ಚಿತ್ರರಂಗ ಪುರುಷ ಪ್ರಧಾನವೇ ಆಗಿರುವುದರಿಂದ 'ಕಾಸ್ಟಿಂಗ್ ಕೌಚ್' ಮೊದಲಿನಿಂದಲೂ ಇತ್ತು. ಬರೀ ಕನ್ನಡ ಚಿತ್ರರಂಗ ಅಂತಲೂ ಅಲ್ಲ, ಎಲ್ಲ ಭಾರತೀಯ ಚಿತ್ರರಂಗಗಳಲ್ಲಿಯೂ ಇದು ಇತ್ತು. ಈಗ ಸಿನಿಮಾ ನಿರ್ಮಾಣ ಎನ್ನುವುದು ಒಂದು ವೃತ್ತಿ ಎಂದು ಯಾರೂ ಪರಿಗಣಿಸುತ್ತಿಲ್ಲ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಎಲ್ಲರಿಗೂ ಸಿನಿಮಾ ಎನ್ನುವುದು ಹವ್ಯಾಸವಾಗಿರುವುದರಿಂದ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ಅದನ್ನು ನೋಡುತ್ತಿದ್ದಾರೆ. ಹಾಗೆಯೇ ಪ್ರಚಾರದ ಹುಚ್ಚಿಗಾಗಿ, ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡುವವರು ಸಾಕಷ್ಟಿದ್ದಾರೆ.

ಚಪಲ ಇರುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಅದು ಶೋಷಣೆಗೆ ಕಾರಣ ಆಗಬಾರದು ಅಷ್ಟೆ. ಮಹಿಳೆಯೇ ಒಪ್ಪಿಕೊಂಡು ಸಂಬಂಧ ಬೆಳೆಸಿಕೊಂಡರೆ ಅದು ಬೇರೆ ವಿಷಯ. ಆದರೆ ‘ನೀನು ನನ್ನ ಜತೆ ಮಲಗಿದರೆ ನಾನು ಅವಕಾಶ ಕೊಡುತ್ತೇನೆ’ ಎನ್ನುವುದು ದಬ್ಬಾಳಿಕೆಯಾಗುತ್ತದೆ. ಅದು ತಪ್ಪು.

ನಾನೊಬ್ಬಳು ಮಹಿಳಾ ನಿರ್ದೇಶಕಿ. ನಾನು ಯಾವತ್ತೂ ಆ ಥರದ ಸನ್ನಿವೇಶವನ್ನು ಎದುರಿಸಿಲ್ಲ. ಆದರೆ ಹಲವರು ಹೀಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ನನ್ನ ಬಳಿ ಹೇಳಿಕೊಳ್ಳುತ್ತಿರುತ್ತಾರೆ. ಒಮ್ಮೆ ನನ್ನ ಸಿನಿಮಾ ನಾಯಕಿಗೆ ಒಬ್ಬರು ‘ಬನ್ನಿ ಕಾಫಿಗೆ ಹೋಗೋಣ. ನಿಮ್ಮ ಪಾಸ್‌ಪೋರ್ಟ್ ಕೊಡಿ, ವಿದೇಶಕ್ಕೆ ಹೋಗಬೇಕು’ ಅಂತ ಕರೆದಿದ್ದರಂತೆ. ಆ ನಾಯಕಿ ಈ ಬಗ್ಗೆ ನನ್ನ ಬಳಿ ವಿಚಾರಿಸಿದಳು. ನಾನು ‘ಏನಿಲ್ಲ, ನಮ್ಮ ಚಿತ್ರ ಪೂರ್ತಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ಆಗ್ತಾ ಇದೆ’ ಅಂದೆ. ‘ಹೀಗೆ ನನ್ನನ್ನು ವಿದೇಶಕ್ಕೆ ಕರೀತಾ ಇದ್ದಾರಲ್ಲಾ’ ಎಂದು ಅವರು ಕೇಳಿದಾಗ ‘ಅವರೇನೋ ಆಸೆ ತೋರಿಸುತ್ತಿದ್ದಾರೆ. ನಿಮಗೆ ಇಷ್ವವಾದರೆ ಹೋಗಿ. ಆದರೆ ನಮ್ಮ ಸಿನಿಮಾಗೆ ಅಂತ ಹೋಗಬೇಡಿ. ನಮ್ಮ ಸಿನಿಮಾ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿಲ್ಲ. ಒಂದೊಮ್ಮೆ ನಿಮಗೆ ಇಷ್ಟವಿಲ್ಲದಿದ್ದರೂ ಒತ್ತಾಯ ಮಾಡುತ್ತಿದ್ದರೆ ನನ್ನ ಗಮನಕ್ಕೆ ತನ್ನಿ. ನಾನು ವಿಚಾರಿಸುತ್ತೇನೆ’ ಎಂದು ಸ್ಪಷ್ಟವಾಗಿಯೇ ಹೇಳಿದೆ.

ಎಷ್ಟೋ ಸಲ ನಿರ್ಮಾಪಕರು ನನ್ನ ಬಳಿ ‘ಸಿನಿಮಾ ನಾಯಕಿ ಯಾರು ಅಂತ ಬಹಿರಂಗ ಮಾಡಬೇಡಿ. ನಾನು ಯಾರು ಆಗಬಹುದು ಅಂತ ಯೋಚಿಸಿ ಹೇಳ್ತೀನಿ’ ಅನ್ನುತ್ತಾರೆ. ನಾನು ಅಂಥದ್ದಕ್ಕೆಲ್ಲ ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಇಷ್ಟ ಎಂದು ಯಾರನ್ನೋ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರೆ ಸಿನಿಮಾ ಕಥೆ ಏನಾಗಬೇಡ? ಇಂಥ ಬೇಡಿಕೆಗಳ ಹಿಂದೆ ಇರುವುದು ‘ಕಾಸ್ಟಿಂಗ್ ಕೌಚ್’ ಹುನ್ನಾರವೆ.

ಕನ್ನಡ ಚಿತ್ರರಂಗದಲ್ಲಿ ‘ಕೋ ಆಪರೇಟೀವ್’ ಎಂಬ ಪದವೊಂದು ಚಿತ್ರರಂಗದ ಕೆಟ್ಟ ಪಾರಿಭಾಷಿಕ ಶಬ್ದವೇ ಆಗಿಬಿಟ್ಟಿದೆ. ಯಾವ ರೀತಿಯಲ್ಲಿ ಕೋ ಆಪರೇಟೀವ್? ಯಾರ ಜತೆ ಕೋ ಆಪರೇಟೀವ್? ಆಕೆ ಕೋ ಆಪರೇಟೀವ್ ಆಗದಿದ್ದರೆ ಅವರಿಗೆ ಕಪ್ಪುಪಟ್ಟಿ ಅಂಟಿಸಿ ಎಲ್ಲಿಯೂ ಅವಕಾಶ ಸಿಗದ ಹಾಗೆ ಮಾಡಿಬಿಡುತ್ತಾರೆ. ಚಿತ್ರೀಕರಣದ ಸೆಟ್‌ಗೆ ಬೇಗ ಬರಬೇಕು, ಶಿಸ್ತಿನಿಂದ ಇರಬೇಕು ಎಂದೆಲ್ಲ ಬಯಸುವುದು ಸರಿ. ಅದನ್ನು ಬಿಟ್ಟು ಅವರ ಜತೆ ವೈಯಕ್ತಿಕವಾಗಿ ಸಹಕರಿಸಲಿಲ್ಲ ಎಂದು ವೃತ್ತಿಯಲ್ಲಿ ಬೆಳೆಯದಂತೆ ಕಿರುಕುಳ ಕೊಟ್ಟರೆ ಒಬ್ಬ ಮಹಿಳೆ ಹೇಗೆ ತಡೆದುಕೊಳ್ಳಬಲ್ಲಳು? ಸಿನಿಮಾ ಒಂದೇ ಅಲ್ಲ, ಕಿರುತೆರೆಯಲ್ಲಿಯೂ ಈ ರೀತಿಯ ದೌರ್ಜನ್ಯಗಳು ಸಾಕಷ್ಟಿವೆ.

ಹಿಂದೊಮ್ಮೆ ನನ್ನ ಸಿನಿಮಾದಲ್ಲಿ ಒಂದು ಹಾಡಿಗೆ ನೃತ್ಯ ಮಾಡಲು ಬಂದ ಕಲಾವಿದೆ ‘ನಿಮ್ಮ ತಂಡ ತುಂಬ ಚೆನ್ನಾಗಿದೆ. ಯಾರೂ ನನಗೆ ಕಿರುಕುಳ ನೀಡಿಲ್ಲ’ ಎಂದು ಅಚ್ಚರಿಯಿಂದ ಹೇಳಿದ್ದಳು. ಅಂದರೆ ಕಿರುಕುಳ ಕೊಡದಿರುವ ತಂಡಗಳಿದ್ದರೆ ಅವರಿಗೆ ಆಶ್ಚರ್ಯ ಆಗುವ ಹಾಗಿದೆ ಪರಿಸ್ಥಿತಿ.

ಯಾವುದೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆದರೂ ಅವರು ಅದನ್ನು ಧೈರ್ಯದಿಂದ ಹೇಳಿಕೊಳ್ಳಬೇಕು. ಆದರೆ ಹಾಗೆ ಆದ ಕೂಡಲೇ ಚಿತ್ರರಂಗದಲ್ಲಿ ‘ಅವಳು ಕೋ ಆಪರೇಟೀವ್ ಅಲ್ಲ’ ಎಂದು ನಿರ್ಣಯಿಸಿ ಯಾರೂ ಅವಕಾಶ ಕೊಡುವುದೇ ಇಲ್ಲ. ಅವಳು ನಾಪತ್ತೆಯೇ ಆಗಿಬಿಡುತ್ತಾಳೆ. ಆದ್ದರಿಂದ ದಿಟ್ಟವಾಗಿ ಹೇಳಿ ಬದುಕುವುದೂ ಸುಲಭವಲ್ಲ.

ಯಾವುದೋ ಪುಟ್ಟ ಹಳ್ಳಿಯಿಂದ ಬಂದ ಹೆಣ್ಣುಮಗಳಿಗೆ ಇವನ್ನೆಲ್ಲ ಹೇಗೆ ನಿಭಾಯಿಸುವುದು ಎಂದೇ ಗೊತ್ತಾಗುವುದಿಲ್ಲ. ನಟನೆಯ ಬಗ್ಗೆ ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಕೊನೆಗೆ ದೌರ್ಜನ್ಯಕ್ಕೆ ಒಳಗಾಗಿ ಅದನ್ನು ಪ್ರತಿಭಟಿಸಲೂ ತಿಳಿಯದೇ ಹಾಗೆಯೇ ಹೊರಟುಹೋಗುತ್ತಾರೆ.

ಒಮ್ಮೆ ಒಬ್ಬಳು ನಟಿ ನನ್ನ ಬಳಿ (ಅವಳು ವಿಧವೆ), ‘ಯಾರ ಬಳಿ ಅವಕಾಶ ಕೇಳಿದರೂ ತಮ್ಮ ಜತೆ ಮಲಗುವಂತೆ ಕೇಳುತ್ತಾರೆ. ಏನು ಮಾಡಬೇಕೋ ತಿಳಿಯುತ್ತಿಲ್ಲ’ ಎಂದು ಹೇಳಿಕೊಂಡಿದ್ದಳು. ಅವಳ ಹೆಸರು ಹಾಕದೇ ನಾನು ಆ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಅದನ್ನು ನೋಡಿದ ಟಿ.ವಿ. ಮಾಧ್ಯಮದವರು ಸುದ್ದಿ ಪ್ರಸಾರ ಮಾಡಲಿಕ್ಕಾಗಿ ನನ್ನನ್ನು ಸಂಪರ್ಕಿಸಿದರು. ನಾನು ಅವಳನ್ನು ಕೇಳಿದೆ. ಅವಳು ‘ಬರ್ತೀನಿ’ ಎಂದು ಒಪ್ಪಿಕೊಂಡಳು. ಆದರೆ ಮರುದಿನ ಅವಳು ಬರಲೇ ಇಲ್ಲ. ಎಲ್ಲರೆದುರು ಕೂತು ಎಲ್ಲವನ್ನೂ ಹೇಳುವುದು ಅವಳಿಗೂ ಮುಜುಗರದ ವಿಷಯ. ಯಾರನ್ನೋ ತಂದು ದೌರ್ಜನ್ಯವಾಗಿದೆ ಎಂದು ಮಾಧ್ಯಮದೆದುರು ಕೂರಿಸುವುದು ಸುಲಭ. ಆದರೆ ಆಮೇಲೆ ಅದನ್ನು ಸಾಬೀತುಗೊಳಿಸಲೇ ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಸಾಬೀತುಮಾಡಿದರೂ ಆರೋಪ ಮಾಡಿದವಳ ವೃತ್ತಿಬದುಕು ಇನ್ನೂ ಕೆಟ್ಟದಾಗಿರುತ್ತದೆ. ಆದ್ದರಿಂದಲೇ ತುಂಬ ಜನ ಇದೆಲ್ಲ ಯಾಕೆ ಬೇಕು ಎಂದು ಸುಮ್ಮನೆ ಬಿಟ್ಟುಬಿಡುತ್ತಾರೆ.

ಸಿನಿಮಾರಂಗಕ್ಕೆ ಬರುವ ಕಲಾವಿದೆಯರು ಯಾರೂ ಅಭಿನಯ ತರಬೇತಿ ಪಡೆದವರಾಗಿರುವುದಿಲ್ಲ. ರಂಗಭೂಮಿ ಹಿನ್ನೆಲೆಯವರಾಗಿರುವುದಿಲ್ಲ. ಕೆಲವೊಂದಿಷ್ಟು ಪೋಷಕನಟಿಯರನ್ನುಹೊರತುಪಡಿಸಿ ಉಳಿದೆಲ್ಲ ನಾಯಕಿಯರನ್ನು ಅವರ ಅಂದವನ್ನೇ ಮಾನದಂಡವಾಗಿಸಿಕೊಂಡು ಆಯ್ಕೆ ಮಾಡಿಕೊಂಡಿರುತ್ತಾರೆ. ಒಮ್ಮೆ ಆಯ್ಕೆ ಆದ ಮೇಲೆ ತಮ್ಮ ಪ್ರತಿಭೆಯನ್ನು ಒಂದೊಂದು ಸಿನಿಮಾದಲ್ಲಿಯೂ ಸಾಬೀತುಗೊಳಿಸುತ್ತಾ ಹೋಗಬೇಕಾಗುತ್ತದೆ. ಹೀಗೆ ಅಸಂಘಟಿತ ಕ್ಷೇತ್ರದಲ್ಲಿ ದೌರ್ಜನ್ಯ ನಡೆಯುವುದು ಸಹಜ.
ಚಿತ್ರರಂಗಕ್ಕೆ ಬರುವ ಬಹುತೇಕ ಮಹಿಳೆಯರಿಗೆ ಪರ್ಯಾಯ ವೃತ್ತಿ ಇರುವುದಿಲ್ಲ. ಒಮ್ಮೆ ಇಲ್ಲಿಗೆ ಬಂದಮೇಲೆ ಸಿನಿಮಾ ಕ್ಷೇತ್ರದಲ್ಲಿಯೇ ಇರಬೇಕಾದ ಅನಿವಾರ್ಯತೆ ಅವಿರಿಗಿರುತ್ತದೆ. ಹಾಗಾಗಿ ಅವಕಾಶಗಳ ಆಸೆ ತೋರಿಸಿ ಬೆದರಿಸುವುದು, ನಿಯಂತ್ರಿಸುವುದು ಸುಲಭ. ಏನಾದರೂ ಸಣ್ಣ ಪುಟ್ಟ ವಿಷಯಕ್ಕೆ ಪ್ರತಿಭಟಿಸಿದರೂ ಅವರಿಗೆ ಕಿರುಕುಳ ಶುರುವಾಗುತ್ತದೆ. ಈ ಎಲ್ಲವನ್ನೂ ಸಹಿಸಿಕೊಂಡು ಮಹಿಳೆ ಬದುಕಬೇಕಾಗಿದೆ.

ನಮ್ಮಲ್ಲಿ ಸಾಕಷ್ಟು ಚಲನಚಿತ್ರ ತರಬೇತಿ ನೀಡುವ ಸಂಸ್ಥೆಗಳಿವೆ. ಅಲ್ಲೆಲ್ಲ ತಾಂತ್ರಿಕ ಅಂಶಗಳನ್ನು ಕಲಿಸಲಾಗುತ್ತದೆಯೇ ಹೊರತು, ವೃತ್ತಿಶಿಸ್ತನ್ನು ಕಲಿಸಿಕೊಡುವುದಿಲ್ಲ. ವೃತ್ತಿಪರತೆ ಎನ್ನುವುದು ಶಿಕ್ಷಣದ ಹಂತದಲ್ಲಿಯೇ ಹೇಳಿಕೊಡಬೇಕು.

ಅದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರರಂಗದಲ್ಲಿರುವವರು ತಮ್ಮ ತೆವಲಿಗಾಗಿ ಸಿನಿಮಾ ಮಾಡಬಾರದು. ಸಿನಿಮಾ ಮೇಲಿನ ಪ್ರೀತಿಗಾಗಿಯೇ ಸಿನಿಮಾ ಮಾಡುವಂತಾಗಬೇಕು. ಸಿನಿಮಾ ಮುಗಿಸಿ ಅವರು ತೆವಲು ತೀರಿಸಿಕೊಳ್ಳಲು ಏನಾದರೂ ಮಾಡಿಕೊಳ್ಳಲಿ. ತೆವಲು ತೀರಿಸಿಕೊಳ್ಳಲಿಕ್ಕಾಗಿಯೇ ಸಿನಿಮಾ ಮಾಡಬಾರದು. ಎಲ್ಲಿಯವರೆಗೆ ’ಸಿನಿಮಾ ಮೊದಲು’ ಎಂಬ ಶಿಸ್ತು ರೂಢಿಯಾಗುವುದಿಲ್ಲವೋ ಅಲ್ಲಿಯವರೆಗೆ ವೃತ್ತಿಪರತೆ ತರುವುದು, ದೌರ್ಜನ್ಯ ನಿಲ್ಲಿಸುವುದು ಸಾಧ್ಯವಿಲ್ಲ.

ದೌರ್ಜನ್ಯದ ವಿರುದ್ಧದ ಧ್ವನಿ
ಕವಿತಾ ಲಂಕೇಶ್, ಚೇತನ್ ಮತ್ತು ಪ್ರಿಯಾಂಕಾ ಉಪೇಂದ್ರ ಮೂವರೂ ಸೇರಿ ಚಿತ್ರರಂಗದಲ್ಲಿ ನಡೆಯುವ ಮಹಿಳಾ ದೌರ್ಜನ್ಯದ ವಿರುದ್ಧವೇ ‘ಫೈರ್’ (ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಆ್ಯಂಡ್ ರೈಟ್ಸ್) ಎಂಬ ಒಂದು ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ. ಇದಕ್ಕೆ ಚಿತ್ರರಂಗದಲ್ಲಿನ ಸಮಾನ ಮನಸ್ಕರು ಸದಸ್ಯರಾಗಿರುತ್ತಾರೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಸಮಸ್ಯೆಯನ್ನು ಮುನ್ನೆಲೆಗೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದೇ ಈ ಸಂಸ್ಥೆಯ ಮುಖ್ಯ ಧ್ಯೇಯ.

ನಿರೂಪಣೆ: ಪದ್ಮನಾಭ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.