ಎರಡು ಶತಮಾನಗಳ ಹರಹಿನಲ್ಲಿ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಮೇರು ವ್ಯಕ್ತಿತ್ವದಿಂದ ಹೊಳೆಯುತ್ತಿದ್ದ ಪ್ರೊ.ಬಿ.ಶೇಖ್ ಅಲಿ ಅವರು ನೂರರ ಅಂಚಿನಲ್ಲಿ ಅಗಲಿದಾಗ ಜ್ಞಾನದ ಬೆಳಕೊಂದು ಕಣ್ಮರೆಯಾಯಿತು. ಇತಿಹಾಸ, ಧರ್ಮ ಮತ್ತು ಸಂಸ್ಕೃತಿಯ ಜ್ಞಾನಶಿಸ್ತುಗಳಲ್ಲಿ ಮಹಾನ್ ವಿದ್ವಾಂಸರಾಗಿದ್ದ ಹಾಗೆಯೇ ಅವರೊಬ್ಬ ಅದ್ಭುತ ಮಾನವತಾವಾದಿಯೂ ಆಗಿದ್ದರು, ಶೈಕ್ಷಣಿಕ ಹೊಸಪ್ರತಿಭೆಗಳ ಅನ್ವೇಷಕರಾಗಿದ್ದರು. ಜಾತ್ಯತೀತತೆ, ನೈತಿಕತೆ ಮತ್ತು ಸರಳತೆಗಳ ಸಂಗಮವಾಗಿದ್ದರು.

ಪ್ರೊ. ಅಲಿ ಅವರು 1980ರ ಸೆಪ್ಟೆಂಬರ್ 10ರಂದು ಹೊಸತಾಗಿ ಆರಂಭವಾದ ಮಂಗಳೂರು ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಬಂದರು. 1985ರವರೆಗೆ ನಾಲ್ಕೂವರೆ ವರ್ಷಗಳ ಕಾಲ ಅವರು ‘ಸ್ಥಾಪಕ ಕುಲಪತಿ’ ಎಂಬ ಹೆಸರಿಗೆ ಬಹುರೂಪಿಯಾಗಿ ಜೀವ ತುಂಬಿದರು. ಮೈಸೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿ ಸ್ಥಾಪಿಸಿದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದಲ್ಲಿ ಹತ್ತು ವರ್ಷಗಳ ಕಾಲ ಉಪನ್ಯಾಸಕನಾಗಿದ್ದ ನಾನು, ಅಲಿ ಅವರನ್ನು ಕಂಡದ್ದು ಅವರು 1980ರಲ್ಲಿ ಮಂಗಳೂರು ವಿ.ವಿ.ಗೆ ಮೊದಲ ಕುಲಪತಿಯಾಗಿ ಬಂದಾಗಲೇ.

ಅಲಿ ಅವರು ಕುಲಪತಿ ಆಗಿ ಬಂದಾಗ ಕಚೇರಿ ಇರಲಿಲ್ಲ, ಕಚೇರಿ ಸಿಬ್ಬಂದಿ ಇರಲಿಲ್ಲ. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಅಲೋಸಿಯಸ್ ಕಾಲೇಜಿನ ಒಂದು ಹಳೆಯ ಕಟ್ಟಡದಲ್ಲಿ ಆಡಳಿತ ಕಚೇರಿ ಮಾಡಿ, ಆಡಳಿತ ಸಿಬ್ಬಂದಿಯನ್ನು ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಎರವಲು ಸೇವೆಯಲ್ಲಿ ಪಡೆಯಲು ಅವರು ಪಟ್ಟ ಶ್ರಮ ವಿಶೇಷವಾದುದು. ಮಾಲತಿ ದಾಸ್ ಅವರನ್ನು ಸರ್ಕಾರಿ ಸೇವೆಯಿಂದ ಪಡೆದು ರಿಜಿಸ್ಟ್ರಾರ್ ಆಗಿ ನೇಮಿಸಿದರು. ಇದರಿಂದ ಆಡಳಿತಕ್ಕೆ ಅನುಕೂಲ ಆಯಿತು. ಹೀಗೆಯೇ ಉತ್ತಮ ಅಧಿಕಾರಿಗಳನ್ನು ಎರವಲು ಸೇವೆಯಲ್ಲಿ ಬಳಸಿಕೊಂಡರು. ತಾವು ಮಾರ್ಗನ್ ಗೇಟ್ ಬಳಿಯ ಹಳೆಯ ಬಂಗಲೆಯೊಂದರಲ್ಲಿ ಮನೆ ಮಾಡಿಕೊಂಡರು.

ಸ್ಥಳೀಯವಾದ ಅಧ್ಯಾಪಕರೊಬ್ಬರು ಸಹಾಯಕ್ಕೆ ಬೇಕು ಎಂದು ನನ್ನನ್ನು ಅವರ ಆಪ್ತ ಕಾರ್ಯದರ್ಶಿಯಾಗಿ ಬರಲು ಕೇಳಿಕೊಂಡರು. ಅಧ್ಯಾಪಕನಾಗಿದ್ದ ನನಗೆ ಆಡಳಿತದ ಕೆಲಸಕ್ಕೆ ಬರಲು ಮನಸ್ಸಿರಲಿಲ್ಲ. ಜತೆಗೆ ನನ್ನ ಪಿಎಚ್.ಡಿಯ ಕೆಲಸ ಅಂತಿಮ ಹಂತದಲ್ಲಿ ಇತ್ತು. ಆದರೆ, ಅಲಿ ಅವರ ವಿಶ್ವಾಸದ ಕೋರಿಕೆಗೆ ಇಲ್ಲ ಅನ್ನಲಾಗಲಿಲ್ಲ. 1981ರ ಫೆಬ್ರವರಿಯಲ್ಲಿ ಕುಲಪತಿ ಅಲಿಯವರ ಆಪ್ತಕಾರ್ಯದಶಿಯಾಗಿ ಸೇರಿದೆ. ಅವರು ನನ್ನನ್ನು ಕುಟುಂಬದ ಬಂಧುವಿನಂತೆ ನೋಡಿಕೊಳ್ಳುತ್ತಿದ್ದರು. ಆಡಳಿತ ಸಮಸ್ಯೆಗಳನ್ನು ಅವರು ನನ್ನ ಜತೆಗೆ ಹಂಚಿಕೊಳ್ಳುತ್ತಿದ್ದರು.

ಕುಲಪತಿಯಾಗಿ ಅವರ ಮುಂದೆ ಬೆಟ್ಟದಷ್ಟು ಸಮಸ್ಯೆಗಳು, ಸವಾಲುಗಳು ಇದ್ದುವು. ಹೊಸ ಅಧ್ಯಯನ ವಿಭಾಗಗಳ ಸ್ಥಾಪನೆ ಮತ್ತು ಅವುಗಳಿಗೆ ಹುದ್ದೆಗಳ ಮಂಜೂರಾತಿ, ಈಗಾಗಲೇ ಇರುವ ವಿಭಾಗಗಳಿಗೆ ಹೊಸ ಹುದ್ದೆಗಳ ಸೃಜನೆ, ಅಧ್ಯಯನ ವಿಭಾಗಗಳು, ಹಾಸ್ಟೆಲ್ಗಳು, ಗ್ರಂಥಾಲಯ ಕಟ್ಟಡಗಳ ನಿರ್ಮಾಣ, ನೀರಿನ ಪೂರೈಕೆ, ಸಾರಿಗೆ ವ್ಯವಸ್ಥೆ - ಇಂತಹ ಹತ್ತು ಹಲವು. ಇಂತಹ ಕೆಲಸಗಳ ಕಡತಗಳ ಸಲ್ಲಿಕೆ ಮತ್ತು ಮಂಜೂರಾತಿಗಾಗಿ ಕುಲಪತಿಯವರು ತಮ್ಮ ಜತೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು.

ನಾನು ವಿಧಾನಸೌಧದ ಕಚೇರಿಗಳನ್ನು ಮತ್ತು ರಾಜಭವನವನ್ನು ಮೊದಲು ಪ್ರವೇಶಮಾಡಿ ಪರಿಚಯ ಮಾಡಿಕೊಂಡದ್ದು ಅವರ ಜತೆಗೆ ಹೋದಾಗ 1981ರಲ್ಲಿ. ಅವರು ಪ್ರಧಾನ ಕಾರ್ಯದರ್ಶಿಯವರನ್ನು ಮಾತ್ರ ಕಾಣುತ್ತಿರಲಿಲ್ಲ; ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಹಾಗೆಯೇ ಕೇಸ್ ವರ್ಕರ್ಗಳ ಬಳಿಗೆ ಹೋಗಿ, ಅವರ ಎದುರಿನ ಕಬ್ಬಿಣದ ಕುರ್ಚಿಯಲ್ಲಿ ಕುಳಿತು ವಿನಯದಿಂದ ಮಾತಾಡುತ್ತಿದ್ದರು. ‘ದಯವಿಟ್ಟು ಮಾಡಿಕೊಡಿ’ ಎನ್ನುವ ಮಾತನ್ನು ಅವರು ಹೇಳುವುದನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಹಾಗಾಗಿ ಅವರು ಕೇಳಿದ ಹೆಚ್ಚಿನ ಎಲ್ಲ ಪ್ರಸ್ತಾವಗಳಿಗೆ ಅನುಮೋದನೆ ದೊರೆಯುತ್ತಿತ್ತು.

ಅಲಿ ಅವರು ಕೇವಲ ಒಂದು ವರ್ಷದ ಅವಧಿಯಲ್ಲಿ ಎಂಟು ಹೊಸ ಸ್ನಾತಕೋತ್ತರ ವಿಭಾಗಗಳನ್ನು ಹುದ್ದೆಗಳ ಸಹಿತ ಸ್ಥಾಪಿಸಿದರು. ಇತಿಹಾಸ, ಇಂಗ್ಲಿಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಸಂಖ್ಯಾಶಾಸ್ತ್ರ, ಎಂಬಿಎ, ಗ್ರಂಥಾಲಯ ವಿಜ್ಞಾನ - ಇವುಗಳಿಗೆ 1981ರಲ್ಲೇ ಅನುಮೋದನೆ ಸಿಕ್ಕಿದ್ದು ಬಹಳ ದೊಡ್ಡ ಸಾಧನೆ. ಈ ಹೊಸ ವಿಭಾಗಗಳಿಗೆ ಅಧ್ಯಾಪಕರ ನೇಮಕಾತಿಯಲ್ಲಿ ಪ್ರೊ. ಅಲಿಯವರು ಪಾರದರ್ಶಕವಾಗಿ ವಿದ್ವತ್ತಿಗೆ ಮನ್ನಣೆಯನ್ನು ಕೊಟ್ಟು ಆಯ್ಕೆಗಳನ್ನು ಮಾಡಿದರು.

ಈಗ ಕನ್ನಡದ ಶ್ರೇಷ್ಠ ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಪ್ರೊ.ಸಿ.ಎನ್. ರಾಮಚಂದ್ರನ್ ಅವರಿಗೆ ಅಧ್ಯಾಪನದ ಅವಕಾಶವನ್ನು ಮೊದಲು ಕಲ್ಪಿಸಿದವರು ಪ್ರೊ. ಅಲಿ. ರಾಮಚಂದ್ರನ್ ಅವರು ಅಲಿ ಅವರ ಬಗ್ಗೆ ಮೊನ್ನೆ ನನಗೆ ಬರೆದ ಸಂದೇಶದ ವಾಕ್ಯ: ‘ಅವರು ತುಂಬಾ ಸ್ನೇಹಪರರು ಮತ್ತು ಇತರರ ಬಗ್ಗೆ ಕಾಳಜಿ ಉಳ್ಳವರು. ನಾನು ಮೊದಲು 1983ರಲ್ಲಿ ಅವರನ್ನು ಲೈಟ್ ಹೌಸ್ನಲ್ಲಿ ಭೇಟಿಮಾಡಿದಾಗ, ತುಂಬಾ ಆಪ್ತವಾಗಿ ನನ್ನೊಡನೆ ಅರ್ಧಗಂಟೆ ಮಾತನಾಡಿ, ನನಗೆ ವಿ.ವಿ.ಯಲ್ಲಿ ಇಂಗ್ಲಿಷ್ ವಿಭಾಗವನ್ನು ಸೇರಲು ಅರ್ಜಿ ಹಾಕಲು ಪ್ರೋತ್ಸಾಹಿಸಿ, ಅರ್ಜಿ ಫಾರ್ಮ್ ಕೂಡ ಕೂಡಲೇ ತರಿಸಿಕೊಟ್ಟರು.’

ಅಲಿ ಅವರು ಹಳೆಯ ಅಧ್ಯಯನ ವಿಭಾಗಗಳಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಅಧ್ಯಾಪಕರಿಗೆ ಬಡ್ತಿಗಳನ್ನು ಕೊಟ್ಟು, ವಿ.ವಿ.ಯ ಶೈಕ್ಷಣಿಕ ವಿಭಾಗಗಳಿಗೆ ಹೊಸ ಶಕ್ತಿಯನ್ನು ತುಂಬಿದರು. ವಿ.ವಿ.ಯ ಆರಂಭದ ಕಾಲದಿಂದ ಸಹೋದ್ಯೋಗಿಗಳಾಗಿದ್ದ ಬಯೋಸೈನ್ಸ್ ವಿಭಾಗದ ಸ್ನೇಹಿತ ಪ್ರೊ.ಅಬ್ದುಲ್ ರೆಹಮಾನ್ ಮತ್ತು ಪ್ರೊ.ಕೆ.ಎಂ. ಕಾವೇರಿಯಪ್ಪ ಅವರ ಜತೆಗೆ ಅಲಿ ಅವರ ನೆನಪುಗಳನ್ನು ಮೊನ್ನೆ ಹಂಚಿಕೊಂಡೆ. ಅವರಿಬ್ಬರೂ ಮುಂದೆ ಕುಲಪತಿಗಳಾದವರು. ಅವರೆಲ್ಲರೂ ನೆನಪಿಸಿಕೊಳ್ಳುವುದು - ಮಾನವೀಯತೆ, ಸರಳತೆ ಮತ್ತು ಪ್ರೀತಿಯ ಸಂಬಂಧದ ಮೂಲಕ ಬಹಳ ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಿ ಹೊಸ ವಿ.ವಿ.ಯನ್ನು ಶೈಕ್ಷಣಿಕವಾಗಿ ಭದ್ರಗೊಳಿಸಿದ ಅಲಿ ಅವರ ಅಪೂರ್ವ ಮಾದರಿಯನ್ನು. 1980–2000ರ ಕಾಲಘಟ್ಟದಲ್ಲಿ ಮಂಗಳೂರು ವಿ.ವಿ. ಶೈಕ್ಷಣಿಕವಾಗಿ ಕರ್ನಾಟಕದಲ್ಲಿ ಉನ್ನತ ಸ್ಥಾನವನ್ನು ಪಡೆದುದರಲ್ಲಿ ಮೊದಲ ಕುಲಪತಿಯಾಗಿ ಪ್ರೊ. ಅಲಿ ಅವರು ಹಾಕಿದ ಬುನಾದಿ ಮಹತ್ವದ ಪಾತ್ರವನ್ನು ವಹಿಸಿದೆ.

ಅಲಿ ಅವರಿಗಿದ್ದ ಶೈಕ್ಷಣಿಕ ಕಾಳಜಿಯ ಒಂದು ವೈಯಕ್ತಿಕ ನಿದರ್ಶನ. 1981ರಲ್ಲಿ ನಾನು ಅವರ ಆಪ್ತಕಾರ್ಯದರ್ಶಿಯಾಗಿ ಆಡಳಿತಕ್ಕೆ ಬಂದಕಾರಣ ನನ್ನ ಪಿಎಚ್.ಡಿ ಸಲ್ಲಿಕೆ ತಡವಾಗುತ್ತಿತ್ತು. ನನ್ನ ಮಾರ್ಗದರ್ಶಕರಾದ ಡಾ.ಹಾ.ಮಾ. ನಾಯಕರು ಮೈಸೂರಿನಿಂದ ನನಗೆ ಎಚ್ಚರಿಕೆಯ ನೋಟಿಸ್ ಕಳುಹಿಸಿದ್ದರು. ಈ ವಿಷಯವನ್ನು ಪ್ರೊ. ಅಲಿ ಅವರಲ್ಲಿ ತಿಳಿಸಿದಾಗ ಅದೇ ವರ್ಷ ನವೆಂಬರ್ನಲ್ಲಿ ನನ್ನನ್ನು ಕನ್ನಡ ವಿಭಾಗಕ್ಕೆ ಹಿಂದಕ್ಕೆ ಕಳುಹಿಸಿದರು. ಜತೆಗೆ ಥೀಸಿಸ್ ಅನ್ನು ಇಬ್ಬರು ಟೈಪಿಸ್ಟ್ರಲ್ಲಿ ಟೈಪ್ ಮಾಡಿಸಿದರೆ ಬೇಗನೆ ಸಲ್ಲಿಸಬಹುದು ಎನ್ನುವ ಪ್ರಾಯೋಗಿಕ ಸಲಹೆಯನ್ನು ಕೊಟ್ಟರು. ಇದರಿಂದ ನನಗೆ ಬಹಳ ಅನುಕೂಲವಾಗಿ ಸಕಾಲಕ್ಕೆ ಸಲ್ಲಿಸಿ ಪಿಎಚ್.ಡಿ ಪದವಿ ದೊರೆಯಿತು.

ನಾನು ಮಂಗಳೂರು ವಿ.ವಿ.ಯ ಕನ್ನಡ ವಿಭಾಗದ ಮುಖ್ಯಸ್ಥನಾಗಿ ನಡೆಸಿದ ಮೊದಲನೆಯ ವಿಚಾರಸಂಕಿರಣ ಐತಿಹಾಸಿಕವಾಗಿ ಮಹತ್ವದ್ದು. ‘ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು’ ಎಂಬ ವಿಚಾರ ಸಂಕಿರಣ
ವನ್ನು 1984ರ ಡಿಸೆಂಬರ್ 8 ಮತ್ತು 9ರಂದು ಮಂಗಳೂರಿನಲ್ಲಿ ನಡೆಸಲಾಯಿತು. ಡಾ. ಶಿವರಾಮ ಕಾರಂತರು ಉದ್ಘಾಟಿಸಿದ ಆ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಅಲಿ ಅವರು ಬಹಳ ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಆ ದಿನ ಅವರು ಹೇಳಿದ ಕೆಲವು ಮಾತುಗಳು: ‘ಶಾಂತಿ, ಪ್ರಗತಿ, ಒಳ್ಳೆಯತನ, ಮಹತ್ತು ಇವುಗಳ ದಾರಿಯಲ್ಲಿ ಚಲಿಸುವುದು; ಮತ್ತು ಕ್ರೌರ್ಯ, ಸ್ವಾರ್ಥ, ವಂಚನೆಯಂತಹ ದುರಂತಗಳನ್ನು ದೂರಮಾಡುವುದು ಸಾಹಿತ್ಯದ ಉದ್ದೇಶ. ವಾಲ್ಟರ್ ಸ್ಕಾಟ್ನಂತಹ ಐತಿಹಾಸಿಕ ಕಾದಂಬರಿಕಾರರು ಕಲೆ ಸಂಸ್ಕೃತಿ ನಡವಳಿಕೆಗಳ ಪರಿಚಯವನ್ನು ಮಾಡುತ್ತ ತಮ್ಮ ಕೃತಿಗಳ ಮೂಲಕ ಹೊಸ ಇತಿಹಾಸವನ್ನು ಬರೆದರು.’

ಮಂಗಳೂರು ವಿ.ವಿ.ಯ ಮೊದಲನೆಯ ಘಟಿಕೋತ್ಸವವು ಪ್ರೊ.ಅಲಿ ಅವರು ಕುಲಪತಿ ಆಗಿದ್ದ ಅವಧಿಯಲ್ಲಿ 1983ರಲ್ಲಿ ಮಂಗಳೂರು ಪುರಭವನದಲ್ಲಿ ನಡೆಯಿತು. ಆ ವರ್ಷ ಗೌರವ ಡಾಕ್ಟರೇಟ್ ಪದವಿ ಪಡೆದವರು ಶಿವರಾಮ ಕಾರಂತ, ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಮತ್ತು ಜನರಲ್ ಕೆ.ಎಂ. ಕಾರಿಯಪ್ಪ. ಉನ್ನತ ವ್ಯಕ್ತಿತ್ವದವರಿಗೆ ಗೌರವ ಕೊಟ್ಟ ಸಾರ್ಥಕತೆಯನ್ನು ಅಲಿ ಅವರು ನಮ್ಮೆಲ್ಲರ ಜತೆಗೆ ಹಂಚಿಕೊಂಡಿದ್ದರು. ಅವರು ಮಂಗಳೂರು ವಿ.ವಿ.ಯ ಲಾಂಛನದ ಧ್ಯೇಯವಾಕ್ಯವನ್ನು ರೂಪಿಸುವಾಗ ‘ಜ್ಞಾನವೇ ಬೆಳಕು’ ಎನ್ನುವ ನುಡಿಯನ್ನು ಇಷ್ಟಪಟ್ಟಿದ್ದರು. ಲಾಂಛನದ ಚಿತ್ರದಲ್ಲಿ ಕರಾವಳಿಯ ಯಕ್ಷಗಾನದ ಕಿರೀಟ ಮತ್ತು ಕೊಡಗಿನ ಕಾಫಿ ಹಣ್ಣುಗಳ ಗೊಂಚಲುಗಳನ್ನು ಇರಿಸಲು ಸೂಚಿಸಿದ್ದರು.

ಕುಲಪತಿಯಾಗಿ ಮೂರು ವರ್ಷಗಳ ಅವಧಿ ಮುಗಿದ ಬಳಿಕ ಅಲಿ ಅವರಿಗೆ ಮತ್ತೆ ಮೂರು ವರ್ಷಗಳ ಅವಧಿಯ ವಿಸ್ತರಣೆ ಸಿಗಲಿಲ್ಲ. ಆರಂಭದಲ್ಲಿ ಒಂದು ವರ್ಷದ ವಿಸ್ತರಣೆ ದೊರಕಿತು. ಆ ವೇಳೆಗೆ ಅವರ ವಿರುದ್ಧ ಸುಳ್ಳು ಆರೋಪಗಳ ಅಪಪ್ರಚಾರ ಆರಂಭವಾಯಿತು. ಮತೀಯ ಮತ್ತು ರಾಜಕೀಯದ ಕೆಲವು ಶಕ್ತಿಗಳು ಮುಷ್ಕರದ, ಗೊಂದಲದ ವಾತಾವರಣ ನಿರ್ಮಾಣಮಾಡುವ ಕೆಲಸದಲ್ಲಿ ತೊಡಗಿದವು. ನಾವು ಅಧ್ಯಾಪಕರು, ಸ್ನಾತಕೋತ್ತರ ಕೇಂದ್ರದಲ್ಲಿ ಹತ್ತು ಹನ್ನೆರಡು ವರ್ಷಗಳ ಕಾಲ ಎಲ್ಲ ಸಂಕಷ್ಟಗಳನ್ನು ಸಹಿಸಿಕೊಂಡು ಕೊಣಾಜೆಯಲ್ಲಿ ವಿಶ್ವವಿದ್ಯಾನಿಲಯ ಉಳಿಯಬೇಕೆಂದು ಬಯಸಿದವರು, ಅಲಿ ಅವರ ಪರವಾಗಿ ಗಟ್ಟಿಯಾಗಿ ನಿಂತೆವು. ಆಗಿನ ಸಿಂಡಿಕೇಟ್ನ ಎಲ್ಲ ಮುತ್ಸದ್ದಿ ಹಿರಿಯರು ಕುಲಪತಿ ಅವರಿಗೆ ಬೆಂಬಲವಾಗಿ ನಿಂತರು. ಆದರೆ ಅಲಿ ಅವರು ನೊಂದಿದ್ದರು.

ಬದಲಾದ ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ಕುಲಪತಿಯಾಗಿ ಅವರ ವಿಸ್ತರಣೆಯನ್ನು ತಿಂಗಳುಗಳ ಮಟ್ಟಕ್ಕೆ ಇಳಿಸಿದಾಗ, ಹಿತೈಷಿಗಳ ಸಲಹೆಯಂತೆ ಅಲಿ ಅವರು ರಾಜೀನಾಮೆಯನ್ನು ಸಲ್ಲಿಸಿ ತಮಗೆ ವಿಸ್ತರಣೆ ಬೇಡವೆಂದು ತಿಳಿಸಿದರು. ಹೀಗೆ ಮೊದಲ ಕುಲಪತಿಯಾಗಿ ಅವರು ಮಂಗಳೂರು ವಿ.ವಿ.ಯಲ್ಲಿ ಇದ್ದದ್ದು ನಾಲ್ಕೂವರೆ ವರ್ಷಗಳ ಕಾಲ.

ಅಲಿ ಅವರ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಪ್ರತಿಫಲವಾಗಿ ಅವರನ್ನು ಗೋವಾದಲ್ಲಿ ಸ್ಥಾಪನೆಯಾದ ಹೊಸ ವಿ.ವಿ.ಗೆ ಮೊದಲನೆಯ ಕುಲಪತಿಯಾಗಿ ನೇಮಕ ಮಾಡಲಾಯಿತು. ಅಲ್ಲಿ ಅವರು ಮತ್ತೆ ಶೂನ್ಯದಿಂದ ವಿ.ವಿ.ಯನ್ನು ಕಟ್ಟಿದರು. ಕರ್ನಾಟಕದ ಅನೇಕ ಮಂದಿ ತರುಣರನ್ನು ಅವರು ಗೋವಾ ವಿ.ವಿ.ಯಲ್ಲಿ ಅಧ್ಯಾಪಕರಾಗಿ ನೇಮಕಮಾಡಿದ್ದನ್ನು ಅವರ ಒಡನಾಟದಲ್ಲಿ ನಾನು ಕಂಡಿದ್ದೇನೆ. ನಾನು ಕನ್ನಡ ವಿ.ವಿ. ಹಂಪಿಯ ಕುಲಪತಿ ಆದಾಗ 2004ರಲ್ಲಿ ಪ್ರೊ. ಅಲಿ ಅವರ ಆಶೀರ್ವಾದ ಪಡೆಯಲು ಮೈಸೂರಿನ ಸರಸ್ವತಿಪುರಂನ ಅವರ ಮನೆಗೆ ಹೋದೆ. ಅವರು ನನಗೆ ಕುಲಪತಿಯಾದವರು ಮಾಡಬೇಕಾದ ಕರ್ತವ್ಯಗಳ ಸಂಹಿತೆಯನ್ನು ಬರೆದ ಒಂದು ಪರಿಪತ್ರವನ್ನು ಕೊಟ್ಟು ಅದರ ಕುರಿತು ವಿವರಿಸಿದರು. ಎರಡು ವಿ.ವಿ.ಗಳ ಸ್ಥಾಪಕ ಕುಲಪತಿಯಾಗಿ ಅವರ ಅನುಭವ ಅದರಲ್ಲಿ ಒಡಮೂಡಿತ್ತು. ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ 2008ರ ಘಟಿಕೋತ್ಸವದಲ್ಲಿ ಪ್ರೊ. ಅಲಿ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದು ನನಗೆ ಧನ್ಯತೆಯ ಕ್ಷಣ.

ಮಂಗಳೂರು ವಿ.ವಿ. ಸ್ಥಾಪನೆಯಾಗಿ ಈ ಸೆಪ್ಟೆಂಬರ್ 10ಕ್ಕೆ 42 ವರ್ಷಗಳು ತುಂಬುತ್ತವೆ. ಈ ನಾಲ್ಕು ದಶಕಗಳಲ್ಲಿ ನೇತ್ರಾವತಿ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ವಿಶ್ವವಿದ್ಯಾನಿಲಯವು ಸರ್ವತೋಮುಖವಾಗಿ ಬೆಳೆದಿದೆ. ಪ್ರೊ.ಅಲಿ ಅವರು ಕಂಡ ಕನಸುಗಳು, ಶಿಕ್ಷಣದ ಮೂಲಕ ಸಾಧಿತವಾಗಬೇಕಾದ ಮಾನವೀಯತೆ ಮತ್ತು ಸೌಹಾರ್ದತೆ ಅವು ಎಂದೂ ಅಳಿಯುವುದಿಲ್ಲ, ಅಳಿಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.