ಟೊರಾಂಟೊ: ಭಾರತದ ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು, ವಿಶ್ವ ಚಾಂಪಿಯನ್ಗೆ ಸವಾಲು ಹಾಕುವ ಅರ್ಹತೆ ಪಡೆದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಸ್ಥಾಪಿಸಿದರು. 40 ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್ ಸ್ಥಾಪಿಸಿದ್ದ ದಾಖಲೆ ಮುರಿದರು.

ಭಾನುವಾರ ಸಂಜೆ ನಡೆದ 14ನೇ ಹಾಗೂ ಅಂತಿಮ ಸುತ್ತಿನಲ್ಲಿ 17 ವರ್ಷದ ಆಟಗಾರ, ಅಮೆರಿಕದ ಹಿಕಾರು ನಕಾಮುರಾ ಜೊತೆ ಅಂತಿಮ ಸುತ್ತಿನ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು. ಇದರೊಂದಿಗೆ 14 ಸುತ್ತುಗಳಿಂದ 9 ಪಾಯಿಂಟ್ಸ್ ಸಂಪಾದಿಸಿದರು. 1984ರಲ್ಲಿ ರಷ್ಯದ ಗ್ಯಾರಿ ಕ್ಯಾಸ್ಪರೋವ್ ಅವರು ಆಗಿನ ವಿಶ್ವ ಚಾಂಪಿಯನ್, ಸ್ವದೇಶದ ಅನತೋಲಿ ಕಾರ್ಪೋವ್ ಅವರೊಡನೆ ಸೆಣಸಾಡುವ ಅರ್ಹತೆ ಪಡೆದಾಗ ಅವರಿಗೆ 22 ವರ್ಷ ವಯಸ್ಸಾಗಿತ್ತು. ಆ ದಾಖಲೆಯನ್ನು ಗುಕೇಶ್ ಮುರಿದರು.

ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಜೊತೆ ಹಣಾಹಣಿ ನಡೆಸಲಿದ್ದಾರೆ. ಇದರ ದಿನಾಂಕ ಮತ್ತು ಸ್ಥಳ ಇನ್ನೂ ನಿಗದಿಯಾಗಿಲ್ಲ.

‘ತುಂಬಾ ನಿರಾಳನಾಗಿದ್ದೇನೆ. ಸಂತಸವಾಗಿದೆ. ನಾನು ಕೆಲಹೊತ್ತು ಇನ್ನೊಂದು ಮಹತ್ವದ ಪಂದ್ಯವನ್ನು (ಫ್ಯಾಬಿಯೊ ಕರುವಾನಾ ಮತ್ತು ಇಯಾನ್ ನೆಪೊಮ್ನಿಷಿ ನಡುವಣ) ಗಮನಿಸಿದೆ. ನಂತರ ನನ್ನ ಸೆಕೆಂಡ್ (ಸಲಹೆಗಾರ) ಗ್ರೆಗೋರ್ಜ್ ಗಝೆವ್ಸ್ಕಿ ಜೊತೆ ವಾಕ್ ಹೊರಟಿದ್ದೆ’ ಎಂದು ಗೆದ್ದ ನಂತರ ಗುಕೇಶ್ ಪ್ರತಿಕ್ರಿಯಿಸಿದರು.

ಈ ಗೆಲುವಿಗೆ ಗುಕೇಶ್ ಅವರು 88,500 ಯೂರೊ (ಸುಮಾರು ₹78.50 ಲಕ್ಷ) ಬಹುಮಾನ ಪಡೆದರು. ಈ ಟೂರ್ನಿಯ ಒಟ್ಟು ಬಹುಮಾನದ ಮೊತ್ತ ₹4.44 ಕೋಟಿ.

ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಬಿಟ್ಟರೆ, ಕ್ಯಾಂಡಿಡೇಟ್ಸ್ ಗೆದ್ದ ಭಾರತದ ಎರಡನೇ ಆಟಗಾರ ಎಂಬ ಶ್ರೇಯವೂ ಅವರದಾಯಿತು. ಆನಂದ್ 2014ರಲ್ಲಿ ಕೊನೆಯ ಬಾರಿ ಕ್ಯಾಂಡಿಡೇಟ್ಸ್ನಲ್ಲಿ ಜಯಶಾಲಿಯಾಗಿದ್ದರು. ಆ ವರ್ಷ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋತಿದ್ದರು.

‘ಅತಿ ಕಿರಿಯ ಚಾಲೆಂಜರ್ ಆಗಿದ್ದಕ್ಕೆ ಅಭಿನಂದನೆಗಳು ಗುಕೇಶ್. ನಿನ್ನ ಸಾಧನೆಯಿಂದ ವೆಸ್ಟ್ಬ್ರಿಜ್ ಆನಂದ್ ಚೆಸ್ ಅಕಾಡೆಮಿಗೆ ಹೆಮ್ಮೆ ಎನಿಸಿದೆ’ ಎಂದು ಆನಂದ್ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕೊನೆಯ ಸುತ್ತಿನಲ್ಲಿ ಕಪ್ಪುಕಾಯಿಗಳಲ್ಲಿ ಆಡಿದ ಗುಕೇಶ್ ಅವರಿಗೆ ನಕಾಮುರಾ ಎದುರು ಕಡೇಪಕ್ಷ ‘ಡ್ರಾ’ ಅಗತ್ಯವಿತ್ತು. ಆದರೆ ಅಮೆರಿಕದ ಆಟಗಾರನಿಗೆ ಮೇಲುಗೈ ಸಾಧಿಸುವ ಯಾವ ಅವಕಾಶವನ್ನೂ ಗುಕೇಶ್ ನೀಡಲಿಲ್ಲ. ಗುಕೇಶ್ ಒಂದು ಕಾಲಾಳನ್ನು ಪಡೆದ ನಂತರ ಪರಿಸ್ಥಿತಿ ಸಮಮಾಡಿಕೊಳ್ಳಲು ಅವರು ಸಮಯ ತೆಗೆದುಕೊಂಡರು. ವಿರುದ್ಧ ವರ್ಣಗಳ ಬಿಷಪ್ಗಳ ಜೊತೆ, ಕೆಲ ಕಾಲಾಳುಗಳು, ರೂಕ್ಗಳು ಉಳಿದಿದ್ದವು. ಅಂತಿಮವಾಗಿ 71 ನಡೆಗಳ ನಂತರ ಇಬ್ಬರೂ ‘ಡ್ರಾ’ಕ್ಕೆ ಒಪ್ಪಿಕೊಂಡರು.

ಗುಕೇಶ್ 9 ಪಾಯಿಂಟ್ಸ್ ಗಳಿಸಿದ್ದರೂ, ಎಲ್ಲರ ಕಣ್ಣುಗಳು, ಅಮೆರಿಕದ ಫ್ಯಾಬಿಯಾನೊ ಕರುವಾನಾ ಮತ್ತು ರಷ್ಯಾದ ನೆಪೊಮ್ನಿಷಿ ಪಂದ್ಯದ ಮೇಲೆ ನೆಟ್ಟಿದ್ದವು. ಏಕೆಂದರೆ ಇಲ್ಲಿ ಗೆದ್ದ ಆಟಗಾರನಿಗೂ ಪ್ರಶಸ್ತಿ ಅವಕಾಶವಿತ್ತು. ‘ಆ 15 ನಿಮಿಷಗಳು ಅತ್ಯಂತ ತಳಮಳದ ಕ್ಷಣಗಳಾದವು. ನಾನು ಪಂದ್ಯದ ವೀಕ್ಷಕ ವಿವರಣೆ ಕೇಳುತ್ತಿದ್ದೆ. ಅಲ್ಲಿಯೇ ಇದ್ದ ನನ್ನ ಟ್ರೇನರ್ ಗಜೆವ್ಸ್ಕಿ ಜೊತೆ ವಾಕ್ ಹೊರಟೆ. ನಂತರ ನನ್ನ ತಂದೆ ವಿಷಯ ತಿಳಿಸಲು ಓಡುತ್ತಾ ಬಂದರು’ ಎಂದು ಗುಕೇಶ್ ವಿವರಿಸಿದರು.

‘ನನ್ನ ನೆರವು ತಂಡದ ಎಲ್ಲರ ಹೆಸರನ್ನು ಬಹಿರಂಗಪಡಿಸಲಾರೆ. ಆದರೆ ನಾನೆಷ್ಟು ಆಭಾರಿಯಾಗಿದ್ದೇನೆಂದು ಅವರಿಗೆ ಗೊತ್ತೇ ಇದೆ’ ಎಂದು ಅವರು ಹೇಳಿದರು.

ಕರುವಾನಾ, ಆಕ್ರಮಣದ ಆಟವಾಡಿ ನೆಪೊಮ್ನಿಷಿ ಅವರ ವಿರುದ್ಧ ಗೆಲ್ಲುವ ಅವಕಾಶವನ್ನೂ ಪಡೆದಿದ್ದರು. ಆದರೆ 39ನೇ ನಡೆಯಲ್ಲಿ ಅವರು ಎಡವಿದ್ದರಿಂದ ನೆಪೊಮ್ನಿಷಿ ಅವರಿಗೆ ಹೋದಜೀವ ಬಂದಂತಾಯಿತು. ಅವರಿಗೆ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಅವಕಾಶವಾಯಿತು. ಮತ್ತೊಂದು ಸಲವೂ ಕರುವಾನಾ ಅವರಿಗೆ ಸ್ಪಷ್ಟ ಮೇಲುಗೈ ದೊರಕಿತ್ತು. ಆದರೆ ಒತ್ತಡದಲ್ಲಿ ಕೆಲವು ನಡೆಗಳನ್ನು ಕರಾರುವಾಕ್ ಆಗಿ ಇಡಲು ಸಾಧ್ಯವಾಗಲಿಲ್ಲ. ಪಂದ್ಯ ‘ಡ್ರಾ’ದತ್ತ ಸಾಗುತ್ತಿರುವುದನ್ನು ಅರಿತ ಕರುವಾನಾ ಕೊನೆಗೆ ಗೆಲುವಿನ ಯತ್ನ ಕೈಬಿಟ್ಟರು.

ಈ ಪಂದ್ಯದಲ್ಲಿ ಯಾರಾದರೊಬ್ಬರು ಗೆಲ್ಲುತ್ತಿದ್ದಲ್ಲಿ ಅವರು ಗುಕೇಶ್ ಜೊತೆ ಸಮನಾದ ಪಾಯಿಂಟ್ಸ್ ಪಡೆಯುತ್ತಿದ್ದರು. ಜಂಟಿ ಅಗ್ರಸ್ಥಾನವಾದಲ್ಲಿ ಟೈಬ್ರೇಕ್ ಮೂಲಕ ವಿಜೇತರ ನಿರ್ಧಾರವಾಗುತಿತ್ತು.

ವಿದಿತ್ ಗುಜರಾತಿ ಮತ್ತು ಫ್ರಾನ್ಸ್ನ ಅಲಿರೇಝಾ ಫಿರೋಜ್ ಅಂತಿಮ ಸುತ್ತಿನಲ್ಲಿ ಬೇಗನೇ ‘ಡ್ರಾ’ಕ್ಕೆ ಸಹಿಹಾಕಿದರು. ವಿದಿತ್ ಆರನೇ ಸ್ಥಾನ ಪಡೆದರು. ಅಲಿರೇಝಾ (5) ಏಳನೇ ಹಾಗೂ ಅಜರ್ಬೈಜಾನ್ನ ಅಬಸೋವ್ (3.5) ಅಂತಿಮ ಸ್ಥಾನ ಪಡೆದರು. ಭಾರತದ ಆರ್.ಪ್ರಜ್ಞಾನಂದ (7) ಅಂತಿಮ ಸುತ್ತಿನಲ್ಲಿ ಅಬಸೋವ್ ಅವರನ್ನು ಸೋಲಿಸಿ ಐದನೇ ಸ್ಥಾನ ಪಡೆದರು.

12ನೇ ವಯಸ್ಸಿನಲ್ಲೇ ಗ್ರ್ಯಾಂಡ್ಮಾಸ್ಟರ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಬಿರುದು ಪಡೆದ ಮೂರನೇ ಅತಿ ಕಿರಿಯ ಆಟಗಾರ ಎಂಬ ಹಿರಿಮೆ ಗುಕೇಶ್ ಅವರದು. ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಅವರು ಬೆಳ್ಳಿ ಪದಕ ಗಳಿಸಿದ್ದರು.

ಓಪನ್ ವಿಭಾಗದ ಅಂತಿಮ ಸ್ಥಾನ: 1. ಡಿ.ಗುಕೇಶ್ (9 ಪಾಯಿಂಟ್), 2. ನಕಾಮುರಾ, 3. ನಿಪೊಮ್ನಿಷಿ, 4. ಕರುವಾನ (ತಲಾ 8.5 ಪಾಯಿಂಟ್ಸ್), 5. ಪ್ರಜ್ಞಾನಂದ (7), 6. ವಿದಿತ್ ಗುಜರಾತಿ (6), 7. ಅಲಿರೇಝಾ ಫಿರೋಜ್ (5), 8. ಅಬಸೋವ್ (3.5)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.