ಪಂಚಾಯತ್ ರಾಜ್ಯ ವ್ಯವಸ್ಥೆಯ ಬಲವರ್ಧನೆಗೆ ಬೇಕಾದ ತಿದ್ದುಪಡಿಗಳನ್ನು ರಮೇಶ್‌ಕುಮಾರ್ ನೇತೃತ್ವದ ಸಮಿತಿ ಸೂಚಿಸಿದೆ. ಆದರೆ ಇದಕ್ಕೆ ಬರುವ ಪಕ್ಷದ ಒಳಗಿನ ಮತ್ತು ಹೊರಗಿನ ವಿರೋಧಗಳನ್ನು ಸಿದ್ಧರಾಮಯ್ಯ ಮತ್ತು ಎಚ್.ಕೆ. ಪಾಟೀಲ್ ಹೇಗೆ ನಿಭಾಯಿಸುತ್ತಾರೆ? ಇತಿಹಾಸದ ಪಾಠಗಳು ಮತ್ತು ವರ್ತಮಾನದ ಪರಿಸ್ಥಿತಿಯ ಕುರಿತೊಂದು ಅವಲೋಕನ

ಕರ್ನಾಟಕದಲ್ಲಿ ಮೂರು ದಶಕಗಳ ಕಾಲ ನಡೆದಿರುವ ಪಂಚಾಯತ್ ರಾಜ್ ಪ್ರಯೋಗಕ್ಕೆ ಹಿಡಿದಿರುವ ಜಿಡ್ಡನ್ನು ತೊಳೆಯುವ ಕೆಲಸಕ್ಕೆ ಇದೀಗ ಕಾಲ ಬಂದಂತೆ ಕಾಣುತ್ತಿದೆ. ಅದಕ್ಕಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಅವರ ಹಿರಿತನದಲ್ಲಿ ನೇಮಿಸಲಾಗಿದ್ದ ಪಂಚಾಯತ್ ರಾಜ್ ಕಾನೂನು ತಿದ್ದುಪಡಿ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಅದನ್ನು ಶೀಘ್ರವಾಗಿ ಅನುಷ್ಠಾನ ಮಾಡಿದರೆ, ಕಾರಣಾಂತರಗಳಿಂದ ತನ್ನ ಮುಖ್ಯ ಗುರಿಯಿಂದ ವಿಮುಖವಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆ ಕಳೆದುಕೊಂಡ ತನ್ನ ಹೊಳಹನ್ನು ಮರಳಿ ಪಡೆದು ಗಾಂಧೀಜಿಯ ಕನಸಾದ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರ ಮಾಡುವಲ್ಲಿ ದಾಪುಗಾಲು ಹಾಕುವ ನಿರೀಕ್ಷೆ ಇದೆ. ಇಡೀ ದೇಶದಲ್ಲಿಯೇ ಮೊದಲ ಬಾರಿ ಅಧಿಕಾರ ವಿಕೇಂದ್ರಿಕರಣ ಪ್ರಯೋಗವನ್ನು ಕೈಗೊಂಡ ಕೀರ್ತಿಗೆ ಭಾಜನವಾಗಿದ್ದ ಕರ್ನಾಟಕವು ಗಾಂಧೀಜಿಯ ಸ್ವರಾಜ್ಯದ ಕಲ್ಪನೆಗೆ ಮೂರ್ತ ಸ್ವರೂಪ ಕೊಟ್ಟ ದೇಶದ ಮೊದಲ ರಾಜ್ಯವೆಂಬ ಇನ್ನೊಂದು ಗರಿಯನ್ನು ತನ್ನ ಕಿರೀಟಕ್ಕೆ ಸೇರಿಸಿಕೊಳ್ಳಬಹುದಾಗಿದೆ.

ಇದನ್ನು ಈಡೇರಿಸುವದಕ್ಕೆ ಸರ್ಕಾರವು ಮಾಡಬೇಕಾಗಿರುವದು ಇಷ್ಟೇ. ವರದಿಯನ್ನು ಒಪ್ಪಿ ಕರಡು ವಿಧೇಯಕವನ್ನು ಮುಂದಿನ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಬೇಕು. ಇದರಿಂದ ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿರುವ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ತಮ್ಮ ಕರ್ತವ್ಯಗಳನ್ನು ಅರ್ಥಪೂರ್ಣವಾಗಿ ನಿರ್ವಹಿಸಲು ಉಪಯೋಗವಾಗಬಹುದು. ವರದಿಯನ್ನು ಕಾರ್ಯಗತ ಮಾಡುವಲ್ಲಿ ವಿಳಂಬ ತಪ್ಪಿಸಲು ಸಮಿತಿಯೇ ಸೂಕ್ತ ತಿದ್ದುಪಡಿ ಕರಡನ್ನು ತಯಾರಿಸಿ ತನ್ನ ವರದಿಯ ಜೊತೆಗೆ ಸರ್ಕಾರಕ್ಕೆ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷರಾದ ರಮೇಶ್‌ಕುಮಾರ್ ಅವರ ಆಶಯದಂತೆ ಎಲ್ಲವೂ ನಡೆದರೆ ಬೆಳಗಾವಿಯ ನಡೆಯಲಿರುವ ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಇದು ಪಾಸಾಗಬೇಕು.

ಹತ್ತಿಗೆ ನೂರು ಕುತ್ತು ಎನ್ನುವುದು ನಾಣ್ಣುಡಿ ಪಂಚಾಯತ್ ರಾಜ್ ಕಾನೂನಿಗೂ ಅನ್ವಯಿಸುತ್ತದೆ. 1983ರಲ್ಲಿ ಮಾಡಿದ ಮೊದಲ ಕಾನೂನು ನಾಲ್ಕು ವರ್ಷಗಳ ಗಜಗರ್ಭವಾಸ ಅನುಭವಿಸಬೇಕಾಯಿತು. 1993ರ ಕಾನೂನು ಸಂವಿಧಾನದ 73ನೆಯ ತಿದ್ದುಪಡಿಯ ಹಿನ್ನೆಲೆಯಲ್ಲಿ ಬೇಗ ಬಂದರೂ ಅದರ ಅನುಷ್ಠಾನಕ್ಕೆ ಒಂದು ವರ್ಷ ಕಾಯಬೇಕಾಯಿತು. ಗ್ರಾಮ ಪಂಚಾಯಿತಿ ಚುನಾವಣೆ ಪರಿಣಾಮದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ಹಿಂದೇಟು ಹೊಡೆದರು. ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ, ಎಂ ವೈ ಘೋರ್ಪಡೆಯವರು ಬೇಗ ಚುನಾವಣೆ ನಡೆಸದಿದ್ದರೆ ರಾಜೀನಾಮೆ ಕೊಡುವದಾಗಿ ಬೆದರಿಸಿದರೂ ಮೊಯ್ಲಿ ರಾಜಿನಾಮೆ ಪಡೆದರೇ ಹೊರತು ಬೇಗ ಚುನಾವಣೆ ನಡೆಸಲಿಲ್ಲ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಈ ಕಾನೂನಿಗೆ ಆಮೂಲಾಗ್ರ ತಿದ್ದುಪಡಿಯ ಅಗತ್ಯ ಕಂಡ ಘೋರ್ಪಡೆಯವರು ಅದರೆ ಕರಡನ್ನು ತಯಾರಿಸಿದರೂ ಉಪಯೋಗವಾಗಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಮುಖ್ಯಮಂತ್ರಿ ಎಸ್. ಎಂ ಕೃಷ್ಣರವರ ನಿರಾಸಕ್ತಿಯಿಂದ ಅದು ಹೊರಬರಲೇ ಇಲ್ಲ. ಕೇಂದ್ರದಲ್ಲಿ ಪಂಚಾಯತ್ ರಾಜ್ ಮಂತ್ರಿಯಾಗಿದ್ದ ಮಣಿಶಂಕರ್ ಅಯ್ಯರ್ ಹೈಕಮಾಂಡ್ ಶಕ್ತಿ ಉಪಯೋಗಿಸಿ ಕರ್ನಾಟಕದ ಕಾಂಗ್ರೆಸ್ಸಿಗರ ಕಿವಿ ಹಿಂಡಿದ ನಂತರ ಈ ಕಾನೂನನ್ನು ಪಾಸಾಯಿತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಕೊಡುವ ಈ ಹೊಸ ಕಾನೂನು ಜಾರಿಯಾದದ್ದು ಮತ್ತೂ ವರ್ಷದ ನಂತರ ಅಂದರೆ ೨೦೦೪ರ ಸಮ್ಮಿಶ್ರ ಸರ್ಕಾರ ಬಂದಮೇಲೆ. ಅದಕ್ಕೆ ಕಾರಣವಾದದ್ದು ಆಗ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಡಿ. ಆರ್ ಪಾಟೀಲರು ಇದನ್ನು ಎತ್ತಿಕೊಂಡು ಮಾತನಾಡಲು ಆರಂಭಿಸಿದ ಮೇಲೆ.

ಈಗ ಬರುತ್ತಿರುವವುದು ನಾಲ್ಕನೆಯ ತಿದ್ದುಪಡಿ ಮಸೂದೆ. ಇದರೆ ಹಣೆಬರಹ ಹೇಗಿದೆ ಎನ್ನುವದನ್ನು ಕಾದು ನೋಡಬೇಕು. ಇದನ್ನು ಶೀಘ್ರವಾಗಿ ಮಾಡಬೇಕೆಂಬ ಇಚ್ಛೆ ಸರ್ಕಾರಕ್ಕೆ ಇದೆ ಎಂಬ ತಿದ್ದುಪಡಿ ಸಮಿತಿ ಅಧ್ಯಕ್ಷರಾದ ರಮೇಶ್‌ಕುಮಾರ್ ಅವರ ನಂಬಿಕೆಯಂತೆ ಎಲ್ಲವೂ ನಡೆದರೆ ಮುಂದಿನ ವರ್ಷ ಬರಲಿರುವ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗಳು ಹೊಸ ಕಾನೂನಿನಂತೆ ನಡೆದು ಬದಲಾವಣೆಯ ಶಕೆಯೊಂದು ಆರಂಭವಾಗಬಹುದು. ಆದರೆ ಇದನ್ನು ಶಾಸಕಾಂಗವು ನಡೆಸಿಕೊಡುತ್ತದೆಯೇ? ಇದು ಯಕ್ಷ ಪ್ರಶ್ನೆ. ಬಹುಪಾಲು ಶಾಸಕರು ಮತ್ತು ಮಂತ್ರಿಗಳು ಹೊಸ ತಿದ್ದುಪಡಿಗಳಿಗೆ ವಿರುದ್ಧವಾಗಿದ್ದಾರೆಂಬುದು ಬಹಿರಂಗ ಸತ್ಯ. ಶಾಸಕರಂತೂ ಇದನ್ನು ಪಕ್ಷಾತೀತವಾಗಿ ವಿರೋಧಿಸುತ್ತಾರೆ. ಈ ವಿರೋಧಕ್ಕೆ ಸೈದ್ಧಾಂತಿಕತೆಗಳೇನೂ ಇಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಂಡರೆ ತಮ್ಮ ಅಧಿಕಾರಕ್ಕೆ ಎಲ್ಲಿ ಸಂಚಕಾರ ಬಂದೀತೋ ಎಂಬ ಅಳುಕು ಈ ವಿರೋಧದ ಹಿಂದಿದೆ.

೧೯೮೩ರ ಮೊದಲ ವಿಧೇಯಕ ಪಕ್ಷದ ಒಳಗಿನವರು ಮತ್ತು ಹೊರಗಿನವರೆಲ್ಲರ ‘ಸಾಮೂಹಿಕ ಪ್ರಯತ್ನ’ದಿಂದ ಮೂಲೆಗುಂಪಾಗುವ ಪ್ರಸಂಗ ಬಂದಾಗ ಅವರನ್ನು ಓಲೈಸಲು ಶಾಸಕರಿಗೂ ಸಂಸದರಿಗೂ ಅಂದಿನ ಜಿಲ್ಲಾ ಪರಿಷತ್ತಿನ ಪದನಿಮಿತ್ತ ಸದಸ್ಯ ಸ್ಥಾನ ಕೊಟ್ಟದ್ದು ಈಗ ಇತಿಹಾಸ. ಎರಡು ಹಂತದಿಂದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಬಂದಾಗಲೂ ಇದೇ ಓಲೈಕೆ ಮುಂದುವರಿಯಿತು. ಒಂದು ಚುನಾಯಿತ ಸಭೆಗೆ ಆರಿಸಿ ಬಂದ ಸದಸ್ಯರು ಬೇರೊಂದು ಚುನಾಯಿತ ಸಭೆಯ ಪದನಿಮಿತ್ತ ಸದಸ್ಯರಾಗುವುದು ಅಸಂಗತ. ರಾಜಕೀಯ ಅನುಕೂಲಕ್ಕಾಗಿ ಅಸಂಗತವನ್ನು ಸಂಗತಮಾಡುವ ಅನಿವಾರ್ಯತೆ ಬರುವದರ ನಿದರ್ಶನವಿದು. ಶಾಸಕರಿಗೆ ಇನ್ನೂ ಒಂದು ಆಶೆ ಇತ್ತು. ಅದೆಂದರೆ ಇದರ ಮೂಲಕ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರಾಗುವುದು. ಅದೊಂದಕ್ಕೆ ಸರ್ಕಾರ ಸೊಪ್ಪು ಹಾಕಲಿಲ್ಲ.

ಪದನಿಮಿತ್ತ ಸ್ಥಾನದಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗಾಗಲಿ ಶಾಸಕರಿಗಾಗಲೀ ಯಾವುದೇ ಉಪಯೋಗವಾಗಿಲ್ಲ. ಎಷ್ಟೋ ಬಾರಿ ಶಾಸಕರು ಪಂಚಾಯತ್ ರಾಜ್ ಸಂಸ್ಥೆಗಳ ಸಭೆಗೆ ಹಾಜರೂ ಆಗುವುದಿಲ್ಲ. ಈ ಸಂಸ್ಥೆಗಳ ಸಮಸ್ಯೆಗಳನ್ನು ವಿಧಾನಮಂಡಲದ ಅಧಿವೇಶನಗಳಲ್ಲಿ ಎತ್ತಿ ಸರ್ಕಾರದ ಗಮನ ಸೆಳೆದು ತಮ್ಮ ಉಪಯುಕ್ತತೆಯ್ನೂ ತೋರಿಸಿಲ್ಲ. ಅದರ ಬದಲು ಅವಕಾಶ ಸಿಕ್ಕಾಗಲೆಲ್ಲ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೀಗಳೆದು ಅವರಿಗೆ ಕೊಟ್ಟಿರುವ ಅಧಿಕಾರ ಹಿಂಪಡೆಯುವದರ ಬಗ್ಗೆಯೇ ಮಾತನಾಡುತ್ತಲೇ ಇರುತ್ತಾರೆ. ಮೊದಲ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿ ದಿ. ನಜೀರ ಸಾಬ್‌ರನ್ನು ಬಿಟ್ಟರೆ ಉಳಿದ ಯಾವ ಮಂತ್ರಿಗಳೂ ಪಂಚಾಯತ್ ರಾಜ್ ಸಂಸ್ಥೆಗಳ ಮಿತ್ರ, ಮಾಗದರ್ಶಕ ಮತ್ತು ತತ್ವಜ್ಞಾನಿಯ ಪಾತ್ರ ವಹಿಸಲಿಲ್ಲ.

ದಿ. ಎಂ. ವೈ ಘೋರ್ಪಡೆಯವರಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಸದಾಶಯ ಸಹಾನುಭೂತಿಗಳಿದ್ದರೂ ಅವರ ಲಕ್ಷ್ಯವೆಲ್ಲ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆಯುವ ಪಂಚಾಯತ್ ರಾಜ್ ವ್ಯವಸ್ಥೆ ಇತ್ತೇ ಹೊರತು ಪ್ರಜೆಗಳ ಸಹಭಾಗಿತ್ವದಿಂದ ಬೆಳೆಯುವಂತಹ ವ್ಯವಸ್ಥೆಯಲ್ಲ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಿಂದ ತೊಡಗಿ ಎಲ್ಲಾ ರಾಜಕೀಯ ಪಕ್ಷಗಳೂ ಇದರಲ್ಲಿ ನಿರಾಸಕ್ತರಾಗಿರುವುದು ರಹಸ್ಯವಾಗಿಲ್ಲ. ಇದಕ್ಕೆ ಹೊರತಾಗಿರುವವರು ನಜೀರ್‌ಸಾಬ್ ಅವರ ಅವಧಿಯಲ್ಲಿ ಆದ ಬದಲಾವಣೆಗಳನ್ನು ಗಮನಿಸಿ ಅದು ಮುಂದುವರಿಯಬೇಕೆಂಬ ಸದಾಶಯವುಳ್ಳ ಬೆರಳೆಣಿಕೆಯ ರಾಜಕಾರಣಿಗಳು ಮಾತ್ರ. ಅದರಲ್ಲಿ ಮುಖ್ಯಮಂತ್ರಿಯೂ ಸೇರಿದ್ದಾರೆ. ಆದ್ದರಿಂದಲೇ ಕಾನೂನಿನ ತಿದ್ದುಪಡಿಗೆ ಒಂದು ಸಮಿತಿ ರಚನೆಯಾಯಿತು.

ಪರಿಸ್ಥಿತಿ ಹೀಗಿರುವಾಗ ತಿದ್ದುಪಡಿ ಸಮಿತಿಯ ಅಧ್ಯಕ್ಷರ ಆಶಯದಂತೆ ಶಾಸಕರು ವರ್ತಿಸಿ, ಪಂಚಾಯತ್ ರಾಜ್ ಆಂದೋಲನದಲ್ಲಿ ಹೊಸ ಮನ್ವಂತರ ಆರಂಭವಾಗಲು ಅನುವು ಮಾಡಿಕೊಡುತ್ತಾರೆಯೇ? ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಮಂತ್ರಿಗಳಿಗೆ ಪ್ರಾಮಾಣಿಕವಾದ ಆಸಕ್ತಿ ಇದೆ. ಕಾಂಗ್ರೆಸ್ ಪಕ್ಷದಲ್ಲಿರುವ ವಿಕೇಂದ್ರೀಕರಣದ ನೀತಿಯ ರೂವಾರಿ, ಮಾಜಿ ಮಂತ್ರಿ ಮಣಿಶಂಕರ್ ಅಯ್ಯರ್ ಸಮಿತಿಯ ವರದಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದರಿಂದ ಶಾಸಕರ ಮನಸ್ಸಿನಲ್ಲಿ ಭದ್ರವಾಗಿ ನಿಂತಿರುವ ಮಾನಸಿಕ ಗೋಡೆಯನ್ನು ಭೇದಿಸಲು ಸಾಧ್ಯವೇ? ಕಾಂಗ್ರೆಸ್ ಶಾಸಕರ ಮನವೊಲಿಸುವ ಕಠಿಣ ಕ್ರಮದಲ್ಲಿ ಸಿದ್ದರಾಮಯ್ಯನವರು ವಿಜಯ ಸಾಧಿಸಿದರೂ ವಿರೋಧಿ ಪಕ್ಷದವರನ್ನು ಒಲಿಸಿಕೊಳ್ಳುವುದು ಹೇಗೆ? ತಮ್ಮ ಪಕ್ಷದ ಸದಸ್ಯರು ತಿದ್ದುಪಡಿ ಮಸೂದೆ ಪಾಸು ಮಾಡುವಲ್ಲಿ ಸಹಕರಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಹೇಳಿದುದನ್ನು ವಿಕೇಂದ್ರೀಕರಣದ ಕಲ್ಪನೆಗೆ ಹೊಸಬರಾದ ಅವರ ಪಕ್ಷದ ಶಾಸಕರು ಉಳಿಸಿಕೊಡುವರೇ? ತನ್ನಲ್ಲಿರುವ ಧುರೀಣತ್ವದ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿಯೇ ಮಗ್ನವಾಗಿರುವ ಜಾತ್ಯತೀತ ಜನತಾದಳಕ್ಕೆ ಈ ವಿಷಯದ ಬಗ್ಗೆ ಆಲೋಚಿಸುವ ವ್ಯವಧಾನವೆಲ್ಲಿದೆ? ಮೇಲಾಗಿ ದೇವೇಗೌಡರು ವಿಕೇಂದ್ರೀಕರಣ ಪ್ರಯೋಗವನ್ನು ರಾಮಕೃಷ್ಣ ಹೆಗಡೆ–ನಜೀರ್ ಸಾಬ್ ಅವರ ಕಾಲದಲ್ಲಿಯೇ ವಿರೋಧಿಸಿದವರು. ಅವರ ವಿಚಾರ ಬದಲಾಗಿದೆ ಎನ್ನುವ ಯಾವ ಸೂಚನೆಗಳೂ ಇಲ್ಲ.

ಶಾಸಕರ ಮತ್ತು ರಾಜಕೀಯ ಪಕ್ಷಗಳ ಗೊಂದಲ ನಿಲುವುಗಳು ಏನೇ ಇರಲಿ. ತಿದ್ದುಪಡಿ ಸಮಿತಿ ನೀಡಿದುದು ಒಂದು ಉತ್ತಮ ವರದಿ ಎನ್ನುವದರಲ್ಲಿ ಯಾವ ಅನುಮಾನಗಳೂ ಇಲ್ಲ. ರಾಮಕೃಷ್ಣ ಹೆಗಡೆ–ನಜೀರ್ ಸಾಬ್ ಕನಸಿನ ಕೂಸಾಗಿ, ವಿಕೇಂದ್ರೀಕರಣದ ಪ್ರಯೋಗದ ಮೊದಲ ಮಸೂದೆ ಜಾರಿಗೆ ಬಂದು ಅದರನ್ವಯ ಎರಡು ಹಂತದ ಚುನಾಯಿತ ಸಂಸ್ಥೆಗಳು ಕಾಲಿಟ್ಟದ್ದು 1987ರಲ್ಲಿ.
ವಿಕೇಂದ್ರೀಕರಣದ ಮುಖ್ಯ ಸಿದ್ಧಾಂತಗಳಾದ, ಜನರ ಸಾರ್ವಭೌಮತ್ವವನ್ನು ಸಾಬೀತು ಪಡಿಸುವುದಕ್ಕೆ ಅಗತ್ಯವಿರುವ ಸಾಂಸ್ಥಿಕ ರೂಪ ಇದರಲ್ಲಿತ್ತು. ಜಿಲ್ಲೆಯ ಅಭಿವೃದ್ಧಿ ಬೇಡಿಕೆಗಳನ್ನು ನೋಡಿಕೊಳ್ಳುವ ಜಿಲ್ಲಾ ಸರ್ಕಾರವಾದ ಜಿಲ್ಲಾ ಪರಿಷತ್ತು ಮತ್ತು ಗ್ರಾಮ ಮಟ್ಟದಲ್ಲಿ ಇದನ್ನು ಸಾಧಿಸುವ ಮಂಡಲ ಪಂಚಾಯಿತಿ ಮೊದಲ ಕಾನೂನಿನಲ್ಲಿ ನಿಚ್ಚಳವಾಗಿತ್ತು. ಮೊದಲ ಚುನಾವಣೆಗಳು ನಡೆದು ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಶುರುಮಾಡಿದಾಗ ರಾಜ್ಯದ ಗ್ರಾಮೀಣ ಭಾಗದಲ್ಲಿ ಆಡಳಿತ ಮತ್ತು ರಾಜಕೀಯದ ವಿಕೇಂದ್ರೀಕರಣದ ಹೊಸ ಗಾಳಿ ಬೀಸಲು ತೊಡಗಿತ್ತು.

ಈ ರೀತಿ ಹೊಸ ವಾತವಾರಣವಿದ್ದದ್ದು ಬರೀ ಎರಡು ವರ್ಷಗಳ ಕಾಲ ಮಾತ್ರ. 1989ರ ವಿಧಾನಸಭಾ ಚುನಾವಣೆಯಲ್ಲಿನ ಜನತಾದಳದ ಪರಾಭವ ಹೊಸ ಪಂಚಾಯತ್ ರಾಜ್ ಪ್ರಯೋಗಕ್ಕೆ ಹಿನ್ನಡೆ ತಂದಿತು. ಅದರ ನಂತರ ಈ ವ್ಯವಸ್ಥೆ ಚೇತರಿಸಿ ಕೊಂಡಿಲ್ಲ. ನಜೀರ್ ಸಾಬ್ ಅವರ ಕಾಲದಲ್ಲಿಯೇ ಕಾಯ್ದೆಯ ಲೋಪದೋಷಗಳನ್ನು ಗುರುತಿಸಿ ಸರಿಪಡಿಸುವ ದೃಷ್ಟಿಯಿಂದ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ತನ್ನ ವರದಿ ಕೊಡುವುದರೊಳಗೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ಟಿದ್ದರು. ನಜೀರ್ ಸಾಬ್ ಕೂಡಾ ವಿಧಿವಶರಾದರು. ಹೆಗಡೆಯವರ ಸ್ಥಾನಕ್ಕೆ ಬಂದ ಎಸ್ ಅರ್ ಬೊಮ್ಮಾಯಿಯವರ ಸರ್ಕಾರ ವರದಿಯನ್ನು ಪರಿಶೀಲಿಸುವದರೊಳಗೆ ಸರ್ಕಾರವೇ ಉರುಳಿತು. ಚುನಾವಣೆಯ ನಂತರ ಬಂದ ಕಾಂಗ್ರೆಸ್ ಸರ್ಕಾರ ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯಿತಿಗಳನ್ನು ಮಲಮಕ್ಕಳಂತೆ ಕಂಡಿದ್ದರಿಂದ ವಿಕೇಂದ್ರೀಕರಣ ಪ್ರಯೋಗ ಮೂಲೆ ಗುಂಪಾಯಿತು.

ತನ್ನ ಐದು ವರ್ಷ ಆಳ್ವಿಕೆಯ ಕೊನೆಯ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನದ ೭೩ನೆಯ ತಿದ್ದುಪಡಿಯ ಹಿನ್ನೆಲೆಯಲ್ಲಿ ಇದ್ದ ಪಂಚಾಯಿತಿ ಕಾನೂನಿಗೆ ತಿದ್ದುಪಡಿ ತರುವುದರ ಬದಲು ಹೊಸ ಕಾನೂನನ್ನೇ ರಚಿಸಿ ಎರಡು ಹಂತದ ಬದಲು ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತಂದಿತು. ಅದರನ್ವಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಯಿತಾದರೂ ಮುಂದಿನ ಎರಡು ಹಂತಗಳ ಅಂದರೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ಮಂತ್ರಿಗಳ ಆಗ್ರಹವನ್ನು ಅಲಕ್ಷಿಸಿ ಮುಂದೂಡಲಾಯಿತು. 1994ರಲ್ಲಿ ಮರಳಿ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಜನತಾ ದಳದ ಸರ್ಕಾರ ಉಳಿದೆರಡು ಹಂತದ ಚುನಾವಣೆಗಳನ್ನು ನಡೆಸಿತು. ಹೊಸ ಕಾನೂನಿನಲ್ಲಿ ಹಳೆಯ ಕಾನೂನಿನ ಅನೇಕ ಮುಖ್ಯ ಅಂಶಗಳು ಬಿಟ್ಟು ಹೋಗಿದ್ದವು. ಮುಖ್ಯವಾಗಿ ಜಿಲ್ಲಾ ಸರ್ಕಾರವೆಂಬ ಕಲ್ಪನೆಯನ್ನು ಸಂಪೂರ್ಣ ಕೈಬಿಟ್ಟಿತಲ್ಲದೇ ಹಳೆಯ ಹುದ್ದೆಗಳ ಹೆಸರುಗಳನ್ನು ಕಾರ್ಯವ್ಯಾಪ್ತಿಯನ್ನು ಬದಲು ಮಾಡಿ ಇಡೀ ವ್ಯವಸ್ಥೆಯನ್ನೇ ನಿರ್ವೀರ್ಯಗೊಳಿಸಲಾಗಿತ್ತು.

ಜಿಲ್ಲೆಯ ಸಮಗ್ರ ಅಭಿವೃದ್ದಿಯ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಪರಿಷತ್ತುಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಯೆಂದು ಕರೆಯುವ ಹಾಗು ಆ ಹುದ್ದೆಗಳಿಗೆ ಜಿಲ್ಲಾಧಿಕಾರಿಗೂ ಹಿರಿಯರಾದ ಐಎಎಸ್ ಅಧಿಕಾರಿಯನ್ನು ನಿಯೋಜಿಸಬೇಕೆಂಬ ಹೆಗಡೆ ಸರ್ಕಾರದ ವಿಚಾರವನ್ನು ಕೈಬಿಟ್ಟು ಮೊದಲಿನಂತೆ ಜಿಲ್ಲಾಧಿಕಾರಿಗಳ ಪಾಮುಖ್ಯವನ್ನು ಪ್ರತಿಬಿಂಬಿಸುವ ಮೊದಲಿನ ಆಡಳಿತ ಪದ್ಧತಿಯನ್ನು ಶುರುಮಾಡಿತು. ಒಟ್ಟಿನ ಮೇಲೆ ವಿಕೇಂದ್ರಿಕರಣದ ಬದಲಾಗಿ ಅದರ ಹೆಸರಿನಲ್ಲಿ ಮೊದಲಿನಂತಿದ್ದ, ಕೇಂದ್ರೀಕೃತ ಆಡಳಿತ ಪದ್ಧತಿ ಜಾರಿಗೆ ಬಂದಿತ್ತು.

ಕಾಂಗ್ರೆಸ್ ತಂದ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಅಪಭ್ರಂಶಗಳನ್ನು ಗುರುತಿಸಿ ಮೊದಲಿನ ಕಾನೂನಿಂದ ಮಾಯವಾಗಿರುವ ವಿಕೇಂದ್ರೀಕರಣದ ಹೊಳಹನ್ನು ತರಬೇಕೆಂಬ ಹೆಗಡೆಯವರ ಕೂಗೂ ಅವರ ಪಕ್ಷದ ಸರ್ಕಾರದಲ್ಲಿಯೇ ಅರಣ್ಯರೋಧನವಾದುದನ್ನು ಈ ಪ್ರಯೋಗದ ಆಧ್ವರ್ಯುಗಳಾದ ಹೆಗಡೆಯವರೇ ನೋಡಬೇಕಾಯಿತು. ಗಾಯದ ಮೇಲೆ ಬರೆ ಎಳೆಯುವಂತೆ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಅವಧಿಯನ್ನು ಐದು ವರ್ಷದಿಂದ ಇಪ್ಪತ್ತು ತಿಂಗಳಿಗೆ ಇಳಿಸಿ ಅ ಹುದ್ದೆಗಳನ್ನು ಅಪಮೌಲ್ಯ ಗೊಳಿಸಿದ ಪ್ರಖ್ಯಾತಿ(?)ಯನ್ನೂ ಜನತಾದಳದ ಸರ್ಕಾರ ಪಡೆಯಿತು ಅಂದಿನಿಂದ ಈ ಮಹತ್ವದ ಪ್ರಯೋಗಕ್ಕೆ ಹಿಡಿಯಲಾರಂಭಿಸಿದ ಜಿಡ್ಡು ಇಂದಿನ ತನಕ ಮುಂದುವರಿಯುತ್ತಲೇ ಬಂದಿದೆ.

“ಎಂ ವೈ ಘೋರ್ಪಡೆಯವರು ಬಹಳ ಜಾಗರೂಕತೆಯಿಂದ ರೂಪಿಸಿದ 1993ರ ಕರ್ನಾಟಕ ಪಂಚಾಯತ್ ರಾಜ್ ಕಾನೂನು ಹಳತಾಗಿದ್ದು ಗ್ರಾಮ ಸ್ವರಾಜ್ಯದ ಕಲ್ಪನೆಯಂತೆ ಅಧಿಕಾರ ವಿಕೇಂದ್ರೀಕರಣವಾಗುವುದರ ಬದಲು, ಹಲವಾರು ತಿದ್ದುಪಡಿ ಮತ್ತು ಸರ್ಕಾರಿ ಆಜ್ಞೆಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳನ್ನು ತಂದು ಕೊಡುವಂತಹದಾಗಿದೆ. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲು ಮಾಡುವ ಅವಶ್ಯಕತೆ ಇದೆ. ಇದರ ಬದಲಾಗಿ ಹೊಸ ಕಾನೂನು ರಚಿಸುವುದು ಸೂಕ್ತ. ಆದರೆ ಮುಂಬರುವ ಪಂಚಾಯತ್ ಚುನಾವಣೆಯ ದೃಷ್ಟಿಯಿಂದ ಹೊಸ ಕಾನೂನು ಮಾಡುವ ಬದಲು ತಿದ್ದುಪಡಿಯನ್ನು ಮಾಡಲು ನಿರ್ಧರಿಸಲಾಯಿತು” ಎಂದು ತಿದ್ದುಪಡಿಯ ಸಮಿತಿಯ ಅಧ್ಯಕ್ಷ ರಮೇಶ್‌ಕುಮಾರ್ ಹೇಳುತ್ತಾರೆ.

ಒಟ್ಟಿನಲ್ಲಿ ತನ್ನ ವರದಿಯ ಮೂಲಕ ತಿದ್ದುಪಡಿ ಸಮಿತಿಯು ನಜೀರ್‌ಸಾಬ್ ಅವರ ಕಾಲದಲ್ಲಿ ರೂಪಿಸಲಾಗಿದ್ದ ಕಾನೂನಿನಲ್ಲಿದ್ದ ಹಲವು ಅಂಶಗಳನ್ನು ಮತ್ತೆ ತಂದಿದ್ದಾರೆ. ಉದಾಹರಣೆಗೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಗಳೆಂದು ಪುನರ್ನಾಮಕರಣ ಮಾಡಲಾಗಿದೆ. ಜೊತೆಗೆ ಅಧ್ಯಕ್ಷರಿಗೆ ರಾಜ್ಯ ಮಂತ್ರಿ ಸ್ಥಾನವನ್ನೂ ಕೊಟ್ಟು ಜಿಲ್ಲಾ ಪಂಚಾಯಿತಿಗಳು ಆಯಾ ಜಿಲ್ಲೆಗಳ ಮಟ್ಟಿಗೆ ಜಿಲ್ಲಾ ಸರ್ಕಾರಗಳೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿಯೆಂದು ಮರು ನಾಮಕರಣ ಮಾಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಪ್ರಸಕ್ತ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಬದಲಾಗಿ ಎರಡು ಹಂತದ ವ್ಯವಸ್ಥೆ ಮಾಡುವ ಸಲುವಾಗಿ ಅಗತ್ಯವಾದ ಸಂವಿಧಾನ ತಿದ್ದುಪಡಿ ಮಾಡುವ ವಿಷಯವನ್ನು ಕೇಂದ್ರ ಸರ್ಕಾರದೊಡನೆ ಪ್ರಸ್ತಾಪಿಸ ಬೇಕು ಎಂದು ವರದಿಯಲ್ಲಿ ಹೇಳಿದೆ. ‘ಪ್ರಜಾವಾಣಿ’ಯ ಪಂಚಾಯತ್ ರಾಜ್ ಪುಟದಲ್ಲಿ ಚರ್ಚೆಯಾದ ಹಲವು ವಿಷಯಗಳಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಕಾರ್ಯರೂಪಗೊಳಿಸುವದರಲ್ಲಿ ಇರುವ ಅಸ್ಪಷ್ಟತೆಯನ್ನು ನಿವಾರಿಸುವ ದೃಷ್ಟಿಯಿಂದ ಆಯೋಗ ವರದಿ ಬಂದ ಆರು ತಿಂಗಳ ಒಳಗೆ ವರದಿಯ ಮೇಲೆ ಕೈಗೊಳ್ಳಲಾದ ಕ್ರಮವನ್ನು ವಿಧಾನ ಸಭೆಗೆ ತಿಳಿಸುವುದನ್ನು ಕಡ್ಡಾಯ ಮಾಡಿದೆ. ಯೋಜನಾ ಪ್ರಕ್ರಿಯೆಯನ್ನು ಗ್ರಾಮ ಮಟ್ಟದಿಂದ ಪ್ರಾರಂಭಿಸಿ, ರಾಜ್ಯ ಮಟ್ಟದ ಯೋಜನೆಯಲ್ಲಿ ಅಳವಡಿಸುವುದಕ್ಕಾಗಿ ಕ್ರಮ ಕೈಗೊಳ್ಳ ಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿರುವಂತೆ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿಯೂ ಯೋಜನಾ ಸಮಿತಿಗಳನ್ನು ರಚಿಸುವುದರ ಜೊತೆಗೆ ಇವೆಲ್ಲ ವರದಿಯನ್ನು ಕ್ರೋಡೀಕರಿಸುವುದಕ್ಕಾಗಿ ರಾಜ್ಯ ಮಟ್ಟದಲ್ಲಿ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಹೇಳಿದೆ.

“ನಾವು ರಾಜೀವ್ ಗಾಂಧಿಯವರ ಕನಸಿಗೆ ವಿಧೇಯಕದ ಸ್ವರೂಪಕೊಡುವ ಪ್ರಯತ್ನ ಮಾಡಿದ್ದೇವೆ. ರಾಜೀವ್ ಗಾಂಧಿಯವರು ಹೇಳಿದಂತೆ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿರುವ ಬಡಜನರನ್ನು ಕಾಡುತ್ತಿರುವ ಆಡಳಿತಶಾಹಿಯ ಬಲಾತ್ಕಾರ, ತಾಂತ್ರಿಕತೆಯ ದೌರ್ಜನ್ಯ, ಹೆಪ್ಪುಗಟ್ಟಿರುವ ಅಸಮರ್ಥತೆ, ಭ್ರಷ್ಟಾಚಾರ ಮೊದಲಾದ ಹಲವಾರು ಕುಕೃತ್ಯಗಳಿಂದ ಪಾರು ಮಾಡುವುದು ಇದರ ಉದ್ದೇಶ” ಎಂಬ ಸಮಿತಿಯ ಮಾತುಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾಲವೇ ಹೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.