ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ –ದಕ್ಷಿಣ ಆಫ್ರಿಕಾ WODI: ಸರಣಿ ಕೈವಶದತ್ತ ಹರ್ಮನ್ ಪಡೆ ಕಣ್ಣು

ಬೆಂಗಳೂರಿನಲ್ಲಿ ಭಾರತ –ದಕ್ಷಿಣ ಆಫ್ರಿಕಾ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಇಂದು
Published 18 ಜೂನ್ 2024, 14:46 IST
Last Updated 18 ಜೂನ್ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮಹಿಳಾ ತಂಡವು ಎರಡು ದಿನಗಳ ಹಿಂದೆ ಸ್ಮೃತಿ ಮಂದಾನ ಅವರ ಚೆಂದದ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜಯಿಸಿತ್ತು. ಇದೀಗ ಸರಣಿ ಕೈವಶದ ಮೇಲೆ ಕಣ್ಣಿಟ್ಟಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯವು ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಕಡೆಯ ಅವಕಾಶವೂ ಹೌದು. ಅದಕ್ಕಾಗಿ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಕೊಂಡು ಕಣಕ್ಕಿಳಿಯಬೇಕಾದ ಒತ್ತಡ ಪ್ರವಾಸಿ ತಂಡಕ್ಕಿದೆ. ತಿರುಗೇಟು ನೀಡುವ ಸಾಮರ್ಥ್ಯವೂ ನಾಯಕಿ ಲಾರಾ ವೊಲ್ವವಾರ್ಡ್ತ್‌, ತಂಜೀಮ್ ಬ್ರಿಟ್ಸ್‌, ಅನೆಕಿ ಬಾಷ್ ಹಾಗೂ ಅನುಭವಿ ಆಟಗಾರ್ತಿ ಮರಿಝೇನ್ ಕಾಪ್ ಅವರಿಗೆ ಇದೆ. ಆದರೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ. 

ಭಾರತ ತಂಡದ ಬ್ಯಾಟಿಂಗ್ ಬಲ ಕೂಡ ಅನಿಶ್ಚಿತತೆಯಿಂದ ಕೂಡಿದೆ. ಮೊದಲ ಪಂದ್ಯದಲ್ಲಿ ಸ್ಮೃತಿ ಬಿಟ್ಟರೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 10 ರನ್ ಗಳಿಸಿದ್ದರು. ಗಾಯದಿಂದ ಚೇತರಿಸಿಕೊಂಡು ಮರಳಿರುವ ಜೆಮಿಮಾ ರಾಡ್ರಿಗಸ್, ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ, ಹಾಗೂ ದಯಾಳನ್ ಹೇಮಲತಾ ಅವರು ತಮ್ಮ ಲಯ ಕಂಡುಕೊಂಡರೆ ತಂಡದ ಬ್ಯಾಟಿಂಗ್ ಬಲಿಷ್ಠವಾಗಲಿದೆ.

ಆಲ್‌ರೌಂಡರ್ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಅವರು ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ನೀಡಿದ್ದರು. ಅದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತ್ತು. ಸ್ಪಿನ್ನರ್ ಆಶಾ ಶೋಭನಾ ಮತ್ತು ದೀಪ್ತಿ ಇಬ್ಬರೂ ಬೌಲಿಂಗ್‌ನಲ್ಲಿಯೂ ಕೈಚಳಕ ತೋರಿ ತಂಡದ ಗೆಲುವಿಗೆ ಕಾರಣರಾಗಿದ್ದರು. 

ಈ ಪಂದ್ಯದಲ್ಲಿಯೂ ಅದೇ ಲಯವನ್ನು ಬೌಲರ್‌ಗಳು ಮುಂದುವರಿಸಿದರೆ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. 

ಆತಿಥೇಯರು ಈ ಪಂದ್ಯದಲ್ಲಿಯೂ ಮೂವರು ಸ್ಪಿನ್ನರ್‌ಗಳೊಂದಿಗೇ ಕಣಕ್ಕಿಳಿಯುವ ನಿರೀಕ್ಷೆ ಇದೆ. 

ಪಂದ್ಯ ಆರಂಭ: ಮಧ್ಯಾಹ್ನ 1.30

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಶಫಾಲಿ ವರ್ಮಾ ದೀಪ್ತಿ ಶರ್ಮಾ ಜೆಮಿಮಾ ರಾಡ್ರಿಗಸ್ ರಿಚಾ ಘೋಷ್ (ವಿಕೆಟ್‌ಕೀಪರ್) ಉಮಾ ಚೆಟ್ರಿ (ವಿಕೆಟ್‌ಕೀಪರ್) ದಯಾಳನ್ ಹೇಮಲತಾ ರಾಧಾ ಯಾದವ್ ಆಶಾ ಶೋಭನಾ ಶ್ರೇಯಾಂಕಾ ಪಾಟೀಲ ಸೈಕಾ ಇಶಾಕಿ ಪೂಜಾ ವಸ್ತ್ರಕರ್ ರೇಣುಕಾ ಸಿಂಗ್ ಠಾಕೂರ್ ಅರುಂಧತಿ ರೆಡ್ಡಿ ಪ್ರಿಯಾ ಪೂನಿಯಾ. ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ತ್ (ನಾಯಕಿ) ಅನೆಕ್ ಬಾಷ್ ತಂಜೀಮ್ ಬ್ರಿಟ್ಸ್ ನದೆನ್ ಡಿ ಕ್ಲರ್ಕ್ ಅನೆರಿ ಡೆರ್ಕ್ಸನ್ ಮೀಕೆ ಡಿ ರಿಡರ್ ಸಿನಾಲೊ ಜಾಫ್ತಾ ಮರಿಜಾನ್ ಕಾಪ್ ಅಯಾಬೊಂಗಾ ಕಾಕಾ ಸುನ್ ಲೂಸ್ ಎಲಿಜ್ ಮೇರಿ ಮಾರ್ಜ್ ನಾನಕುಲುಲೆಕೊ ಮ್ಲಾಬಾ ತುಮಿ ಸೆಕುಕುನೆ ನಾಂದುಮಿಸೊ ಶಾಂಗ್ಸಿ ಡೆಲ್ಮಿ ಠಕರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT