ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Womens Asia Cup 2024: ಪಾಕಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

Published 19 ಜುಲೈ 2024, 13:29 IST
Last Updated 19 ಜುಲೈ 2024, 13:29 IST
ಅಕ್ಷರ ಗಾತ್ರ

ದಾಂಬುಲಾ: ಶ್ರೀಲಂಕಾದ ದಾಂಬುಲಾದಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ತಂಡ ತೋರಿದ ಉತ್ತಮ ಪ್ರದರ್ಶನದ ಫಲವಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತು.

ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಪಾಕಿಸ್ತಾನ ತಂಡ 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 108 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಪಾಕಿಸ್ತಾನ ನೀಡಿದ 109 ರನ್‌ಗಳ ಗುರಿ ಬೆನ್ನು ಹತ್ತಿದ ಭಾರತದ ವನಿತೆಯರು, ಶೆಫಾಲಿ ವರ್ಮಾ (40) ಹಾಗೂ ಸ್ಮೃತಿ ಮಂದಾನ (45) ರನ್‌ಗಳ ಉತ್ತಮ ಅಡಿಪಾಯದಿಂದಾಗಿ ಕೇವಲ 14.1 ಓವರ್‌ಗಳಲ್ಲಿ 109 ರನ್ ಗಳಿಸಿ ಜಯದ ನಗೆ ಬೀರಿದರು.

29 ಎಸೆತಗಳನ್ನು ಎದುರಿಸಿದ ಶೆಫಾಲಿ ಶರ್ಮಾ, ಒಂದು ಸಿಕ್ಸರ್ ಹಾಗೂ 6 ಬೌಂಡರಿ ನೆರವಿನೊಂದಿಗೆ 40 ರನ್ ಗಳಿಸಿದರೆ,  31 ಎಸೆತಗಳಲ್ಲಿ ಸ್ಮೃತಿ ಅವರು 45 ರನ್‌ ಗಳಿಸಿದರು. ಇದರಲ್ಲಿ 9 ಬೌಂಡರಿಗಳು ಸೇರಿವೆ. ಇವರಿಬ್ಬರೂ ಸೇರಿ 9 ಓವರ್‌ಗಳಲ್ಲಿ 85 ರನ್ ಕಲೆಹಾಕಿದರು. ಅರೂಬ್ ಶಾ ಅವರ ಎಸೆತದಲ್ಲಿ ತೌಬಾ ಹಸನ್ ಅವರಿಗೆ ಸ್ಮೃತಿ ಕ್ಯಾಚ್ ನೀಡಿದರೆ, ಇವರದ್ದೇ ಎಸೆತದಲ್ಲಿ ಶೆಫಾಲಿ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಮರಳಿದರು.

ನಂತರ ಬಂದ ದಯಾಳ್ ಹೇಮಲತಾ ಅವರು 14 ರನ್‌ ಗಳಿಸಿ ನರ್ಷರಾ ಸಂಧು ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (5) ಹಾಗೂ ಜೆಮಿಮಾ ರಾಡ್ರಿಗಸ್ (2) ಔಟಾಗದೆ ಭಾರತ ತಂಡವನ್ನು ಗೆಲುವಿನ ದಡ ತಲುಪಿಸಿದರು. 

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಮೀನ್ (25), ತೌಬಾ ಹಸ್ಸನ್‌ (22), ಫಾತಿಮಾ ಸನಾ (22) ಹಾಗೂ ಮುನೀಬಾ ಅಲಿ (11) ಬಿಟ್ಟರೆ, ಪಾಕ್‌ ಪರ ಉಳಿದ ಆಟಗಾರ್ತಿಯರು ಒಂದಂಕಿಯನ್ನು ದಾಟಲಿಲ್ಲ.

ಭಾರತದ ಪರ ದೀಪ್ತಿ ಶರ್ಮಾ ನಾಲ್ಕು ಓವರ್‌ಗೆ 20 ರನ್‌ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ರಾಧಾ ಯಾದವ್ ಹಾಗೂ ಶ್ರೇಯಾಂಕಾ ಪಾಟೀಲ ತಲಾ 2 ವಿಕೆಟ್‌ ಕಬಳಿಸಿ ಪಾಕ್ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT