ಜಾಗತೀಕರಣವೆಂದು ನಾವು ಕರೆಯುವ ರೂಢಿ ಮಾಡಿಕೊಂಡಿರುವ ವಿದ್ಯಮಾನವು ನಮ್ಮ ಬದುಕುಗಳ ಮೇಲೆ ಇವತ್ತು ಏನೆಲ್ಲ ಬಗೆಯ ಮರ್ಮಾಘಾತಗಳನ್ನು ಮಾಡುತ್ತಿದೆಯೆಂಬುದನ್ನು ದೇವನೂರ ಮಹಾದೇವ ಅವರು ‘ಪ್ರಜಾವಾಣಿ’ಯ ‘ಮುಕ್ತಛಂದ’ದಲ್ಲಿ ಈಚೆಗೆ ಬರೆದ ಲೇಖನದಲ್ಲಿ ವಿವರಿಸಿದ್ದಾರೆ. ಆದರೆ, ಆ ಬರಹದಲ್ಲೊಂದು ಅಪೂರ್ಣತೆ ಇದೆ - ಊರೂರೂ ಬಿಸಿಯೇರಿ ಅಗ್ನಿಕುಂಡವಾಗಿರುವುದು, ಮನುಷ್ಯರನ್ನು ಕೀಟಗಳಂತೆ ಕೊಲ್ಲಲಾಗುತ್ತಿರುವುದು, ಅವರಿಗೆ ಯಾವ ಪರ್ಯಾಯ ಆಯ್ಕೆಯೂ ಇರದಂತೆ ನೋಡಿಕೊಳ್ಳುವುದು –ಇತ್ಯಾದಿ ಅವರು ಉಲ್ಲೇಖಿಸಿದ ಇವತ್ತಿನ ಬಂಡವಾಳಶಾಹಿಯ ದುಷ್ಕತ್ಯಗಳೇನೇನಿವೆ, ಅವು ಯಾವ ಮನುಷ್ಯರಿಗೂ (ಅವರ ವರ್ಗ-ಜಾತಿ-ಲಿಂಗ-ರಾಷ್ಟ್ರ ಯಾವುದೇ ಆಗಿದ್ದರೂ) ಕಾಣದೆಯೆ ಇರುವುದು ಸಾಧ್ಯವೇ ಇಲ್ಲ. ಹಾಗಿದ್ದರೂ, ಅಂಥ ಆಪತ್ತು–ಅನ್ಯಾಯಗಳನ್ನು ನಾವೂ ನಮ್ಮಂಥ ಕೋಟ್ಯಂತರ ಮಾನವರೂ ಇವತ್ತು ಕಂಡೂಕಾಣದಂತೆ ಕಣ್ಮುಚ್ಚಿ ಸಾಗುತ್ತಿರುವುದೇತಕ್ಕೆ? ಇದಕ್ಕೆ ಪ್ರತಿರೋಧ ಹಾಗಿರಲಿ, ಪ್ರತಿಸ್ಪಂದನೆಯನ್ನೂ ಕೊಡದಷ್ಟು ನಮ್ಮನ್ನು ನಿಷ್ಕ್ರಿಯರನ್ನಾಗಿ ಮಾಡಿರುವ ಮಾಯೆಯದು ಯಾವುದು? ಈ ಪ್ರಶ್ನೆಯನ್ನು ದೇವನೂರರು ಎತ್ತುವುದಿಲ್ಲ. ನನಗೆ ಕಾಣುವಂತೆ, ಜಾಗತೀಕರಣದ ಜಗತ್ತಿನೊಳಗೆ ಸಂಸ್ಕೃತಿ ಪ್ರವೇಶ ಮಾಡುವುದು ಇಲ್ಲಿಯೇ.

ಸಂಸ್ಕೃತಿ ಎಂಬ ಪದವನ್ನು ನಾವು ಯೋಚನೆ ಮಾಡುವ ವಿಧಾನವನ್ನೇ ನಿಯಂತ್ರಿಸುವ ಮಾಯಾಶಕ್ತಿ–ಅದು ಕಣ್ಣಿಗೆ ಕಾಣದ, ಆದರೆ ಕೆಲಸವನ್ನೆಲ್ಲ ಮಾಡುವ ಸಾಫ್ಟ್‌ವೇರ್ –ಎಂಬ ವಿಶಾಲಾರ್ಥದಲ್ಲಿ ವ್ಯಾಖ್ಯಾನಿಸಿಕೊಳ್ಳುವುದಾದರೆ, ಈಗ ಜಾಗತೀಕರಣವು ನಮ್ಮೊಳಗೆ ಮಾಡಿರುವ ಮರ್ಮಾಘಾತವನ್ನು ಒಂದೇ ಪದಪುಂಜದಲ್ಲಿ ವರ್ಣಿಸಿ ಮುಗಿಸಲಿಕ್ಕೆ ಸಾಧ್ಯವಿದೆ. ಅದನ್ನು ನಾನು ಸದ್ಯಕ್ಕೆ ‘ಆತ್ಮಹತ್ಯೆಯ ಸಂಸ್ಕೃತಿ’ಯೊಂದರ ನಿರ್ಮಾಣ - ಎಂದು ಕರೆದುಕೊಳ್ಳುತ್ತೇನೆ. ಆತ್ಮಹತ್ಯೆ ಎಂಬ ಪದವನ್ನು ನಾನಿಲ್ಲಿ ತುಂಬ ವಿಶೇಷ ಮತ್ತು ವಿಶಾಲ ಅರ್ಥದಲ್ಲಿ ಬಳಸುತ್ತಿದ್ದೇನೆ. ಸಾದಾ ರೂಢಿಯಲ್ಲಿ ಸ್ವತಃ ನಮ್ಮನ್ನು ನಾವು ಭೌತಿಕವಾಗಿ ಕೊಂದುಕೊಳ್ಳುವ ಕೆಲಸಕ್ಕೆ ಆ ಹೆಸರು ಹಚ್ಚಲಾಗುತ್ತದೆ; ಜಾಗತೀಕರಣವು ಅಷ್ಟು ನೇರವಾದ ಅರ್ಥದಲ್ಲಿ ಕೂಡಾ ಹಲವರನ್ನು ಆತ್ಮಹತ್ಯೆಯ ಮಾರ್ಗಕ್ಕೆ ಒಯ್ದಿದೆ ಎಂಬುದೂ ನಮಗೆಲ್ಲ ಗೊತ್ತಿದೆ. ಆದರೆ, ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಇನ್ನೊಂದು ಬಗೆಯ ‘ಆತ್ಮ’ಹತ್ಯೆಯನ್ನು ಅದು ಪ್ರವರ್ಧಮಾನಕ್ಕೆ ತಂದಿದೆ. ಅದು - ಆತ್ಮವನ್ನು ಮಾತ್ರ ಹತ್ಯೆ ಮಾಡಿಕೊಂಡು ಉಳಿದಂತೆ ಭೌತಿಕವಾಗಿ ಬದುಕಿಯೇ ಉಳಿಯುವ ಮತ್ತು ಅಂಥ ಉಳಿವನ್ನೇ ಉತ್ತಮ ಗುಣಮಟ್ಟದ ಬದುಕೆಂದು ಸಂಭ್ರಮಿಸಿಕೊಳ್ಳುವ ಹೆಚ್ಚು ಜಿಡಿಪಿಯ ಹೊಸ ನಾಗರಿಕ ವಿಧಾನ.

ಈ ಬಗೆಯ ಆತ್ಮಹತ್ಯೆಗಳಿಗೆ ಇವತ್ತು ಎಲ್ಲ ಕ್ಷೇತ್ರಗಳಿಂದ ಬೇಕಷ್ಟು ಉದಾಹರಣೆಗಳನ್ನು ಎತ್ತಿ ತೋರಿಸಬಹುದು. ಮೊನ್ನೆ ನನ್ನ ಅಧ್ಯಾಪಕ ಮಿತ್ರರೊಬ್ಬರು ಹೇಳಿದ ಮಾತನ್ನೇ ಉಲ್ಲೇಖಿಸುತ್ತೇನೆ - ‘ನೋಡಯ್ಯ, ಇವತ್ತು ನನ್ನ ಕಾಲೇಜಿನಲ್ಲಿ ನಾನೂ ಮತ್ತು ನನ್ನಂಥದೇ ಹಾಗೂ ನನ್ನಷ್ಟೇ ಕೆಲಸ ಮಾಡುವ ಹಲವರೂ ಸುಖವಾಗಿ ಸಹಜೀವನ ನಡೆಸುತ್ತಿದ್ದೇವೆ; ಒಂದೇ ವ್ಯತ್ಯಾಸವೆಂದರೆ ನನಗೆ ಬರುವ ಇಪ್ಪತ್ತನೆಯ ಒಂದರಷ್ಟು ಮಾತ್ರ ಅವರಿಗೆ ಸಂಬಳ ಸಿಗುತ್ತದೆ!’.

ಜಾಗತೀಕರಣಕ್ಕಿಂತ ಮುಂಚಿನ ಕಾಲದಲ್ಲಿ ಇಂಥ ಆದಾಯದ ವ್ಯತ್ಯಾಸ ಇರಲಿಲ್ಲವೆಂದೇನೂ ನಾನು ಹೇಳುವುದಿಲ್ಲ; ಆದರೆ ಇಂಥ ವ್ಯತ್ಯಾಸವನ್ನು ಸರ್ವಸಮಾನತೆಯ ಆದರ್ಶದ ಈ ಕಾಲದಲ್ಲೂ ಇಷ್ಟು ನಿತ್ಯಸಹಜವೆಂಬಂತೆ ಒಪ್ಪಿಕೊಳ್ಳುವ ರೂಢಿಯನ್ನು ಮಾತ್ರ ಜಾಗತೀಕರಣವು ಮಾಡಿಸಿಕೊಟ್ಟಿದೆ; ಹೀಗಿರುವುದು ತಪ್ಪಲ್ಲವೆ? ಎಂಬ ಆತ್ಮನಿರೀಕ್ಷಣೆಯೂ ಹುಟ್ಟದಷ್ಟು ನಮ್ಮನ್ನು ಅದು ಜಡ್ಡುಗಟ್ಟಿಸಿದೆ.

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಾಗತೀಕರಣಕ್ಕೆ ಮೂಲಾಸ್ತಿವಾರವನ್ನು ಹಾಕಿರುವ ವ್ಯಕ್ತಿಕೇಂದ್ರಿತ ದೃಷ್ಟಿಯು ವ್ಯಷ್ಟಿ ಮತ್ತು ಸಮಷ್ಟಿಗಳನ್ನು ಇಂಥ ಸಂಬಂಧದಲ್ಲಿ ನೋಡುವ ಕ್ರಮವನ್ನೇ ಸಂಪೂರ್ಣ ಒರೆಸಿಹಾಕಿದೆ; ಅಥವಾ ಎಲ್ಲ ವ್ಯಕ್ತಿಗಳಲ್ಲಿ ಇರುವ ಆತ್ಮವಸ್ತುವೂ ಬೇರೆಬೇರೆಯದೇನಲ್ಲ ಎಂಬ ಸಾಂಪ್ರದಾಯಿಕ ಪ್ರಜ್ಞೆಯನ್ನು ಮರೆಸಿಹಾಕಿದೆ. ಹಾಗಾಗಿ ಊರು ಅಗ್ನಿಕುಂಡವಾದಾಗ ನಾವು, ನಮ್ಮ ಬಗ್ಗೆಯೇ ಚಿಂತಿಸುತ್ತ ಹವಾನಿಯಂತ್ರಣವಿರುವ ಕಾರನ್ನು ಕೊಳ್ಳುತ್ತೇವೆ; ಆ ಖಾಸಗೀ ಹವಾನಿಯಂತ್ರಣವು ಸಾರ್ವಜನಿಕ ಹವೆಯನ್ನು ಇನ್ನಷ್ಟು ಅನಿಯಂತ್ರಿತಗೊಳಿಸುತ್ತದೆ ಎಂಬುದನ್ನು ಗೊತ್ತಿದ್ದೂ ಮರೆಯುತ್ತೇವೆ. ಇದು ಆತ್ಮಹತ್ಯೆಯ ಸಂಸ್ಕೃತಿಯು ನಮ್ಮನ್ನಾವರಿಸಿರುವ ಒಂದು ವಿಧಾನ.

ಇನ್ನೊಂದು ವಿಧಾನವೆಂದರೆ, ಒಬ್ಬೊಬ್ಬ ವ್ಯಕ್ತಿಯ ಒಳಕ್ಕೂ ಪ್ರವೇಶ ಮಾಡಿ, ಆಯಾ ವ್ಯಕ್ತಿಯ ಆತ್ಮಕ್ಕೂ ಮತ್ತು ಇಂದ್ರಿಯಗಳಿಗೂ ಇರುವ ಸಾವಯವ ಸಂಬಂಧವನ್ನು ಛಿದ್ರಗೊಳಿಸಿ ಆತ್ಮಹತ್ಯೆ ಮಾಡಿಸುವುದು. ನಮ್ಮ ಕಾಲದ ಬಹುತೇಕ ನವಮಾಧ್ಯಮಗಳು ಇಂಥ ಖಾಸಗೀ ಹತ್ಯೆಗಳ ಸಾಮೂಹಿಕ ಅಸ್ತ್ರಗಳೇ ಸರಿ. ಇಂಥ ಮಾಧ್ಯಮಗಳು ಪ್ರಚಲಿತಗೊಂಡ ಬಳಿಕ, ಇಂದ್ರಿಯಗಳ ಮೇಲೆರಗಿ ಉದ್ರೇಕವನ್ನುಂಟುಮಾಡುವ ಭಾವಲಂಪಟತೆಯನ್ನೇ ನಾವು ರಸಾನುಭವ ಎಂದು ತಿಳಿಯಲಾರಂಭಿಸಿದ್ದೇವೆ; ಸದಾ ಸುರಿಯುತ್ತಲೇ ಇರುವ ಮಾಹಿತಿಯ ಮಹಾಪೂರವನ್ನೇ ತಿಳಿವಳಿಕೆಯೆಂದು ಭ್ರಮಿಸಿದ್ದೇವೆ; ಖಾಸಗಿಯಾದ ಚಿಂತನಶೀಲ ಕ್ಷಣಗಳನ್ನು ಹರಣಮಾಡುವ ಸಲಕರಣೆಗಳನ್ನೇ ಸಂಪರ್ಕಸಾಧನಗಳೆಂದು ಕರೆದಿದ್ದೇವೆ.

ಇವತ್ತು ನಮ್ಮ ರುಚಿ ಮತ್ತು ಅಭಿರುಚಿಗಳ ಶಿಕ್ಷಣ ಆಗುತ್ತಿರುವುದು ಇಂಥ ಉಪಕರಣಗಳ ಮತ್ತು ಮಾಧ್ಯಮಗಳ ಮೂಲಕವೇ ಆಗಿರುವುದರಿಂದ, ನಮಗೇ ಗೊತ್ತಾಗದಂತೆ ನಮ್ಮ ಆತ್ಮಚ್ಛೇದದ ಶಸ್ತ್ರಚಿಕಿತ್ಸೆ ಜರುಗುತ್ತಿದೆ–ಆದಕಾರಣ, ಅನಗತ್ಯವಾದ ಯಾವುಯಾವುದೋ ಸಂಗತಿಗೆ ಪ್ರತಿಸ್ಪಂದಿಸಲು ನಾವು ನಮ್ಮ ಭಾವಬಂಡವಾಳವನ್ನು ಖರ್ಚು ಮಾಡಿಕೊಂಡು, ಯಾವುದರ ಬಗ್ಗೆ ಪ್ರತಿಸ್ಪಂದಿಸುವ ಅಗತ್ಯವಿದೆಯೋ ಅದರ ಬಗ್ಗೆ ನಿರ್ಭಾವುಕರೂ ಜಡರೂ ಆಗಿ ಕೂತಿರುವ ವಿಪರ್ಯಾಸ ನಿರ್ಮಾಣವಾಗಿದೆ. ನಮ್ಮ ಆತ್ಮವನ್ನೇ ಇಂದ್ರಿಯಗಳ ‘ವ್ಯಾಪ್ತಿ ಪ್ರದೇಶದಿಂದ ಹೊರಗೆ’ ರವಾನಿಸಿರುವ ಹೊಸ ಬಗೆಯ ಆತ್ಮಹತ್ಯೆಯ ಮಾರ್ಗ ಇದು!

ಜಾಗತೀಕರಣವು ನಮ್ಮೊಳಗೆ ಉಂಟುಮಾಡಿರುವ ಸಾಂಸ್ಕೃತಿಕ ಪಲ್ಲಟಗಳಲ್ಲಿ ಪ್ರಮುಖವಾದ ಇನ್ನೊಂದು ಘಟನೆ - ಎಲ್ಲ ಮೌಲ್ಯಗಳನ್ನೂ ಬೆಲೆಯಾಗಿ ಅನುವಾದಿಸಿ ನೋಡುವಂತೆ ಹೇರಿರುವ ಒತ್ತಡ. ಕಳೆದ ಎರಡೇ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದೊಳಗೆ ಆಗಿರುವ ಎಲ್ಲ ವ್ಯಾಪಾರೀಕರಣಗಳಿಗೂ ಮೂಲಪ್ರೇರಣೆಯಾಗಿರುವುದು ಈ ಪಲ್ಲಟ. ಇದರಿಂದಾಗಿ, ಯಾವುದಕ್ಕೆ ಸುಲಭವಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲವೋ, ಅದು ಮೌಲ್ಯವಿಲ್ಲದ್ದು ಎಂಬ ನಂಬಿಕೆಯನ್ನು ಇದು ನಮ್ಮ ಮನಸ್ಸಿನ ಆಳದಲ್ಲಿ ನೆಟ್ಟಿದೆ. ಉದಾಹರಣೆಗೆ, ನಾಟಕ-ರಂಗಭೂಮಿಯ ಕೆಲಸ ಮಾಡುವ ನನ್ನಂಥ ಹಲವರು ಇವತ್ತು ನಾವು ಮಾಡುವ ಕೆಲಸದ ‘ಪ್ರಯೋಜನ’ ಏನೆಂಬುದನ್ನು ನಾವೇ ವಿವರಿಸಬೇಕಾಗಿರುವ ಅನುಚಿತ ಉದ್ಯೋಗಕ್ಕೆ ಇಳಿಯಬೇಕಾಗಿದೆ. ಲೇಖಕನೊಬ್ಬ ಇವತ್ತು ಸ್ವತಃ ತಾನೇ ತನ್ನ ಏಜೆಂಟನೂ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿರಬೇಕಾಗಿರುವ ಈ ಒತ್ತಡವು ಈಗಾಗಲೇ ಇಂಗ್ಲಿಷ್ ಭಾಷೆಯನ್ನು ಮೀರಿ ಕನ್ನಡದೊಳಕ್ಕೂ ಬಗೆಬಗೆಯಿಂದ ಪ್ರವೇಶ ಮಾಡುತ್ತಿದೆ. ಕನ್ನಡದ ಕೆಲವಾದರೂ ಲೇಖಕರ ಆತ್ಮಹತ್ಯೆಗೆ ಇದೊಂದೇ ಸಾಧನ ಸಾಕು - ಎಂದು ನನಗೆ ಈಚೀಚೆಗೆ ಅನ್ನಿಸುತ್ತಿದೆ.

ನಾನು ಉದಾಹರಿಸಬಯಸುವ ಇನ್ನೊಂದು ಆತ್ಮಹತ್ಯಾ ಮಾದರಿಯು ಮೇಲಿನ ಎಲ್ಲ ವಿಧಾನಗಳಿಗಿಂತಲೂ ಹೆಚ್ಚು ನಾಜೂಕಾದದ್ದು. ಹಲವರು ಈಗಾಗಲೇ ಹೇಳಿರುವಂತೆ, ಜಾಗತೀಕರಣವು ವಸಾಹತುಶಾಹಿಯ ಮುಂದುವರಿಕೆಯೆಂಬುದು ನಿಜವಾದರೂ ಅವೆರಡಕ್ಕೂ ನಡುವೆ ಮುಖ್ಯವಾದ ವ್ಯತ್ಯಾಸವೊಂದಿದೆ. ವಸಾಹತುಶಾಹಿ ಯುಗದ ಹಿಂಸೆ ಮತ್ತು ಪ್ರತಿರೋಧಗಳೆರಡೂ ಕಣ್ಣಿಗೆ ಕಾಣುವಂತಿರುತ್ತಿದ್ದವು; ಆದರೆ ಜಾಗತೀಕರಣದ ಹಿಂಸೆ ಅಮೂರ್ತವಾದದ್ದು. ಮಾತ್ರವಲ್ಲ, ಇಲ್ಲಿ ಶತ್ರು ಯಾರು ಮಿತ್ರ ಯಾರು ಎಂಬುದೂ ಗೊತ್ತಾಗದಿರುವಂಥ ಆಕ್ರಮಣ ಇದು. ಉದಾಹರಣೆಗೆ, ಜಾಗತೀಕರಣದ ಪ್ರವೇಶದ ಜತೆಜತೆಗೇ ಬೌದ್ಧಿಕ ಚಿಂತನೆಯ ವಲಯಗಳಲ್ಲಿ ಕಾಣಿಸಿಕೊಂಡ ವಸಾಹತೋತ್ತರ ಚಿಂತನೆಯೆಂಬ ಸಮುಚ್ಚಯವು ವಸಾಹತುಚಿಂತನೆಗೆ ಪ್ರತಿರೋಧವೆಂಬಂತೆ ಕಾಣಕಾಣುತ್ತಲೇ ಜಾಗತೀಕರಣಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಯಾಕೆಂದರೆ, ಈ ವಸಾಹತೋತ್ತರ ಚಿಂತನೆ ಬಂದಮೇಲೆ, ಪ್ರತಿಯೊಂದು ವಿದ್ಯಮಾನವನ್ನೂ ನಿರ್ದಿಷ್ಟ ಜನಾಂಗ-ಜಾತಿ-ಲಿಂಗಗಳ ಹಿತಾಸಕ್ತಿಯ ಕಣ್ಣಿನಿಂದ ನೋಡುವ ಛಿನ್ನದೃಷ್ಟಿಯೊಂದನ್ನು ನಾವು ರೂಢಿಸಿಕೊಂಡಿದ್ದೇವೆ.

ನನ್ನ ಮಿತ್ರರೊಬ್ಬರು ಆಗಾಗ ಹೇಳುವ ಚಟಾಕಿ ನನಗಿಲ್ಲಿ ನೆನಪಾಗುತ್ತಿದೆ –‘ಇವತ್ತು ಯಾರಾದರೂ “ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಬಾಯ್ತಪ್ಪಿ ಹೇಳಿದರೂ ತಕ್ಷಣವೇ, ಹಾಗೆ ಹೇಳಿದವರ ಜಾತಿ ಯಾವುದು ಎಂಬ ಸಂಶೋಧನಾ ಕುತೂಹಲ ನಮ್ಮ ಮನಸ್ಸಿನೊಳಗೆ ಮೂಡುವಷ್ಟು ನಾವು ಅ-ಜಾಗತಿಕರಾಗಿದ್ದೇವೆ!’ ಹಾಗಾಗಿ ಸಮಷ್ಟಿಯ ಮೇಲೆ ದುಷ್ಪರಿಣಾಮ ಬೀರುವ ಸಂಗತಿಗಳೂ ಹಲವೊಮ್ಮೆ ನಿರ್ದಿಷ್ಟ ಹಿತಾಸಕ್ತಿಗೆ ಅನುಕೂಲವೆಂಬಂತೆ ಕಂಡು, ನಮ್ಮನ್ನು ಮೋಸಗೊಳಿಸುತ್ತವೆ. ನಮ್ಮ ಕಾಲದ ಅನೇಕ ಸಂವೇದನಾಶೀಲ ಧೀಮಂತರೂ ಕ್ರಿಯಾವಂತರೂ ಕೂಡ ತಮ್ಮ ಚಿಂತನೆ-ಕ್ರಿಯೆಗಳಲ್ಲಿ ಇಂಥ ಇಕ್ಕಟ್ಟಿನಲ್ಲಿ ಸಿಲುಕಿ ವಿರೋಧಾಭಾಸಗಳಲ್ಲಿ ತೊಳಲುವ ಉದಾಹರಣೆಗಳನ್ನು ನಾವಿವತ್ತು ಬೇಕಷ್ಟು ಕಾಣಬಹುದು. ವಸಾಹತುಶಾಹಿಯ ಒಡೆದು ಆಳುವ ಮಾರ್ಗವು ಇವತ್ತು ಛಿನ್ನದೃಷ್ಟಿಯ ಇಂಥ ಆತ್ಮಹತ್ಯಾ ಸಿದ್ಧಾಂತಗಳ ಮೂಲಕ ತನ್ನ ಇರವನ್ನು ಮುಂದುವರೆಸುತ್ತ ಮೋಸ ಮಾಡುತ್ತಿದೆ.

ಇಷ್ಟರಮೇಲೆ, ಈ ಜಾಗತೀಕರಣವೆಂಬ ವಿದ್ಯಮಾನವು ಸದ್ಯದ ಕಾಲದೇಶಗಳಲ್ಲಿ ಅನಿವಾರ್ಯವಾದದ್ದಾಗಿತ್ತು; ಹಾಗಾಗಿ ಅದನ್ನು ಸಹಿಸಿಕೊಳ್ಳದೆ ಬೇರೆ ವಿಧಿಯಿಲ್ಲ - ಎಂದು ಹಲವು ಬುದ್ಧಿವಂತರೇ ಹೇಳುವ ಮಾತು ಕೂಡಾ, ಜಾಗತೀಕರಣದ ದುಷ್ಟತನಗಳೆಲ್ಲದರ ಒಂದು ಬೌದ್ಧಿಕ ಸಮರ್ಥನೆಯೆಂಬುದನ್ನು ನಾವು ಮರೆಯಬಾರದು. ಇಂಥ ಸಮರ್ಥನೆಯು ಒಂದು ಕಡೆಗೆ ಪ್ರತಿರೋಧ ಹುಟ್ಟುವ ಸಾಧ್ಯತೆಯನ್ನೇ ತಡೆಯುತ್ತದೆ; ಇನ್ನೊಂದು ಕಡೆಗೆ, ಎಲ್ಲ ಪಾಪಗಳಲ್ಲಿ ಕಡಿಮೆ ಅಪಾಯಕಾರಿಯಾದ ಪಾಪ ಯಾವುದು ಎಂಬಂತೆ ಯೋಚಿಸುವ ಹಾಗೆ ಮಾಡುತ್ತದೆ. ಆತ್ಯಹತ್ಯೆ ಮಾಡಿಕೊಳ್ಳಲೇಬೇಕಾದಾಗ, ಅತ್ಯಂತ ಕಡಿಮೆ ನೋವಿನ ದಾರಿ ಯಾವುದು ಎಂಬುದನ್ನು ಯೋಚಿಸುವಂತೆ ಮಾಡುವ ಆತ್ಮಹತ್ಯಾಪ್ರಚೋದಕ ಚಿಂತನೆ ಇದು!

ಹೀಗೆ ಇವತ್ತು, ಇಡಿಯಿಡಿಯ ಸಂಸ್ಕೃತಿಯೇ ಇಂಥ ಆತ್ಮಘಾತುಕ ಚಿಂತನೆಗಳಿಂದ ಮುನ್ನಡೆಸಲ್ಪಡುತ್ತಿರುವಾಗ, ಬಿಡಿ ಮನುಷ್ಯರಾಗಿ ನಾವು ಮಾಡುವುದಾದರೂ ಏನು? – ಎಂಬ ಪ್ರಶ್ನೆಯನ್ನು ಕೂಡಾ ನಾವು ಎತ್ತಬಾರದೋ ಏನೋ. ಕಾರಣ, ಅದೂ ಕೂಡ ಹತಾಶೆಯ ಕಡೆಗೆ ನಮ್ಮನ್ನು ಮುನ್ನಡೆಸುವ ಇನ್ನೊಂದು ಆತ್ಮಹತ್ಯೆಯ ಮಾರ್ಗ.
‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ’ - ಎಂಬ ಪ್ರತಿಮೆಯು ಕಾಣಿಸುವಷ್ಟು ಹತಾಶ ಸ್ಥಿತಿಯಲ್ಲಿ ಇವತ್ತು ನಾವಿರುವುದು ನಿಜವಿರಬಹುದಾದರೂ, ಅದೇ ಕುಂಟಕುರುಡರು ಪರಸ್ಪರ ಸ್ಥಳಪಲ್ಲಟ ಮಾಡಿಕೊಂಡರೆ, ಲೋಕ ಮುನ್ನಡೆಯುವ ಸಾಧ್ಯತೆಯಿದೆಯಾದ್ದರಿಂದ, ಈ ಹತಾಶ ಪ್ರತಿಮೆಯ ಒಳಗೇ ಆಶಾವಾದಿ ಸಾಧ್ಯತೆಯೂ ತೆರೆದುಕೊಳ್ಳುತ್ತದೆ. ಆದ್ದರಿಂದ, ಈ ದಿಕ್ಕಿನಲ್ಲಿ ಯೋಚಿಸುತ್ತ, ನಾವು ಮಾಡುತ್ತಿರುವ ಕೆಲಸಗಳನ್ನೇ ಇನ್ನಷ್ಟು ಆತ್ಮಾನುಸಂಧಾನದ ಸಮೇತ ಮಾಡುವ ರೂಢಿಯನ್ನು ಬಲಪಡಿಸಿಕೊಂಡರೆ, ಜಗತ್ತನ್ನು ಬದಲಿಸಲಿಕ್ಕೆ ಆಗದಿದ್ದರೂ, ಕಡೆಯ ಪಕ್ಷ ನಮ್ಮನ್ನಾದರೂ ಬದಲಿಸಿಕೊಳ್ಳಲಿಕ್ಕೆ ಸಾಧ್ಯವಾದೀತು ಎಂದು ನಾನು ನಂಬಬಯಸುತ್ತೇನೆ.
(ಲೇಖಕರು ಚಿಂತಕ ಮತ್ತು ರಂಗಕರ್ಮಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.