ಇದು ತಂತ್ರಜ್ಞಾನ ಯುಗ. ಆಧುನಿಕತೆಯ ಕುರುಹಾಗಿ, ಕೊಡುಗೆಯಾಗಿ ಬಂದೊದಗಿದ ಯಂತ್ರೋಪಕರಣಗಳೊಟ್ಟಿಗೆ ಬದುಕನ್ನು ಗಾಢವಾಗಿ ಬೆಸೆದುಕೊಂಡಿರುವ ಸಂದರ್ಭವಿದು. ಅತ್ಯಾಧುನಿಕ ಸೌಕರ್ಯಗಳೊಂದಿಗೆ ಆರಾಮದಾಯಕ ಜೀವನಶೈಲಿಗೆ ಆತುಕೊಂಡ ಪ್ರತಿಯೊಬ್ಬರೂ ಯಂತ್ರರಾಹಿತ್ಯ ಸನ್ನಿವೇಶವನ್ನು ಖಂಡಿತ ಊಹಿಸಲಾರರು. ‘ಅರ್ಧಗಂಟೆ ಕರೆಂಟು ಹೋದರೆ ಬದುಕಲಾರೆವು’ ಎಂಬಷ್ಟು ಯಾಂತ್ರಿಕಗೊಂಡ ಕಾಲಮಾನ ಎಂಬುದಂತೂ ಸತ್ಯ.

ಪ್ರಸ್ತುತ ಯಂತ್ರನಾಗರಿಕತೆಯಲ್ಲಿ ನಮ್ಮ ದಿನಚರಿ ಸರಾಗವಾಗಿದ್ದು, ಇಡೀ ದಿನದ ಕೆಲಸವನ್ನು ಯಂತ್ರಗಳು ಅರೆಗಳಿಗೆಯಲ್ಲಿ ಮಾಡಿ ಮುಗಿಸುತ್ತಿವೆ. ಸೌಲಭ್ಯಗಳು ಹೆಚ್ಚಿವೆ, ಬದುಕು ಬದಲಾಗಿದೆ. ಬೆರಳ ತುದಿಯಲ್ಲಿ ಬ್ರಹ್ಮಾಂಡ ತೆರೆದುಕೊಳ್ಳುತ್ತಿದೆ. ಪಟ್ಟಿ ಕೊಂಡೊಯ್ದು ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ, ಕಾಲಬುಡಕ್ಕೆ ಬೇಕಾದ್ದೆಲ್ಲ ಬಂದುಬೀಳುತ್ತವೆ. ಮನೆಕೆಲಸಕ್ಕೂ ಥರಥರದ ಮಷೀನುಗಳಿವೆ. ಬದಲಾಗುತ್ತಿರುವ ಕಾಲಘಟ್ಟದ ಕರೆಗೆ ಓಗೊಡುತ್ತಾ ಬಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ನಮ್ಮ ಮೂಲ ಸೌಲಭ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ಸಾರಿಗೆ-ಸಂಪರ್ಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಮಾಡಿವೆ. ಇದೀಗ ಯಾವ ಕ್ಷೇತ್ರಗಳನ್ನೂ ಬಾಕಿಬಿಡದೆ ದಾಂಗುಡಿ ಇಟ್ಟಿರುವ ಕಂಪ್ಯೂಟರೀಕೃತ ಸಾಧನಗಳು ಹತ್ತಾರು ಜನ ವಾರಗಟ್ಟಲೆ ಮಾಡಬಹುದಾದ ಕೆಲಸವನ್ನು ಒಪ್ಪತ್ತಿನಲ್ಲಿ ಚುಕ್ತಾ ಮಾಡುತ್ತಲಿವೆ. ಸರ್ಕಾರದ ಬಹುತೇಕ ಪ್ರತಿ ಇಲಾಖೆಯೂ ಕಂಪ್ಯೂಟರೀಕರಣಗೊಂಡಿದೆ.

ಉದ್ದಿಮೆಗಳಲ್ಲಿ ಉತ್ಪಾದನೆಯ ಪ್ರಮಾಣ, ಸಾಮರ್ಥ್ಯ, ಸಮಯ ಮತ್ತು ವೆಚ್ಚದಲ್ಲಿ ಗಣನೀಯ ಸುಧಾರಣೆಯಾಗಿದೆ. ಕೆಲಸದ ಸರಳೀಕರಣ, ಆರ್ಥಿಕ ಔನತ್ಯ, ಜೀವನಮಟ್ಟ ಸುಧಾರಣೆಯು ತಲಾ ಆದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವೇಗಕ್ಕೆ ಹೊಸ ಭಾಷ್ಯ ಬರೆದಿವೆ. ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ಪೂರೈಕೆ ಮತ್ತು ನಿರೀಕ್ಷೆಗೆ ಅನುಗುಣವಾಗಿ ಕಾರ್ಯನಿರ್ವಹಣೆಯು ಇದೀಗ ಸುಲಭಸಾಧ್ಯವಾಗಿದೆ.

ಆದರೆ ಮೊನ್ನೆ ತಮ್ಮ ಗತಕಾಲವನ್ನು ಇವತ್ತಿನ ಸಂದರ್ಭದಲ್ಲಿ ಮೆಲುಕುತ್ತಿದ್ದ ಹಳ್ಳಿಯ ಹಿರಿಜೀವವೊಂದರ ದಿಗಿಲಿಗೆ ಕಿವಿಯಾಗುತ್ತಿದ್ದಂತೆ ಒಳಗೊಂದು ಗೊಂದಲಭಾವ ಆವರಿಸಿತು. ಅವರೆಂದಿದ್ದು ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಕೈಯಲ್ಲಿ ಗುದ್ದಲಿ, ಹಾರೆ, ಕತ್ತಿ, ಕೊಡಲಿಗಳಷ್ಟೇ ಇದ್ದವು. ಹತ್ತಾರು ಜನ ಸೇರಿ ಬಯಲಿಗೆ ಬಂದು ನೆಲೆ ನಿಲ್ಲುವುದು, ಸಣ್ಣಭೂಮಿಯಲ್ಲಿ ಕೃಷಿಕಾರ್ಯ ಕೈಗೊಳ್ಳುವುದು ಮಹಾ ಸಾಧನೆ- ಸಾಹಸ ಅನಿಸಿಕೊಳ್ಳುತ್ತಿದ್ದವು. ಪ್ರಕೃತಿಯನ್ನು ನೆನೆದೇ ನಮ್ಮ ದಿನಚರಿ ಆರಂಭಗೊಳ್ಳುತ್ತಿತ್ತು. ‘ವೃಕ್ಷ ಕಡಿದವನು ಭಿಕ್ಷೆ ಬೇಡುತ್ತಾನೆ’ ಅಂತ ನಂಬಿಕೊಂಡವರು. ಗುದ್ದಲಿಯಿಂದ ಮಣ್ಣು ತೆಗೆವಾಗಲೂ ಭೂತಾಯಿಗೆ ನೋವಾಗಬಾರದು ಅಂತ ಕಾಳಜಿ ಮಾಡುತ್ತಿದ್ದವರು ನಾವು. ಈಗ ಹಾಗಿಲ್ಲ. ಜೆಸಿಬಿ ಯಂತ್ರ, ಬುಲ್ಡೋಜರ್ನಂತಹ ದೈತ್ಯ ರಾಕ್ಷಸರ ಪ್ರವೇಶದಿಂದ ನಮ್ಮ ಪರಿಸರ ನಲುಗಿಹೋಗಿದೆ. ಅವುಗಳ ರಣಹಸಿವು ರಾತ್ರಿ ಬೆಳಗಾಗುವುದರೊಳಗೆ ಎಕರೆಗಟ್ಟಲೆ ಕಾಡುಗುಡ್ಡಗಳನ್ನು ಮಂಗಮಾಯ ಮಾಡಿದೆ, ಕೆರೆಕಟ್ಟೆಗಳನ್ನೂ ಹೇಳಹೆಸರಿಲ್ಲದಂತೆ ನುಂಗಿಹಾಕಿದೆ. ದೈವಭಕ್ತಿ- ದೇಶಭಕ್ತಿಯ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರಾದರೂ ದೇವರ ನಿಜಸ್ವರೂಪವಾದ ಪ್ರಕೃತಿಯನ್ನು ಧ್ವಂಸ ಮಾಡುತ್ತಿರುವ ಬಗ್ಗೆ ಯಾರಲ್ಲೂ ಬೇಸರವಿಲ್ಲ!’

ತೀವ್ರಗತಿಯಲ್ಲಿ ಅರಣ್ಯನಾಶ ಮತ್ತು ಪರಿಸರ ಮಾಲಿನ್ಯಗೊಳ್ಳುತ್ತಿರುವ ಬಗ್ಗೆ ಹಿರಿಯರ ಮಾತುಗಳು ಹೊಮ್ಮಿಸಿದ ಆತಂಕವು ಚೀನೀ ಕತೆಯೊಂದನ್ನು ನೆನಪಿಗೆ ತಂತು. ಒಮ್ಮೆ ಹಾನ್ ನದಿದಂಡೆಯಲ್ಲಿ ಪ್ರಯಾಣ ಬೆಳೆಸಿದ್ದ ಸಂತ ತ್ಸು-ತುಂಗ್, ಮುದುಕನೊಬ್ಬ ಹೊಲದಲ್ಲಿ ತರಕಾರಿ ಏರಿಗಳಿಗೆ ನೀರುಣಿಸುತ್ತಿದ್ದುದನ್ನು ನಿಂತು ನೋಡಿದರು. ಬಾವಿಯಲ್ಲಿ ಇಳಿದು ಕೊಡದಲ್ಲಿ ನೀರು ತುಂಬಿಸಿ ಹೊತ್ತುತಂದು ಕಾಲುವೆಗೆ ಸುರಿಯುತ್ತಿದ್ದ ಮುದುಕನ ಶ್ರಮದ ಬಗ್ಗೆ ತ್ಸು-ತುಂಗ್ ಅವರಿಗೆ ಮೆಚ್ಚುಗೆಯಾಯಿತಾದರೂ ಪ್ರತಿಫಲ ತೀರಾ ಕಮ್ಮಿ ಅಂತ ಮರುಕವಾಯಿತು. ಹತ್ತಿರಹೋಗಿ ‘ಮರದ ಏತ ಮಾಡಿಕೊ. ಕಡಿಮೆ ಶ್ರಮದಲ್ಲಿ ಸರಾಗವಾಗಿ ನೀರೆತ್ತಬಹುದು. ಇಲ್ಲವಾದರೆ ಗಾಲಿ ತಿರುಗಿಸಿ ನೀರೆತ್ತುವ ವಿಧಾನವನ್ನಾದರೂ ಅಳವಡಿಸಿಕೊ. ವಿದ್ಯುತ್ ಪಂಪ್ ವ್ಯವಸ್ಥೆ ಮತ್ತೂ ಸುಲಭ. ಸ್ವಿಚ್ ಒತ್ತಿ ಕುಳಿತರಾಯ್ತು’ ಅಂತೆಲ್ಲಾ ಸಲಹೆಗಳನ್ನಿತ್ತರು. ಮುದುಕನ ಮುಖ ಕೆಂಪೇರಿ ‘... ನನಗೇನು ಆ ಯಂತ್ರದ ಬಗ್ಗೆ ಗೊತ್ತಿಲ್ಲವೆಂದಲ್ಲ. ಬಳಸಲು ನಾಚಿಕೆಯಷ್ಟೇ!’, ಮುಂದುವರಿದು ಹೇಳಿದ ‘ಯಾರು ಯಂತ್ರವನ್ನು ಬಳಸುತ್ತಾರೋ ಅವರು ಎಲ್ಲಾ ಕೆಲಸಗಳನ್ನು ಯಂತ್ರದಂತೆ ಮಾಡುತ್ತಾರೆ. ದೈಹಿಕ ಶ್ರಮವಿಲ್ಲದೆ ಯಂತ್ರದೊಟ್ಟಿಗೆ ಹೊಯ್ದಾಡುವವರ ಮೈಮನಸ್ಸುಗಳೂ ಯಾಂತ್ರಿಕವಾಗುತ್ತವೆ. ಎದೆಯಲ್ಲಿ ಯಾಂತ್ರಿಕತೆ ತುಂಬಿಕೊಂಡರೆ ನಾವು ನಮಗರಿವಿಲ್ಲದಂತೆ ಸರಳ ಬದುಕನ್ನು ಕಳೆದುಕೊಳ್ಳುತ್ತೇವೆ. ಹಾಗಾದಾಗ ಆತ್ಮಕ್ಕೆ ಗುರಿ ಮತ್ತು ದಾರಿಯ ಬಗ್ಗೆ ಗೊಂದಲವಿರುತ್ತದೆ. ಆತ್ಮದ ಗೊಂದಲವು ಪ್ರಾಮಾಣಿಕ ಮನಸ್ಸಿಗೆ ಒಗ್ಗದ ವಿಚಾರ. ಆದ್ದರಿಂದ ನಮ್ಮಂತಹವರು ಹೀಗೆಯೇ ಸರಳವಾಗಿ ಉಳಿಯಬಯಸುತ್ತೇವೆ!’

ನಿಜ, ಈಗೆಲ್ಲಾ ಯಾಂತ್ರೀಕರಣ ಅತಿಯಾದಷ್ಟೂ ಬದುಕು ಕೃತಕವೆನಿಸುತ್ತಿದೆ, ಅಪಾಯಕ್ಕೀಡಾಗುತ್ತಿದೆ. ಪರಿಸರ ವಿಷಮಯಗೊಂಡಿದೆ, ಬಾಂಧವ್ಯದ ತಂತುಗಳು ಸಡಿಲಗೊಳ್ಳುತ್ತಿವೆ. ಪರಸ್ಪರರಲ್ಲಿ ಅವಲಂಬನೆ, ನಂಬುಗೆ ಮಾಯಾವಾಗಿ ಮಾನವನಿರ್ಮಿತ ಯಂತ್ರಗಳನ್ನಷ್ಟೇ ನಂಬುವಂತಹ ಕಾಲ ಎದುರಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಸಂಸ್ಕೃತಿ, ಕಂಪ್ಯೂಟರ್ ಸಂಸ್ಕೃತಿಯು ಅವರು ಪುಸ್ತಕ ನೋಡಿ ಗಾಬರಿ ಬೀಳುವಂತೆ ಮಾಡುತ್ತಿವೆ. ಮೂರು ಹೊತ್ತೂ ಕಣ್ಣಿಗೆರಗುವ ಇಂದ್ರಿಯ ಪ್ರಚೋದಿತ ವಿಡಿಯೊ ತುಣುಕುಗಳ ಹಾವಳಿಯಲ್ಲಿ ತರಗತಿಯ ಪಾಠಗಳು ಸಪ್ಪೆಸಪ್ಪೆ. ಭವಿಷ್ಯದ ಕುರಿತೂ ಕಾಳಜಿ ಕಡಿಮೆ!

ಎಲ್ಲೆಡೆಯೂ ಸ್ವಯಂಚಾಲಿತ ಮತ್ತು ರೋಬೊಟಿಕ್ ಯಂತ್ರಗಳ ಬಳಕೆಯು ವ್ಯಾಪಕಗೊಳ್ಳುತ್ತಿದೆ. ದೈಹಿಕ ಶ್ರಮ ಕಡಿಮೆಯಾಗಿ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಮನುಷ್ಯನ ಬೌದ್ಧಿಕ ಮತ್ತು ತಾರ್ಕಿಕ ಸಾಮರ್ಥ್ಯಗಳನ್ನು ಅನುಸರಿಸಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆಯಂತೂ ಬಹೂಪಯೋಗಿಯಾಗಿ, ಅತ್ಯಂತ ವೇಗವಾಗಿ ಜನಪ್ರಿಯಗೊಳ್ಳುತ್ತಲೇ ಮನುಷ್ಯನ ಉಪಸ್ಥಿತಿ ಅನಿವಾರ್ಯವಾದ ಕ್ಷೇತ್ರಗಳಲ್ಲೂ ಮನುಷ್ಯನ ಪ್ರಸ್ತುತತೆಗೆ ಸವಾಲೆಸೆಯುತ್ತಲಿದೆ.

ಹಾಗಾಗಿ, ಆಧುನಿಕತೆಯ ಆವೇಗಕ್ಕೆ ಕಡಿವಾಣ ಹಾಕಿ ತಂತ್ರಜ್ಞಾನ ಮತ್ತು ಯಂತ್ರಸಾಧನಗಳನ್ನು ಅಗತ್ಯಕ್ಕೆ ತಕ್ಕಂತೆ ಹಿತಮಿತವಾಗಿ, ಇತಿಮಿತಿಯಲ್ಲಿ ಬಳಸಿಕೊಳ್ಳುವುದು ಒಳಿತು. ಅಂಧಾಭಿವೃದ್ಧಿ ಮತ್ತು ಅತಿಯಾದ ಯಂತ್ರಾವಲಂಬನೆಯ ನಾಗಾಲೋಟಕ್ಕೆ ಸ್ವಯಂನಿಯಂತ್ರಣವನ್ನು ಅಳವಡಿಸಿಕೊಂಡು ಸಂಯಮದಿಂದ ಸುಸ್ಥಿರ ಬೆಳವಣಿಗೆಯತ್ತ ಎಲ್ಲರ ಚಿತ್ತ ಹರಿಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.