ಭವ್ಯ ನಗರ ಬೆಂಗಳೂರಿನಲ್ಲಿ ಬೆರಗಿನಂತಹ ಮನೆ ಕಟ್ಟಿಸಿರುವ ಓವರ್ ಕ್ವಾಲಿಫೈಡ್ ವ್ಯಕ್ತಿಯೊಬ್ಬರು ತಮ್ಮ ಮನೆಗೊಮ್ಮೆ ಆಹ್ವಾನಿಸಿದ್ದರು. ಮೂರು ಮಹಡಿಗಳ ಸಂಕೀರ್ಣವನ್ನು ಒಂದೊಂದಾಗಿ ತೆರೆದಿಡುತ್ತಾ, ಸ್ಟಾರ್ ಹೋಟೆಲಿನಲ್ಲಿ ಮಾತ್ರ ನೋಡಿದ್ದ ಬಾತ್‌ಟಬ್ಬನ್ನು ಹೆಮ್ಮೆಯಿಂದ ತೋರಿಸಿ ಬೀಗಿದ್ದರು. 30x40 ಸೈಟಿನ ಇಂಚನ್ನೂ ಬಿಡದೇ ಆವರಿಸಿಕೊಂಡಿತ್ತು ಅವರ ಕಾಂಕ್ರೀಟ್ ಕಟ್ಟಡ.

ಎಲ್ಲಾ ಐಭೋಗಗಳನ್ನೂ ಸಂದರ್ಶಿಸಿದ ಮೇಲೆ ಕುತೂಹಲದಿಂದ ‘ಎಲ್ಲಾ ಓಕೆ, ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಬಿಬಿಎಂಪಿ ಕಡ್ಡಾಯ ಮಾಡಿದೆಯಲ್ಲವೇ? ಅದಕ್ಕೇನು ಮಾಡಿದ್ದೀರಾ?’ ಎಂದು ಸಹಜವಾಗಿಯೇ ಕೇಳಿದೆ. ಆಗ ಅವರ ವದನ ಬಿಳುಚಿತು. ಹುಳಿ ನಗು ಬೀರುತ್ತಾ ಕೆಳ ಮಹಡಿಯತ್ತ ಕರೆದೊಯ್ದು, ನೆಲದತ್ತ ಮುಖ ಮಾಡಿದ್ದ ಪೈಪೊಂದನ್ನು ತೋರಿಸಿದ್ದರು. ಮೇಲೊಂದು ಗೇಟ್‌ವಾಲ್ವ್ ಬೇರೆ. ಅದನ್ನು ನೋಡಿದ ಕೂಡಲೇ ‘ಇದು ಇನ್‌ಸ್ಪೆಕ್ಷನ್‌ಗೆ ಬರೋ ಅಧಿಕಾರಿಗಳಿಗಾಗಿ ಮಾತ್ರ ಇರುವಂತಹ ರಚನೆ’ ಎಂದು ಗೊತ್ತಾಯಿತು.

ಇನ್ನೊಂದು ಅನುಭವ ಹುಬ್ಬಳ್ಳಿ-ಧಾರವಾಡದ್ದು. ನಾನು ವಾಸವಿದ್ದ ಓಣಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಆಗ ಮೂರ್ನಾಲ್ಕು ತಾಸು ಯಥೇಚ್ಛ ನೀರು. ಶಹರವಾದ್ದರಿಂದ ನೀರು ಬಿಡುವ ದಿನ ಇಂತಹದ್ದೇ ಎಂದು ಕರಾರುವಾಕ್ಕಾಗಿ ನಿಗದಿಯಾಗಿರುತ್ತಿತ್ತು. ನೀರು ಬರುವ ದಿನ ಮನೆಯೊಳಗಿನಿಂದ ಸಾಧ್ಯವಿರುವ ಪಾತ್ರೆ, ಬಕೆಟ್, ದೊಡ್ಡ ದೊಡ್ಡ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ನೀರನ್ನು ಹಿಡಿದಿಡಲು ಪೈಪೋಟಿ ಆರಂಭವಾಗುತ್ತಿತ್ತು. ವಿಷಾದಕರ ವಿಚಾರವೆಂದರೆ, ಅರ್ಧಕ್ಕರ್ಧ ಡ್ರಮ್‌ಗಳ ಖರ್ಚಾಗದೇ ಉಳಿದ ಹಳೆನೀರು ಹೊಸನೀರನ್ನು ತುಂಬುವ ಸಡಗರದಲ್ಲಿ ಚರಂಡಿ ಸೇರುತ್ತಿತ್ತು. ಅಕ್ಷರಶಃ ಎಲ್ಲ ಬೀದಿಗಳೂ ಹೊಳೆಯಂತೆ ಭಾಸವಾಗುತ್ತಿದ್ದವು. ಪ್ರತೀ ಬಾರಿ ನೀರು ಬಂದಾಗಲೂ ಇದೇ ಕಥೆ. ಜನರ ಮನಃಸ್ಥಿತಿ ಹೇಗಿದೆ ಎಂದರೆ ‘ನೀರು ಹಳತಲ್ರೀ, ಹುಳಾ ಆಗ್ಯಾವು, ಹಂಗಾಗಿ ಚೆಲ್ತೇವ್ರೀ’ ಎನ್ನುವ ಮಂದಿಗೂ ಗೊತ್ತು ಅದು ಶುದ್ಧ ಸುಳ್ಳೆಂದು. ಸೊಳ್ಳೆ ಸುಳಿಯದಂತೆ ಮೇಲೆ ಮುಚ್ಚಳವಿರುವ ಡ್ರಮ್‌ಗಳೇ ಕಣ್ಣಿಗೆ ರಾಚುವಾಗ ಮತ್ತದೇ ಹುಳಿ ನಗೆಗಳೇ.

ನೀರು ಕದಿಯಬಾರದೆಂದು ತಿಕೋಟಾ ತಾಲ್ಲೂಕಿನ ತಾಂಡಾದ ಜನ ತಮ್ಮ ನೀರಖಜಾನೆ ಡ್ರಮ್‌ಗಳಿಗೆ ಬೀಗ ಹಾಕುವುದನ್ನು ಬಿತ್ತರಿಸಿದ ಚಿತ್ರ (ಪ್ರ.ವಾ., ಮೇ 23) ನೋಡಿ ಈ ಎರಡು ಘಟನೆಗಳು ನೆನಪಿಗೆ ಬಂದವು.

ಧಾರವಾಡದಲ್ಲಿ ನಾವು ಕೂಡ ನಮ್ಮ ನೀರ ತಿಜೋರಿಗೆ ಬೀಗ ಹಾಕುತ್ತಿದ್ದೆವು. ಬೆಂಗಳೂರಿನ ವ್ಯಕ್ತಿ ಒಬ್ಬ ಪ್ರಾಧ್ಯಾಪಕಿ. ಅದೂ ವಿಜ್ಞಾನದಲ್ಲಿ! ನೀರ ಚೆಲ್ಲುವ ಎಲ್ಲಾ ಜನರೂ ಶಿಕ್ಷಿತರೇ. ಆದರೆ, ಸುಶಿಕ್ಷಿತರಲ್ಲ. ನೀರನ್ನು ಬೇಕಾಬಿಟ್ಟಿ ಬಳಸಿ ಬಿಸಾಕಿ, ಅದು ಬತ್ತುವ ಕಾಲದಲ್ಲಿ ಬಿಸಿಲ ಬೈದರೆ ಆದೀತೆ? ಶಿಕ್ಷಣದಲ್ಲಿ ಹಲವಾರು ಕೌಶಲಗಳನ್ನು ತರಹೇವಾರಿಯಾಗಿ ಕಲಿಸಿಕೊಡಲು ಉತ್ಸುಕವಾಗಿರುವ ಶೈಕ್ಷಣಿಕ ಸಂಸ್ಥೆಗಳೇ ನೀರಿಗಾಗಿ ಬೊಗಸೆಯೊಡ್ಡುವ ಪರಿಸ್ಥಿತಿಯು ಹೇರಳ ಮಳೆ ಬೀಳುವ ಪ್ರದೇಶಗಳಲ್ಲೇ ಈಗ ನಿರ್ಮಾಣವಾಗಿದೆ. ಅವರೇ ಕಲಿಸಿಕೊಡುವ ಮಳೆನೀರು ಸಂಗ್ರಹ, ಮುಖ್ಯವಾಗಿ ಜಲಸಾಕ್ಷರತೆಯನ್ನು ಹಂಚುವ, ಅಳವಡಿಸಿಕೊಳ್ಳುವ ಪ್ರಕ್ರಿಯೆಯ ಲೋಪಗಳನ್ನು ಇದು ಸೂಚಿಸುತ್ತದೆ. ತಮ್ಮ ತಮ್ಮ ಅಂಗಳಗಳಲ್ಲಿ ಮಳೆನೀರು ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಂಡರೆ, ಗಿಡಮರಗಳನ್ನು ಉಳಿಸಿಕೊಂಡರೆ, ಟ್ಯಾಂಕರ್ ನೀರಿಗಾಗಿ ಇನ್ನೊಬ್ಬರ ನೆಚ್ಚುವ ಸಂದರ್ಭ ಬರುತ್ತಿರಲಿಲ್ಲವೇನೋ?

ಶಾಲಾ ಕಟ್ಟಡ ದಾರಿಹೋಕರ ಕಣ್ಣಿಗೆ ಕಾಣದೆಂದು, ಇದ್ದಬದ್ದ ಹಸಿರನ್ನು ನೆಲಸಮಗೊಳಿಸಿ ಅಷ್ಟೆತ್ತರ ಎಬ್ಬಿಸಿದ ತರಗತಿಗಳು ಕಾಯುತ್ತವೆಂದು ಎ.ಸಿ. ಫಿಟ್ ಮಾಡಿಸಿದರೆ, ಪರಿಸರ ವಿಜ್ಞಾನವನ್ನು ಬೋಧಿಸುವ ನೈತಿಕತೆಯೇ ಅಸಂಬದ್ಧ ಎನಿಸುತ್ತದೆ. ಬಿಸಿಲು ಮರೆಯಾದ ಕೂಡಲೇ ತಣಿಯುವ ಮಣ್ಣಿನ ಪದರದಲ್ಲಿ ಕಳೆ ಬೆಳೆಯುತ್ತದೆ, ನೆಲ ರಾಡಿಯಾಗುತ್ತದೆಂದು ಕಾಂಕ್ರೀಟಿನ ಇಂಟರ್‌ಲಾಕುಗಳನ್ನು ಅಳವಡಿಸಲಾಗುತ್ತಿದೆ. ಅಂತಹ ಸಂದರ್ಭದಲ್ಲಿ, ಚಾವಣಿಯ ಮಳೆನೀರು ಸಂಗ್ರಹ ವ್ಯವಸ್ಥೆ ಕೇವಲ ಮಾದರಿಯಾಗುತ್ತದೆಯೇ ಹೊರತು ಯಶಸ್ವಿಯಾಗಲಾರದು. ತುಂಡು ಚಾವಣಿಯ ಸೀಮಿತ ಪ್ರದೇಶದ ನೀರನ್ನಷ್ಟೇ ಸಂಗ್ರಹಿಸುವ ಸಂದರ್ಭದಲ್ಲಿ, ಎಷ್ಟೋ ವಿಸ್ತಾರಕ್ಕೆ ಚಾಚಿರುವ ಅಂಗಳದಲ್ಲಿ ಬೀಳುವ ಮಳೆನೀರು ಕಾಂಕ್ರೀಟಿನ ದೆಸೆಯಿಂದ ಗಟಾರ ಸೇರುವುದ ಕಂಡರೆ, ಚಾವಣಿಯ ಮಳೆನೀರು ಸಂಗ್ರಹ ವ್ಯವಸ್ಥೆಗೇನಾದರೂ ಅರ್ಥವಿದೆಯೇ ಎನಿಸುತ್ತದೆ.

ಕಾಲಕ್ಕೆ ತಕ್ಕಂತೆ ನಮ್ಮ ಮನೆಗಳ ವಿನ್ಯಾಸಗಳೂ ಈಗ ತುರ್ತಾಗಿ ಬದಲಾಗಲೇಬೇಕಿದೆ. ಇದಕ್ಕೆ ಮಾದರಿಯನ್ನು ಮತ್ತದೇ ನಿಸರ್ಗದಲ್ಲಿ ಕಾಣಬಹುದು. ಮರಗಳಂತೆ ಮನೆಗಳು ಮೇಲೆ ಬೆಳೆದಷ್ಟೂ ಕೆಳಗೆ ಆಳವಾಗಿರಬೇಕು. ಅರ್ಥಾತ್ ಮೇಲ್ಭಾಗದ ಮನೆಯ ಅಳತೆಗೆ ಅನುಗುಣವಾಗಿ ಮನೆ ಕೆಳಗೆ ಮಳೆ ನೀರನ್ನು ಸಂಗ್ರಹಿಸುವ ತೊಟ್ಟಿಗಳ ನಿರ್ಮಾಣ ಮಾಡುವುದೊಂದೇ ಬಹುಶಃ ಮುಂದಿನ ದಿನಗಳಲ್ಲಿ ನಮ್ಮಾಸರೆಗೆ ದಾರಿಯೇನೋ? ಆ ನಿಟ್ಟಿನಲ್ಲಿ ಇನ್ನಾದರೂ ಎಲ್ಲರಿಂದಲೂ ಗಂಭೀರ ಪ್ರಯತ್ನಗಳು ಸಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.