ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವ ವಿಷಯ ಕುರಿತ ಅಖಿಲಾ ವಾಸನ್/ ವಿಜಯ ಕುಮಾರ್ ಎಸ್. ಅವರ ಲೇಖನ (ಸಂಗತ
ಸೆ. 13) ಸಮಯೋಚಿತವಾಗಿದೆ. 1990ರ ದಶಕದಲ್ಲಿ ಜಾಗತೀಕರಣ ನೀತಿ ಜಾರಿಯಾದ ಬಳಿಕ, ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಖಾಸಗೀಕರಣಕ್ಕೆ ಮೊರೆಹೋಗಿರುವುದು ಯಾರಿಗೂ ತಿಳಿಯದ ಸಂಗತಿಯೇನಲ್ಲ.

ತತ್ಪರಿಣಾಮವಾಗಿಯೇ ಸಾರ್ವಜನಿಕ ಆಸ್ಪತ್ರೆಗಳೆಡೆಗಿನ ನಿರ್ಲಕ್ಷ್ಯ, ಯಾವುದೇ ಮೂಲ ಸೌಲಭ್ಯ ಒದಗಿಸದೆ ಇರುವುದು, ಹಳೆಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸದೆ ಇರುವುದು, ಹಾಳಾದ, ಹಳೆ ಯಂತ್ರೋಪಕರಣ ಬದಲಾಯಿಸದೆ ಇರುವುದು, ವೈದ್ಯರು, ಶುಶ್ರೂಷಕರು ಸೇರಿದಂತೆ ಸಿಬ್ಬಂದಿಯ ತೀವ್ರ ಕೊರತೆ ನಿವಾರಿಸಲು ತುರ್ತು ಕ್ರಮ ಕೈಗೊಳ್ಳದೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಪುಡಿಗಾಸಿಗೆ ಅವರನ್ನು ದುಡಿಸಿಕೊಳ್ಳುವುದು ಇತ್ಯಾದಿ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಹೆಸರಲ್ಲಿ ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆ ಪರಭಾರೆ ಮಾಡುವುದು ಇದರ ಇನ್ನೊಂದು ರೂಪ!

ದೇಶದ ಆರೋಗ್ಯ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಡಾ. ಅರುಣ್ ಗಾದ್ರೆ ಮತ್ತು ಡಾ. ಅಭಯ್ ಶುಕ್ಲಾ ಅವರ ಪುಸ್ತಕ ‘Dissenting Diagnosis’, ದೇಶದ ವಿವಿಧ ರಾಜ್ಯಗಳ ಹೆಸರಾಂತ, ನೀತಿವಂತ ವೈದ್ಯರನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಪ್ರಕಟಿಸಿದೆ. ಅದರಲ್ಲಿ ಈ ಕಾರ್ಪೊರೇಟ್ ಆಸ್ಪತ್ರೆಗಳ ಧನದಾಹ, ಲೋಭವನ್ನು ಬಯಲಿಗೆಳೆಯಲಾಗಿದೆ.

ಸಾರ್ವತ್ರಿಕ ಆರೋಗ್ಯ ಸೇವೆಯ (ಅಂದರೆ ಆರೋಗ್ಯ ಸೇವೆಯ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದೇ) ಪರವಾಗಿರುವ, ವೈದ್ಯಕೀಯ ವೃತ್ತಿಯಲ್ಲಿರುವ ನಮ್ಮಂಥವರಿಗೆ ಸರ್ಕಾರಗಳು ಉದ್ದೇಶಪೂರ್ವಕವಾಗಿ ಸರ್ಕಾರಿ ಆರೋಗ್ಯ ಸೇವೆಯನ್ನು ‘ರೋಗಗ್ರಸ್ತ’ವನ್ನಾಗಿಸಿ ಅದನ್ನು ಕಾರ್ಪೊರೇಟ್ಗಳ ಮಡಿಲಿಗೆ ಹಾಕುತ್ತಿರುವುದು ದಿಗ್ಭ್ರಮೆಯನ್ನುಂಟು ಮಾಡುತ್ತಿದೆ.

ಈ ಹಿಂದೆ ವೈದ್ಯ-ರೋಗಿ ನಡುವೆ ಮನುಷ್ಯತ್ವದ ಬಾಂಧವ್ಯವಿತ್ತು. ತಾವು ಕಲಿತದ್ದು ಸಮಾಜಕ್ಕೆ ಒಳಿತಾಗಲೆಂದು ಭಾವಿಸುತ್ತಿದ್ದ ವೈದ್ಯರು, ಸೇವೆಯನ್ನೇ ಗುರಿಯನ್ನಾಗಿಸಿಕೊಂಡಿದ್ದರು. ಅದು ಅವರಿಗೆ ವ್ಯಾಪಾರವಾಗಿರಲಿಲ್ಲ. ಅಂದ ಮಾತ್ರಕ್ಕೆ ಅವರು ಕಷ್ಟಕಾರ್ಪಣ್ಯದ ಜೀವನವನ್ನೇನೂ ನಡೆಸುತ್ತಿರಲಿಲ್ಲ. ಸಾಕಷ್ಟು ಅನುಕೂಲವಾಗೇ ಇದ್ದರು. ಹಾಗಿಲ್ಲದವರೂ, ಅದನ್ನು ದೊಡ್ಡ ಕೊರತೆ ಎಂದೇನೂ ಭಾವಿಸಿರಲಿಲ್ಲ.

ರಾಶಿ, ಕವಲ್ಗೋಡ್, ಚಂದ್ರಪ್ಪಗೌಡ ಮುಂತಾದವರು ಇಂದು ದಂತಕತೆಗಳೆ. ಹಾಗೆಯೇ, ತಮ್ಮನ್ನು ಕಾಪಾಡುವ ವೈದ್ಯರನ್ನು ದೇವರಿಗೆ ಸಮಾನವೆಂದು ತಿಳಿದು ರೋಗಿಗಳೂ ಗೌರವಿಸುತ್ತಿದ್ದರು. ಒಬ್ಬ ವೈದ್ಯ ರೋಗಿಗಳಿಗೆ ಗೆಳೆಯ, ದಾರ್ಶನಿಕ, ಮಾರ್ಗದರ್ಶಕ ಎಲ್ಲವೂ ಆಗಿದ್ದರು. ಆದರೆ, ಈಗ ಇವರಿಬ್ಬರ ನಡುವೆ ಕಾರ್ಪೊರೇಟ್ ಜಗತ್ತು ಆವಿರ್ಭವಿಸಿದೆ; ಇಲ್ಲಿ ಎಲ್ಲವೂ ವ್ಯಾಪಾರವೆ. ರೋಗಿ ಗಿರಾಕಿ, ಆಸ್ಪತ್ರೆ ಸೇವಾದಾತ, ವೈದ್ಯ ಇವರಿಬ್ಬರ ನಡುವಿನ ಕೊಂಡಿ ಅಷ್ಟೆ.

ಇಬ್ಬರಲ್ಲೂ ಹಿಂದಿನ ಪರಸ್ಪರ ವಿಶ್ವಾಸವಿಲ್ಲ; ಬದಲಿಗೆ ಅಪನಂಬಿಕೆ! ಈ ವೈದ್ಯ ತನ್ನನ್ನು ಲೂಟಿ ಹೊಡೆಯುತ್ತಾನೇನೋ ಎಂದು ರೋಗಿಗೆ, ಈ ರೋಗಿ ಎಲ್ಲಿ ತನ್ನ ಮೇಲೆ ವ್ಯಾಜ್ಯ ಹೂಡುತ್ತಾನೋ ಎಂದು ವೈದ್ಯನಿಗೆ. ಇಬ್ಬರ ನಡುವಣ ಬಾಂಧವ್ಯಕ್ಕೆ ಕಾರ್ಪೊರೇಟ್ ಆಸ್ಪತ್ರೆ ಸಂಸ್ಕೃತಿ ಕೊಡಲಿಯೇಟು ಹಾಕಿದೆ. ಅತ್ಯಧಿಕ ಲಾಭವೇ ಗುರಿಯಾಗಿರುವ ಕಾರ್ಪೊರೇಟ್ ಜಗತ್ತಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅತ್ಯವಶ್ಯವಾದ ಮಾನವೀಯತೆಯೇ ಕಳೆದುಹೋಗಿದೆ.

ದಾಖಲಾಗುವ ಮುನ್ನವೇ ಕೊಡಬೇಕಾದ ಇಡುಗಂಟು, ಅನವಶ್ಯಕ ತಪಾಸಣೆ, ಶಸ್ತ್ರಚಿಕಿತ್ಸೆಗಳು, ಐಸಿಯು ದಾಖಲಾತಿ, ಸತ್ತರೂ ಒಂದಿಷ್ಟೂ ಸಿಗದ ರಿಯಾಯಿತಿ ಮುಂತಾದವು ಇದರ ಗುಣವಿಶೇಷಗಳು! ಬಹುತೇಕ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂಗಳ ವೈದ್ಯರು ತೋರುವ ಅಂತಃಕರಣ, ರಿಯಾಯಿತಿ ಇಲ್ಲಿ ಕಾಣಸಿಗದು. ಬದಲಿಗೆ, ಅಲ್ಲಿ ನೇಮಿತ ವೈದ್ಯರು ತಿಂಗಳಿಗೆ ಇಂತಿಷ್ಟು ತಪಾಸಣೆ, ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಒತ್ತಡವಿದೆ. ಜೊತೆಗೆ, ಅಲ್ಲಿಗೆ ಕಳುಹಿಸಿಕೊಡುವ ವೈದ್ಯರಿಗೆ ಕಮಿಷನ್ ಕೊಡುವ ಪದ್ಧತಿಯೂ ಇದ್ದು, ಅದರ ಭಾರವೂ ರೋಗಿಯ ಮೇಲೆಯೆ. ಅಲ್ಲಿ ಬರೆದುಕೊಡುವ ಔಷಧಗಳನ್ನೂ ಆಸ್ಪತ್ರೆಯ ಫಾರ್ಮಸಿಯಲ್ಲೇ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳಬೇಕಾದ ಒತ್ತಡವೂ ಇರುತ್ತದೆ.

ವೈದ್ಯಕೀಯ ವಿಮೆಯಂತೂ ಬಲುದೊಡ್ಡ ಮೋಸವಾಗಿದ್ದು ಈ ಕಾರ್ಪೊರೇಟ್ ಆಸ್ಪತ್ರೆಗಳು ಅದರ ಭಾಗವಾಗಿವೆ. ರೋಗಿಗಳನ್ನು ಮೋಸಗೊಳಿಸುವ ಕಂಪೆನಿಗಳು ವಿಮೆ ಕಂತುಗಳನ್ನು ಬಲು ಸಂತೋಷದಿಂದ ಕಟ್ಟಿಸಿಕೊಂಡು, ತಾವು ಪಾವತಿ ಮಾಡಬೇಕಾದಾಗ ಮಾತ್ರ ಬಹಳಷ್ಟಕ್ಕೆ ಕತ್ತರಿ ಹಾಕುತ್ತವೆ. ಇಂಥ ಕಂಪೆನಿಗಳಿಗೇ ಈ ಆಸ್ಪತ್ರೆಗಳು ಚೆನ್ನಾಗಿ ಟೋಪಿ ಹಾಕುತ್ತವೆ. ನೀಡಿದ, ನೀಡದೆ ಇದ್ದ ಎಲ್ಲ ಸೇವೆಗಳೂ ನಮೂದಾಗುತ್ತವೆ. ಅಲ್ಲದೆ, ವಿಮಾದಾರ ರೋಗಿಗೇ ಒಂದು ದರ, ಇಲ್ಲದವರಿಗೆ ಇನ್ನೊಂದು ದರ.

ಅಂತಿಮವಾಗಿ ಶೋಷಣೆಗೆ ಒಳಗಾಗುವವನು ರೋಗಿಯೆ. ಜೊತೆಗೆ, ಸರ್ಕಾರವೂ ತನ್ನದೇ ವಿಮೆ ಯೋಜನೆಯ ಮೂಲಕ ತಾನು ನೀಡಬೇಕಾದ ಆರೋಗ್ಯ ಸೇವೆಯನ್ನು ಈ ಆಸ್ಪತ್ರೆಗಳಿಗೇ ಹೊರಗುತ್ತಿಗೆ ನೀಡುತ್ತದೆ. ಅದರಲ್ಲೂ ರಾಜಕಾರಣಿಗಳ ಮಾಲೀಕತ್ವದ, ತನಗೆ ಬೇಕಾದ ಉದ್ಯಮಿಗಳ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಜನರ ತೆರಿಗೆ ಹಣವನ್ನು ಈ ಮೂಲಕ ಪಾವತಿಸಿ, ಸಾರ್ವಜನಿಕ ಆಸ್ಪತ್ರೆಗಳ ಉನ್ನತೀಕರಣಕ್ಕೆ ಬಿಡಿಗಾಸಿಲ್ಲವೆಂದು ಕೈತೊಳೆದುಕೊಳ್ಳುತ್ತದೆ.

ಕಾರ್ಪೊರೇಟ್ ಆಸ್ಪತ್ರೆಗಳು ತಮ್ಮಲ್ಲಿ ರೋಗಿಗಳು ನಿರಂತರವಾಗಿ ಬರಲೆಂದು, ತಮ್ಮಲ್ಲಿಗೆ ಶಿಫಾರಸು ಮಾಡುವ ವೈದ್ಯರಿಗೆ ಹಣ, ಕೊಡುಗೆ, ಪಾರ್ಟಿಗಳ ಆಮಿಷ ಒಡ್ಡುವುದು ಸರ್ವೇಸಾಮಾನ್ಯ. ಅಷ್ಟಲ್ಲದೆ ಆಟೊರಿಕ್ಷಾ, ಟ್ಯಾಕ್ಸಿ, ಆಂಬುಲೆನ್ಸ್ ಚಾಲಕರಿಗೆ ಕಮಿಷನ್ ಕೊಟ್ಟು ತಮ್ಮಲ್ಲಿಗೇ ರೋಗಿಗಳನ್ನು ಕರೆಸಿಕೊಳ್ಳುವ ಆಸ್ಪತ್ರೆಗಳೂ ಉಂಟು. ಜೊತೆಗೆ ರೋಗಿಗಳನ್ನು ಆಕರ್ಷಿಸಲು, ‘ಮಾಸ್ಟರ್ ಚೆಕ್ ಅಪ್’, ‘ಚೆಕ್ ಅಪ್ ವಾರ, ಪಾಕ್ಷಿಕ’ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಇಲ್ಲಸಲ್ಲದ ರೋಗಗಳ ಬಗ್ಗೆ ಜಾಹೀರಾತು ಹಾಕಿ ಜನರಲ್ಲಿ ಭೀತಿ ಹುಟ್ಟಿಸಿ ತಮ್ಮಲ್ಲಿ ಬರುವಂತೆ ನೋಡಿಕೊಳ್ಳುತ್ತವೆ.

ಕಾರ್ಪೊರೇಟ್ ಆಸ್ಪತ್ರೆಗಳು ಹುಟ್ಟಿಕೊಂಡ ನಂತರ ಕುಟುಂಬ ವೈದ್ಯರು ಮಾಯವಾಗಿ ಬಿಟ್ಟಿದ್ದಾರೆ. ಎಷ್ಟೋ ನರ್ಸಿಂಗ್ ಹೋಮ್ಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಈ ಆಸ್ಪತ್ರೆಗಳ ಉಪಶಾಖೆಗಳಾಗಿ ಬಿಟ್ಟಿವೆ. ಬಹುತೇಕ ಕಾರ್ಪೊರೇಟ್ ಆಸ್ಪತ್ರೆಗಳು, ‘ಚಾರಿಟಿ’ ಹೆಸರಿನ ಆಸ್ಪತ್ರೆಗಳು ಸರ್ಕಾರದಿಂದ ಉಚಿತ ಅಥವಾ ಅತಿ ಕಡಿಮೆ ಬೆಲೆಗೆ ಭೂಮಿ, ವಿದ್ಯುತ್, ನೀರು ಮುಂತಾದವುಗಳನ್ನು ಪಡೆದು, ತೆರಿಗೆಯಲ್ಲೂ ವಿನಾಯಿತಿ ಪಡೆದು, ಬಡಜನರಿಗೆ ಕನಿಷ್ಠ ಸೇವೆಯನ್ನೂ ನೀಡದೆ ಇರುವುದು ಒಂದು ದೊಡ್ಡ ವಂಚನೆಯಲ್ಲದೆ ಇನ್ನೇನೂ ಅಲ್ಲ.

ಇಂಥ ಆಸ್ಪತ್ರೆಗಳಿಗೆ ಮಣೆಹಾಕುವ ಸರ್ಕಾರಗಳು, ಜನರಿಗೆ ಆರೋಗ್ಯ ಸೇವೆ ಒದಗಿಸುವ ಸಾಮಾಜಿಕ ಬದ್ಧತೆಯಿಂದ ದೂರ ಸರಿದಿರುವುದು ಕಣ್ಣಿಗೆ ಕುಕ್ಕುವ ಸತ್ಯ.ಸಾರ್ವತ್ರಿಕ ಆರೋಗ್ಯ ಸೇವೆಯನ್ನು ತಮ್ಮ ಹಕ್ಕನ್ನಾಗಿ ಜನ ಆಗ್ರಹಿಸುವುದು, ಇದಕ್ಕೆ ವೈದ್ಯರೂ ಸೇರಿ ಪ್ರಜ್ಞಾವಂತರು ಒತ್ತಾಸೆಯಾಗಿ ನಿಲ್ಲುವುದೊಂದೇ ಆರೋಗ್ಯ ಕ್ಷೇತ್ರದ ಈ ಕಾರ್ಪೊರೇಟೀಕರಣದ ಕಾಯಿಲೆಗೆ ಪರಿಹಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.