ಒಳಿತು ಯಾರಿಗೆ ತಾನೆ ಬೇಡ? ಎಲ್ಲರಿಗೂ ಬೇಕಷ್ಟೆ. ಅದರಲ್ಲೂ ನಮ್ಮ ಸದ್ಯದ ಕಾಲಕ್ಕಂತೂ ಇದು ತುಂಬ ತುರ್ತಾಗಿ ಬೇಕಾಗಿದೆ. ಒಳಿತು ಎಂದರೆ ಯಾವುದು? ಮಂಗಳಕರವಾದದ್ದೇ ಒಳಿತು. ಎಲ್ಲರ ಹಿತವನ್ನು ಎತ್ತಿಹಿಡಿಯುವಂಥದ್ದೇ ‘ಮಂಗಳ’. ಈ ಮಂಗಳದ ಹುಡುಕಾಟ ಕೇವಲ ನಮ್ಮ ಕಾಲದ ಪ್ರಶ್ನೆಯಷ್ಟೆ ಅಲ್ಲ; ಅದು ಸಾವಿರಾರು ವರ್ಷಗಳಿಂದ ನಡೆದಿರುವ ಹುಡುಕಾಟ. ಇದು ಕೇವಲ ಮನುಷ್ಯರ ಹುಡುಕಾಟವೂ ಅಲ್ಲವೆನ್ನಿ! ದೇವತೆಗಳೂ ಈ ಹುಡುಕಾಟದಲ್ಲಿ ಮನುಷ್ಯರ ಜೊತೆ ಒಮ್ಮೆ ಸೇರಿಕೊಂಡರಂತೆ. ದಿಟವಾದ ಮಂಗಳ ಎಲ್ಲಿ ಸಿಗುತ್ತದೆ – ಎಂದು ಹುಡುಕಾಟ ನಡೆಸಿದರು. ಹೀಗೆ ಹನ್ನೆರಡು ವರ್ಷಗಳು ಹುಡುಕಿ ಹುಡುಕಿ ಸೋತರಂತೆ. ಕೊನೆಗೆ ಬುದ್ಧ ಭಗವಂತ ಅವರಿಗೆಲ್ಲ ಮಂಗಳದ ದಾರಿಯನ್ನು ತೋರಿದನಂತೆ; ಮಂಗಳಗಳು ಮೂವತ್ತೆಂಟು ಬಗೆ – ಎಂದು ಅವನು ಒಕ್ಕಣಿಸಿದ.

ಇದು ಬೌದ್ಧವಾಙ್ಮಯದಲ್ಲಿ ಬರುವ ವಿವರ. ಬುದ್ಧ ಉಪದೇಶಿಸಿದ ಮೊದಲನೆಯ ಮಂಗಳವೇ – ’ಮೂರ್ಖರ ಸಹವಾಸವನ್ನು ತೊರೆಯಿರಿ’ (ಅಸೇವನಾ ಚ ಬಾಲಾನಂ); ‘ಮೂರ್ಖರಿಂದ ದೂರವಾಗಿ, ಜ್ಞಾನಿಗಳನ್ನು ಸೇರಿಕೊಳ್ಳಿ’ (ಪಂಡಿತಾನಞ್ಚ ಸೇವನಾ) – ಇದು ಅವನು ಕಾಣಿಸಿದ ಎರಡನೆಯ ಮಂಗಳ.

ಬುದ್ಧ ಉಪದೇಶಿಸಿದ ಮಂಗಳದ ದಾರಿಯಲ್ಲಿರುವುದೆಲ್ಲವೂ ನಮ್ಮ ವ್ಯಕ್ತಿತ್ವವನ್ನು ಶುದ್ಧವಾಗಿಯೂ ಸುಂದರವಾಗಿಯೂ ಸಾರ್ಥಕವಾಗಿಯೂ ರೂಪಿಸಿಕೊಳ್ಳುವ ವಿಧಿ–ವಿಧಾನಗಳೇ ಎನ್ನುವುದು ಗಮನಾರ್ಹ. ಬುದ್ಧ ಪ್ರಧಾನವಾಗಿ ಉಪದೇಶಿಸಿದ್ದೇ ಶೀಲಗಳನ್ನು; ಎಂದರೆ ನಮ್ಮ ಮೈ–ಮನಸ್ಸುಗಳ ಕೊಳೆಯನ್ನು ಕಳೆದು, ಕಾಂತಿಯನ್ನು ಒದಗಿಸುವಂಥ ಶಾರೀರಿಕ ಮತ್ತು ಮಾನಸಿಕ ಸಾಧನೆಗಳನ್ನು. ‘ಧಮ್ಮಪದ’ದ ಈ ಒಂದು ಸೊಲ್ಲಿನಲ್ಲಿ ಬುದ್ಧ ಭಗವಂತನ ಉಪದೇಶದ ಸಾರವಷ್ಟೂ ಇದೆ ಎಂದರೆ ತಪ್ಪಾಗದು:

ಸಬ್ಬ ಪಾಪಸ್ಸ ಅಕರಣಂ

ಕುಶಲಸ್ಸ ಉಪಸಂಪದಾ ।

ಸಚಿತ್ತ ಪರಿಯೋದಪನಂ

ಏತಂ ಬುದ್ಧಾನ ಸಾಸನಂ ।।

’ಯಾವ ಪಾಪವನ್ನೂ ಮಾಡಬಾರದು; ಕುಶಲವನ್ನು ಸಂಪಾದಿಸಿಕೊಳ್ಳಬೇಕು; ತನ್ನ ಚಿತ್ತವನ್ನು ಪರಿಶುದ್ಧಿಗೊಳಿಸಿಕೊಳ್ಳಬೇಕು. ಇದೇ ಬುದ್ಧನ ಅನುಶಾಸನ.’

ಈ ಗಾಥೆಯನ್ನು ಬುದ್ಧನ ಉಪದೇಶದ ತ್ರಿವೇಣಿಸಂಗಮ ಎನ್ನಬಹುದು; ಶೀಲ, ಪ್ರಜ್ಞಾ ಮತ್ತು ಸಮಾಧಿ – ಎಂಬ ಮೂರು ತತ್ತ್ವಗಳು ಇದರಲ್ಲಿ ಅಡಕವಾಗಿವೆ. ಬುದ್ಧ ಎತ್ತಿಹಿಡಿದಿದ್ದು ಈ ಮೂರು ವಿವರಗಳನ್ನೇ ಹೌದೆನ್ನಿ.

ಎಲ್ಲ ಮಹಾತ್ಮರ ವಿಷಯದಲ್ಲಿ ಆಗುವಂತೆ ಬುದ್ಧ ಭಗವಂತನ ವಿಷಯದಲ್ಲೂ ನಮ್ಮ ಗ್ರಹಿಕೆ ಸಂಕುಚಿತವಾಗಿದೆ. ಇದು ನಮ್ಮ ಸಮಾಜದ ದುರಂತವೇ ಸರಿ. ‘ಬುದ್ಧ’ ಎಂಬ ಮಹಾತತ್ತ್ವವೂ ಇಂದು ನಮ್ಮ ದೇಶದಲ್ಲಿ ರಾಜಕೀಯಕ್ಕೆ ವಸ್ತುವಾಗಿದೆ; ನಮ್ಮ ರಾಗ–ದ್ವೇಷಗಳ ಸಮರ್ಥನೆಯ ದಾಳವಾಗಿದೆ. ಸಿದ್ಧಾರ್ಥ ತಪಸ್ಸಿಗೆ ಕುಳಿತಾಗ ಮಾರ ಅವನ ಮೇಲೆ ದಾಳಿ ಮಾಡಿದ. ಮಾರನೆಂಬುವನು ಕ್ಷುದ್ರ ಬಯಕೆಗಳ ಪ್ರತಿನಿಧಿ; ಶರೀರ–ಮನಸ್ಸು–ಬುದ್ಧಿಗಳನ್ನು ಕೊಳೆಮಾಡುವ ವಂಚಕ. ಸಿದ್ಧಾರ್ಥನ ಮೇಲೆ ಅವನು ಏಳು ವರ್ಷಗಳು ಸಮರ ಸಾರಿದ. ಆದರೆ ಸಿದ್ಧಾರ್ಥ ಅವನಿಗೆ ಸೋಲಲಿಲ್ಲ; ಮಾರನಿಂದ ಗೆದ್ದ ಸಿದ್ಧಾರ್ಥ, ಕೊನೆಗೆ ಬುದ್ಧನಾಗಿ ಎದ್ದ. ಆದರೆ ನಾವು ಇಂದು ಮಾರನ ಪ್ರತಿನಿಧಿಗಳಾಗಿಯೇ ಬುದ್ಧನನ್ನು ವ್ಯಾಖ್ಯಾನಿಸುತ್ತಿದ್ದೇವೆ; ನಮ್ಮ ಸ್ವಾರ್ಥಕೇಂದ್ರಿತ ಸಂಕುಚಿತ ಸಿದ್ಧಾಂತಗಳಿಂದ ಅವನ ದರ್ಶನವನ್ನು ಮಂಕುಗೊಳಿಸುತ್ತಿದ್ದೇವೆ. ಬುದ್ಧತ್ವ ಎಂಬುದು ಪೂರ್ಣತೆಗೆ ಸಂಕೇತ. ಬುದ್ಧ ಹುಟ್ಟಿದ್ದು, ಬೋಧಿಯನ್ನು ಪಡೆದದ್ದು, ಮಹಾನಿರ್ವಾಣವನ್ನು ಹೊಂದಿದ್ದು – ಎಲ್ಲವೂ ಹುಣ್ಣಿಮೆಯಂದೇ. ಹುಣ್ಣಿಮೆ ಪೂರ್ಣತೆಗೆ ಸಂಕೇತ; ಜೊತೆಗೆ ಆಹ್ಲಾದಕ್ಕೂ ದ್ಯೋತಕ. ಆದರೆ ಪೂರ್ಣತೆಯನ್ನು ಕಾಣುವಂಥ ಶೀಲವನ್ನೂ ಧ್ಯಾನವನ್ನೂ ಪ್ರಜ್ಞೆಯನ್ನೂ ನಾವು ಇಂದು ಕಳೆದುಕೊಂಡಿದ್ದೇವೆ. ಹೀಗಾಗಿ ಆಹ್ಲಾದದ ತಂಪು ನಮ್ಮಿಂದ ದೂರವಾಗಿ, ನಮ್ಮ ಭಾವ–ಬುದ್ಧಿಗಳಲ್ಲಿ ರಾಗ–ದ್ವೇಷಗಳ ಉರಿಯೇ ನೆಲೆಯೂರಿದೆ.

ಲೋಕದಲ್ಲಿ ದುಃಖ ಇದೆ ಎನ್ನುವುದನ್ನು ಬುದ್ಧ ಸಾರಿ ಹೇಳಿದ. ಆದರೆ ಅವನು ಈ ದುಃಖದಿಂದ ಬಿಡುಗಡೆಯನ್ನು ಪಡೆಯುವ ದಾರಿಯನ್ನೂ ಲೋಕಕ್ಕೆ ತಿಳಿಸಿದ. ರೋಗವನ್ನೂ, ಅದಕ್ಕೆ ಔಷಧವನ್ನೂ ತಿಳಿಸಿದ ಮಹಾವೈದ್ಯ ಬುದ್ಧ. ನಮ್ಮ ರೋಗಗಳು ವಾಸಿಯಾಗಬೇಕಾದರೆ, ಮಂಗಳಮಯವಾದ ಬದುಕು ನಮ್ಮದಾಗಬೇಕಾದರೆ, ಬುದ್ಧನು ಉಪದೇಶಿಸಿದ ದಾರಿಯಲ್ಲಿ ನಡೆಯುವ ಸಮ್ಯಕ್ ಸಂಕಲ್ಪ ನಮ್ಮದಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.