ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧನ್ಯವಾದಗಳು ರೋ! ODI ವಿಶ್ವಕಪ್‌ ನಂತರ ಕೋಚ್‌ ಹುದ್ದೆ ಬಿಡದಂತೆ ತಡೆದಿದ್ದ ರೋಹಿತ್

ಈ ವಿಷಯವನ್ನು ಸ್ವತಃ ರಾಹುಲ್ ದ್ರಾವಿಡ್‌ ಅವರು ತಂಡವನ್ನು ಉದ್ದೇಶಿಸಿ ಮಾಡಿದ ವಿದಾಯ ಭಾಷಣದಲ್ಲಿ ಬಹಿರಂಗಪಡಿಸಿದ್ದಾರೆ.
Published 2 ಜುಲೈ 2024, 14:57 IST
Last Updated 2 ಜುಲೈ 2024, 14:57 IST
ಅಕ್ಷರ ಗಾತ್ರ

ಬ್ರಿಜ್‌ಟೌನ್‌ (ಬಾರ್ಬಾಡೋಸ್‌): ರೋಹಿತ್‌ ಶರ್ಮಾ ಅಂದು ಆ ಒಂದು ಫೋನ್‌ ಕರೆ ಮಾಡದೇ ಹೋಗಿದ್ದಲ್ಲಿ ಕೋಚ್‌ ರಾಹುಲ್ ದ್ರಾವಿಡ್‌ ಅವರು ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ತಂಡದ ಭಾಗವಾಗುತ್ತಿರಲಿಲ್ಲ. ಈ ವಿಷಯವನ್ನು ಸ್ವತಃ ರಾಹುಲ್ ದ್ರಾವಿಡ್‌ ಅವರು ತಂಡವನ್ನು ಉದ್ದೇಶಿಸಿ ಮಾಡಿದ ವಿದಾಯ ಭಾಷಣದಲ್ಲಿ ಬಹಿರಂಗಪಡಿಸಿದ್ದಾರೆ.

ತವರಿನಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಸೋತ ನಂತರ ರಾಹುಲ್ ದ್ರಾವಿಡ್‌ ಮುಖ್ಯ ಕೋಚ್‌ ಹುದ್ದೆ ತ್ಯಜಿಸಲು ಮುಂದಾಗಿದ್ದರು. ಭಾರತ ಸತತ 10 ಪಂದ್ಯ ಗೆದ್ದು ಫೈನಲ್‌ನಲ್ಲಿ ಸೋತಿದ್ದು ತೀವ್ರ ನಿರಾಸೆ ಮೂಡಿಸಿತ್ತು.

ವಿಶ್ವಕಪ್‌ನೊಡನೆ ದ್ರಾವಿಡ್‌ ಅವರ ಒಪ್ಪಂದದ ಅವಧಿಯೂ ಕೊನೆಗೊಂಡಿತ್ತು. ಆದರೆ ಕೋಚ್‌ ಮತ್ತು ನೆರವು ಸಿಬ್ಬಂದಿ ಟಿ20 ವಿಶ್ವಕಪ್‌ ಅಂತ್ಯದವರೆಗೆ ಅವಧಿ ವಿಸ್ತರಣೆ ಪಡೆದರು.

ಭಾರತ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟಕ್ಕೇರಿದ ನಂತರ ದ್ರಾವಿಡ್‌ ಅವರು ಕೋಚ್‌ ಹುದ್ದೆಗೆ ಮರು ಅರ್ಜಿ ಸಲ್ಲಿಸಿಲ್ಲ. ಆದರೆ ಕೆನ್ಸಿಂಗ್‌ಟನ್‌ ಓವಲ್‌ನ ಡ್ರೆಸಿಂಗ್‌ ರೂಮ್‌ನಲ್ಲಿ ಶನಿವಾರ ವಿದಾಯ ಭಾಷಣದ ವೇಳೆ ನಾಯಕ ರೋಹಿತ್‌ ಶರ್ಮಾ ವಹಿಸಿದ್ದ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.

‘ರೋ (ರೋಹಿತ್‌) ಕಳೆದ ನವೆಂಬರ್‌ನಲ್ಲಿ ನನಗೆ ಕರೆ ಮಾಡಿ ಕೋಚ್‌ ಆಗಿ ಮುಂದುವರಿಯುವಂತೆ ಮನವಿ ಮಾಡಿದ್ದರು. ಅದಕ್ಕೆ ತುಂಬಾ ಧನ್ಯವಾದಗಳು’ ಎಂದು ದ್ರಾವಿಡ್‌ ಹೇಳಿರುವ ವಿಡಿಯೊವನ್ನು ಬಿಸಿಸಿಐ ಮಂಗಳವಾರ ಹಂಚಿಕೊಂಡಿದೆ.

‘ತಂಡದ ಪ್ರತಿಯೊಬ್ಬರ ಜೊತೆ ಕೆಲಸ ಮಾಡಿರುವುದು ನನಗೆ ಖುಷಿ ಮತ್ತು ಹೆಮ್ಮೆಯ ವಿಚಾರ. ಆದರೆ ರೋ, ನೀವು ಕೊಟ್ಟ ಸಮಯಕ್ಕೆ ಧನ್ಯವಾದಗಳು. ಸಾಕಷ್ಟು ಸಮಯ ನಾವು ಚರ್ಚೆ ನಡೆಸಿದ್ದೇವೆ. ಕೆಲವು ವಿಷಯಗಳನ್ನು ಒಪ್ಪಿಕೊಳ್ಳಬೇಕಾಯಿತು. ಕೆಲವಕ್ಕೆ ಅಭಿಪ್ರಾಯಭೇದಗಳು ಬಂದವು. ನಿಮಗೆ ತುಂಬಾ ಧನ್ಯವಾದಗಳು’ ಎಂದು ದ್ರಾವಿಡ್‌ ಹೇಳಿದಾಗ ರೋಹಿತ್ ಮುಗುಳ್ನಗೆ ಬೀರಿದರು.

ಟೂರ್ನಿಯುದ್ದಕ್ಕೂ ಆಟಗಾರರ ಸಾಂಘಿಕ ಪ್ರಯತ್ನವನ್ನು ದ್ರಾವಿಡ್‌ ಶ್ಲಾಘಿಸಿದರು.

‘ನೀವೆಲ್ಲ ಈ ಕ್ಷಣಗಳನ್ನು ಸದಾ ನೆನಪಿಸಿಕೊಳ್ಳಲಿದ್ದೀರಿ. ನೀವು ಗಳಿಸಿದ ರನ್‌, ಪಡೆದ ವಿಕೆಟ್‌ಗಳನ್ನು ಬದುಕಿನುದ್ದಕ್ಕೂ ನೆನಪಿನಲ್ಲಿಡುವುದಿಲ್ಲ. ಅದನ್ನು ಮರೆತುಬಿಡಬಹುದು. ಆದರೆ ಇಂಥ ಸಂಭ್ರಮದ  ಕ್ಷಣಗಳನ್ನು ಮರೆಯಲಾರಿರಿ’ ಎಂದರು. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸಹ ಆ ವೇಳೆ ಹಾಜರಿದ್ದರು.

‘ಇಂದು ನಿಮ್ಮ ಪೋಷಕರು, ಪತ್ನಿಯರು, ಮಕ್ಕಳು, ಸಹೋದರರು, ತರಬೇತುದಾರರು, ಸಾಕಷ್ಟು ಮಂದಿ ನಿಮಗಾಗಿ ತ್ಯಾಗ ಮಾಡಿದ್ದಾರೆ. ನೀವು ಈ ಘಳಿಗೆ ಸಂಭ್ರಮಿಸುವ ಹಂತಕ್ಕೆ ಬರಲು ಅವರ ಶ್ರಮ ತುಂಬಾ ಇದೆ. ನಿಮ್ಮಗಳ ಜೊತೆ ಈ ನೆನಪಿನ ಭಾಗವಾಗಲು ನನಗೆ ಅತೀವ ಹೆಮ್ಮೆಯೆನಿಸುತ್ತಿದೆ’ ಎಂದು ದ್ರಾವಿಡ್ ಭಾವುಕರಾದರು.

ಸ್ಪಷ್ಟ, ನಿರರ್ಗಳವಾಗಿ ಮಾತನಾಡುವ ದ್ರಾವಿಡ್‌, ಈ ಸಂದರ್ಭದಲ್ಲಿ ತಮಗೆ ಪದಗಳೇ ಹೊರಡುತ್ತಿಲ್ಲ ಎಂದು ಒಪ್ಪಿಕೊಂಡರು. ಆದರೆ ನಿರ್ಗಮಿತ ಸಿಬ್ಬಂದಿ ವರ್ಗಕ್ಕೆ ತಂಡ ತೋರಿದ ಗೌರವಕ್ಕೆ ಮೆಚ್ಚುಗೆ ಸೂಚಿಸಿದರು. ತೆರೆಮರೆಯಲ್ಲಿ ಕೆಲಸಮಾಡಿದ ಬಿಸಿಸಿಐ ಅಧಿಕಾರಿಗಳಿಗೂ ಅವರು ಕೃತಜ್ಞತೆ ಸಲ್ಲಿಸಿದರು.

‘ಈ ದೊಡ್ಡ ತಂಡದ ಹಿಂದೆ, ಯಶಸ್ವಿ ಸಂಸ್ಥೆಯಿದೆ. ನಾವು ಬಿಸಿಸಿಐ ಮತ್ತು ತೆರೆಮರೆಯಲ್ಲಿ ಕೆಲಸ ಮಾಡಿದವರನ್ನು ಸ್ಮರಿಸಲೇಬೇಕು’ ಎಂದು ದ್ರಾವಿಡ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT