ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್ಸ್‌ ಯೋಜನೆ: ಆರ್ಚರಿಪಟು ದೀಪಿಕಾ ಮರುಸೇರ್ಪಡೆ

Published 29 ಏಪ್ರಿಲ್ 2024, 23:30 IST
Last Updated 29 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಿಕಾ ಕುಮಾರಿ ಅವರನ್ನು ಕೇಂದ್ರ ಕ್ರೀಡಾ ಸಚಿವಾಲಯದ ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಯೋಜನೆಗೆ ಮರು ಸೇರ್ಪಡೆ ಮಾಡಲಾಗಿದೆ.

ಡಿಸೆಂಬರ್ 2022ರಲ್ಲಿ ತಾಯಿಯಾದ ನಂತರ ಕಳೆದ ವರ್ಷ ಇಡೀ ಋತುವನ್ನು ಕಳೆದುಕೊಂಡಿದ್ದ ವಿಶ್ವದ ಮಾಜಿ ಅಗ್ರಗಣ್ಯ ರಿಕರ್ವ್ ಆರ್ಚರಿಪಟು ದೀಪಿಕಾ ಈ ಋತುವಿನಲ್ಲಿ ಪುನರಾಗಮನ ಮಾಡಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಬಾರಿಯ ಒಲಿಂಪಿಯನ್ ದೀಪಿಕಾ ಈ ವರ್ಷದ ಆರಂಭದಲ್ಲಿ ಏಷ್ಯಾಕಪ್‌ನಲ್ಲಿ ಪದಕ ಗೆದ್ದಿದ್ದರು.

ಕಳೆದ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯಿಂಗ್ ಟೂರ್ನಿಯಲ್ಲಿ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಧೀರಜ್ ಬೊಮ್ಮದೇವರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯನಾಗಿದ್ದಾರೆ.

ಇನ್ನು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಏಕೈಕ ಕ್ವಾಲಿಫೈಯಿಂಗ್‌ ಟೂರ್ನಿ ಬಾಕಿ ಉಳಿದಿದೆ. ಅದು ಟರ್ಕಿಯ ಅಂಟಲ್ಯಾದಲ್ಲಿ ಜೂನ್ 15 ಮತ್ತು 16 ರಂದು ನಡೆಯಲಿದೆ.

ಮತ್ತೊಬ್ಬ ಆರ್ಚರಿಪಟು ಮೃಣಾಲ್ ಚೌಹಾಣ್ ಅವರನ್ನೂ ಟಾಪ್ಸ್‌ ಯೋಜನೆಗೆ ಸೇರಿಸಲಾಗಿದೆ. ಪ್ಯಾರಾ ಪವರ್‌ಲಿಫ್ಟರ್ ಅಶೋಕ್ ಅವರನ್ನೂ ಟಾಪ್ಸ್ ಯೋಜನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಮಿಷನ್ ಒಲಿಂಪಿಕ್ ಸೆಲ್‌ನ 133ನೇ ಸಭೆಯಲ್ಲಿ ಸ್ಕ್ವಾಷ್ ಆಟಗಾರರಾದ ಅನಾಹತ್ ಸಿಂಗ್, ಅಭಯ್ ಸಿಂಗ್ ಮತ್ತು ವೇಲವನ್ ಸೆಂಥಿಲ್‌ಕುಮಾರ್ ಅವರನ್ನು ಟಾಪ್ಸ್‌ ಯೋಜನೆಗೆ ಸೇರಿಸಲಾಗಿದೆ. 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸಿದ್ಧರಾಗಲು ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಲಾಸ್ ಏಂಜಲೀಸ್‌ನ ಸಂಘಟನಾ ಸಮಿತಿಯು 2028ರ ಕೂಟಕ್ಕೆ ಸ್ಕ್ವ್ಯಾಷ್ ಅನ್ನು ಸೇರಿಸಿತ್ತು.

ಆರ್ಚರಿಪಟು ದೀಪಿಕಾ ಕುಮಾರಿ
ಆರ್ಚರಿಪಟು ದೀಪಿಕಾ ಕುಮಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT