ಕ್ರಿಕೆಟ್ ಬದುಕಿನ ಹಿನ್ನಡೆಯ ಕ್ಷಣ: ರೋಹಿತ್
ಮುಂಬೈ: ‘ನ್ಯೂಜಿಲೆಂಡ್ ಎದುರಿನ 0–3 ಸರಣಿ ಸೋಲು ನನ್ನ ಕ್ರಿಕೆಟ್ ಜೀವನದ ಅತ್ಯಂತ ಹಿನ್ನಡೆಯ ಗಳಿಗೆ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುವೆ’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ‘ಹೌದು, ಇಂಥ ಕಹಿ ಅನುಭವವನ್ನು ಅರಗಿಸಿಕೊಳ್ಳುವುದು ಕಷ್ಟ. ತವರಿನಲ್ಲಿ ಟೆಸ್ಟ್ ಸೋಲು, ಸರಣಿ ಸೋಲನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಾವು ಉತ್ತಮವಾಗಿ ಆಡಲಿಲ್ಲ. ನ್ಯೂಜಿಲೆಂಡ್ ಸರಣಿಯುದ್ದಕ್ಕೂ ಚೆನ್ನಾಗಿ ಆಡಿತು. ನಾವು ಅನೇಕ ತಪ್ಪುಗಳನ್ನು ಎಸಗಿದೆವು’ ಎಂದು ಅವರು ಭಾನುವಾರ ಮೂರನೇ ಟೆಸ್ಟ್ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ವಿಶ್ಲೇಷಿಸಿದರು. ‘ಮೊದಲ ಎರಡು ಟೆಸ್ಟ್‌ಗಳಲ್ಲಿ ನಾವು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಲಿಲ್ಲ. ಈ ಪಂದ್ಯದಲ್ಲಿ 28 ರನ್ ಲೀಡ್ ಪಡೆದೆವು. ಸಾಧಿಸಬಹುದಾದ ಗುರಿ ನಮ್ಮ ಮುಂದಿತ್ತು. ತಂಡವಾಗಿ ನಾವು ವಿಫಲವಾಗಿದ್ದೇವೆ. ಇಂಥ ಗುರಿ ಎದುರಿಸುವಾಗ ಉತ್ತಮ ಆರಂಭ ಪಡೆಯಬೇಕಾಗುತ್ತದೆ. ಆದರೆ ಹಾಗೆ ಆಗಲಿಲ್ಲ’ ಎಂದರು. ತಮ್ಮ ವೈಯಕ್ತಿಕ ಬ್ಯಾಟಿಂಗ್ ಬಗ್ಗೆಯೂ ನಿರಾಸೆ ವ್ಯಕ್ತಪಡಿಸಿದರು. ‘ನಾನು ನಿರ್ದಿಷ್ಟ ಯೋಜನೆಯೊಡನೆ ಕಣಕ್ಕಿಳಿಯುತ್ತೇನೆ. ಆದರೆ ಈ ಸರಣಿಯಲ್ಲಿ ಅವು ಯಾವುದೂ ಕೈಗೂಡಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾವು ಆಡಲಿಲ್ಲ’ ಎಂದು ಒಪ್ಪಿಕೊಂಡರು. ‘ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ನಾನು ನಿರೀಕ್ಷಿತ ಮಟ್ಟ ತಲುಪಲಿಲ್ಲ. ವೈಯಕ್ತಿಕವಾಗಿ ನನ್ನ ಬ್ಯಾಟಿಂಗ್ ಕೂಡ ನಿರಾಸೆ ಮೂಡಿಸಿದೆ. ತಂಡ ಸಾಂಘಿಕವಾಗಿ ಆಡುವಲ್ಲಿ ವಿಫಲವಾಗಿದೆ’ ಎಂದರು. ತಂಡದ ಕೋಚ್ ಗೌತಮ್ ಗಂಭೀರ್, ನೆರವು ಸಿಬ್ಬಂದಿಯಾದ ನೆದರ್ಲೆಂಡ್ಸ್‌ನ ರಯಾನ್ ಟೆನ್ ಡೋಷೆ ಮತ್ತು ಅಭಿಷೇಕ್ ನಾಯರ್ ಅವರನ್ನು ರೋಹಿತ್ ಸಮರ್ಥಿಸಿಕೊಂಡರು.