಪ್ರಾಪಂಚಿಕ ವ್ಯವಹಾರಗಳಲ್ಲಿ ಜೀವನದ ಖುಷಿಯನ್ನು ಹುಡುಕಬಹುದು. ಆದರೆ, ತತ್ವಜ್ಞಾನವನ್ನು ಅಂತರ್ಗತ ಮಾಡಿಕೊಂಡವರು, ಆಂತರಿಕವಾಗಿ ದೃಢತೆ ಕಂಡುಕೊಂಡು ಜೀವನವನ್ನು ಅರ್ಥಪೂರ್ಣವಾಗಿ ನಡೆಸುವ ಹಾದಿಯಲ್ಲಿ ಮುನ್ನಡೆಯುತ್ತಾರೆ.

ಸಮಾಜದ ಗೊಡವೆ ನನಗೇಕೆ, ನಾನು ಮತ್ತು ನನ್ನ ಸಂಸಾರ ವ್ಯವಸ್ಥಿತವಾಗಿ ಬದುಕಿದರಷ್ಟೇ ಸಾಕು ಎನ್ನುವ ಪ್ರಸಕ್ತ ವಾತಾವರಣದಲ್ಲಿ ನಮಗೆ ಎದುರಾಗುವ ಮುಖ್ಯ ಪ್ರಶ್ನೆಯೆಂದರೆ, ಜಗತ್ತಿನ ಹಂಗಿಲ್ಲದೆ ನನ್ನದೇ ಆದ ಪ್ರಪಂಚ ಕಟ್ಟಿಕೊಳ್ಳಬಹುದೇ? ಇದಕ್ಕೆ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ನ ಉತ್ತರವೆಂದರೆ, ‘ಯಾವುದೇ ವ್ಯಕ್ತಿ ಸಮಾಜದಲ್ಲಿ ತನಗೆ ಬದುಕಲು ಸಾಧ್ಯವಾಗುತ್ತಿಲ್ಲ ಅಥವಾ ತನಗೆ ಅದರ ಅಗತ್ಯವಿಲ್ಲ ಅಂದುಕೊಳ್ಳುವವನು ಒಂದೋ ಮೃಗವಾಗಿರುತ್ತಾನೆ ಅಥವಾ ದೇವರು ಆಗಿರುತ್ತಾನೆ’. ಅಂದರೆ, ಅವನು ಮನುಷ್ಯನಾಗಿರಲು ಸಾಧ್ಯವಿಲ್ಲ. ವ್ಯಕ್ತಿಗಳು ‘ಏಕಾಂತ ದ್ವೀಪ’ಗಳಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಪರಸ್ಪರ ವಿಚಾರ ವಿನಿಮಯಕ್ಕೆ ಹಚ್ಚುವ ತತ್ವಶಾಸ್ತ್ರದ ಓದು ಬಹಳ ಅಗತ್ಯ ಎನ್ನಬಹುದು.

ಅದೇ ರೀತಿ, ಆಸ್ಟ್ರಿಯಾದ ತತ್ವಜ್ಞಾನಿ ಲುಡ್ವಿಗ್ ವಿಟ್ಗೆನ್ಸ್ಟೈನ್ ಹೇಳುವಂತೆ, ‘ತತ್ವಶಾಸ್ತ್ರವುಭಾಷೆಯ ಮೂಲಕ ಹುಸಿ ಬುದ್ಧಿವಂತಿಕೆಯ ಪ್ರದರ್ಶನ ಮಾಡುವವರ ವಿರುದ್ಧದ ತಾರ್ಕಿಕ ಹೋರಾಟವಾಗಿದೆ’. ಯಾಕೆಂದರೆ, ತತ್ವಶಾಸ್ತ್ರವು ತರ್ಕಬದ್ಧವಲ್ಲದ ನುಡಿ ಸೊಗಸನ್ನು ತಿರಸ್ಕರಿಸುತ್ತದೆ. ಚೆನ್ನಾಗಿ ಮಾತು ಬಲ್ಲವರೆಲ್ಲಾ ತತ್ವಜ್ಞಾನಿಗಳಲ್ಲ. ಬದಲಾಗಿ ಪ್ರಶ್ನಿಸುವವರು. ಹಾಗಂತ, ಪ್ರಶ್ನಿಸುವವರೆಲ್ಲಾ ತತ್ವಜ್ಞಾನಿಗಳಲ್ಲ.ಬದಲಾಗಿ, ಸರಿಯಾದ ಪ್ರಶ್ನೆಗಳನ್ನು ಕೇಳುವವರು. ಅಂದರೆ, ಈ ಪ್ರಶ್ನೆಯ ಮೂಲವು ಜ್ಞಾನದ ಹುಡುಕಾಟ ಆಗಬೇಕೆ ವಿನಾ, ಅನ್ಯ ವ್ಯಕ್ತಿಗಳ ಮುಂದೆ ವಿದ್ವತ್ತಿನ ಹಿರಿಮೆಯ ಪ್ರದರ್ಶನವಲ್ಲ.

ಹಾಗಾಗಿ, ತತ್ವಶಾಸ್ತ್ರವನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿಯೇ ಅಳವಡಿಸಿಕೊಳ್ಳುವ ಅಗತ್ಯವಿದೆ. ವರ್ತಮಾನ ಕಾಲದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅತಿಯಾದ ಒಂಟಿತನ, ಹುಸಿ ನಿರೀಕ್ಷೆಗಳು, ಸೋಲನ್ನು ಒಪ್ಪಿಕೊಳ್ಳಲಾಗದ ಮನಃಸ್ಥಿತಿಯಂತಹ ಸಮಸ್ಯೆಗಳಿಗೆ ತತ್ವಶಾಸ್ತ್ರದ ಓದುವಿಕೆಯು ಸಂಯಮದಿಂದ ಬದುಕುವ ಕಲೆಯನ್ನು ಕಲಿಸುತ್ತದೆ. ಜೊತೆಗೆ, ನಮ್ಮಲ್ಲಿ ಆಗಾಗ ಮೂಡುವ ಪರಕೀಯತೆಯನ್ನು ದೂರ ಮಾಡುತ್ತದೆ. ಆದರೆ, ಇಂದು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ತತ್ವಶಾಸ್ತ್ರ ಬಹುತೇಕ ಮರೆಯಾಗಿ, ಅಲ್ಲಿ ವಿವಿಧ ಕೌಶಲ ತರಬೇತಿ ನೀಡುವ ಉದ್ಯೋಗ ಆಧಾರಿತ ಕೋರ್ಸ್ಗಳು ಸ್ಥಾನ ಪಡೆದಿವೆ. ಇವು ಉದ್ಯೋಗವನ್ನೇನೋ ದಯಪಾಲಿಸಬಹುದು, ಆದರೆ ಅರ್ಥಪೂರ್ಣವಾಗಿ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಲಾರವು.

ಬಹುಶಃ, ಪ್ರಸಕ್ತ ಸಮಾಜದಲ್ಲಿರುವ ವೈರುಧ್ಯಗಳ ಕುರಿತಾಗಿ ಆಗಾಗ ಹುಟ್ಟಿಕೊಳ್ಳುವ ಬಿಕ್ಕಟ್ಟುಗಳನ್ನು ತಾತ್ವಿಕ ಪ್ರಶ್ನೆಗಳ ಮೂಲಕ ತಾರ್ಕಿಕವಾಗಿ ವಿಮರ್ಶಿಸಿದರೆ, ಜಗತ್ತಿನಲ್ಲಿರುವ ಹಲವಾರು ತಡೆಗೋಡೆಗಳು ಉದುರಿಹೋದಾವು. ಆದರೆ, ಗ್ರಾಹಕ ಸಂಸ್ಕೃತಿಯ ಪ್ರಸಕ್ತ ಜಗತ್ತು ತತ್ವಶಾಸ್ತ್ರವನ್ನುಪ್ರೋತ್ಸಾಹಿಸುವುದಿಲ್ಲ. ಯಾಕೆಂದರೆ, ತತ್ವಶಾಸ್ತ್ರ ಸರಳಜೀವನಮಾರ್ಗವನ್ನು ಕಲಿಸುತ್ತದೆ. ಹೀಗಾದಲ್ಲಿ, ಬೃಹತ್ ಪ್ರಮಾಣದಲ್ಲಿ ನಮಗಾಗಿ ಉತ್ಪಾದನೆಯಾಗುವ ವಸ್ತುಗಳನ್ನು ಕೊಂಡುಕೊಳ್ಳುವವರು ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.